Home Blog Page 3125

ಗ್ರಾಮ ಪಂಚಾಯತ ಚುನಾವಣೆ; ಎರಡನೇ ದಿನಕ್ಕೆ 23 ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮೊದಲ ಹಂತದ 53 ಗ್ರಾಮ ಪಂಚಾಯತಗಳ 801 ಸ್ಥಾನಗಳ ಚುನಾವಣೆಯು ಡಿ.22 ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಮಂಗಳವಾರದವರೆಗೆ (ಡಿ.8) ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಒಟ್ಟು 23 ನಾಮಪತ್ರಗಳು ಸಲ್ಲಿಕೆಯಾಗಿವೆ.

ಗದಗ 07, ಲಕ್ಷ್ಮೇಶ್ವರ 10 ಹಾಗೂ ಶಿರಹಟ್ಟಿ ತಾಲ್ಲೂಕುಗಳಲ್ಲಿ 06 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗ ತಿಳಿಸಿದೆ.

ಬೈಕ್‌ಗಳ ಢಿಕ್ಕಿ; ಮೂವರ ಸಾವು

0

ವಿಜಯಸಾಕ್ಷಿ ಸುದ್ದಿ, ಕನಕಗಿರಿ:
ಗಂಗಾವತಿ ತಾಲ್ಲೂಕಿನ ಕೆಸರಹಟ್ಟಿ ಅರಳಹಳ್ಳಿ ಮಧ್ಯದಲ್ಲಿ ಎರಡು ಬೈಕ್ ಗಳ ಮಧ್ಯ ಭೀಕರ ಅಪಘಾತ ಸೋಮವಾರ ರಾತ್ರಿ ನಡೆದಿದೆ,
ಅಪಘಾತದಲ್ಲಿ ಮೂವರು ಸಾವನ್ನಪ್ಪಿದ ಘಟನೆ ನಡೆದಿದೆ.

ಒಬ್ಬರು ಸ್ಥಳದಲ್ಲೇ ಮಲಕನಮರಡಿ ಗ್ರಾಮದ ಶಂಕ್ರಪ್ಪ (30) ಮೃತಪಟ್ಟರೆ, ಇನ್ನೊಬ್ಬರು ಸಹ ಮಲಕನಮರಡಿ ಗ್ರಾಮದ ವೆಂಕಟೇಶ(40) ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ. ಒಂದು ಬೈಕ್‌ನಲ್ಲಿ ಮೂವರು ಸಂಚರಿಸುತ್ತಿದ್ದರು ಎನ್ನಲಾಗುತ್ತಿದೆ.

ಇನ್ನೊಂದು ಬೈಕ್‌ನಲ್ಲಿ ಗಂಗಾವತಿ ನಗರದ ಗುಂಡಮ್ಮಕ್ಯಾಂಪ್ ನಿವಾಸಿ ಮೌಲಾಹುಸೇನ್ (25) ತನ್ನ ಸಹೋದರ ಮಾವನ ಮದುವೆಗಾಗಿ ಮುದ್ಗಲ್ ಪಟ್ಟಣಕ್ಕೆ ಒಬ್ಬನೇ ಸಂಚರಿಸುವ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ.

ಮೌಲಾಹುಸೇನ್‌ನ ತಂದೆ ಕೆಲ ದಿನಗಳ ಹಿಂದ ಸಾವನ್ನಪ್ಪಿದ್ದರು. ಇರುವವನು ಒಬ್ಬನೇ ಮಗ ಟೈಲ್ಸ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಲಕನಮರಡಿ ಗ್ರಾಮದ ಇನ್ನೊರ್ವ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗಂಗಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಅಪಘಾತಕ್ಕೆ ಕಾರಣ..!

