Home Blog Page 3149

ವೃದ್ದೆಯನ್ನು ಕಾಡಿನ ನಡು ರಸ್ತೆಯಲ್ಲಿಯೇ ಬಿಟ್ಟು ಹೋದ ಚಾಲಕ!

ವಿಜಯಸಾಕ್ಷಿ ಸುದ್ದಿ, ಮಡಿಕೇರಿ

ಜಿಲ್ಲೆಯಲ್ಲಿನ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿದ್ದ ವೃದ್ಧೆಯೊಬ್ಬರನ್ನು ಆಂಬುಲೆನ್ಸ್ ಚಾಲಕ ನಡು ರಸ್ತೆಯಲ್ಲಿಯೇ ಬಿಟ್ಟು ಹೋದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ 60 ವರ್ಷದ ಪೊನ್ನಮ್ಮ ಎಂಬುವವರು ಉಸಿರಾಟದ ತೊಂದರೆಯಿಂದಾಗಿ ಮೇ. 15ರಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಅವರು ಗುಣಮುಖರಾಗಿದ್ದರು. ಆ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು.

ಆದರೆ, ಪೊನ್ನಮ್ಮ ಅವರನ್ನು ಕರೆತಂದ ಆಂಬುಲೆನ್ಸ್ ಚಾಲಕ ಮಾತ್ರ ಅವರನ್ನು ಮನೆಯವರೆಗೆ ಬಿಡದೆ ಐಗೂರು ಜಂಕ್ಷನ್ನರಲ್ಲಿ ಬಿಟ್ಟು ತೆರಳಿದ್ದಾನೆ. ಅಲ್ಲಿಂದ ವೃದ್ಧೆಯ ಮನೆ 2 ಕಿ.ಮೀ ದೂರವಿದೆ. ಅನಿವಾರ್ಯವಾಗಿ ವೃದ್ಧೆ ನಡೆದುಕೊಂಡೆ ತೆರಳಿದ್ದಾರೆ.
ಲಾಕ್‍ ಡೌನ್ ಜಾರಿಯಲ್ಲಿರುವುದರಿಂದ ಹಾಗೂ ಸಂಜೆ ಹೊತ್ತು ಆಗಿದ್ದರಿಂದಾಗಿ ಈ ರಸ್ತೆಯಲ್ಲಿ ಯಾವುದೇ ಜನ ಸಂಚಾರ ಇರಲಿಲ್ಲ. ಇಲ್ಲಿ ಸಂಜೆ ಹೊತ್ತು ಕಾಡಾನೆಗಳ ಭಯ ಕೂಡ ಇರುತ್ತದೆ. ಒಂದು ವೇಳೆ ವೃದ್ಧೆ ಭಯದಿಂದ ಹಾಗೂ ಅಸ್ವಸ್ಥತೆಯಿಂದ ನಿತ್ರಾಣಗೊಂಡರೆ ಯಾರು ಹೊಣೆ? ಅಲ್ಲದೇ, ಆಸ್ಪತ್ರೆಯಿಂದ ಬಿಡುಗಡೆಯಾದ ಕುರಿತು ಕೂಡ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾದಿಂದಾಗಿ ವೃದ್ಧರು, ಮಹಿಳೆಯರು, ಯುವತಿಯರು, ಮಕ್ಕಳು ಚಿಕಿತ್ಸೆ ಪಡೆಯುತ್ತಿರುತ್ತಾರೆ. ಅವರನ್ನು ದಾರಿ ಮಧ್ಯೆ ಹೀಗೆ ಬಿಟ್ಟು ಹೋದರೆ ಏನು ಮಾಡುವುದು? ಆಸ್ಪತ್ರೆಗಳಿಗೆ ಹಾಗೂ ಚಾಲಕರಿಗೆ ಪರಿಜ್ಞಾನವಿರಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಂತ್ಯ ಸಂಸ್ಕಾರಕ್ಕೆ ಅಡ್ಡಿ; ರಸ್ತೆಯಲ್ಲಿ ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು!

ವಿಜಯಸಾಕ್ಷಿ ಸುದ್ದಿ, ಗದಗ

ಖಾಸಗಿ ಆಸ್ಪತ್ರೆಯ ಯಡವಟ್ಟು ಹಾಗೂ ಗ್ರಾಮಸ್ಥರ ಆಮಾನವೀಯತೆಯಿಂದಾಗಿ ಇಲ್ಲೊಂದು ಕುಟುಂಬ ಕಣ್ಣೀರು ಹಾಕುವಂತಾಗಿದೆ. ಅಂತ್ಯ ಸಂಸ್ಕಾರಕ್ಕೆಂದು ಬಂದ ಕುಟುಂಬಸ್ಥರಿಗೆ ಗ್ರಾಮಸ್ಥರು ಗ್ರಾಮದೊಳಗೆ ಬಿಡುತ್ತಿಲ್ಲ.

ಜಿಲ್ಲೆಯ ರೋಣ ತಾಲೂಕಿನ ಬಾಸಲಾಪೂರ ಗ್ರಾಮದಲ್ಲಿಯೇ ಇಂತಹ ಮನಕಲುಕುವ ಘಟನೆ ನಡೆದಿದೆ. ಗ್ರಾಮದಲ್ಲಿನ ವ್ಯಕ್ತಿಯೊಬ್ಬರು ಬಾದಾಮಿ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈ ವ್ಯಕ್ತಿ ಕೊರೊನಾದಿಂದ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದರು ಎನ್ನಲಾಗಿದೆ.
ಆದರೆ, ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಮಾತ್ರ ಕೋವಿಡ್ ನ ಯಾವುದೇ ನಿಯಮ ಪಾಲಿಸದೆ ಶವ ಹಸ್ತಾಂತರಿಸಿದ್ದರು.

