Home Blog Page 3166

ನಾಳೆಯಿಂದ ಮನೆಯ ಆಚೆಗೆ ಬಂದರೆ ಪೊಲೀಸರಿಂದ ಬಿಸಿ ಬಿಸಿ ಕಜ್ಜಾಯ ಗಿಫ್ಟ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕಳೆದ ತಿಂಗಳಾಂತ್ಯದಲ್ಲಿ ಹೇರಿದ್ದ ಜನತಾ ಕರ್ಫ್ಯೂ ಯಾವುದೇ ಫಲ ನೀಡಿಲ್ಲ. ಹೀಗಾಗಿ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಲಾಕ್ ಡೌನ್ ಘೋಷಣೆಯಾಗಿದೆ.

ನಾಳೆಯಿಂದ ಮೇ. 24ರ ವರೆಗೆ ಸಂಪೂರ್ಣ ಲಾಕ್ ಡೌನ್ ನ್ನು ಸರ್ಕಾರ ಘೋಷಿಸಿದೆ. ಸುಳ್ಳು ಹೇಳಿ ಹೊರಗೆ ಬಂದರೆ ಪೊಲೀಸರು ಲಾಠಿ ಪೆಟ್ಟು ನೀಡಲಿದ್ದಾರೆ. ನಾಳೆ ಬೆಳಿಗ್ಗೆ 6ರಿಂದ 10ರ ವರೆಗೆ ಸಾರ್ವಜನಿಕರು ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಹತ್ತಿರದ ಅಂಗಡಿಗಳಿಗೆ ಹೋಗಬಹುದು. ಆ ನಂತರ ಲಾಕ್ ಡೌನ್ ಹೇರಲಾಗುತ್ತದೆ. ಆ ಸಂದರ್ಭದಲ್ಲಿ ಜನ ಓಡಾಡಿದರೆ ಪೊಲೀಸರಿಂದ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ.

ನಾಳೆಯಿಂದ ಅಂತರ್ ಜಿಲ್ಲೆ, ಅಂತರ್ ರಾಜ್ಯ ಸಂಚಾರ ಬಂದ್ ಆಗಿರಲಿದೆ. ಯಾರಾದರೂ ಕುಂಟು ನೆಪ ಹೇಳಿ ಹೊರ ಬಂದರೆ, ಪೊಲೀಸರಿಂದ ಲಾಠಿ ರುಚಿ ತಿನ್ನಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾಳೆಯಿಂದ ಜಾರಿಯಾಗುವ ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಲಾಕ್ ಡೌನ್ ಉಲ್ಲಂಘನೆ ಕಂಡು ಬಂದರೆ, ಅನಗತ್ಯವಾಗಿ ಹೊರಗೆ ಓಡಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ವೈದ್ಯನೆಂದು ಹೇಳಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದ ಹಣ್ಣು ವ್ಯಾಪಾರಿ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಹಣ್ಣು ವ್ಯಾಪಾರಿಯೊಬ್ಬ ವೈದ್ಯನೆಂದು ಸುಳ್ಳು ಹೇಳಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು, ಈ ಕುರಿತು ತಿಳಿಯುತ್ತಿದ್ದಂತೆ ಪೊಲೀಸರು ನಕಲಿ ವೈದ್ಯನನ್ನು ಬಂಧಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದ ನಾಗ್ಪುರದ ಕಾಮತಿ ಪ್ರದೇಶದಲ್ಲಿ ನಡೆದಿದೆ. ಈ ನಕಲಿ ವೈದ್ಯನನ್ನು ಚಂದನ್ ನರೇಶ್ ಚೌಧರಿ ಎಂದು ಗುರುತಿಸಲಾಗಿದೆ. ಈ ನಕಲಿ ವೈದ್ಯ ಕೊರೊನಾ ರೋಗಿಗಳಿಗೆ ಚಕಿತ್ಸೆ ನೀಡಿದ್ದಾನೆ.

