Home Blog Page 3126

ಹಣ ಕೊಡದಿದ್ದಕ್ಕೆ ಎಪಿಎಂಸಿ ಕಚೇರಿ ಸಲಕರಣೆಗಳು ಜಪ್ತಿ

ಒಂದು ಸ್ಕಾರ್ಪಿಯೋ, ನಾಲ್ಕು ಕಂಪ್ಯೂಟರ್ ಜಪ್ತಿ

ವಿಜಯಸಾಕ್ಷಿ ಸುದ್ದಿ, ಗದಗ

ಕೃಷಿ ಉತ್ಪನ್ನ ಮಾರುಕಟ್ಟೆಗೆ ಭೂಮಿ ನೀಡಿದ ದೂರುದಾರನಿಗೆ ಹಣ ಕೊಡದ ಎಪಿಎಂಸಿಯ ಕಚೇರಿ ವಸ್ತುಗಳನ್ನು ದೂರುದಾರ ಪರ ವಕೀಲರು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

ಪ್ರಧಾನ ದಿವಾಣಿ ನ್ಯಾಯಾಧೀಶರು ಹಿರಿಯ ವಿಭಾಗ ಆದೇಶದಂತೆ ಎಪಿಎಂಸಿ ಅಧಿಕಾರಿಯ ಒಂದು ಸ್ಕಾರ್ಪಿಯೋ ವಾಹನ, ನಾಲ್ಕು ಕಂಪ್ಯೂಟರ್‌ಗಳನ್ನು ಸೋಮವಾರ ಜಪ್ತಿ ಮಾಡಲಾಗಿದೆ.

ಗದಗ ಎಪಿಎಂಸಿಗೆ 1977ರಲ್ಲಿ ಆರ್. ಆರ್. ಹೇಮಂತನವರ ಎಂಬುವವರು 4 ಎಕರೆ 35 ಗುಂಟೆ ಜಮೀನು ನೀಡಿದ್ದರು. ಸರ್ಕಾರದ ಮೌಲ್ಯಮಾಪನದ ಪ್ರಕಾರ 1982ರಲ್ಲಿ ಎಪಿಎಂಸಿಯವರು ಶೇ.50ರಷ್ಟು ಹಣ ತುಂಬಿದ್ದರು. ಆದರೆ, ಮೌಲ್ಯಮಾಪನ ಕಡಿಮೆಯಾಗಿದ್ದರಿಂದ ಸಿವಿಲ್ ಕೋರ್ಟ್ ಮೊರೆ ಹೋಗಲಾಗಿತ್ತು. ಸಿವಿಲ್ ಕೋರ್ಟ್ ಒಂದು ಸ್ಕ್ವೇರ್ ಫೀಟ್‌ಗೆ ಏಳು ರೂ. ನಿಗದಿಪಡಿಸಿತ್ತು. ಬಳಿಕ ಎಪಿಎಂಸಿಯವರು ಹೈಕೋರ್ಟ್ ಮೊರೆ ಹೋಗಿದ್ದರು, ಅಲ್ಲಿ ಸ್ಕ್ವೇರ್ ಫೀಟ್‌ಗೆ 6 ರೂ. ನಿಗದಿಯಾಯಿತು. ಪುನಃ ಎಪಿಎಂಸಿಯವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸರ್ವೋಚ್ಛ ನ್ಯಾಯಾಲಯ ಈ ಪ್ರಕರಣದ ತನಿಖೆ ನಡೆಸುವಂತೆ ಸಿವಿಲ್ ಕೋರ್ಟ್‌ಗೆ ವರ್ಗಾವಣೆ ಮಾಡಿತ್ತು.

ಸುಪ್ರೀಂಕೋರ್ಟ್ ಆದೇಶದಂತೆ ಪ್ರಕರಣದ ವಿಚಾರಣೆ ನಡೆಸಿದ ಸಿವಿಲ್ ಕೋಟ್ ಒಟ್ಟು 4 ಎಕರೆ 35 ಗುಂಟೆ ಜಮೀನಿಗೆ ಪ್ರತಿ ಸ್ಕ್ವೇರ್ ಫೀಟ್‌ಗೆ 8 ರೂ.50 ಪೈಸೆದಂತೆ 16 ಲಕ್ಷ 50 ಸಾವಿರ ರೂ. ಮೌಲ್ಯಮಾಪನ ಮಾಡಿ ಹಣ ತುಂಬುವಂತೆ ಎಪಿಎಂಸಿ ಅವರಿಗೆ 2019ರಲ್ಲಿಯೇ ನ್ಯಾಯಾಲಯ ಆದೇಶ ನೀಡಿತ್ತು. ಆದರೆ, ಎಪಿಎಂಸಿಯವರು ಹಣ ಪಾವತಿಸಲು ಸತಾಯಿಸಿದ್ದರು. ಹೀಗಾಗಿ ಈ ಹಿಂದೆ ಎಪಿಎಂಸಿ ಅಧಿಕಾರಿಯ ಮೇಲೆ ಕೋರ್ಟ್ ಅರೆಸ್ಟ್ ವಾರೆಂಟ್ ಜಾರಿಗೊಳಿಸಿತ್ತು. ಆಗ ಎಪಿಎಂಸಿಯ ಅಧಿಕಾರಿ ಕಚೇರಿಗೆ ಬರದೇ ಸುಮಾರು 15 ದಿನಗಳವರೆಗೆ ಕಚೇರಿಯಿಂದ ದೂರವೇ ಉಳಿದಿದ್ದರು. ಹೀಗಾಗಿ ಇದೀಗ ಕೋರ್ಟ್ ಆದೇಶದಂತೆ ಕಚೇರಿ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ ಎಂದು ದೂರುದಾರ ಪರ ವಕೀಲ ಎಸ್.ಎಸ್.ಹುರಕಡ್ಲಿ ತಿಳಿಸಿದ್ದಾರೆ.

