Home Blog Page 3164

ನೀ ಯಾರೋ…ನೀ ಯಾರ ಆದ್ರೆ ನಂಗೇನೋ; ಕಪಾಳ ಮೋಕ್ಷ ಮಾಡಿದ ಖಡಕ್ ಕಮಲಾ!

ವಿಜಯಸಾಕ್ಷಿ ಸುದ್ದಿ, ಗದಗ

ಅನಾವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿರುವುದೂ ಅಲ್ಲದೆ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ವ್ಯಕ್ತಿಗೆ ಲೇಡಿ ಟೈಗರ್ ಎಂದೇ ಖ್ಯಾತಿಯಾಗಿರುವ, ಪಿಎಸ್ ಐ ಖಡಕ್ ಕಮಲಾ ದೊಡ್ಡಮನಿ ಅವರು ಕಪಾಳಕ್ಕೆ ಬಾರಿಸಿದ್ದಲ್ಲದೇ, ಆ ವ್ಯಕ್ತಿಯನ್ನೂ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.

ಸರ್ಕಾರ ಲಾಕ್ ಡೌನ್ ಘೋಷಣೆ ಮಾಡುತ್ತಿದ್ದಂತೆ ಈ ಸಂದರ್ಭದಲ್ಲಿ ಬೈಕ್ ಸೇರಿದಂತೆ ವಾಹನಗಳ ಬಳಕೆ ನಿಷೇಧಿಸಿದೆ. ಮಾರುಕಟ್ಟೆಗೆ ಹೋಗುವಾಗ ನಡೆದುಕೊಂಡೇ ಹೋಗಬೇಕು ಎಂದು ಸರ್ಕಾರ ಖಡಕ್ ವಾರ್ನಿಂಗ್ ಮಾಡಿದೆ. ಆದರೂ ಜನಕ್ಕೆ ಇನ್ನೂ ಬುದ್ಧಿ ಬಂದಿಲ್ಲ. ತಮ್ಮ ತಪ್ಪು ಮುಂದುವರೆಸುತ್ತಿದ್ದಾರೆ. ಹೀಗಾಗಿ ಪೊಲೀಸರು ಹೈರಾಣಾಗುತ್ತಿದ್ದಾರೆ.

ಹೀಗೆ ಅನಗತ್ಯವಾಗಿ ಹೊರಗೆ ಓಡಾಡುತ್ತಿರುವವರಿಗೆ ರಾಜ್ಯಾದ್ಯಂತ ಪೊಲೀಸರು ಲಾಠಿಯ ರುಚಿ ತೋರಿಸುತ್ತಿದ್ದಾರೆ. ಅಲ್ಲದೇ, ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ. ನಗರದಲ್ಲಿ ಹೀಗೆ ಅನಗತ್ಯವಾಗಿ ವಾಹನದ ಮೇಲೆ ಬಂದ ಸವಾರನೊಬ್ಬ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ.

ಕೇಳಿದರೆ ನಾನು ಎಮ್ ಎಸ್ ಐಎಲ್ ನೌಕರ… ಬೆಳದಡಿಯಿಂದ ಬರಬೇಕು ಎಂದು ವಾದಿಸಿದ್ದಾನೆ. ಅಲ್ಲದೇ, ಯಾವುದೋ ನಾಯಕರಿಗೆ ಕರೆ ಮಾಡಿ ಪೊಲೀಸರಿಗೆ ಕೊಡಲು ಹೋಗಿದ್ದಾನೆ. ಇದರಿಂದ ಕೆಂಡಾಮಂಡಲವಾದ ಪಿಎಸ್ ಐ ಕಮಲಾ ದೊಡ್ಡಮನಿ ಅವರು ಕಪಾಳಕ್ಕೆ ಹೊಡೆದಿದ್ದಾರೆ. ಫೋನ್ ಕಸಿದುಕೊಳ್ಳಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ಬೈಕ್ ಸವಾರ ವಾಗ್ವಾದ ನಡೆಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಘಟನೆ ಇಲ್ಲಿನ ಭೂಮರಡ್ಡಿ ಸರ್ಕಲ್ ನಲ್ಲಿ ನಡೆದಿದೆ. ಮಾಧ್ಯಮದ ಸಿಬ್ಬಂದಿಯ ಮೇಲೆಯೂ ಈ ವ್ಯಕ್ತಿ ತನ್ನ ದರ್ಪ ತೋರಿಸಲು ಪ್ರಯತ್ನಿಸಿದ. ಪೊಲೀಸರು ಮಾತ್ರ ಜೀಪ್ ನಲ್ಲಿ ಹಾಕಿಕೊಂಡು ಹೋಗಿದ್ದಾರೆ.

ಸುರೇಶ್ ಸೋಮಯ್ಯ ಹಿರೇಮಠ ಎಂಬಾತನೇ ಪೊಲೀಸರ ಜೊತೆಗೆ ವಾಗ್ವಾದ ನಡೆಸಿ ಪೊಲೀಸರ ಅತಿಥಿಯಾದಾತ ಎಂದು ಪೊಲೀಸ ಮೂಲಗಳು ತಿಳಿಸಿವೆ.

