Home Blog Page 3

ಒಳ ಮೀಸಲಾತಿಯಿಂದ ಬಂಜಾರ ಯುವಕರಿಗೆ ಅನ್ಯಾಯ

0

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿ ವ್ಯವಸ್ಥೆಯಲ್ಲಿನ ರೋಸ್ಟರ್ ಬಿಂದುವಿನಿಂದ ಬಂಜಾರ ಸಮುದಾಯದ ಯುವಕರಿಗೆ ಶಿಕ್ಷಣ, ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಮಜ್ಜೂರ ತಾಂಡಾದ ಯುವಕರು ಆ. 15ರಂದು ಮನವಿ ಸಲ್ಲಿಸಿದರು.

ಒಳ ಮೀಸಲಾತಿ ವ್ಯವಸ್ಥೆಯಲ್ಲಿ ಬಂಜಾರ ಸಮುದಾಯದ ಯುವಕರಿಗೆ ಉಂಟಾಗುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಿ, ಅನ್ಯಾಯ ಸರಿಪಡಿಸಬೇಕು. ವಿಶೇಷವಾಗಿ ರೋಸ್ಟರ್ ಬಿಂದುವಿನಿಂದ ಉದ್ಯೋಗ ಹಾಗೂ ಶೈಕ್ಷಣಿಕ ಅವಕಾಶಗಳಲ್ಲಿ ಸಮುದಾಯಕ್ಕೆ ಆಗುತ್ತಿರುವ ತೊಂದರೆ ನಿವಾರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ವಕೀಲರು ಹಾಗೂ ಗೋರಸೇನಾ ರಾಜ್ಯಾಧ್ಯಕ್ಷ ರವಿಕಾಂತ ಅಂಗಡಿ, ತಾಂಡಾದ ಯುವಕರು ಸಲ್ಲಿಸಿರುವ ಮನವಿಯಲ್ಲಿನ ಅಂಶಗಳು ಗಂಭೀರವಾಗಿದ್ದು, ಬಂಜಾರ ಸಮುದಾಯದ ವಾಸ್ತವ ಸಮಸ್ಯೆಯನ್ನು ಪ್ರತಿಬಿಂಬಿಸುತ್ತವೆ ಎಂದರು.

ಶಿರಹಟ್ಟಿ ತಾಲೂಕಿನ ತಾಂಡಾ ಯುವಕರು ಸಲ್ಲಿಸಿರುವ ಮನವಿಯ ಅಂಶಗಳು ರಾಜ್ಯದಾದ್ಯಂತ ಇರುವ ಬಂಜಾರ ಸಮುದಾಯದ ಸಮಸ್ಯೆಯ ಪ್ರತಿಬಿಂಬವಾಗಿವೆ. ತಾಂಡಾ ತಾಂಡಾಗಳಿಗೆ ತೆರಳಿ ಜನಜಾಗೃತಿ ಮೂಡಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.

ಬಂಜಾರ ಸಮುದಾಯದ ಯುವಕರಿಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಸಮಾನ ಅವಕಾಶ ದೊರೆಯುವಂತೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ರೋಸ್ಟರ್ ಬಿಂದುವಿನಿಂದ ಉಂಟಾಗುತ್ತಿರುವ ಸಮಸ್ಯೆಯನ್ನು ಪರಿಶೀಲಿಸಿ, ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಶೀಘ್ರ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮಜ್ಜೂರ ತಾಂಡಾದ ಯುವಕರು ಹಾಗೂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

“ಒಳ ಮೀಸಲಾತಿಯಲ್ಲಿನ ರೋಸ್ಟರ್ ಬಿಂದುವಿನ ಪರಿಣಾಮವಾಗಿ ಉದ್ಯೋಗ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂಬುದು ಯುವಕರ ಆತಂಕವಾಗಿದೆ. ‘ರೋಸ್ಟರ್ ಬಿಂದು ಹಠಾವೋ, ಒಳ ಮೀಸಲಾತಿ ಬಚಾವೋ’ ಎಂಬ ಘೋಷಣೆಯೊಂದಿಗೆ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಜನಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು.”

— ರವಿಕಾಂತ ಅಂಗಡಿ, ಗೋರಸೇನಾ ರಾಜ್ಯಾಧ್ಯಕ್ಷ

ಕಸಿ ಪಡೆದವರ ‘ಎರಡನೇ ಇನ್ನಿಂಗ್ಸ್’

0

ವಿಜಯಸಾಕ್ಷಿ ಸುದ್ದಿ, ಗದಗ: ಅಂಗಾಂಗ ದಾನಿಗಳು ಹಾಗೂ ಅಂಗಾಂಗ ಸ್ವೀಕರಿಸಿದವರು ಎಲ್ಲರಂತೆ ಸಾಮಾನ್ಯ ಮತ್ತು ಸಕ್ರಿಯ ಜೀವನ ನಡೆಸಬಹುದು ಎಂಬ ಆತ್ಮವಿಶ್ವಾಸ ಮೂಡಿಸುವಲ್ಲಿ ಇಂತಹ ಕ್ರೀಡಾಕೂಟಗಳು ಅತ್ಯಂತ ಅವಶ್ಯಕ ಎಂದು ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಸಂಕಲ್ಪ ಕಿಡ್ನಿಕೇರ್ ಫೌಂಡೇಶನ್ ಹಾಗೂ ಕೆ.ಎಚ್. ಪಾಟೀಲ ಕಿಡ್ನಿ ಕೇರ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯದಲ್ಲೇ ಮೊದಲ ‘ಗದಗ ಟ್ರಾನ್ಸ್‌ಪ್ಲಾಂಟ್ ಗೇಮ್ಸ್-2026’ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಗದಗ ಚಿಕ್ಕ ಜಿಲ್ಲೆಯಾದರೂ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವಲ್ಲಿ ದೊಡ್ಡ ಸಾಧನೆ ಮಾಡಿದೆ. ಜಿಲ್ಲೆಯಲ್ಲಿ ಇದುವರೆಗೆ 6,281 ಜನರು ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡಿದ್ದು, ಒಟ್ಟಾರೆ ನೋಂದಣಿಯಲ್ಲಿ ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ. ಆದರೆ ಜನಸಂಖ್ಯೆಗೆ ಹೋಲಿಸಿದರೆ ಗದಗ ಇಡೀ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಎಚ್.ಕೆ. ಪಾಟೀಲ ಹೆಮ್ಮೆ ವ್ಯಕ್ತಪಡಿಸಿದರು.