ಆಂಬುಲೆನ್ಸ್ ನಲ್ಲಿ ಸ್ವಗ್ರಾಮಕ್ಕೆ ಶವ ಆಗಮಿಸಿತ್ತು. ಶವ ಬಂದ ಕೂಡಲೇ ಗ್ರಾಮಸ್ಥರು, ಕೋವಿಡ್ ನಿಂದಲೇ ಈ ವ್ಯಕ್ತಿ ಸಾವನ್ನಪ್ಪಿದ್ದಾರೆ. ಹೀಗಾಗಿ ಒಳಗೆ ಪ್ರವೇಶ ಮಾಡಲು ಅವಕಾಶ ನೀಡುವುದಿಲ್ಲ. ಎಂದು ವಾಹನವನ್ನು ಹೊರಗಡೆಯೇ ನಿಲ್ಲಿಸಿದ್ದಾರೆ.
ಹೀಗಾಗಿ ಶವದ ಜೊತೆಗೆ ರಸ್ತೆಯಲ್ಲಿಯೇ ಕುಟುಂಬಸ್ಥರು ಕಣ್ಣೀರು ಹಾಕುವಂತಾಯಿತು. ಅಲ್ಲದೇ, ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಕೂಡ ಗ್ರಾಮಸ್ಥರು ಬಿಡುತ್ತಿಲ್ಲ. ಹೀಗಾಗಿ ಕುಟುಂಬಸ್ಥರು ಆಂಬುಲೆನ್ಸ್ ನಲ್ಲಿಯೇ ಶವ ಇಟ್ಟುಕೊಂಡು ಕಣ್ಣೀರು ಹಾಕುತ್ತಿದ್ದಾರೆ.

ಮಹಾಮಾರಿಗೆ ವೈದ್ಯ ಮತ್ತು ತಾಯಿ ಬಲಿ!

ವಿಜಯಸಾಕ್ಷಿ ಸುದ್ದಿ, ಬೆಳಗಾವಿ

ಕೊರೊನಾ ದೇಶಕ್ಕೆ ಕಾಲಿಟ್ಟ ದಿನದಿಂದಲೂ ವೈದ್ಯರು ಜೀವದ ಹಂಗು ತೊರೆದು ಹಗಲಿರುಳು ಸೇವೆ ಮಾಡುತ್ತಿದ್ದಾರೆ. ಅಪಾಯವಿದೆ ಎಂದು ತಿಳಿದಿದ್ದರೂ ಯಾವುದನ್ನು ಅವರು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ತಮ್ಮ ಜೀವ ಅಷ್ಟೇ ಅಲ್ಲ, ತಮ್ಮ ಕುಟುಂಬಸ್ಥರ ಜೀವವನ್ನು ಪಣಕ್ಕಿಟ್ಟು ಅವರು ಮಹಾಮಾರಿಯ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಹೀಗೆ ಸೇವೆ ಮಾಡುತ್ತ ಹಲವರು ವೈದ್ಯರು ಇಹಲೋಕ ಕೂಡ ತ್ಯಜಿಸಿದ್ದಾರೆ. ಹೀಗೆ ಬೆಳಗಾವಿ ಚಿಲ್ಡ್ರನ್ಸ್ ಪ್ರೈವೆಟ್ ಲಿಮಿಟೆಡ್ ಆಸ್ಪತ್ರೆಯಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿ ಕೆಲಸ ಮಾಡುತ್ತಿದ್ದ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಜೊತೆಗೆ ಅವರ ತಾಯಿಯು ಮೃತಪಟ್ಟಿದ್ದಾರೆ.