ಈ ವ್ಯಕ್ತಿ ಮೊದಲು ಹಣ್ಣು ಹಾಗೂ ಐಸ್ ಕ್ರೀಮ್ ವ್ಯಾಪಾರ ಮಾಡುತಿದ್ದ. ಆ ನಂತರ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿದ್ದಾನೆ. ಸದ್ಯ ಈತ ವೈದ್ಯನೆಂದು ಹಲವರಿಗೆ ಚಿಕಿತ್ಸೆ ನೀಡಿದ್ದು, ಓಂ ನಾರಾಯಣ ಮಲ್ಟಿಪರ್ಪಸ್ ಸೊಸೈಟಿ ಹೆಸರಿನ ಚಾರಿಟೇಬಲ್ ಔಷಧಾಲಯ ಕೂಡ ನಡೆಸುತ್ತಿದ್ದಾನೆ. ಕಳೆದ 5 ವರ್ಷಗಳಿಂದ ಈತ ಈ ಔಷಧಾಲಯ ನಡೆಸುತ್ತಿದ್ದು, ರೋಗಿಗಳಿಗೆ ಆಯುರ್ವೇದ, ನ್ಯಾಚುರೋಪತಿ ಚಿಕಿತ್ಸೆ ನೀಡುತ್ತಿದ್ದಾನೆ ಎನ್ನಲಾಗಿದೆ.

ಕೊರೊನಾ ಹಾವಳಿ ಹೆಚ್ಚಾಗಿರುವ ಸ್ಥಿತಿ ಬಳಸಿಕೊಂಡಿರುವ ಈತ, ನಾಗ್ಪುರದ ತನ್ನ ಔಷಧಾಲಯದಲ್ಲಿಯೇ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದಾನೆ. ಈತನಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬರು ಜಿಲ್ಲಾ ಪೊಲಿಸರಿಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಅಲ್ಲದೇ, ಮಹಾರಾಷ್ಟ್ರ ಪ್ರಾಕ್ಟೀಷನರ್ಸ್ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.

ಮೋದಿ ಸರ್, ನಮ್ಮ ಜನ ನಿಮಗೇನು ಅನ್ಯಾಯ ಮಾಡಿದ್ದಾರೆ?

ವಿಜಯಸಾಕ್ಷಿ ಸುದ್ದಿ, ಹಾಸನ

ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿಫಲವಾಗುತ್ತಿವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳುಗಳನ್ನು ಹೇಳುತ್ತಿದ್ದಾರೆ. ದೆಹಲಿಯಲ್ಲಿ ಹತ್ತು ಸಾವಿರ ಬೆಡ್ ನಿರ್ಮಾಣ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಬಜೆಟ್ ನಲ್ಲಿ ರೂ. 35 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದ್ದರು. ಬಜೆಟ್ ಅಪ್ರೂವಲ್ ಕೂಡ ಆಗಿದೆ. ಆದರೆ, ಆ ದುಡ್ಡು ಎಲ್ಲಿಗೆ ಹೋಗಿದೆ ಎಂಬುವುದೇ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಸಿಕೆಗೆ ಸರ್ಕಾರವು ರೂ. 400 ನ್ನು ನಿಗದಿ ಮಾಡಿದೆ. ಇನ್ನೊಂದೆಡೆ ಜಿಎಸ್ ಟಿ ಕೂಡ ಕೊಡುತ್ತಿಲ್ಲ. ಆಕ್ಸಿಜನ್ ಹೆಚ್ಚುವರಿ ಕೇಳಿದರೆ ನಮ್ಮ ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ಕೇಸ್ ಹಾಕುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಏಕೆ ಸರ್, ಕರ್ನಾಟಕದ ಜನತೆ ಏನು ತಪ್ಪು ಮಾಡಿದೆ ನಿಮಗೆ? ಯಾವ ಅನ್ಯಾಯ ಮಾಡಿದ್ದಾರೆ? 25 ಸಂಸದರನ್ನು ಕೊಟ್ಟಿದ್ದು ತಪ್ಪಾ ನಿಮಗೆ. ಸ್ವರ್ಗಾನೇ ಇಳಿಸುತ್ತಾರೆಂದು ಮಾತನಾಡುತ್ತಿದ್ದ ರಾಜ್ಯ ಬಿಜೆಪಿ ನಾಯಕರು, ಈಗ ಜನರ ನೋವು ಕಂಡು ಏನು ಹೇಳುತ್ತಾರೆ? ಎಂದು ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.

ಸದ್ಯದ ಅಂಕಿ – ಅಂಶಗಳನ್ನು ಗಮನಿಸಿದರೆ ಇಡೀ ದೇಶದಲ್ಲಿ ಅತಿಹೆಚ್ಚು ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗುತ್ತಿದ್ದಾರೆ. ಸ್ಮಶಾನದಲ್ಲಿ ಕಿಲೋಮೀಟರ್ ಗಟ್ಟಲೆ ಕ್ಯೂ ಇದೆ. ಕೂಡಲೇ ಈ ರಾಜ್ಯದಲ್ಲಿ ಪ್ರಧಾನಿ ನೋಡಬೇಕು ಎಂದು ಮನವಿ ಮಾಡಿದ್ದಾರೆ.