ಅಂಗಾಂಗ ದಾನಿಗಳು ಮತ್ತು ಸ್ವೀಕರಿಸಿದವರು ಸಮಾಜದ ಎಲ್ಲರಂತೆ ಸಾಮಾನ್ಯ ಹಾಗೂ ಸಕ್ರಿಯ ಜೀವನ ನಡೆಸಬಹುದು ಎಂಬ ವಿಶ್ವಾಸ ಮೂಡಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಟ್ರಾನ್ಸ್‌ಪ್ಲಾಂಟ್ ಗೇಮ್ಸ್‌ನಂತಹ ಕ್ರೀಡಾಕೂಟಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಅವರು ಹೇಳಿದರು.

ಹುಲಕೋಟಿಯ ಆರ್‌ಎಂಎಸ್ ಆಶ್ರಯದಲ್ಲಿ 12 ಉಚಿತ ಕಿಡ್ನಿ ಕಸಿ ಹಾಗೂ 100 ಉಚಿತ ಮೊಣಕಾಲು ಶಸ್ತ್ರಚಿಕಿತ್ಸೆ ನಡೆಸುವ ಸಂಕಲ್ಪ ಮಾಡಲಾಗಿದೆ. ಬರುವ ಮಾರ್ಚ್ 16ರೊಳಗೆ ಎಲ್ಲ ಉಚಿತ ಶಸ್ತ್ರಚಿಕಿತ್ಸೆಗಳನ್ನು ಪೂರ್ಣಗೊಳಿಸುವ ಗುರಿಯಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಅವಿನಾಶ ಓದುಗೌಡರ, ಟ್ರಾನ್ಸ್‌ಪ್ಲಾಂಟ್ ಗೇಮ್ಸ್ ಕೇವಲ ಕ್ರೀಡಾಕೂಟವಲ್ಲ, ಕಸಿ ಪಡೆದವರ ಎರಡನೇ ಬದುಕಿನ ಶುಭಾರಂಭ ಎಂದರು.

ಪ್ರತಿಯೊಂದು ಕಿಡ್ನಿ ಕಸಿಯೂ ರೋಗಿಗೆ ಹೊಸ ಜೀವನ ನೀಡುತ್ತದೆ. ಒಬ್ಬ ವ್ಯಕ್ತಿಯ ಅಂಗಾಂಗ ದಾನವು ಎಂಟು ಜನರ ಹೊಸ ಬದುಕಿಗೆ ಮುನ್ನುಡಿ ಬರೆಯಬಲ್ಲದು. 2024ರವರೆಗೆ ಗದಗದಲ್ಲಿ ಅಂಗಾಂಗ ದಾನದ ಕುರಿತು ಮಾತುಕತೆಗಳೇ ಇರಲಿಲ್ಲ. ಇಂದು ಗದಗ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಡಾ. ಅರುಣಕುಮಾರ್ ಮಾತನಾಡಿ, ಕಳೆದ ವರ್ಷ ರಾಜ್ಯದಲ್ಲಿ ಮೆದುಳು ನಿಷ್ಕ್ರಿಯಗೊಂಡ 198 ಜನರಿಂದ 500ಕ್ಕೂ ಹೆಚ್ಚು ರೋಗಿಗಳಿಗೆ ವಿವಿಧ ಅಂಗಾಂಗಗಳನ್ನು ದಾನ ಮಾಡಲಾಗಿದೆ. ರಾಜ್ಯದಲ್ಲಿ 95 ಅಂಗಾಂಗ ಕಸಿ ಕೇಂದ್ರಗಳಿದ್ದು, ಗ್ರಾಮೀಣ ಭಾಗದಲ್ಲಿ ಕಿಡ್ನಿ ಕಸಿ ಮಾಡುತ್ತಿರುವ ಏಕೈಕ ಆಸ್ಪತ್ರೆ ಕೆ.ಎಚ್. ಪಾಟೀಲ ಆಸ್ಪತ್ರೆಯಾಗಿದೆ. ಅಂಗಾಂಗ ದಾನಿಗಳಲ್ಲಿ ಶೇ.75ರಷ್ಟು ಮಹಿಳೆಯರಿದ್ದಾರೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಡಾ. ನಾಗನೂರ, ಡಾ. ಆನಂದ ಪೋತ್ನೀಸ್, ಡಾ. ಪ್ಯಾರ್ ಅಲಿ ನೂರಾನಿ, ಡಾ. ಅಜಯ ಶರ್ಮಾ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್. ಬುರುಡಿ, ಪ್ರಭು ಬುರಬುರೆ, ಅಶೋಕ ಮಂದಾಲಿ, ಡಾ. ಶರಣ್ ಆಲೂರ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

55 ಸ್ಪರ್ಧಿಗಳ ಕ್ರೀಡಾಸ್ಫೂರ್ತಿ

ಅಂಗಾಂಗ ದಾನಿಗಳು ಹಾಗೂ ಸ್ವೀಕರಿಸಿದವರು ಸೇರಿದಂತೆ 55 ಸ್ಪರ್ಧಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.