ವೈದ್ಯ ಹಾಗೂ ತಾಯಿ ಕೇವಲ ನಾಲ್ಕು ದಿನಗಳ ಅಂತರದಲ್ಲಿಯೇ ಮಹಾಮಾರಿಗೆ ಬಲಿಯಾಗಿದ್ದಾರೆ. ಡಾ.ಮಹೇಶ್ ಪಾಟೀಲ್ ಕರ್ತವ್ಯ ನಿರ್ವಹಿಸುತ್ತಿದ್ದರು. ಸದ್ಯ ಅದಕ್ಕೆ ಬಲಿಯಾಗಿದ್ದಾರೆ. ಅವರಿಗೆ ಒಂದೂವರೆ ವರ್ಷದ ಹೆಣ್ಣು ಮಗು ಹಾಗೂ ಪತ್ನಿ ಇದ್ದರು.
ಅವರ ತಾಯಿ ಸುಮಿತ್ರಾ ಪಾಟೀಲ್ ಮೃತಪಟ್ಟಿದ್ದಾರೆ. ಇದೀಗ ಅನಾರೋಗ್ಯದಿಂದ ತಂದೆ ಕಲಗೌಡ ಪಾಟೀಲ್ ಹಾಸಿಗೆ ಹಿಡಿದಿದ್ದಾರೆ. ಕೊವಿಡ್ ಸೋಂಕಿತ ಮಗುವಿಗೆ ಚಿಕಿತ್ಸೆ ನೀಡಿದ್ದ ಡಾ. ಮಹೇಶ್ ಪಾಟೀಲ್ ಅವರಿಗೆ ಸೋಂಕು ತಗುಲಿತ್ತು. ಹೀಗಾಗಿ ಅವರು ಹೋಂ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಗ ಡಾ. ಮಹೇಶ್ ಅವರ ತಂದೆ ಹಾಗೂ ತಾಯಿಗೂ ಸೋಂಕು ಹರಡಿತ್ತು. ಉಸಿರಾಟದ ತೊಂದರೆಯಿಂದ ಮೊದಲು ಮಹೇಶ್ ಆಸ್ಪತ್ರೆಗೆ ದಾಖಲಾಗಿದ್ದರು. ಮಗ ದಾಖಲಾದ ಎರಡೇ ದಿನಕ್ಕೆ ಮತ್ತೊಂದು ಆಸ್ಪತ್ರೆಗೆ ತಾಯಿ ಸುಮಿತ್ರಾ ಪಾಟೀಲ್ ದಾಖಲಾಗಿದ್ದರು.
ಆದರೆ, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಸುಮಿತ್ರಾ ಕೊನೆಯುಸಿರೆಳೆದಿದ್ದರು. ತಾಯಿ ಸಾವನ್ನಪ್ಪಿದ ನಾಲ್ಕು ದಿನಕ್ಕೆ ಮಗ ಡಾ.ಮಹೇಶ್ ಪಾಟೀಲ್ (37) ಸಾವನ್ನಪ್ಪಿದ್ದಾರೆ. ಆದರೆ, ತಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೈದ್ಯ ಕೊರೊನಾಗೆ ಬಲಿಯಾದರೂ ಖಾಸಗಿ ಆಸ್ಪತ್ರೆ ಆಡಳಿತ ಮಂಡಳಿ ಮಾತ್ರ ವೈದ್ಯರ ಕುಟುಂಬಕ್ಕೆ ನೆರವಿಗೆ ಬಂದಿಲ್ಲ.

ಕೇಸರೀಕರಣವಾಗುತ್ತಿದೆಯೇ ಗ್ರಾಮೀಣಾಭಿವೃದ್ಧಿ ವಿವಿ?

ಗ್ರಾವಿವಿ ಬಲಪಂಥೀಯ ವಿಚಾರಧಾರೆ ಹರಿವಿನ ಕೇಂದ್ರವೇ?

ಬಿ.ಎಲ್. ಸಂತೋಷ್ ಭಾಷಣದ ವೀಡಿಯೋ ಲಿಂಕ್ ಹಂಚಿಕೊಳ್ಳಲು ಮನವಿ

ಹಲವರ ಆಕ್ಷೇಪ: ವಿವಿಯ ಮುಖವಾಣಿಯಲ್ಲ ಎಂದ ಕುಲಪತಿ

ವಿಜಯಸಾಕ್ಷಿ ಸುದ್ದಿ, ಗದಗ

ನಗರದಲ್ಲಿರುವ ರಾಜ್ಯದ ಏಕೈಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯ ತನ್ನ ಮೂಲ‌‌ ಆಶಯಗಳನ್ನು ಬದಿಗೊತ್ತಿ, ಬಲಪಂಥೀಯ ವಿಚಾರಧಾರೆಗಳನ್ನು ಹರಿಬಿಡುವ ಕೇಂದ್ರವಾಗುತ್ತಿದೆಯೇ ಎನ್ನುವ ಪ್ರಶ್ನೆಯೀಗ ಎದ್ದಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ, ವಿವಿ ಹಾಗೂ ಮಾಧ್ಯಮ ಮಿತ್ರರ ಸಂವಹನಕ್ಕಾಗಿ ಇರುವ ವಾಟ್ಸ್ ಆಪ್ ಗ್ರೂಪ್‌ನಲ್ಲಿ ಆರೆಸ್ಸೆಸ್ ಪ್ರಮುಖ, ಬಿ.ಜೆ.ಪಿ. ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಕಾರ್ಯಕ್ರಮವೊಂದರ ಪೋಸ್ಟ್ ವೈರಲ್ ಮಾಡಲಾಗಿದೆ.

ಪ್ರಜ್ಞಾಪ್ರವಾಹ ಎನ್ನುವ ಫೇಸ್ ಬುಕ್ ಪೇಜ್‌ನ ಕರ್ನಾಟಕ ವಿಭಾಗದಿಂದ ಪ್ರಸಾರವಾಗಿರುವ ಬಿ.ಎಲ್. ಸಂತೋಷ್ ಅವರ ಭಾಷಣದ ಸಂಪೂರ್ಣ ವಿಡಿಯೋದ ಲಿಂಕ್ ಹಾಕಿಕ್ಕಲ್ಲದೆ, ಅದನ್ನು ಶೇರ್ ಮಾಡಿ ಎನ್ನುವ ಮನವಿಯನ್ನೂ ಮಾಡಲಾಗಿದೆ. ಈ ಮೂಲಕ ಬಲಪಂಥೀಯ ವಿಚಾರಧಾರೆಯನ್ನು ಪ್ರಸಾರ ಮಾಡಲಾಗುತ್ತಿದೆ ಎನ್ನುವ ಆರೋಪಗಳೀಗ ಕೇಳಿಬಂದಿವೆ.

