Home Blog Page 3142

ಜುಲೈ 16ರಂದು ಸಿಎಂ ಬಿಎಸ್ ವೈ ಜೊತೆಗೆ ಪ್ರಧಾನಿ ವಿಡಿಯೋ ಸಂವಾದ

  • ಕೊರೊನಾ 3ನೇ ಅಲೆ ನಿಯಂತ್ರಣಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಚರ್ಚೆ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ 3ನೇ ಅಲೆ ತಡೆಯುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಜುಲೈ 16) 6 ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ರಾಜ್ಯಗಳಲ್ಲಿನ ಸಧ್ಯದ ಕೊರೊನಾ ಪರಿಸ್ಥಿತಿ ಮತ್ತು ನಿರೀಕ್ಷಿತ 3ನೇ ಅಲೆ ತಡೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಲಿದ್ದಾರೆ.

ಮಂಗಳವಾರ ಈಶಾನ್ಯ ಭಾಗದ 8 ರಾಜ್ಯಗಳ ಜೊತೆ ಚರ್ಚೆ ನಡೆಸಿದ ಪ್ರಧಾನಿ ಕೊರೊನಾ ನಿರ್ಲಕ್ಷ ಮಾಡದಂತೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರದ ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ  ಪಾಲ್ಗೊಳ್ಳಲಿದ್ದಾರೆ. ಜೊತೆಗೆ ತಮಿಳುನಾಡು, ಕೇರಳ, ಆಂದ್ರಪ್ರದೇಶ, ಮಹಾರಾಷ್ಟ್ರ, ಓಡಿಸ್ಸಾ ಮುಖ್ಯಮಂತ್ರಿಗಳು ಸಹ ಭಾಗವಹಿಸುವರು.

ಜುಲೈ 19ರಂದು ಕರ್ನಾಟಕದಲ್ಲಿ ಅನ್ ಲಾಕ್ 3.O ಅಂತ್ಯಗೊಳ್ಳಲಿದ್ದು, ಮುಂದೇನು ಎನ್ನುವ ಪ್ರಶ್ನೆಗೂ ಮೋದಿ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಪ್ರಕಟಿಸಲಿದ್ದಾರೆ.

ಅನ್ ಲಾಕ್ ನಂತರ ವಿವಿಧ ರಾಜ್ಯಗಳಲ್ಲಿ ಪ್ರವಾಸಿ ತಾಣಗಳಲ್ಲಿ ಜನದಟ್ಟಣೆ ಹೆಚ್ಚುತ್ತಿರುವ ಕುರಿತು ಪ್ರಧಾನಿ ಮೋದಿ ಈಗಾಗಲೆ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಮತ್ತೆ ಲಾಕ್ ಡೌನ್ ಅಥವಾ ಇನ್ನಷ್ಟು ಕಠಿಣ ಕ್ರಮದ ಕುರಿತು ಸಲಹೆ ನೀಡುವ ಸಾಧ್ಯತೆ ಇದೆ.

ನಿರ್ಲಕ್ಷ್ಯ ತೋರಿದರೆ ಮತ್ತೆ ಲಾಕ್ ಡೌನ್; ಸಚಿವ ಸುಧಾಕರ ಎಚ್ಚರಿಕೆ

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ

ಕೊರೊನಾ ಬಗ್ಗೆ ಮೈ ಮರೆತರೆ ಮತ್ತೆ ಲಾಕ್‍ಡೌನ್ ಮತ್ತು ನೈಟ್ ಕರ್ಫ್ಯೂ ಮುಂದುವರಿಸಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಕೆ.ಸುಧಾಕರ್ ಎಚ್ಚರಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಆರೋಗ್ಯ ಸಚಿವರು, ದೇವಸ್ಥಾನ, ಮಾರುಕಟ್ಟೆಗಳಲ್ಲಿ
ಜನಜಂಗುಳಿ ಕಂಡುಬರುತ್ತಿದೆ. ಜನದಟ್ಟಣೆ ಕಂಡು ಭಯವಾಗುತ್ತಿದೆ. ಮದುವೆಗೆ 100 ಜನರಿಗೆ ಅನುಮತಿ ನೀಡಿದ್ದರೂ 500 ಜನರು ಸೇರುತ್ತಿದ್ದಾರೆ. ಕೊರೊನಾ 2ನೇ ಅಲೆ ಕಡಿಮೆ ಆಗಿದ್ದರೂ ಮೂರನೇ ಅಲೆ ಬರೋದಿಲ್ಲ ಅಂತೇನಿಲ್ಲ. ಆದರೂ ಜನರು ಮುನ್ನೆಚ್ಚರಿಕೆ ವಹಿಸದೇ ನಿರ್ಲಕ್ಷ್ಯ ತೋರಿಸುತ್ತಿರುವುದು ಕಳವಳ ಮೂಡಿಸುತ್ತಿದೆ ಎಂದರು.

