Home Blog Page 3123

ಕ್ರಿಕೆಟ್ ಬೆಟ್ಟಿಂಗ್; ಬ್ಯಾಂಕ್ ನೌಕರ ಸೇರಿ ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಐಪಿಎಲ್ 20-20 ಪಂದ್ಯದ ಮೇಲೆ ಒಂದು ಸಾವಿರ ರೂಪಾಯಿಗೆ ಎರಡು ಸಾವಿರ ಕೊಡ್ತೀವಿ ಅಂತ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಕೆವಿಜಿ ಬ್ಯಾಂಕ್ ನೌಕರ ಹಾಗೂ ಬುಕ್ಕಿ ಸೇರಿದಂತೆ ನಾಲ್ವರನ್ನು ಜಿಲ್ಲೆಯ ರೋಣ ಪೊಲೀಸರು ಬಂಧಿಸಿದ್ದಾರೆ.

ರೋಣ ಪಟ್ಟಣದ ದೌಲತ್ ಗೌಡ ಪ್ಲಾಟ್ ನಲ್ಲಿ ಬೆಟ್ಟಿಂಗ್ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ವಿನೋದ ಪೂಜಾರಿ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.

ದಾಳಿ ವೇಳೆ ನಗದು ಸೇರಿದಂತೆ 10 ಸಾವಿರ ರೂ ಮೌಲ್ಯದ ನಾಲ್ಕು ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಬೆಟ್ಟಿಂಗ್ ನಲ್ಲಿ ತೊಡಗಿದ್ದ ಪ್ರಕಾಶ್ ದೇವೆಂದ್ರಪ್ಪ ಪತ್ತಾರ, ಬಸವರಾಜ್ ಶರಣಪ್ಪ ಗದುಗಿನ, ಅಶೋಕ ಬಸಪ್ಪ ಹುನಗುಂಡಿ ಹಾಗೂ ಗದಗನ ಮುಖ್ಯ ಬುಕ್ಕಿ ಜಗ್ಗು ಕುಂಬಾರ ಎಂಬುವವರನ್ನು ಬಂಧಿಸಲಾಗಿದೆ ಎಂದು ರೋಣ ಪೊಲೀಸರು ತಿಳಿಸಿದ್ದಾರೆ.

ಕೊರೋನಾ; ಜಿಲ್ಲೆಯಲ್ಲಿ ಬುಧವಾರವೂ ಮುಂದುವರೆದ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 21 ಬುಧವಾರ ಜಿಲ್ಲೆಯಲ್ಲಿ 72 ಜನರಿಗೆ ಸೋಂಕು ತಗುಲಿದ್ದು, ಸೋಂಕಿನ ತೀವ್ರತೆ ಮುಂದುವರೆದಿದೆ. ಗದಗ ನಗರದಲ್ಲಿಯೇ ಸೋಂಕಿತರ ಸಂಖ್ಯೆಯಲ್ಲಿ ಮತ್ತೊಮ್ಮೆ ಹಾಫ್ ಸೆಂಚುರಿ ಬಾರಿಸಿದ್ದು, 52 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮುಂಡರಗಿಯ 01, ನರಗುಂದದ 06, ರೋಣ ತಾಲೂಕಿನಲ್ಲಿ-09, ಹಾಗೂ ಶಿರಹಟ್ಟಿ ತಾಲೂಕಿನ-02, ಹೊರಜಿಲ್ಲೆಯ 03 ಜನರಿಗೆ ಸೋಂಕು ತಗುಲಿದೆ.

ಬುಧವಾರ 72 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11804 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 25 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11290 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 373 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 313 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 325146 ಮಾದರಿಗಳಲ್ಲಿ 313029 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಜಿಯೋ ಮೊಬೈಲ್ ಟವರ್ ಸ್ಥಾಪನೆ ಹೆಸರಲ್ಲಿ ಲಕ್ಷಾಂತರ ರೂ ದೋಖಾ