ವಿಶ್ವವಿದ್ಯಾಲಯದ ಕಾರ್ಯಕ್ರಮ, ನೋಟಿಸ್, ಕುಂದು –ಕೊರತೆಯ ಸಂವಹನಗಳು ಈ ಗ್ರೂಪ್‌ನಲ್ಲಿ ನಡೆಯುತ್ತಿರುತ್ತವೆ. ಇಲ್ಲಿಯವರೆಗೆ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿ ಚರ್ಚಿಸಲಾಗುತ್ತಿತ್ತು. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಎಲ್ಲ ಮಾಧ್ಯಮಗಳ ಪ್ರತಿನಿಧಿಗಳು, ವಿವಿಯ ಕುಲಪತಿಗಳು ಸಹ ಈ ಗ್ರೂಪ್‌ನಲ್ಲಿದ್ದಾರೆ.

ವಿಶ್ವವಿದ್ಯಾಲಯದ ವಿಚಾರಧಾರೆಗಳು ಜನರಿಗೆ ಮುಟ್ಟಲಿ ಎಂಬ ಕಾರಣಕ್ಕೆ ಇಲ್ಲಿ ವಿಶ್ವವಿದ್ಯಾಲಯದ ಸಿಬ್ಬಂದಿ ತಮ್ಮ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು. ಆದರೆ, ಈ ಗ್ರೂಪ್‌ನಲ್ಲಿ ಕೋವಿಡ್ ಸಂದರ್ಭದಲ್ಲಿ ಆತ್ಮನಿರ್ಭರತೆ, ವಿಶ್ವ ಬಂಧುತ್ವ ಮತ್ತು ರಾಜಕಾರಣ ಎಂಬ ವಿಚಾರದ ಬಗ್ಗೆ ಪ್ರಜ್ಞಾ ಪ್ರವಾಹ ಕರ್ನಾಟಕ ವಿಭಾಗದ ವತಿಯಿಂದ ಫೇಸ್ಬುಕ್ ಲೈವ್‌ನಲ್ಲಿ ಆಯೋಜಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಮಾತನಾಡಿರುವ ವಿಷಯವನ್ನು ಹಂಚಿಕೊಳ್ಳಲಾಗಿದೆ.

ಮೊದಲು ಈ ವಿಷಯವನ್ನು ಶೇರ್ ಮಾಡಿಕೊಳ್ಳುತ್ತಿದ್ದಂತೆ, ಈ ಸುದ್ದಿಯನ್ನು ಬೇರೆ ಬೇರೆ ಗ್ರೂಪ್‌ಗಳಿಗೆ ಶೇರ್ ಮಾಡಿ ಎಂದು ಮನವಿ ಮಾಡಲಾಗಿತ್ತು. ಹಲವು ಮಾಧ್ಯಮ ಮಿತ್ರರು ಈ ಕುರಿತು ಪ್ರಶ್ನಿಸಿದಾಗ, ಶೇರ್ ಮಾಡದಂತೆ ಮನವಿ ಮಾಡಿಕೊಳ್ಳಲಾಯಿತು. ಆದರೆ ಆ ಲಿಂಕ್ ಅನ್ನು ಮಾತ್ರ ಗ್ರೂಪ್‌ನಿಂದ ತೆಗೆಯಲಿಲ್ಲ. ವಿಶ್ವವಿದ್ಯಾಲಯದ ಗ್ರೂಪ್‌ಗೂ ಬಿಜೆಪಿಯ ವಿಷಯಕ್ಕೂ ಏನು ಸಂಬಂಧ? ಈ ಗ್ರೂಪ್ ಅನ್ನು ಬಲಪಂಥೀಯ ವಿಚಾರಧಾರೆಗಳನ್ನು ಹಂಚಿಕೊಳ್ಳಲು ಬಳಸಲಾಗುತ್ತಿದೆಯೇ? ಎಂಬ ಪ್ರಶ್ನೆಗಳನ್ನು ಈಗ ಹಲವರು ಎತ್ತಿದ್ದಾರೆ.

ಭಾಷಣದಲ್ಲಿ ಏನಿದೆ?