ಕೋವಿಡ್ ಸೋಂಕಿಗೆ ತುಮಕೂರ ವಾರ್ತಾಧಿಕಾರಿ ಮಂಜುನಾಥ್ ಬಲಿ!

ವಿಜಯಸಾಕ್ಷಿ ಸುದ್ದಿ, ಗದಗ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತುಮಕೂರು ಹಿರಿಯ ಸಹಾಯಕ ನಿರ್ದೇಶಕ ಡಿ. ಮಂಜುನಾಥ ಅವರು ಭಾನುವಾರ ಮಹಾಮಾರಿಗೆ ಬಲಿಯಾಗಿದ್ದಾರೆ. ಅವರ ನಿಧನಕ್ಕೆ ವಾರ್ತಾ ಇಲಾಖೆ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರಾದ ಡಿ. ಮಂಜುನಾಥ (42) ಅವರಿಗೆ ಇತ್ತೀಚೆಗೆ ಸೋಂಕು ದೃಢ ಪಟ್ಟಿತ್ತು. ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರವಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರಿಣಿಸಲಿ ಎಂದು ವಾರ್ತಾ ಸಚಿವ ಸಿ.ಸಿ. ಪಾಟೀಲ ಕೋರಿದ್ದಾರೆ.

ಮೃತರು ತುಮಕೂರು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಬೆಂಗಳೂರಿನ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ರು.

ತುಮಕೂರು ಜಿಲ್ಲೆಯಲ್ಲಿ ಮಾ. 2016ರಿಂದ ವಾರ್ತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ನಗು ಮುಗದಿ ಎಲ್ಲರ ಸ್ನೇಹ ಸಂಬಂಧಗಳನ್ನು ಬೆಳೆಸಿಕೊಂಡಿದ್ದ ಅವರು, ನಮ್ಮನ್ನು ಅಗಲಿದ್ದು ತುಂಬಾ ನೋವಿನ ಸಂಗತಿಯಾಗಿದೆ.

ಮೃತರು ಪತ್ನಿ ಸವಿತ, ಒಂದು ಮಗು ಸೇರಿದಂತೆ ತಂದೆ ತಾಯಿ, ಸಹೋದರ, ಸಹೋದರಿಯರು ಹಾಗೂ ಇತರೆ ಬಂಧು ಬಳಗವನ್ನು ಅಗಲಿದ್ದಾರೆ. ಆ ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲೆಂದು ಪತ್ರಕರ್ತರು, ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.

ಹತೋಟಿಗೆ ಬಾರದ ಮಹಾಮಾರಿ; ರಾಜಧಾನಿಯಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೊರೊನಾ ಹತೋಟಿಗೆ ತರುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಸಲಾಗಿದೆ. ಸದ್ಯ ಲಾಕ್ ಡೌನ್ ನ್ನು ಮೇ. 17ರ ವರೆಗೆ ಜಾರಿಯಲ್ಲಿರಲಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡ್ಮೂರು ದಿನಗಳಿಂದ ದೆಹಲಿಯಲ್ಲಿ ಕೋವಿಡ್ ಪಾಸಿಟಿವ್ವಿಟಿ ದರ ಶೇ. 35 ರಿಂದ ಶೇ. 23ಕ್ಕೆ ಇಳಿಕೆಯಾಗಿದೆ. ಹೀಗಾಗಿ ಇನ್ನು ಒಂದು ವಾರಗಳ ಕಾಲ ಲಾಕ್ ಡೌನ್ ನ್ನು ವಿಸ್ತರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮೆಟ್ರೋ ರೈಲಿನ ಸೇವೆಯೂ ಬಂದ್ ಇರಲಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ನಾವು ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಳ ಮಾಡುತ್ತಿದ್ದೇವೆ. ಆಕ್ಸಿಜನ್ ಬೆಡ್ ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ದೆಹಲಿಯಲ್ಲಿ ಆಕ್ಸಿಜನ್ ಪರಿಸ್ಥಿತಿ ಸುಧಾರಿಸಿದೆ. ಆಸ್ಪತ್ರೆಗಳಿಗೆ ಬರುತ್ತಿರುವ ದೂರವಾಣಿ ಕರೆಗಳೂ ಕಡಿಮೆಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಾಲೆಗಳಲ್ಲಿ ಉತ್ತಮ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಹೆಚ್ಚೆಚ್ಚು ಸಂಖ್ಯೆಯಲ್ಲಿ ಯುವಕರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಇದೀಗ ಲಸಿಕೆಯ ಕೊರತೆಯಿದೆ. ಆದರೆ, ಕೇಂದ್ರ ಸರ್ಕಾರ ಸಹಾಯ ಮಾಡುವ ಭರವಸೆ ಇದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಏ. 20ರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಲಾಕ್ ಡೌನ್ ಜಾರಿಯಿಂದ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಬಹುದಾಗಿದ್ದು, ಈ ಕಾರಣದಿಂದ ಮತ್ತೊಮ್ಮೆ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮೇ. 3 ರಿಂದ ಮೇ. 8ರ ವರೆಗೆ ದೆಹಲಿಯಲ್ಲಿ 1,15,285 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ 2,105 ಜನರು ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ನ್ನು ವಿಸ್ತರಣೆ ಮಾಡಲಾಗಿದೆ.