ನಾಗಪ್ಪನಿಗೆ ಹಾಲೆರೆದು… ಮನೆಯವರ ‘ಪಾಲು’ ನೆನೆದ ನಾರಿಯರು!

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಾಗರ ಪಂಚಮಿ ಅಂದ್ರೆ ಹಳ್ಳಿ ಹೆಣ್ಮಕ್ಕಳಿಗೆ ಬರೀ ಹಬ್ಬ ಅಲ್ಲ… ಅದು ತವರುಮನೆಯ ನೆನಪು, ಕುಟುಂಬದ ಮೇಲಿನ ಕಾಳಜಿ, ಹಿರಿಯರ ಸ್ಮರಣೆ ಹಾಗೂ ತಲೆತಲಾಂತರದಿಂದ ಬಂದಿರುವ ಗ್ರಾಮೀಣ ಸಂಪ್ರದಾಯಗಳ ಸಮ್ಮಿಲನ. ಜಕ್ಕಲಿ ಗ್ರಾಮದಲ್ಲಿ ರವಿವಾರ ನಡೆದ ನಾಗರ ಪಂಚಮಿ ಆಚರಣೆಯಲ್ಲೂ ಈ ಹಳ್ಳಿ ಸೊಗಡು ಮನಮೋಹಕವಾಗಿ ಅನಾವರಣಗೊಂಡಿತು.

ಬೆಳಿಗ್ಗೆಯಿಂದಲೇ ಗ್ರಾಮದ ಬಾಕಿಷ್ಠಪ್ಪ ಭಾವಿ ಮೇಲಿರುವ ನಾಗಮೂರ್ತಿ ಹಾಗೂ ಶ್ರೀ ಕಲ್ಲೇಶ್ವರ ದೇವಸ್ಥಾನದ ಮುಂದಿನ ನಾಗಮೂರ್ತಿಗಳ ಬಳಿ ಭಕ್ತರ ದಂಡೇ ಸೇರಿತ್ತು. ಬಣ್ಣಬಣ್ಣದ ಸೀರೆ ತೊಟ್ಟು, ತಲೆಯ ಮೇಲೆ ಹೂವು ಮುಡಿದು, ಕೈಯಲ್ಲಿ ಪೂಜಾ ಸಾಮಗ್ರಿ ಹಿಡಿದು ಬಂದ ಮಹಿಳೆಯರು ನಾಗಮೂರ್ತಿಗೆ ಹಾಲೆರೆದು, ಹೂವು, ಬೆಲ್ಲ, ಕೊಬ್ಬರಿ ಅರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಮಳೆ ಚೆನ್ನಾಗಿ ಸುರಿದು, ಹೊಲಗಳಲ್ಲಿ ಬೆಳೆ ಸಮೃದ್ಧಿಯಾಗಲಿ, ಕುಟುಂಬದ ಸದಸ್ಯರಿಗೆ ಆರೋಗ್ಯ–ನೆಮ್ಮದಿ ದೊರೆಯಲಿ ಎಂದು ನಾಗದೇವರಲ್ಲಿ ಪ್ರಾರ್ಥಿಸಿದರು.

‘ಅಪ್ಪನ ಪಾಲು… ಅಮ್ಮನ ಪಾಲು…’—ಮನೆಯವರನ್ನೆಲ್ಲ ನೆನೆದರು

ಜಕ್ಕಲಿಯ ನಾಗರ ಪಂಚಮಿ ಆಚರಣೆಯ ವಿಶೇಷವೆಂದರೆ ‘ಹಾಲು ಹಾಕುವ’ ವಿಶಿಷ್ಟ ಸಂಪ್ರದಾಯ. ಮನೆಯಿಂದ ತಂದ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲದಚ್ಚು ಹಾಗೂ ಹಾಲು ಹಾಕಿಕೊಂಡು ನಾಗಪ್ಪನಿಗೆ ಅರ್ಪಿಸುವ ವೇಳೆ ಕುಟುಂಬದ ಪ್ರತಿಯೊಬ್ಬರನ್ನೂ ಹೆಸರಿಟ್ಟು ಸ್ಮರಿಸಲಾಯಿತು.

‘ದೇವರ ಪಾಲು, ದಿಂಡರ ಪಾಲು, ಗುರು–ಹಿರಿಯರ ಪಾಲು, ಅಪ್ಪನ ಪಾಲು, ಅಮ್ಮನ ಪಾಲು, ಅಣ್ಣನ ಪಾಲು, ತಮ್ಮನ ಪಾಲು, ಅಕ್ಕನ ಪಾಲು, ತಂಗಿಯ ಪಾಲು, ಮಾವನ ಪಾಲು, ಅಳಿಯನ ಪಾಲು, ಅತ್ತೆಯ ಪಾಲು, ಸೊಸೆಯ ಪಾಲು…’ ಎಂದು ಹೇಳುತ್ತಾ ಹಾಲಿನ ಪಾಲು ಅರ್ಪಿಸಿದರು.

ಒಬ್ಬೊಬ್ಬರ ಹೆಸರು ಹೇಳುತ್ತಾ ಹಾಲು ಅರ್ಪಿಸುವಾಗ, ‘ನಮ್ಮ ಮನಿ ಮಂದಿ ಎಲ್ಲರೂ ಚೆನ್ನಾಗಿರಲಿ’ ಎಂಬ ಕಾಳಜಿ ಮಹಿಳೆಯರ ಮೊಗದಲ್ಲಿ ಎದ್ದು ಕಾಣುತ್ತಿತ್ತು. ಹೀಗಾಗಿ ನಾಗರ ಪಂಚಮಿ ಇಲ್ಲಿ ಕೇವಲ ನಾಗಪೂಜೆಯಾಗದೆ, ಕುಟುಂಬದ ಎಲ್ಲರನ್ನೂ ಒಂದೇ ಮನಸ್ಸಿನಿಂದ ನೆನೆಯುವ ಭಾವನಾತ್ಮಕ ಆಚರಣೆಯಾಗಿ ಕಂಡುಬಂತು.

