Home Blog Page 3153

ಮರಾಠ ಸಮುದಾಯದ ಅಭಿವೃದ್ಧಿ ಪ್ರಾಧಿಕಾರದ ಸ್ಥಾಪನೆಗೆ ಕರವೇ ತೀವ್ರ ಖಂಡನೆ

0

ವಿಜಯಸಾಕ್ಷಿ ಸುದ್ದಿ ಗಂಗಾವತಿ
ರಾಜ್ಯ ಸರ್ಕಾರವು ಮರಾಠ ಸಮುದಾಯದ ಅಭಿವೃದ್ಧಿಗಾಗಿ ಪ್ರಾಧಿಕಾರ ಸ್ಥಾಪನೆಗೆ ಅಸ್ತು ಎಂದಿರುವುದು ತೀವ್ರ ಖಂಡನೀಯವಾಗಿದೆ ಎಂದು ಕರವೇ ಕೊಪ್ಪಳ ಜಿಲ್ಲಾಧ್ಯಕ್ಷರಾದ ಪಂಪಣ್ಣ ನಾಯಕ ಕಿಡಿ ಕಾರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮರಾಠರು ಕರ್ನಾಟಕದ ನಾಡು – ನುಡಿ , ನೆಲ – ಜಲ , ಭಾಷೆಯ ವಿಷಯದಲ್ಲಿ ಕನ್ನಡಿಗರ ವಿರುದ್ಧ ಧ್ವನಿ ಎತ್ತುವ ಮೂಲಕ ಗಡಿ ನಾಡು ಬೆಳಗಾವಿಯಲ್ಲಿ ಮಹಾರಾಷ್ಟ್ರದ ಜೊತೆಗೆ ಕೈಜೋಡಿಸುವ ಮೂಲಕ ಕನ್ನಡ ನಾಡಿಗೆ ತೀವ್ರವಾಗಿ ಅವಮಾನವೆಸಗಿರುತ್ತಾರೆ . ಇಂತಹ ಸಮಾಜದ ಅಭಿವೃದ್ಧಿಗಾಗಿ ನಮ್ಮ ರಾಜ್ಯ ಸರ್ಕಾರ ೫೦ ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಟ್ಟು ಮರಾಠ ಸಮುದಾಯ ಅಭಿವೃದ್ಧಿ ಪ್ರಾಧಿಕಾರಕ್ಕೆ ಅಸ್ತು ಎಂದಿರುವುದು ತೀವ್ರ ವಿಷಾದನೀಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಹಾಗೂ ಶಿವಸೇನೆ ಸಂಘಟನೆಗಳು ಹುಟ್ಟಿಕೊಂಡಿರುವುದೇ ಕನ್ನಡಿಗರ ವಿರುದ್ಧ ಧ್ವನಿ ಎತ್ತಲು. ರಾಜ್ಯದ ಗಡಿ ವಿಷಯದಲ್ಲಿ ಮಹಾರಾಷ್ಟ್ರವು ಬೆಳಗಾವಿಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಇಲ್ಲಿಯವರೆಗೆ ಹಿಂದಿನ ಸರ್ಕಾರಗಳು ವೊಟ್ ಬ್ಯಾಂಕ್ ರಾಜಕಾರಣ ಮಾಡುವ ಮೂಲಕ ಮೂಲೆಗುಂಪಾಗಿವೆ. ತಮ್ಮ ಸರ್ಕಾರವು ಕೂಡ ಇದೇ ದಾರಿ ಹಿಡಿದಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಪ್ರತಿ ಬಾರಿ ನಮ್ಮ ಕನ್ನಡ ರಾಜ್ಯೋತ್ಸವ ದಿನದಂದು ಕಪ್ಪುಬಾವುಟ ಪ್ರದರ್ಶಿಸುವ ಇಂತಹ ಸಂಘಟನೆಗಳು ಹಾಗೂ ಸಮುದಾಯಕ್ಕೆ ನಮ್ಮ ರಾಜ್ಯದ ಅನುದಾನದ ಅವಶ್ಯಕತೆ ಇದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.
ಕನ್ನಡಿಗರಿಗೆ ಅವಮಾನ, ದಬ್ಬಾಳಿಕೆ, ದೌರ್ಜನ್ಯ ಎಲ್ಲವನ್ನು ಮರೆತು ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸುತ್ತಿರುವುದನ್ನು ಕೂಡಲೇ ರಾಜ್ಯ ಸರ್ಕಾರ ಇದೇ ನವೆಂಬರ್ -೨೭ ರೊಳಗೆ ಕೈಬಿಡಬೇಕು . ಇಲ್ಲವಾದಲ್ಲಿ ನಮ್ಮ ಕರವೇ ಸಂಘಟನೆಯು ರಾಜ್ಯಾಧ್ಯಂತ ಮುಂದಿನ ದಿನಗಳಲ್ಲಿ ಉಗ್ರವಾದ ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದರ ಜೊತೆಗೆ ಕರ್ನಾಟಕ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಪುಷ್ಕರಣಾ ಮಹೋತ್ಸವ ರದ್ದು