ಇಂತಹ ತುಘಲಕ್ ಸರ್ಕಾರದ ಮಧ್ಯೆ ಸಾಮಾನ್ಯರು ಬದುಕುವುದು ಹೇಗೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಕುರಿತು ಈಗಾಗಲೇ ಜನ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.

ಬೆಳಿಗ್ಗೆ ಅಂಗಡಿ, ಮುಂಗಟ್ಟು ತೆರೆಯಲು ಅವಕಾಶ ನೀಡಿ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೆ, ಜನ ಖರೀದಿಸಿದ ಮನೆ ಸಾಮಾನುಗಳನ್ನು ಹೇಗೆ ಒಯ್ಯಬೇಕು? ಹಳ್ಳಿಗಳಲ್ಲಿ ಅಂಗಡಿಗಳು ದೂರ ಇರುತ್ತವೆ. ಅವರೇನು ತಲೆಯ ಮೇಲೆ ಹೊತ್ತು ಹೋಗಬೇಕೆ? ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ರೋಗಕ್ಕಿಂತ ಹೆಚ್ಚಾಗಿ ಇಲ್ಲಿನ ರೋಗಗ್ರಸ್ಥ ಸರ್ಕಾರದಿಂದ ರಾಜ್ಯದ ಜನತೆ ಬವಣೆ ಪಡುವಂತಾಗಿದೆ. ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್‍ ಡೌನ್ ಗೊಂದಲದ ಗೂಡಾಗಿದ್ದು, ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪರಿಷ್ಕೃತ ಲಾಕ್‍ ಡೌನ್ ಅನ್ವಯ ಬೆಳಿಗ್ಗೆ ಆರರಿಂದ ಹತ್ತರ ವರೆಗೆ ದಿನಸಿ, ತರಕಾರಿ, ಮೀನು – ಮಾಂಸದ ಅಂಗಡಿಗಳು ತೆರೆಯಲು ಅವಕಾಶ ನೀಡಿ, ಈ ಅವಧಿಯಲ್ಲಿ ವಾಹನ ಸಂಚಾರ ಮಾತ್ರ ನಿಷೇಧಿಸಿರುವುದು ಸರ್ಕಾರದ ಮೂರ್ಖತನದ ನಿರ್ಧಾರ. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು 2-3 ಕಿ.ಮೀ.ದೂರದಲ್ಲಿವೆ. ಅಲ್ಲಿಂದ ಮನೆ ಸಾಮಾನುಗಳನ್ನು ಹಿರಿಯರು, ಅಶಕ್ತರು ಹೊತ್ತುಕೊಂಡು ಬರಬೇಕೇ ಮುಖ್ಯಮಂತ್ರಿಗಳೇ? ಆಯಾಸ-ಪ್ರಯಾಸದಿಂದ ಅವರಿಗೇನಾದರೂ ಆಗಿಬಿಟ್ಟರೆ ಯಾರು ಹೊಣೆ? ಈ ಸಾಮಾನ್ಯ ಜ್ಞಾನವೂ ಆಡಳಿತ ನಡೆಸುವವರಿಗೆ ಬೇಡವೇ ಎಂದು ಖಾರವಾಗಿ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

ಹೊಸ ಲಾಕ್‍ ಡೌನ್ ನಿಯಮಾವಳಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್, ಎಟಿಎಂ, ಆಸ್ಪತ್ರೆ ತೆರೆದಿರುತ್ತವೆ. ಆದರೆ, ಅಲ್ಲಿಗೆ ಗ್ರಾಹಕರು ಮತ್ತು ಅಸ್ವಸ್ಥರು ವಾಹನ ಬಳಸಲು ನಿಷೇಧ ಇದೆ. ಹೊಟೇಲ್‍ ನಲ್ಲಿ ಪಾರ್ಸಲ್‍ ಗೆ ಅವಕಾಶ ಇದೆ. ವಾಹನ ಮಾತ್ರ ಬಳಸುವಂತಿಲ್ಲ. ಇದೆಂತಹ ತುಘಲಕ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಳೆಯಿಂದ 18 ರಿಂದ 44 ವರ್ಷದವರಿಗೆ ಸಿಗಲಿದೆ ವ್ಯಾಕ್ಸಿನೇಷನ್‌