ಸುಮಾರು 35 ವರ್ಷಗಳಿಂದ ದೂರುದಾರರ ಜಮೀನು ಹೋಗಿದೆ. ಸಿವಿಲ್ ಕೋರ್ಟ್ ಹಣ ತುಂಬುವಂತೆ ಆದೇಶ ಮಾಡಿದ್ದರೂ, ಎಪಿಎಂಸಿಯವರು ಹಣ ತುಂಬುತ್ತಿಲ್ಲ. ಇದರಿಂದ ಪ್ರಕರಣ ಬೆಳೆಯುತ್ತಾ ಹೋಗುತ್ತಿದೆ. ಹೀಗಾಗಿ ಕಚೇರಿಯ ಸಲಕರಣೆಗಳನ್ನು ಜಪ್ತಿ ಮಾಡಿದೆ. ಕೋರ್ಟ್ ಆದೇಶ ನೀಡಿರುವಷ್ಟೇ ಗಣ ತುಂಬಿದರೂ ಸಹಿತ ರಾಜಿ ಸಂಧಾನ ಮಾಡಿಕೊಳ್ಳಲಾಗುತ್ತದೆ.

ಎಸ್ ಎಸ್ ಹುರಕಡ್ಲಿ, ದೂರದಾರ ಪರ ವಕೀಲರು

ಬಿಜೆಪಿಯವರು‌ ಮೈಮೇಲೆ ಬಂದಾಗ ಸುಳ್ಳು ಹೇಳ್ತಾರೆ: ಸಿದ್ದರಾಮಯ್ಯ

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡ್ತಿದೆ ಎಂದಿರೊ ಜಗದೀಶ್ ಶೆಟ್ಟರ್ ಬಳಿ ಸಾಕ್ಷಿ ಇದೆಯಾ? ಬಿಜೆಪಿಯವರಿಗೆ ಮೈಮೇಲೆ ಬಂದಾಗ ಸುಳ್ಳು ಹೇಳೋದೇ ಜಾಯಮಾನ ಎಂದು ವಿರೋಧಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಗುಡುಗಿದರು.

ಜಿಲ್ಲೆಯ ತಾವರಗೇರಾ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ‌ ಮಾತನಾಡಿದ ಅವರು, ಜಾರಕಿಹೊಳಿ ವಿಚಾರದಲ್ಲಿ ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡ್ತಿದೆ ಎಂಬ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್‌ ಷಡ್ಯಂತ್ರ ಮಾಡಿದೆ ಎಂಬುದಕ್ಕೆ ಸಾಕ್ಷ್ಯ ಇದೆಯಾ ಎಂದು ಪ್ರಶ್ನಿಸುವ ಮೂಲಕ ಟಾಂಗ್ ನೀಡಿದರು.

ಶಾಸಕ ರಮೇಶ್ ಜಾರಕಿಹೊಳಿ ಕೋವಿಡ್ ಕಾರಣದಿಂದ ವಿಚಾರಣೆಗೆ ಗೈರಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಏನನ್ನೂ ಹೇಳಲಾರೆ ಎಂದ ಅವರು, ಸಿಡಿ ಪ್ರಕರಣದಲ್ಲಿ ಯಾರೇ ಇದ್ದರೂ ಸಮಗ್ರ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದರು.

ಮಸ್ಕಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿದ್ದು, ಇಂದು 10-15 ಕಡೆಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಿದ್ದೇನೆ. ಬೆಳಗಾವಿ ಲೋಕಸಭೆ ಹಾಗೂ ಎರಡೂ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಯಲ್ಲಿದ್ದರು.

ಬಣವಿಗೆ ಬೆಂಕಿಯಿಟ್ಟ ದಾಯಾದಿಗಳು; ನ್ಯಾಯ ಕೋರಿ ಪೊಲೀಸ್ ಠಾಣೆಯ ಆವರಣದಲ್ಲಿ ಜಾನುವಾರು ಕಟ್ಡಿ ಆಕ್ರೋಶ

ವಿಜಯಸಾಕ್ಷಿ ಸುದ್ದಿ, ಗದಗ

ಹುಟ್ಟುತ್ತಾ ಅಣ್ಣ-ತಮ್ಮಂದಿರು ಬೆಳಿತಾ ದಾಯಾದಿಗಳು ಎಂಬ ಮಾತಿನಂತೆ ಆಸ್ತಿಗಾಗಿ ನಡೆದ ದಾಯಾದಿಗಳ ಕಲಹ ವಿಕೋಪಕ್ಕೆ ಹೋಗಿದ್ದು, ವರ್ಷದುದ್ದಕ್ಕೂ ಆಗುವಷ್ಟು ಶೇಖರಿಸಿಟ್ಟಿದ್ದ ಮೇವಿನ ಬಣವಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ಈ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹುಣಶೀಕಟ್ಟಿ ಗ್ರಾಮದಲ್ಲಿ ನಡೆದಿದ್ದು, ಗ್ರಾಮದ ನಿವಾಸಿ ಹನಮಂತಗೌಡ ಹೆಬ್ಬಳ್ಳಿ ಎಂಬುವವರಿಗೆ ಸೇರಿದ ಮೇವಿನ ಬಣವಿಗಳಿಗೆ ಸಹೋದರ ಬಸವನಗೌಡ ಹೆಬ್ಬಳ್ಳಿ ಬೆಂಕಿ ಹಂಚಿದ್ದಾರೆ. ಇದರ ಪರಿಣಾಮವಾಗಿ ಸುಮಾರು 1 ಲಕ್ಷ ರೂ. ಮೌಲ್ಯದ ಕಡಲೆ, ಗೋದಿ ಹೊಟ್ಟು, ಮೇವು ಹಾಗೂ ಕೃಷಿಗೆ ಉಪಯೋಗಿಸುವ ವಸ್ತುಗಳು ಬೆಂಕಿಗಾಹುತಿ ಆಗಿವೆ.
ಇದರಿಂದ ನೊಂದ ಕುಟುಂಬ ನ್ಯಾಯಕ್ಕಾಗಿ ಜಾನುವಾರು ಸಮೇತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹುಣಶೀಕಟ್ಟಿ ಗ್ರಾಮದಲ್ಲಿ ಸುಮಾರು 12 ಎಕರೆ ಜಮೀನು ವಿಷಯಕ್ಕಾಗಿ ಹನಮಂತಗೌಡ ಹಾಗೂ ಬಸವನಗೌಡ ಸಹೋದರರ ನಡುವೆ ಕಲಹ ಏರ್ಪಟ್ಟಿದೆ. ನ್ಯಾಯಾಲಯದಲ್ಲಿರುವ ಪ್ರಕರಣ ಹಿಂಪಡೆಯುವಂತೆ ಕಳೆದ ಹಲವು ದಿನಗಳ ಹಿಂದೆ ಹನಮಂತಗೌಡ ಮೇಲೆ, ಬಸವನಗೌಡ ಹೆಬ್ಬಳ್ಳಿ ಕುಟುಂಬದವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬಸವನಗೌಡ ಕುಟುಂಬಸ್ಥರು ರಾತ್ರಿ ವೇಳೆ ಜಾನುವಾರುಗಳಿಗೆ ಸಂಗ್ರಹಿಸಿಟ್ಟಿದ್ದ ನಾಲ್ಕು ಮೇವಿನ ಬಣವಿಗಳಿಗೆ ಬೆಂಕಿ ಇಟ್ಟಿದ್ದಾರೆ.