ಲಸಿಕೆ ಹಾಕಿಸಿಕೊಂಡಿದ್ದೇವೆ ಎಂದು ಬೇಕಾಬಿಟ್ಟಿಯಾಗಿ ಓಡಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಜ್ಯದ ಜನತೆಗೆ ಆರೋಗ್ಯ ಸಚಿವರು ಎಚ್ಚರಿಕೆ ನೀಡಿದ್ದಾರೆ.

ಟಂಟಂ ಪಲ್ಟಿ; ಸ್ಥಳದಲ್ಲೇ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ವಿಜಯಸಾಕ್ಷಿ ಸುದ್ದಿ, ಗದಗ

ವೇಗವಾಗಿ ಚಲಿಸುತ್ತಿದ್ದ ಟಂಟಂಗೆ ನಾಯಿ ಅಡ್ಡಬಂದ ಪರಿಣಾಮ ಟಂಟಂ ಪಲ್ಟಿಯಾಗಿ ಓರ್ವ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ಗದಗ ತಾಲೂಕಿನ ನರಸಾಪುರದ ಗ್ರಾಮದ ಬಳಿ ನಡೆದಿದೆ.

ರೋಣ ತಾಲೂಕಿನ ನರೇಗಲ್ ಗ್ರಾಮದ ಫಕ್ರುದ್ಧಿನ ರೋಣದ (31) ಸ್ಥಳದಲ್ಲೇ ಮೃತಪಟ್ಟ ದುರ್ಧೈವಿ. ಗದಗನಿಂದ ನರೇಗಲ್ ಗೆ ಹೊರಟಿದ್ದ ಟಂಟಂನಲ್ಲಿ ಮೂವರಿದ್ದರು. ಅಪಘಾತದಲ್ಲಿ ಫಕ್ರುದ್ದಿನ ಎಂಬ ವ್ಯಕ್ತಿಯ ತೆಲೆಗೆ ತೀವ್ರ ಪೆಟ್ಟುಬಿದ್ದು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗೆ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅತಿಯಾದ ವೇಗವೆ ಈ ದುರಂತಕ್ಕೆ ಕಾರಣ ಎನ್ನಲಾಗಿದೆ. ಗದಗ ಟ್ರಾಫಿಕ್ ಪೊಲೀಸ್ ಠಾಣೆಯ ಪಿಎಸ್ಐ ಉಮಾ ಎಚ್ ವಗ್ಗರ್, ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮನೆಗಳ ಮೇಲೆ ದಾಳಿ; ರೌಡಿಗಳಿಗೆ ಶಾಕ್ ಕೊಟ್ಟ ಪೊಲೀಸರು

ಮನೆಗಳ ಮೇಲೆ ದಾಳಿ ಮಾಡಿ, ಶಸ್ತ್ರಾಸ್ತ್ರಗಳಿಗಾಗಿ ಶೋಧ- 9 ರೌಡಿಗಳ ವಿರುದ್ಧ ಎಫ್ಐಆರ್


ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಸಮಾಜ ವಿರೋಧಿ ಚಟುವಟಿಕೆ ನಡೆಸುವವರನ್ನು ಹದ್ದುಬಸ್ತಿನಲ್ಲಿಡಲು ಮಂಗಳವಾರ ಬೆಳಗ್ಗೆ 5 ಗಂಟೆಗೆ ಪೊಲೀಸರು ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದರು. ಸಕ್ರಿಯ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ, ಶಸ್ತ್ರಾಸ್ತ್ರ ಮತ್ತು ಮಾದಕ ವಸ್ತುಗಳು ಇರುವ ಬಗ್ಗೆ ಶೋಧ ನಡೆಸಲಾಯಿತು.