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಪ್ರತಿ ವರ್ಷ‌ ಗಂಗಾವತಿ‌ ತಾಲೂಕಿನಲ್ಲಿ ನಡೆಯುತ್ತಿದ್ದ ತುಂಗಭದ್ರಾ ಪುಷ್ಕರಣಾ ಮಹೋತ್ಸವ ಕಾರ್ಯಕ್ರಮವನ್ನು ಈ ವರ್ಷವೂ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಆದರೆ ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಪುಷ್ಕರಣಾ ಮಹೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ಅಖಿಲ ಕರ್ನಾಟಕ ಕಮ್ಮವಾರಿ ಸಂಘದ ಅಧ್ಯಕ್ಷ ಜಿ.ರಾಮಕೃಷ್ಣ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಪತ್ರದ ಮೂಲಕ ತಿಳಿಸಿದ್ದಾರೆ.

ಪಿಎಸ್ಐಗಳ ವರ್ಗಾವಣೆ

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ: ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ 9 ಜನ ಪಿಎಸ್ಐ‌ಗಳನ್ನು ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ಎಂ.ನಂಜುಂಡಸ್ವಾಮಿ ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.

ಬಳ್ಳಾರಿಯ ಸಿಇಎನ್ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮತಿ ಸರಳ.ಪಿ.ಅವರನ್ನು ಎಚ್.ಬಿ.ಹಳ್ಳಿ (ಅಪರಾಧ) ಪೊಲೀಸ್ ಠಾಣೆಗೆ, ಬಳ್ಳಾರಿ ಡಿಎಸ್ಎ ಘಟಕದ ಪಿಎಸ್ಐ ಶಿವಕುಮಾರ್ ನಾಯ್ಕ ಅವರನ್ನು ಕೊಪ್ಪಳ ಜಿಲ್ಲೆಯ ಅಳವಂಡಿ ಪೊಲೀಸ್ ಠಾಣೆಗೆ, ತೆಕ್ಕಲಕೋಟೆ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಣ್ಣ ಅವರನ್ನು ಕುಷ್ಟಗಿ ಪೊಲೀಸ್ ಠಾಣೆಗೆ, ರಾಯಚೂರು ಜಿಲ್ಲೆಯ ನೇತಾಜಿ‌ನಗರ ಪೊಲೀಸ್ ಠಾಣೆಯ ಪಿಎಸ್ಐ ಶ್ರೀಮತಿ ಶೀಲಾ ಮೂಗನಗೌಡ್ರ ಅವರನ್ನು ಕೊಪ್ಪಳ ಜಿಲ್ಲೆಯ ಬೇವೂರು ಪೊಲೀಸ್ ಠಾಣೆಗೆವರ್ಗಾವಣೆ ಮಾಡಲಾಗಿದೆ.