ಬಿ.ಎಲ್. ಸಂತೋಷ್ ಅವರು, ರಾಜಕೀಯ‌ವನ್ನು ಲಾಬಿಯ ರೀತಿಯಲ್ಲಿ ನೋಡದೆ, ದಿವಾಳಿತನದ ಹಿನ್ನೆಲೆಯಲ್ಲಿ ನೋಡಬೇಕಿದೆ. ಸರ್ಕಾರದ ನಿರ್ಲಕ್ಷ್ಯ ಕೊರೊನಾ ಹರಡಲು ಕಾರಣ ಎಂಬ ಆರೋಪಗಳನ್ನು ವಿಪಕ್ಷ‌ಗಳು, ಬುದ್ಧಿಜೀವಿಗಳು ಮಾಡಿದರು. ಆದರೆ ಅದರಲ್ಲಿ ಹುರುಳಿಲ್ಲ. ಏಕೆಂದರೆ ಚುನಾವಣಾ ಸಮಾವೇಶ ಯಾವುದೇ ದೊಡ್ಡ ಕಾರ್ಯಕ್ರಮ ಇರದಿದ್ದರೂ ಮಹಾರಾಷ್ಟ್ರ‌ದ ಗ್ರಾಮೀಣ ಭಾಗಗಳಲ್ಲಿ ಸೋಂಕು ಏರಿಕೆಯಾಯಿತು. ನವದೆಹಲಿ, ಛತ್ತೀಸ್‌ಘಡಗಳಲ್ಲಿಯೂ ಯಾವುದೇ ದೊಡ್ಡ ಕಾರ್ಯಕ್ರಮ‌ಗಳಿರಲಿಲ್ಲ. ಆದರೂ ಅಲ್ಲೆಲ್ಲ ಸೋಂಕು ಹೆಚ್ಚಿತು. ಈ ವೈಜ್ಞಾನಿಕ ತರ್ಕದ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಸಮಾವೇಶ, ಕುಂಭಮೇಳ‌ದಿಂದ ಕೋವಿಡ್ ಹರಡಿತು ಎಂಬ ವಾದ ಹುರುಳಿಲ್ಲದ್ದು ಎಂಬುದಕ್ಕೆ ಇದು ಸಾಕ್ಷಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೇ ಧಾಟಿಯಲ್ಲಿರುವ, ಪ್ರಧಾನಿ ಮೋದಿ ಅವರ ತಪ್ಪು ನಿರ್ಧಾರಗಳಿಂದ ಕೊರೊನಾ ಬಂದಿಲ್ಲ. ಅದು ಹರಡಲು ಬಿಜೆಪಿ ಸರ್ಕಾರ ಕಾರಣವಲ್ಲ. ಬುದ್ಧಿಜೀವಿಗಳು ಹಾಗೂ ವಿರೋಧ ಪಕ್ಷಗಳ ನಾಯಕರು ಮೋದಿ ಅವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದ್ದಾರೆ ಎಂಬ ರೀತಿಯಲ್ಲಿ ಅವರು ವಿಡಿಯೋದಲ್ಲಿ ಚರ್ಚೆ ಮಾಡಿದ್ದಾರೆ.

ಈ ವಿಷಯವು ಗ್ರೂಪ್‌ನಲ್ಲಿ ಹರಿದಾಡಿದ್ದು, ಶೇರ್ ಮಾಡಲು ಕೂಡ ಮನವಿ ಮಾಡಲಾಗಿತ್ತು. ಹೀಗಾಗಿಯೇ ಈ ವಿಶ್ವವಿದ್ಯಾಲಯ ಬಲಪಂಥೀಯ ವಿಚಾರಧಾರೆಗಳನ್ನು ಪ್ರಚುರಪಡಿಸುತ್ತಿದೆಯೇ? ಎಂಬ ಅನುಮಾನ ಈಗ ಹಲವರನ್ನು ಕಾಡುತ್ತಿದೆ.

ಈ ವಿಷಯಕ್ಕೂ ವಿವಿಗೂ ಸಂಬಂಧವಿಲ್ಲ

ಈ ಗ್ರೂಪ್ ವಿಶ್ವವಿದ್ಯಾಲಯದ ಮುಖವಾಣಿಯಲ್ಲ. ಇದು ಪ್ರಶಾಂತ್ ಮೇರವಾಡೆಯವರು ಮಾಡಿರುವ ಗ್ರೂಪ್. ಸೋಷಿಯಲ್ ಮೀಡಿಯಾಗಳಲ್ಲಿ ಎಲ್ಲರೂ ಅವರವರ ಅಭಿಪ್ರಾಯಗಳನ್ನು ಹಂಚಿಕೊಳ್ತಾರೆ. ಹಾಗೆ ಅವರೂ ಹಂಚಿಕೊಂಡಿರಬಹುದು. ವಿವಿಗೆ ಇಂತಹ ಯಾವುದೇ ವಿಚಾರಗಳನ್ನು ವ್ಯಕ್ತಿಗತವಾಗಿ ಪ್ರಚಾರ ಮಾಡುವ ಉದ್ದೇಶವಿಲ್ಲ. ರಾಷ್ಟ್ರೀಯ ವಿಚಾರವಾದ ಆತ್ಮನಿರ್ಭರದ ವಿಷಯವನ್ನು ಗ್ರಾಮೀಣ ಹಾಗೂ ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಪ್ರಚಾರ ಮಾಡುತ್ತೇವೆ. ಆದರೆ ಈ ವಿಷಯಕ್ಕೂ ವಿಶ್ವವಿದ್ಯಾಲಯಕ್ಕೂ ಸಂಬಂಧವಿಲ್ಲ.

  • ಪ್ರೊ| ವಿಷ್ಣುಕಾಂತ್ ಚಟಪಲ್ಲಿ, ಕುಲಪತಿಗಳು, ಗ್ರಾಮೀಣಾಭಿವೃದ್ಧಿ ವಿವಿ, ಗದಗ

ಸೋಮವಾರವೂ ಜಿಲ್ಲೆಯ ಜನರಿಗೆ ಶುಭಸುದ್ದಿ, ಗುಣಮುಖರ ಸಂಖ್ಯೆಯಲ್ಲಿ ಗಣನೀಯ ಏರಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕು ಮೊನ್ನೆಯಿಂದ ಇಳಿಮುಖವಾಗುತ್ತಿದೆ. ಭಾನುವಾರ ಜಿಲ್ಲೆಯ ಜನರಿಗೆ ಸಿಕ್ಕಿದ್ದ ಶುಭ ಸುದ್ದಿ ಸೋಮವಾರವೂ ಮುಂದುವರೆದಿದೆ. ನಿನ್ನೆ ಮೂನ್ನೂರರ ಗಡಿ ದಾಟಿದ್ದ ಸೋಂಕಿನ ಸಂಖ್ಯೆ, ಇವತ್ತು ಎರಡು ನೂರರ ಗಡಿ ದಾಟಿದೆ. ಸೋಂಕಿತರಕ್ಕಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರೇ ಹೆಚ್ಚು.

