Home Blog Page 3160

ತಿಮ್ಮಾಪೂರ ಗ್ರಾಮಕ್ಕೆ ಭೇಟಿ ನೀಡಿದ ತಹಸೀಲ್ದಾರ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗದಗ
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ರೈತರು ಹಗೆವುಗಳಲ್ಲಿ ಸಂಗ್ರಹಿಸಿದ್ದ ಧವಸ ಧಾನ್ಯಗಳಾದ ಜೋಳ ಕಡ್ಲಿ ಗೋಧಿ ನೀರು ಪಾಲಾಗಿರುವುದನ್ನು ಪರಿಶೀಲನೆ ನಡೆಸಿದರು.
ನಂತರ ಮನೆ ಮೇಲೆ ಛಾವಣಿ ಕುಸಿದುಬಿದ್ದ ಗಾಯಗೊಂಡ ಯುವಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಶಿಥಿಲಾವಸ್ಥೆಯಲ್ಲಿರುವ ಮನೆಗಳಿಗೆ ಭೇಟಿ ನೀಡಿ ಅವರಿಗೆ ತಾತ್ಕಾಲಿಕವಾಗಿ ಸರ್ಕಾರಿ ಶಾಲೆಗಳಲ್ಲಿ ಇರುವಂತೆ ಹೇಳಿದರು. ಇದೇ ವೇಳೆ ರೈತರ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ತಿಮ್ಮಾಪೂರ ಗ್ರಾಮದಲ್ಲಿ ೨೫೦ ಹಗೆವುಗಳಲ್ಲಿ ಸಂಪೂರ್ಣ ಹಾಳಾಗಿದ್ದು ಪ್ರಾಥಮಿಕ ವರದಿ ಬಂದಿದೆ.
ನಷ್ಟ ಪರಿಹಾರ ಕುರಿತು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ರೈತರಿಗೆ ಬಿತ್ತನೆ ಬೀಜ ರಸಗೊಬ್ಬರಗಳ ಕುರಿತು ಕೃಷಿ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮನವಿ ನೀಡಿ ಮಾತನಾಡಿದ ರೈತ ಯುವ ಮುಖಂಡ ಹಾಗೂ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಯಲ್ಲಪ್ಪ ಎಚ್ ಬಾಬರಿ, ಪ್ರಸ್ತುತ ವರ್ಷ ತಿಮ್ಮಾಪುರ ಗ್ರಾಮಕ್ಕೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರಿ ಮಳೆಯಾಗಿ ರೈತರು ಸಂಗ್ರಹಿಸಿದ್ದ ದವಸ ದಾನ್ಯಗಳಾದ ಜೋಳ ಕಡ್ಲಿ ಗೋಧಿ ನೀರು ಪಾಲಾಗಿವೆ. ಬಿತ್ತನೆ ಮಾಡಲು ಸಹ ರೈತರ ಹತ್ತಿರ ಬೀಜಗಳಿಲ್ಲ ಕೃಷಿ ಇಲಾಖೆಯಿಂದ ರೈತರಿಗೆ ಬಿತ್ತನೆ ಬೀಜಗಳನ್ನು ಕೂಡಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶರಣಪ್ಪ ಜೋಗಿನ, ಯಲ್ಲಪ್ಪ ಲಕ್ಕುಂಡಿ, ಶೇಖಪ್ಪ ಘಂಟೆ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