ಇನ್ನು ಬೇವೂರು ಪೊಲೀಸ್ ಠಾಣೆಯ ಪಿಎಸ್ಐ ಶಂಕ್ರಪ್ಪ ಎಲ್. ಅವರನ್ನು ಕೊಪ್ಪಳ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಗೆ, ಬೇವೂರು ಠಾಣೆಗೆ ಆದೇಶದಲ್ಲಿದ್ದ ಪಿಎಸ್ಐ ಟಿ.ಜಿ.ನಾಗರಾಜ್ ಅವರನ್ನು ಚಿಗಟೇರಿ ಪೊಲೀಸ್ ಠಾಣೆಗೆ, ಕನಕಗಿರಿ ಪೊಲೀಸ್ ಠಾಣೆ ಪಿಎಸ್ಐ ಎಚ್.ಎಸ್.ಪ್ರಶಾಂತ ಅವರನ್ನು ಹಲವಾಗಲು ಪೊಲೀಸ್ ಠಾಣೆಗೆ, ಕುಷ್ಟಗಿ ಪೊಲೀಸ್ ಠಾಣೆಯ ಪಿಎಸ್ಐ ಚಿತ್ತರಂಜನ್ ಅವರನ್ನು ಬಳ್ಳಾರಿ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಗೆ ಹಾಗೂ ಕೊಪ್ಪಳ ಜಿಲ್ಲೆಯ ಸಿಇಎನ್ ಪೊಲೀಸ್ ಠಾಣೆಯ ಪಿಎಸ್ಐ ಡಿ.ಸುರೇಶ್ ಅವರನ್ನು ಕನಕಗಿರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.

ಮೊಬೈಲ್‌ನಲ್ಲಿ ಸೆರೆಯಾದವು ನಡುರಸ್ತೆಯಲ್ಲಿ ಓಡಾಡುತ್ತಿರುವ ಕರಡಿಗಳು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ನಡು ರಸ್ತೆಯಲ್ಲೇ ಕರಡಿಗಳು ಓಡಾಡುತ್ತಿರುವ ದೃಶ್ಯವನ್ನು ಸೋಮವಾರ ರಾತ್ರಿ ಕಾರಲ್ಲಿ ಹೊರಟಿದ್ದ ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ತವರಗೇರಾ ವ್ಯಾಪ್ತಿಯ ಕನ್ನಾಳ ಗ್ರಾಮದ ಸುತ್ತ ಮುತ್ತಲಿನಲ್ಲಿ ಗ್ರಾಮಗಳ ನಡು ರಸ್ತೆಯ ಮದ್ಯ ಓಡಾಡುತ್ತಿದ್ದ ಕರಡಿಗಳನ್ನು ಕಾರಿನಲ್ಲಿದ್ದ ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮೆರಾದ ಮೂಲಕ ಕಾರಿನಲ್ಲಿ ಕುಳಿತುಕೊಂಡು ಕ್ಯಾಮೆರಾದಿಂದ ಕರಡಿಗಳು ಓಡಾಡುವುದನ್ನು ಸೆರೆ ಹಿಡಿದಿದ್ದಾರೆ.

ಕನ್ನಾಳ ಗ್ರಾಮಕ್ಕೆ ತೆರಳುತ್ತಿರುವಾಗ ಕಾರು ವಾಹನ ಸವಾರರು ನಡುರಸ್ತೆಯಲ್ಲಿ ನಡೆದಾಡುತ್ತಿದ್ದ ಕರಡಿಗಳನ್ನು ಸೆರೆ‌ ಹಿಡಿದಿದ್ದಾರೆ. ಆದರೆ ಕನ್ನಾಳ ಮತ್ತು ಸುತ್ತ ಮುತ್ತಲಿನ ಗ್ರಾಮಗಳಿಗೆ ತೆರಳಬೇಕೆಂದರೆ ಸುತ್ತಲೂ ದಟ್ಟ ಅರಣ್ಯ ಪ್ರದೇಶದ ಕಾಡು ಇದ್ದು ಗ್ರಾಮದ ಸುತ್ತ ಬೆಟ್ಟಗುಡ್ಡ ಇರುವುದರಿಂದ ಇಲ್ಲಿ ಚಿರತೆ, ಕರಡಿಗಳು ಸಾಕಷ್ಟು ಇರುವುದರಿಂದ ಅರಣ್ಯ ಪ್ರದೇಶದ ಅಧಿಕಾರಿಗಳು ಇದುವರೆಗೂ ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಂಡಿಲ್ಲ. ಯಾವುದೇ ನಾಮ ಫಲಕಗಳನ್ನು ಅಳವಡಿಸಿಲ್ಲ. ಇಲ್ಲಿ ಕರಡಿ ಚಿರತೆ ಹಾಗೂ ಹೆಬ್ಬಾವು ಊಸರವಳ್ಳಿ ಸೇರಿದಂತೆ ನಾನಾ ಕಾಡುಪ್ರಾಣಿಗಳು ಇವೆ ಎಂದು ತಿಳಿಸಿದ್ದಾರೆ.

