Home Blog Page 3131

ಪ್ರಧಾನಿ, ಕೃಷಿ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ

ವಿಜಯಸಾಕ್ಷಿ ಸುದ್ದಿ, ಗದಗ

ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದ ಅಹಿತಕರ ಘಟನೆಗೆ ನೈತಿಕ ಹೊಣೆ ಹೊತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ಘಟಕದ ವತಿಯಿಂದ ಗದಗ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಟ್ರ್ಯಾಕ್ಟರ್ ರ‍್ಯಾಲಿ ವೇಳೆ ನಡೆದ ಅಹಿತಕರ ಘಟನೆಗೆ ಪ್ರತಿಭಟನಕಾರರನ್ನು ಹೊಣೆ ಮಾಡುವುದು ಸರಿಯಲ್ಲ. ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ತಕ್ಷಣ ವಾಪಸ್ ಪಡೆಯಬೇಕೆಂದು ಆಗ್ರಹಿಸಿದರು.
ಮಹ್ಮದ ಎನ್. ಶಾಲಗಾರ, ಅಶೋಕ ಮಂದಾಲಿ, ವಿನೋದ ಶಿದ್ಲಿಂಗ, ಶಿವರಾಜ ಕೋಟಿ, ಯೂಸುಫ್ ಡಂಬಳ, ಆಸೀಫ್ ರಾಮೇನಹಳ್ಳಿ, ಸರಫರಾಜ ಬಬರ್ಚಿ, ರಿಯಾಜ ಕುದುರಿ, ಅಬ್ದುಲ್ ಗಫೂರ್ ಪಾಶ್ಚಾಪುರ, ಬಾಬುಸಾಬ ನಾರಾಯಣಕೇರಿ, ಕಾರ್ಯಕರ್ತರು ಉಪಸ್ಥಿತರಿದ್ದರು.

ಹಣದ ಕೊರತೆ: ‘ಪಶು ವಿವಿ ನರಳಾಟ! ಸರ್ಕಾರದ ನಿರ್ಲಕ್ಷ್ಯ, ವಿವಿ ಚಟುವಟಿಕೆಗಳು ಸ್ಥಗಿತ

360 ಕೋಟಿ ರೂ. ನೀಡುವಂತೆ ಸರ್ಕಾರಕ್ಕೆ ಮನವಿಹೆಚ್ಚಿನ ಅನುದಾನ ಕೊಡಿಸುವುದಾಗಿ ಸಚಿವರ ಭರವಸೆ

ಓಂಕಾರ ಮಠಪತಿ

ವಿಜಯಸಾಕ್ಷಿ ಸುದ್ದಿ, ಬೀದರ

ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ನೀಡಿರುವ ರಾಜ್ಯ ಸರ್ಕಾರ, ರಾಜ್ಯದ ಏಕೈಕ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾನಿಲಯಕ್ಕೆ ಸಮರ್ಪಕ ಅನುದಾನ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ.
ಕಳೆದ 2020-21ರ ಅವ್ಯವಯದಲ್ಲಿ 738 ಕೋಟಿ ರೂ. ಅನುದಾನ ನೀಡುವಂತೆ ಪಶು ವಿಶ್ವವಿದ್ಯಾನಿಲಯ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಕೇವಲ 167 ಕೋಟಿ ರೂ. ಅನುದಾನ ಕೊಟ್ಟಿದೆ.

ಸಂಶೋಧನೆಗಾಗಿ ನೀಡಿದ್ದ 1306 ಲಕ್ಷ ರೂ. ಹಣವನ್ನು ಮರಳಿ ಪಡೆದಿದೆ. ಇದರಿಂದ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬ ನೀತಿ ಅನುಸರಿಸುತ್ತಿದೆ.

ಅನುದಾನ ಕೊಡಿಸಿಲ್ಲ

ಪಶುಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ತವರು ಜಿಲ್ಲೆಯವರಾಗಿದ್ದರೂ ಸಮರ್ಪಕ ಅನುದಾನ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಇದರಿಂದ ರಾಜ್ಯದಲ್ಲಿರುವ ಪಶುಸಂಗೋಪನಾ ವಿಶ್ವವಿದ್ಯಾನಿಲಯಗಳು ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ.
ಹಿಂದಿನ ಸರ್ಕಾರಗಳು ಸಮರ್ಪಕ ಅನುದಾನ ನೀಡುತ್ತಿದ್ದವು. ಆದರೆ, ಕಳೆದ ವರ್ಷದಿಂದ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಅಯವ್ಯಯದಲ್ಲಿ ಹಣ ಸರಿಯಾಗಿ ಮಂಜೂರು ಆಗುತ್ತಿಲ್ಲ.

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಸರ್ಕಾರ ಕೊಟ್ಟಿರುವ 167 ಕೋಟಿ ರೂ. ಸಿಬ್ಬಂದಿಗಳ ಸಂಬಳ ಹಾಗೂ ವಿಶ್ವವಿದ್ಯಾನಿಲಯದ ನಿರ್ವಹಣೆಗೆ ಖರ್ಚಾಗಿದೆ. ಸಂಶೋಧನೆ ನೇಮಕಾತಿ ಸೇರಿದಂತೆ ಎಲ್ಲವೂ ನೆನೆಗುದಿಗೆ ಬಿದ್ದಿವೆ. ಕಳೆದೊಂದು ವರ್ಷದಿಂದ ಪಶು ವಿಶ್ವವಿದ್ಯಾನಿಲಯ ಅಕ್ಷರಶ: ಸ್ತಬ್ಧವಾಗಿದೆ. ಅನುದಾನದ ಕೊರತೆಯಿಂದಾಗಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ.

ಕೋವಿಡ್ ಕಾರಣ

ಕಳೆದ ವರ್ಷ ಕೋವಿಡ್ ಇರುವ ಕಾರಣ ಕಡಿಮೆ ಬಜೆಟ್ ಕೊಡಲಾಗಿದೆ ಎಂದು ಹೇಳುತ್ತಿರುವ ಸರ್ಕಾರ ರಾಜ್ಯದ ಉಳಿದ ಎಲ್ಲಾ ವಿಶ್ವವಿದ್ಯಾನಿಲಯಕ್ಕಿಂತ ಕಡಿಮೆ ಅನುದಾನ ನೀಡಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶೇ.80 ರಷ್ಟು ಅನುದಾನ ಕಡಿತವಾಗಿದ್ದು, ಸಚಿವ ಪ್ರಭು ಚವ್ಹಾಣ ಅವರು ಕಾಳಜಿ ವಹಿಸುವ ಅವಶ್ಯಕತೆ ಇದೆ.