ಅನಗತ್ಯವಾಗಿ ಹೊರ ಬಂದವರ ಬೈಕ್ ಸೀಜ್; ಮಾಸ್ಕ್ ಇಲ್ಲದವರಿಗೆ ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಠಿಣ ಲಾಕ್ ಡೌನ್ ಘೋಷಿಸಿದೆ. ಹೀಗಾಗಿ ಬೆಳಿಗ್ಗೆಯಿಂದಲೇ ರಾಜ್ಯದ ಮೂಲೆ ಮೂಲೆಯಲ್ಲಿಯೂ ಜನರ ನಿಯಂತ್ರಣಕ್ಕೆ ಪೊಲೀಸರು ರಸ್ತೆಗೆ ಇಳಿದಿದ್ದಾರೆ.
ಅನಾವಶ್ಯಕವಾಗಿ ರಸ್ತೆಗೆ ಬರುತ್ತಿರುವ ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.

ಇಲ್ಲಿಯ ಭೂಮರಡ್ಡಿ ಸರ್ಕಾಲ್, ಮಹೇಂದ್ರಕರ ಸರ್ಕಲ್ ಗಳಲ್ಲಿ ಸುಮಾರು 25ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ರಾಜ್ಯ ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಬೆಕ್ಕಾಬಿಟ್ಟಿಯಾಗಿ ಬೈಕ್ ಸಾವರರು ಸಂಚಾರ ಮಾಡುತ್ತಿದ್ದರು.

ಇದರೊಂದಿಗೆ ಮಾಸ್ಕ್ ಹಾಕದವರಿಗೆ ದಂಡ ಬೀಳುತ್ತಿದೆ. ಪೊಲೀಸರು ಹಾಗೂ ಅಧಿಕಾರಿಗಳು ಮಾಸ್ಕ್ ಹಾಕದವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇಲ್ಲಿಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾಸ್ಕ್ ಹಾಕದಿರುವವರನ್ನು ಎಪಿಎಂಸಿ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇಲ್ಲಿ ವ್ಯಾಪಾರಸ್ಥರು ಹಾಗೂ ಜನರು ಗುಂಪು ಗುಂಪಾಗಿ ಸೇರಿ ತರಕಾರಿ ಹರಾಜು ಹಾಕುತ್ತಿದ್ದರು. ಕೆಲವರು ಮಾಸ್ಕ್ ಹಾಕಿಕೊಳ್ಳದೆ ನಿಂತಿದ್ದರು. ಹೀಗಾಗಿ ಕಾರ್ಯದರ್ಶಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೇ, ಪಾಲಕರು, ಬಾಲಕನಿಂದ ಎಲೆ ಮಾರಾಟ ಮಾಡಿಸಿದ್ದಾರೆ. ಎಲೆ ಮಾರುವುದು ಸರಿಯಲ್ಲ. ಮನೆಗೆ ಹೋಗು. ನಿಮ್ಮ ತಂದೆ ಕಳಿಸಿಕೊಡು. ಕೊರೊನಾ ಸಮಯದಲ್ಲಿಯೂ ಪಾಲಕರು ಬುದ್ಧಿ ಕಲಿಯದೆ, ಮಕ್ಕಳನ್ನು ಮಾರುಕಟ್ಟೆಗೆ ಕಳುಹಿಸಿ ಕೆಲಸ ಮಾಡಿಸುತ್ತಿದ್ದಾರೆ ಎಂದು ಕಾರ್ಯದರ್ಶಿ ನ್ಯಾಮಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅನಗತ್ಯವಾಗಿ ಹೊರ ಬಂದರೆ ಲಾಠಿ ರುಚಿ ಗ್ಯಾರಂಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿ ಅಟ್ಟಹಾಸ ಕಟ್ಟಿಹಾಕುವ ನಿಟ್ಟಿನಲ್ಲಿ ರಾಜ್ಯದಲ್ಲಿ ಇಂದಿನಿಂದ 14 ದಿನಗಳ ಲಾಕ್ ಡೌನ್ ಶುರುವಾಗಿದೆ. ಬೆಳಿಗ್ಗೆಯಿಂದಲೇ ಪೊಲೀಸರು ಜನರಿಗೆ ಬುದ್ಧಿ ಹೇಳುವ ಪಾಠ ಶುರು ಮಾಡಿದ್ದಾರೆ.

ಬಳ್ಳಾರಿ, ಕೋಲಾರ ಮತ್ತು ಕಲಬುರಗಿಯಲ್ಲಿ ಬೈಕ್ ಮೇಲೆ ಬಂದವರಿಗೆ ಲಾಠಿ ರುಚಿ ತೋರಿಸಿ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೇ. 24ರವರೆಗ ರಾಜ್ಯದಲ್ಲಿ ಈ ಲಾಕ್ ಡೌನ್ ಮುಂದುವರೆಯಲಿದೆ. ಅಗತ್ಯ ಸೇವೆ ಬಿಟ್ಟು ಉಳಿದೆಲ್ಲವೂ ಬಂದ್ ಆಗಿರಲಿದೆ. ಬೆಳಿಗ್ಗೆ 10 ಗಂಟೆಯ ನಂತರ ಮನೆಯಿಂದ ಹೊರ ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ಬೆಳಿಗ್ಗೆಯಿಂದ ಬೈಕ್ ಮೇಲೆ ಸಂಚರಿಸುತ್ತಿರುವವರ ಬೈಕ್ ಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ.

