Home Blog Page 3159

ಕೊರೊನಾಗೆ ಬಲಿಯಾದ ದಂಪತಿ!

ವಿಜಯಸಾಕ್ಷಿ ಸುದ್ದಿ, ಬಾಗಲಕೋಟ

ದೇಶಕ್ಕೆ ವಕ್ಕರಿಸಿರುವ ಹೆಮ್ಮಾರಿಯಿಂದಾಗಿ ಎಷ್ಟೋ ಕುಟುಂಬಗಳಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಎಷ್ಟೋ ಮಕ್ಕಳು ತಬ್ಬಲಿಯಾಗಿದ್ದಾರೆ. ಒಂದೇ ವಾರದ ಅಂತರದಲ್ಲಿ ಈ ಹೆಮ್ಮಾರಿಯಿಂದಾಗಿ ತಂದೆ – ತಾಯಿ ಸಾವನ್ನಪ್ಪಿದ್ದು, ಬರೋಬ್ಬರಿ 8 ಮಕ್ಕಳನ್ನು ಬಿಟ್ಟು ಹೋಗಿದ್ದಾರೆ.

ಈ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ. ಇಲ್ಲಿಯ ರಾಮಪ್ಪ ಹೂಗಾರ, ದುಂಡವ್ವ ಹೂಗಾರ ಅವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಮೇ. 29ರಂದು ದುಂಡವ್ವ ಹೂಗಾರ ಸೋಂಕಿಗೆ ಬಲಿಯಾಗಿದ್ದರೆ, ಆ ನಂತರ ದುಂಡಪ್ಪ ಬಲಿಯಾಗಿದ್ದಾರೆ.

ಈ ದಂಪತಿಗೆ 7 ಜನ ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗು ಇದ್ದಾನೆ. ಸದ್ಯ 6 ಜನ ಹೆಣ್ಣು ಮಕ್ಕಳ ಮದುವೆ ಮಾಡಿದ್ದಾರೆ. ಸದ್ಯ 16 ವರ್ಷದ ಪುತ್ರಿ, 17 ವರ್ಷದ ಮಗ ಇದ್ದಾರೆ. ಆರಂಭದಲ್ಲಿ ರಾಮಪ್ಪ ಅವರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆ ನಂತರ ಆರೈಕೆ ಮಾಡುತ್ತಿದ್ದ ಪತ್ನಿಗೂ ತಗುಲಿದೆ. ಇಬ್ಬರಿಗಾಗಿ ಕುಟುಂಬಸ್ಥರು ಬರೋಬ್ಬರಿ ರೂ. 8 ಲಕ್ಷ ಖರ್ಚು ಮಾಡಿದ್ದರು. ಆದರೆ, ಚಿಕಿತ್ಸ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ.

ಸೋಂಕಿನಿಂದ ಸಾವನ್ನಪ್ಪಿದ್ದ ತಂದೆಯ ಅಂತ್ಯ ಸಂಸ್ಕಾರ ಕಂಡ ಮಗನಿಗೆ ಹೃದಯಾಘಾತ!

ವಿಜಯಸಾಕ್ಷಿ ಸುದ್ದಿ, ಮಂಗಳೂರು

ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದ ತಂದೆಯ ಅಂತ್ಯಕ್ರಿಯೆ ನೋಡಿದ ಮಗನಿಗೆ ಹೃದಯಘಾತವಾಗಿ ಮೃತಪಟ್ಟ ಘಟನೆ ಸಮೀಪದ ಬಂಟ್ವಾಳದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಣಚ ಗ್ರಾಮದ ಬೈಲಗುತ್ತು ಗ್ರಾಮದ ನಿವಾಸಿ ಭುಜಂಗ ಶೆಟ್ಟಿ (85) ಕೊರೊನಾಗೆ ಬಲಿಯಾಗಿದ್ದರು. ಹೀಗಾಗಿ ಇಂದು ಅವರ ಅಂತ್ಯ ಸಂಸ್ಕಾರ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಿದ್ದ ಮಗ ಶೈಲೇಶ್ ಶೆಟ್ಟಿ(44 ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ದಾರಿ ಮಧ್ಯೆ ಅಸುನೀಗಿದ್ದಾರೆ.