360 ಕೋಟಿ ರೂ.ಗೆ ಬೇಡಿಕೆ
ಹಣಕಾಸಿನ ತೊಂದರೆಯಿಂದಾಗಿ ಸದ್ಯ ಪಶು ವಿವಿಯಲ್ಲಿ ನೇಮಕಾತಿ, ಹೊಸ ಕಾಲೇಜುಗಳ ಸ್ಥಾಪನೆ ಸೇರಿದಂತೆ ಎಲ್ಲವೂ ನಿಂತಿವೆ. ಹಾಗಾಗಿ, 2021-22ನೇ ಸಾಲಿನಲ್ಲಿ 360 ಕೋಟಿ ರೂ. ಅನುದಾನ ಒದಗಿಸುವಂತೆ ವಿಶ್ವವಿದ್ಯಾಲಯ ಬೇಡಿಕೆ ಇಟ್ಟಿದೆ.

ಅಥಣಿ ಹಾಗೂ ಪುತ್ತೂರಿನಲ್ಲಿ ಪಶು ವೈದ್ಯಕೀಯ ವಿಶ್ವವಿದ್ಯಾಲಯ ಪ್ರಾರಂಭಿಸುವಂತೆ ಒತ್ತಡವಿದೆ. ಆದರೆ, ಅದಕ್ಕೆ ಬೇಕಾಗಿರುವ ಹಣಕಾಸು ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯ ಬಗ್ಗೆ ರಾಜ್ಯ ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಹಾಗಾಗಿ ಸರ್ಕಾರದಿಂದ ಅನುಮತಿ ಸಿಕ್ಕ ಮೇಲೆ ಈ ಕುರಿತು ಯೋಚಿಸಲಾಗುವುದು.

ಪ್ರೊ,ನಾರಾಯಣಸ್ವಾಮಿ, ಕುಲಪತಿ, ಪಶು ವೈದ್ಯಕೀಯ ವಿವಿ ಬೀದರ

ರಾಜ್ಯದ ಏಕೈಕ ಪಶುವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಿಗಳ ವಿಶ್ವ ವಿದ್ಯಾನಿಲಯಕ್ಕೆ ಕಳೆದ ವರ್ಷ ಅತ್ಯಂತ ಕಡಿಮೆ ಬಜೆಟ್ ಅನುಮೋದನೆಗೊಂಡಿದ್ದು ಗಮನಕ್ಕಿದೆ. ೨೦೨೦-೨೧ಸಾಲಿಗೆ ಪಶು ವಿವಿ ಅವರು ೩೬೦ ಕೋಟಿ ರೂ. ಅನುದಾನ ಕೇಳಿದ್ದಾರೆ. ಈ ವರ್ಷದ ಅಯವ್ಯಯದಲ್ಲಿ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ಮಾಡುತ್ತೇನೆ.

ಪ್ರಭು ಚವ್ಹಾಣ, ಪಶು ಸಂಗೋಪನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ
ಪ್ರಭು ಚವ್ಹಾಣ, ಸಚಿವರು

ಮಹಾರಾಷ್ಟ್ರಕ್ಕೆ ಒಂದಿಂಚಲ್ಲ, ಸೆಂ.ಮೀ.ನಷ್ಟು ಜಾಗ ಬಿಟ್ಟು ಕೊಡಲ್ಲ, ಉದ್ಧಟತನ ಮುಂದುವರೆಸಿದರೆ ಗಡಿಯಾಚೆಗೂ ಒತ್ತುವರಿ ಮಾಡ್ಬೇಕಾಗುತ್ತೆ: ಠಾಕ್ರೆ, ವಿರುದ್ಧ ರೈತರ ಕಿಡಿ

ವಿಜಯಸಾಕ್ಷಿ ಸುದ್ದಿ, ಗದಗ

ಕರ್ನಾಟಕದ ಒಂದಿಂಚಲ್ಲ, ಸೆಂ.ಮೀ. ನಷ್ಟು ಜಾಗ ಬಿಟ್ಟು ಕೊಡಲ್ಲ. ಸುಮ್ಮನೆ ಕನ್ನಡಿಗರನ್ನು ಕೆರಳಿಸಿ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸುವ ಹುನ್ನಾರ ನಡೆಸಬೇಡಿ. ಇದರಲ್ಲಿ ರಾಜಕೀಯ ಷಡ್ಯಂತ್ರ ಮಾಡುವುದು ಸರಿಯಲ್ಲ
ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ನರಗುಂದ ಪಟ್ಟಣದ ಮಹದಾಯಿ ವೇದಿಕೆಯಲ್ಲಿ ಈ ಬಗ್ಗೆ ಮಾತನಾಡಿ, ಉದ್ಧವ್ ಠಾಕ್ರೆ ವಿನಾಕಾರಣ ಹೇಳಿಕೆ ನೀಡುವುದನ್ನು ಬಿಟ್ಟು ಮಹಾರಾಷ್ಟ್ರ ರಾಜ್ಯದ ಅಭಿವೃದ್ಧಿ ಕಡೆ ಗಮನಹರಿಸಲಿ. ಕರ್ನಾಟಕದ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ. ಹಾಗಾಗಿ ರಾಜ್ಯದ ಸಿಎಂ ಹಾಗೂ ಸಂಸದರು ಮಹಾರಾಷ್ಟ್ರಕ್ಕೆ ತಕ್ಕ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ, ನದಿ ಮತ್ತು ಗಡಿ ಆಯೋಗದ ಅಧ್ಯಕ್ಷರು ಮಹಾದಾಯಿ ಹಾಗೂ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದ್ದಾರೆ. ಹೀಗೆ ಉದ್ಧಟತನ ಮುಂದುವರೆಸಿದರೆ ಕರ್ನಾಟಕದ ಗಡಿಯಾಚೆಗೂ ಒತ್ತುವರಿ ಮಾಡಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರಿಗೆ ವಿರೇಶ್ ಸೊಬರದಮಠ ಸ್ಪಷ್ಟ‌ ಸಂದೇಶ ರವಾನಿಸಿದರು.

