Home Blog Page 3130

ಗ್ರಾ.ಪಂ. ಚುನಾವಣೆ: ಸರ್ಕಾರಿ ವಾಹನ, ಅತಿಥಿ ಗೃಹ ವಶಕ್ಕೆ ಸೂಚನೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ,
ಗದಗ: ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆಯು ಗದಗ ಜಿಲ್ಲೆಯಲ್ಲಿ ಡಿ. 22 ಮತ್ತು 27ರಂದು ಒಟ್ಟು ಎರಡು ಹಂತಗಳಲ್ಲಿ ಜರುಗಲಿದೆ. ಈ ಕುರಿತು ನ. 30ರಂದು ನೀತಿ ಸಂಹಿತೆ ಜಾರಿಗೆ ಬಂದಿದೆ. ಜಿ.ಪಂ., ತಾ.ಪಂ. ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಹಾಗೂ ಎಪಿಎಂಸಿ ಅಧ್ಯಕ್ಷರಿಗೆ ಒದಗಿಸಲಾದ ಸರ್ಕಾರಿ ವಾಹನಗಳನ್ನು ತಕ್ಷಣದಿಂದ ಹಿಂದಕ್ಕೆ ಪಡೆಯಲಾಗಿದೆ.

ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಅವುಗಳನ್ನು ಆಯಾ ತಾಲೂಕಿನ ತಹಸೀಲ್ದಾರರ ವಶಕ್ಕೆ ನೀಡತಕ್ಕದ್ದು. ಗದಗ ತಾಲೂಕಿನ ವಾಹನಗಳನ್ನು ತಹಸೀಲ್ದಾರರು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಒಪ್ಪಿಸಬೇಕು. ಜಿಲ್ಲೆಯ ಗ್ರಾಮೀಣ ಮಟ್ಟದಲ್ಲಿ ಬರುವ ಎಲ್ಲ ನಿರೀಕ್ಷಣಾ ಮಂದಿರಗಳು, ಪ್ರವಾಸಿ ಮಂದಿರಗಳು, ಮಂಡಳಿಗಳ/ ನಿಗಮಗಳ ಅತಿಥಿ ಗೃಹಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಚುನಾವಣಾ ಪ್ರಕ್ರಿಯೆ ಮುಗಿಯುವವರೆಗೆ ಜಿಲ್ಲಾಧಿಕಾರಿಗಳ ಅಧೀನಕ್ಕೆ ಪಡೆದುಕೊಳ್ಳಲಾಗಿದೆ.

ತಹಸೀಲ್ದಾರರು ತಮ್ಮ ತಾಲೂಕಿನಲ್ಲಿರುವ ಅತಿಥಿಗೃಹ  ಕಟ್ಟಡಗಳನ್ನು ವಶಕ್ಕೆ ಪಡೆದುಕೊಂಡು ವರದಿ ಸಲ್ಲಿಸಬೇಕೆಂದು ಗದಗ ಜಿಲ್ಲಾಧಿಕಾರಿಗಳು ಮತ್ತು  ಜಿಲ್ಲಾ ದಂಡಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. 

ಚುನಾವಣೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧ: ಜಿಲ್ಲೆಯ 117 ಗ್ರಾಮ ಪಂಚಾಯತಿಗೆ ಮಾತ್ರ ಎಲೆಕ್ಷನ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ರಾಜ್ಯ ಚುನಾವಣಾ ಆಯೋಗ ಗ್ರಾಮ ಪಂಚಾಯತ ಚುನಾವಣೆ ಘೋಷಿಸಿದ್ದು, ಜಿಲ್ಲೆಯಲ್ಲಿ ಗ್ರಾ.ಪಂ. ಚುನಾವಣೆ ನಡೆಸಲು ಜಿಲ್ಲಾಡಳಿತ ಸರ್ವ ಸನ್ನದ್ಧವಾಗಿದೆ. ಅಲ್ಲದೇ, ನ್ಯಾಯ ಸಮ್ಮತ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ ಅವರು, ಜಿಲ್ಲೆಯಲ್ಲಿ ಒಟ್ಟು 122 ಗ್ರಾಮ ಪಂಚಾಯತಗಳಿದ್ದು, ಇವುಗಳ ಪೈಕಿ 117 ಗ್ರಾ.ಪಂ.ಗಳ 602 ಕ್ಷೇತ್ರಗಳಿಗೆ ಮಾತ್ರ ಚುನಾವಣೆ ನಡೆಯಲಿದೆ ಎಂದರು.

ಇನ್ನುಳಿದ ಜಿಲ್ಲೆಯ ಐದು ಗ್ರಾಮ ಪಂಚಾಯತಗಳಾದ ಲಕ್ಷ್ಮೇಶ್ವರ ತಾಲ್ಲೂಕಿನ ಬಟ್ಟೂರ, ಗದಗ ತಾಲ್ಲೂಕಿನ ಹರ್ಲಾಪುರ, ಗಜೇಂದ್ರಗಡ ತಾಲ್ಲೂಕಿನ ಕುಂಟೋಜಿ ಮತ್ತು ಶಾಂತಗಿರಿ, ಮುಂಡರಗಿ ತಾಲ್ಲೂಕಿನ ಮುರಡಿ ಗ್ರಾ.ಪಂ.ಗಳ ಅವಧಿ ಇನ್ನೂ ಮುಗಿಯದಿರದ ಕಾರಣ ಈ ಹಂತದಲ್ಲಿ ಚುನಾವಣೆ ಜರಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಸದ್ಯ ಚುನಾವಣೆ ನಡೆಯುವ 117 ಗ್ರಾ.ಪಂ. ವ್ಯಾಪ್ತಿಯಲ್ಲಿ ಒಟ್ಟು 5,34,085 ಮತದಾರರು ಇದ್ದಾರೆ. ಅದರಲ್ಲಿ 2,70,245 ಜನ ಪುರುಷರು, 2,63,840 ಜನ ಮಹಿಳಾ ಮತದಾರರಿದ್ದಾರೆ.