ಶೈಲೇಶ್ ಅವರು ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಎರಡು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದರು. ಇವರ ಮನೆಯಲ್ಲಿ ಭುಜಂಗ ಶೆಟ್ಟಿ ಅವರ ಪತ್ನಿ ಹೊರತು ಪಡಿಸಿದರೆ ಎಲ್ಲರಿಗೂ ಸೋಂಕು ತಗುಲಿತ್ತು. ಆದರೆ, ಶೈಲೇಶ್ ಶೆಟ್ಟಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದರು. ಹೀಗಾಗಿ ಅವರಲ್ಲಿ ಸೋಂಕು ಕಾಣಿಸಿಕೊಂಡಿರಲಿಲ್ಲ. ಆದರೆ, ತಂದೆಯ ಅಂತ್ಯಕ್ರಿಯೆ ನೋಡಿ, ಹೃದಯಾಘಾತವಾಗಿದೆ. ಹೀಗಾಗಿ ಅವರು ಕೂಡ ತಂದೆಯೊಂದಿಗೆ ಇಹಲೋಕ ತ್ಯಜಿಸಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾದರೂ ಸಾವು ಮಾತ್ರ ನಿಲ್ಲುತ್ತಿಲ್ಲ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೂ ಮರಣ ಕೇಕೆ ಮಾತ್ರ ಮುಂದುವರೆದಿದೆ. ಇಂದು ರಾಜ್ಯದಲ್ಲಿ 16,387 ಜನರಲ್ಲಿ ಸೋಂಕು ಕಾಣಿಸಿಕೊಡಿದ್ದು, 463 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಇಂದು ರಾಜ್ಯದ 21,199 ಜನರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇಲ್ಲಿಯವರೆಗೂ 26,35,122 ಜನರಲ್ಲಿ ಸೋಂಕು ಕಂಡಿದೆ.

ಅಲ್ಲದೇ, ಸದ್ಯ 2,93,024 ಜನ ಸೋಂಕಿತರು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ 30,017 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ.

ಇಂದು ಬೆಂಗಳೂರಿನಲ್ಲಿ 4,095 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು ನಗರದಲ್ಲಿ 307 ಜನ ಬಲಿಯಾಗಿದ್ದಾರೆ. ಇನ್ನುಳಿದಂತೆ ಬಾಗಲಕೋಟೆ 262, ಬಳ್ಳಾರಿ 525, ಬೆಳಗಾವಿ 1,006, ಬೆಂಗಳೂರು ಗ್ರಾಮಾಂತರ 164, ಬೆಂಗಳೂರು ನಗರ 4,095, ಬೀದರ್ 23,

ಚಾಮರಾಜನಗರ 258, ಚಿಕ್ಕಬಳ್ಳಾಪುರ 360, ಚಿಕ್ಕಮಗಳೂರು 214, ಚಿತ್ರದುರ್ಗ 483, ದಕ್ಷಿಣ ಕನ್ನಡ 618, ದಾವಣಗೆರೆ 535, ಧಾರವಾಡ 245, ಗದಗ 285, ಹಾಸನ 520, ಹಾವೇರಿ 79, ಕಲಬುರಗಿ 117, ಕೊಡಗು 298, ಕೋಲಾರ 389, ಕೊಪ್ಪಳ 295, ಮಂಡ್ಯ 711, ಮೈಸೂರು 1,687, ರಾಯಚೂರು 249,

ರಾಮನಗರ 165, ಶಿವಮೊಗ್ಗ 548, ತುಮಕೂರು 882, ಉಡುಪಿ 636, ಉತ್ತರ ಕನ್ನಡ 456, ವಿಜಯಪುರ 166 ಮತ್ತು ಯಾದಗಿರಿಯಲ್ಲಿ 116 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಬುಧವಾರ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ; ನಾಲ್ವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಸೋಂಕಿತರ ಸಂಖ್ಯೆಯಲ್ಲಿ ಇಳಿಮುಖ ಕಂಡಿತ್ತು.