ಅಗತ್ಯ ವಸ್ತುಗಳ ಖರೀದಿಗೆ 4 ಗಂಟೆ ಮಾತ್ರ ಸಮಯ ಇರಲಿದೆ. ಬೆಳಿಗ್ಗೆ 6 ರಿಂದ 10ರ ವರೆಗೆ ಹೋದರೆ ಮಾತ್ರ ಅಗತ್ಯ ವಸ್ತುಗಳು ಸಿಗಲಿವೆ. ಮಾಂಸ ಖರೀದಿಗೂ ಬೆಳಿಗ್ಗೆ 10ರ ವರೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತಳ್ಳುಗಾಡಿಯಲ್ಲಿ ತರಕಾರಿ ಮಾರುವವರು ಸಂಜೆಯವರೆಗೂ ಮಾರಬಹುದು.

ಇಂದಿನಿಂದ 14 ದಿನಗಳ ಕಾಲ ಅಂತರ್ ಜಿಲ್ಲಾ ಓಡಾಟಕ್ಕೆ ನಿಷೇಧವಿದೆ. ಖಾಸಗಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ. ಸಾರಿಗೆ ಸಂಸ್ಥೆ, ಬಿಎಂಟಿಸಿ, ಮೆಟ್ರೋ, ಆಟೋ, ಟ್ಯಾಕ್ಸಿ ಸೇವೆಯಿರುವುದಿಲ್ಲ. ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ, ಮಾರುಕಟ್ಟೆಗಳು ಬಂದ್ ಇರಲಿವೆ.
ಆಸ್ಪತ್ರೆ, ಮೆಡಿಕಲ್, ನ್ಯಾಯಬೆಲೆ ಅಂಗಡಿ, ಹಾಲು (ಬೆಳಗ್ಗೆ 6ರಿಂದ ಸಂಜೆ 6ಗಂಟೆವರೆಗೆ), ಹಣ್ಣು – ತರಕಾರಿ ಬೆಳಿಗ್ಗೆ 10ರ ವರೆಗೆ ಮಾತ್ರ ತೆರೆದಿರುತ್ತದೆ.

ತಳ್ಳುಗಾಡಿಯಲ್ಲಿ ಹಣ್ಣು-ತರಕಾರಿ (ಸಂಜೆ 6 ಗಂಟೆಯವರೆಗೆ), ಮಾಂಸ ಹಾಗೂ ದಿನಸಿ ಅಂಗಡಿ ಬೆಳಿಗ್ಗೆ 10ರ ವರೆಗೆ ತೆರೆಯಲಿದೆ. ಇಡೀ ದಿನ ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶವಿದೆ. ಮದ್ಯ ಪಾರ್ಸೆಲ್ ಗೆ ಬೆಳಿಗ್ಗೆ 10 ಗಂಟೆಯವರೆಗೆ ಮಾತ್ರ ಅವಕಾಶ.

ಹಾಪ್ ಕಾಮ್ಸ್ ಸಂಜೆಯವರೆಗೆ ತೆರೆದಿರುತ್ತದೆ. ಮದುವೆಗಳನ್ನು ಮನೆಯಲ್ಲಿ ಮಾಡಿಕೊಳ್ಳಬೇಕು. ಆದರೆ, 40 ಜನರಿಗೆ ಮಾತ್ರ ಅವಕಾಶ. ಅಂತ್ಯ ಸಂಸ್ಕಾರಕ್ಕೆ 5 ಜನರಿಗಷ್ಟೇ ಅವಕಾಶ. ಹೋಂ ಡೆಲಿವರಿ ಇರಲಿದೆ. ರೈಲು ಹಾಗೂ ವಿಮಾನಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಅನಗತ್ಯವಾಗಿ ಹೊರ ಬಂದರೆ, ವಾಹನಗಳನ್ನು ಪೊಲೀಸರು ಸೀಜ್ ಮಾಡುತ್ತಾರೆ. ಲಾಠಿ ಬೀಸುತ್ತಾರೆ. ಕೇಸ್ ದಾಖಲಿಸುತ್ತಾರೆ.

ಸಹಾಯಕ್ಕಾಗಿ ಮನವಿ ಮಾಡಿದ್ದ ನಟ ಕೊರೊನಾಗೆ ಬಲಿ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಅನ್ ಫ್ರೀಂಡ ಸಿನಿಮಾ ಖ್ಯಾತಿಯ ನಟ ರಾಹುಲ್ ವೊಹ್ರಾ ಅವರು ಮಹಾಮಾರಿಗೆ ಬಲಿಯಾಗಿದ್ದಾರೆ. ಶನಿವಾರವಷ್ಟೇ ಅವರು ಫೇಸ್‍ ಬುಕ್ ನಲ್ಲಿ ತಮಗೆ ಸಹಾಯ ಮಾಡುವಂತೆ ಬರೆದುಕೊಂಡಿದ್ದರು. ಅಲ್ಲದೇ, ಕೊರೊನಾ ಸೋಂಕು ತಗುಲಿರುವ ಕುರಿತು ಕೂಡ ಬರೆದುಕೊಂಡಿದ್ದರು.

ನನಗೂ ಒಳ್ಳೆಯ ಚಿಕಿತ್ಸೆ ದೊರೆತರೆ ನಾನು ಬದುಕಿ ಉಳಿಯುತ್ತೇನೆ. ನಿಮ್ಮ ರಾಹುಲ್ ವೊಹ್ರಾ ಎಂದು ಬರೆದುಕೊಂಡಿದ್ದರು.
ಬೆಡ್ ನಂಬರ್ ಸಹಿತ ಅವರು ಮಾಹಿತಿ ಹಂಚಿಕೊಂಡಿದ್ದರು. ಮತ್ತೆ ಹುಟ್ಟಿ ಬಂದು, ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ. ಸದ್ಯ ನಾನು ಆತ್ಮಸ್ಥೈರ್ಯ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದರು.