ಎಲ್ಲ 15 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆ ತನಿಖಾಧಿಕಾರಿಗಳು, ಸಿಬ್ಬಂದಿ ಮತ್ತು ಹುಬ್ಬಳ್ಳಿ ಧಾರವಾಡ ನಗರದ ಎಸಿಪಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಮಾರಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಕ್ಕಾಗಿ 9 ರೌಡಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 600ಕ್ಕೂ ಹೆಚ್ಚು ರೌಡಿಗಳನ್ನು ಪೊಲೀಸ್ ಠಾಣೆಗೆ ಕರೆತಂದು ಎಚ್ಚರಿಕೆ ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮರಿ ಪುಢಾರಿಯ ಧಮ್ಕಿ; ಪೊಲೀಸರ ಮೊರೆ ಹೋದ ಆಟೋ ಚಾಲಕರು!

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ಲಾಕ್ ಡೌನ್‌ ಜನರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಎರಡು ತಿಂಗಳ ಕಾಲ ಎಲ್ಲವೂ ಲಾಕ್ ಆದ ಪರಿಣಾಮ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಸಂಕಷ್ಟದ ಜೀವನ ನಡೆಸಬೇಕಾಯಿತು. ಲಾಕ್ ಡೌನ್ ಸಡಿಲಗೊಂಡ ಬಳಿಕ ಜೀವನದ ಬಂಡಿ‌ ನಿಧಾನವಾಗಿ ಹಳಿಗೆ ಮರಳುತ್ತಿದೆ. ಜನ ದುಡಿದು ತಿನ್ನೋದಕ್ಕೆ ಶುರು ಮಾಡಿದ್ದಾರೆ.

ಆದರೆ, ಗದಗ ನಗರದಲ್ಲಿ ಮರಿ ಪುಢಾರಿಯೊಬ್ಬ ದುಡಿದು ತಿನ್ನೋರ ತಟ್ಟೆಗೆ ಕೈ ಹಾಕಿದ್ದು, ಆಟೋ ಚಾಲಕರಿಗೆ ಧಮ್ಕಿ ಹಾಕಿ ಕಿರುಕುಳ ನೀಡುತ್ತಿದ್ದಾನೆಂಬ ಆರೋಪ ಕೇಳಿ ಬಂದಿದೆ. ಈತನ ಉಪಟಳದಿಂದ ರೋಸಿಹೋದ ಆಟೋ ಚಾಲಕರು ರಕ್ಷಣೆ ಕೋರಿ ಪೊಲೀಸರ ಮೊರೆ ಹೋಗಿದ್ದಾರೆ.

ನಗರದ ಸೆಟಲ್ಮೆಂಟ್ ಏರಿಯಾ ನಿವಾಸಿ ರೋಹಿತ್ ಕಟ್ಟಿಮನಿ ಎಂಬ ಯುವಕ ಎಸ್.ಎಮ್. ಕೃಷ್ಣ ನಗರದ ಆಟೋ ಸ್ಟ್ಯಾಂಡ್ ಗೆ ನುಗ್ಗಿ ಪುಂಡಾಟಿಕೆ ಮಾಡುತ್ತಿದ್ದಾನೆ. ಆಟೋ ಚಾಲಕರಿಗೆ ಧಮ್ಕಿ‌ ಹಾಕುವುದು, ಪೀಡಿಸುವುದನ್ನೇ ಈತ ಕಾಯಕ ಮಾಡ್ಕೊಂಡಿದ್ದಾನೆ. ಕಲ್ಲು ಎತ್ತಿ ಹಾಕಿ ಆಟೋ ಗ್ಲಾಸ್ ಒಡೆಯುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಈತನ ಉಪಟಳದಿಂದ ದಂಧೆ ನಡೆಸುವುದೇ ಕಷ್ಟವಾಗಿದೆ ಎಂದು ಕೆಲ ಚಾಲಕರು ಆರೋಪಿಸಿದ್ದಾರೆ.

ಈತನ ಉಪಟಳದಿಂದ ರೋಸಿ ಹೋದ ಎಸ್.ಎಮ್. ಕೃಷ್ಣ ಬಡಾವಣೆ ಆಟೋ ಚಾಲಕರು ಆಟೋಗಳೊಂದಿಗೆ ಗ್ರಾಮಾಂತರ ಪೊಲೀಸ್ ಠಾಣೆಗೆ ಆಗಮಿಸಿ ಮರಿಪುಢಾರಿಯ ಉಪಟಳಕ್ಕೆ ಬ್ರೇಕ್ ಹಾಕುವಂತೆ ಪಿಎಸ್ಐ ಅವರಿಗೆ ಮನವಿ ಮಾಡಿದ್ದಾರೆ.