ಇನ್ನು ಕಳೆದ ಮೂರು ದಿನಗಳ‌ ಹಿಂದೆ ಬಸವನಗೌಡ ಹೆಬ್ಬಳ್ಳಿ ಸಹೋದರ ಹನಮಂತಗೌಡ ಹೆಬ್ಬಳ್ಳಿ ಅವರ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ಹನಮಂತಗೌಡ ನರಗುಂದ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಇತ್ತ ಜಾನುವಾರುಗಳಿಗಾಗಿ ಸಂಗ್ರಹಿಟ್ಟಿದ್ದ ಮೇವು ಸುಟ್ಟು ಬೂದಿಯಾಗಿದ್ದರಿಂದ ಕುಟುಂಬ ಕಂಗಾಲಾಗಿದೆ.

ಈ ಕುರಿತು ಬಸವನಗೌಡ ವಿರುಪಾಕ್ಷಗೌಡ ಹೆಬ್ಬಳ್ಳಿ, ವಿರುಪಾಕ್ಷಗೌಡ ಬಸವನಗೌಡ ಹೆಬ್ಬಳ್ಳಿ, ಕಲ್ಲನಗೌಡ ತಿಪ್ಪಣ್ಣ ಗೊನ್ನಗರ, ಚೆನ್ನವ್ವ, ಕಸ್ತೂರೆವ್ವ ಬಸವನನೌಡ ಹೆಬ್ಬಳ್ಳಿ, ಗಂಗವ್ವ ಸಂಗಣ್ಣ ದೊಡ್ಡಗಾಣಿಗೇರ ಅವರ ಮೇಲೆ ನರಗುಂದ ಪೊಲೀಸ್ ಠಾಣೆಯಲ್ಲಿ ‌ದೂರು‌ ದಾಖಲಾಗಿದ್ದು, ಆರೋಪಿತರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರ ಸುಜಾತಾ ದೊಡ್ಡಮನಿ ಬಿರುಸಿನ ಪ್ರಚಾರ

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೋಳಿ ಅವರ ಪರವಾಗಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಹೀರೆಭಾಗೇವಾಡಿ ಬ್ಲಾಕ್ ನಲ್ಲಿ ಪ್ರಚಾರ ಸಭೆ ಏರ್ಪಡಿಸಲಾಯಿತು.

ಸಭೆಯಲ್ಲಿ ಲೋಕಸಭಾ ಉಪಚುನಾವಣಾ ಕ್ಷೇತ್ರದ ಕಂಟ್ರೋಲ್ ರೂಂನ ಕೆಪಿಸಿಸಿ ಸಂಯೋಜಕಿ ಸುಜಾತಾ ದೊಡ್ಡಮನಿ ಅವರು ಪಕ್ಷದ ಅಭ್ಯರ್ಥಿಯ ಗೆಲುವಿನ ರೂಪುರೇಷಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಸಿ.ಸಿ.ಪಾಟೀಲ, ಕಿಸಾನ್ ಘಟಕದ ಕಾರ್ಯದರ್ಶಿ ಅನೀಲ್ ಪಾಟೀಲ್, ತಾಪಂ ಸದಸ್ಯೆ ಗೌರಮ್ಮ ಪಾಟೀಲ್, ಕೆಪಿಸಿಸಿ ಅಧ್ಯಕ್ಷ(ಎಸ್ಸಿ) ಉಪಾಧ್ಯಕ್ಷ ಎಲ್. ಎಸ್. ಲಗಮಪ್ಪಗೋಳ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಅಣ್ಣಾ ಸಾಹೇಬ ಹಂಚಿನಮನಿ, ಪುಂಡಲೀಕ ಕೇಳಗೆರಿ, ಪ್ರಕಾಶ ಬಾನಿಕಟ್ಟಿ, ಬಸನಗೌಡ ಪಾಟೀಲ್, ಗೌಸ್ ಮುದ್ದಿನ್ ಜಾಲೀಕೊಪ್ಪ, ನಿಂಗಪ್ಪ ತಳವಾರ, ಗ್ರಾಪಂ ಸದಸ್ಯರು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ; ಡಿಸಿ ಖಡಕ್ ವಾರ್ನಿಂಗ್

0

ವಿಜಯಸಾಕ್ಷಿ ಸುದ್ದಿ, ಗದಗ

ಕೋವಿಡ್ ಸೋಂಕು ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ನೂತನ ಮಾರ್ಗಸೂಚನೆಗಳ ಪಾಲನೆಯಲ್ಲಿ ನಿಷ್ಕಾಳಜಿ ಸಹಿಸುವುದಿಲ್ಲ. ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಡಳಿತ ಭವನದ ವಿಡಿಯೋ ಸಭಾಂಗಣದಲ್ಲಿ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ನೀಡಿರುವ ನೂತನ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ತಕ್ಷಣದಿಂದ ಜಾರಿಗೊಳಿಸುವ ಮೂಲಕ ಸರಿಯಾಗಿ ಪಾಲನೆಯಾಗುವಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಅಧಿಕಗೊಳ್ಳುತ್ತಿರುವುದರಿಂದ ಸಾರ್ವಜನಿಕರು ನಿಯಂತ್ರಣ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.