ವಿಜಯಸಾಕ್ಷಿ ಸುದ್ದಿ, ಗದಗ

ನಾವು ಮುಂಬೈನಿಂದ ರಿಲಾಯನ್ಸ್ ಗ್ರೂಪ್ ನಿಂದ ಮಾತಾಡ್ತಾ ಇರೋದು…..ನಿಮ್ಮ ಪ್ಲಾಟ್ ನಲ್ಲಿ ರಿಲಾಯನ್ಸ್ ಜಿಯೋ ಟವರ್ ಹಾಕ್ತೀವಿ. ನಿಮಗೆ 60 ಲಕ್ಷ ರೂಪಾಯಿ ಹಣ ಕಂಪನಿಯಿಂದ ಕೊಡ್ತೀವಿ….ಹೀಗಂತ ಮೊಬೈಲ್ ಕರೆ ಮಾಡಿದ ಇಬ್ಬರು ಖದೀಮರು ಕಾರ್ಪೆಂಟರ್ ಒಬ್ಬನಿಂದ ಲಕ್ಷಾಂತರ ರೂ, ಹಣ ದೋಚಿದ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದಲ್ಲಿ ನಡೆದಿದೆ.

ಅಬ್ಬಿಗೇರಿ ಗ್ರಾಮದ ಕಾರ್ಪೆಂಟರ್ ಮುತ್ತಪ್ಪ ಮಾರುತೆಪ್ಪ ಬಂಡಿವಡ್ಡರ ಎಂಬುವವರು ಮೋಸಕ್ಕೊಳಗಾಗಿ ದುಡ್ಡು ಕಳೆದುಕೊಂಡವರು.

ಮುಂಬೈ ರಿಲಾಯನ್ಸ್ ಕಂಪನಿಯ ಹೆಸರಿನಲ್ಲಿ ರಾಜಾರಾಮ್ ಹಾಗೂ ಸೋಮಶೇಖರ್ ಎಂಬುವವರು ಮಾರ್ಚ್ 30 ರಿಂದ ಏಪ್ರಿಲ್ 15 ರವರೆಗೆ ಹಂತಹಂತವಾಗಿ 2ಲಕ್ಷ, 20 ಸಾವಿರಕ್ಕೂ ಹೆಚ್ಚು ಹಣವನ್ನು ತಮ್ಮ ಅಕೌಂಟ್ ನಂಬರಿಗೆ ಹಾಕಿಸಿಕೊಂಡು ಜಿಯೋ ಮೊಬೈಲ್ ಟವರ್ ಹಾಕದೇ ಮೋಸ ಮಾಡಿದ್ದಾರೆ. ಈ ಕುರಿತು ಸೈಬರ್ ಪೊಲೀಸ್ ಠಾಣೆಗೆ ಮೋಸ ಹೋದ ಮುತ್ತಪ್ಪ ದೂರು ನೀಡಿದ್ದಾರೆ.

ಬೆಟಗೇರಿ ಪೊಲೀಸರ ಕಾರ್ಯಚರಣೆ; ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಏಳು ಜನರ ತಂಡವೊಂದು ಬೆಟಗೇರಿಯ ವೆಂಕಟೇಶ್ವರ ಕಲ್ಯಾಣ ಮಂಟಪದ ಬಳಿ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾಗ ಬೆಟಗೇರಿ ಪಿಎಸ್ಐ ರಾಜೇಶ್ ಬಟಗುರ್ಕಿ ಹಾಗೂ ಸಿಬ್ಬಂದಿ ದಾಳಿ ಬಂಧಿಸಿದ್ದಾರೆ.

ಬಂಧಿತರನ್ನು ಶಂಕ್ರಪ್ಪ ಸಂಗಪ್ಪ ಬೆನಕಲ್ಲ, ಪರಶುರಾಮ ಭೀಮಪ್ಪ ಗೋಟೂರು, ನಾಗರಾಜ್ ಗುರುನಾಥಪ್ಪ ಪರಗಿ, ರಮೇಶ್ ಹುಚ್ಚಪ್ಪ ಗೋಟೂರು, ರಘುವೀರ ಕಿಸನ್ ಸಿಂಗ್ ಭಾವರೆ, ಮಲ್ಲೇಶಪ್ಪ ಸಣ್ಣಕಲ್ಲಪ್ಪ ಕುರಹಟ್ಟಿ, ಬಸವರಾಜ್ ಹನಮಂತಪ್ಪ ನವಲಗುಂದ ಎಂದು ಗುರುತಿಸಲಾಗಿದೆ.