ಜಿಲ್ಲೆಯ 117 ಗ್ರಾಮ ಪಂಚಾಯತಿಗಳ ಪೈಕಿ 53 ಗ್ರಾಮ ಪಂಚಾಯತಿಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲಿ ಗದಗ ತಾಲ್ಲೂಕಿನ 26, ಲಕ್ಷೇಶ್ವರ 13, ಶಿರಹಟ್ಟಿ 14 ಸೇರಿ ಮೂರು ತಾಲ್ಲೂಕುಗಳ ಒಟ್ಟು 53 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ಜರುಗಲಿದೆ.

ಅದರಂತೆ, ಎರಡನೇ ಹಂತದಲ್ಲಿ ಮುಂಡರಗಿ ತಾಲ್ಲೂಕಿನ 18, ಗಜೇಂದ್ರಗಡ 9, ನರಗುಂದ 13 ಹಾಗೂ ರೋಣ 24 ಸೇರಿ ನಾಲ್ಕು ತಾಲ್ಲೂಕುಗಳ ಒಟ್ಟು 64 ಗ್ರಾಮ ಪಂಚಾಯತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.

ಮೊದಲ ಹಂತದ ಚುನಾವಣೆಗೆ ಡಿ.7 ರಂದು ಅಧಿಕೃತ ಚುನಾವಣಾದೇಶ ಹೊರಡಿಸಲಿದ್ದು, ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದೆ. ಡಿ. 12 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಉಮೇದುವಾರಿಕೆ ಹಿಂಪಡೆಯಲು ಡಿ.14 ಕಡೆಯ ದಿನವಾಗಿದೆ. ಮೊದಲ ಹಂತದ ಮತದಾನವು ಡಿ.22 ರಂದು ಜರುಗಲಿದೆ.

ಅದರಂತೆ, ಎರಡನೇ ಹಂತದ ಚುನಾವಣೆಗೆ ಡಿ.12 ರಂದು ಅಧಿಕೃತ ಚುನಾವಣಾ ಆದೇಶ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಡಿ.16 ಕೊನೆಯ ದಿನವಾಗಿದೆ. ಡಿ.17 ರಂದು ನಾಮಪತ್ರ ಪರಿಶೀಲನೆ ಜರುಗಲಿದೆ. ನಾಮಪತ್ರ ಹಿಂತೆಗೆದುಕೊಳ್ಳಲು ಡಿ.19 ಕಡೆಯ ದಿನವಾಗಿದೆ‌. ಡಿ.27 ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಡಿ.31 ಚುನಾವಣಾ ಪ್ರಕ್ರಿಯೆ ಕೊನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದರು.

ಜಿಲ್ಲಾ ಪಂಚಾಯತ ಸಿಇಒ ಡಾ.ಆನಂದ ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಸುದ್ದಿಗೋಷ್ಠಿಯಲ್ಲಿ ಇದ್ದರು.

ಕೊರಮ-ಕೊರಚ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹ

-ಡಿಸಿಎಂ ಗೋವಿಂದ ಕಾರಜೋಳ ಹಿಂಬರಹಕ್ಕೆ ಕಿಡಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ರಾಜ್ಯಾದ್ಯಂತ ಸುಮಾರು 25 ಲಕ್ಷ ಜನಸಂಖ್ಯೆ ಹೊಂದಿರುವ ಪ.ಜಾ. ಅಲೆಮಾರಿ ಕೊರಮ-ಕೊರಚ, ಕುರುವನ್, ಕೇಪ್‌ಮಾರಿಸ್, ಎರಕುಲ ಕೈಕಾಡಿ(ಕುಳುವ) ಮತ್ತು ಎಸ್.ಸಿ, ಎಸ್.ಟಿ ಅಲೆಮಾರಿ ಸಮುದಾಯಗಳ ಪ್ರಗತಿಗೆ ಕೊರಮ-ಕೊರಚ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ಆನಂದಪ್ಪ ದಾವಣಗೆರೆ ಆಗ್ರಹಿಸಿದರು.

ಕೊಪ್ಪಳದ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸಮುದಾಯ ಎಲ್ಲ ಕ್ಷೇತ್ರಗಳ ಅಭಿವೃದ್ಧಿಯಿಂದ ವಂಚಿತವಾಗಿದ್ದು, ಇಂದಿಗೂ ಜೀವನೋಪಾಯಕ್ಕಾಗಿ ಹಂದಿಸಾಕಾಣಿಕೆ, ಬುಟ್ಟಿ ನೇಯುವ, ಶಹನಾಯಿ ನುಡಿಸುವ, ಹಗ್ಗ ನೇಯುವ, ಈಚಲು ಗರಿಗಳ ಕಸಪೊರಕೆ ಕಟ್ಟುವ, ಹಚ್ಚೆ ಹಾಕುವ ಕಾಯಕಾನುಸಾರ ಜೀವನ ನಡೆಸುತ್ತಿದೆ. ಎಸ್‌ಸಿ, ಎಸ್‌ಟಿಯಲ್ಲಿಯೇ ಇರುವ ಮಾದಿಗ, ಒಡ್ಡರ್ ಮತ್ತಿತರ ಸಮಾಜಗಳಿಗೆ ಸಿಕ್ಕಿರುವ ರಾಜಕೀಯ ಪ್ರಾತಿನಿಧ್ಯ ಇದುವರೆಗೂ ನಮಗೆ ಸಿಕ್ಕಿಲ್ಲ. ಆದ್ದರಿಂದ ಕೊರಮ-ಕೊರಚ ಸಮುದಾಯದ ಯಾರೊಬ್ಬರೂ ಶಾಸಕರಾಗುವುದಿರಲಿ, ಜಿಪಂ ಸದಸ್ಯರೂ ಆಗಿಲ್ಲ ಎಂದರು.