ಗಂಗಾವತಿ ಭಾಗದಲ್ಲಿ ಈಗ ಭತ್ತ ಕಟಾವು ನಡೆಯುತ್ತಿದೆ. ಅದರಿಂದ
ಗಂಗಾವತಿಯಿಂದ ಕನಕಗಿರಿ ರಸ್ತೆಯಲ್ಲಿ ಎಲ್ಲಾ ರೈತರು ರಾಜ್ಯ ಹೆದ್ದಾರಿ ಪಕ್ಕದಲ್ಲೇ ಭತ್ತದ ರಾಶಿ ಹಾಕಿರುವುದರಿಂದ ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಅನೇಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು ಮತ್ತು ಗಾಯಗೊಂಡ ಉದಾಹರಣೆಗಳು ಸಾಕಷ್ಟು ಇವೆ.
ರೈತರು ಇದಕ್ಕೆ ಪರ್ಯಾಯವಾಗಿ ರಸ್ತೆ ಬಿಟ್ಟು ಬೇರಡೆ ವ್ಯವಸ್ಥೆ ಮಾಡಿದ್ದೆ ಆದಲ್ಲಿ ಅಪಘಾತ ತಡೆಯಬಹುದು ಎನ್ನಲಾಗುತ್ತಿದೆ. ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಕಳ್ಳತನದ ಆರೋಪಿ ಪೊಲೀಸ್ ಠಾಣೆಯಿಂದ ಪರಾರಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಕಳ್ಳತನದ ಪ್ರಕರಣವೊಂದರ ವಿಚಾರಣೆಗೆ ಕರೆ ತಂದಿದ್ದ ಆರೋಪಿಯೊಬ್ಬ ಪೊಲೀಸರಿಬ್ಬರಿಗೆ ಚೆಳ್ಳೆಹಣ್ಣು ತಿನಿಸಿ ಠಾಣೆಯಿಂದಲೇ ಪರಾರಿಯಾದ ಘಟನೆ ಜಿಲ್ಲೆಯ ರೋಣದಲ್ಲಿ ನಡೆದಿದೆ.

ರೋಣ ತಾಲ್ಲೂಕಿನ
ಶಾಂತಗೇರಿ ಗ್ರಾಮದ ರಾಜೇಸಾಬ ಅಬ್ದುಲ್ ಸಾಬ ರಾಜೇಖಾನ್ ಎಂಬ ಆರೋಪಿಯೇ ರೋಣ ಪೊಲೀಸ್ ಠಾಣೆಯಿಂದ ತಪ್ಪಿಸಿಕೊಂಡಾತ.

ಈತ ಈ ಹಿಂದೆ ಕಳ್ಳತನದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದು, ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಾಗ ಈ ಘಟನೆ ನಡೆದಿದೆ.

ಆರೋಪಿ ರಾಜೇಸಾಬ್ ಮೂತ್ರ ವಿಸರ್ಜನೆಯ ನೆಪ ಮಾಡಿ ಠಾಣೆಯಿಂದ ಹೊರಬಂದಾಗ ಕಾವಲಿಗಿದ್ದ ಇಬ್ಬರು ಪೊಲೀಸರನ್ನು ನೂಕಿ ಪರಾರಿಯಾಗಿದ್ದಾನೆ.

ಈ ಕುರಿತು ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ವಿನೋದ ಪೂಜಾರಿ ಪರಾರಿಯಾಗಿರುವ ಆರೋಪಿ ರಾಜೇಸಾಬ್ ನ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಸ್ವಯಂ ಪ್ರೇರಿತ ಅಂಗಡಿ ಮುಂಗಟ್ಟು ಬಂದ್; ಅನ್ನದಾತರ ಹೋರಾಟಕ್ಕೆ ಬೆಂಬಲ

0

ವಿಜಯಸಾಕ್ಷಿ ಸುದ್ದಿ, ಗದಗ

ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ವಿವಿಧ ರೈತ ಸಂಘ, ದಲಿತ ಸಂಘ ಹಾಗೂ ದಲಿತ ಪರ ಸಂಘಟನೆಗಳು ನಗರದಲ್ಲಿ ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಮೂಲಕ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ನಗರದ ಗಾಂಧಿ ವೃತ್ತದಿಂದ ಟಾಂಗಾ ಕೂಟ ಮೂಲಕ ತೆರಳುತ್ತಿರುವ ಪ್ರತಿಭಟನಾ ರ್ಯಾಲಿ ಬರುತ್ತಿದ್ದಂತೆ ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ ಮಾಡುವ ಮೂಲಕ ಬೆಂಬಲಿಸಿದ್ದಾರೆ.