ವಿದ್ಯಾಗಮವೂ ಸೇರಿದಂತೆ 6 ರಿಂದ 9 ನೇ ತರಗತಿಗಳನ್ನು ಸ್ಥಗಿತಗೊಳಿಸಿ ವಸತಿ ನಿಲಯಗಳಲ್ಲಿರುವ ಮಕ್ಕಳನ್ನು ಮನೆಗೆ ತಕ್ಷಣ ಕಳುಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, 10, 11, 12 ತರಗತಿಗಳು ಪ್ರಸ್ತುತ ಇರುವಂತೆ ಮುಂದುವರೆಯುತ್ತವೆ. ತರಗತಿಗಳಿಗೆ ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯವಾಗಿರುವುದಿಲ್ಲ. ಉನ್ನತ ಶಿಕ್ಷಣ, ವೃತ್ತಿಪರ ಕೋರ್ಸುಗಳ ತರಗತಿಗಳಲ್ಲಿ ಪರೀಕ್ಷೆ ಬರೆಯುವ ಹಾಗೂ ವೈದ್ಯಕೀಯ ಶಿಕ್ಷಣದ ತರಗತಿಗಳನ್ನು ಹೊರತುಪಡಿಸಿ ಇತರ ಎಲ್ಲಾ ತರಗತಿಗಳನ್ನು ಸ್ಥಗಿತಗೊಳಿಸಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುವಂತೆ ನಿರ್ದೇಶಿಸಿದರು.

ಧಾರ್ಮಿಕ ಸ್ಥಳಗಳಲ್ಲಿ ವೈಯಕ್ತಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿದ್ದು ಗುಂಪು ಸೇರುವ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಅಪಾರ್ಟಮೆಂಟ್ , ಕಾಂಪ್ಲೆಕ್ಸ್ ಗಳಲ್ಲಿ ಜಿಮ್ ಪಾರ್ಟಿ ಹಾಲ್‌ಗಳು , ಈಜುಗೊಳ, ಇತ್ಯಾದಿಗಳನ್ನು ಬಂದ್ ಮಾಡಲು ತಿಳಿಸಿದರು. ಯಾವುದೇ ತರಹದ ರ‍್ಯಾಲಿಗಳು, ಮುಷ್ಕರ , ಧರಣಿ ನಡೆಸುವುದನ್ನು ನಿಷೇಧಿಸಲಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಪಾಲನೆಯೊಂದಿಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೂ ನಿಯಂತ್ರಣ ಕ್ರಮಗಳನ್ನು ಅನುಸರಿಸುವಂತೆ ನೋಡಿಕೊಳ್ಳಬೇಕು. ದೈಹಿಕ ಅಂತರ ಪಾಲನೆ, ಮಾಸ್ಕ್ ಧರಿಸುವುದು , ಸ್ಯಾನಿಟೈಜರ್ ಹ್ಯಾಂಡ್ ವಾಶ್‌ಗಳ ಬಳಕೆಯನ್ನು ಕಡ್ಡಾಯವಾಗಿ ಮಾಡಬೇಕು. ಈ ನಿಯಮಗಳು ಎಲ್ಲ ಸಾರ್ವಜನಿಕ ಸ್ಥಳಗಳಿಗೂ ಅನ್ವಯಿಸಲಿದ್ದು ಉಲ್ಲಂಘಿಸುವವರ ಮೇಲೆ ವಿಪತ್ತು ನಿರ್ವಹಣಾ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ, ಜಾತ್ರೆ ಮಹೋತ್ಸವಗಳು, ಮೇಳಗಳು ಗುಂಪು ಸೇರುವುದರ ನಿಷೇಧವನ್ನು ಮುಂದುವರೆಸಲಾಗಿದೆ. ಮಾರ್ಚ 12ರ ಕೋವಿಡ್ ಮಾರ್ಗಸೂಚಿಗಳನ್ವಯ ಸಾಮಾಜಿಕ ಆಚರಣೆ, ಮದುವೆ , ಧಾರ್ಮಿಕ ಆಚರಣೆ, ಸಮಾರಂಭಗಳಲ್ಲಿ ತೆರೆದ ಪ್ರದೇಶಗಳಾಗಿದ್ದರೆ 500 ಜನ ಮೀರದಂತೆ ಹಾಗೂ ಸಭಾಂಗಣಗಳು ಹಾಲ್ ಮುಂತಾದ ಮುಚ್ಚಿದ ಪ್ರದೇಶಗಳಾಗಿದ್ದಲ್ಲಿ 200 ಜನರಿಗೆ ಅವಕಾಶ ನೀಡಲಾಗಿದೆ.