ಇಂದಿನ 277 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 21406 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -176, ಮುಂಡರಗಿ-11, ನರಗುಂದ-20, ರೋಣ-34, ಶಿರಹಟ್ಟಿ-34, ಹೊರಜಿಲ್ಲೆಯ-02 ಸೇರಿದಂತೆ 277 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ಮೂವರು ಮೃತಪಟ್ಟಿದ್ದು, ಮೃತರ ಸಂಖ್ಯೆ 218 ಕ್ಕೇರಿದೆ.

ನರಗುಂದ ತಾಲೂಕಿನ ‌ನಿವಾಸಿ
38 ವರ್ಷದ ವ್ಯಕ್ತಿ ಮೇ-19 ರಂದು ನರಗುಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 19 ರಂದು ಮೃತಪಟ್ಟಿದ್ದಾರೆ.

ವಿಜಯಪುರ ಜಿಲ್ಲೆಯ ಕಂಬಾವಿ ನಿವಾಸಿ 46 ವರ್ಷದ ಮಹಿಳೆ ಮೇ -15 ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 20 ರಂದು ಮೃತಪಟ್ಟಿದ್ದಾರೆ.

ನರಗುಂದ ತಾಲೂಕಿನ ಕುರ್ಲಗೇರಿ ನಿವಾಸಿ 60 ವರ್ಷದ ವ್ಯಕ್ತಿ ಮೇ 23 ರಂದು ನರಗುಂದ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 23 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಕೂಡ ದಾಖಲೆಯ 430 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 17941 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3247 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 195 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಅಸಹಾಯಕರಿಗೆ ಆಹಾರ ಧಾನ್ಯಗಳ ಕಿಟ್ ನೀಡಿದ ಪೊಲೀಸರು

ವಿಜಯಸಾಕ್ಷಿ ಸುದ್ದಿ, ಗದಗ

ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಸರಕಾರ ಲಾಕ್‌ಡೌನ್ ಜಾರಿ ಮಾಡಿದೆ. ಇದರಿಂದಾಗಿ ಸಾವಿರಾರು ಕುಟುಂಬಗಳು ಆಹಾರಕ್ಕಾಗಿ ‌ಪರಿತಪಿಸುವಂತಾಗಿದೆ. ಅದರಲ್ಲೂ ನಿರ್ಗತಿಕರು, ಅಸಹಾಯಕ ಕುಟುಂಬಗಳ ಪರಿಸ್ಥಿತಿ ಹೇಳತೀರದು.

ಇಂತಹ‌ ಅಸಹಾಯಕ ಸ್ಥಿತಿಯಲ್ಲಿ ಗದಗ ಜಿಲ್ಲೆಯ ಪೊಲೀಸರು ಸಮೀಕ್ಷೆ ನಡೆಸಿ, ಅಗತ್ಯವುಳ್ಳ ಕುಟುಂಬಗಳನ್ನು ಗುರುತಿಸಿ, ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡಿ, ಮಾನವೀಯತೆ ಮೆರೆದಿದ್ದಾರೆ.

ಗದಗ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ 30ಕ್ಕೂ ಹೆಚ್ಚು ಸಮಾನ ಮನಸ್ಕ ಪೊಲೀಸರು ಆಹಾರ ಧಾನ್ಯಗಳು ಹಾಗೂ ಅಗತ್ಯ ವಸ್ತುಗಳ ಕಿಟ್‌ಗಳನ್ನು ಅಗತ್ಯವುಳ್ಳ ಬಡ ಕುಟುಂಬಗಳಿಗೆ ವಿತರಿಸಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದ ಹಿಂದುಳಿದ ಪ್ರದೇಶಗಳಲ್ಲಿ ಸಂಚರಿಸಿದ ಸಶಸ್ತ್ರ ಮೀಸಲು ಪಡೆಯ ಪೊಲೀಸರು ವಿಧವೆಯರು, ದುಡಿಯಲು ಶಕ್ತಿಯಿಲ್ಲದ ವ್ಯಕ್ತಿಗಳಿರುವ ಸುಮಾರು 55 ಕುಟುಂಬಗಳ ಸಮೀಕ್ಷೆ ನಡೆಸಿ, ಆಹಾರದ ಕಿಟ್ ವಿತರಿಸಿದ್ದಾರೆ.