ನಗರದಲ್ಲಿ ಆಟೋ ಚಾಲಕರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ರಾತ್ರಿ ಹೊತ್ತು ಕಿಡಿಗೇಡಿಗಳು ಟಾಯರ್ ಸೇರಿ ಬಿಡಿಭಾಗ ಕಳವು ಮಾಡುತ್ತಿದ್ದಾರೆ. ಚಾಲಕರಿಗೆ ಜೀವ ಬೆದರಿಕೆ, ಮನೆಯ ಮಹಿಳೆಯರ ಅಪಹರಣ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದರಿಂದ ಆಟೋ ಚಾಲಕರು ಜೀವಭಯದಲ್ಲಿ ದಿನ ಕಳೆಯುವಂತಾಗಿದೆ.
ಪೊಲೀಸರು ಇಂತಹ ಮರಿ ಪುಢಾರಿಗಳ ವಿರುದ್ದ ಕ್ರಮ ಕೈಗೊಂಡು ಆಟೋ ಚಾಲಕರಿಗೆ ರಕ್ಷಣೆ ನೀಡಬೇಕು. ಇಲ್ಲದಿದ್ದರೆ ಜಿಲ್ಲೆಯ ಎಲ್ಲ ಆಟೋ ಚಾಲಕರು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬೀಗ ಮುರಿದು ದೇವಸ್ಥಾನದಲ್ಲಿ ಕಳ್ಳತನ

ವಿಜಯಸಾಕ್ಷಿ ಸುದ್ದಿ, ಹಾವೇರಿ

ತಾಲೂಕಿನ ನೀರಲಗಿ ಗ್ರಾಮದಲ್ಲಿ ದುರಗಮ್ಮ ದೇವಿ ದೇವಸ್ಥಾನಕ್ಕೆ ಕಳ್ಳರು ಕನ್ನ ಹಾಕಿದ್ದಾರೆ.
ನಿನ್ನೆ ರಾತ್ರಿ ದೇವಸ್ಥಾನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು ದೇವಿಯ ಕೊರಳಲ್ಲಿದ್ದ ಚಿನ್ನದ ತಾಳಿ, ಕಿರೀಟ ಸೇರಿದಂತೆ ಸುಮಾರು ಇಪ್ಪತ್ತು ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಈ ಕುರಿತು ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿವೈಡರ್ ಜಂಪ್ ಮಾಡಿ ಎರಡು ಲಾರಿಗಳಿಗೆ ಅಪ್ಪಳಿಸಿದ ಕಂಟೇನರ್; ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ನಗರದ ಹೊರವಲಯದ ಕಾಕತಿ ಬಳಿಯ ವಂಟಮೂರಿ ಘಾಟ್ ನಲ್ಲಿ ಲಾರಿಯೊಂದು ಭೀಕರ ಅಪಘಾತಕ್ಕೆ ಒಳಗಾಗಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಡರಾತ್ರಿ ನಡೆದಿದೆ‌.

ಉತ್ತರ ಪ್ರದೇಶದ ನೀರಜ್, ಮಹಾರಾಷ್ಟ್ರ ಬೀಡ ಜಿಲ್ಲೆಯ ರಾಜೇಂದ್ರ ದೋಹಿಪಡೆ ಎಂಬಾತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ‌.

ವಂಟಮೂರಿ ಘಾಟ್ ಇಳಿಜಾರಿನಿಂದ ಜೋರಾಗಿ ಬಂದ ಲಾರಿ ನಿಯಂತ್ರಣ ತಪ್ಪಿ, ಡಿವೈಡರ್ ಗೆ ಡಿಕ್ಕಿ ಹೊಡೆದು ಮತ್ತೊಂದು ಡಿವೈಡರ್ ಗೆ ಜಂಪ್ ಮಾಡಿ
ರಸ್ತೆ ಬದಿಗೆ ನಿಂತಿದ್ದ ಎರಡು ಲಾರಿಗಳಿಗೆ ಅಪ್ಪಳಿಸಿದ ಪರಿಣಾಮ ಇಬ್ಬರು ಮೃತಪಟ್ಟಿದ್ದಾರೆ.