ಸಂಕನೂರ ಪರ ಪದವೀಧರರ ಒಲವು

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಗಜೇಂದ್ರಗಡ
ಪಶ್ಚಿಮ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪರವಾಗಿ ಪದವೀಧರರ ಒಲವಿದೆ. ಹೀಗಾಗಿ ಸಂಕನೂರ ಅವರ ಗೆಲುವು ಖಚಿತ ಎಂದು ಬಿಜೆಪಿ ಮುಖಂಡ ಅಂದಪ್ಪ ಸಂಕನೂರ ಹೇಳಿದರು.
ಪಶ್ಚಿಮ ಪದವೀಧರರ ಚುನಾವಣೆ ಹಿನ್ನಲೆಯಲ್ಲಿ ಸ್ಥಳೀಯ ಪದವೀಧರರ ಮನೆ,ಮನೆಗೆ ಹಾಗೂ ವಿವಿಧ ಕಾಲೇಜುಗಳಿಗೆ ಗುರುವಾರ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ಪರವಾಗಿ ಮತಯಾಚಿಸಿ ಮಾತನಾಡಿದರು.
ಕಳೆದ ಬಾರಿ ಪಶ್ಚಿಮ ಪದವೀಧರರು ನೀಡಿದ ಅವಕಾಶ ಸದ್ಬಳಿಕೆ ಮಾಡಿಕೊಂಡು ಖಾಸಗಿ ಶಿಕ್ಷಣ ಸಂಸ್ಥೆಗಳ ನೌಕರರ ಸಮಸ್ಯೆಗಳಿಗೆ ಹಾಗೂ ಪದವೀಧರರ ನೋವಿಗೆ ಸ್ಪಂದಿಸುವುದರ ಜೊತೆಗೆ ಬಹು ವರ್ಷಗಳ ಬೇಡಿಕೆಯಾಗಿದ್ದ ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಿಸಲು ಎಸ್.ವಿ.ಸಂಕನೂರು ಅವರು ಶ್ರಮಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಸಂಕನೂರ ಅವರ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಕರ್ನಾಟಕ ಜನಪರ ಸೇವಾ ಸಮಿತಿ ಅಧ್ಯಕ್ಷ ಗಣೇಶ ಗುಗಲೋತ್ತರ ಮಾತನಾಡಿ, ಸ್ಕಿಲ್ ಇಂಡಿಯಾ ಅಡಿಯಲ್ಲಿ 1300 ತರಬೇತಿ ಕೇಂದ್ರಗಳನ್ನು ಆರಂಭಿಸುವುದರ ಜೊತೆಗೆ ಸದನದಲ್ಲಿ ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಪದವೀಧರರ ನೋವಿಗೆ ಎಸ್.ವಿ.ಸಂಕನೂರ ಸ್ಪಂದಿಸಿದ್ದಾರೆ. ಅಲ್ಲದೆ ಜ್ಯೋತಿ ಸಂಜೀವಿನಿ ಯೋಜನೆಗನ್ನು ಖಾಸಗಿ ಶಿಕ್ಷಕರಿಗೆ ನೀಡಲು ಒತ್ತಾಯಿಸುವುದರ ಜೊತೆಗೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ಜಾರಿಗೆ ತರಲು ಹಾಗೂ ಭೋದಕೇತರ ವರ್ಗಗಳ ಸಮಸ್ಯೆಗಳಿಗೆ ಪರಿಹಾರದ ಜೊತೆಗೆ ಎಲ್ಲ ಇಲಾಖೆಯ ಪದವೀಧರರಿಗೆ ಮೂಲಕ ಸೌಲಭ್ಯ ಒದಗಿಸಲು ಸಂಕನೂರು ಅವರು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದಾರೆ. ಹೀಗಾಗಿ ಮತ್ತೊಮ್ಮೆ ಪದವೀಧರರು ತಮ್ಮ ಮೊದಲ ಪ್ರಾಶಸ್ತ್ಯದ ಮತವನ್ನು ಸಂಕನೂರ ಅವರಿಗೆ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಶರಣಪ್ಪ ರೇವಡಿ, ಅಮರೇಶ ಗಾಣಗೇರ, ಬಸಯ್ಯ ಹಿರೇಮಠ, ವಸಂತರಾವ್ ಗಾರಗಿ, ಅಮರೇಶ ಅಂಗಡಿ, ಅನೀಲ ಮಹೇಂದ್ರಕರ, ವಿನಾಯಕ ಜಾಧವ ಇತರರು ಇದ್ದರು.

ಸಚಿವ ಸಿ.ಸಿ. ಪಾಟೀಲ ಜನ್ಮ ದಿನಾಚರಣೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗಣಿ, ಭೂವಿಜ್ಞಾನ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರ ಜನ್ಮದಿನವನ್ನು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಸರಳವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಿದರು.
ಸಿ.ಸಿ. ಪಾಟೀಲ ಅವರ 62ನೇ ಜನ್ಮದಿನಾಚರಣೆಯನ್ನು ಅವಳಿ ನಗರದ ೩೫ ವಾರ್ಡಗಳಲ್ಲಿನ ಒಟ್ಟು 62 ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಸಿಹಿ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.
ನಗರದ ವೀರೇಶ್ವರ ಪುಣ್ಯಾಶ್ರಮ, ಮಾಬುಸುಬಾನಿ ದರ್ಗಾದಲ್ಲಿಯೂ ವಿಶೇಷ ಪೂಜೆ, ದುವಾ ಮಾಡಲಾಯಿತು. ಅನೇಕ ಗಣ್ಯರು ಭಾಗಿಯಾಗಿ ಸಿ.ಸಿ. ಪಾಟೀಲ ಅವರಿಗೆ ಶುಭ ಹಾರೈಸಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲದೇ ವೀರೇಶ್ವರ ಪುಣ್ಯಾಶ್ರಮದ ಅಂಧ, ಅನಾಥ ಮಕ್ಕಳಿಗೆ ಸಿಹಿ ವಿತರಣೆ ಕಾರ್ಯಕ್ರಮವೂ ನಡೆಯಿತು.