ಇದೇ ಸಂದರ್ಭದಲ್ಲಿ ಮಹಾದಾಯಿ ನಮ್ಮ ತಾಯಿ ಇದ್ದಂತೆ ಎಂಬ ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಹೇಳಿಕೆ ಖಂಡಿಸಿ, ಮಹದಾಯಿ ಕರ್ನಾಟಕದಲ್ಲಿ ಉಗಮವಾಗಿದ್ದು, ಮಹದಾಯಿ ನಮ್ಮ ತಾಯಿ. ಹಾಗಾಗಿ ನಾವೂ ನಮ್ಮ ತಾಯಿ ಮಹದಾಯಿ ಬಿಟ್ಟುಕೊಡುವುದಿಲ್ಲ ಎಂದು ಮಹದಾಯಿ ಹೋರಾಟಗಾರರು ಕಿಡಿಕಾರಿದರು.

ಮಹದಾಯಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣದಲ್ಲಿ ಕರ್ನಾಟಕಕ್ಕೆ ನ್ಯಾಯ ಸಿಕ್ಕಿದೆ.
ಮುಂದಿನ ದಿನಮಾನಗಳಲ್ಲಿ ಡ್ಯಾಂ ಕಟ್ಟಿಸುತ್ತೇವೆ. ಉತ್ತರ ಕರ್ನಾಟಕದ ಭಾಗದ ಬಹುದಿನದ ಬೇಡಿಕೆ ಈಡೇರಿಸಲಿಕ್ಕೆ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರೈತ ಸೇನಾ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಗೋವಾ ಸಿಎಂಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಅನೇಕ ಹೋರಾಟಗಾರರು ಹಾಗೂ ರೈತರು ಇದ್ದರು.

ಸರಳ ಜಾತ್ರೆ ಸಮಾಜಮುಖಿ ಸೇವೆಗೆ ಅರ್ಪಣೆ: ಭಕ್ತರ ಆರೋಗ್ಯಕ್ಕಿಂತ ದೊಡ್ಡ ಜಾತ್ರೆ ಬೇರೊಂದಿಲ್ಲ

0

-ಸದ್ವಿಚಾರ, ಮಧುರ ಮಾತು, ಒಳ್ಳೇ ಕೆಲಸ, ಭಗವಂತನ ಇರುವಿಕೆ ಬದುಕಿನ ಸಾರ್ಥಕತೆ

ಇದು ಭಕ್ತರ ಭಕ್ತಿಯ ಶಕ್ತಿ ಹಾಗೂ ದೈವೀಶಕ್ತಿಯ ಸಂಗಮ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ

ಕೊರೋನಾ ಇರುವ ಕಾರಣ ಈ ವರ್ಷ ಅಜ್ಜನ ಜಾತ್ರೆ ನಡೆಯುತ್ತದೆಯೋ ಇಲ್ಲವೋ ಎನ್ನುವ ಬಗ್ಗೆ ಬಹಳಷ್ಟು ಚರ್ಚೆಯಾಗಿತ್ತು. ಭಕ್ತರ ಆರೋಗ್ಯಕ್ಕಿಂತ ದೊಡ್ಡ ಜಾತ್ರೆ ಬೇರೊಂದಿಲ್ಲ. ಆದ್ದರಿಂದ ಈ ವರ್ಷದ ಜಾತ್ರೆ ಸರಳ ಜಾತ್ರೆ ಸಮಾಜಮುಖಿ ಸೇವೆಗೆ ಅರ್ಪಣೆಯಾಗಿದೆ ಎಂದು ಕೊಪ್ಪಳದ ಶ್ರೀ ಸಂಸ್ಥಾನ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ನುಡಿದರು.

ನಗರದ ಗವಿಮಠ ಆವರಣದಲ್ಲಿ ಶನಿವಾರ ಈ ವರ್ಷದ ಅಜ್ಜನ ಜಾತ್ರೆ ರಥೋತ್ಸವ ಸಂಪನ್ನಗೊಂಡ ಬಳಿಕ ಆಶೀರ್ವಚನ ನೀಡಿದ ಶ್ರೀಗಳು, ನನ್ನ ಮನಸಿನಲ್ಲಿ ಏನಿದೆ ಎಂದರೆ ಜಾತ್ರೆ ನಡೆಸುತ್ತೇನೆ ಎನ್ನುವವ ನಾನಲ್ಲ, ನಡೆಸುವುದಿಲ್ಲ ಎನ್ನುವವ ನಾನಲ್ಲ. ಯಾಕಂದ್ರೆ ಇದು ಭಕ್ತರ ಭಕ್ತಿಯ ಶಕ್ತಿ ಹಾಗೂ ದೈವೀಶಕ್ತಿಯ ಸಂಗಮ. ಗವಿಸಿದ್ಧನ ಪ್ರೇರಣೆ ಏನಿರುತ್ತೋ ಅದೇ ಆಗುತ್ತದೆ ಎಂದರು.

ಈ ಎರಡು ಶಕ್ತಿಗಳನ್ನು ಮೀರಿ ನಡೆಸುತ್ತೇನೆ ಅಥವಾ ಜಾತ್ರೆ ನಡೆಸುವುದಿಲ್ಲ ಎನ್ನಲು ನಾನ್ಯಾರು. ಹಾಗೆಂದರೆ ಅದು ಅಹಂಕಾರದ ಮಾತಾದೀತು. ನಾನು ನಿಮ್ಮಂತೆ ಭಕ್ತನಾಗಿ ಜಾತ್ರೆಯನ್ನು ನೋಡುತ್ತೇನೆಯೇ ಹೊರತು ಸನ್ಯಾಸಿಯಾಗಿ ಜಾತ್ರೆ ಮಾಡುವವನಲ್ಲ. ಪ್ರತಿ ವರ್ಷದ ಸಮಾಜಮುಖಿ ಜಾತ್ರೆ ನೋಡಲು ಭಕ್ತರೆಲ್ಲ ಗವಿಸಿದ್ಧನ ಸನ್ನಿಧಾನಕ್ಕೆ ಬರುತ್ತಿದ್ದರು. ಈ ವರ್ಷ ಭಕ್ತರ ಮನೆಮನೆಗೆ ಗವಿಸಿದ್ಧನೇ ಹೋಗಿದ್ದಾನೆ ಎಂದು ಹೇಳಿದರು.