ಅಡುಗೆ ಎಣ್ಣೆ, ರವಾ, ಹೆಸರು ಕಾಳು, ಸಾಬೂನು, ಸಕ್ಕರೆ, ಚಹಾಪುಡಿ, ಬೆಲ್ಲ ಮುಂತಾದ ದಿನಬಳಕೆಯ ವಸ್ತುಗಳನ್ನು ಖರೀದಿಸಿ, ಪ್ಯಾಕ್ ಮಾಡಿ, ಈ ಕುಟುಂಬಗಳಿರುವಲ್ಲಿಗೆ ತೆರಳಿದ ಪೊಲೀಸರು, ತಾವೇ ಹಂಚಿಕೆ ಮಾಡಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಎಆರ್‌ಎಸ್‌ಐಗಳಾದ ಎ.ಎಂ. ಚಾಂದ್ ಖಾನ್, ಜಿ.ಕೆ. ಖಾಜಿ, ಮುಖ್ಯ ಪೇದೆಗಳಾದ ಹಸನ ಸಾಬ್ ಉಮಚಗಿ, ಎಂ.ಕೆ. ಕಾತರಕಿ, ದಾವಲ್ ಕಲೆಗಾರ, ಎ.ಎಂ. ಮುಲ್ಲಾ ಮುಂತಾದ ಸಮಾನ ಮನಸ್ಕ
ಗೆಳೆಯರು ತಾವೇ ಹಣ ಹೊಂದಿಸಿ, ಬಡವರಿಗೆ ಅಗತ್ಯಾನುಸಾರ ಸಹಾಯ ಮಾಡಬೇಕೆಂದು ನಿರ್ಧರಿಸಿ, ಈ ಕಾರ್ಯ ಕೈಗೊಂಡಿದ್ದು, ಜಿಲ್ಲಾದ್ಯಂತ ಶ್ಲಾಘನೆ ವ್ಯಕ್ತವಾಗಿದೆ.

ಬೇಕಾಬಿಟ್ಟಿಯಾಗಿ ಹೊರ ಬರುತ್ತಿರುವವರಿಗೆ ಪೊಲೀಸರಿಂದ ತಕ್ಕ ಪಾಠ!

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೂಡ ಲಾಕ್ ಡೌನ್ ವಿಸ್ತರಣೆಯಾಗಿದೆ.
ಹೀಗಾಗಿ ಅನಾವಶ್ಯಕವಾಗಿ ಬೇಕಾ ಬಿಟ್ಟಿಯಾಗಿ ಓಡಾಡುತ್ತಿರುವವರಿಗೆ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ನಗರದ ಮುಳಗುಂದ ನಾಕಾ ಹತ್ತಿರ ಪೊಲೀಸರು ಹೀಗೆ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿರುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ಅನವಶ್ಯಕವಾಗಿ ಬೈಕ್ ನಲ್ಲಿ ಸುತ್ತಾಡುತ್ತಿರುವವರ ಬೈಕ್ ಸೀಜ್ ಮಾಡಿ ದೂರು ದಾಖಲಿಸಿಕೊಳ್ಳುತ್ತಿದ್ದಾರೆ.

ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿ ಬಿದ್ದ ಜನತೆ!

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಲ್ಲಿ ಕೊರೊನಾ ಹೆಚ್ಚಾಗುತ್ತಿದ್ದಂತೆ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿ ಬೀಳುತ್ತಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿಯೂ ಸದ್ಯ ಈ ದೃಶ್ಯ ಸಾಮಾನ್ಯವಾಗಿದ್ದು, ಜಿಲ್ಲೆ ಕೂಡ ಹೊರತಾಗಿಲ್ಲ. ವ್ಯಾಕ್ಸಿನ್ ಹಾಕಿಸಿಕೊಳ್ಳಲು ಇಲ್ಲಿಯ ನಗರ ಸಮುದಾಯ ಆಸ್ಪತ್ರೆಯಲ್ಲಿ ನೂಕು ನುಗ್ಗಲು ಉಂಟಾಗಿದೆ. ಜನ ವ್ಯಾಕ್ಸಿನ್ ಗಾಗಿ ಮುಗಿ ಬಿದ್ದಿದ್ದಾರೆ.

ವ್ಯಾಕ್ಸಿನ್ ಹಾಕಿಸಿಕೊಳ್ಳಲು ಬಂದ ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಹರಸಹಾಸ ಪಡುತ್ತಿದ್ದಾರೆ. ಸಾಮಾಜಿಕ ಅಂತರ ಮರೆತು ಗುಂಪು ಗುಂಪಾಗಿ ಸೇರಿದ್ದಾರೆ. ಜನರ ಈ ದೃಶ್ಯ ಕಂಡು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.

ಆರೋಗ್ಯ ಸಿಬ್ಬಂದಿ, ಮಾಸ್ಕ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ದಯವಿಟ್ಟು ಎಂದು ಕೈ ಮುಗಿದು ಮನವಿ ಮಾಡಿದ್ದಾರೆ. ಆದರೆ, ಜನರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ. ದಿನ ನಿತ್ಯ ಸಾವು – ನೋವುಗಳು ಹೆಚ್ಚಾಗಿ ಸಂಭವಿಸುತ್ತಿರುವುದರಿಂದ ಏನೇ ಆದರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಜನರು ಪಟ್ಟು ಹಿಡಿದಂತೆ ವರ್ತಿಸುತ್ತಿದ್ದಾರೆ. ಇಷ್ಟೊಂದು ಭಯ ಹೊಕ್ಕರೂ ಜನರಿಗೆ ಮಾತ್ರ ಬುದ್ಧಿ ಬರುತ್ತಿಲ್ಲ ಎಂದು ವೈದ್ಯಕೀಯ ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಭೂಮಿಯ ಮೇಲೆ ಕೊರೊನಾ ಇದೆ ಎಂದು ಆಕಾಶದಲ್ಲಿ ಮದುವೆಯಾದ ಜೋಡಿ!