ಅಗತ್ಯ ಸೇವೆಗಳ ಅಂಗಡಿ ಮುಂಗಟ್ಟುಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ರೀತಿಯ ಅಂಗಡಿಗಳ ಮಾಲೀಕರು ಅಂಗಡಿಗಳ ಬಾಗಿಲು ಹಾಕಿ ಕೇಂದ್ರ ಸರ್ಕಾರದ ಕೃಷಿ ವಿರೋಧಿ ಕಾಯ್ದೆ ವಿರೋಧಿಸಿ ಅನ್ನದಾತರು ಆಚರಿಸುತ್ತಿರುವ ಭಾರತ್ ಬಂದ್ ಗೆ ಬೆಂಬಲ ನೀಡಿದರು.

ಹರಿಹರದಲ್ಲಿ ಕುಸ್ತಿ ಹಣಾಹಣಿ; ಗದಗ ಕುಸ್ತಿ ಕ್ಷೇತ್ರಕ್ಕೆ ಮತ್ತೊಂದು ಗರಿಮೆ

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಹಾವಳಿಯಿಂದಾಗಿ ಸ್ತಬ್ಧವಾಗಿದ್ದ ಕ್ರೀಡಾ ಚಟುವಟಿಕೆಗಳು ಎಂಟು ತಿಂಗಳ ಬಳಿಕ ಚುರುಕುಗೊಂಡಿದ್ದು, ಇದರಿಂದ ಮತ್ತೆ ಕುಸ್ತಿಯ ಸದ್ದು ಕೇಳ ತೊಡಗಿದಂತಾಗಿದೆ.

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕರ್ನಾಟಕ ರಾಜ್ಯ ಕುಸ್ತಿ ಅಸೋಶಿಯೆಶನ್ ಹಾಗೂ ನಾಡಮಂದ್ ಸಾವಲಿ ಗರಡಿ ಮನೆ ಸಹಯೋಗದಲ್ಲಿ ಸೋಮವಾರ ನಡೆದ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಗದಗನ ಅಂತರಾಷ್ಟ್ರೀಯ ಕುಸ್ತಿಪಟು ಕುಮಾರಿ ಪ್ರೇಮಾ ಹುಚ್ಚಣ್ಣವರ ಬಂಗಾರದ ಪದಕ ಪಡೆದಿದ್ದಾರೆ.

ಕರ್ನಾಟಕ ಕಂಠೀರವ, ಕರ್ನಾಕ ಕೇಸರಿ, ಕರ್ನಾಟಕ ಕುಮಾರ, ಕರ್ನಾಟಕ ಕಿಶೋರ, ಒನಕೆ ಓಬವ್ವ, ವೀರರಾಣಿ ಕಿತ್ತೂರ ಚೆನ್ನಮ್ಮ ವಿಭಾಗದ ಹಿರಿಯರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಕುಮಾರಿ ಪ್ರೇಮಾ ಹುಚ್ಚಣ್ಣವರ ಬಂಗಾರದ ಪದಕದೊಂದಿಗೆ ಕಿತ್ತೂರ ರಾಣಿ ಚೆನ್ನಮ್ಮ ಪ್ರಶಸ್ತಿ ಪಡೆಯುವ ಮೂಲಕ ಗದಗ ಕುಸ್ತಿ ಕ್ಷೇತ್ರಕ್ಕೆ ಮತ್ತೊಂದು ಗರಿಮೆ ಸಿಕ್ಕಂತಾಗಿದೆ. ಕುಸ್ತಿ ತರಬೇತುದಾರ ಶರಣಗೌಡ ಬೇಲೇರಿ ಇದ್ದರು.

ಭಾರತ್ ಬಂದ್; ಬಣಗುಡುತ್ತಿರುವ ಎಪಿಎಂಸಿ

0

ವಿಜಯಸಾಕ್ಷಿ ಸುದ್ದಿ, ಗದಗ

ದೇಶದ ವಿವಿಧ ರೈತ ಸಂಘಟನೆಗಳು ಭಾರತ್ ಬಂದ್ ಕರೆ ನೀಡಿರುವ ಹಿನ್ನಲೆ ಗದಗನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ, ವ್ಯಾಪಾರ ವಹಿವಾಟು ಬಂದ್ ಮಾಡಿದೆ.