ಆದ್ರೆ ಇಂದು ಮತ್ತೆ ಸೋಂಕು ಚೇತರಿಸಿಕೊಂಡಿದೆ. ಇಂದು 285 ಜನರಿಗೆ ಸೋಂಕು ತಗುಲಿದೆ. ಬುಧವಾರ ಜಿಲ್ಲಾಡಳಿತದ ಮಾಹಿತಿ ಪ್ರಕಾರ ನಾಲ್ವರು ಮೃತಪಟ್ಟಿದ್ದಾರೆ.

ಇಂದಿನ 285 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 23065 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -115, ಮುಂಡರಗಿ-24, ನರಗುಂದ-19, ರೋಣ-45, ಶಿರಹಟ್ಟಿ-73, ಹೊರಜಿಲ್ಲೆಯ-09 ಸೇರಿದಂತೆ 285 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 258 ಕ್ಕೇರಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ನಿವಾಸಿ 60 ವರ್ಷದ ಮಹಿಳೆ ಮೇ-17 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ ಮೇ-31 ರಂದು ಮೃತಪಟ್ಟಿದ್ದಾರೆ.

ಗದಗ ಶಹರದ ನಿವಾಸಿ 57 ವರ್ಷದ ಮಹಿಳೆ ಮೆ,30 ರಂದು ಜಿಮ್ಸ್ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 30 ರಂದೇ ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಹಿರೇಕೊಪ್ಪ ನಿವಾಸಿ 65 ವರ್ಷದ ವ್ಯಕ್ತಿ ಮೇ, 15 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ, 30 ರಂದು ಮೃತಪಟ್ಟಿದ್ದಾರೆ.

ಶಿರಹಟ್ಟಿ ತಾಲೂಕಿನ ಗೊಜನೂರ ನಿವಾಸಿ 45 ವರ್ಷದ ವ್ಯಕ್ತಿ ಮೇ 28 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 31 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು 347 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 21484 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 2323 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 193 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಕಾಂಗ್ರೆಸ್ ‌ಮುಖಂಡ ಅಲ್ತಾಫ್ ಕಿತ್ತೂರು ವಿರುದ್ಧ ಕೇಸ್

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಕೋವಿಡ್ ನಿಯಮಾವಳಿ ಉಲ್ಲಂಘಿಸಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಮುಖಂಡ, ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಮಾಜಿ ಸದಸ್ಯ ಅಲ್ತಾಫ್ ನವಾಜ್ ಕಿತ್ತೂರು ವಿರುದ್ಧ ಪ್ರಕರಣ ದಾಖಲಾಗಿದೆ.

ಕಸಬಾ ಪೇಟೆ ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕೇಸ್ ಬುಕ್ ಮಾಡಿದ್ದಾರೆ ಎನ್ನಲಾಗಿದೆ.

ನಿನ್ನೆ ಹಳೆ ಹುಬ್ಬಳ್ಳಿಯ ಮಸೀದಿ ಪಕ್ಕದ ಶೆಡ್ ನಲ್ಲಿ ಕಾರ್ಯಕರ್ತರ ಹಾಗೂ ಅಭಿಮಾನಿಗಳನ್ನು ಸೇರಿಸಿಕೊಂಡು ಅಲ್ತಾಫ್ ಕಿತ್ತೂರು ಅದ್ದೂರಿ ಬರ್ತಡೆ ಪಾರ್ಟಿ ಮಾಡಿದ್ದರು.

ಮುಂಜಾನೆಯಿಂದಲೇ ವಿವಿಧ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಅಷ್ಟೇ ಅಲ್ಲ ಸೋಶಿಯಲ್ ಮೀಡಿಯಾದಲ್ಲೂ ಬರ್ತಡೆ ಪಾರ್ಟಿಯ ವಿಡಿಯೋ ವೈರಲ್ ಆಗಿತ್ತು. ವಿಜಯಸಾಕ್ಷಿ ವೆಬ್ ನಲ್ಲೂ ವಿಸ್ತೃತ ವರದಿ ಪ್ರಕಟವಾಗಿತ್ತು.