ನಮ್ಮ ಸಮಾಜಗಳ ಅಭಿವೃದ್ಧಿ ಹಿತದೃಷ್ಟಿಯಿಂದ 2013ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೊರಮ-ಕೊರಚ ಅಭಿವೃದ್ಧಿ ನಿಗಮ ಸ್ಥಾಪಿಸಲು 5 ಕೋಟಿ ರೂ.ಘೋಷಿಸಿದ್ದರು. ಆದರೆ ಇಂದಿನ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು 2019ರ ಡಿಸೆಂಬರ್ 26ರಂದು ಕೊರಮ-ಕೊರಚ ಅಭಿವೃದ್ಧಿ ನಿಗಮ ಸ್ಥಾಪನೆಯ ಅಗತ್ಯವಿಲ್ಲವೆಂದು ಹಿಂಬರಹ ನೀಡಿ, ಸಮುದಾಯದ ಏಳ್ಗೆಗೆ ಅಡ್ಡಗಾಲು ಹಾಕಿದರೆಂದು ಖಂಡಿಸಿದರು.

ಕೂಡಲೇ ಸರಕಾರ ಕೊರಮ-ಕೊರಚ ಜನಾಂಗಕ್ಕೆ ಸಾಮಾಜಿಕ ನ್ಯಾಯದಡಿ 50 ಕೋಟಿ ನಿಗದಿಗೊಳಿಸಿ ಘೋಷಣೆಯಾಗಿರುವ ಕೊರಮ-ಕೊರಚ ಅಭಿವೃದ್ಧಿ ನಿಗಮವನ್ನು ಅನುಷ್ಠಾನಕ್ಕೆ ತರಬೇಕು. ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದ್ಯಂತ ಉಗ್ರಹೋರಾಟ ನಡೆಸಲಾಗುತ್ತದೆ ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ವಣಗೇರಿ, ರಾಜ್ಯ ಜಂಟಿ ಕಾರ್ಯದರ್ಶಿ ಕಿರಣ್‌ಕುಮಾರ್ ಕೊತ್ತಗೆರೆ, ಜಿಲ್ಲಾಧ್ಯಕ್ಷ ಕಂಬಣ್ಣ ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಲೋಕೇಶ್ ಭಜಂತ್ರಿ ಬೆಣಕಲ್ ಮತ್ತಿತರರು ಇದ್ದರು.

ಪ್ರಯಾಣಿಕರ ಮೇಲೆ ದರೋಡೆ ನಡೆಸಿದ ದರೋಡೆಕೋರರಿಗೆ ಶಿಕ್ಷೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಕೊಪ್ಪಳ ಜಿಲ್ಲೆಯ ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಾರಾಷ್ಟ್ರದ ಮೂಲದ ಮಹಾದು @ ಮಹಾದೇವ ಕಾಳೆ ಹಾಗೂ ಸಂಪತ್ ಮೋರಾಲೆ ಇವರು ಇನ್ನಿತರರೊಂದಿಗೆ ಕೂಡಿಕೊಂಡು (ಒಟ್ಟು 05 ಜನ ದರೋಡೆಕೋರರು) ಪ್ರಯಾಣಿಕರ ಮೇಲೆ ದರೋಡೆ ನಡೆಸಿರುವ ಆರೋಪವು ಸಾಭಿತಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಆರೋಪಿತರಿಗೆ ಶಿಕ್ಷೆ ವಿಧಿಸಿದ್ದಾರೆ.