ಬಂಧಿತರಿಂದ 7500 ರೂ, ನಗದು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್ ನಿಯಮ ಉಲ್ಲಂಘನೆ; ನಗರಸಭೆ ಮಾಜಿ ಉಪಾಧ್ಯಕ್ಷನ ಪುತ್ರನ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರ ಕೊರೋನಾ ನಿಯಂತ್ರಣಕ್ಕೆ ಹಲವಾರು ಕಟ್ಟುನಿಟ್ಟಿನ ಕ್ರಮ ಕೈಗೊಂಡರು ಸಾರ್ವಜನಿಕರಿಂದ ಸಹಕಾರ ಸಿಗುತ್ತಿಲ್ಲ. ಅದರಲ್ಲೂ ಕೆಲ ರಾಜಕಾರಣಿಗಳ, ಮರಿ ಪುಡಾರಿಗಳ ದರ್ಪ ಹೇಳತೀರದು ಎನ್ನುವುದಕ್ಕೆ ನಗರದಲ್ಲಿ ನಡೆದ ಘಟನೆ ಸಾಕ್ಷಿಯಾಗಿದೆ.

ಗದಗ ಬೆಟಗೇರಿ ಅವಳಿ ನಗರದಲ್ಲಿ ಪೊಲೀಸರು, ಅಧಿಕಾರಿಗಳು ಎರಡು ದಿನಗಳಿಂದ ಸಾರ್ವಜನಿಕರಲ್ಲಿ, ವ್ಯಾಪಾರಸ್ಥರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸಹಕಾರ ಕೊಡುವ ಬದಲು ಅವರ ಜೊತೆಗೆ ವಾಗ್ವಾದ ನಡೆಸಿ ಮೊಂಡುತನ ಪ್ರದರ್ಶನ ಮಾಡಿದ ರಾಜಕಾರಣಿಯ, ನಗರಸಭೆಯ ಮಾಜಿ ಉಪಾಧ್ಯಕ್ಷನ ಪುತ್ರನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ನಗರಸಭೆ ಮಾಜಿ ಉಪಾಧ್ಯಕ್ಷ ಪ್ರಕಾಶ ಬಾಕಳೆ ಅವರ ಪುತ್ರ ವಿನಾಯಕ ಬಾಕಳೆ ಕೋವಿಡ್ ನಿಯಮ ಉಲ್ಲಂಘಿಸಿದ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ.
ಗದಗ ನಗರದ ಸ್ಟೇಷನ್ ರಸ್ತೆಯಲ್ಲಿ ಇರುವ ನೀಲಕಮಲ್ ಎಕ್ಸ್ ಕ್ಲೂಸಿವ್ ಎಸ್ ಆರ್ ಫರ್ನಿಚರ್ ಅಂಗಡಿಯಲ್ಲಿ (NEELKAMAL EXCLUSIVE S R FURNITURE SHOP) ಕೋವಿಡ್-19 ಎರಡನೇ ಅಲೆ ಹರಡುವುದನ್ನು ನಿರ್ಲಕ್ಷ್ಯಸಿ ಅಂಗಡಿಯಲ್ಲಿ ಮಾಸ್ಕ್ ಧರಿಸದೇ, ಅಂಗಡಿಯಲ್ಲಿ ಸ್ಯಾನಿಟೇಸರ್ ಮತ್ತು ಥರ್ಮಲ್ ಸ್ಕ್ಯಾನರ್ ಇಡದೇ ಕೊರೋನಾ ವೈರಸ್ ಹರಡುವಂತೆ ಪ್ರಚೋದನೆ ನೀಡಿದ್ದಾರೆ.