ಅಣ್ಣ–ತಮ್ಮಂದಿರ ಒಳಿತಿಗಾಗಿ ಉಪವಾಸ

ಕೆಲವು ಮಹಿಳೆಯರು ಅಣ್ಣ–ತಮ್ಮಂದಿರ ಆಯುಷ್ಯ, ಆರೋಗ್ಯ ಮತ್ತು ಒಳಿತಿಗಾಗಿ ಉಪವಾಸ ಆಚರಿಸಿದರು. ನಾಗಪ್ಪನಿಗೆ ಪೂಜೆ ಸಲ್ಲಿಸಿ ಸಹೋದರರ ಕ್ಷೇಮಕ್ಕಾಗಿ ಪ್ರಾರ್ಥಿಸಿದರು. ಹೀಗೆ ಅಣ್ಣ–ತಂಗಿ, ಅಕ್ಕ–ತಮ್ಮನ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂಪ್ರದಾಯವೂ ಹಬ್ಬದಲ್ಲಿ ಜೀವಂತವಾಗಿತ್ತು.

ನಾಗರ ಪಂಚಮಿಯ ಅಂಗವಾಗಿ ಮನೆಗಳಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು. ಕುಚ್ಚುಕಡುಬು, ಅಳಿಟ್ಟು, ನೆನೆಸಿದ ಕಡಲೆಕಾಳು, ತೆಂಗಿನಕಾಯಿ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

ಪೂಜೆ ಮುಗಿಸಿ ಮನೆಗೆ ಮರಳಿದ ಬಳಿಕ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಕುಳಿತು ಅಳಿಟ್ಟು ಉಂಡೆ, ಕಡ್ಲಿ ಉಂಡೆ, ಗುಳಿಗೆ ಉಂಡೆ, ಶೇಂಗಾ ಉಂಡೆ, ಎಳ್ಳುಂಡೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿಂಡಿಗಳನ್ನು ಸವಿದರು.

ಜೋಕಾಲಿಯಲ್ಲಿ ಜೀಕಿದ ಮಕ್ಕಳು; ಬೊಲ್‌ಬುಗುರಿಯಲ್ಲಿ ಸಂಭ್ರಮ

ಸಂಜೆಯಾಗುತ್ತಿದ್ದಂತೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು. ಕೆಲವರು ಹಂಗನೂಲು ಕಟ್ಟಿಕೊಂಡರೆ, ಮಹಿಳೆಯರು ಮತ್ತು ಮಕ್ಕಳು ಜೋಕಾಲಿಯತ್ತ ಹೆಜ್ಜೆ ಹಾಕಿದರು. ಬೇವಿನ ಮರಕ್ಕೆ ಕಟ್ಟಿದ್ದ ಜೋಕಾಲಿಯಲ್ಲಿ ಹದಿಹರೆಯದವರು ಜೀಕಿ ಸಂಭ್ರಮಿಸಿದರು.

ಮನೆಗಳಲ್ಲಿ ಕಟ್ಟಿದ್ದ ಜೋಕಾಲಿಯಲ್ಲಿ ಪುಟ್ಟ ಮಕ್ಕಳು ಆಟವಾಡಿದರು. ಹಿರಿಯರು ಒಣ ಕೊಬ್ಬರಿ ಬಟ್ಟಲಿಗೆ ದಾರ ಕಟ್ಟಿ ನೀಡಿದ ಬಳಿಕ ಮಕ್ಕಳು ‘ಬೊಲ್‌ಬುಗುರಿ’ ಆಡುತ್ತಾ ಓಡಾಡಿದ್ದು ಹಬ್ಬದ ಸಡಗರಕ್ಕೆ ಮತ್ತಷ್ಟು ಮೆರುಗು ನೀಡಿತು.

ಹಳ್ಳಿ ಬದುಕಿನ ಜೀವಂತ ಕೊಂಡಿ

ಮೊಬೈಲ್, ಟಿವಿ ಹಾಗೂ ಆಧುನಿಕ ಜೀವನಶೈಲಿಯ ಪ್ರಭಾವದಿಂದ ಗ್ರಾಮೀಣ ಬದುಕಿನ ಹಲವು ಆಚರಣೆಗಳು ನಿಧಾನವಾಗಿ ಮರೆಯಾಗುತ್ತಿರುವ ಕಾಲದಲ್ಲೂ ಜಕ್ಕಲಿಯಲ್ಲಿ ನಾಗರ ಪಂಚಮಿಯನ್ನು ಸಾಂಪ್ರದಾಯಿಕ ಸೊಗಡಿನೊಂದಿಗೆ ಆಚರಿಸಿರುವುದು ಗಮನ ಸೆಳೆಯಿತು.

ನಾಗಪ್ಪನಿಗೆ ಹಾಲಿನ ಧಾರೆ ಅರ್ಪಿಸಿದ ಮಹಿಳೆಯರು, ಕುಟುಂಬದ ಪ್ರತಿಯೊಬ್ಬರ ಹೆಸರನ್ನೂ ನೆನೆದು ‘ಪಾಲು’ ಹಾಕಿದ ಸಂಪ್ರದಾಯ, ಸಹೋದರರಿಗಾಗಿ ಉಪವಾಸ, ಮನೆಯಲ್ಲಿ ಸಿದ್ಧವಾದ ಸಾಂಪ್ರದಾಯಿಕ ತಿಂಡಿಗಳು ಹಾಗೂ ಜೋಕಾಲಿಯಲ್ಲಿ ಜೀಕಿದ ಮಕ್ಕಳು—ಇವೆಲ್ಲವೂ ಸೇರಿ ಜಕ್ಕಲಿಯ ನಾಗರ ಪಂಚಮಿಯನ್ನು ಜೀವಂತ ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾಗಿಸಿತು.