ಆಂದ್ರಪ್ರದೇಶ ಮೂಲದ ವೈ.ಕಿರಣ ಕುಮಾರ ಎನ್ನುವವರು 2013ರ ಮಾರ್ಚ್. 17 ರಂದು ತಮ್ಮ ಕುಟುಂಬ ಸದಸ್ಯರೊಂದಿಗೆ ಕಾರಿನಲ್ಲಿ ಶಿರಡಿಗೆ ಹೋಗುತ್ತಿದ್ದಾಗ ಕೊಪ್ಪಳ ಜಿಲ್ಲೆಯ ಬೇವೂರ ಪೊಲೀಸ್ ಠಾಣೆ ವ್ಯಾಪ್ತಿಯ ಮ್ಯಾದನೇರಿ ಬಸ್ ನಿಲ್ದಾಣದ ಹತ್ತಿರ ಬೆಳಿಗ್ಗೆ 04 ಗಂಟೆ ಸುಮಾರಿಗೆ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ ಮಲಗಿಕೊಂಡಿದ್ದಾಗ 05 ಜನ ದರೋಡೆಕೋರರು ಬಂದು ಕಾರಿನಲ್ಲಿದ್ದ ಪ್ರಮಾಣಿಕರಿಗೆ ಮಾರಕಾಸ್ತ್ರಗಳಿಂದ ಹೊಡೆ ಬಡೆ ಮಾಡಿ ಅವರಲ್ಲಿದ್ದ ರೂ. 1,88,100 ಮೌಲ್ಯದ ಹಣ, ಬಂಗಾರ ಮತ್ತು ಮೊಬೈಲ್‌ಗಳನ್ನು ದರೋಡೆ ಮಾಡಿಕೊಂಡು ಹೋಗಿದ್ದು, ಈ ಕುರಿತು ಬೇವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಂದಿನ ತನಿಖಾಧಿಕಾರಿಯಾದ ಯಲಬುರ್ಗಾ ಸಿಪಿಐ ಸುರೇಶ ತಳವಾರ ಅವರು ತನಿಖೆ ಮಾಡಿ ಆರೋಪಿತರ ಮೇಲೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಮಹಾರಾಷ್ಟ್ರ ಮೂಲದ ಮಹಾದು @ ಮಹಾದೇವ ಕಾಳೆ ಹಾಗೂ ಸಂಪತ್ ಮೋರಾಲೆ ಇವರು ಇನ್ನಿತರರೊಂದಿಗೆ ಕೂಡಿಕೊಂಡು ದರೋಡೆ ನಡೆಸಿದ ಆರೋಪ ಸಾಬೀತಾಗಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಎಲ್. ವಿಜಯಲಕ್ಷ್ಮೀದೇವಿ ಅವರು (ನ. 25) ಆರೋಪಿತರಿಗೆ 06 ವರ್ಷ ಜೈಲು ಶಿಕ್ಷೆ ಹಾಗೂ ತಲಾ ರೂ. 25,000 ಗಳ ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಎ ಪಾಟೀಲ, ಕೆ.ನಾಗರಾಜ ಆಚಾರ್, ಸವಿತಾ ಎಂ. ಶಿಗ್ಲಿ ಹಾಗೂ ಟಿ.ಅಂಬಣ್ಣ ಇವರು ಪ್ರಕರಣ ನಡೆಸಿದ್ದು, ಬಂಡಿ ಅಪರ್ಣ ಮನೋಹರ ಅವರು ವಾದ ಮಂಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಶಿಕ್ಷೆ

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ

ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಆರೋಪಿತನು ಅಪಹರಿಸಿ ಬಲಾತ್ಕಾರ ಸಂಭೋಗ ಮಾಡಿದ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರು (ಪೋಕ್ಸೋ) ಆರೋಪಿಗೆ ಶಿಕ್ಷೆ ವಿಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ತಾವರಗೇರಾ ಗ್ರಾಮದ ಶರಣಬಸವ ಬಗಡಿ, ಇತನು ಕೊಪ್ಪಳ ನಗರದ ಕುರುಬರ ಓಣಿಯಲ್ಲಿ ಫಿರ್ಯಾದಿದಾರರು ವಾಸವಿರುವ ಓಣಿಯಲ್ಲಿ ವಾಸವಾಗಿದ್ದು, ಒಂದು ವರ್ಷದ ಹಿಂದೆ ಕೊಪ್ಪಳದಿಂದ ತನ್ನ ಊರು ತಾವರಗೇರಾ ಗ್ರಾಮಕ್ಕೆ ಹೋಗಿದ್ದ. ಆಗಾಗ ಕೊಪ್ಪಳಕ್ಕೆ ಬಂದು ಫಿರ್ಯಾದಿದಾರರ ಅಪ್ರಾಪ್ತ ವಯಸ್ಸಿನ ಮಗಳನ್ನು ಭೇಟಿಯಾಗಿ ಮಾತನಾಡಿಸುತ್ತಾ ಅವಳ ಗೆಳತನ ಸಂಪಾದಿಸಿರುತ್ತಾನೆ.

2016ರ ಮಾರ್ಚ್. 14 ರಂದು ಸಾಯಂಕಾಲ 04-30 ಗಂಟೆ ಸುಮಾರು ಕೊಪ್ಪಳ ನಗರದ ಫಿರ್ಯಾದಿದಾರರ ಮನೆ ಹತ್ತಿರ ಇದ್ದ ಫಿರ್ಯಾದಿದಾರರ ಮಗಳನ್ನು ಆಕೆ ಅಪ್ರಾಪ್ತ ವಯಸ್ಸಿನವಳು ಮತ್ತು ಪರಿಶಿಷ್ಟ ಪಂಗಡದವಳೆಂದು ಗೊತ್ತಿದ್ದು, ಬಾಲಕಿಯನ್ನು ಮದುವೆ ಮಾಡಿಕೊಳ್ಳುತ್ತೆನೆ ಹೋಗೋಣ ಬಾ ಅಂತಾ ಹೇಳಿ ನಂಬಿಸಿ ಪುಸಲಾಯಿಸಿ ಅಪಹರಣ ಮಾಡಿಕೊಂಡು ಆಂದ್ರ ಪ್ರದೇಶ ರಾಜ್ಯದ ಗುಂಟೂರಿನ ಅಮೀನ ನಗರದಲ್ಲಿ ರಾಮಾಂಜನೇಯ ಇತನ ಸಹಾಯದಿಂದ ಶೇಕನಾಗೂರ ಇತನ ಒಂದು ರೂಮ್ ಬಾಡಿಗೆಯಂತೆ ಹಿಡಿದು, ಈ ರೂಮಿನಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯ ಇಚ್ಛೆಗೆ ವಿರುದ್ಧವಾಗಿ ಅವಳಿಗೆ ಹಲವು ಬಾರಿ ಬಲಾತ್ಕಾರ ಸಂಭೋಗ ಮಾಡಿದ ಆರೋಪವು ತನಿಖೆಯಲ್ಲಿ ಸಾಭಿತಾಗಿದ್ದರಿಂದ ಕೊಪ್ಪಳ ಪೊಲೀಸ್ ಉಪಾಧೀಕ್ಷಕರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಸಾಬೀತಾಗಿದೆ ಎಂದು ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ರೂ. 25,000 ಗಳ ದಂಡ ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ (ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಂ.ಎ ಪಾಟೀಲ, ಕೆ.ನಾಗರಾಜ ಆಚಾರ್, ಸವಿತಾ ಎಂ. ಶಿಗ್ಲಿ ಹಾಗೂ ಟಿ.ಅಂಬಣ್ಣ ಇವರು ಪ್ರಕರಣ ನಡೆಸಿದ್ದು, ಬಂಡಿ ಅಪರ್ಣ ಮನೋಹರ ಅವರು ವಾದ ಮಂಡಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಐಪಿಎಲ್‌ಗೆ ಸಡ್ಡು ಹೊಡೆದ ಮಾದರಿ: ವಕ್ಕುಂದ: ಏಕತಾ ಕಪ್ ಕ್ರಿಕೆಟ್ ಟೂರ್ನಿ ಸಮಾರೋಪ