ಸಮಾಜಮುಖಿ ಕಾರ್ಯ ಪ್ರತಿ ವರ್ಷದಂತೆ ಈ ವರ್ಷವೂ ನಡೆಯುತ್ತಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ಆಕಾಂಕ್ಷಿಗಳಿಗೆ ಅನುಕೂಲವಾಗಲಿ ಎನ್ನುವ ಸದುದ್ದೇಶದಿಂದ ಡಿಜಿಟಲ್ ಗ್ರಂಥಾಲಯ ಉದ್ಘಾಟನೆಗೊಳ್ಳಲಿದೆ.

ಇದು ದಿನದ 24 ಗಂಟೆಯೂ ತೆರೆದಿರುತ್ತದೆ. ಜ್ಞಾನದ ಹರಿವಿಗೆ, ಹಸಿವಿಗೆ ಬಾಗಿಲು ಬಂದ್ ಆಗಿರಬಾರದು. ಹಾಗೆಯೇ ಫೆಬ್ರವರಿಯಲ್ಲಿ ಕುಕನೂರು ತಾಲೂಕಿನ ಕಟ್ಟ ಕಡೆಯ ಹಳ್ಳಿ ಅಡವಿ ಹಳ್ಳಿಯನ್ನು ದತ್ತು ತೆಗೆದುಕೊಂಡಿದ್ದು, ಸ್ಮಾರ್ಟ್ ಸಿಟಿಯಂತೆ, ಸ್ಮಾರ್ಟ್ ವಿಲೇಜ್ ಮಾಡುವ ಪರಿಕಲ್ಪನೆ ಸಾಕಾರಗೊಳ್ಳಲಿದೆ. ನಗರಗಳಂತೆ ಹಳ್ಳಿಗಳು ಅಭಿವೃದ್ಧಿಯಾದರೆ ಭಾರತ ಪ್ರಕಾಶಿಸುತ್ತದೆ. ಜೊತೆಗೆ ಈಗಾಗಲೇ ಕೆರೆಗಳ ಜೀರ್ಣೋದ್ಧಾರದ ಕೆಲಸ ಎರಡು ವರ್ಷಗಳ ಹಿಂದೆ ಆರಂಭಗೊಂಡಿದ್ದು, ಈ ವರ್ಷ ಸುಮಾರು 300 ಎಕರೆ ವಿಸ್ತಾರದ ಗಿಣಗೇರಾ ಕೆರೆಯನ್ನು ಸಂವರ್ಧನಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ಭಕ್ತಗಣಕ್ಕೆ ತಿಳಿಸಿದರು.

ಈ ಸಲ ಜಾತ್ರೆಗೆ ಬರಬೇಡಿ ಎಂದರೂ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದೀರಿ. ಇನ್ನು ಬನ್ನಿ ಎಂದಿದ್ದರೆ ಇನ್ನೂ ಎಷ್ಟು ಮಂದಿ ಸೇರುತ್ತಿದ್ದಿರೋ ಎಂದು ಅಚ್ಚರಿ ವ್ಯಕ್ತಪಡಿಸಿದ ಶ್ರೀಗಳು, ನಿಮ್ಮ ಭಕ್ತಿ, ಪ್ರೀತಿ ಸದಾ ಹೀಗೆ ಇರಲಿ, ಗವಿಸಿದ್ಧೇಶನ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ. ಪರಿಸರ ಸ್ನೇಹಿ ಜಾತ್ರೆ ಜೊತೆಗೆ ಪರಿಸ್ಥಿತಿ ಸ್ನೇಹಿ ಜಾತ್ರೆಯೂ ನಡೆದಿದ್ದು ಅರ್ಥಪೂರ್ಣವಾಗಿ ನೆರವೇರಿದೆ. ಮುಂದಿನ ವರ್ಷ ಈ ವರ್ಷದ ಎರಡು ಪಟ್ಟು ಅದ್ಧೂರಿಯಾಗಿ ಜಾತ್ರೆ ನೆರವೇರುತ್ತದೆ ಎಂದು ಶ್ರೀಗಳು ನುಡಿದರು.

ತಲೆಯಲ್ಲಿ ಸದ್ವಿಚಾರ, ಬಾಯಲ್ಲಿ ಮಧುರವಾದ ಮಾತುಗಳು, ಕೈಯಲ್ಲಿ ಸದಾ ಒಳ್ಳೇಯ ಕೆಲಸ ಹಾಗೂ ಮನಸಿನಲ್ಲಿ ಸದಾ ಭಗವಂತ ಇದ್ದರೆ ಅದುವೇ ಜೀವನದ ಸಾರ್ಥಕತೆ.

ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಸಂಸ್ಥಾನ ಶ್ರೀ ಗವಿಮಠ,ಕೊಪ್ಪಳ

ವಿರಳ ರಥೋತ್ಸವ

ಕೊಪ್ಪಳದ ಅಜ್ಜನ ಜಾತ್ರೆ ಇದೇ ಮೊದಲ ಬಾರಿಗೆ ಬೆಳಗಿನ 8 ಗಂಟೆಗೆ ರಥೋತ್ಸವ ನಡೆಸುವ ಮೂಲಕ ವಿಶಿಷ್ಟ ದಾಖಲೆ ಸೃಷ್ಟಿಯಾಯಿತು. ರಥೋತ್ಸವದ ಸಮಯವನ್ನು ಹಿಂದಿನ ರಾತ್ರಿ ತಿಳಿಸಿದರೂ ಲಕ್ಷಾಂತರ ಜನ ಭಕ್ತರು ಜಮಾಯಿಸಿದ್ದರು. ಆದರೂ ರಥೋತ್ಸವದ ಜಾಗಕ್ಕೆ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಸರಳ, ಅರ್ಥಪೂರ್ಣ ಹಾಗೂ ಸಮಾಜಮುಖಿ ಸೇವೆಗೆ ಈ ವರ್ಷದ ವಿಭಿನ್ನ, ವಿಶಿಷ್ಟ ಜಾತ್ರೆ ಸಾಕ್ಷಿಯಾಯಿತು.