ಪುಣ್ಯಾಶ್ರಮದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿ, ಅಭಿವೃದ್ಧಿಯ ದೂರದೃಷ್ಟಿ ಹೊಂದಿರುವ ನಾಯಕ ಸಿ.ಸಿ. ಪಾಟೀಲ, ಜಿಲ್ಲೆಯ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಉಂಟಾದ ನೆರೆ, ಬರ ಮತ್ತು ಕೊರೊನಾ ಸಂಕಷ್ಟದಲ್ಲೂ ಅವಿರತವಾಗಿ ಶ್ರಮಿಸಿ ಜನಮೆಚ್ಚುಗೆಗೆ ಕಾರಣರಾಗಿದ್ದಾರೆ. ದೇವರು ಸಿ.ಸಿ.ಪಾಟೀಲ ಅವರಿಗೆ ಉತ್ತಮ ಆರೋಗ್ಯ, ಸುಖ-ಶಾಂತಿ, ನೆಮ್ಮದಿ ಜೊತೆಗೆ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಪ್ರಮುಖರಾದ ಲಿಂಗರಾಜ ಪಾಟೀಲ, ಎಂ.ಎಸ್.ಕರೀಗೌಡ್ರ, ಮಾಂತೇಶ ನಾಲ್ವಾಡ, ರವಿ ದಂಡಿನ, ಪ್ರಶಾಂತ ನಾಯ್ಕರ, ಅನಿಲ ಅಬ್ಬಿಗೇರಿ, ಸಿರಾಜ ಬಳ್ಳಾರಿ, ಶಿವಲಿಂಗ ಶಾಸ್ತ್ರಿ, ಬಸವಣ್ಣೆಯ್ಯ ಹಿರೇಮಠ, ರಾಘವೇಂದ್ರ ಯಳವತ್ತಿ, ಇರ್ಷಾದ ಮಾನ್ವಿ, ಕಿಷನ್ ಮೆರವಾಡೆ, ರೇಖಾ ಅಳವಂಡಿ, ಅಶ್ವಿನಿ ಜಗತಾಪ, ಶಾರದಾ ಹಿರೇಮಠ, ನಿಂಗಪ್ಪ ಮಣ್ಣೂರ, ಗಂಗಾಧರ ಹಬೀಬ, ರಾಚಯ್ಯ ಹೊಸಮಠ, ಮಂಜು ಪಾಟೀಲ, ಶಿವು ಹಿರೇಮನಿಪಾಟೀಲ, ಪುಟ್ಟು ಹಿರೇಮಠ, ರಾಹುಲ ಅರಳಿ, ಬುಡ್ಡಾಸಾಬ ಆಲೂರ, ಬಾಬು ಯಲಿಗಾರ, ಶರಣಪ್ಪ ಕಮಡೊಳ್ಳಿ, ಅರವಿಂದ ಕೇಲೂರ, ಮೋಹನ ಮಾಳಗಿಮನಿ, ಅಮರನಾಥ ಗಡಗಿ, ಪ್ರಕಾಶ ಅಂಗಡಿ, ಸಾಕ ಮನಿಯಾರ, ನಾಸಿರ ನೆರೆಗಲ್, ಶ್ಯಾಮಿದ್ ನರಗುಂದ ಹಾಗೂ ೩೫ ವಾರ್ಡಿನ ಎಲ್ಲ ಪ್ರಮುಖರುಗಳು ಉಪಸ್ಥಿತರಿದ್ದರು.

ರಾಜ್ಯದಲ್ಲಿರೋದು ಜೆಸಿಬಿ ಸರಕಾರ: ಹೊರಟ್ಟಿ

0

ಜೆಡಿಎಸ್ ಸಹ ಉತ್ತರ ಕರ್ನಾಟಕವನ್ನು‌ ನಿರ್ಲಕ್ಷ್ಯ ಮಾಡಿದೆ.