ಹಿರಿಯರು ಆಚರಿಸುವುದನ್ನು ಕಣ್ಣಾರೆ ನೋಡುತ್ತಾ ಮಕ್ಕಳು ಸಂಪ್ರದಾಯಗಳನ್ನು ಕಲಿಯುತ್ತಿರುವುದರಿಂದ ತಲೆತಲಾಂತರದಿಂದ ಬಂದಿರುವ ಹಳ್ಳಿ ಸಂಸ್ಕೃತಿಯ ಕೊಂಡಿ ಇನ್ನೂ ಗಟ್ಟಿಯಾಗಿಯೇ ಉಳಿದಿದೆ.

ಹಳೆ ಆಸ್ಪತ್ರೆಗಳಲ್ಲಿ ಪೂರ್ಣ ಚಿಕಿತ್ಸೆ ದೊರಕಿಸಿ: ಸಂಸದ ಬಸವರಾಜ ಬೊಮ್ಮಾಯಿ

0

ವಿಜಯಸಾಕ್ಷಿ ಸುದ್ದಿ, ಗದಗ: ಗದಗ ನಗರದ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕರ ಚಿಕಿತ್ಸೆಗೆ ಬಳಸಬೇಕು ಹಾಗೂ ಹಳೆಯ ಜಿಲ್ಲಾ ಆಸ್ಪತ್ರೆಯಲ್ಲೂ ಕನಿಷ್ಠ ೫೦ರಿಂದ ೧೦೦ ಹಾಸಿಗೆಗಳ ಚಿಕಿತ್ಸಾ ವ್ಯವಸ್ಥೆ ಪುನರಾರಂಭಿಸಬೇಕು ಎಂದು ಗದಗ ಜಿಲ್ಲಾ ವಿಕಾಸ ವೇದಿಕೆ ವತಿಯಿಂದ ಸಂಸದ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಗದಗ ನಗರಕ್ಕೆ ಆಗಮಿಸಿದ್ದ ಬಸವರಾಜ ಬೊಮ್ಮಾಯಿ ಅವರನ್ನು ವೇದಿಕೆ ಅಧ್ಯಕ್ಷ ವಿಶ್ವನಾಥ ಖಾನಾಪೂರ ನೇತೃತ್ವದ ನಿಯೋಗ ಭೇಟಿ ಮಾಡಿ, ನಗರದ ಎರಡು ಆಸ್ಪತ್ರೆಗಳನ್ನು ಸಮರ್ಪಕವಾಗಿ ಬಳಕೆ ಮಾಡುವ ಮೂಲಕ ಜನರಿಗೆ ಹೆಚ್ಚಿನ ಆರೋಗ್ಯ ಸೇವೆ ಒದಗಿಸುವಂತೆ ಮನವಿ ಮಾಡಿತು.

ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ನಗರದ ಎರಡೂ ಆಸ್ಪತ್ರೆಗಳಲ್ಲಿ ಜನರಿಗೆ ಪೂರ್ಣ ಪ್ರಮಾಣದ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಗಮನ ಹರಿಸುವುದಾಗಿ ಭರವಸೆ ನೀಡಿದರು. ಇದರಿಂದ ಗದಗ ನಗರ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಜನರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.

ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾದ ಸಂದರ್ಭದಲ್ಲಿ ಅಗತ್ಯವಿರುವ ರೋಗಿಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸುವ ವ್ಯವಸ್ಥೆ ಕಲ್ಪಿಸಬೇಕು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಎರಡೂ ಆಸ್ಪತ್ರೆಗಳಲ್ಲಿ ಸಮರ್ಪಕ ಚಿಕಿತ್ಸಾ ಸೌಲಭ್ಯ ಒದಗಿಸಬೇಕು ಎಂದು ವೇದಿಕೆ ಮನವಿ ಮಾಡಿತು.

ಅದೇ ರೀತಿ ಹಳೆಯ ಜಿಲ್ಲಾ ಆಸ್ಪತ್ರೆಯ ಒಳಾಂಗಣ ಮತ್ತು ಹೊರಾಂಗಣವನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಕನಿಷ್ಠ ೫೦ರಿಂದ ೧೦೦ ಹಾಸಿಗೆಗಳ ಆಸ್ಪತ್ರೆಯಾಗಿ ಪುನರಾರಂಭಿಸುವ ಮೂಲಕ ಹಿರಿಯ ನಾಗರಿಕರು, ಬಿಪಿ, ಮಧುಮೇಹ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಅಗತ್ಯ ಚಿಕಿತ್ಸೆ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಈ ಕುರಿತು ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ ಹಾಗೂ ಜಿಲ್ಲಾ ಆಡಳಿತದೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವೇದಿಕೆ ವತಿಯಿಂದ ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಾಜು ಕುರಡಗಿ, ನಗರಸಭೆ ಸದಸ್ಯರಾದ ಅನಿಲ ಅಬ್ಬಿಗೇರಿ, ಚಂದ್ರು ತಡಸದ, ಕಿರಣ ಭೂಮಾ, ರಮೇಶ್ ಸಜ್ಜಗಾರ, ಪ್ರಶಾಂತ ನಾಯ್ಕರ, ಅಮರನಾಥ ಬೆಟಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

“ನಗರದ ಎರಡು ಆಸ್ಪತ್ರೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಿದರೆ ಗದಗ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರಿಗೆ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ದೊರೆಯಲಿದೆ. ಈ ನಿಟ್ಟಿನಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಅವರು ಸ್ಪಂದಿಸಿರುವುದು ಸ್ವಾಗತಾರ್ಹ.”