ರಸ್ತೆಯಲ್ಲಿ ಲಾರಿಗಳ ಬಿಡಿಬಾಗಗಳು ಚಿಲ್ಲಾಪಿಲ್ಲಿಯಾಗಿವೆ. ಶಿಗ್ಗಾವಿ ಕಡೆಯಿಂದ ಮಹಾರಾಷ್ಟ್ರಕ್ಕೆ ಮೆಕ್ಕೆಜೋಳದ ಹಿಟ್ಟನ್ನು ತುಂಬಿಕೊಂಡು ಹೋಗುತ್ತಿತ್ತು ಎಂದು ತಿಳಿದು ಬಂದಿದೆ.

ತಡರಾತ್ರಿ ಸ್ಥಳಕ್ಕೆ ಧಾವಿಸಿದ ಕಾಕತಿ ಪೊಲೀಸರು ತಕ್ಷಣ ವಾಹನಗಳನ್ನು ತೆರವು ಮಾಡಿ, ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ಅನಕೂಲ ಮಾಡಿದ್ದಾರೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ‌.

ಕಳ್ಳತನ ಮಾಡುವಾಗಲೇ ಸಿಕ್ಕಿಬಿದ್ದ ಕಳ್ಳ; ಮತ್ತೆ ಜೈಲುಪಾಲಾದ ಖದೀಮ!

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಸ್ಟಾಪ್ ನರ್ಸ್ ಒಬ್ಬರ ಮನೆಯಲ್ಲಿ ಕಳ್ಳತನ ಮಾಡುವಾಗ ರೂಡಿಗತ ಕಳ್ಳನೊಬ್ಬ ಮತ್ತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಜೈಲು ಪಾಲಾದ ಘಟನೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಎ.ಡಿ. ನಗರದಲ್ಲಿ ಈ ಘಟನೆ ನಡೆದಿದೆ. ವಿನಾಯಕ ಕೊಪ್ಪಳ ಎಂಬುವರು ಹೂವಿನ ಅಡಗಲಿ ತಾಲೂಕಿನ ಕೊಂಬಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ್ ಆಗಿ ಕೆಲಸ ಮಾಡ್ತಿದ್ದಾರೆ. ಇವರು ಮುಂಡರಗಿಯಲ್ಲಿ‌ ನೆಲಸಿದ್ದರು. ಡ್ಯೂಟಿಗೆ ಹೋಗಿದ್ದ ಸಂದರ್ಭದಲ್ಲಿ ಮುಂಡರಗಿ ನಿವಾಸಿಯಾಗಿರೋ ಕಾರ್ತಿಕ ಅಪ್ಪಣ್ಣ ಕೊಂಪಿ ಎಂಬಾತ ಮನೆಯಲ್ಲಿ ಯಾರೂ ಇಲ್ಲದನ್ನ ಗಮನಿಸಿ ಹಾಡುಹಗಲೇ ಬೀಗ ಹೊಡೆದು ಒಳಗೆ ಹೊಕ್ಕಿದ್ದಾನೆ. ಒಳಗಡೆ ಹೋಗಿ ಯಾರೂ ಒಳಬರದಂತೆ ಬಂದೋಬಸ್ತ್ ಮಾಡಿಕೊಂಡು ಕಳ್ಳತನಕ್ಕೆ ಇಳಿದಿದ್ದ. ಇದೇ ವೇಳೆಗೆ ಡ್ಯೂಟಿಯಿಂದ ತಡವಾಗಿ ಬಂದ ನರ್ಸ್ ವಿನಾಯಕ ಅವರಿಗೆ ಒಳಗಡೆ ಯಾರೋ ಇದ್ದಿರೋದನ್ನ ಗಮನಿಸಿ ದಿಢೀರ್ ಹೊರಗಡೆಯಿಂದ ಬೀಗ ಹಾಕಿದ್ದಾರೆ. ಬಳಿಕ ಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಎಲ್ಲರೂ ಸೇರಿ ಪೊಲೀಸರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಕರೆಸಿ ಕಳ್ಳನನ್ನ ರೆಡ್ ಹ್ಯಾಂಡ್ ಆಗಿ ಒಪ್ಪಿಸಿದ್ದಾರೆ.