ಚಿರತೆ ಮತ್ತು ಕರಡಿಯನ್ನು ಕಂಡ ಪ್ರತ್ಯಕ್ಷದರ್ಶಿಗಳು ಅರಣ್ಯ ಇಲಾಖೆ ಪ್ರದೇಶದವರು ಯಾವುದೇ ಅಪಾಯವಾಗದಂತೆ ಮುನ್ನಚ್ಚರಿಕೆ ಕ್ರಮವಾಗಿ ನಾಮಫಲಕಗಳನ್ನು ಹಾಕಿ, ಕರಡಿಗಳನ್ನು ಸೆರೆ ಹಿಡಿಯಲು ಮುಂದಾಗಬೇಕು ಎಂದು ಅರಣ್ಯ ಇಲಾಖೆಯವರಿಗೆ ಆಗ್ರಹಿಸಿದ್ದಾರೆ.

ಗಣಿತ ಅಂದ್ರೆ ಬಾಲಕಿ ನಯನಾಗೆ ಥಕಧಿಮಿತ

0

-ಫಟಾಫಟ್ ಲೆಕ್ಕ, ಹೇಳೋದೆಲ್ಲ ಪಕ್ಕ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಈ ಬಾಲಕಿಯ ಟ್ಯಾಲೆಂಟ್ ನೋಡಿ ನಿಮಗೆ ಅಚ್ಚರಿ ಆಗುತ್ತೆ, ಗಣಿತದಲ್ಲಂತೂ ಮಾಸ್ಟರ್ ಮೈಂಡ್ ಏನೇ ಲೆಕ್ಕ ಕೇಳಿದ್ರೂ ಥಟ್ ಅಂತ ಉತ್ತರಿಸುತ್ತಾಳೆ 1000 ವರೆಗಿನ ಮಗ್ಗಿಗಳನ್ನು ನಿರರ್ಗಳವಾಗಿ ಹೇಳುತ್ತಾಳೆ.

ಹೌದು! ಕೊಪ್ಪಳದ ಪೊಲೀಸಪ್ಪನ ಮಗಳೊಬ್ಬಳು ಇಡೀ ಪೊಲೀಸ್ ಇಲಾಖೆ ಹಾಗೂ ಕೊಪ್ಪಳದ ಜನರ ಗಮನ ಸೆಳೆಯುತ್ತಿದ್ದಾಳೆ. ಹೆಸರು ನಯಾನ, ಪೊಲೀಸ್ ಗೋಸಲಪ್ಪ ಗೂಳಿ ಎಂಬುವವರ ಮಗಳು. ಸದ್ಯ 3ನೇ ತರಗತಿಯಲಿ ಓದುತ್ತಿದ್ದ ಈ ಬಾಲಕಿ ಕ್ಯಾಲ್ಕುಲೇಟರ್ ಇದ್ದಂತೆ ಗುಣಕಾರ, ಸಂಕಲನ, ವ್ಯವಕಲನ, ಭಾಗಕಾರ ಲೆಕ್ಕಗಳನ್ನು ಹಾಗೂ ಎರಡರ ಮಗ್ಗಿಗಳನ್ನು ಫಟ್ ಫಟ್ ಅಂತಾ ಹೇಳುತ್ತಾಳೆ.

ಮುನಿರಾಬಾದ್ ಐ ಆರ್ ಬಿ ಪೊಲೀಸ್ ಗೋಸಲಪ್ಪರ ಅವರ ಈ ಪೋರಿಯ ಗಣಿತವನ್ನು ಕಂಡು ಎಲ್ಲರು ಆಚ್ಚರಿ ಪಡುತ್ತಾರೆ. ನಿಜಕ್ಕೂ ಈ ಬಾಲಕಿಯ ಮೆಮೊರಿ ಅದ್ಭುತ.