ವಿಶ್ವನಾಥ ಖಾನಾಪೂರ, ಅಧ್ಯಕ್ಷರು, ಗದಗ ಜಿಲ್ಲಾ ವಿಕಾಸ ವೇದಿಕೆ

ಶಾಲಾ ಸಂಸತ್ತಿನ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಪಾಠ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ನಗರದ ಎಸ್‌ಟಿಪಿಎಂ ಬಿ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತನ್ನು ಉದ್ಘಾಟಿಸಿ, ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು.

ಶಾಲಾ ಮುಖ್ಯಸ್ಥೆ ಸ್ವಾತಿ ಉ. ಪೈ ಅವರು ಚುನಾಯಿತ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜೇಶ್ವರಿ ದಾನಪ್ಪನವರ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿಯೇ ಶಿಸ್ತು, ಸಂಯಮ ಹಾಗೂ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ಅಗತ್ಯ. ಶಾಲಾ ಸಂಸತ್ತಿನ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಅರಿವು ಮೂಡುತ್ತದೆ ಎಂದರು.

ಶಾಲಾ ಸಂಸತ್ತಿನ ಜನರಲ್ ಸೆಕ್ರೆಟರಿಯಾಗಿ ಚಿನ್ಮಯಿ ಕಳಸಾಪುರ, ವೈಸ್ ಜನರಲ್ ಸೆಕ್ರೆಟರಿಯಾಗಿ ವಿಜನ್ ಅಗಡಿ ಆಯ್ಕೆಯಾಗಿದ್ದಾರೆ.

ಸಾಂಸ್ಕೃತಿಕ ವಿಭಾಗ: ದೃತಿ ದೇಸಾಯಿ, ನಿಖಿಲ ಗೌಡ ಪಾಟೀಲ
ಪರೀಕ್ಷಾ ವಿಭಾಗ: ವಿಕಾಸ ಕೋಟೆಗೌಡರ, ನೇಸರ ಸಂಶಿ
ಕ್ರೀಡಾ ವಿಭಾಗ: ಅದಿಫತ್ ಫಾತಿಮಾ, ಶ್ರೀಧರ ಇಟಗಿ
ಆರೋಗ್ಯ ವಿಭಾಗ: ಶ್ರೇಯಸ ಮೆದಾರ, ಖುಷಿ ಹಡಪದ
ಪ್ರವಾಸ ವಿಭಾಗ: ಪ್ರಾರ್ಥನಾ ಪಾಟೀಲ, ಸಿದ್ದಾರ್ಥ ಗಡ್ಡದೇವರಮಠ
ಸಂಭ್ರಮ ಶನಿವಾರ ವಿಭಾಗ: ಆರಾಧ್ಯ ವೆರ್ಣೇಕರ, ಚಿನ್ಮಯ ಶಿರಹಟ್ಟಿ

ಕೋ-ಆರ್ಡಿನೇಟರ್ ಸಾರಾ ಹಾಗೂ ವಿನಾಯಕ ದೊಡ್ಡಮನಿ ಅವರು ಚುನಾಯಿತ ವಿದ್ಯಾರ್ಥಿಗಳಿಗೆ ಬ್ಯಾಡ್ಜ್ ಮತ್ತು ಕ್ಯಾಪ್ ವಿತರಿಸಿ ಶುಭ ಹಾರೈಸಿದರು. ಮಂಜುಳಾ ಪಾಟೀಲ ಅವರು ಚುನಾಯಿತ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಕಟಿಸಿದರು.

ಶಿಕ್ಷಕಿಯರಾದ ವಿಜಯಲಕ್ಷ್ಮಿ ದೇಸಾಯಿ, ಲೀಲಾ ಬೆಳಗಟ್ಟಿ, ಆಶಾ ಜಾದವ್ ಹಾಗೂ ಪವಿತ್ರಾ ಕಾರಬರಿ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮವನ್ನು ಕೀರ್ತಿಶ್ರೀ ಪಾಟೀಲ ಹಾಗೂ ವಿಜಯಲಕ್ಷ್ಮಿ ಎಂ. ನಿರೂಪಿಸಿದರು. ಸಿಮ್ರಾನ್ ನಡುಗೀರ್ ಸ್ವಾಗತಿಸಿದರು. ವೀಣಾ ಜಮನೂರ್ ವಂದಿಸಿದರು.

ಉರ್ದು ಶಾಲೆಗಳ ಖಾಲಿ ಹುದ್ದೆ ಶೀಘ್ರ ಭರ್ತಿ ಮಾಡಿ: ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಒತ್ತಾಯ

