ಬೆಂಗಳೂರು: ರಾಜ್ಯದ ಪಡಿತರ ಚೀಟಿದಾರರಿಗೆ ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮಹತ್ವದ ಮಾಹಿತಿ ನೀಡಿದೆ.
ಪಡಿತರ ಚೀಟಿಯ ಇ-ಕೆವೈಸಿ ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ಮತ್ತೆ ವಿಸ್ತರಿಸಲಾಗಿದ್ದು, ಅಕ್ಟೋಬರ್ 20ರ ಬದಲಿಗೆ ನವೆಂಬರ್ 10 ಕೊನೆಯ ದಿನಾಂಕವಾಗಿದೆ.
ಒಂದು ವರ್ಷಕ್ಕೂ ಹೆಚ್ಚು ಹಿಂದೆ ಇ-ಕೆವೈಸಿ ಮಾಡಿಸಿರುವ ಫಲಾನುಭವಿಗಳು ಮತ್ತೊಮ್ಮೆ ದೃಢೀಕರಣ ಮಾಡಿಸಬೇಕೆಂದು ಇಲಾಖೆ ಸೂಚಿಸಿದೆ. ರಾಜ್ಯದಲ್ಲಿ ಈ ವರ್ಗಕ್ಕೆ ಸೇರಿದ 1,15,87,298 ಫಲಾನುಭವಿಗಳು ಇ-ಕೆವೈಸಿ ಮಾಡಿಸಬೇಕಿದೆ ಎಂದು ತಿಳಿಸಲಾಗಿದೆ.
ಇದಲ್ಲದೆ, ಇದುವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ 3,82,362 ಫಲಾನುಭವಿಗಳು ಹಾಗೂ ಐದು ವರ್ಷಕ್ಕೂ ಹಿಂದೆ ಇ-ಕೆವೈಸಿ ಮಾಡಿಸಿದ 54,27,396 ಫಲಾನುಭವಿಗಳೂ ದೃಢೀಕರಣ ಪ್ರಕ್ರಿಯೆ ಪೂರ್ಣಗೊಳಿಸಬೇಕಿದೆ.
ಇ-ಕೆವೈಸಿ ಮಾಡಿಸುವುದು ಹೇಗೆ?
ಫಲಾನುಭವಿಗಳು ‘ಅನ್ನ ಸೇವೆ’ ಮೊಬೈಲ್ ಆ್ಯಪ್ ಮೂಲಕ ಅಥವಾ ತಮ್ಮ ಸಮೀಪದ ನ್ಯಾಯಬೆಲೆ ಅಂಗಡಿಯಲ್ಲಿ ‘AHARA’ ತಂತ್ರಾಂಶದ ಮೂಲಕ ಇ-ಕೆವೈಸಿ ಮಾಡಿಸಬಹುದು. ನವೆಂಬರ್ 10ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವುದು ಕಡ್ಡಾಯ ಎಂದು ಇಲಾಖೆ ತಿಳಿಸಿದೆ.
ಹೊರರಾಜ್ಯಗಳಲ್ಲಿ ಉದ್ಯೋಗಕ್ಕಾಗಿ ನೆಲೆಸಿರುವ ಕರ್ನಾಟಕದ ಪಡಿತರ ಚೀಟಿದಾರರಿಗೂ ಅನುಕೂಲವಾಗುವಂತೆ ‘ಅನ್ನ ಸೇವೆ’ ಆ್ಯಪ್ ಲಭ್ಯತೆಯನ್ನು ದೇಶಾದ್ಯಂತ ವಿಸ್ತರಿಸಲಾಗಿದೆ. ಅವರು ತಾವು ಇರುವ ಸ್ಥಳದಿಂದಲೇ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಇ-ಕೆವೈಸಿ ಪೂರ್ಣಗೊಳಿಸಬಹುದು. ಈಗಾಗಲೇ ಆ್ಯಪ್ ಬಳಸುತ್ತಿರುವವರು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಹೊಸ ಆವೃತ್ತಿಗೆ ಅಪ್ಡೇಟ್ ಮಾಡಿಕೊಳ್ಳಬಹುದು.
ಈ ಹಿಂದೆ ಸೆಪ್ಟೆಂಬರ್ 30 ಕೊನೆಯ ದಿನಾಂಕವಾಗಿತ್ತು. ಬಳಿಕ ಅಕ್ಟೋಬರ್ 20ರವರೆಗೆ ಗಡುವು ವಿಸ್ತರಿಸಲಾಗಿತ್ತು. ಇದೀಗ ಮತ್ತೆ ನವೆಂಬರ್ 10ರವರೆಗೆ ಅವಕಾಶ ನೀಡಲಾಗಿದೆ. ನಿಗದಿತ ಸಮಯದೊಳಗೆ ಇ-ಕೆವೈಸಿ ಮಾಡಿಸದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ. ಇದರಿಂದ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಅಥವಾ ಪಡಿತರ ಚೀಟಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಫಲಾನುಭವಿಗಳು ಕೂಡಲೇ ದೃಢೀಕರಣ ಮಾಡಿಸಿಕೊಳ್ಳುವುದು ಉತ್ತಮ.