0

ರೋಚಕ ಹಣಾಹಣಿಯಲ್ಲಿ ಕಪ್ ಎತ್ತಿ ಹಿಡಿದ ಆರ್‌ಆರ್ ಬಾಯ್ಸ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಕೆಡಬ್ಲ್ಯೂಎಸ್‌ಸಿಸಿಯ ಏಕತಾ ಕಪ್ ಕ್ರಿಕೆಟ್ ಟೂರ್ನಿ ಪ್ರತಿಷ್ಠಿತ ಐಪಿಎಲ್ ಪಂದ್ಯಾವಳಿಯನ್ನೂ ಮೀರಿಸಿ ಮಾದರಿ ಎನಿಸಿತು ಎಂದು ಡಿಎಸ್‌ಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ರವಿ ವಕ್ಕುಂದ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ರವಿವಾರ ಸಮಾರೋಪಗೊಂಡ ಏಕತಾ ಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ವಿಜೇತ ತಂಡಕ್ಕೆ ಕಪ್ ವಿತರಿಸಿ ಅವರು ಮಾತನಾಡಿದರು.

ಇಲ್ಲಿನ ಬಳಗದ ಕ್ರೀಡಾ ಉತ್ಸಾಹ ಇತರರಿಗೂ ಮಾದರಿ. ಶಿಸ್ತು, ಸಮಯ, ಏಕತೆ ನೋಡಿದರೆ ಮುಂದೊಂದು ದಿನ ರಾಜ್ಯಮಟ್ಟದಲ್ಲಿ ಈ ಕ್ಲಬ್ ಗುರುತಿಸಿಕೊಳ್ಳುವಲ್ಲಿ ಅನುಮಾನವಿಲ್ಲ. ನಾವು ಸಹ ಕ್ಲಬ್‌ನ ಸದಸ್ಯರಾಗುವುದಾಗಿ ತಿಳಿಸಿದರು.

ಮತ್ತೋರ್ವ ಪೊಲೀಸ್ ಅಧಿಕಾರಿ ಮಲ್ಲನಗೌಡ್ರ ಮಾತನಾಡಿ, ಟೂರ್ನಮೆಂಟ್‌ನ ಫೈನಲ್ ಪಂದ್ಯ ಅತ್ಯಂತ ರೋಮಾಂಚಕವಾಗಿದ್ದು ಕುರ್ಚಿಯ ತುದಿಗೆ ಕುಳಿತುಕೊಳ್ಳುವಂತೆ ಮಾಡಿತು. ಈ ಪಂದ್ಯ ನೋಡಿದರೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಗಳಿಗೆ ಕಡಿಮೆ ಇರಲಿಲ್ಲ. ಅಚ್ಚುಕಟ್ಟಾಗಿ ಟೂರ್ನಿ ನಡೆಸುವುದು ಸುಲಭದ ಕೆಲಸವಲ್ಲ. ಕ್ಲಬ್ ನಿರಂತರ ಇಂಥ ಟೂರ್ನಮೆಂಟ್ ನಡೆಸುತ್ತಿರಲಿ ಎಂದು ಆಶಿಸಿದರು.

ಪತ್ರಕರ್ತ ಬಸವರಾಜ ಕರುಗಲ್, ಕ್ಲಬ್‌ನ ಅಧ್ಯಕ್ಷ ವಿನೋದ ಚಿನ್ನಿನಾಯ್ಕರ್, ಮುಖಂಡ ಗಿರೀಶ್ ಮುಂಡಾದ ಮತ್ತಿತರರು ಮಾತನಾಡಿದರು. ಈರಣ್ಣ, ಗವಿ, ಚಂದ್ರು, ಸೂರಿ, ಶಿವು ನಿರ್ವಹಿಸಿದರು.

ಆರ್‌ಆರ್‌ಗೆ ವರವಾದ ವರುಣ; ಸಿಎಸ್‌ಕೆ ಮಡಿಲಿನಿಂದ ಜಾರಿ ಆರ್‌ಆರ್ ಕೈ ಸೇರಿದ ಕಪ್

ನಿಗದಿತ 12 ಓವರ್‌ಗಳ ಫೈನಲ್ ಪಂದ್ಯದ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ನಾಯಕ ಮಂಜುನಾಥ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟ್ ಬೀಸಿದ ಸಿಎಸ್‌ಕೆ ಬಾಯ್ಸ್ ನಿಗದಿತ 12 ಓವರ್‌ಗಳಲ್ಲಿ 100 ರನ್ ಕಲೆ ಹಾಕಿದರು.