ಪಶು ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಆಗ್ರಹಿಸಿ ಕರವೇ ಕಾರ್ಯಕರ್ತರ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಲಕ್ಷ್ಮೇಶ್ವರ: ಕಳೆದ ನಾಲ್ಕು ವರ್ಷಗಳಿಂದ ಪಶು ವೈದ್ಯರು ಇಲ್ಲದೇ ಜಾನುವಾರುಗಳು ಸಾವನ್ನಪ್ಪುತ್ತಿದ್ದ ಕೂಡಲೇ ಪಶು ವೈದ್ಯರನ್ನು ನಿಯೋಜಿಸುವಂತೆ ಒತ್ತಾಯಿಸಿ ತಾಲೂಕಿನ ಶಿಗ್ಲಿ ಗ್ರಾಮದಲ್ಲಿ ಕರವೇ‌ ಹಾಗೂ ಶ್ರೀರಾಮಸೇನಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗ್ರಾಮದ ‌ಬಜಾರ್ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೂಡಲೇ ವೈದ್ಯರನ್ನು ನೇಮಿಸುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ಗೋಡಿ, ಈಗಾಗಲೇ ವೈದ್ಯರ ನೇಮಕಗೊಳಿಸಲು ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಇದುವರೆಗೂ ಪಶು ವೈದ್ಯರ ನೇಮಕ ಮಾಡಿಲ್ಲ. ಇದರಿಂದಾಗಿ ರೈತರಿಗೆ ಸಮಸ್ಯೆ ಆಗಿದ್ದು,ಅನಾರೋಗ್ಯ ಕ್ಕೀಡಾದ ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪತ್ತಿವೆ. ಇದನ್ನು ಮನಗಂಡು ಅಧಿಕಾರಿಗಳು ವೈದ್ಯರ ನೇಮಕಗೊಳಿಸಬೇಕು. ಇನ್ನೂ ಹದಿನೈದು ದಿನಗಳಲ್ಲಿ ಶಿಗ್ಲಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯರನ್ನು ನೇಮಕಗೊಳಸದೇ ಇದ್ದರೆ ತಹಸೀಲ್ದಾರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಕರವೇ ಲಕ್ಷ್ಮೇಶ್ವರ ತಾಲೂಕು ಅಧ್ಯಕ್ಷ ನಾಗೇಶ್ ಅಮರಾಪೂರ, ಉಪಾಧ್ಯಕ್ಷ ಸುರೇಶ್, ಶಿಗ್ಲಿ ಗ್ರಾಮ ಘಟಕದ ಲುಕಮಾನ್ ಬೆಟಗೇರಿ, ಶ್ರೀರಾಮಸೇನಾ ಅಧ್ಯಕ್ಷ ಸಾಗರ ಅರಳಿಹಳ್ಳಿ, ಮಾಂತೇಶ್ ಅಡರಕಟ್ಟಿ ಸೇರಿದಂತೆ ಗ್ರಾಮದ ನೂರಾರು ರೈತರು ಪಾಲ್ಗೊಂಡಿದ್ದರು.

ಸುಗರ್ ಫ್ಯಾಕ್ಟರಿ ಸೆಕ್ಯೂರಿಟಿ ಗಾರ್ಡ್ ಹತ್ಯೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಮನೆಯಲ್ಲಿ ಮಲಗಿದ್ದ ವೇಳೆ ಸೆಕ್ಯೂರಿಟಿ ಗಾರ್ಡ್ ನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಮುಂಡರಗಿ ತಾಲೂಕಿನ ಗಂಗಾಪೂರ ಗ್ರಾಮದಲ್ಲಿ ಈ ದುರ್ಘಟನೆ ಮಧ್ಯರಾತ್ರಿ ನಡೆದಿದ್ದು ಈಗ ಬೆಳಕಿಗೆ ಬಂದಿದೆ.

ಗಂಗಾಪೂರ ಗ್ರಾಮದ ಬಳಿ ಇರುವ ವಿಜಯನಗರ ಸಕ್ಕರೆ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಫಕ್ಕೀರೇಶ್ ತಳವಾರ (32) ಕೊಲೆಗೀಡಾದ ದುರ್ದೈವಿ.

ಸುದ್ದಿ ತಿಳಿದ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಯಾವ ಕಾರಣಕ್ಕಾಗಿ ಈ ಕೊಲೆ ನಡೆದಿರಬಹುದು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

ಕೊಲೆಗೀಡಾದ ಫಕ್ಕಿರೇಶ್ ನ ಪತ್ನಿ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಡಾ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ; 3 ಜಿಲ್ಲೆ ಬಿಜೆಪಿ ಮುಖಂಡರ ಜಾತಿ ಲೆಕ್ಕಾಚಾರ, ಲಾಭಿ!