ಬರ್ತಡೆ ಪಾರ್ಟಿ ಸುದ್ದಿ ಬಂದಿದ್ದನ್ನು ಅರಗಿಸಿಕೊಳ್ಳದ ಅಲ್ತಾಫ್ ಸಾಹೇಬರು, ಒಂದು ವಿಡಿಯೋ ಮಾಡಿ ಅದರಲ್ಲಿ ಸುದ್ದಿ ಪ್ರಕಟಿಸಿದ ಮಾಧ್ಯಮಗಳ ವಿರುದ್ಧ ಹರಿ ಹಾಯ್ದಿದ್ದರು. ಅಷ್ಟೇ ಅಲ್ಲದೇ, ಮಾನನಷ್ಟ ಮೂಕದ್ದೆಮೆ ದಾಖಲು ಮಾಡುವ ಬೆದರಿಕೆ ಕೂಡ ಹಾಕಿದ್ದರು. ಆ ವಿಡಿಯೋ ವಿವಿಧ ಗ್ರೂಪ್ ಗಳಲ್ಲಿ ಶೇರ್ ಮಾಡಲಾಗಿತ್ತು. ಆದರೆ ಗ್ರೂಪ್‌ ನಲ್ಲಿದ್ದ ಜನರು ಸುಳ್ಳು ಅಂತ ಪ್ರತಿಕ್ರಿಯೆ ನೀಡಿದ್ದರು.

ಕಸಬಾ ಪೇಟೆ ಠಾಣೆಯ ಇನ್ಸ್‌ಪೆಕ್ಟರ್ ರತನ್ ಕುಮಾರ್ ಜಿರಗ್ಯಾಳ ಈ ಕುರಿತು ಮಾಹಿತಿ ‌ನೀಡಿದ್ದು, ಮೊದಲಿಗೆ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಬಗ್ಗೆ ಪ್ರಕರಣ ದಾಖಲಾಗಿದ್ದು, ಇನ್ನೂ ಪರಿಶೀಲನೆ ನಡೆಸಲಾಗುತ್ತದೆ. ನಾವು ಬರ್ತಡೆ ಪಾರ್ಟಿ ನಡೆದಾಗ ಸ್ಥಳದಲ್ಲಿ ಇರಲಿಲ್ಲ. ಹಾಗಾಗಿ ಪರಿಶೀಲನೆ ನಡೆಸಿ ಉಳಿದವರ ಮೇಲೂ ಪ್ರಕರಣ ದಾಖಲು ಮಾಡಿಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುವುದು ಎಂದರು.

ಲಸಿಕೆ ಹಾಕಿಸಿಕೊಂಡರೆ ಬಂಪರ್ ಬಹುಮಾನ!

ವಿಜಯಸಾಕ್ಷಿ ಸುದ್ದಿ, ಚೆನ್ನೈ

ಒಂದೆಡೆ ಕೊರೊನಾ ಲಸಿಕೆಗೆ ಅಭಾವ ಸೃಷ್ಟಿಯಾಗುತ್ತಿದ್ದರೂ ಇನ್ನೊಂದೆಡೆ ಲಸಿಕೆ ಹಾಕಿಸಿಕೊಳ್ಳಲು ಜನರು ಭಯ ಪಡುತ್ತಿದ್ದಾರೆ. ಈ ಮಧ್ಯೆ ತಮಿಳುನಾಡಿನಲ್ಲಿ ಲಸಿಕಾ ಅಭಿಯಾನ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಡುಗೊರೆಗಳನ್ನು ನೀಡಲಾಗುತ್ತಿದೆ. ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಉಲುಂದರ್‌ ಪೇಟೆ ಬಳಿಯ ಎಂ.ಗುನ್ನಥೂರು ಗ್ರಾಮದಲ್ಲಿನ ಜನರಿಗೆ ಈ ರೀತಿಯ ಉಡುಗೊರೆಗಳನ್ನು ವಿತರಿಸಲಾಗಿದೆ.

ಈ ಗ್ರಾಮದಲ್ಲಿ 3 ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದರು. ಈ ಪೈಕಿ 20ಕ್ಕೂ ಹೆಚ್ಚು ಜನರು ಸೋಂಕಿಗೆ ಒಳಗಾಗಿದ್ದರು. ಈ ಕಾರಣಕ್ಕಾಗಿ ಇಲ್ಲಿ ರಾಜ್ಯ ಆರೋಗ್ಯ ಇಲಾಖೆ ವಿಶೇಷ ಕೊರೋನಾ ಲಸಿಕೆ ಶಿಬಿರ ನಡೆಸುತ್ತಿದೆ. ಪ್ರತಿ ದಿನ 500ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದರು. 48 ಗಂಟೆಗಳಲ್ಲಿ ಕೇವಲ 50 ಜನ ಮಾತ್ರ ಲಸಿಕೆ ಹಾಕಿಸಿಕೊಂಡಿದ್ದರು.