ನಟ ರಾಹುಲ್ ವೊಹ್ರಾ ಅವರ ಸಾವಿಗೆ ನಮ್ಮ ಪ್ರತಿಭಾನ್ವಿತ ಕಲಾವಿದ ಇಂದು ಜಗತ್ತಿನಲ್ಲಿಲ್ಲ. ಒಳ್ಳೆಯ ಚಿಕಿತ್ಸೆ ಸಿಕ್ಕರೆ ಬದುಕುತ್ತೇನೆಂದು ನಿನ್ನೆ ಹೇಳಿಕೊಂಡಿದ್ದ. ವಿಷಯ ತಿಳಿಯುತ್ತಲೇ ರಾಜೀವ್ ಗಾಂಧಿ ಆಸ್ಪತ್ರೆಯಿಂದ ಆಯುಷ್ಮಾನ್ ದ್ವಾರಾಕಗೆ ಶಿಫ್ಟ್ ಮಾಡಲಾಗಿತ್ತು. ಆದರೂ ಆತನನ್ನು ಬದುಕಿಸಿಕೊಳ್ಳಲು ಆಗಲಿಲ್ಲ. ನಮ್ಮನ್ನು ಕ್ಷಮಿಸು ರಾಹುಲ್, ನಿನ್ನನ್ನು ಬದುಕಿಸಿಕೊಳ್ಳದ ನಾವು ಅಪರಾಧಿಗಳು. ನಿನಗೆ ನನ್ನ ಅಂತಿಮ ನಮನಗಳು ಎಂದು ಅನ್ ಫ್ರೀಡಂ ಚಿತ್ರದ ನಿರ್ದೇಶಕ ಅರವಿಂದ್ ಗೌರ್ ಸಂತಾಪ ಸೂಚಿಸಿದ್ದಾರೆ.

ಡಂಗೂರ ಸಾರುವ ಮೂಲಕ ಕೊರೊನಾ ಜಾಗೃತಿ

ವಿಜಯಸಾಕ್ಷಿ ಸುದ್ದಿ, ಗದಗ

ಡಂಗೂರು ಸಾರುವ ಮೂಲಕ ಈ ಹಳ್ಳಿಯಲ್ಲಿ ಲಾಕ್ ಡೌನ್ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಈ ಕುರಿತು ಜಾಗೃತಿ ಮೂಡಿಸಲಾಗಿದೆ. ಡಂಗೂರ ಸಾರುವ ಮೂಲಕ ನಾಳೆಯ ಲಾಕ್ ಡೌನ್ ಬಗ್ಗೆ ಊರ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗಿದೆ.

ಈ ಗ್ರಾಮದಲ್ಲಿ ನಾಳೆ ಬೆಳಿಗ್ಗೆಯಿಂದ ಬೈಕ್ ಹಾಗೂ ವಾಹನ ಸವಾರಿ ಮಾಡುವಂತಿಲ್ಲ. ಬೆಳಗ್ಗೆ ಆರು ಗಂಟೆಯಿಂದ ಒಂಭತ್ತು ಗಂಟೆಯವರಿಗೆ ಮಾತ್ರ ಅಗತ್ಯ ವಸ್ತುಗಳನ್ನು ಕೊಳ್ಳಬೇಕು ಹಾಗೂ ಮಾರಾಟ ಮಾಡಬೇಕು. ಒಂಭತ್ತು ಗಂಟೆಯ ನಂತರ ಅಂಗಡಿ – ಮುಂಗಟ್ಟು ಬಂದ್ ಮಾಡಬೇಕು ಎಂದು ಜಾಗೃತಿ ಮೂಡಿಸಲಾಗಿದೆ.

ಒಂದು ವೇಳೆ ಅಂಗಡಿ – ಮುಂಗಟ್ಟು ಬಂದ್ ಮಾಡದಿದ್ದರೆ ಹಾಗೂ ವಾಹನಗಳನ್ನು ಬಳಕೆ ಮಾಡಿಕೊಂಡು ಗ್ರಾಮದಲ್ಲಿ ತಿರುಗಾಡಿದರೆ ಪೊಲೀಸರು ಕೇಸ್ ಹಾಕಲಿದ್ದಾರೆ ಎಂದು ಗ್ರಾಮದಲ್ಲಿ ಡಂಗೂರದ ಮೂಲಕ ಸಾರಲಾಗಿದೆ.

ಜಿಲ್ಲೆಗಳ ಗಡಿಯಲ್ಲಿ ಚೆಕ್ ಪೋಸ್ಟ್; ಎಂಟ್ರಿಯಾಗುವವರ ಮೇಲೆ ನಿಗಾ!

ವಿಜಯಸಾಕ್ಷಿ ಸುದ್ದಿ, ಗದಗ

ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಾಗಿ ಜಿಲ್ಲೆಯ ಗಡಿಯಲ್ಲಿ ಚೆಕ್ ಪೋಸ್ಟ್ ಆರಂಭವಾಗಿವೆ. ಅಲ್ಲದೇ, ಜಿಲ್ಲೆಗಳಿಗೆ ಎಂಟ್ರಿಯಾಗುವವ ಮೇಲೆ ನಿಗಾ ಇಡಲಾಗಿದೆ. ಹೀಗಾಗಿ ಲಾಕ್ ಡೌನ್ ವಿಚಾರವಾಗಿ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ಅಧಿಕಾರಿಗಳಿಗೆ ಹಲವು ವಿಷಯಗಳ ಕುರಿತು ನಿರ್ದೇಶನ ನೀಡಿದ್ದಾರೆ. ತಹಶೀಲ್ದಾರ್ ನೇತೃತ್ವದಲ್ಲಿ ಗ್ರಾಮಗಳ ಸಭೆ ನಡೆಸಿ ಜಾಗೃತಿ ಮೂಡಿಸಲು ಸೂಚನೆ ನೀಡಿದ್ದಾರೆ.