0

-ಬಿಯಸ್ಕೆ
ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಬಸನಗೌಡ ತುರವಿಹಾಳ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ ಬೆನ್ನಲ್ಲೆ 3 ಜಿಲ್ಲೆಯ ಬಿಜೆಪಿ ಮುಖಂಡರು ತೆರವಾದ ಅಧಿಕಾರ ಹಿಡಿಯಲು ಪೈಪೋಟಿ ಆರಂಭಿಸಿದ್ದಾರೆ.

ಪ್ರತಾಪಗೌಡ ಪಾಟೀಲ್ ಗೆ ಬಿಜೆಪಿ ಟಿಕೇಟ್ ಪಕ್ಕಾ ಎಂಬುದನ್ನು ಅರಿತ ಮಸ್ಕಿ ವಿಧಾನಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಸನಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಆಗೋದು ಬಹುತೇಕ ಖಚಿತವಾಗಿದೆ.
ಇದರ ಬೆನ್ನಲ್ಲೆ ಕೊಪ್ಪಳ-ರಾಯಚೂರು-ಬಳ್ಳಾರಿ ಜಿಲ್ಲೆಯ ಬಿಜೆಪಿ ವಲಯದಲ್ಲಿ, ಮುನಿರಾಬಾದ್ ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ(ಕಾಡಾ-CADA)ದ ಅಧ್ಯಕ್ಷ ಸ್ಥಾನ ಯಾರಿಗೆ? ಎಂಬ ಚರ್ಚೆ ಆರಂಭವಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ಮತ್ತು ಗಂಗಾವತಿ ತಾಲೂಕಿನಲ್ಲಂತೂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಕಳೆದ‌ ಸುಮಾರು 7 ವರ್ಷದ ಹಿಂದೆ ‌ಗಿರೇಗೌಡ ಅವರು ಕಾಡಾ ಅಧ್ಯಕ್ಷರಾಗಿದ್ದರು. ನಂತರ ಕೊಪ್ಪಳ ಜಿಲ್ಲೆಗೆ ಕಾಡಾ ಅಧ್ಯಕ್ಷ ಸ್ಥಾನ ಒಲಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಕೊಪ್ಪಳ ಜಿಲ್ಲೆಗೆ ಸ್ಥಾನ ನೀಡಬೇಕು ಎಂಬ ಮಾತು ಕೇಳಿ ಬಂದಿದೆ.

ಈ ಕಾರಣಕ್ಕೆ ಕೊಪ್ಪಳ ಜಿಲ್ಲೆಯಲ್ಲಿ ಆಕಾಂಕ್ಷಿಗಳ ಪಟ್ಟಿ ಸಹಜವಾಗಿಯೇ ಹೆಚ್ಚಾಗಿದೆ.
ಕುರ್ಚಿ ಮೇಲೆ ಕಣ್ಣಿಟ್ಟಿರುವ‌ ಬಿಜೆಪಿಯ 2ನೇ ಹಂತದ ನಾಯಕರು ನೇರವಾಗಿ ತಮ್ಮ ಮನಸ್ಸಿನ ಆಸೆಯನ್ನು ಹೈಕಮಾಂಡ್ ಮುಂದೆ ಹೇಳಿಕೊಳ್ಳುತ್ತಿಲ್ಲ. ಬದಲಾಗಿ ತಮ್ಮ ಬೆಂಬಲಿಗರಿಂದ ಫೇಸ್ ಬುಕ್ ಮತ್ತು ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಮುಂದಿಡುತ್ತಿದ್ದಾರೆ.
ಕೆಲ ಮುಖಂಡರು ಜಾತಿ ಲೆಕ್ಕಾಚಾರ, ಹಲವರು ಪಕ್ಷಕ್ಕೆ ಸೇವೆ ಸಲ್ಲಿಸಿದ ಮಾನದಂಡದ ಮೇಲೆ ಹುದ್ದೆ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಮಾಜಿ ಮಂತ್ರಿ ನಾಗಪ್ಪ ಸಾಲೋಣಿ, ಬಿಜೆಪಿ ‌ಮುಖಂಡರಾದ ತಿಪ್ಪೇರುದ್ರಸ್ವಾಮಿ, ನಾಗರಾಜ ಬಿಲ್ಗಾರ್, ಚನ್ನಬಸವ ಸುಂಕದ, ಯರಕಲ್ ಗುರುಸಿದ್ದಪ್ಪ ಸೇರಿ ಸುಮಾರು 10 ಮುಖಂಡರ ಹೆಸರುಗಳು ಕೇಳಿಬರುತ್ತಿವೆ.