ಸರಕಾರದ ಆದೇಶ ಮತ್ತು ನಿಯಮಗಳನ್ನು ಪಾಲನೆ ಮಾಡದೆ ನಿರ್ಲಕ್ಷ್ಯತ‌ನ ತೋರಿದ್ದನ್ನು ಪ್ರಶ್ನೆಸಿದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ ಕಾರಣಕ್ಕೆ ವಿನಾಯಕ ಬಾಕಳೆ ಪೊಲೀಸರು ಅತಿಥಿಯಾಗಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಗ್ರಾ.ಪಂ. ಅಧ್ಯಕ್ಷ ಮುತ್ತು ರಾಯರಡ್ಡಿಯವರಿಂದ ಕೋವಿಡ್-19 ತುರ್ತು ಸಭೆ

ವಿಜಯಸಾಕ್ಷಿ ಸುದ್ದಿ, ನರಗುಂದ

ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಬುಧವಾರ ತುರ್ತು ಸಭೆ ನಡೆಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ಮಾತನಾಡಿ, ರಾಜ್ಯಾದ್ಯಂತ ಕೋವಿಡ್ -19 ಮಹಾಮಾರಿ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು, ತಡೆಗಟ್ಟಲು ಸರ್ಕಾರದ ಮಾರ್ಗಸೂಚಿಗಳನ್ನು ಅಳವಡಿಸಿಕೊಳ್ಳುವಂತೆ ಗ್ರಾಮದ ಸಮಸ್ತ ಸಾರ್ವಜನಿಕರಲ್ಲಿ ಕೊವಿಡ್ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಪಿಡಿಒ ಶೈನಾಜ ಮುಜಾವರ ಮಾತನಾಡಿ, ಸಾರ್ವಜನಿಕರ ಸುರಕ್ಷತೆಗಾಗಿ ಮಹಾಮಾರಿ ಕೊರೋನಾ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವದು, ಆಗಾಗ ಕೈಗಳನ್ನು ಸ್ವಚ್ಛಗೊಳಿಸುವದನ್ನು ಜನರಲ್ಲಿ ತಿಳಿಸುವ ಜವಾಬ್ದಾರಿ ನಮ್ಮೆಲ್ಲರದು ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಲಕ್ಷ್ಮಣ ಕಂಬಳಿ, ಶರಣಪ್ಪ ಹಳೇಮನಿ, ಈರಮ್ಮ ಮುದಿಗೌಡ್ರ, ಶ್ರತಿ ಬ್ಯಾಳಿ, ಶೋಭಾ ಕೋಣನ್ನವರ, ಶಂಕ್ರಮ್ಮ ಚಲವಾದಿ, ಗ್ರಾಮ ಲೆಕ್ಕಾಧಿಕಾರಿ ದೊಡಮನಿ, ಆರೋಗ್ಯ ಇಲಾಖೆಯ ಶರಾವತಿ ಹಿರೇಮಠ ಮತ್ತು ಗ್ರಾ.ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕೊರೋನಾ; ಮಂಗಳವಾರವೂ ಜಿಲ್ಲೆಯಲ್ಲಿ 73 ಜನರಿಗೆ ಸೋಂಕು

0

ವಿಜಯಸಾಕ್ಷಿ ಸುದ್ದಿ, ಗದಗ

ಎಪ್ರಿಲ್ 20 ಮಂಗಳವಾರ ಜಿಲ್ಲೆಯಲ್ಲಿ 73 ಜನರಿಗೆ ಸೋಂಕು ತಗುಲಿದ್ದು, ಜಿಲ್ಲೆಯಲ್ಲಿ ಸೋಂಕು ತನ್ನ ಆಟಾಟೋಪ ಮುಂದುವರಸಿದೆ. ಗದಗ -34 ಮುಂಡರಗಿಯ 09, ನರಗುಂದದ 03, ರೋಣ ತಾಲೂಕಿನಲ್ಲಿ-13, ಹಾಗೂ ಶಿರಹಟ್ಟಿ ತಾಲೂಕಿನ-05 ಜನರಿಗೆ ಸೋಂಕು ತಗುಲಿದೆ. ಹೊರಜಿಲ್ಲೆಯ 09 ಜನರಿಗೆ ಸೋಂಕು ತಗುಲಿದೆ.