ಬಾಡಿಗೆ ಮನೆಯಲ್ಲಿಯೇ ಅನ್ನಭಾಗ್ಯ ಅಕ್ಕಿ ಅಕ್ರಮ ಸಂಗ್ರಹ: 50 ಕೆಜಿಯ 94 ಮೂಟೆಗಳು ವಶಕ್ಕೆ ಪಡೆದ ಅಧಿಕಾರಿಗಳು

ವಿಜಯಸಾಕ್ಷಿ ಸುದ್ದಿ, ಗದಗ

ಪಡಿತರ ಅಕ್ಕಿ ಮೂಟೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮನೆಯ ಮೇಲೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ವಿಠ್ಠಲ ರಾವ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿರುವ ಘಟನೆ ಶುಕ್ರವಾರ ನಗರದ ಟ್ಯಾಗೋರ್ ರಸ್ತೆಯಲ್ಲಿ ನಡೆದಿದೆ.

ನಗರದ ಬಸವರಾಜ ವಾಲಿ ಎಂಬುವವರ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಇವರು ಮಹಾಂತೇಶ ಎಂಬ ವ್ಯಕ್ತಿಗೆ ಕೆಲವು ದಿನಗಳಿಂದ ಮನೆ ಬಾಡಿಗೆಗೆ ಕೊಟ್ಟಿದ್ದಾರೆ. ದವಸ ಧಾನ್ಯಗಳನ್ನು ತುಂಬಿಸುತ್ತೇನೆಂದು ಬಸವರಾಜ್ ಅವರ ಮನೆ ಬಾಡಿಗೆ ಪಡೆದು ಅಕ್ರಮ ಅಕ್ಕಿ ದಂಧೆಗೆ ಇಳಿದಿದ್ದಾನೆ.

ಅಕ್ರಮ ಅಕ್ಕಿ ದಂಧೆ ನಡೆಸುತ್ತಿದ್ದಾನೆ ಎನ್ನಲಾಗುತ್ತಿರುವ ಮಹಾಂತೇಶ ಮನೆಯಲ್ಲಿ ಸುಮಾರು 50 ಕೆಜಿಯ ಒಟ್ಟು 94 ಪಡಿತರ ಅಕ್ಕಿಯ ಮೂಟೆಗಳು ಸಿಕ್ಕಿವೆ. ಅಲ್ಲದೇ, ಅಂಗನವಾಡಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ವಿತರಿಸುವ ಗೋಧಿ, ತೊಗರಿ ಬೆಳೆ ಸಹ ದೊರೆತಿದ್ದು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಗ್ರಹಿಸಿಟ್ಟಿರುವ ಇವುಗಳು ಅಂಗನವಾಡಿ ಕೇಂದ್ರಗಳ ಅಕ್ಕಿ ನಾ? ಅಥವಾ ಪಡಿತರ ಚೀಟಿಯ ಅಕ್ಕಿ ನಾ? ಎಂಬುವುದು ಇನ್ನಷ್ಟೇ ತಿಳಿಯಬೇಕಿದೆ.

ಅಲ್ಲದೇ, ಕೆಎಂ ಬಾಂಬೆ ಗೋಲ್ಡ್ ಹೆಸರಿನ ಪಾಕೇಟ್ ಗಳನ್ನು ನಕಲಿ ಮಾಡಿ ಅವುಗಳಲ್ಲಿ ಅಕ್ಕಿ ತುಂಬಿ ಯಾರಿಗೂ ಅನುಮಾನ ಬಾರದಂತೆ ಮಾರಾಟ ಮಾಡಲು ಯತ್ನಿಸಿರುವ ಮಹಾಂತೇಶ ಪರಾರಿಯಾಗಿದ್ದು, ಆರೋಪಿಯ ಪತ್ತೆಗಾಗಿ ಪೋಲಿಸರು ಬಲೆ ಬಿಸಿದ್ದಾರೆ.

ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಆದ್ಯತೆ ನೀಡಿ : ಆಯೋಗಕ್ಕೆ ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾ ಮನವಿ

ವಿಜಯಸಾಕ್ಷಿ ಸುದ್ದಿ, ತುಮಕೂರು

ಸಾಮಾಜಿಕ, ಆರ್ಥಿಕವಾಗಿ ಅಲ್ಪಸಂಖ್ಯಾತರು ಸದೃಢರಾಗಲು ಶಿಕ್ಷಣ, ಮೂಲಭೂತ ಸೌಕರ್ಯ, ಆಶ್ರಯ ಯೋಜನೆಗಳಡಿಯಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಅವರಿಗೆ ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಮುಸ್ಲಿಂ, ಸಿಖ್, ಜೈನ, ಪಾರ್ಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳನ್ನು ಒಳಗೊಂಡ ಧಾರ್ಮಿಕ ಅಲ್ಪಸಂಖ್ಯಾತರ ಅಭಿವೃದ್ದಿಗೆ ಹಿಂದಿನ ಸರ್ಕಾರ 3000 ಕೋಟಿ ರೂ. ಅನುದಾನ ನೀಡಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ 800 ಕೋಟಿ ರೂ.ಗಳಿಗೆ ಇಳಿಸಲಾಗಿದೆ. ಇದರಿಂದ ಶೇ.15 ಕ್ಕಿಂತಲೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಮುದಾಯದ ಅಭಿವೃದ್ದಿ ಕಷ್ಟಸಾಧ್ಯ.

ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದಿಂದ ಅರಿವು ಯೋಜನೆಯಡಿಯಲ್ಲಿ ನೀಡುತ್ತಿದ್ದ ಒಟ್ಟು 292 ಕೋಟಿ ರೂ. ಬದಲಾಗಿ ಒಟ್ಟು 71 ಕೋಟಿಗೆ ಕಡಿತ ಮಾಡಲಾಗಿದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಈ ಯೋಜನೆಯಡಿ ವಿದ್ಯಾರ್ಥಿಗಳಿಗೆ ಇನ್ನೂ 30 ಕೋಟಿ ರೂ. ಹಣ ಬಾಕಿ ಇದ್ದು, ಸರ್ಕಾರ ಸಮುದಾಯವನ್ನು ಶೈಕ್ಷಣಿಕವಾಗಿ ಹಿಂದಕ್ಕೆ ತಳ್ಳುವ ಪ್ರಯತ್ನ ನಡೆಸುತ್ತಿದೆ.

ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಮುಸ್ಲಿಂ ಸಮುದಾಯದ ಕಾಲೋನಿಯಲ್ಲಿ ಮೂಲಭೂತ ಸೌಲಭ್ಯಗಳಿಗಾಗಿ ನೀಡುತ್ತಿದ್ದ
ಅನುದಾನವನ್ನೂ ಸ್ಥಗಿತಗೊಳಿಸಲಾಗಿದೆ. ಅಲ್ಲದೇ ಬಿದಾಯಿ ಯೋಜನೆ ಪುನಃ ಜಾರಿಗೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ ವಕ್ಫ್ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಬೇಕು. ವಕ್ಪ್ ಆಸ್ತಿಗಳ ಸರ್ವೇ ಮತ್ತು ಗಣಕೀಕರಣ, ಖಬರ್‌ಸ್ತಾನ್‌ಗಳಿಗೆ ಜಾಗ ಮೀಸಲು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಿಗೆ ವೇಲ್ಫೇರ್ ಪಾರ್ಟಿ ಆಫ್ ಇಂಡಿಯಾ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ನಿವೃತ್ತ ಜಿಲ್ಲಾಧಿಕಾರಿ ಎಂ.ಮೆಹಬೂಬ್ ಪಾಷಾ, ಜಿಲ್ಲಾ ವಕ್ಪ್ ನಿವೃತ್ತ ಅಧಿಕಾರಿ ಮೊಹಮ್ಮದ್ ಆಸಿಫ್‌ವುಲ್ಲಾ, ತೆಹರಿಕ್-ಎ-ಉರ್ದು ಅದಬ್‌ನ ಸದಸ್ಯ ಮುಷ್ಕೂರ್ ಅಹಮದ್‌ಖಾನ್ ಸೇರಿದಂತೆ ಅನೇಕರು ಇದ್ದರು.

ಗದಗ-ಬೆಟಗೇರಿ ರೈಲು ನಿಲ್ದಾಣದಲ್ಲಿ ಆಕರ್ಷಕ ಹುಲಿ ಚಿತ್ರ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ

ಗದಗ-ಬೆಟಗೇರಿ ರೈಲು ನಿಲ್ದಾಣ ಸಂಪೂರ್ಣ ಪರಿಸರ ಸ್ನೇಹಿ ರೈಲು ನಿಲ್ದಾಣವಾಗಿ ಪರಿವರ್ತನೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ರೈಲು ನಿಲ್ದಾಣದ ಗೋಡೆಯ ಮೇಲೆ ಹಲವು ಆಕರ್ಷಕ ಚಿತ್ರಗಳನ್ನು ಬಿಡಿಸಲಾಗಿದೆ.

ನಿಲ್ದಾಣದ ಮೆಟ್ಟಿಲುಗಳ ಮೇಲೆ ದಾಳಿ ಮಾಡುತ್ತಿರುವ ಹುಲಿ ಹೋಲುವ ಆಕರ್ಷಕ ‘3ಡಿ ಚಿತ್ರ ‘ಸೃಷ್ಟಿ ಆರ್ಟ್ಸ ಅವರ ಕೈಚಳಕದಲ್ಲಿ ಮೂಡಿ ಬಂದಿದ್ದು, ನೋಡುಗರ ಮೈನವಿರೇಳಿಸುವಂತಿದೆ. ಅಲ್ಲದೇ, ಚಿತ್ರ ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.

ಊರು ಒತ್ತಟ್ಟಿಗಿರಲಿ, ಗ್ರಾ.ಪಂ.ನಲ್ಲೇ ಮೂಲಸೌಲಭ್ಯವಿಲ್ಲ!ಇಂಟರ್‌ನೆಟ್ ಸ್ಥಗಿತ, ಮೊಬೈಲ್ ವೈಫೈ ಗತಿ!

(ಅಭಿವೃದ್ಧಿ ಮರೆತ ಚಿಂಚಲಿ, ಭಾಗ-3)

ಚಿಂಚಲಿ ಪಂಚಾಯತಿ ಕಟ್ಟಡದ ಛಾವಣಿ ತೂತು- ಪಾಳುಬಿದ್ದ ಸಮುದಾಯ ಶೌಚಾಲಯಗಳು

ದುರ್ಗಪ್ಪ ಹೊಸಮನಿ


ವಿಜಯಸಾಕ್ಷಿ ವಿಶೇಷ, ಮುಳಗುಂದ

ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯ ಇತ್ತೀಚೆಗಷ್ಟೇ ನಡೆಸಿದ ‘ಮೀಷನ್ ಅಂತ್ಯೋದಯ-2020’ ಸಮೀಕ್ಷೆಯಲ್ಲಿ ಗದಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹುಲಕೋಟಿ ಸುಸಜ್ಜಿತ ಗ್ರಾಮವೆಂದು ಪ್ರಥಮ ಸ್ಥಾನ ಪಡೆದು ಇಡೀ ದೇಶಕ್ಕೆ ಮಾದರಿಯಾಗಿದೆ.

ದೇಶಾದ್ಯಂತ ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿರುವುದು ಜಿಲ್ಲೆಯ ಜನರ ಹೆಮ್ಮೆಯ ಸಂಗತಿ. ಆದರೆ, ಕೂಗಳತೆ ದೂರದಲ್ಲಿರುವ ಚಿಂಚಲಿ ಪಂಚಾಯತಿಗೆ ಮಾತ್ರ ಗ್ರಹಣ ಹಿಡಿದಿರುವುದು ವಿಪರ್ಯಾಸ.

ಗ್ರಾಮೀಣ ಜನರು ನಗರದ ಪ್ರದೇಶಗಳಿಗೆ ಅಲೆದಾಡಿ ಸುಸ್ತಾಗಬಾರದೆಂದು ಸರ್ಕಾರ ಸಕಾಲ ಯೋಜನೆಯಡಿ 100ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುತ್ತಿದ್ದು, ಅವುಗಳಲ್ಲಿ ಕೆಲವು ಸೇವೆಗಳಿಗೆ ಗ್ರಾ.ಪಂ. ಮಟ್ಟದಲ್ಲಿಯೇ ಅವಕಾಶ ಕಲ್ಪಿಸಿಕೊಡಲಾಗಿದೆ. ಆದರೆ, ಚಿಂಚಲಿ ಗ್ರಾ.ಪಂ.ನಲ್ಲಿ ಮಾತ್ರ ಈ ಎಲ್ಲ ಸೇವೆಗಳು ಸ್ಥಗಿತಗೊಂಡಿವೆ. ಜಾತಿ, ಆದಾಯ, ಉತಾರ, ರಹವಾಸಿ, ರೇಷನ್ ಕಾರ್ಡ್ ಮುಂತಾದವುಗಳಿಗೆ ಅರ್ಜಿ ಹಾಕಬೇಕಾದರೂ ಸುಮಾರು 8 ಕಿ.ಮೀ. ಪ್ರಯಾಣಿಸಬೇಕು.