ಧಾರ್ಮಿಕ ಕಾರ್ಯಗಳಲ್ಲಿ ಜನ ಭಾಗಿಯಾಗದಂತೆ ಕಟ್ಟು ನಿಟ್ಟಿ‌ನ ಕ್ರಮ ಸೂಚಿಸಲಾಗಿದೆ. ಹೊಸ ಮಾರ್ಗ ಸೂಚಿಯಂತೆ ಕಟ್ಟುನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗುವಂತ ಸೂಚಿಸಲಾಗಿದೆ. ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ತಂಡ ರಚಿಸಿ ಲಾಕ್ ಡಾನ್ ಯಶಸ್ವಿಗೊಳಿಸಲು ಸೂಚಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸೋಂಕಿತರಿಗೆ ಮೆಡಿಸಿನ್ ಕಿಟ್ ವಿತರಿಸಲು ಗ್ರಾಪಂ ಅಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ. ಹೆಚ್ಚು ಸೋಂಕಿತರು ಇರುವ ಗ್ರಾಮಗಳಿಗೆ ತಹಶೀಲ್ದಾರ್, ಪೊಲೀಸರ ಸಹಾಯದಿಂದ ಸೌಕರ್ಯ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ. ಪಿಡಿಒ ಸೇರಿದಂತೆ ಪಂಚಾಯತಿ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರಬೇಕು. ವಿವಿಧ ಇಲಾಖೆಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಎಂದಿನಂತೆ ತನ್ನನಾಗಾಲೋಟ ಮುಂದುವರೆಸಿದ ಮಹಾಮಾರಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಮಹಾಮಾರಿಯ ಅಟ್ಟಹಾಸ ಎಂದಿನಂತೆಯೇ ಇದೆ. ಭಾನುವಾರವೂ ಕೊರೊನಾರ್ಭಟ ಮುಂದುವರೆದಿದೆ. ರಾಜ್ಯದಲ್ಲಿ ಒಂದೇ ದಿನ ಮತ್ತೆ 47,930 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, ಇಂದು ಬರೋಬ್ಬರಿ 490 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 19,34,378ಕ್ಕೆ ಏರಿಕೆ ಕಂಡಿದೆ. ಈ ಪೈಕಿ 18,776 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಭಾನುವಾರ ಒಂದೇ ದಿನ ರಾಜ್ಯದಲ್ಲಿ 31,796 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇಂದು ಬೆಂಗಳೂರಿನಲ್ಲಿ 20,897 ಹೊಸ ಪ್ರಕರಣಗಳು ವರದಿಯಾಗಿವೆ. ತುಮಕೂರು, ಹಾಸನ ಹಾಗೂ ಬಳ್ಳಾರಿ ಜಿಲ್ಲೆಗಳು 2 ಸಾವಿರದ ಗಡಿ ದಾಟಿವೆ. ಇನ್ನು ಬೆಂಗಳೂರು ಗ್ರಾಮಾಂತರ, ಬಾಗಲಕೋಟೆ, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳು 1 ಸಾವಿರದ ಗಡಿ ದಾಟಿವೆ.

ಕುಚಿಕು ಗೆಳೆಯನ ಅಗಲಿಕೆಗೆ ಕಣ್ಣೀರು ಮಿಡಿದ ವೃದ್ಧ!

ಟೀ ಮಾರುವ ತುಕಾರಾಮ, ಕಾಲು ಕಳೆದುಕೊಂಡು ಭಿಕ್ಷೆ ಬೇಡುತ್ತಿದ್ದ ರವಿಕುಮಾರ

ಇಬ್ಬರ ಮಧ್ಯೆ ಸ್ನೇಹ ಬೆಸೆದಿದ್ದು ಚಿಲ್ಲರೆ ಹಣ!

ವಿಜಯಸಾಕ್ಷಿ ಸುದ್ದಿ, ಗದಗ

ಅವರಿಬ್ಬರದು ದಶಕಗಳ ಕಾಲದ ಗೆಳತನ. ಇಬ್ಬರೂ ಜೊತೆಗೆ ಬದುಕು ಸಾಗಿಸುತ್ತಿದ್ದರು. ಎಲ್ಲಿಗೆ ಹೋದರೂ ಇಬ್ಬರು ಕೂಡಿ ಹೋಗುತ್ತಿದ್ದರು. ಒಬ್ಬಾತ ಟೀ ಮಾರುತ್ತಿದ್ದರೆ, ಇನ್ನೊಬ್ಬ ಭಿಕ್ಷೆ ಬೇಡುತ್ತಿದ್ದ. ಆದರೆ ಈಗ ಭಿಕ್ಷುಕ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾನೆ. ಜೀವದ ಗೆಳೆಯನನ್ನು ಕಳೆದುಕೊಂಡ ಟೀ ಮಾರುವಾತ ದಿಕ್ಕುಗಾಣದೆ ಕಣ್ಣೀರು ಹಾಕುತ್ತಿದ್ದಾನೆ.