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ನಾಳೆಯಿಂದ ರಾಜ್ಯದಾದ್ಯಂತ 18 ರಿಂದ 44 ವರ್ಷದೊಳಗಿನವರಿಗೆ ವ್ಯಾಕ್ಸಿನೇಷನ್ ನಡೆಯಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ನಲ್ಲಿ ಹೇಳಿದ ಅವರು, ರಾಜ್ಯ ಸರ್ಕಾರ ಖರೀದಿಸುತ್ತಿರುವ 2 ಕೋಟಿ ಡೋಸ್ ಕೋವಿಶೀಲ್ಡ್ ಪೈಕಿ ಶನಿವಾರ ರಾತ್ರಿ 3.5 ಲಕ್ಷ ಡೋಸ್ ರಾಜ್ಯಕ್ಕೆ ತಲುಪಿದೆ. ಕೇಂದ್ರ ಸರ್ಕಾರದಿಂದ ಇಲ್ಲಿಯವರೆಗೆ 99,58,190 ಕೋವಿಶೀಲ್ಡ್, 10,91,280 ಕೋವ್ಯಾಕ್ಸಿನ್ ಸೇರಿದಂತೆ ಒಟ್ಟು 1,10,49,470 ಡೋಸ್ ಲಸಿಕೆಗಳನ್ನು ರಾಜ್ಯಕ್ಕೆ ಬಂದಿದೆ ಎಂದು ಅವರು ಹೇಳಿದ್ದಾರೆ.

ಹೀಗಾಗಿ ಮೇ. 10ನೇ ತಾರೀಖಿನಿಂದ 18 ರಿಂದ 44 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ನಡೆಯಲಿದೆ. ನಗರದ ಕೆಸಿ ಜನರಲ್, ಜಯನಗರ ಜನರಲ್ ಆಸ್ಪತ್ರೆ, ಸಿವಿ ರಾಮನಗರ ಆಸ್ಪತ್ರೆ, ಇಎಎಸ್ ಐ ಆಸ್ಪತ್ರೆ ಮತ್ತು ಸರ್ಕಾರಿ ಮೆಡಿಕಲ್ ಕಾಲೇಜು ಗಳಲ್ಲಿ ಲಸಿಕೆ ವಿತರಣೆ ನಡೆಯಲಿದೆ.

ಕೋವಿನ್ ಆ್ಯಪ್ ನಲ್ಲಿ ರಿಜಿಸ್ಟ್ರೇಶನ್ ಮಾಡಿಕೊಂಡಿದ್ದವರಿಗೆ ವ್ಯಾಕ್ಸಿನೇಷನ್ ನಡೆಯಲಿದೆ. ಆ್ಯಪ್ ರಿಜಿಸ್ಟ್ರೇಶನ್ ನಲ್ಲಿ ಯಾವ ದಿನಾಂಕ ವ್ಯಾಕ್ಸಿನೇಷನ್ ಗೆ ನಿಗದಿ ಆಗಿರುತ್ತದೆಯೋ ಅಂದೇ ಹಾಕಿಸಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ.