ಜನ್ಮ ದಿನ , ನಿಧನ, ಶವ ಸಂಸ್ಕಾರ ಮತ್ತು ಅಂತ್ಯಕ್ರಿಯೆ ಹಾಗೂ ಇತರೆ ಸಮಾರಂಭಗಳ ಆಚರಣೆಗೆ ತೆರೆದ ಪ್ರದೇಶಗಳಾಗಿದ್ದರೆ 100 ಜನ ಮತ್ತು ಸಭಾಂಗಣ ಹಾಲ್ ಮುಚ್ಚಿದ ಪ್ರದೇಶಗಳಾಗಿದ್ದರೆ 50 ಜನರಿಗೆ ಅವಕಾಶ ನೀಡಲಾಗಿದೆ. ಈ ಸೂಚನೆಗಳನ್ನು ಸಾರ್ವಜನಿಕರು ಪಾಲಿಸುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಅಧಿಕಾರಿಗಳದ್ದಾಗಿದ್ದು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ್ ಎಂ,
ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ಡಿ.ಎಚ್.ಓ ಡಾ. ಸತೀಶ ಬಸರಿಗಿಡದ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಗದೀಶ ನುಚ್ಚಿನ, ಆರ್.ಸಿ.ಎಚ್. ಅಧಿಕಾರಿ ಡಾ.ಬಿ.ಎಂ. ಗೊಜನೂರ, ಡಿಡಿಪಿಯು ರಾಜಪ್ಪ , ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರತ್ನಮ್ಮ ಹೊಸಮನಿ, ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ರವಿ ಗುಂಜೀಕರ್, ಶಿಕ್ಷಣ ಇಲಾಖೆಯ ಬಾರಾಟಕ್ಕೆ , ಜಿಲ್ಲೆಯ ಎಲ್ಲ ತಾಲೂಕಿನ ತಹಶೀಲ್ದಾರರು ಹಾಗೂ ಕಾರ್ಯನಿರ್ವಹಣಾಧಿಕಾರಿಗಳು ಇದ್ದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಮುಖಂಡರು

ವಿಜಯಸಾಕ್ಷಿ ಸುದ್ದಿ, ರಾಯಚೂರು

ಜಿಲ್ಲೆಯ ಮಸ್ಕಿ ವಿಧಾನಸಭೆಗೆ ನಡೆಯುತ್ತಿರುವ ಉಪಚುನಾವಣೆ ದಿನದಿಂದ ದಿನಕ್ಕೆ ರಂಗೇರತೊಡಗಿದೆ. ಶನಿವಾರ ಮಸ್ಕಿ ಕ್ಷೇತ್ರದ ಗುಡಿಹಾಳ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡ ಶರಣಗೌಡ ಬಯ್ಯಾಪುರ ಇವರ ಸಮ್ಮುಖದಲ್ಲಿ ಕೆಲ ಬಿಜೆಪಿ ಮುಖಂಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.

ಗುಂಡನಗೌಡ ಅಡವಿಬಾವಿ, ಶಿವನಗೌಡ ಪೊಲೀಸ್ ಪಾಟೀಲ್, ಮುತ್ತಣ್ಣ ಚುಕನಟ್ಟಿ ಕಾಂಗ್ರೆಸ್ ಸೇರಿದ ಮುಖಂಡರಾಗಿದ್ದು, ಇವರನ್ನು ಕಾಂಗ್ರೆಸ್ ಕಾರ್ಯಕರ್ತರು ಅಭಿನಂದಿಸಿದ್ದಾರೆ.

ಟಂಟಂ ಪಲ್ಟಿ; ಮಹಿಳೆ ಸ್ಥಳದಲ್ಲೇ ಸಾವು, ಮಗು, ಚಾಲಕನಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ಟಂಟಂ ವಾಹನ ಪಲ್ಟಿಯಾಗಿ ಸ್ಥಳದಲ್ಲೇ ಓರ್ವ ಮಹಿಳೆ
ಮೃತಪಟ್ಟು, ಇಬ್ಬರು ಗಾಯಗೊಂಡಿರುವ ಘಟನೆ ನಗರದ ಮುಳಗುಂದ ರಸ್ತೆಯ ನೌಕರರ ಭವನದ ಬಳಿ ಶುಕ್ರವಾರ ಸಂಭವಿಸಿದೆ.

ತಾಲೂಕಿನ ನಾಗಾವಿ ಗ್ರಾಮದ ಸಾವಿತ್ರಿ ರಾಮಪ್ಪ ಕೊಂಡಿಕೊಪ್ಪ(35) ಮೃತ ದುರ್ದೈವಿಯಾಗಿದ್ದಾರೆ.
ಮೃತ ಮಹಿಳೆಯ ಮಗಳು ಹುಲಿಗೆಮ್ಮ ರಾಮಪ್ಪ ಕೆ.(5) ಹಾಗೂ ಆಟೋ ಚಾಲಕ ಶರಣಪ್ಪ ಅರನಗುಡಿ(25) ಗಾಯಗೊಂಡಿದ್ದು ಚಿಕಿತ್ಸೆಗಾಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ತಾಲೂಕಿನ ನಾಗಾವಿಯಿಂದ ನಗರಕ್ಕೆ ಆಗಮಿಸುತ್ತಿದ್ದ ಆಟೋ ನೌಕರರ ಭವನದ ಬಳಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಅತಿವೇಗ ಹಾಗೂ ಟಂಟಂ ಚಾಲಕನ ಅಲಕ್ಷತನವೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಈ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಪಂ ಕ್ಷೇತ್ರ‌ ಮರುವಿಂಗಡಣೆಗೆ ವಿರೋಧ; ತಾಲೂಕು ಪಂಚಾಯತಿ ಮಾಜಿ ಸದಸ್ಯ ಸಾವು