ಮಂಗಳವಾರ 73 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11732 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 20 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11265 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 326 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 340 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 323213 ಮಾದರಿಗಳಲ್ಲಿ 311141 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಟಕಾ; ಗಜೇಂದ್ರಗಡದಲ್ಲಿ ಡ್ಯಾನ್ಸ್ ಮಾಸ್ಟರ್ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಗಜೇಂದ್ರಗಡ ಪಟ್ಟಣದ ದುರ್ಗಾ ಸರ್ಕಲ್ ಬಳಿ ಸಾರ್ವಜನಿಕ ರಸ್ತೆಯ ಮೇಲೆ ಸಾರ್ವಜನಿಕರಿಂದ ಓ ಸಿ ನಂಬರ್ ಆಧಾರದಲ್ಲಿ ಜೂಜಾಟದಲ್ಲಿ ತೊಡಗಿದ್ದ ಡ್ಯಾನ್ಸ್ ಮಾಸ್ಟರ್ ನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಗಜೇಂದ್ರಗಡ ಪಟ್ಟಣದ ನದಾಫ್ ಪ್ಲಾಟ್, ಪಾಗಿಯವರ ಬಿಲ್ಡಿಂಗ್ ನಿವಾಸಿ ಡ್ಯಾನ್ಸ್ ಮಾಸ್ಟರ್ ರಾಘವೇಂದ್ರ ಮಹಾದೇವಪ್ಪ ಪಾಪ್ತಿ ಎಂಬಾತನೇ ಪೊಲೀಸರ ಬಲೆಗೆ ಸಿಕ್ಕಿಬಿದ್ದಾತ. ಈತ ಸಾರ್ವಜನಿಕರಿಂದ ಓ ಸಿ ನಂಬರ್ ಬರೆದುಕೊಂಡು ಪಟ್ಟಿಯನ್ನು ತಾನೇ ಇಟ್ಟುಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಗಜೇಂದ್ರಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋವಿಡ್ ನಿಯಮ ಉಲ್ಲಂಘನೆ; ಹೋಟೆಲ್ ಮಾಲೀಕನ ಮೇಲೆ ಕೇಸ್

ವಿಜಯಸಾಕ್ಷಿ ಸುದ್ದಿ, ಗದಗ

ಎಲ್ಲೆಡೆ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದು ಅಗತ್ಯ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಸರಕಾರ ಹಾಗೂ ಜಿಲ್ಲಾಡಳಿತ ಎಷ್ಟೇ ಕಟ್ಟು ನಿಟ್ಟಿನ ಕ್ರಮ ಕೈಗೊಂಡರು ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಮಾಸ್ಕ್, ಸ್ಯಾನಿಟೇಸರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಾನೂನು ರೂಪಿಸಿದರೂ ಅದನ್ನು ಜನರು ಉಲ್ಲಂಘನೆ ಮಾಡೋದು ಸಾಮಾನ್ಯವಾಗಿದೆ.

ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಭವಾನಿ ಹೋಟೆಲ್ ಮಾಲೀಕ ಮಂಜುನಾಥ್ ಬಸಪ್ಪ ಬಗಾಡೆ ಎಂಬುವವರು ತಮ್ಮ ಹೋಟೆಲ್ ನಲ್ಲಿ ಗ್ರಾಹಕರಿಗೆ ಕೋವಿಡ್ ಕಾನೂನು ಉಲ್ಲಂಘಿಸಿ ಊಟ ಸೇರಿದಂತೆ ಮತ್ತೀತರ ವ್ಯವಸ್ಥೆ ಮಾಡಿದ್ದರು.

ಭವಾನಿ ಹೋಟೆಲ್ ಮಾಲೀಕ ಮಂಜುನಾಥ್ ಬಸಪ್ಪ ಬಗಾಡೆ ಎಂಬುವವರು ಮೇಲೆ ಕೋವಿಡ್ ಹರಡಲು ಕಾರಣವಾಗಿದ್ದಕ್ಕೆ ಐಪಿಸಿ 1860 (U/s-269, 270) ಪ್ರಕರಣ ದಾಖಲಿಸಲಾಗಿದೆ.

ಲಕ್ಷ್ಮೇಶ್ವರ ಪಿಎಸ್ಐ ಎಸ್ ವೈ ಲೋಹಾರ ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸಿದ್ದಾರೆ.