ಆರೋಗ್ಯ ಅಧಿಕಾರಿಗಳು ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ ಜನರು ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರಲಿಲ್ಲ. ಹೀಗಾಗಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರೊಬ್ಬರು ಲಸಿಕೆ ಹಾಕಿಸಿಕೊಂಡವರಿಗೆ ಉಡುಗೊರೆಗಳನ್ನು ವಿತರಿಸುವ ಕಾರ್ಯ ಮಾಡಿ, ಜನರನ್ನು ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.

ಲಸಿಕೆ ಹಾಕಿಸಿಕೊಂಡವರಿಗೆ ಅಡುಗೆ ಮನೆ ವಸ್ತುಗಳು ಮತ್ತು ಪ್ಲಾಸ್ಟಿಕ್ ಬಿಂದಿಗೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಗ್ರಾಮಸ್ಥರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಲು ಜನರು ಭಯ ಪಡುತ್ತಿರುವುದಕ್ಕೆ ಲಸಿಕಾ ಶಿಬಿರದಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಕಾರ್ಯಕರ್ತರ ಬೇಸರಕ್ಕೆ ಕಾರಣವಾಗಿತ್ತು. ಈ ಪರಿಸ್ಥಿತಿ ಕಂಡ ಗ್ರಾಮದ ಸಾಮಾಜಿಕ ಕಾರ್ಯಕರ್ತ, ತಂಬಿದುರೈ ಮತ್ತು ಯುವಕರ ತಂಡ ಲಸಿಕೆ ಹಾಕಿಸಿಕೊಂಡವರಿಗೆ ಪ್ರೋತ್ಸಾಹವಾಗಿ ಅಡುಗೆ ಮನೆ ವಸ್ತುಗಳು ಸೇರಿದಂತೆ ಇತರೆ ಉಡುಗೊರೆಗಳನ್ನು ಹಂಚಲು ಮುಂದಾಗಿದ್ದಾರೆ.

ಲಸಿಕೆ ಹಾಕಿಸಿಕೊಳ್ಳಲು ಬರುವವರಿಗೆ ಪ್ಲೇಟ್, ಗ್ಲಾಸ್, ಟಿಫನ್ ಬಾಕ್ಸ್ ಮತ್ತು ಪ್ಲಾಸ್ಟಿಕ್ ಬಿಂದಿಗೆಯಂತಹ ವಸ್ತುಗಳನ್ನು ನೀಡುತ್ತಿದ್ದಾರೆ. ಇದರೊಂದಿಗೆ ಜನರನ್ನು ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಿಸುತ್ತಿದ್ದಾರೆ.
ಕೊರೋನಾ ಲಸಿಕೆ ಪಡೆಯಲು ಬರುವ ಪ್ರತಿಯೊಬ್ಬರೂ ಮೇಲಿನ ಒಂದು ವಸ್ತುವನ್ನು ಉಡುಗೊರೆಯಾಗಿ ತೆಗೆದುಕೊಳ್ಳಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿದ್ದರು.

ಈ ಪ್ರಕಟಣೆ ಗುನ್ನತೂರು ಗ್ರಾಮದಲ್ಲಿ ಕಾಡ್ಗಿಚ್ಚಿನಂತೆ ಹರಡಿ, ಲಸಿಕಾ ಶಿಬಿರದತ್ತ ಜನ ಸಾಗರವೇ ಹರಿಯುತ್ತಿದೆ. ವೈದ್ಯರೇ ಕರೆದು ಕರೆದು ಲಸಿಕೆ ನೀಡುತ್ತೇವೆ ಎಂದರೂ ಹಾಕಿಸಿಕೊಳ್ಳದ ಜನ, ಸದ್ಯ ಸರತಿ ಸಾಲಿನಲ್ಲಿ ಬಂದು ಗಂಟೆಗಟ್ಟಲೇ ಕಾಯ್ದು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ.