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ರಾಜ್ಯದಲ್ಲಿರೋದು ಬಿಜೆಪಿ ಸರಕಾರ ಅಲ್ಲ, ಜೆಸಿಬಿ ಸರಕಾರ, ಅಂದ್ರೆ ಜನತಾ ದಳ, ಕಾಂಗ್ರೆಸ್ ಮತ್ತು ಬಿಜೆಪಿಯ ಸಮ್ಮಿಶ್ರ ಸರಕಾರ. ಈಗಿನ ಸರಕಾರದಲ್ಲಿ ಜೆಡಿಎಸ್, ಕಾಂಗ್ರೆಸ್‌ನವರೇ ಜಾಸ್ತಿ ಇದ್ದಾರೆ. ಅಧಿಕಾರ ಹೋದರೆ ಅವರೆಲ್ಲ ಮತ್ತೇ ಅವರವರ ಪಕ್ಷಗಳಿಗೆ ಮರಳುತ್ತಾರೆ ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಹೇಳಿದರು.

ಕೊಪ್ಪಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸಿರುವ ಎಲ್ಲ ಪಕ್ಷಗಳು ಉತ್ತರ ಕರ್ನಾಟಕವನ್ನು ಉದಾಸೀನ ಮಾಡಿವೆ. ಹಾಗಾಗಿಯೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳುತ್ತಲೇ ಇರುತ್ತದೆ. ಶಾಸಕ‌ ಬಸನಗೌಡ ಯತ್ನಾಳ ಹೇಳಿಕೆಯನ್ನು ಸ್ವಾಗತಿಸುವುದಾಗಿ ಅವರು ತಿಳಿಸಿದರು.

ಯಡಿಯೂರಪ್ಪ ಅವರ ಬಗ್ಗೆ ಮೃದುಧೋರಣೆ ಇರುವುದು ನಿಜ. ಹೋರಾಟದ ಹಾದಿಯಿಂದ ಬಂದವರು. ಅವರಿಗೆ ಸಾಕಷ್ಟು ವಯಸ್ಸಾಗಿದೆ. ಮುಂದೆ ಸಿಎಂ ಆಗ್ತಾರೊ? ಇಲ್ವೊ? ಈಗ ಅವಕಾಶ ಇದೆ ಅವರು ಸಿಎಂ ಆಗಲಿ ಎಂದು ಹೇಳಿದ್ದು ನಿಜ. ಆದರೆ ಎಂಥ ಸಂದರ್ಭದಲ್ಲೂ ಬಿಜೆಪಿಗೆ ಸೇರಲ್ಲ. ಯಾವುದೇ ಪಕ್ಷದ ಉತ್ತರ ಕರ್ನಾಟಕದ ಶಾಸಕರು ಸಿಎಂ ಆದರೆ ಸಹಮತ ಇದೆ ಎಂದು ಹೇಳಿದರು.

ಜೆಡಿಎಸ್‌ನಲ್ಲಿ ಮೀರ್ ಸಾದಿಕ್‌ರು ಇದ್ದಾರೆ ಎಂದಿರುವ ಸಚಿವ ಸಿ.ಟಿ.ರವಿ ಬಗ್ಗೆ ಹೆಚ್ಚೇನೂ ಹೇಳಲಾರೆ. ಅವರ ಪಕ್ಷದಲ್ಲೇ ಆಂತರಿಕ ಕಲಹ ಜೋರಾಗಿದೆ‌. ಮೊದಲು ಅದನ್ನು ಸರಿಪಡಿಸಿಕೊಳ್ಳಲಿ ಎಂದರು.

ಶಿಕ್ಷಕರ, ಪದವಿಧರರ ಕ್ಷೇತ್ರದಲ್ಲಿ ಜನತಾ ದಳದ ಸಾಧನೆ ಅನನ್ಯ. ಅವರ ಹಿತ. ಬಯಸುವ ಏಕೈಕ ಪಕ್ಷ ಜೆಡಿಎಸ್. ಈಶಾನ್ಯ ಶಿಕ್ಷಕರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಿಮ್ಮಯ್ಯ ಪುರ್ಲೆ ಶಿಕ್ಷಕರ ಪ್ರತಿನಿಧಿಯಾಗಲು ಸಮರ್ಥರಿದ್ದಾರೆ. ಪ್ರಜ್ಞಾವಂತ ಮತದಾರರು ತಮ್ಮ ಪ್ರಥಮ ಪ್ರಾಶಸ್ತ್ಯದ ಮತವನ್ನು ತಿಮ್ಮಯ್ಯ ಪುರ್ಲೆಯವರಿಗೆ ನೀಡಬೇಕು ಎಂದು ಕೋರಿದರು.