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಿ; ಡಿಸಿ

0

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು ಕೋವಿಡ್ ಸೋಂಕು ನಿಯಂತ್ರಣ ಕಾರ್ಯಕ್ಕೆ ಜಿಲ್ಲೆಯ ಅಧಿಕಾರಿಗಳು ಪ್ರಥಮಾದ್ಯತೆ ನೀಡುವ ಮೂಲಕ ಸೋಂಕು ನಿಯಂತ್ರಣಕ್ಕೆ ಮುಂದಾಗಬೇಕು. ಸೋಂಕು ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆ , ವ್ಯಾಪಾರಸ್ಥರು, ಸಾರ್ವಜನಿಕರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋಸಭಾಂಗಣದಲ್ಲಿ ಮಂಗಳವಾರ ಕೋವಿಡ್ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ತಹಶೀಲ್ದಾರರು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪೊಲೀಸ್ ಅಧಿಕಾರಿಗಳ , ಕಾರ್ಯನಿರ್ವಹಣಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು.

ತಾಲೂಕಾವಾರು ತಂಡಗಳನ್ನು ರಚಿಸಿಕೊಂಡು ಸೋಂಕು ನಿಯಂತ್ರಣದ ಬಗ್ಗೆ ನಿಗಾ ವಹಿಸಬೇಕು. ಜನ ಸಾಂದ್ರತೆ ಇರುವ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮಾರುಕಟ್ಟೆಗಳಲ್ಲಿ ಕೋವಿಡ್ ನಿಯಮ ಉಲ್ಲಂಘಿಸುವವರ ಮೇಲೆ ಪ್ರಕರಣ ದಾಖಲಿಸಿ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು.

ತಾಲೂಕಾ ಮಟ್ಟದಲ್ಲಿ ರಚಿಸುವ ತಂಡದಲ್ಲಿ ತಹಶೀಲ್ದಾರರು, ಇ.ಓ, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಹಾಗೂ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಬೇಕು. ಈ ಕಾರ್ಯದಲ್ಲಿ ನಿಧಾನ ಗತಿಯನ್ನು ಸಹಿಸಲಾಗುವುದಿಲ್ಲವೆಂದು ಅಧಿಕಾರಿಗಳಿಗೆ ಎಚ್ಚರಿಸಿದರು.

ಕೋವಿಡ್ ಕಾರ್ಯನಿರ್ವಹಣೆಯಲ್ಲಿ ನಿಷ್ಕಾಳಜಿ ತೋರುವ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಕಳೆದ ಸಾಲಿನಲ್ಲಿ ಜಿಲ್ಲಾದ್ಯಂತ ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿರುತ್ತೀರಿ. ಅದೇ ರೀತಿ ಕೋವಿಡ್ ಸೋಂಕಿನ 2 ನೇ ಅಲೆಯ ನಿಯಂತ್ರಣದಲ್ಲಿಯೂ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿಷ್ಟೆ ತೋರುವಂತೆ ಸೂಚಿಸಿದರು.
ಜಿಲ್ಲಾದ್ಯಂತ ಜಾತ್ರೆ ಉತ್ಸವಗಳನ್ನು ನಿಷೇಧಿಸಲಾಗಿದೆ. ಒಂದು ವೇಳೆ ಜಾತ್ರೆ ಉತ್ಸವಗಳು ನಡೆದಲ್ಲಿ ಆಯೋಜಕರ ಮೇಲೆ ಪ್ರಕರಣ ದಾಖಲಿಸಿ ದಂಡ ವಿಧಿಸುವಂತೆ ತಿಳಿಸಿದರು.

ಮದುವೆ ಸಮಾರಂಭ, ಜನ್ಮದಿನಾಚರಣೆ, ಅಂತ್ಯಕ್ರಿಯೆ ನಡೆಸಲು ನಿಯಮಾನುಸಾರ ಜನಸಂಖ್ಯೆ ಮಿತಿಗೊಳಿಸಿ ಅವಕಾಶ ಒದಗಿಸಲಾಗಿದೆ. ಸರ್ಕಾರ ನಿಗದಿಗೊಳಿಸಿದ ಜನ ಮಿತಿಗಿಂತ ಅಧಿಕ ಜನ ಸೇರಿದಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸುವುದು ಅನಿವಾರ್ಯ ಎಂದರು.