ನಿನ್ನೆ ಒಂದೇ ದಿನ 80 ಗ್ರಾಮಸ್ಥರು ಲಸಿಕೆ ಹಾಕಿಸಿಕೊಂಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಯಾರೂ ಮನಸ್ಸು ಮಾಡದ ಸಂದರ್ಭದಲ್ಲಿ ಈ ಅಭಿಯಾನ ಪ್ರಾರಂಭಿಸಲಾಯಿತು. ಹೀಗಾಗಿ ಅಡುಗೆ ಮನೆಗೆ ಬೇಕಾಗುವ ವಸ್ತುಗಳನ್ನು ತಂದು ಕೊಡುವ ಕುರಿತು ನಾವು ನಿರ್ಧರಿಸಿದೆವು. ಹೀಗಾಗಿ 48 ಗಂಟೆಗಳಲ್ಲಿ 50ಕ್ಕಿಂತ ಕಡಿಮೆ ಇದ್ದ ಫಲಾನುಭವಿಗಳ ಸಂಖ್ಯೆ, ಸದ್ಯ 130ಕ್ಕೆ ಏರಿಕೆ ಕಂಡಿದೆ. ಕೇವಲ 24 ಗಂಟೆಗಳಲ್ಲಿ 80ಕ್ಕೂ ಹೆಚ್ಚು ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ತಂಬಿದುರೈ ಹೇಳಿದ್ದಾರೆ. ತಂಬಿದುರೈ ಮತ್ತು ಅವರ ತಂಡದ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಧನದಾಹಿ ಆಸ್ಪತ್ರೆಯ ಮೇಲೆ ದಾಳಿ ಮಾಡಿದ ಅಧಿಕಾರಿಗಳು!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರೊನಾ ಸೋಂಕಿತರದಿಂದ ಲಕ್ಷ, ಲಕ್ಷ ಹಣ ವಸೂಲಿ ಮಾಡುತ್ತಿದ್ದ ಆಸ್ಪತ್ರೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕಂಪರ್ಟ್ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಮೇಲೆ ದಾಳಿ ಮಾಡಿದ್ದಾರೆ. ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್, ಹಿರಿಯ ಐಎಎಸ್ ಅಧಿಕಾರಿ ಪಿ ಮಣಿವಣ್ಣನ್ ಸೇರಿದಂತೆ ಅಧಿಕಾರಿಗಳ ತಂಡ ದಾಳಿ ಮಾಡಿದೆ.

ಐಪಿಎಸ್ ಅಧಿಕಾರಿಗಳ ಮುಂದೆಯೇ ಆಸ್ಪತ್ರೆ ಸಿಬ್ಬಂದಿ ನೌಟಂಕಿ ಆಟವಾಡಲು ಪ್ರಾರಂಭಿಸಿದರು. ಇದಕ್ಕೆ ಅಲೋಕ್ ಕುಮಾರ್ ತಿರುಗೇಟು ನೀಡಿದ್ದಾರೆ. ಆಕ್ಸಿಜನ್ ಹೆಸರಿನಲ್ಲಿ ರೂ. 40 ರಿಂದ 50 ಸಾವಿರ ಚಾರ್ಜ್ ಮಾಡಲಾಗುತ್ತಿತ್ತು.
ಅಲ್ಲದೇ, ಧನದಾಹಿ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡಲು ಪ್ರತಿ ನಿಮಿಷಕ್ಕೆ ರೂ. ಸಾವಿರಾರು ಬಿಲ್ ಮಾಡುತ್ತಿದ್ದರು. ಪ್ರತಿ ಗಂಟೆಗೆ ಆಕ್ಸಿಜನ್ ನೀಡಲು ರೂ. 1 ಸಾವಿರ ಪಡೆದುಕೊಳ್ಳುತ್ತಿದ್ದರು. ಇದರೊಂದಿಗೆ ಆಕ್ಸಿಜನ್, ಐಸಿಯು ಎಂಬ ಹೆಸರಲ್ಲಿ ಲಕ್ಷ ಲಕ್ಷ ವಸೂಲಿ ಮಾಡುತ್ತಿದ್ದರು.