ನಂತರ ಬ್ಯಾಟಿಂಗ್ ಬಂದ ಆರ್ ‌ಆರ್ ತಂಡದ ಹುಡುಗರಿಗೆ ವರುಣ ಅಡ್ಡಿ ಪಡಿಸಿದ. ಸುಮಾರು ಹದಿನೈದು ನಿಮಿಷ ಕಾಲ ಪಂದ್ಯ ಮಳೆಯಿಂದ ಸ್ಥಗಿತವಾಗಿತ್ತು. ಕೊನೆಗೂ ವರುಣಾರ್ಭಟ ನಿಂತಿತು. ಆಗ ಇದನ್ನು ವರವೆಂದು ಪರಿಗಣಿಸಿದ್ದ ಸಿಎಸ್‌ಕೆ ತಂಡ ಒತ್ತಡಕ್ಕೆ ಸಿಲುಕಿತು. ಜೊತೆ ಬ್ಯಾಡ್‌ಲೈಟ್‌ನ ಒತ್ತಡದಲ್ಲಿ ಬ್ಯಾಟ್ ಬೀಸಲು ಶುರು ಮಾಡಿದ ಆರ್‌ಆರ್ ದಾಂಡಿಗರು ಇನ್ನು ಒಂದು ಎಸೆತ ಬಾಕಿ ಇರುವಾಗಲೇ 101 ರನ್ ಕಲೆ ಹಾಕಿ ಏಕತಾ ಕಪ್ ಎತ್ತಿ ಹಿಡಿದರು. ಕೊಟೇಶ್ ನಾಯಕತ್ವದ ಸಿಎಸ್‌ಕೆ ಬಾಯ್ಸ್ ರನ್ನರ್ ಅಪ್ ಸ್ಥಾನ ಪಡೆದರು.

ಹೈಕಮಾಂಡ್ ತೀರ್ಮಾನಕ್ಕೆ ಬದ್ಧವಾಗಿದ್ದೇವೆ ; ಬೊಮ್ಮಾಯಿ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

‘ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ. 17 ಜನ ರಾಜೀನಾಮೆ ಕೊಟ್ಟು ಬಂದ ಮೇಲೆ ಸರ್ಕಾರ ಅಧಿಕಾರಕ್ಕೆ ಬಂದಿದೆ’ ಎಂದು ಗೃಹ ಸಚಿವ ಬಸವರಾಜ್ ಬೊಮ್ಮೊಯಿ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ರಾಜ್ಯದಲ್ಲಿ ರಚಿಸುವಲ್ಲಿ ಸಹಾಯ ಮಾಡಿದವರಿಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ.
ಪಕ್ಷದ ಅಧಿಕೃತ ಯಾವುದೇ ವೇದಿಕೆಯಲ್ಲಿ ಗೊಂದಲವಿಲ್ಲ. ಸಚಿವ ಸಂಪುಟದ ಬಗ್ಗೆ ಪಕ್ಷದ ವರಿಷ್ಠರು ಯಾವುದೇ ನಿರ್ಧಾರ ತೆಗೆದುಕೊಂಡರು ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ರಹಸ್ಯ ವಿಡಿಯೋ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಂದು ಕ್ಷಣ ಮೌನವಹಿಸಿ ಸಂತೋಷ ಗುಣಮುಖರಾದ ಮೇಲೆ ಸತ್ಯಾಸತ್ಯತೆ ಗೊತ್ತಾಗುತ್ತದೆ. ಊಹಾಪೋಹಗಳಿಗೆ ಕಿವಿಗೊಡಬೇಡಿ ಎಂದರು.

ಕಳೆದ 35 ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಬೇಡಿಕೆಯಿದ್ದು, ಈ ಬಗ್ಗೆ ಸರ್ಕಾರಗಳಿಗೆ ಮನವಿಗಳನ್ನೂ ಸಲ್ಲಿಸಿದ್ದಾರೆ. ಈ ಬಗ್ಗೆ ಕಾನೂನಾತ್ಮಕವಾಗಿ ಸಮಗ್ರವಾಗಿ ಚಿಂತಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಪೊಲೀಸ್ ನೇಮಕಾತಿ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ 16 ಸಾವಿರ ಪೊಲೀಸ್ ಸಿಬ್ಬಂದಿ ನೇಮಕಾತಿಗೆ ಆರ್ಥಿಕ ಇಲಾಖೆಯ ಅನುಮೋದನೆ ಸಿಕ್ಕಿದ್ದು, ಖಾಲಿ ಇರುವ ಹುದ್ದೆಗಳ ಭರ್ತಿ ಕಾರ್ಯ ನಡೆಯುತ್ತಿದೆ. ಇನ್ನೆರಡು ವರ್ಷಗಳಲ್ಲಿ ಇನ್ನುಳಿದ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಎನ್ ಡಿಪಿಎಸ್ ಕಾಯ್ದೆ ಪ್ರಕಾರ ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾಗಿರುವವರ ವಿರುದ್ಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಕೆಲವರು ಜೈಲಿನಲ್ಲೂ ಇದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.

ಈ ಸಂದರ್ಭದಲ್ಲಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಸಿ.ಸಿ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರ, ಪ್ರದೀಪ್ ಶೆಟ್ಟರ್, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜೇಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಯುವ ಮುಖಂಡ ಅನಿಲ್ ಮೆಣಸಿನಕಾಯಿ ಸೇರಿದಂತೆ ಹಲವರು ಇದ್ದರು.