ಈ ವೇಳೆ ಜೆಡಿಎಸ್ ಮುಖಂಡರಾದ ಶ್ರೀಕಂಠೆಗೌಡ್ರು, ವೀರೇಶ್ ಮಹಾಂತಯ್ಯನಮಠ, ಪ್ರದೀಪಗೌಡ ಮಾಲೀಪಾಟೀಲ್, ಮೌನೇಶ್ ಮತ್ತಿತರರು ಇದ್ದರು.

ಮನೆಗಳಿಗೆ ನುಗ್ಗಿದ ಚರಂಡಿ ನೀರು; ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿಯಲ್ಲಿ ಘಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಅತಿಯಾದ ಮಳೆಯಿಂದಾಗಿ ಚರಂಡಿ ನೀರೂ ಸಹ ಮನೆಗಳಿಗೆ ನುಗ್ಗಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿಯಲ್ಲಿ ನಡೆದಿದೆ.

ಗ್ರಾಮದ ತಗ್ಗಿನ ಪ್ರದೇಶದಲ್ಲಿರುವ ವಡ್ಡರ ಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಸುರಿದ ಮಳೆಯಿಂದಾಗಿ ಮಳೆ ನೀರಿನ‌ ಜೊತೆ ಚರಂಡಿ ನೀರೂ ಸಹ ಮನೆಗಳಿಗೆ ನುಗ್ಗಿ ಜನರು ಪರದಾಡುವಂತೆ ಮಾಡಿದೆ.

ವಡ್ಡರ‌ ಪಾಳ್ಯದಲ್ಲಿರುವ ಬಹುತೇಕ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದು, ರಾತ್ರಿಯಿಡಿ ಮನೆಯಿಂದ ನೀರು ಹೊರಹಾಕಲು ಜನ್ರು ಹರಸಾಹಸ ಪಡುವಂತಾಗಿತ್ತು.

ಮನೆಯಲ್ಲಿನ ಧವಸಧಾನ್ಯಗಳು ನೀರುಪಾಲಾಗಿದ್ದು, ಸರಿಯಾದ ಚರಂಡಿ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಮೊದಲೇ ಇಲ್ಲಿ ಚರಂಡಿ ನಿರ್ಮಿಸಲು, ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವೊಬ್ಬ ಅಧಿಕಾರಿಗಳೂ ತಲೆ ಕೆಡೆಸಿಕೊಂಡಿಲ್ಲ. ಇನ್ನು ಶಾಸಕ ರಾಮಣ್ಣ ಲಮಾಣಿ ಸಹ ಸ್ಪಂದನೆ ನೀಡುತ್ತಿಲ್ಲ ಅಂತ ನಿವಾಸಿಗಳ ಅಳಲು ತೋಡಿಕೊಂಡಿದ್ದಾರೆ.