ಆಸ್ಪತ್ರೆಯಿಂದ ವಿವರಣೆ ಪಡೆದ ಐಪಿಎಸ್ ಅಧಿಕಾರಿ ಅಲೋಕ್‌ ಕುಮಾರ್ ಅವರು ಕಗ್ಗದಾಸಪುರ ಮುಖ್ಯ ರಸ್ತೆಯಲ್ಲಿರುವ ಕಂಫರ್ಟ್ ಆಸ್ಪತ್ರೆಯು ರೋಗಿಗಳಿಂದ ವಸೂಲಿ ಮಾಡಿದ್ದ ದುಡ್ಡನ್ನು ಅಲೋಕ್ ಕುಮಾರ್ ಮರು ವಸೂತಿ ಮಾಡುತ್ತಿದ್ದಾರೆ. 84 ಗಂಟೆ ಆಕ್ಸಿಜನ್ ನೀಡಿದ್ದಕ್ಕೆ ರೂ. 84 ಸಾವಿರ ರೂಪಾಯಿ ಬಿಲ್ ಪಡೆದಿದ್ದರು. ಸುಖಾ ಸುಮ್ಮನೆ ಕೊರೊನಾ ಸೋಂಕಿತರಿಗೆ ಎಚ್ಐವಿ ಟೆಸ್ಟ್ ಟೆಸ್ಟ್ ಮಾಡಿಸಿ ಬಿಲ್ ಚಾರ್ಜ್ ಮಾಡಿತ್ತು.

ಪೊಲೀಸರ ಕಾರ್ಯಾಚರಣೆ; ಅಕ್ರಮ ಮದ್ಯ ಸಂಗ್ರಹಸಿದ್ದ ಅಳಿಯ- ಮಾವನ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಿದ್ದು, ಮದ್ಯ ಮಾರಾಟಕ್ಕೆ ನಿಷೇಧ ನಿರ್ಬಂಧ ಹೇರಲಾಗಿದೆ.

ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಹುಲಕೋಟಿಯ ಅಳಿಯ- ಮಾವನನ್ನು ಗ್ರಾಮೀಣ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಮದ್ಯವನ್ನು ಅಕ್ರಮವಾಗಿ ಸಂಗ್ರಹದ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಎಸ್ಪಿ ಯತೀಶ್ ಎನ್, ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟರ್, ಸಿಪಿಐ ರವಿಕುಮಾರ್ ಕಪ್ಪತನವರ್ ಮಾರ್ಗದರ್ಶನದಲ್ಲಿ ಪಿಎಸ್ಐ ಅಜಿತಕುಮಾರ್ ಹೊಸಮನಿ ಹಾಗೂ ಸಿಬ್ಬಂದಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ಲಕ್ಷಾಂತರ ರೂ,‌ಮೌಲ್ಯದ ಮದ್ಯ ವಶಪಡಿಸಿಕೊಂಡಿದ್ದಾರೆ.

ಹುಲಕೋಟಿ ಸಮೀಪದ ಕೆಇಬಿ ಗ್ರಿಡ್ ಬಳಿ ಇರುವ ಮನೆಯಲ್ಲಿ ಈ ಮದ್ಯ ಸಂಗ್ರಹಿಸಿದ್ದ ಅಮೃತೇಶ್ವರ ವೀರಪ್ಪ ಸಾಲಗಡಗಿ ಹಾಗೂ ಶ್ರೀಕಾಂತ್ ಶಿವಲಿಂಗಪ್ಪ ಹರ್ಲಾಪೂರ ಎಂಬುವವರನ್ನು ಬಂಧಿಸಲಾಗಿದೆ.

ಒಟ್ಟು 1ಲಕ್ಷ 43 ಸಾವಿರದ 390 ರ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ವಿ ಎಚ್ ಅಜ್ಜಿ, ಎನ್ ಎ ಮೌಲ್ವಿ, ಆರ್ ಬಿ ಕೊಟ್ಟೂರು, ಎಸ್ ಎಸ್ ಮಾವಿನಕಾಯಿ, ಪ್ರವೀಣ್ ಶಾಂತಪ್ಪನವರ್, ಯಲ್ಲಪ್ಪ ಕರಮುಡಿ ಪಾಲ್ಗೊಂಡಿದ್ದರು.