ಬೌನ್ಸರ್ ಗಳನ್ನು ನೇಮಿಸಿ ಸೋಂಕಿತರ ಕುಟುಂಬಸ್ಥರ ಮೇಲೆ ಹಲ್ಲೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಇಲ್ಲಿಯ ಜಿಮ್ಸ್ ಆಸ್ಪತ್ರೆಯಲ್ಲಿ ಬೌನ್ಸರ್ ಗಳ ದಬ್ಬಾಳಿಕೆ ನಡೆದಿದ್ದು, ಇದು ಆಸ್ಪತ್ರೆಯಾ? ಅಥವಾ ಖಾಸಗಿಯವರ ಪಬ್ ಹಾಗೂ ಬಾರ್ ರೆಸ್ಟೋರೆಂಟ್? ಎಂದು ಜನ ಪ್ರಶ್ನಿಸಿ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊರೊನಾ ಸೋಂಕಿತರ ಕುಟುಂಬದವರ ಮೇಲೆ ಬೌನ್ಸರ್ ಗಳು ದಬ್ಬಾಳಿಕೆ ನಡೆಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಹಿಳೆಯರ ಮೇಲೆಯೂ ಈ ಬೌನ್ಸರ್ ಗಳಿಂದ ಹಲ್ಲೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಖುದ್ದು ಜಿಮ್ಸ್ ಆಸ್ಪತ್ರೆಯ ಆಡಳಿತ ಮಂಡಿಳಿಯೇ ಈ ಬೌನ್ಸರ್ ಗಳನ್ನು ನೇಮಕ ಮಾಡಿಕೊಂಡಿದೆ ಎನ್ನಲಾಗಿದೆ. ಸುಮಾರು 10 ಬೌನ್ಸರ್ ಗಳನ್ನು ಆಸ್ಪತ್ರೆ ನೇಮಕ ಮಾಡಿಕೊಂಡಿದೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕುಟುಂಬಸ್ಥರ ಪರಿಸ್ಥಿತಿ ತಿಳಿದುಕೊಳ್ಳಲು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದರು. ಪೊಲೀಸರ ಸಮ್ಮುಖದಲ್ಲಿಯೇ ಬೌನ್ಸರ್ ಗಳು ರೋಗಿಗಳ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರು ಕಣ್ಣು ಮುಚ್ಚಿಕುಳಿತುಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ತಾಯಿಗಾಗಿ ದೇವಾಲಯವನ್ನೇ ನಿರ್ಮಿಸಿದ ಶಾಸಕ!

ವಿಜಯಸಾಕ್ಷಿ ಸುದ್ದಿ, ಯಾದಗಿರಿ

ಇಂದು ವಿಶ್ವ ತಾಯಂದಿರ ದಿನ. ತಾಯಿಯನ್ನೇ ದೇವರು ಎಂದು ಪ್ರೀತಿಸುವ ಜನರ ಮಧ್ಯೆ, ತಾಯಿ – ತಂದೆಯನ್ನು ಬೀದಿಗೆ ಎಸೆಯುವ ಮಕ್ಕಳೂ ಸಮಾಜದಲ್ಲಿ ಹೆಚ್ಚಿದ್ದಾರೆ. ಇವರೆಲ್ಲರಿಗೂ ಮಾದರಿ ಎಂಬಂತೆ ಸದ್ಯ ಇಲ್ಲೊಬ್ಬ ಮಹಾನುಭಾವ ತಾಯಿಗೆ ದೇವಾಲಯವನ್ನೇ ಕಟ್ಟಿಸಿದ್ದಾರೆ. ಅದೂ ಶಾಸಕ ಎಂಬುವುದು ಇನ್ನು ವಿಶೇಷ.

ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ರಾಜೂಗೌಡ ಅವರ ತಾಯಿಯ ಮೇಲಿನ ಪ್ರೀತಿ ಎಲ್ಲರ ಕಣ್ಣಾಲೆ ಒದ್ದೆ ಮಾಡಿಸುವುದರಲ್ಲಿ ಸಂಶಯವೇ ಇಲ್ಲ. ತಾಯಿ ಬದುಕಿದ್ದಾಗ ತೋರಿಸಿದ ಪ್ರೀತಿಯನ್ನೇ ಇಂದಿಗೂ ಉಳಿಸಿಕೊಂಡಿದ್ದಾರೆ. ರಾಜೂಗೌಡರು ತಮ್ಮ ತಾಯಿ ತಿಮ್ಮಮ್ಮ ಅವರ ನೆನಪಿಗಾಗಿ ಸ್ವಂತ ಗ್ರಾಮದಲ್ಲಿ ದೇವಾಲಯವನ್ನೇ ನಿರ್ಮಿಸಿದ್ದಾರೆ.
ಅವರ ಸ್ವಗ್ರಾಮ ಕೊಡೆಕಲ್ ನಲ್ಲಿರುವ ಜಮೀನಿನಲ್ಲಿ ತಾಯಿಯ ದೇವಸ್ಥಾನ ನಿರ್ಮಿಸಿದ್ದಾರೆ. ಅಲ್ಲದೇ ಅವರ ತಾಯಿ ಪ್ರೀತಿಯಿಂದ ಸಾಕಿದ್ದ ಗೋವುಗಳಿಗಾಗಿ ಗೋಶಾಲೆ, ಕುರಿ ಸಾಕಾಣಿಕೆ ಮಾಡುತ್ತಿದ್ದಾರೆ. ಅವರ ತಾಯಿ ನಡೆದಾಡುವ ಈ ಸ್ಥಳ ಇಂದು ಶಾಂತಿಧಾಮವಾಗಿದೆ. ಇದರೊಂದಿಗೆ ತಾಯಿಯ ಸಮಾಧಿಯ ಹತ್ತಿರವೇ ಶಾಸಕರು ಮನೆ ನಿರ್ಮಿಸಿಕೊಂಡು ವಾಸಿಸುತ್ತಿದ್ದಾರೆ.