0

ವಿಜಯಸಾಕ್ಷಿ ಸುದ್ದಿ, ಗದಗ: ರಾಜ್ಯದ ಉರ್ದು ಮಾಧ್ಯಮ ಶಾಲೆಗಳಲ್ಲಿ ಹಲವು ವರ್ಷಗಳಿಂದ ಖಾಲಿ ಉಳಿದಿರುವ ಶಿಕ್ಷಕರ ಹಾಗೂ ಅಗತ್ಯ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡುವಂತೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಗದಗದಲ್ಲಿ ನಡೆದ ಮಹಾಸಭಾದ ವಿಶೇಷ ಸಭೆಯಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮಹ್ಮದಶಫಿ ನಾಗರಕಟ್ಟಿ, ಉರ್ದು ಮಾಧ್ಯಮದಲ್ಲಿ ಬಿ.ಎಡ್., ಟಿ.ಸಿ.ಎಚ್. ಸೇರಿದಂತೆ ಅಗತ್ಯ ವಿದ್ಯಾರ್ಹತೆ ಪಡೆದಿರುವ ಸಾವಿರಾರು ಅಭ್ಯರ್ಥಿಗಳು ನೇಮಕಾತಿಗಾಗಿ ಕಾಯುತ್ತಿದ್ದಾರೆ. ಹಲವು ವರ್ಷಗಳಿಂದ ಉರ್ದು ಶಾಲೆಗಳಲ್ಲಿ ಸಮರ್ಪಕ ನೇಮಕಾತಿ ನಡೆಯದಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣದ ಜತೆಗೆ ಅರ್ಹ ಶಿಕ್ಷಕ ಅಭ್ಯರ್ಥಿಗಳ ಭವಿಷ್ಯವೂ ಅತಂತ್ರವಾಗಿದೆ ಎಂದರು.

ಉರ್ದು ಶಾಲೆಗಳಲ್ಲಿನ ಖಾಲಿ ಹುದ್ದೆಗಳ ಸಂಪೂರ್ಣ ವಿವರ ಪಡೆದು ಶೀಘ್ರ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರು ವಿಷಯವನ್ನು ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಅಭ್ಯರ್ಥಿಗಳ ಆತಂಕ ನಿವಾರಿಸಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಜಾಫರ ಡಾಲಾಯತ, ಮಹಬೂಬ್ ಬಾದಷಾ ಖಾಜಿ, ನಗರ ಅಧ್ಯಕ್ಷ ತಾಜುದ್ದೀನ್ ಪಾಪಣ್ಣವರ, ಪ್ರಧಾನ ಕಾರ್ಯದರ್ಶಿ ರಿಯಾಜ್ ಅಹ್ಮದ್ ದೊಡ್ಡಮನಿ, ಕುತುಬುದ್ದೀನ್ ಶೇಖ, ನಾಸೀರ ನರೇಗಲ್, ರಫೀಕ್ ಈಟಿ, ಯಾಸಿನ್ ಮುಲ್ಲಾ, ಅಫ್ಜಲ್ ಮನಿಯಾರ್, ಮೀರಾಸಾಬ ಇರಕಲ್, ನಿಜಾಮುದ್ದೀನ್ ಕಾಟಾಪುರ, ರಹೀಂಸಾಬ್ ದೊಡ್ಡಮನಿ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

‘ನಾನೊಬ್ಬ ಭಾರತೀಯ’ ಎಂಬ ಹೆಮ್ಮೆ ಪ್ರತಿಯೊಬ್ಬರಲ್ಲಿರಲಿ: ಪ್ರಥಿಕ್ ಕುಂದಗೋಳ

0

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ಜಾತಿ, ಧರ್ಮ ಹಾಗೂ ಭೇದಭಾವಗಳನ್ನು ಮೀರಿ ಪ್ರತಿಯೊಬ್ಬರಲ್ಲೂ ‘ನಾನೊಬ್ಬ ಭಾರತೀಯ’ ಎಂಬ ಹೆಮ್ಮೆ ಮೂಡಬೇಕು. ಭಾರತೀಯತೆ ನಮ್ಮೆಲ್ಲರ ಮೊದಲ ಗುರುತಾಗಬೇಕು ಎಂದು ವಿಶೇಷ ವಕ್ತಾರ ಪ್ರಥಿಕ್ ಕುಂದಗೋಳ ಹೇಳಿದರು.

ಸಮೀಪದ ಜಕ್ಕಲಿ ಗ್ರಾಮದಲ್ಲಿ ಶ್ರೀ ಸ್ವಾಮಿ ವಿವೇಕಾನಂದ ಯುವ ಸೇವಾ ಸಂಘದ ವತಿಯಿಂದ ಆ. ೧೪ರ ಮಧ್ಯರಾತ್ರಿ ೧೨ ಗಂಟೆಗೆ ಆಯೋಜಿಸಿದ್ದ ೮೦ನೇ ಸ್ವಾತಂತ್ರ್ಯೋತ್ಸವದ ವಿಶಿಷ್ಟ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ದೊರೆತು ಎಂಟು ದಶಕಗಳು ಕಳೆದರೂ ಜಕ್ಕಲಿ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲದಷ್ಟೇ ಉತ್ಸಾಹ ಹಾಗೂ ದೇಶಭಕ್ತಿಯ ವಾತಾವರಣ ಕಂಡುಬರುತ್ತಿರುವುದು ಹೆಮ್ಮೆಯ ಸಂಗತಿ. ‘ನಾನು ಇರಲಿ, ಇಲ್ಲದಿರಲಿ ನನ್ನ ಭಾರತ ಬೆಳಗುತ್ತಿರಲಿ’ ಎಂಬ ಧ್ಯೇಯದೊಂದಿಗೆ ಯುವಕರು ನಿರಂತರವಾಗಿ ರಾಷ್ಟ್ರಭಕ್ತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಗ್ರಾಮದ ಸೌಭಾಗ್ಯವಾಗಿದೆ ಎಂದರು.