ಶಿಸ್ತುಬದ್ಧ ಪಕ್ಷ ಸಂಘಟನೆ ನೊಡಿ ಖುಷಿಯಾಗಿದೆ: ಬಿ.ಸಿ.ಪಾಟೀಲ್

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಬಿಜೆಪಿಯಲ್ಲಿರುವ ಶಿಸ್ತು ಬದ್ಧವಾದ ಪಕ್ಷ ಸಂಘಟನೆಯನ್ನು ನಾನು ಯಾವ ಪಕ್ಷದಲ್ಲೂ ನೋಡಿಲ್ಲ. ಇಲ್ಲಿ ನೋಡಿದ್ದು ತುಂಬಾ ಖುಷಿಯಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ ಪಟ್ಟರು.

ಪ್ರವಾಸಿಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ನಾನು ಹೊಸದಾಗಿ ಸೇರ್ಪಡೆಯಾಗಿದ್ದು, ಇಲ್ಲಿನ ಶಿಸ್ತು ಬದ್ಧ ಪಕ್ಷ ಸಂಘಟನೆ, ಕಾರ್ಯಕರ್ತರ ಸಕ್ರಿಯ ಪಾಲ್ಗೊಳ್ಳುವಿಕೆ ನೋಡಿ ಬಹಳಷ್ಟು ಖುಷಿಯಾಗಿದೆ ಎಂದರು.

ಗ್ರಾಮ ಸ್ವರಾಜ್ ಯಾತ್ರೆ ಮೂಲಕ ಮುಂಬರುವ ಗ್ರಾಮ ಪಂಚಾಯತ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸನ್ನದ್ಧಗೊಳಿಸಲಾಗುತ್ತಿದೆ. ಕಾರ್ಯಕರ್ತರನ್ನು ಬಲ ಪಡಿಸಲಾಗುತ್ತಿದೆ. ಅಲ್ಲದೇ, ತಳಮಟ್ಟದಲ್ಲಿರುವ ಕಾರ್ಯಕರ್ತರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಲಾಗುತ್ತಿದೆ. ಚುನಾವಣೆ ಎದುರಿಸಲು ಕಾರ್ಯಕರ್ತರಲ್ಲಿ ಶಕ್ತಿ ತುಂಬಲಾಗುತ್ತಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.

ಈ ಸಂದರ್ಭದಲ್ಲಿ
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿ.ಸಿ.ಪಾಟೀಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ, ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರ, ಪ್ರದೀಪ್ ಶೆಟ್ಟರ್, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಜೇಂದ್ರ, ಬಿಜೆಪಿ ಜಿಲ್ಲಾ ಅಧ್ಯಕ್ಷ ಮೋಹನ್ ಮಾಳಶೆಟ್ಟಿ, ಯುವ ಮುಖಂಡ ಅನಿಲ್ ಮೆಣಸಿನಕಾಯಿ ಸೇರಿದಂತೆ ಹಲವರು ಇದ್ದರು.

ಸಂಪುಟ ವಿಸ್ತರಣೆ ವಿಳಂಬ: ಒಂದೇ ವಾಕ್ಯದಲ್ಲಿ ಉತ್ತರಿಸಿದ ಯಡಿಯೂರಪ್ಪ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸಂಪುಟ ವಿಸ್ತರಣೆಗೆ ನಾವು ನೀವು ಇಬ್ಬರೂ ಕಾಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮಾರ್ಮಿಕವಾಗಿ ಹೇಳಿದ್ದಾರೆ.

ಬೆಂಗಳೂರಿನ ಕಾವೇರಿ ನಿವಾಸದಿಂದ ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತೆರಳುತ್ತಿದ್ದ ವೇಳೆ ಅವರು ಮಾಧ್ಯಮದವರ ಅಮಿತ್ ಶಾ ಅವರು ಭರವಸೆ ಕೊಟ್ಟ ಬಳಿಕವೂ ಸಂಪುಟ ವಿಳಂಬವಾಗುತ್ತಿದೆಯಲ್ಲ ಎಂಬ ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಮಾಧ್ಯಮಗಳಿಗೆ ಉತ್ತರಿಸಿ ತೆರಳಿದರು.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಇನ್ನೂ ಗೊಂದಲದ ಗೂಡಾಗಿದೆ. ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಪಟ್ಟಿ ಕಳುಹಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಸಿಎಂ ಯಡಿಯೂರಪ್ಪ ಮೊನ್ನೆಯಷ್ಟೇ ಹೇಳಿದ್ದರು.

ಅವರು ಹೇಳಿ ಮೂರು ದಿನಗಳು ಕಳೆದಿದ್ದರೂ, ಹೈಕಮಾಂಡ್ ನಿಂದ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ಯಡಿಯೂರಪ್ಪ ಅವರಿಗೆ ಇನ್ನೂವರೆಗೂ ಯಾವುದೇ ಸೂಚನೆಗಳು ಬಂದಿಲ್ಲ.

ಶಿರಾ ಮತ್ತು ರಾಜರಾಜೇಶ್ವರ ನಗರ ಉಪ ಚುನಾವಣೆಯ ಗೆಲವಿನ ನಂತರವೂ ಬಳಿಕವೂ ಬಿಎಸ್ವೈಗೆ ಪೂರಕವಾದ ವಾತಾವರಣ ಸೃಷ್ಠಿಯಾಗುತ್ತಿಲ್ಲ.

ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪಿಗೆ ನೀಡದಿರುವುದು ನಿಗೂಢತೆಗೆ ಕಾರಣವಾಗಿರುವುದೆ. ರಾಜಕೀಯ ಕಾರ್ಯದರ್ಶಿ ಹಾಗೂ ಯಡಿಯೂರಪ್ಪ ಅವರ ಹತ್ತಿರದ ಸಂಬಂಧಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನಿಸಿರುವುದು ಸಿಎಂ ನೆಮ್ಮದಿ ಕೆಡಿಸಿವೆ ಎಂದು ಹೇಳಲಾಗಿದ್ದು, ಹೈಕಮಾಂಡ್ ನ ಸಚಿವ ಸಂಪುಟದ ವಿಳಂಬ ಧೋರಣೆ ಬಿಜೆಪಿಯಲ್ಲಿ ಸಹಜವಾಗಿ ಗೊಂದಲ ಸೃಷ್ಟಿಸಿದೆ.

ಬಿಜೆಪಿಯಲ್ಲೀಗ ಮನೆಯೊಂದು ಮೂರು ಬಾಗಿಲು!

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬೆಂಗಳೂರು

ದಿನ ಕಳೆದಂತೆ ರಾಜ್ಯ ಬಿಜೆಪಿಯಲ್ಲಿ ಬಣ ರಾಜಕೀಯ ಹುಟ್ಟಿಕೊಳ್ಳುತ್ತಿದ್ದು, ಆಂತರಿಕ ಭಿನ್ನಾಭಿಪ್ರಾಯಗಳಿಂದ ಬಾಜಪದಲ್ಲೀಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ.

ಸಚಿವ ಸಂಪುಟ ಪುನಾರಚನೆ ಗೊಂದಲವುಂಟಾಗಿದ್ದು, ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಇದರಿಂದ ಯಾರನ್ನ ಮಂತ್ರಿ ಮಾಡಬೇಕು, ಯಾರನ್ನ ಸಂಪುಟದಿಂದ ಕೈ ಬಿಡಬೇಕು ಎಂಬುವುದು ಬಿಜೆಪಿ ಹೈಕಮಾಂಡ್ ಗೆ ತಲೆಬಿಸಿ ತಂದಿದೆ.

ಕ್ಯಾಬಿನೆಟ್ ಸಭೆಯ ನೆಪದಲ್ಲಿ ಸಚಿವಾಕಾಂಕ್ಷಿಗಳು ಸಾಲು ಸಾಲು ಸಭೆ ನಡೆಸುತ್ತಿದ್ದು, ಯಡಿಯೂರಪ್ಪ ಅವರಿಗೆ ಕಣ್ಣು ತೆರೆಯುತ್ತಿಲ್ಲ. ಬದಲಾಗಿ ಮಂತ್ರಿ ಸ್ಥಾನ ಕೊಡುವಂತೆ ಪಟ್ಟು ಹಿಡಿದಿದ್ದಾರೆ. ಇದರ ಮಧ್ಯೆ ವಲಸಿಗ ಮತ್ತು ಮೂಲ ಬಿಜೆಪಿಗರು ಎಂಬ ಚರ್ಚೆ ಶುರುವಾಗಿದೆ.

ಸಂಪುಟ ವಿಸ್ತರಣೆಯಲ್ಲಿ ಮೂಲ ಬಿಜೆಪಿಗರಿಗೆ ಆದ್ಯತೆ ನೀಡಬೇಕು ಎಂಬ ಮಾತುಗಳು ಹರಿದಾಡುತ್ತಿವೆ. ಇತ್ತ ಸರ್ಕಾರ ರಚನೆಗೆ ಕಾರಣವಾಗಿರುವ ವಲಸಿಗ ಬಿಜೆಪಿಗರಾದ ಎಂಟಿಬಿ ನಾಗರಾಜ್, ಎಚ್.ವಿಶ್ವನಾಥ್ ಹಾಗೂ ಆರ್.ಶಂಕರ್ ಮಂತ್ರಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಒತ್ತಡ ಹೇರುತ್ತಿದ್ದಾರೆ.

ಅಲ್ಲದೇ, ಯಡಿಯೂರಪ್ಪಗೆ ವಿಪಕ್ಷಗಳಿಗಿಂತ ಸಿಎಂ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳೇ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳಿಗಿಂತ ಆಂತರಿಕ ಕಿತ್ತಾಟವೇ ಹೆಚ್ಚಾಗಿದೆ. ಸ್ವಯಂಕೃತ ಅಪರಾಧದಿಂದಲೇ ಬಿಜೆಪಿ ಆಡಳಿತ ಪಾತಾಳಕ್ಕೆ ಕುಸಿಯುತ್ತಿದ್ದು, ಕ್ರಮೇಣ ಜನರ ವಿಶ್ವಾಸ ಕಳೆದುಕೊಳ್ಳುತ್ತಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ.

2008 ರಲ್ಲೂ ಆಂತರಿಕ ಕಚ್ಚಾಟದಿಂದ ಯಡಿಯೂರಪ್ಪ ನೇತೃತ್ವದ ಬಿಜೆಪಿ‌ ಸರ್ಕಾರ ಪತನಗೊಂಡಿತ್ತು. ಬಿಎಸ್ ವೈ ಸರ್ಕಾರ ಮತ್ತೆ ಅದೇ ಹಾದಿ ತುಳಿಯುತ್ತಿದೆಯಾ ಎಂಬುದೇ ಸದ್ಯದ ಕುತೂಹಲವಾಗಿದ್ದು ಮುಂದೇನಾಗುತ್ತೆ ಎಂಬುದನ್ನು ಕಾದು ನೋಡಬೇಕು.

error: Content is protected !!