ಈ ಎಲ್ಲ ಮುಖಂಡರ ಬೆಂಬಲಿಗರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಕಾಡಾ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ತಮ್ಮದೇ ಆದ ರಾಜಕೀಯ ಹಿನ್ನೆಲೆ ಮತ್ತು ಜಾತಿ ಬಲದ ಆಧಾರದಲ್ಲಿ ಹೈಕಮಾಂಡ್ ಮೇಲೆ ಒತ್ತಡ ಹಾಕುವ ಕೆಲಸ ಮಾಡುತಿದ್ದಾರೆ.
ಆದರೆ, ಕನಕಗಿರಿ- ಗಂಗಾವತಿ ಶಾಸಕರು ಮತ್ತು ಕೊಪ್ಪಳ ಸಂಸದರು ಯಾರಿಗೆ ಶಿಫಾರಸ್ಸು ಮಾಡ್ತಾರೆ, ಕಾಡಾ ಅಧ್ಯಕ್ಷ ಸ್ಥಾನದ ಅಧಿಕಾರ ಯಾರಿಗೆ ಸಿಗುತ್ತೋ ಕಾದು ನೋಡಬೇಕಿದೆ.

ಅಬಕಾರಿ ಪೊಲೀಸರ ದಾಳಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಗಾಂಜಾ ಮಾರಾಟ ಮಾಡುತ್ತಿದ್ದ ಮನೆಯ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ ಆರೋಪಿ ಸಮೇತ 10 ಸಾವಿರ ರೂ, ಮೌಲ್ಯದ ಗಾಂಜಾ ವಶಪಡಿಸಿಕೊಂಡ ಘಟನೆ ಗದಗ ತಾಲೂಕಿನ ಕುರ್ತಕೋಟಿ ಗ್ರಾಮದಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಈರಪ್ಪ ಯಲ್ಲಪ್ಪ ಪೂಜಾರ ಎಂದು ಗುರುತಿಸಲಾಗಿದ್ದು, ಬಂಧಿತನ ವಿರುದ್ಧ ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮನೆಯಲ್ಲೇ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಪೊಲೀಸರು ಈ ದಾಳಿ ನಡೆಸಿದ್ದರು.

ಅಬಕಾರಿ ಡಿಸಿ ಮೋತಿಲಾಲ್ ನಿರ್ದೇಶನ ಮೇರೆಗೆ ಡಿಎಎಸ್ಪಿ ಮಂಜುನಾಥ್ ಮಾಲಿಪಾಟೀಲ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಮಲ್ಲಿಕಾರ್ಜುನ ರೆಡ್ಡಿ, ನಾರಾಯಣ ಪವಾರ್ ಸಿಬ್ಬಂದಿಗಳಾದ ಗಿರೀಶ್ ರೆಡ್ಡಿ, ಮಂಜುನಾಥ್ ಗೌಡ್, ನಜೀರಸಾಬ್, ಚಂದ್ರು ರಾಥೋಡ್ ಈ ದಾಳಿಯಲ್ಲಿ ಪಾಲ್ಗೊಂಡಿದ್ದರು.