ಶೌಚಾಲಯವೇ ಇಲ್ಲ!

ಮೂರ್ನಾಲ್ಕು ವರ್ಷಗಳಿಂದಲೇ ಚಿಂಚಲಿ ಬಯಲು ಮುಕ್ತ ಗ್ರಾ.ಪಂ. ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೂ, ಬಯಲು ಶೌಚ ನಿಂತಿಲ್ಲ. ಪಂಚಾಯತಿ ಪಕ್ಕದಲ್ಲೇ ಇರುವ ಕಲ್ಲೂರ, ನೀಲಗುಂದ, ಮುಳಗುಂದಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಯಲು ಶೌಚದ ಕೇಂದ್ರ ಸ್ಥಾನಗಳಾಗಿವೆ. ಮೂರು ಹಳ್ಳಿಗಳಲ್ಲಿ ಸಮುದಾಯ ಶೌಚಾಲಯಗಳಂತೂ ಪಾಳು ಬಿದ್ದಿವೆ. ಪಂಚಾಯತಿ ಆವರಣದಲ್ಲಿಯೇ ಹೆಸರಿಗೊಂದು ಶೌಚಾಲಯವಿಲ್ಲದಿರುವುದು ಜನ ನಾಚುವಂತೆ ಮಾಡಿದೆ.

ಛಾವಣಿ ತೂತು

ಗ್ರಾಮ ಪಂಚಾಯತಿಯ ಕಟ್ಟಡದ ಮಾಳಿಗೆಯ ಚಾವಣಿ ಹೆಂಚು ಒಡೆದು ಹೋಗಿವೆ. ಇದರಿಂದ ಮಳೆಗಾಲದಲ್ಲಿ ನೀರು, ಚಳಿಗಾಲದಲ್ಲಿ ಚಳಿ, ಬೇಸಿಗೆಯಲ್ಲಿ ಬಿಸಿಲು ಒಳ ನುಸುಳುತ್ತಿದ್ದರೂ ದುರಸ್ತಿ ಭಾಗ್ಯ ಸಿಕ್ಕಿಲ್ಲ. ಜನರು ಕುಳಿತುಕೊಳ್ಳಲು ಸೂಕ್ತವಾದ ವ್ಯವಸ್ಥೆ ಇಲ್ಲ. ಆವರಣದಲ್ಲಿಯೇ ದನಕರುಗಳನ್ನು ಕಟ್ಟುತ್ತಿರುವುದರಿಂದ ಗ್ರಾ.ಪಂ. ಗೋಶಾಲೆಯಾಗಿ ಪರಿವರ್ತನೆಯಾಗಿದೆ. ಕಚೇರಿಯಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾಗಳನ್ನು ಬೇಕಂತಲೇ ಕೆಡಿಸಿದ್ದಾರೆ ಎಂದು ಅಲ್ಲಿನ ಜನರು ಆರೋಪಿಸುತ್ತಿದ್ದಾರೆ.

ಮೊಬೈಲ್ ವೈಫೈಯೇ ಗತಿ

ಗ್ರಾ.ಪಂ.ನಲ್ಲಿ ಒದಗಿಸಲಾಗಿದ್ದ ಇಂಟರ್ನೆಟ್ ಸಂಪರ್ಕ ಸಂಪೂರ್ಣ ಸ್ತಬ್ಧವಾಗಿದೆ. ಹಾಗಾಗಿ ಮೊಬೈಲ್ ವೈಫೈ ಕನೆಕ್ಟ್ ಮಾಡಿಕೊಂಡು ಮಾಡಬೇಕಾದ ದುಸ್ಥತಿ ಬಂದದೊಗಿದೆ. ಸ್ಥಗಿತಗೊಂಡಿರುವ ಇಂಟರ್‌ನೆಟ್ ಸೌಲಭ್ಯವನ್ನು ಅಧಿಕಾರಿಗಳು ದುರಸ್ತಿ ಮಾಡಿಸಿಲ್ಲ. ಇದರ ನಿರ್ವಹಣೆಯ ಹೊಣೆ ಯಾರದು? ಇಂಟರ್ನೆಟ್ ವ್ಯವಸ್ಥೆ ಇಲ್ಲದಿರುವುದರಿಂದ ಖಾಸಗಿ ನೆಟ್ ಸೆಂಟರ್‌ಗಳಲ್ಲಿ ದುಡ್ಡು ಕೊಟ್ಟು ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಹೊಸ ಕಟ್ಟಡಕ್ಕೆ ಪ್ರಸ್ತಾವನೆ
ಹೊಸ ಕಟ್ಟಡಕ್ಕಾಗಿ ಜಿಲ್ಲಾ ಪಂಚಾಯತಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಹಣ ಮಂಜೂರಾತಿ ಆಗಬೇಕಿದೆ. ಎಂಜಿಎನ್‌ಆರ್‌ಇಜಿ ಯೋಜನೆಯಲ್ಲಿಯೂ ೧೦ ಲಕ್ಷ ರೂ.ವರೆಗೆ ಅನುದಾನ ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಕಲ್ಲೂರ ರಸ್ತೆಯಲ್ಲಿ ಪಂಚಾಯತಿ ನಿವೇಶನವಿದ್ದು, ಇಲ್ಲಿ ಕಟ್ಟಬೇಕೋ ಅಥವಾ ಹಳೆಯ ಕಟ್ಟಡವನ್ನೇ ಕೆಡವಿ ಹೊಸ ಕಟ್ಟಡ ನಿರ್ಮಿಸಬೇಕೋ ಎಂಬ ಗೊಂದಲವಿದೆ. ಹಾಗಾಗಿ, ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಅನಂತರ ಸಭೆಯಲ್ಲಿ ತೀರ್ಮಾನಿಸಲಾಗುವುದು.