ಕಪಾಟಿನಲ್ಲಿ ಇದ್ದ 8700 ರೂ. ಯನ್ನ ಕದ್ದಿದ್ದ ಕಳ್ಳ ಪರಾರಿಯಾಗಿ ಮತ್ತೆ ಮಜಾ ಮಾಡಬೇಕು ಅನಕೊಂಡಿದ್ದ ಖದೀಮ ಮತ್ಯೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಈ ಹಿಂದೆ ಕೂಡ ಶಿರಹಟ್ಟಿ, ಗದಗ ಹಾಗೂ ಮುಂಡರಗಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಜೈಲು ಪಾಲಾಗಿದ್ದ ಅಸಾಮಿ ಕಾರ್ತಿಕ ಮತ್ತೆ ಈಗ ಜೈಲು ಪಾಲಾಗಿದ್ದಾನೆ. ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ-ಕಾಂಗ್ರೆಸ್ ಮುಖಂಡರ ಮನೆಯಲ್ಲಿ ಅನ್ನಭಾಗ್ಯ ಅಕ್ಕಿ ಪತ್ತೆ!

ವಿಜಯಸಾಕ್ಷಿ ಸುದ್ದಿ, ಗದಗ

ಲಾಕ್ಡೌನ್ ನಲ್ಲಿ ಬಡ ಜನರಿಗೆ ಅನುಕೂಲವಾಗಲಿ ಅಂತ ಸರಕಾರ ಕೊಟ್ಟಿರುವ ಅನ್ನಭಾಗ್ಯ ಅಕ್ಕಿ ಖದೀಮರ ಪಾಲಾಗುತ್ತಿದೆ. ಪಡಿತರ ಅಂಗಡಿಯಲ್ಲಿ ಕೊಟ್ಟ ಅಕ್ಕಿಯನ್ನು ಖದೀಮರು ಹೆಚ್ಚಿನ ಬೆಲೆಗೆ ಖರೀದಿಸಿ ಹಾವೇರಿ, ಹುಬ್ಬಳ್ಳಿ ಮೂಲಕ ಮುಂಬೈಗೆ ಕಳುಹಿಸುತ್ತಾರೆ.

ಈ ದಂದೆಯಲ್ಲಿ ಆ ಪಕ್ಷ-ಈ ಪಕ್ಷ ಅಂತ ಇಲ್ಲ. ಬಹುತೇಕ ರಾಜಕೀಯ ಬಲ ಇದ್ದವರೇ ಈ ದಂದೆಯಲ್ಲಿ ತೊಡಗುವ ಸಾಧ್ಯತೆ ಹೆಚ್ಚು.

ಹೀಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದ ಖಚಿತ ಮಾಹಿತಿ ಪಡೆದ ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಟಿ ಮಹಾಂತೇಶ್ ಹಾಗೂ ಸಿಬ್ಬಂದಿ ಜಿಲ್ಲೆಯ ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದಲ್ಲಿ ಕಾರ್ಯಚರಣೆ ನಡೆಸಿ ಲಕ್ಷಾಂತರ ರೂ.ಮೌಲ್ಯದ ಅನ್ನಭಾಗ್ಯ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.

ಹಿರೇವಡ್ಡಟ್ಟಿ ಗ್ರಾಮದ ಬಿಜೆಪಿ ಮುಖಂಡ, ಗುತ್ತಿಗೆದಾರ ಆನಂದ ನಾಗರಳ್ಳಿ, ಕಾಂಗ್ರೆಸ್ ಮುಖಂಡ ಮಹಬೂಬಸಾಬ್ ಮುಂಡರಗಿ, ಹಾಗೂ ಷಣ್ಮುಖಪ್ಪ ಎಂಬುವವರು ಮನೆ ಕಮ್ ಅಂಗಡಿಗಳಲ್ಲಿ ಈ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದ್ದರು ಎನ್ನಲಾಗಿದೆ.

ಆನಂದ ನಾಗರಳ್ಳಿ ಎಂಬಾತ ಹಿರೇವಡ್ಡಟ್ಟಿ ಗ್ರಾಮದ ವಿವಿಧೆಡೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಖರೀದಿಸಿ ಗದಗ ಮೂಲದ ವ್ಯಕ್ತಿಗೆ ಸಾಗಿಸುತ್ತಿದ್ದ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸುಮಾರು 60 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿರುವ ಪೊಲೀಸರು ಆಹಾರ ಇಲಾಖೆಯ ಸುಪರ್ದಿಗೆ ಒಪ್ಪಿಸಿದ್ದು‌, ಮುಂಡರಗಿ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!