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಜಿಲ್ಲಾ ಪಂಚಾಯಿತಿ ಕ್ಷೇತ್ರ ಮರುವಿಂಗಣೆಯಲ್ಲಿ ಆನೆಗುಂದಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಎನ್ನುವುದನ್ನು ಕೈಬಿಟ್ಟು 28- ಚಿಕ್ಕಜಂತಕಲ್ (ಆನೆಗುಂದಿ) ಎಂದು ಮರುನಾಮಕರಣ ಮಾಡಿರುವುದನ್ನು ಖಂಡಿಸಿ ನಡೆಯತ್ತಿದ್ದ ಸಭೆಯಲ್ಲಿಯೇ ತಾಪಂ ಮಾಜಿ ಸದಸ್ಯರೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯ ಶ್ರೀರಂಗನಾಥ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹೆಸರನ್ನು ಬದಲಾಯಿಸಿರುವ ಸರ್ಕಾರದ ಕ್ರಮ ಖಂಡಿಸಿ ಸಭೆ ಕರೆಯಲಾಗಿತ್ತು. ಸರ್ಕಾರ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯದ ನಡೆ ವಿರುದ್ಧ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ತಾಪಂ ಮಾಜಿ ಸದಸ್ಯ ಪ್ರವೀಣ ಕುಮಾರ್ ಎಂಬುವವರು ತಮ್ಮ ಅಭಿಪ್ರಾಯ ಹೇಳಿ, ಇದು ಪಕ್ಷಾತೀತ ಸಭೆಯಾಗಲಿ ಎಂದು ಹೇಳಿ ತಮ್ಮ ಆಸನದತ್ತ ಹೋಗುತ್ತಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನೂ ಆನೆಗೊಂದಿ ಹೋರಾಟಕ್ಕಾಗಿ ಪ್ರಾಣ ಬಿಟ್ಟ ಪ್ರವೀಣ ಕುಮಾರ್ ಅವರ ಸಾವಿಗೆ ಜಿಲ್ಲೆಯ ಜನತೆ ಕಂಬನಿ ಮೀಡಿದಿದ್ದಾರೆ.

ಇಂದು ಉಪ್ಪಾರ ಸಮಾಜದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ

ತಾಲೂಕು ಉಪ್ಪಾರ ಸಂಘ, ಉಪ್ಪಾರ ನೌಕರರ ಸಂಘ ಹಾಗೂ ಉಪ್ಪಾರ ಯುವಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 02-04-2021 ಶುಕ್ರವಾರ ಬೆಳಿಗ್ಗೆ 10-30 ಕ್ಕೆ ಉಪ್ಪಾರ ಸಮುದಾನ ಭವನ ಉಪ್ಪಾರ ಗೇರಿಯಲ್ಲಿ 2019-2020 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಶೇ 85 ಕ್ಕಿಂತ ಅಧಿಕ ಅಂಕ ಪಡೆದ ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೂತನವಾಗಿ ಗ್ರಾಮ ಪಂಚಾಯತಿಗೆ ಆಯ್ಕೆ ಯಾದ ಸದಸ್ಯರಿಗೆ ಸನ್ಮಾನ ಹಾಗೂ ಬಡ್ತಿ ಮತ್ತು ನಿವೃತ್ತಿ ಹೊಂದಿದ ನೌಕರರಿಗೆ ಮತ್ತು ವಿಶೇಷ ಸಾಧಕರಿಗೆ ಸನ್ಮಾನ ಕೋವಿಡ್-19 ಕರೋನ ವೈರಸ್ ಗೆ ತುತ್ತಾದ ನೌಕರರ ಕುಟುಂಬಸ್ಥರಿಗೆ ಗೌರವ ಸರ್ಮಪಣ ಕಾರ್ಯಕ್ರಮವಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀಮದ್ ಜಗದ್ಗುರು ಚಿನ್ಮೂಲಾದ್ರಿ ಶಿಲಾ ಪುರಿ ಸೂರ್ಯ ಸಿಂಹಾಸನಾಧೀಶ ಡಾ, ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಶ್ರೀ ‌ಭಗೀರಥ ಪೀಠ ವಹಿಸುವರು.
ಕಾರ್ಯಕ್ರಮ ಶಾಸಕ ಜಿ, ಕರುಣಾಕರರೆಡ್ಡಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ತಾಲೂಕು ಉಪ್ಪಾರ ಸಂಘದ ಅಧ್ಯಕ್ಷ ಜಿ ಹನುಮಂತಪ್ಪ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಸಿ ಪುಟ್ಟರಂಗಶೆಟ್ಟಿ, ಹಾಗೂ ರಾಜ್ಯಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಕೆ ಗಿರೀಶ್ ಉಪ್ಪಾರ, ಸೇರಿದಂತೆ ಗಣ್ಯರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾಲೂಕಿನ ಸಮಾಜ ಭಾಂದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಉಪ್ಪಾರ ಸಮಾಜದ ಮುಖಂಡರು ತಿಳಿಸಿದ್ದಾರೆ.