ಇದು ಯಾವುದೇ ಸಿನೆಮಾದ ಕಥೆಯಲ್ಲ. ಗದಗನಲ್ಲಿ ನಡೆದ ಘಟನೆ. ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟವನು ಮೂಲತಃ ರಾಯಚೂರು ಜಿಲ್ಲೆಯ ಸಿಂಧನೂರಿನ ರವಿಕುಮಾರ್ ವೆಂಕಣ್ಣ ಇಲ್ಲೂರ. ಈತನಿಗಾಗಿ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದ ನಿವಾಸಿ ತುಕಾರಾಂ ಪಾಸ್ತೆ ಕಣ್ಣೀರು ಮಿಡಿಯುತ್ತಿದ್ದಾನೆ.

ತುಕಾರಾಂ ಪಾಸ್ತೆ

ಇವರಿಬ್ಬರೂ ಸದ್ಯ ಗದಗ ಸಮೀಪದ ಕಳಸಾಪುರ ಗ್ರಾಮದಲ್ಲಿ ವಾಸವಾಗಿದ್ದರು. ಎಲ್ಲೆಲ್ಲೋ ತಿರುಗಾಡಿ ಎರಡು ವರ್ಷದ ಹಿಂದೆ ಕಳಸಾಪುರ ಗ್ರಾಮಕ್ಕೆ ಬಂದು ನೆಲೆಸಿದ್ದರು.
ಗಂಗಾವತಿಯಲ್ಲಿ ಟೀ ಮಾರಿ ಜೀವನ ಸಾಗಿಸುತ್ತಿದ್ದ ತುಕಾರಾಮ್ ಪಾಸ್ತೆಗೆ ಆಕಸ್ಮಿಕವಾಗಿ ಸಿಂಧನೂರಿನ ರವಿಕುಮಾರ್ ಪರಿಚಯವಾಗಿತ್ತು.

ಮೃತ ರವಿಕುಮಾರ್

ರವಿಕುಮಾರ್ ಲಾರಿ ಚಾಲಕನಾಗಿ ಅಪಘಾತವೊಂದರಲ್ಲಿ ಕಾಲ ಕಳೆದುಕೊಂಡು ಹೆಂಡತಿ, ಮಕ್ಕಳ ಜೊತೆಗೆ ಜಗಳ ಮಾಡಿ ಮನೆ ಬಿಟ್ಟು ಗಂಗಾವತಿಯಲ್ಲಿ ಭಿಕ್ಷೆ ಬೇಡುತ್ತಿದ್ದ. ತುಕಾರಾಮ್ ಪಾಸ್ತೆ ಟೀ ಮಾರಾಟ ಮಾಡಿ ಜೀವನ ನಿರ್ವಹಿಸುತ್ತಿದ್ದ.
ಇವರಿಬ್ಬರಿಗೂ ಪರಿಚಯ ದೋಸ್ತಿಗೆ ತಿರುಗಲು ಕಾರಣ ಚಿಲ್ಲರೆ ಹಣ. ಟೀ ಮಾರಾಟ ಮಾಡುವಾಗ ಚಿಲ್ಲರೆ ಸಮಸ್ಯೆ ಆದಾಗ ಭಿಕ್ಷೆಯಿಂದ ಬಂದ ಚಿಲ್ಲರೆ ಹಣವನ್ನು ರವಿಕುಮಾರ ತುಕಾರಾಮನಿಗೆ ಕೊಡುತ್ತಿದ್ದ. ಹೀಗಾಗಿ ಇಬ್ಬರ ನಡುವೆ ಗಾಢವಾದ ಗೆಳೆತನ ಬೆಳೆದಿದೆ.

ರಾಜ್ಯ, ಹೊರರಾಜ್ಯದಲ್ಲಿ ಜಾತ್ರೆ, ಸಮಾವೇಶದಲ್ಲಿ ಇವರಿಬ್ಬರೂ ಹಾಜರಾಗುತ್ತಿದ್ದರು. ತುಕಾರಾಮ ಟೀ ಮಾರಿದರೆ, ರವಿಕುಮಾರ್ ಭಿಕ್ಷೆ ಬೇಡುತ್ತಿದ್ದ. ಇದೇ ರೀತಿ ಎರಡು ವರ್ಷಗಳ ಹಿಂದೆ ಗದಗಿಗೆ ಬಂದಿದ್ದಾರೆ. ವಾಸಕ್ಕೆ ಕಡಿಮೆ ಬೆಲೆಯಲ್ಲಿ ಬಾಡಿಗೆ ಮನೆ ಸಿಗದಿದ್ದಾಗ ಸಮೀಪದ ಕಳಸಾಪುರ ಗ್ರಾಮದಲ್ಲಿ ಸಣ್ಣದಾದ ಮನೆ ಹಿಡಿದಿದ್ದರು.

ಕುಟುಂಬದವರು ಬರಲಿಲ್ಲ:

ನಿತ್ಯ ಇಬ್ಬರದೂ ಅದೇ ಕಾಯಕ. ನಾಲ್ಕು ದಿನಗಳ ಹಿಂದೆ ರವಿಕುಮಾರ್‌ಗೆ ಅನಾರೋಗ್ಯ ಕಾಡಿದೆ. ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ ರವಿಕುಮಾರ್ ಮೃತಪಟ್ಟಿದ್ದಾನೆ. ತುಕಾರಾಮ, ರವಿಕುಮಾರ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾನೆ. ಆದರೆ ಅವರು ಕ್ಯಾರೆ ಅಂದಿಲ್ಲ. ವಾಪಸ್ ಕಳಸಾಪುರಕ್ಕಾದರೂ ಶವ ಒಯ್ಯೋಣ ಅಂದರೆ ಗ್ರಾಮಸ್ಥರು ಬೇಡ ಅಂದಿದ್ದಾರೆ. ಬೆಳಗ್ಗೆ ಎದ್ದು ನಗರಸಭೆ ಸಿಬ್ಬಂದಿ ಶವಸಂಸ್ಕಾರ ನಡೆಸಿದ್ದಾರೆ.