ನಗರದ ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಎಪಿಎಂಸಿಯಲ್ಲಿ ವ್ಯಾಪಾರ, ವಹಿವಾಟು, ಸಂತೆ, ಖರೀದಿ ಮಾರುಕಟ್ಟೆ ಎಲ್ಲವನ್ನೂ ಬಂದ್ ಮಾಡುವ ಮೂಲಕ ಬೆಂಬಲ ಸೂಚಿಸಿದೆ.

ಎಪಿಎಂಸಿಯ ಹಮಾಲರು, ದಲ್ಲಾಳಿ ವರ್ತಕರು, ಖರೀದಿ ವರ್ತಕರು, ಕಾರ್ಮಿಕರು ಬಂದ್ ಆಚರಿಸುತ್ತಿದ್ದು, ಬಂದ್ ನಿಂದಾಗಿ ಎಪಿಎಂಸಿ ಆವರಣ ಬಣಗುಡುತ್ತಿದೆ.

ಭಾರತ್ ಬಂದ್: ಗದಗನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್  ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯದಂತೆ ನಗರದ ವಿವಿಧೆಡೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ನಗರದ ಗಾಂಧಿ ವೃತ್ತ, ಮುಳಗುಂದ ನಾಕಾ, ಚೆನ್ನಮ್ಮ ವೃತ್ತದಲ್ಲಿ ಸೂಕ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಭಾರತ್ ಬಂದ್ ಗೆ ಜಿಲ್ಲೆಯಲ್ಲಿ ಹಲವು ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಎಂಟು ಗಂಟೆಯವರೆಗೂ ನಗರದಲ್ಲಿ ಬಂದ್ ವಾತಾವರಣ ಕಂಡು ಬರುತ್ತಿಲ್ಲ. ಎಂದಿನಂತೆ ವಾಹನ ಸಂಚಾರ ಇದೆ.

ಗ್ರಾ.ಪಂ. ಚುನಾವಣೆ: ಮೊದಲ ದಿನ ಐವರಿಂದ ನಾಮಪತ್ರ ಸಲ್ಲಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮೊದಲ ಹಂತದ 53 ಗ್ರಾಮ ಪಂಚಾಯತಿಗಳ 801 ಸ್ಥಾನಗಳ ಚುನಾವಣೆಗಾಗಿ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಉಮೇದುವಾರಿಕೆ ಸಲ್ಲಿಕೆಯ ಮೊದಲ ದಿನವಾದ ಸೋಮವಾರದಂದು 5 ನಾಮಪತ್ರಗಳು ಸಲ್ಲಿಕೆಯಾಗಿವೆ.

ಗದಗ ತಾಲ್ಲೂಕಿನಲ್ಲಿ 04 ಮತ್ತು ಶಿರಹಟ್ಟಿ ತಾಲ್ಲೂಕಿನಲ್ಲಿ 01 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿಗಳ ಚುನಾವಣಾ ವಿಭಾಗ ತಿಳಿಸಿದೆ.

ಬಲವಂತವಾಗಿ ಬಂದ್ ಮಾಡಿಸುವಂತಿಲ್ಲ; ಎಸ್ಪಿ ಯತೀಶ್

0

ವಿಜಯಸಾಕ್ಷಿ ಸುದ್ದಿ, ಗದಗ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡುವಂತೆ ಆಗ್ರಹಿಸಿ ಕರೆ ನೀಡಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿಂದು ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ತಿಳಿಸಿದರು.

ಜಿಲ್ಲೆಯಲ್ಲಿ ಜನಜೀವನ ಯಥಾವತ್ತಾಗಿರುತ್ತದೆ. ಪ್ರತಿಭಟನೆಯ ವೇಳೆ ಯಾರೂ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಬಾರದು. ರಸ್ತೆ ತಡೆ ನಡೆಸಿ ವಾಹನ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡಬಾರದು. ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸುವುದಿದ್ದರೆ ಸಲ್ಲಿಸಬಹುದು ಎಂದು ಎಸ್ಪಿ ಯತೀಶ್ ಎನ್. ಹೇಳಿದರು.