ಎಸ್, ಎಸ್ ತೊಂಡಿಹಾಳ, ಪಿಡಿಒ,

ಕಲಾಪದಲ್ಲೇ ಕೂತು ಅಶ್ಲೀಲ ವಿಡಿಯೋ ನೋಡಿದ ಕಾಂಗ್ರೆಸ್ ಎಂಎಲ್ಸಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಹಿಂದೆ ಸದನದಲ್ಲಿ ಕೂತು ಬಿಜೆಪಿಯ ಮೂವರು ಶಾಸಕರು ಬ್ಲೂ ಫಿಲಂ ವೀಕ್ಷಣೆ ಮಾಡಿ ಇಡೀ ದೇಶಾದ್ಯಂತ ಕರ್ನಾಟಕದ ಮಾನ ಮರ್ಯಾದೆಯನ್ನ ತೆಗೆದಿದ್ದರು. ಇದು ರಾಜ್ಯದ ಪಾಲಿಗೆ ಕಪ್ಪು ಚುಕ್ಕೆಯಾಗೇ ಉಳಿಕೊಂಡಿದೆ.

ಇದೀಗ ಮತ್ತೊಬ್ಬ ಜನಪ್ರತಿನಿಧಿ ಕಲಾಪದಲ್ಲಿ ಕುಳಿತು ಅಶ್ಲೀಲ ವಿಡಿಯೋ ನೋಡುವ ಮೂಲಕ ಸದನದ ಮಾನ ಹರಾಜು ಹಾಕಿದ ಘಟನೆ ಶುಕ್ರವಾರ ಸಂಭವಿಸಿದೆ.

ಇಂದು ವಿಧಾನಪರಿಷತ್ ಕಲಾಪ ನಡೆಯುತ್ತಿತ್ತು. ಕಾಂಗ್ರೆಸ್ ಎಂಎಲ್ಸಿ ಪ್ರಕಾಶ್ ರಾಥೋಡ್ ಅವರು ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋ ನೋಡುತ್ತಿದ್ದ ದೃಶ್ಯ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇಡೀ ರಾಜ್ಯವನ್ನು ಪ್ರತಿನಿಧಿಸುವ ಶಾಸಕರುಗಳು ಕೂರುವ ಪ್ರಜಾ ದೇಗುಲದಲ್ಲಿ ಇಂತಹ ಅಸಹ್ಯ ವರ್ತನೆ ತೋರಿದ ಎಂಎಲ್​ಸಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ನೈತಿಕತೆಯ ಪ್ರಶ್ನೆಗೆ ಸ್ವತಃ ಆ ಎಂಎಲ್​ಸಿ ಜತೆಗೆ ಕಾಂಗ್ರೆಸ್​ ಪಕ್ಷದ ಮುಖಂಡರೂ ಸ್ಪಷ್ಟನೆ ನೀಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಈ ಘಟನೆ ಕುರಿತು ವಿಜಯ ಸಾಕ್ಷಿ ವರದಿಗಾರನ ಜತೆ ಮಾತನಾಡಿದ ಪ್ರಕಾಶ್ ರಾಠೋಡ್, ನಾನು ಶೇ.100ಕ್ಕೆ 101ರಷ್ಟು ಹೇಳುವೆ, ಅಶ್ಲೀಲ ವಿಡಿಯೋ ನೋಡಿಲ್ಲ. ನೂರಾರು ಗ್ರೂಪ್ ಗಳಲ್ಲಿ ಇದ್ದೇನೆ. ಸಾವಿರಾರು ವಿಡಿಯೋ ಇವೆ. ಸ್ಟೋರೇಜ್ ಫುಲ್ ಆಗಿತ್ತು. ಅದನ್ನ ಡಿಲೀಟ್ ಮಾಡ್ತಿದ್ದೆ. ಅದು ಅಶ್ಲೀಲ ವಿಡಿಯೋನಾ? ಅನ್ನೋದೂ ನನಗೆ ಗೊತ್ತಿಲ್ಲ ಎಂದರು.

ವರದಿ. ಡಾ.ಅಬ್ದುಲ್ ರಜಾಕ್

ಪೊಲೀಸರ ಭರ್ಜರಿ ಕಾರ್ಯಾಚರಣೆ: 3 ಲಕ್ಷ ರೂ.ಮೌಲ್ಯದ ಮೊಬೈಲ್ ಹಸ್ತಾಂತರ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಜೂನ್-2020 ರಿಂದ ಅಕ್ಟೋಬರ್-2020 ರವರೆಗಿನ ಒಟ್ಟು 64 ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ, 2 ಲಕ್ಷ 90 ಸಾವಿರ ರೂ. ಮೌಲ್ಯದ ಒಟ್ಟು 24 ಮೊಬೈಲ್ ಕಳ್ಳತನ ಪ್ರಕರಣಗಳನ್ನು ಮುಂಡರಗಿ ಪೊಲೀಸರು ಬೇಧಿಸಿದ್ದು, ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.

ಮೊಬೈಲ್ ಫೋನ್ ಕಳ್ಳತನ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಮುಂಡರಗಿ ಪೊಲೀಸರು, ನವನವೀನ ತಂತ್ರಜ್ಞಾನ ಹಾಗೂ ಸಿಡಿಆರ್ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರ ಮಾರ್ಗದರ್ಶನದಲ್ಲಿ, ಡಿಸಿಆರ್ಬಿಯ ಗುರು ಬೂದಿಹಾಳ ಮಾಹಿತಿಯಂತೆ ಸಾರ್ವಜನಿಕರು ಕಳೆದುಕೊಂಡಿದ್ದ ಸಕ್ರಿಯಗೊಂಡ ಸಿಮ್ ನಂಬರ್ ಟ್ರ್ಯಾಕ್ ಮಾಡಿ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಶುಕ್ರವಾರ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಕೊಂಡಿದ್ದ ಮಾಲೀಕರಿಗೆ ನರಗುಂದ ಡಿಎಸ್ಪಿ ಶಂಕರ್ ರಾಗಿ, ಸಿಪಿಐ ಸುಧೀರ್ ಬೆಂಕಿ, ಪಿಎಸ್ಐ ನೂರಜಾನ್ ಸಬರ ಹಸ್ತಾಂತರಿಸಿದರು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಗಳಾದ ಜಾಫರ್ ಬಚ್ಚೇರಿ, ನೀಲಕಂಠ ಭಂಗಿ, ಶರಣಪ್ಪ ನಾಗೇಂದ್ರಗಡ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ನರಗುಂದ ಡಿವೈಎಸ್ಪಿ ಶಂಕರ ರಾಗಿ ಅವರು, ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: Content is protected !!