ಶಿಕ್ಷಣ ವ್ಯವಸ್ಥೆ ಪ್ರಶ್ನಿಸುತ್ತಾ…ಉತ್ತರ ಕಂಡುಕೊಳ್ಳುತ್ತಾ…; ಯುವರತ್ನ ಸಿನಿಮಾ ವಿಮರ್ಶೆ

ವಿಜಯಸಾಕ್ಷಿ ಸಿನಿಮಾ ಸುದ್ದಿ- ಬಸವರಾಜ ಕರುಗಲ್
“Education is not a business, is a service”
ಇದು ಯುವರತ್ನ ಸಿನಿಮಾದ ಕ್ಲೈಮಾಕ್ಸ್ ನಂತರ ಕೊನೆಯಲ್ಲಿ ಬರೋ ಡೈಲಾಗ್.. ಇಡೀ ಸಿನಿಮಾದ ತಿರುಳೇನು ಎಂಬ ಪ್ರಶ್ನೆಗೆ ಸಂಕ್ಷಿಪ್ತ ಉತ್ತರವೂ ಇದೆ..
ಲಾಕ್‌ಡೌನ್‌ಗಿಂತ ಮುಂಚೆ ಬಿಡುಗಡೆಯಾಗಿದ್ದ ಶಿವಣ್ಣ ಅಭಿನಯದ ದ್ರೋಣ ಸಿನಿಮಾದ ಕಥಾಹಂದರ ಹೋಲುವ ಕಥೆಯನ್ನೇ ಆಯ್ಕೆ ಮಾಡಿಕೊಂಡಿರೊ ನಿರ್ದೇಶಕ ಸಂತೋಷ್ ಆನಂದ್‌ರಾಮ್, ಸಣ್ಣ ಬದಲಾವಣೆಯೊಂದಿಗೆ ಪುನೀತ್ ಅವರನ್ನ ಯುವರತ್ನನನ್ನಾಗಿ ತೆರೆಗೆ ತಂದಿದ್ದಾರೆ. ದ್ರೋಣದಲ್ಲಿ ಶಿವಣ್ಣ ಸರಕಾರಿ ಶಾಲೆಗಳ ಪರವಾಗಿ ಹೋರಾಟ ಮಾಡಿದ್ದರೆ, ಯುವರತ್ನದಲ್ಲಿ ಪುನೀತ್ ಸರಕಾರಿ ಕಾಲೇಜುಗಳ ಪರವಾಗಿ ಎದೆಯುಬ್ಬಿಸಿ ಕಾದಾಡಿ ಭರ್ಜರಿ‌ ಮನರಂಜನೆ‌ ನೀಡಿದ್ದಾರೆ.
ಇಡೀ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕೆನ್ನುವ ಮಹದಾಸೆಯಿಂದ ಹೆಣೆದಿರುವ ಯುವರತ್ನ ಕಥೆ ಪ್ರಸ್ತುತ ದಿನಗಳಿಗೆ ಹೊಂದಿಕೊಂಡಿದೆ. ಖಾಸಗಿ ಕಾಲೇಜುಗಳ ಉದ್ದೇಶ ತಿಳಿಸುತ್ತಲೇ ಸರಕಾರಿ ಕಾಲೇಜುಗಳು ಉಳಿಯಬೇಕು ಎನ್ನುವ ಕಳಕಳಿ ಚಿತ್ರದಲ್ಲಿ ಎದ್ದು ಕಾಣುತ್ತದೆ.