ಕೊರೊನಾ ಜಗತ್ತಿನ ಸಂಬಂಧಗಳಲ್ಲಿ ಎಷ್ಟು ಹುಳಿ ಹಿಂಡಿದೆ ಎಂದರೆ, ಗೆಳೆಯನ ಮೃತದೇಹಕ್ಕೆ ಅಂತ್ಯ ಸಂಸ್ಕಾರ ಮಾಡುವ ಅವಕಾಶವೂ ಇಲ್ಲದಂತಾಗಿದೆ. ನಿರ್ವ್ಯಾಜ ಸ್ನೇಹವನ್ನು ಕೊಟ್ಟ ಗೆಳೆಯನಿಗಾಗಿ ಕಣ್ಣೀರು ಮಿಡಿಯುವ ಆಯ್ಕೆಯಲ್ಲದೆ ತುಕಾರಾಮನಿಗೆ ಮತ್ತೇನೂ ಉಳಿದಿಲ್ಲ.

ನಾಳೆಯಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್…ಏನಿದೆ? ಏನಿಲ್ಲ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಮಹಾಮಾರಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ನಾಳೆಯಿಂದ ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಘೋಷಣೆಯಾಗಿದೆ.
ರಾಜ್ಯದಲ್ಲಿ ಪ್ರತಿ ದಿನ 50 ಸಾವಿರದ ಆಸುಪಾಸಿನಲ್ಲಿ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ಸರ್ಕಾರ ಕರ್ಫ್ಯೂ ಜಾರಿಗೊಳಿಸಿತ್ತು. ಆದರೆ, ಇದರಿಂದ ಜನ ಬಗ್ಗದ ಕಾರಣ, ಸೋಂಕು ಹತೋಟಿಗೆ ಬರಲಿಲ್ಲ. ಹೀಗಾಗಿ ನಾಳೆಯಿಂದ 14 ದಿನಗಳ ಕಾಲ ಅಂದರೆ ಮೇ. 24ರ ವರೆಗೂ ಅನ್ವಯವಾಗುವಂತೆ ಕಠಿಣ ಲಾಕ್ ಡೌನ್ ಜಾರಿಗೊಳಿಸಿದೆ.

ಈ ಬಾರಿಯ ಲಾಕ್ ಡೌನ್ ನಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಅಲ್ಲದೇ, ಹಲವಾರು ಕಠಿಣ ನಿಯಮಗಳು ಜಾರಿಯಲ್ಲಿರಲಿವೆ.
ನಾಳೆಯಿಂದ 14 ದಿನಗಳ ಕಾಲ ಆಸ್ಪತ್ರೆ, ಮೆಡಿಕಲ್, ನ್ಯಾಯಬೆಲೆ ಅಂಗಡಿಗಳು ಮಾತ್ರ ತೆರೆದಿರುತ್ತವೆ. ಹಾಲಿನ ಅಂಗಡಿಗಳು ಬೆಳಿಗ್ಗೆ 6 ರಿಂದ ಸಂಜೆ 6ರ ವರೆಗೆ ತೆರೆದಿರುತ್ತವೆ. ಹಾಪ್ ಕಾಮ್ಸ್, ಹಣ್ಣು-ತರಕಾರಿ ಅಂಗಡಿಗಳು ಬೆಳಿಗ್ಗೆ 10ರ ವರೆಗೆ ಮಾತ್ರ ತೆರೆದಿರುತ್ತವೆ.

ತಳ್ಳುಗಾಡಿಯಲ್ಲಿ ಹಣ್ಣು – ತರಕಾರಿ ಮಾರಾಟ ಮಾಡುವವರು ಸಂಜೆ 6ರ ವರೆಗೆ ಮಾತ್ರ ಕಾರ್ಯ ನಿರ್ವಹಿಸಬೇಕು.
ದಿನಸಿ – ಮಾಂಸದ ಅಂಗಡಿಗಳು ಬೆಳಿಗ್ಗೆ 10ರವರೆಗೆ ಮಾತ್ರ ತೆರೆದಿರಬೇಕು. ಹೊಟೇಲ್ ಗಳಲ್ಲಿ ಇಡೀ ದಿನ ಪಾರ್ಸೆಲ್ ವ್ಯವಸ್ಥೆ ಇರುತ್ತದೆ. ಹೋಂ ಡೆಲಿವರಿ ಇರಲಿದೆ. ಮದ್ಯ ಪಾರ್ಸೆಲ್ ಗೆ ಬೆಳಿಗ್ಗೆ 10ರ ವರೆಗೆ ಅವಕಾಶವಿರುತ್ತದೆ. ಮನೆಯಲ್ಲಿ ಮಾತ್ರ ಮದುವೆ ಮಾಡಿಕೊಳ್ಳಬೇಕು. ಕೇವಲ 40 ಜನರಿಗೆ ಮಾತ್ರ ಅವಕಾಶವಿದೆ. ಅಂತ್ಯ ಸಂಸ್ಕಾರದಲ್ಲಿ 5ಕ್ಕಿಂತ ಹೆಚ್ಚಿನ ಜನರು ಭಾಗವಹಿಸಿವಂತಿಲ್ಲ.