ವ್ಯಾಪಾರಸ್ಥರು ವ್ಯವಹರಿಸುವಾಗ ತಪ್ಪದೇ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಬೇಕು. ಅಲ್ಲದೇ ಅಂಗಡಿಯ ಮುಂಬಾಗಿಲಿಗೆ ಮಾಸ್ಕ್ ಧರಿಸುವುದು ಕಡ್ಡಾಯವೆಂಬ ಸೂಚನಾಫಲಕ ಅಳವಡಿಸಿ ವ್ಯವಹರಿಸಬೇಕು. ಸಂಕೀರ್ಣ, ಮಾರ್ಟ್ ಹಾಗೂ ಮಾರುಕಟ್ಟೆ ವ್ಯಾಪಾರಸ್ಥರು ನಿಯಮ ಉಲ್ಲಂಘನೆ ಕಂಡು ಬಂದಲ್ಲಿ ಶಿಕ್ಷೆಗೆ ಒಳಪಡಿಸಬೇಕು. ಈ ಎಲ್ಲ ಕ್ರಮಗಳನ್ನು ನಿಯೋಜಿತ ಅಧಿಕಾರಿಗಳು ಕಡ್ಡಾಯವಾಗಿ ಪಾಲನೆ ಮಾಡುವುದರೊಂದಿಗೆ ಸೋಂಕು ನಿಯಂತ್ರಣಕ್ಕೆ ಶ್ರಮಿಸಬೇಕೆಂದು ಸೂಚಿಸಿದರು.

ಜಿಲ್ಲಾ ಪೊಲೀಸವರಿಷ್ಟಾಧಿಕಾರಿ ಯತೀಶ್ ಎನ್ ಮಾತನಾಡಿ, ತಾಲೂಕಾವಾರ ತಹಶೀಲ್ದಾರರು ಮದುವೆ ಸಮಾರಂಭಗಳಿಗೆ ಪರವಾನಿಗೆ ನೀಡಿದಲ್ಲಿ ಮಾಹಿತಿಯನ್ನು ಸಂಬಂಧಿಸಿದ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು. ಮದುವೆ ಸಮಾರಂಭಗಳು ನಡೆಯುವ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಕೋವಿಡ್ ನಿಯಮಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ಸರ್ಕಾರಿ ನೌಕರರು ಹಾಗೂ ಪೊಲೀಸ್ ಅಧಿಕಾರಿಗಳು ಕಡ್ಡಾಯವಾಗಿ ನಿಯಮಾನುಸಾರ ಮಾಸ್ಕ್ ಧರಿಸಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.

ಅಪರಜಿಲ್ಲಾಧಿಕಾರಿ ಸತೀಶಕುಮಾರ್ ಎಂ ಮಾತನಾಡಿ, ಪ್ರತಿ ತಾಲೂಕಿಗೆ ಕೋವಿಡ್ ಸೋಂಕು ನಿಯಮ ಮಾರ್ಗಸೂಚಿಗಳ ಪಾಲನೆಗಾಗಿ ತಲಾ 5 ಕಾರ್ಯಪಡೆ ತಂಡಗಳನ್ನು ರಚಿಸಿ ಕಾರ್ಯಾಚರಣೆ ಮಾಡಬೇಕು. ಪ್ರತಿದಿನ ಸಾಯಂಕಾಲ ಜಿಲ್ಲಾಡಳಿತಕ್ಕೆ ವಹಿಸಿದ ಕ್ರಮದ ವರದಿ ನೀಡಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಸಭೆ ಪೌರಾಯುಕ್ತ ರಮೇಶ ಜಾಧವ, ತಹಶೀಲ್ದಾರರು, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು, ಪೊಲೀಸ್ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿಯ ಶಿರಸ್ತೇದಾರ ರೇವಣಕರ್ ಸೇರಿದಂತೆ ಮತ್ತಿತರರು ಹಾಜರಿದ್ದರು.

error: Content is protected !!