ಬದಲಾವಣೆಗಾಗಿ ಕುಬೇರಪ್ಪಗೆ ಮತ ನೀಡಿ: ಕಲ್ಮನಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಬದಲಾವಣೆಗಾಗಿ ಪದವೀಧರರೆಲ್ಲರ ಮತ್ತು ಶಿಕ್ಷಕರ ಚಿತ್ತ ಕುಬೇರಪ್ಪನವರತ್ತ ಬಂದಿದೆ ಎಂದು ಡಾ.ಆರ್.ಎಂ. ಕುಬೇರಪ್ಪನವರ ಅಭಿಮಾನಿ ಬಳಗದ ಯುವ ಮುಖಂಡ ಪ್ರೊ.ಹನುಮಂತಗೌಡ ಆರ್.ಕಲ್ಮನಿ ಅಭಿಪ್ರಾಯಪಟ್ಟರು.
ಅವರು ಗದಗ ಬೆಟಗೇರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿ, ಡಾ. ಕುಬೇರಪ್ಪನವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ನೀಡಿ, ಗೆಲ್ಲಿಸಬೇಕೆಂದು ಮಹಾವಿದ್ಯಾಲಯದ ಪ್ರಾಚಾರ್ಯರಲ್ಲಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರಲ್ಲಿ ಮನವಿ ಮಾಡಿದ ನಂತರ ಮಾತನಾಡಿದರು.
ಕಂಪ್ಯೂಟರ್ ಯುಗದಲ್ಲಿರುವ ಭಾರತದ ಶೈಕ್ಷಣಿಕ ವ್ಯವಸ್ಥೆ ಸಮೃದ್ಧವಾದ ಮಾನವ ಸಂಪನ್ಮೂಲ ಹೊಂದಿದೆ. ಆದರೆ ದಿನ ಕಳೆದಂತೆ ಉನ್ನತ ಶಿಕ್ಷಣ ಪಡೆಯುತ್ತಿರುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ, ಪದವಿ ಪಡೆದವರ ಅರ್ಹತೆಗೆ ತಕ್ಕ ಉದ್ಯೋಗ ಸಿಗುತ್ತಿಲ್ಲಯೆಂಬ ಅವರ ಬದುಕಿನ ಗೋಳು ನಿತ್ಯ ನಿರಂತರವಾಗಿ ಕೇಳಿ ಬರುತ್ತಿದೆ.
ರಾಜ್ಯದ ಪದವೀಧರರ ಮತ್ತು ಶಿಕ್ಷಕರ ಮತ ಕ್ಷೇತ್ರದಿಂದ ಸ್ಪರ್ಧಿಸಿ ಕೇಲವು ಜನಪ್ರತಿನಿಧಿಗಳಾಗಿರುವವರು ಇದನ್ನು ಕೇಳಿ ಕೇಳದಂತೆ ಜಾಣ ಕುರುಡುತನದಂತೆ ವರ್ತಿಸುತ್ತಿದ್ದಾರೆ. ಪದವೀಧರರ ಸಮಸ್ಯೆಗಳ ಪರಿಹಾರಕ್ಕಾಗಿ ಕುಬೇರಪ್ಪ ಅವರಿಗೆ ಮತ ನೀಡಿ ಎಂದು ಕಲ್ಮನಿ ಮನವಿ ಮಾಡಿದರು.
ಈ ವೇಳೆ ಸಿದ್ದಪ್ಪ ಈರಗಾರ, ಕೆ.ಜಿ. ಬೆಂತೂರ, ಸಿ.ಎಂ. ಕಾಳನ್ನವರ, ವೈ.ಬಿ. ಹಿರೇಮಠ, ಡಿ.ಎಂ. ಪಾಟೀಲ, ಎಂ.ಎಫ್. ಹೊಂಬಳ, ಶಿವು ಬಾಗಳಿ, ಶಿವಾನಂದ ಕುರಿ, ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.
 

`ಕುಡಿಯುವ ನೀರಿಗಾಗಿ…’ ಶೀರ್ಷಿಕೆಯ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ
ಕಲ್ಕತ್ತಾದ ಶ್ಯಾಡೋ ಲೈನ್ಸ್ ಸಂಸ್ಥೆ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಕೊಪ್ಪಳದ ಛಾಯಾಗ್ರಾಹಕ ಪ್ರಕಾಶ ಕಂದಕೂರರ ಚಿತ್ರ ಪ್ರಶಸ್ತಿ ಗಳಿಸಿದೆ.
ಸ್ಪರ್ಧೆಯ ಛಾಯಾಪತ್ರಿಕೋದ್ಯಮ ವಿಭಾಗದಲ್ಲಿ ಕಂದಕೂರರ `ಕುಡಿಯುವ ನೀರಿಗಾಗಿ…'(ಫಾರ್ ಡ್ರಿಂಕಿಂಗ್ ವಾಟರ್) ಶೀರ್ಷಿಕೆಯ ಚಿತ್ರ ಅರ್ಹತೆಯ ಪ್ರಮಾಣ ಪತ್ರ ಪಡೆದುಕೊಂಡಿದೆ. ಬೇಸಿಗೆ ಸಂದರ್ಭದಲ್ಲಿ ಸಮೀಪದ ಹಳ್ಳದಲ್ಲಿ ಗುಂಡಿ (ವರ್ತಿ) ತೋಡಿ, ಅದರಲ್ಲಿ ನೀರು ಸಂಗ್ರಹಿಸುವ ಬಗೆಯನ್ನು ಕಟ್ಟಿಕೊಡುವ ಈ ಬಹುಮಾನಿತ ಚಿತ್ರವನ್ನು ಜಿಲ್ಲೆಯ ಕವಲೂರಿನಲ್ಲಿ ಸೆರೆಹಿಡಿಯಲಾಗಿತ್ತು. ನಮ್ಮ ಭಾಗದ ಜನ ಕುಡಿಯುವ ನೀರಿಗಾಗಿ ಎದುರಿಸುವ ಸಮಸ್ಯೆಯನ್ನು ಸಮರ್ಥವಾಗಿ ಬಿಂಬಿಸುವಂತಿದೆ ಈ ಚಿತ್ರ.

ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಕೆಂದುಘುಟು ಎಂಬ ಕುಗ್ರಾಮದ ಮಧುಕರಿ ಶಿಕ್ಷಾ ಪ್ರಾಂಗಣದಲ್ಲಿ ಶಿಕ್ಷಣ ಕಲಿಯುವ ಆದಿವಾಸಿ ಸಮುದಾಯದ ಬಾಲಕಿಯರಿಗೆ ಮೂಲ ಸೌಕರ್ಯ ಕಲ್ಪಿಸಲು ಸಹಾಯಧನ ಕ್ರೋಢಿಕಡಿರಿಸುವ ಉದ್ದೇಶದಿಂದ ಶ್ಯಾಡೋ ಲೈನ್ಸ್ ಸಂಸ್ಥೆ ಈ ಸ್ಪರ್ಧೆ ಆಯೋಜಿಸಿತ್ತು ಎಂಬುದು ವಿಶೇಷ.
ದೇಶದ ವಿವಿಧ ರಾಜ್ಯಗಳ 299 ಜನ ಛಾಯಾಗ್ರಾಹಕರ ಸುಮಾರು 6,463 ಛಾಯಾಚಿತ್ರಗಳು ಸ್ಪರ್ಧೆಗೆ ಆಗಮಿಸಿದ್ದವು. ಅಂತರಾಷ್ಟ್ರೀಯ ಛಾಯಾಗ್ರಾಹಕರಾದ ಶ್ಯಾಮಲ್ ಕುಮಾರ್ ರಾಯ್, ತಪಸ್ ಬಸು, ಅಪರೇಶ್ ಸರ್ಕಾರ್, ಪ್ರಭಿರ್ ದಾಸ್, ಸುದೀಪ್ ದಾಸ್, ಸುಜಯ್ ಸಾಹಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

ಮೂಲಭೂತ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಿನ್ನಾಳ ರಸ್ತೆಯ ರೈಲ್ವೆ ಕೆಳಸೇತುವೆ ಕಾಮಗಾರಿ ಕಳಪೆಯಾಗಿದ್ದು, ಸೇತುವೆ ಕಟ್ಟಡದಲ್ಲಿ ಬಸಿದ ಚರಂಡಿ ನೀರು ರಸ್ತೆಗೆ ಹರಿಯುತ್ತಿದೆ. ಅಶೋಕ ಸರ್ಕಲ್-ಭಾಗ್ಯನಗರ ಕ್ರಾಸ್ ರಸ್ತೆ ಯಮದರ್ಶನ ಮಾಡಿಸುವಷ್ಟು ಭಯಾನಕವಾಗಿದೆ. ಇವುಗಳನ್ನು ಸೇರಿದಂತೆ ವಿವಿಧ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಕಿನ್ನಾಳ ರಸ್ತೆಯ ನಾಗರಿಕ ಸಮಿತಿ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು, ಕಿನ್ನಾಳ ರಸ್ತೆಯ ರೈಲ್ವೆ ಕೆಳಸೇತುವೆಯಲ್ಲಿ ಸಂಚರಿಸುವುದೆಂದರೆ ಪ್ರಾಣ ಕೈಯಲ್ಲಿಕೊಂಡು ಓಡಾಡಿದ ಅನುಭವವಾಗುತ್ತಿದೆ. ಸೇತುವೆಯುದ್ದದ ರಸ್ತೆ ಸಂಜೆಯಾದರೆ ಸಾಕು, ಕಗ್ಗತ್ತಲಿನ ಗೂಡಾಗುತ್ತದೆ. ಅಲ್ಲಿರುವ ತಗ್ಗುಗುಂಡಿಗಳು ಹಳ್ಳ-ಕೊಳ್ಳಗಳನ್ನು‌ ನಾಚಿಸುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಕೂಡಲೇ ರೈಲ್ವೆ‌ ಕೆಳಸೇತುವೆಯಲ್ಲಿ ಹರಿಯುತ್ತಿರುವ ಚರಂಡಿ ನೀರನ್ನು ಬಂದ್ ಮಾಡಿಸಬೇಕು, ಉತ್ತಮ ರಸ್ತೆ‌ ನಿರ್ಮಿಸಬೇಕು, ಸೇತುವೆಯ ಎರಡೂ ಬದಿಗೆ ಹೈಮಾಸ್ಕ್ ದೀಪ ಅಳವಡಿಸಬೇಕು ಎಂದು ಆಗ್ರಹಿಸಿದರು.