ನಡೆಯುತ್ತಲೇ ಜನ ಸಾಯುತ್ತಾರಂತೆ! ಭಯಾನಕ ಭವಿಷ್ಯ ನುಡಿದ ಕೋಡಿ ಮಠದ ಶ್ರೀ!

ವಿಜಯಸಾಕ್ಷಿ ಸುದ್ದಿ, ಹಾಸನ

ಕೋಡಿಮಠದ ಶ್ರೀಗಳು ಭಯಾನಕ ಭವಿಷ್ಯ ನುಡಿದಿದ್ದಾರೆ. ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಬರಲಿದೆ ಎಂಬ ಭಯಾನಕ ಭವಿಷ್ಯ ನುಡಿದಿದ್ದಾರೆ. ಅರಸೀಕೆರೆಯ ಕೋಡಿಮಠದಲ್ಲಿ ಮಾತನಾಡಿದ ಶ್ರೀ, ಸದ್ಯ ದೇಶ ಕಾಡುತ್ತಿರುವ ಕೊರೊನಾ ದೂರವಾಗಲು ಸುಮಾರು 10 ವರ್ಷಗಳು ಬೇಕಾಗಬಹುದು. ಭೂಮಿಯಲ್ಲಿ ಈಗಾಗಲೇ ಕೋಟ್ಯಂತರ ಜನರ ಶವ ಹೂತು ಹಾಕಲಾಗಿದೆ. ಅದೇ ವಿಷವಾಗಿ ಭೂಮಿಯಿಂದ ಹೊರ ಬರಲಿದೆ. ಜನರು ಹೋಗ ಹೋಗುತ್ತಲೇ ಬಿದ್ದು ಸಾಯುವ ಕಾಯಿಲೆಯೊಂದು ಮುಂದೆ ಬರಲಿದೆ ಎಂದು ಹೇಳಿದ್ದಾರೆ.

ಈ ರೋಗ ಕೊರೊನಾಕ್ಕಿಂತಲೂ ಭಯನಕವಾಗಿದೆ. ಈ ವರ್ಷ “ಕುಂಭದಿ ಗುರು ಬರಲು ತುಂಬುವವು ಕೆರೆ ಕಟ್ಟೆ, ಶಂಭುವಿನ ಪದಸಾಕ್ಷಿ ಡಂಬವೆನ್ನೆಲು ಬೇಡಿದೆನಾ’ ಅಂದರೆ, ಪ್ರಳಯದ ಮಳೆ ಆಗಲಿದೆ. ಮಿಂಚಿನಿಂದ ದುರ್ಯೋಗ ಇದೆ. ಜಗತ್ತಿನಲ್ಲಿ ಅಪಾಯಕಾರಿ ಘಟನೆಯೊಂದು ನಡೆಯಲಿದೆ. ಇದರ ಜೊತೆಗೆ ರಾಜಕೀಯ ಭೀತಿ ಎದುರಾಗಲಿದೆ. ಜಗತ್ತಿನಲ್ಲಿ ದೊಡ್ಡ ದೊಡ್ಡ ತಲೆಗಳು ಉರುಳಲಿವೆ” ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಸಾಮೂಹಿಕ ಸಾವುಗಳು ಸಂಭವಿಸಲಿವೆ. ಸತ್ತು ಹೂಳಲ್ಪಟ್ಟವರು ಕೂಡ ಮಾತನಾಡುತ್ತಾರೆ. ಅದನ್ನು ನೋಡಬಹುದು, ನೀವು ಅವರ ಜೊತೆ ಮಾತನಾಡಲು ಸಾಧ್ಯವಿಲ್ಲ. ಇಂಥ ಪ್ರೇತಾತ್ಮಗಳು ಸದ್ಯದಲ್ಲಿಯೇ ಕಂಡರೂ ಕಾಣಿಸದಂತಾಗುತ್ತದೆ. ಆದರೆ, ರಾಜ್ಯಕ್ಕೆ ಅಷ್ಟೊಂದು ದೊಡ್ಡ ಮಟ್ಟದ ತೊಂದರೆಗಳು ಆಗುವುದಿಲ್ಲ ಎಂದು ಹೇಳಿದ್ದಾರೆ.

error: Content is protected !!