ಬೇಡಿಕೆ ಈಡೇರಿಸುವಂತೆ ರೈತಸೇನೆ ಪ್ರತಿಭಟನೆ

0

ವಿಜಯಸಾಕ್ಷಿ ಸುದ್ದಿ, ಗದಗ

ದೆಹಲಿಯಲ್ಲಿ ರೈತರ ಹೋರಾಟ ಕ್ಷಣಕ್ಷಣಕ್ಕೂ ಕಾವು ಪಡೆದುಕೊಳ್ಳುತ್ತಿದ್ದಂತೆ ಜಿಲ್ಲೆಯಲ್ಲೂ ಅನ್ನದಾತರ ಹೋರಾಟದ ಕಿಚ್ಚು ಜೋರಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರೈತಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ನೇತೃತ್ವದಲ್ಲಿ ನೂರಾರು ರೈತರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಲುವುಗಳನ್ನು ಖಂಡಿಸಿ ಜಿಲ್ಲಾಡಳಿತ ಭವನದ ಎದುರು ಹೋರಾಟ ನಡೆಸಿದರು.

ರೈತ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು, ಶಾಶ್ವತ ಖರೀದಿ ಕೇಂದ್ರ ತೆರೆಯಬೇಕು, ಕೇಂದ್ರದ ಕೃಷಿನೀತಿ ಕೈಬಿಡಬೇಕು ಎಂದು ಹೀಗೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿದರು.

ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ನೂರಾರು ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಒಲೆ ಹೂಡಿ ಅಡುಗೆ ಮಾಡಿ ಉಪಹಾರ ತಯಾರಿಸುವ ಮೂಲಕ ಧರಣಿ ನಡೆಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ನಿಗದಿ ಮಾಡಿರುವ ಬೆಂಬಲ ಬೆಲೆಗೆ ಶಾಶ್ವತವಾಗಿ ಖರೀದಿ ಕೇಂದ್ರ ಸ್ಥಾಪಿಸಬೇಕು. ಎರಡು ತಿಂಗಳಿಂದ ಮನವಿ ಸಲ್ಲಿಸುತ್ತಾ ಬಂದರೂ ಇನ್ನೂವರೆಗೂ ಖರೀದಿ ಕೇಂದ್ರ ತೆರೆದಿಲ್ಲ. ಕೂಡಲೇ ನರಗುಂದದಲ್ಲಿ ಗೋವಿನಜೋಳ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ರೈತಸೇನಾ ರಾಜ್ಯಾಧ್ಯಕ್ಷ ವಿರೇಶ್ ಸೊಬರದಮಠ ಆಗ್ರಹಸಿದರು.

ಭಾರತ್ ಬಂದ್‌ಗೆ ರೈತಸೇನೆ ಬೆಂಬಲ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾಯ್ದೆಗಳನ್ನು ಕೈಬಿಡುವಂತೆ ಕರೆ ನೀಡಿರುವ ಭಾರತ್ ಬಂದ್‌ಗೆ ಕರ್ನಾಟಕ ರೈತಸೇನೆ ಬೆಂಬಲ ನೀಡಲಿದೆ. ರಾಜ್ಯದ ನಾಲ್ಕು ಜಿಲ್ಲಾ ೧೧ ತಾಲ್ಲೂಕು ಕೇಂದ್ರಗಳಲ್ಲಿ ಬೆಂಬಲಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು.

ಜಿಲ್ಲಾಧಿಕಾರಿ ಭರವಸೆ

ಗೋವಿನಜೋಳ ಖರೀದಿ ಕೇಂದ್ರ ಹಾಗೂ ಖರೀದಿಗೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಶೀಘ್ರದಲ್ಲೇ ನರಗುಂದದಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಸ್ಥಾಪಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸೊಬರದಮಠ ತಿಳಿಸಿದರು.

error: Content is protected !!