ಜನರ ತೀರ್ಪಿನ ಮುಂದೆ ಯಾವ ಬಂಡೆಯೂ ಇಲ್ಲ, ಟಗರು ಇಲ್ಲ:ಸಚಿವ ಬಿ.ಸಿ. ಪಾಟೀಲ್

0

ವಿಜಯಸಾಕ್ಷಿ ಸುದ್ದಿ ಕೊಪ್ಪಳ
ಜನರ ತೀರ್ಪಿನ ಮುಂದೆ ಯಾವ ಬಂಡೆಯೂ ಇಲ್ಲ, ಟಗರು ಇಲ್ಲ. ಈಗ ಆ ಬಂಡೆಗಳು, ಟಗರುಗಳು ಎಲ್ಲಿ ಹೋದವು ಎಂದು ಕೃಷಿ ಸಚಿವ ಬಿ.ಸಿ‌. ಪಾಟೀಲ್ ಪ್ರಶ್ನಿಸಿದ್ದಾರೆ.
ಕೊಪ್ಪಳದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಿರಾ ಮತ್ತು ಆರ್. ಆರ್. ನಗರ ಉಪಚುನಾವಣೆಯ ಫಲಿತಾಂಶ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ ಗೆ ಸಿಕ್ಕಿಲ್ವಾ? ಆ ಬಂಡೆ, ಈ ಬಂಡೆ, ಟಗರು ಎನ್ನುತ್ತಿದ್ದವರು ಈಗ ಎಲ್ಲಿ ಹೋದವು? ಏನಾದವು ಎಂದು ಪ್ರಶ್ನಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಕಷ್ಟದ ಸಮಯದಲ್ಲಿಯೂ ಮಾಡಿರುವ ಒಳ್ಳೆಯ ಕೆಲಸಗಳಿಂದ ಜನರು ಬಿಜೆಪಿ ಪರವಾಗಿದ್ದಾರೆ‌. ಶಿರಾ, ಆರ್. ಆರ್. ನಗರದಲ್ಲಿ ಬಿಜೆಪಿ ಮುನ್ನಡೆ ಇದೆ. ಮಧ್ಯಪ್ರದೇಶ ಹಾಗೂ ಬಿಹಾರದಲ್ಲಿಯೂ ಎನ್ಡಿಎ ಮುಂದೆ ಇದೆ‌. ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ ಎಂಬುದರ ಮುನ್ಸೂಚನೆ ಇದು. ಕೆಲವೇ ಕೆಲವು ಜನರ ಹಿಡಿತದಲ್ಲಿರುವ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗಿದೆ ಎಂಬುದರ ಜ್ವಲಂತ ಉದಾಹರಣೆ ಇದು ಎಂದರು.
ಇನ್ನು ಜೆಡಿಎಸ್ ನೆಲಕಚ್ಚಿದೆ. ಆರ್. ಆರ್. ನಗರದಲ್ಲಿ ಜೆಡಿಎಸ್ ಲೆಕ್ಕಕ್ಕೂ ಇಲ್ಲ, ಠೇವಣಿಯೂ ಇಲ್ಲ. ಶಿರಾದಲ್ಲಿ ಮಾತ್ರ ಅನುಕಂಪದಿಂದ ಒಂದಿಷ್ಟು ಫೈಟ್ ನೀಡುತ್ತಿದೆ ಎಂದರು.
ಇನ್ನು ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ಆಧಾರದ ಮೇಲೆ ಅಥವಾ ಇನ್ಯಾವುದರ ಆಧಾರದ ಮೇಲೆ ಯಾರೂ ಸಹ ಎಂಟ್ರಿಯಾಗೋದು ತಪ್ಪು. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತನಿಖೆ ನಡೆಸಿ ಏನು ಕ್ರಮ ಕೈಗೊಳ್ಳಬೇಕು ಅದನ್ನು ಮಾಡುತ್ತಾರೆ. ಯಾರೇ ಆಗಲಿ ಕೊಲೆ ಪ್ರಕರಣದಲ್ಲಿ ಎಂಟ್ರಿಯಾಗೋದು ತಪ್ಪು ಎಂದರು.
ಇನ್ನು ಯಡಿಯೂರಪ್ಪ ಅವರು ಈ ಹಿಂದೆ ಸಿಎಂ ಆಗಿದ್ದಾಗ ಗಂಗಾವತಿ ಎಂಜಿನಿಯರಿಂಗ್ ಕಾಲೇಜ್ ಮಂಜುರಾತಿಯಾಗಿತ್ತು. ಕಾರಣಾಂತರದಿಂದ ಅದು ಸ್ಥಗಿತಗೊಂಡಿದೆ. ಈ ವರ್ಷ ಅದನ್ನು ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಡಿಸೆಂಬರ್ ತಿಂಗಳಿಂದ ಭತ್ತ ಖರೀದಿ ಮಾಡಲಾಗುತ್ತದೆ ಎಂದು ಸಚಿವ ಬಿ.ಸಿ. ಪಾಟೀಲ್ ಹೇಳಿದರು.

error: Content is protected !!