ಆಹಾರ ಸಂಸ್ಕರಣಾ ಘಟಕ, ರೈಲು, ವಿಮಾನ ಸೇವೆ ಇರಲಿದೆ. ಅಂತರ್ ಜಿಲ್ಲಾ ಓಡಾಟ, ಖಾಸಗಿ ವಾಹನ ಸಂಚಾರ, ಸಾರಿಗೆ ಬಸ್ ಸಂಚಾರ, ಬಿಎಂಟಿಸಿ ಬಸ್, ಮೆಟ್ರೋ, ಆಟೋ, ಟ್ಯಾಕ್ಸಿ, ಗಾರ್ಮೆಂಟ್ಸ್, ಕಾರ್ಖಾನೆ, ಖಾಸಗಿ ಕಂಪನಿ ಹಾಗೂ ಮಾರುಕಟ್ಟೆ ಸಂಪೂರ್ಣವಾಗಿ ಬಂದ್ ಇರಲಿದೆ. ಅಗತ್ಯ ವಸ್ತು ಖರೀದಿಗೆ ಜನ ನಡೆದುಕೊಂಡು ಹೋಗಬೇಕು. ಸಮೀಪದ ಅಂಗಡಿಗಳಲ್ಲಿ ದಿನ ಬಳಕೆ ವಸ್ತು ಖರೀದಿಸಬೇಕು. ಒಂದು ವೇಳೆ ವಾಹನಗಳನ್ನು ರಸ್ತೆಗೆ ಇಳಿಸಿದರೆ, ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.

ಯುವಕನ ಮುಖ ಪಂಕ್ಚರ್! ಪೊಲೀಸರು ಹೊಡೆದ್ರಾ ?

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ವೇಗವಾಗಿ ಬರುತ್ತಿದ್ದ ಬೈಕ್ ಗೆ ಪೊಲೀಸರು ಕೈ ಮಾಡಿದ್ದ ಕಾರಣಕ್ಕಾಗಿ ಬೈಕ್ ನಲ್ಲಿದ್ದ ಯುವಕ ಆಯತಪ್ಪಿ ಬಿದ್ದ ಪರಿಣಾಮವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ನ್ಯೂ ಇಂಗ್ಲೀಷ್ ಮಿಡಿಯಂ ಸ್ಕೂಲ್ ಬಳಿ ನಡೆದಿದೆ.

ಜನತಾ ಕರ್ಫ್ಯೂ ಜಾರಿಯಲ್ಲಿದೆ. ಪೊಲೀಸ್ ಎಲ್ಲ ಕಡೆ ನಾಕಾಬಂದಿ ಹಾಕಿದ್ದು, ಅನಗತ್ಯ ಬೈಕ್ ಸವಾರರ ಒಡಾಟಕ್ಕೆ ಕಡಿವಾಣ ಹಾಕಲಾಗುತ್ತದೆ. ಈ ಸಂದರ್ಭದಲ್ಲಿ ವೇಗ ವಾಗಿ ಬರುತ್ತಿದ್ದ ಬೈಕ್ ತಡೆಯಲು ಮುಂದಾದ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಆಯತಪ್ಪಿ ಬಿದ್ದಿದ್ದರಿಂದ ಯುವಕನೊರ್ವನಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಪೊಲೀಸರ ವಿರುದ್ದ ಸಾರ್ವಜನಿಕರ ಆಕ್ರೋಶ

ಆದರೆ ಯುವಕನ ಕಡೆಯವರು ಹೇಳೋದೆ ಬೇರೆ. ಸುಮ್ಮನೆ ಬೈಕ್ ನಲ್ಲಿ ಹೋಗುವಾಗ ಅಡ್ಡಗಟ್ಟಿ ಪೊಲೀಸರು ಥಳಿಸಿದ್ದಾರೆ ಎಂದು ಆರೋಪಿಸಿ ವಾಗ್ವಾದಕ್ಕಿಳಿದರು. ಕಸಬಾ ಪೇಟ ಪೊಲೀಸ್ ಠಾಣೆಯ ಎಎಸ್ಐ ಎಸ್. ಎ ಗೌರಿಮಠ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ರೋಜಾ ಉಪವಾಸ ಇರುವ ಯುವಕನಿಗೆ ಈ ರೀತಿ ಹೊಡೆಯುವುದು ಎಷ್ಟು ಸರಿ ಎಂದು ಮುಗಿಬಿದ್ದರು.

ಆದರೆ ಆತನನ್ನು ನಾವು ಹೊಡೆದಿಲ್ಲ. ಆತನೇ ಬೈಕನಿಂದ ಬಿದ್ದು ಗಾಯಗೊಂಡಿದ್ದಾನೆ ಎಂದು ಹೇಳಲು ಮುಂದಾದ ಪೊಲೀಸರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಕ್ಷವೊಂದರ ಮುಖಂಡರು ಎಂಟ್ರಿ ಆಗಿ ಯುವಕರನ್ನ ಸಮಾಧಾನ ಪಡಿಸಿ ಗಾಯಗೊಂಡ ಯುವಕನನ್ನ ಆಸ್ಪತ್ರಗೆ ಕಳಿಸಿದರು.

ಹಳೆ ಹುಬ್ಬಳ್ಳಿಯ ಕಸಬಾ ಪೇಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!