ಚಿತ್ರದ ಮೊದಲಾರ್ಧ ವಿದ್ಯಾರ್ಥಿ ರೂಪದಲ್ಲಿ ಎಂಟ್ರಿ ಕೊಡುವ ಪುನೀತ್ ವಿರಾಮದ ಹೊತ್ತಿಗೆ ಟಾಸ್ಕ್ ಮೇಲೆ ಕಾಲೇಜಿಗೆ ಬಂದಿರೋದಾಗಿ ಹೇಳಿ ಟ್ವಿಸ್ಟ್ ಕೊಡ್ತಾರೆ. ಸ್ಟ್ರೇಟ್ ಫಾರ್‌‌ವರ್ಡ್ ಆಗಿರೋ ಅರ್ಜುನ ಅಲಿಯಾಸ್ ಯುವರಾಜ ಬರೀ ತನ್ನ ತಂಟೆ ಅಲ್ಲ, ತನ್ನ ಕಾಲೇಜಿನ ತಂಟೆಗೆ ಬಂದ್ರೆ ಯಾರನ್ನೂ ಬಿಡಲ್ಲ. ಅಷ್ಟಕ್ಕೂ ಆ ಕಾಲೇಜಿನ ಮೇಲೆ ಯುವರಾಜನಿಗೆ ಯಾಕಷ್ಟು ಪ್ರೀತಿ? ಆ ಕಾಲೇಜಿನಲ್ಲಿ ಆತನ‌ ಕೆಲಸ ಏನು? ಕಾಲೇಜಿನ ಮೇಲೆ ಖಳರ ಕಣ್ಣೇಕೆ? ಇವುಗಳಿಗೆ ಉತ್ತರ ಗೊತ್ತಾಗಬೇಕಾದರೆ ಯುವರತ್ನ ಸಿನಿಮಾನಾ ಥೇಟರ್‌ನಲ್ಲೇ ನೋಡಬೇಕು.
ಚಿತ್ರದ ನಿಜವಾದ ಕಥೆ ತೆರೆದುಕೊಳ್ಳೋದೇ ವಿರಾಮದ‌ ನಂತರ. ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ನೇಣಿಗೆ ಶರಣಾಗುವ ಮೂಲಕ ಆರಂಭವಾಗುವ ಕಥೆ ಕ್ರಮೇಣ ಆಪ್ತವಾಗುತ್ತಾ ಹೋಗುತ್ತದೆ. ಜಾಗತೀಕರಣದ ಕಬಂಧಬಾಹುಗಳು, ನಮ್ಮೊಳಗೆ ಇರೋ ಉಪ್ಪಿನ ದ್ರೋಹಿಗಳ ಅನಾವರಣಗೊಳಿಸುವ ರೀತಿ ಇಷ್ಟವಾಗುತ್ತದೆ. ವಿಜಯ್ ಸೇತುಪತಿ ಅಭಿನಯದ ತಮಿಳು ಸಿನಿಮಾದ ನೆರಳು ಅಲ್ಲಲ್ಲಿ ಕಾಣುತ್ತದೆಯಾದರೂ ಆವರಿಸಿಲ್ಲ.
ರಾಜಕುಮಾರ್ ಚಿತ್ರದ ಬಳಿಕ ಪುನೀತ್-ಸಂತೋಷ್ ಸಿನಿಮಾ ಯುವರತ್ನ. ಸಿಕ್ಕಾಪಟ್ಟೆ ನಿರೀಕ್ಷೆ ಕ್ರಿಯೆಟ್ ಮಾಡಿದ್ದು, ನಿರೀಕ್ಷೆ ಹುಸಿಯಾಗಿಲ್ಲ. ಕಮರ್ಷಿಯಲ್ ಅಂಶಗಳ ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶ ಹೊತ್ತು ತಂದಿದ್ದಾನೆ ಯುವರತ್ನ.
ಇಡೀ ಸಿನಿಮಾ ಕಾಲೇಜಿನ ಸುತ್ತ ಗಿರಕಿ ಹೊಡೆಯುತ್ತದೆ. ಕೆಲವು ಭಾಗವಷ್ಟೇ ಬೇರೆಡೆ ಲೋಕೇಷನ್. ಕಾಲೇಜು ವಿದ್ಯಾರ್ಥಿಗಳಿಗೆ ಯುವರತ್ನ ಹಿಡಿಸುತ್ತಾನೆ. ಹಾದಿ ತಪ್ಪಿದವರನ್ನ ಸರಿ ದಾರಿಗೆ ತರುವ, ಸರಿ ದಾರಿಗೆ ಬರದವರನ್ನ ಬೆಂಡೆತ್ತುವ ಆ್ಯಂಗ್ರಿ ಯಂಗ್ ಮ್ಯಾನ್ ಆಗಿ ಅಭಿನಯದಲ್ಲಿ, ಫೈಟ್‌ನಲ್ಲಿ, ಡ್ಯಾನ್ಸ್‌ನಲ್ಲೂ ಪುನೀತ್‌ಗೆ ಫುಲ್ ಸ್ಕೋರ್. ಇಡೀ ಸಿನಿಮಾನ ಹೊತ್ತು ನಿಂತಿರೋದು ಪ್ರಕಾಶ್ ರಾಜ್, ಕಾಲೇಜಿನ ಪ್ರಿನ್ಸಿಪಾಲ್ ಪಾತ್ರ ಅವರಿಗೆ ಹೊಂದಿಕೊಂಡಿದೆ. ರಾಜಕಾರಣಿಯಾಗಿ ಸಾಯಿಕುಮಾರ್, ಬ್ಯುಜಿನೆಸ್‌ ಮ್ಯಾನ್ ಆಗಿ ಡಾಲಿ ಧನಂಜಯ್, ವೈಸ್ ಪ್ರಿನ್ಸಿಪಾಲ್ ಆಗಿ ಅವಿನಾಶ್, ಕಲೆಕ್ಟರ್ ಆಗಿ ದಿಗಂತ್ ಚನ್ನಾಗಿ ಅಭಿನಯಿಸಿದ್ದಾರೆ.
ಜಾಸ್ತಿ ಒಳ್ಳೇಯರಾಗಬೇಡ್ರೋ.. ಒಂಚೂರು ಕೆಟ್ಟವರಾಗಿ.. ನಾನು ಕೆಟ್ಟವನಾದ ಮೇಲೆ ಉದ್ಧಾರ ಆಗಿದ್ದು ಎಂಬ ಡೈಲಾಗ್ ಹೇಳೋ ಧನಂಜಯ ಪರೋಕ್ಷವಾಗಿ ಟಗರು ಸಿನಿಮಾ ನೆನೆಸುವಂಥ ಅಪ್ಡೇಟ್ ಸಂಭಾಷಣೆ, ಏನ್ ಮಾಡೋದು ನಂಗೂ ನಮ್ಮಣ್ಣನಿಗೂ ವಯಸ್ಸೇ ಆಗಲ್ಲ ಎಂಬ ಪುನೀತ್-ಶಿವಣ್ಣನ ಫಿಟ್‌ನೆಸ್ ಬಗ್ಗೆ ಹೇಳುವ ಮಾತುಗಳು ಖುಷಿ ಜೊತೆ ಚಪ್ಪಾಳೆ ಗಿಟ್ಟಿಸುತ್ತವೆ.
ತಮನ್ ಸಂಗೀತದಲ್ಲಿ ಮೂರು ಹಾಡುಗಳಿಗೆ ಗುನುಗುನಿಸುವ ಗುಣವಿದೆ. ಆದರೆ ತಮನ್ ಹೆಚ್ಚು ಇಷ್ಟ ಆಗೋದು ಹಿನ್ನೆಲೆ ಸಂಗೀತದಲ್ಲಿ. ಮೈನವಿರೇಳಿಸುವ ಚೇಜಿಂಗ್ ಸೀನ್, ಫೈಟ್ಸ್ ಅಭಿಮಾನಿಗಳಿಗೆ ಹಬ್ಬ.
ಇಡೀ ಸಿನಿಮಾ ಮುಗಿದು ಹೊರ ಬಂದ ಮೇಲೆ ಕಾಮಿಡಿ, ಸೆಂಟಿಮೆಂಟ್ ಒಂಚೂರು ಇದ್ದಿದ್ದರೆ ಚನ್ನಾಗಿತ್ತು ಅನ್ಸುತ್ತೆ. ಕಾಮಿಡಿಗೆ ಅಂತಾನೇ ರಂಗಾಯಣ ರಘು, ರವಿಶಂಕರಗೌಡ, ಸಾಧುಕೋಕಿಲ, ಕುರಿ ಪ್ರತಾಪ್‌ ಇದ್ದಾರಾದರೂ ಕಾಮಿಡಿ ವರ್ಕ್ ಆಗಿದ್ದು ಪುನೀತ್ ಅವರ ಡೈಲಾಗ್‌ಗಳಲ್ಲೇ. ನಾಯಕಿ ಸಾಯೇಶಾಗೆ ಅಷ್ಟಾಗಿ ಸ್ಕೋಪ್ ಇಲ್ಲದಿದ್ದರೂ ಬ್ಯೂಟಿಯಿಂದ ಸ್ಕೋರ್ ಮಾಡಿದ್ದಾರೆ. ಅಚ್ಯುತ್‌ಕುಮಾರ್, ಸೋನುಗೌಡ ನೆನಪಲ್ಲುಳಿಯುತ್ತಾರೆ. ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿರೊ ಪುನೀತ್ ಇವತ್ತಿನ ಯುಥ್ಸ್‌ಗೆ, ಪೇರೆಂಟ್ಸ್‌ಗೆ ಯುವರತ್ನದಲ್ಲಿ ಚನ್ನಾಗಿ ಪಾಠ ಮಾಡಿದ್ದಾರೆ.
ಕುಟುಂಬ ಸಮೇತ ಮಾತ್ರವಲ್ಲ ಕಾಲೇಜಿನ ವಿದ್ಯಾರ್ಥಿಗಳು ಫ್ರೆಂಡ್ಸ್ ಜೊತೆ ಯುವರತ್ನನನ್ನ ಕಣ್ತುಂಬಿಕೊಳ್ಳಬಹುದು.

error: Content is protected !!