ವಿಜಯಸಾಕ್ಷಿ ಸುದ್ದಿ, ಚೆನ್ನೈ

ಭೂಮಿಯ ಮೇಲೆ ಕೊರೊನಾ ಇದೆ ಎಂದು ನವಜೋಡಿಯೊಂದು ಆಕಾಶದಲ್ಲಿ ಮದುವೆಯಾಗಿರುವ ವಿಶೇಷ ಘಟನೆ ನಡೆದಿದೆ. ಮಧುರೈ ನಿವಾಸಿಗಳಾದ ರಾಕೇಶ್, ಧೀಕ್ಷಣಾ ಎಂಬ ಜೋಡಿಯೇ ಈ ರೀತಿಯ ವಿಶೇಷ ಮದುವೆಯಾಗಿದೆ.

ಮದುವೆಗಾಗಿಯೇ ವಿಶೇಷ ವಿಮಾನವೊಂದನ್ನು ಬುಕ್ ಮಾಡಿದ್ದರು. 2 ಗಂಟೆಗಳ ಕಾಲ ಬಾಡಿಗೆ ತೆಗೆದುಕೊಂಡು ಆಕಾಶದಲ್ಲಿ ಮದುವೆಯಾಗಿದ್ದಾರೆ. ಅಲ್ಲದೇ, ವಿಮಾನದಲ್ಲಿ ಹೆಚ್ಚು ಜನರನ್ನು ಕೂಡಿಸುವ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ.

130 ಜನ ಸಂಬಂಧಿಕರನ್ನು ಸೇರಿಸಿ ಮದುವೆಯಾಗಿದ್ದಾರೆ. ವಿಮಾನವು ಮಧುರೈನಿಂದ ತೂತುಕಡಿಗೆ ಸಂಚರಿಸುವ ಸಂದರ್ಭದಲ್ಲಿ ಮದುವೆ ನಡೆದಿದೆ. ಸದ್ಯ ಈ ಮದುವೆಯ ವಿಡಿಯೋ ಹಾಗೂ ಫೋಟೋ ಸಾಮಾಜಿಕ ಜಾಲತಾಣದಲಲಿ ವೈರಲ್ ಆಗಿದೆ.

ಅತ್ತೆಯ ಮನೆಯಲ್ಲಿಯೇ ಇದ್ದು, ಕೊರೊನಾ ಬಂದಿದ್ದಕ್ಕೆ ಅವರನ್ನೇ ಹೊರಗೆ ಹಾಕಿದ ಪಾಪಿ ಅಳಿಯ!

ವಿಜಯಸಾಕ್ಷಿ ಸುದ್ದಿ, ಮಂಡ್ಯ

ಕೊರೊನಾ ಬಂದಿದೆ ಎಂಬ ಕಾರಣಕ್ಕೆ ಇಲ್ಲೊಬ್ಬ ವ್ಯಕ್ತಿ ಅತ್ತೆ ಹಾಗೂ ಮಾವನನ್ನು ಮನೆಯಿಂದ ಹೊರಗೆ ಹಾಕಿರುವ ಅಮಾನವೀಯ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಅರೆಚಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಅತ್ತೆಗೆ ಕೊರೊನಾ ಪಾಸಿಟಿವ್ ಬಂದಿದ್ದಕ್ಕೆ ಅಳಿಯ ಮನೆಗೆ ಸೇರಿಸಲು ಒಪ್ಪದೇ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಬೈದು ಕಳಿಸಿದ್ದಾನೆ.

ಅರೆಚಾಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬ ವೃದ್ಧೆಗೆ ಕೊರೊನಾ ಪಾಸಿಟಿವ್ ಬಂದಿದ್ದು, ವೈದ್ಯರು ಸಿದ್ದಮ್ಮರನ್ನು ಹೋಂ ಐಸೋಲೇಷನ್ ನಲ್ಲಿ ಇರುವಂತೆ ಸೂಚಿಸಿದ್ದಾರೆ. ಹೀಗಾಗಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿದ್ದಮ್ಮ ಅವರನ್ನು ಮನೆಗೆ ಬಿಡಲು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಸಿದ್ದಮ್ಮ ಅವರ ಅಳಿಯ ಮುತ್ತೇಗೌಡ, ಆಕೆಗೆ ಕೊರೊನಾ ಪಾಸಿಟಿವ್ ಬಂದಿದೆ. ಮನೆಗೆ ಸೇರಿಸಿಕೊಳ್ಳುವುದಿಲ್ಲ. ಆಕೆಯನ್ನು ಕರೆದುಕೊಂಡು ಹೋಗಿ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ರೇಗಿದ್ದಾನೆ. ಮುತ್ತೇಗೌಡನನ್ನು ಸಿದ್ದಮ್ಮ ಅವರು ಮನೆಯ ಅಳಿಯನನ್ನಾಗಿ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಅಳಿಯ, ಅತ್ತೆಯ ಮನೆಯಲ್ಲಿಯೇ ಇದ್ದು, ಅವರಿಗೆ ಬೇಡ ಎಂದು ಹೇಳಿದ್ದಾನೆ. ಸದ್ಯ ಸಿದ್ದಮ್ಮ ಅವರನ್ನು ಮದ್ದೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

error: Content is protected !!