ರಾಜೂಗೌಡ ಅವರು ಶಾಸಕರಾಗಲು ಅವರ ತಾಯಿ ತಿಮ್ಮಮ್ಮ ಮತ್ತು ಅವರ ತಂದೆ ಶಂಭುನಗೌಡ ಅವರ ಶ್ರಮ ಸಾಕಷ್ಟಿದೆ. ರಾಜೂಗೌಡ ಸುರಪುರಕ್ಕೆ ಮಾತ್ರ ಶಾಸಕರು. ಆದರೆ, ಸುರಪುರ ಕ್ಷೇತ್ರದ ಜನತೆಗೆ ತಿಮ್ಮಮ್ಮನವರೇ ಶಾಸಕಿ. ಕ್ಷೇತ್ರದ ಬಡವರ ಕಷ್ಟಕ್ಕೆ ತಿಮ್ಮಮ್ಮನವರು ಆಸರೆಯಾಗಿದ್ದರು. ಕಷ್ಟ ಹೇಳಿಕೊಂಡು ಮನೆಗೆ ಬಂದವರನ್ನು ಅವರು ಎಂದಿಗೂ ಬರಿಗೈಯಲ್ಲಿ ಕಳುಹಿಸಿಲ್ಲ. ಕೈಯಾರೇ ಊಟ ಬಡಿಸಿ ಅವರ ಕಷ್ಟ ಆಲಿಸಿ, ಸಹಾಯ ಮಾಡಿ ಕಳುಹಿಸಿದ್ದಾರೆ. ಅಲ್ಲದೆ ಶಾಸಕ ರಾಜೂಗೌಡ ಮತ್ತು ಅವರ ಸಹೋದರ ಬಬ್ಲುಗೌಡ ದೊಡ್ಡವರಾಗಿ ಬೆಳೆದಿದ್ದರೂ ಪ್ರತಿ ದಿನ ತಾಯಿಯ ಕೈ ತುತ್ತು ತಿನ್ನುತ್ತಿದ್ದರು.

ವಯೋಸಹಜ ಖಾಯಿಲೆಯಿಂದ ಶಾಸಕರ ತಾಯಿ ಹಿಂದಿನ ವರ್ಷ ನಿಧನರಾಗಿದ್ದಾರೆ. ತಾಯಿಯ ಪ್ರೀತಿ ಸದಾ ನಮ್ಮೊಂದಿಗೆ ಇರಲಿ ಎಂದು ಭಾವಿಸಿದ್ದ ಶಾಸಕರು ರಾಜಸ್ಥಾನದಿಂದ ವಿಶೇಷ ಕಲ್ಲುಗಳನ್ನು ತರಿಸಿ ಆಂಧ್ರದ ಶಿಲ್ಪಿಗಳಿಂದ ತಾಯಿಯ ಮೂರ್ತಿ ತಯಾರಿಸಿ ದೇವಸ್ಥಾನ ನಿರ್ಮಿಸಿದ್ದಾರೆ.

ಪ್ರತಿದಿನ ಶಾಸಕರೇ ತಾಯಿಯ ಮೂರ್ತಿಯನ್ನು ಶುದ್ಧಗೊಳಿಸಿ, ಪೂಜೆ ಸಲ್ಲಿಸುತ್ತಾರೆ. ಸದ್ಯ ರಾಜುಗೌಡರಂತೆ ಅವರ ಮಗ ಕೂಡ ಇದೇ ಕಾರ್ಯ ಮುಂದುವರೆಸಿದ್ದಾರೆ. ಅಜ್ಜಿಯ ಸೇವೆಯಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿರುತ್ತಾರೆ. ತಂದೆ – ತಾಯಿ ದುಡ್ಡಿನಲ್ಲಿ ಶೋಕಿ ಮಾಡಿ, ಅವರನ್ನು ಕೊನೆಗಾಲದಲ್ಲಿ ಕೈ ಬಿಡುವ ಮಕ್ಕಳ ಮುಂದೆ ಶಾಸಕರ ಈ ಪ್ರೀತಿ ನಿಜಕ್ಕೂ ಸಮಾಜಕ್ಕೆ ಮಾದರಿಯಾಗಿ ನಿಲ್ಲುತ್ತದೆ.