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರಗತಿನಗರ, ಕಲ್ಯಾಣನಗರ ಮಾರ್ಗದ ಮೂಲಕ ಅಶೋಕ ಸರ್ಕಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಅಶೋಕ ಸರ್ಕಲ್‌ನಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಭಾಗ್ಯನಗರ ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಸಾಲಿಮಠ, ನಗರಸಭೆ ಸದಸ್ಯ ಮಹಾಲಕ್ಷ್ಮಿ ಕಂದಾರಿ, ಡಾ.ವಿ.ಬಿ.ರಡ್ಡೇರ್, ಯೇಸು, ಶ್ರೀಶೈಲ ಬಡಿಗೇರ, ಯಮನೂರಸಾಬ ಭೈರಾಪುರ, ಯಶವಂತಕುಮಾರ ಮೇತ್ರಿ, ಶಂಕರಗೌಡ ಮಾಲೀಪಾಟೀಲ್, ವೆಂಕಪ್ಪ ಬಾರಕೇರ, ಅರವಿಂದಗೌಡ ಪೊಲೀಸ್, ಜಿ.ಬಿ.ಪಾಟೀಲ್, ರಂಗಪ್ಪ ಹುಲ್ಲೂರು, ರವಿ ಕರಡಿ, ಮೌನೇಶ್, ರಾಘವೇಂದ್ರ ದೇಶಪಾಂಡೆ ಮತ್ತಿತರರು ಇದ್ದರು.

ಕೊಪ್ಪಳ ಜಿಲ್ಲೆಯಲ್ಲಿ ಪವರ್; ಕೊರೋನಾ ತಿಳಿವಳಿಕೆ ನೀಡಿ, ಅಂಜನಾದ್ರಿ ಬೆಟ್ಟ ಏರಿದ ಪುನೀತ್

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಜಿಲ್ಲೆಯ ಗಂಗಾವತಿ, ಮಲ್ಲಾಪುರ ಸುತ್ತಮುತ್ತ ಹಾಗೂ ಹೊಸಪೇಟೆ ಅಕ್ಕ ಪಕ್ಕದ ಸ್ಥಳಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದೆ.

ಗುರುವಾರ ಬೆಳಗ್ಗೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಬಳಿಕ ಪೊಲೀಸ್ ಇಲಾಖೆಯ ಮನವಿ ಮೇರೆಗೆ ಪವರ್ ಸ್ಟಾರ್ ಪುನೀತ್ ಅವರು, ಕೊರೋನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಪಾಲಿಸಬೇಕಾದ ನಿಯಮಗಳ ಕುರಿತು ತಿಳಿವಳಿಕೆ ನೀಡಿದರು. ನಂತರ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಅಂಜನಾದ್ರಿ ಬೆಟ್ಟ ಏರಿ ಆಂಜನೇಯನ ದರ್ಶನ ಪಡೆದರು.

ತಮ್ಮ‌ ಮೆಚ್ಚಿನ ನಟ ಅಪ್ಪು ಅವರನ್ನು ಕಣ್ತುಂಬಿಕೊಳ್ಳಲು ಮಲ್ಲಾಪುರ ಹಾಗೂ ಅಂಜನಾದ್ರಿ ಬೆಟ್ಟದ ಬಳಿ ಜನಸಾಗರವೇ ಸೇರಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.

ಯೋಜನಾ ನಿರ್ದೇಶಕರ ಮನೆ ಮೇಲೆ ಎಸಿಬಿ ರೈಡ್; 400 ಗ್ರಾಂ ಚಿನ್ನ, ನಗದು ವಶಕ್ಕೆ

0

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರೇಶ್ ಅವರ ಮನೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ನಗರದ ಮುಳಗುಂದ ರಸ್ತೆಯಲ್ಲಿರುವ ರುದ್ರೇಶ್ ಅವರು ವಾಸವಾಗಿರುವ ಸರ್ಕಾರಿ ಕ್ವಾಟರ್ಸ್, ಜಿಲ್ಲಾಡಳಿತ ಭವನದಲ್ಲಿರುವ ಕಚೇರಿ ಹಾಗೂ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಗ್ರಾಮದ ಮನೆ ಮೇಲೆಯೂ ಸಹ ದಾಳಿ ನಡೆಸಲಾಗಿದೆ.

ದಾಳಿ ವೇಳೆ 400 ಗ್ರಾಂ ಚಿನ್ನಾಭರಣ, ಒಂದೂವರೆ ಲಕ್ಷ ನಗದು ದೊರಕಿದ್ದು, ದಾಖಲೆಗಳ ಪರಿಶೀಲನೆ ಮುಂದುವರೆಸಲಾಗಿದೆ.

ಎಸಿಬಿ ಡಿವೈಎಸ್ಪಿ ವಾಸುದೇವರಾಮ್ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

error: Content is protected !!