ಮೋದಿಯಿಂದಾಗಿ ಪಾಕಿಸ್ತಾನ, ಕಾಂಗೋನಂತಹ ರಾಷ್ಟ್ರಗಳು ನಮಗೆ ಸಹಾಯ ಮಾಡುತ್ತೇವೆ ಎನ್ನುವಂತಾಗಿದೆ; ಶಿವಸೇನೆ ಕಿಡಿ

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಮಹಾಮಾರಿಯಿಂದ ಉಂಟಾಗಿರುವ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಮೋದಿ ಸರ್ಕಾರದ ವಿರುದ್ಧ ಶಿವಸೇನೆ ತೀವ್ರ ಟೀಕೆ ಮಾಡಿದೆ.

ದೇಶದಲ್ಲಿ ಕೊರೊನಾ ನಿಭಾಯಿಸುವುದರಲ್ಲಿ ಮೋದಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸಣ್ಣ ಸಣ್ಣ ರಾಷ್ಟ್ರಗಳು ಕೂಡ ಸಹಾಯ ಹಸ್ತ ಚಾಚಲು ಮುಂದೆ ಬರುತ್ತಿವೆ. ಆದರೆ, ಮೋದಿ ಸರ್ಕಾರವು ಬಹುಕೋಟಿ ರೂಪಾಯಿ ಅನುದಾನದಲ್ಲಿ ನಿರ್ಮಿಸಲು ಮುಂದಾದ ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸುವುದಕ್ಕೂ ಸಿದ್ಧವಿಲ್ಲ ಎಂದು ಟೀಕಿಸಿದೆ.

ಇಂದು ನಾವು ಕೊರೊನಾ ವಿರುದ್ದ ಹೋರಾಡುವ ಶಕ್ತಿ ಗಳಿಸಿಕೊಂಡಿದ್ದರೆ, ಅದಕ್ಕೆ ಈ ಹಿಂದಿನ 70 ವರ್ಷಗಳಲ್ಲಿ ಪಂಡಿತ್ ನೆಹರು, ಇಂದಿರಾ ಗಾಂಧಿ, ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಸೃಷ್ಟಿಸಲಾದ ವ್ಯವಸ್ಥೆಯೇ ಕಾರಣ. ಈ ವ್ಯವಸ್ಥೆ ಭಾರತ ಸಂಕಷ್ಟದ ಕಾಲವನ್ನು ನಿಭಾಯಿಸುವುದಕ್ಕೆ ಸಾಧ್ಯವಾಗಿದೆ ಎಂದು ಹೊಗಳಿದ್ದಾರೆ.

ಇಡೀ ವಿಶ್ವವೇ ಭಾರತದ ಸೋಂಕಿನಿಂದ ವಿಶ್ವಕ್ಕೆ ಅಪಾಯವಿದೆ ಎಂದು ಹೇಳುತ್ತಿದೆ. ವಿಶ್ವ ಸಂಸ್ಥೆ ಕೂಡ ಸಹಾಯ ಮಾಡಬೇಕೆಂದು ಕರೆ ನೀಡಿದೆ. ಬಾಂಗ್ಲಾದೇಶ 10 ಸಾವಿರ ರೆಮಿಡಿಸಿವರ್ ಔಷಧ ಕಳುಹಿಸಿದೆ. ಭೂತಾನ್ ವೈದ್ಯಕೀಯ ಆಕ್ಸಿಜನ್ ಕಳಿಸಿದೆ. ನೇಪಾಳ, ಮ್ಯಾನ್ಮಾರ್ ಹಾಗೂ ಶ್ರೀಲಂಕಾಗಳಂತಹ ಚಿಕ್ಕ ರಾಷ್ಟ್ರಗಳೂ ದೇಶಕ್ಕೆ ಸಹಾಯ ಮಾಡತ್ತಿವೆ.

ಬೇರೆ ರಾಷ್ಟ್ರಗಳ ಸಹಾಯಕ್ಕೆ ಕೈ ಚಾಚುತ್ತಿದ್ದ ಪಾಕಿಸ್ತಾನ, ಕಾಂಗೋ, ರುವಾಂಡಾಗಳಂತಹ ರಾಷ್ಟ್ರಗಳು ಕೂಡ ಇಂದು ಭಾರತಕ್ಕೆ ಸಹಾಯ ಮಾಡುತ್ತೇವೆ ಎಂಬ ಮಾತುಗಳನ್ನು ಹೇಳುತ್ತಿವೆ. ಇದು ಆಳುವವರ ತಪ್ಪಾದ ನೀತಿಗಳ ಪರಿಣಾಮ ಎಂದು ಶಿವಸೇನೆ ಮೋದಿ ಸರ್ಕಾರದ ವಿರುದ್ಧ ಗುಡುಗಿದೆ.

error: Content is protected !!