ದೇಶಭಕ್ತಿ ಎಂದರೆ ಕೇವಲ ಘೋಷಣೆ ಕೂಗುವುದಲ್ಲ. ದೇಶಕ್ಕಾಗಿ ಬದುಕನ್ನೇ ತ್ಯಾಗ ಮಾಡಿದ ಭಗತ್‌ಸಿಂಗ್, ಮದನ್‌ಲಾಲ್ ಧಿಂಗ್ರಾ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಸುಭಾಷ್‌ಚಂದ್ರ ಬೋಸ್ ಸೇರಿದಂತೆ ಅನೇಕ ಮಹನೀಯರ ತ್ಯಾಗ, ಹೋರಾಟ ಹಾಗೂ ಆದರ್ಶಗಳನ್ನು ಅರಿತುಕೊಂಡು ದೇಶದ ಒಳಿತಿಗಾಗಿ ಬದುಕುವುದು ನಿಜವಾದ ದೇಶಭಕ್ತಿ ಎಂದು ಹೇಳಿದರು.

ಭಾರತಕ್ಕೆ ಸ್ವಾತಂತ್ರ್ಯ ಬ್ರಿಟಿಷರು ನೀಡಿದ ಭಿಕ್ಷೆಯಲ್ಲ. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ಸ್ವಾತಂತ್ರ್ಯ ದೊರೆತಿದೆ. ಇಂದು ಗಡಿಯಲ್ಲಿ ಸೈನಿಕರು ತಮ್ಮ ಎದೆಯನ್ನು ಗುಂಡಿಗೆ ಒಡ್ಡಿ ದೇಶವನ್ನು ಕಾಯುತ್ತಿದ್ದಾರೆ. ಅವರ ತ್ಯಾಗದಿಂದಲೇ ತ್ರಿವರ್ಣ ಧ್ವಜ ಹೆಮ್ಮೆಯಿಂದ ಹಾರುತ್ತಿದೆ ಎಂದರು.

ಜಕ್ಕಲಿ ಗ್ರಾಮದ ದೇಶಭಕ್ತಿಯ ಕಿಚ್ಚು ಮುಂದೊಂದು ದಿನ ದೆಹಲಿಯವರೆಗೂ ಮೊಳಗುವಂತಾಗಲಿ. ಯುವಕರು ರಾಷ್ಟ್ರ ನಿರ್ಮಾಣದ ಸಂಕಲ್ಪದೊಂದಿಗೆ ಮುನ್ನಡೆಯಬೇಕು ಎಂದು ಪ್ರಥಿಕ್ ಆಶಿಸಿದರು.

ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದ ಮಕ್ಕಳ ಶಿಕ್ಷಣಕ್ಕಾಗಿ ಎರಡು ಎಕರೆ ಜಮೀನು ಭೂದಾನ ಮಾಡಿದ ಸಮಾಜಸೇವಕಿ ಹುಚ್ಚಮ್ಮ ಚೌದ್ರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಮಾಜಿ ಸೈನಿಕರಾದ ಮಲ್ಲಪ್ಪ ಮುಗಳಿ, ಬಸವರಾಜ ಕೋರಿ, ನಿವೃತ್ತ ಗ್ರಾಮ ವಿದ್ಯುತ್ ಪ್ರತಿನಿಧಿ ಮಹೇಶ್ವರಯ್ಯ ಹಿರೇಮಠ ಹಾಗೂ ಯುವ ಸಾಧಕಿಯರಾದ ಪ್ರೀತಿ ಬುಳ್ಳಾ ಮತ್ತು ಸೃಷ್ಟಿ ಮೇಟಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶಿವನಾಗಪ್ಪ ದೊಡ್ಡಮೇಟಿ ವಹಿಸಿದ್ದರು. ಶಿವರಾಜ ಮುಗಳಿ, ಮುತ್ತಣ್ಣ ಕಡಗದ, ಉಮೇಶ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮಕ್ಕಳಿಂದ ಮನರಂಜನಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನ್ಯಾಯವಾದಿ ವಿದ್ಯಾಧರ ಶಿರಗುಂಪಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವನಾಥ ಬುಳ್ಳಾ ನಿರೂಪಿಸಿದರು.

ಮಧ್ಯರಾತ್ರಿಯಲ್ಲಿ ಮೊಳಗಿದ ದೇಶಭಕ್ತಿಯ ಘೋಷಣೆ

ಮಧ್ಯರಾತ್ರಿ ನಡೆದ ಈ ವಿಶಿಷ್ಟ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಗ್ರಾಮದ ೨ ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡು ವಿಶೇಷ ಮೆರುಗು ನೀಡಿದರು. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಮಹನೀಯರ ಹೆಸರುಗಳು, ‘ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’ ಘೋಷಣೆಗಳು ಮೊಳಗಿದವು.

ಮಧ್ಯರಾತ್ರಿಯ ನಿಶ್ಶಬ್ದತೆಯನ್ನು ದೇಶಭಕ್ತಿಯ ಘೋಷಣೆಗಳು ಭೇದಿಸಿದವು. ತ್ರಿವರ್ಣ ಧ್ವಜದ ಬೆಳಕಿನಲ್ಲಿ ಇಡೀ ಜಕ್ಕಲಿ ಗ್ರಾಮವೇ ರಾಷ್ಟ್ರಭಕ್ತಿಯ ಸಂಭ್ರಮದಲ್ಲಿ ಮಿಂದೆದ್ದ ದೃಶ್ಯ

ವಾಲ್ಮೀಕಿ ನಿಗಮ ಹಣ ದುರ್ಬಳಕೆ ಪ್ರಕರಣ: ಆರೋಪಿ ಕಾಕಿ ಶ್ರೀನಿವಾಸ್ ರಾವ್‌ಗೆ ಸುಪ್ರೀಂ ಕೋರ್ಟ್ ಜಾಮೀನು

0

ನವದೆಹಲಿ: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ₹89 ಕೋಟಿಗೂ ಅಧಿಕ ಹಣ ದುರ್ಬಳಕೆ ಪ್ರಕರಣದಲ್ಲಿ ಆರೋಪಿ ಕಾಕಿ ಶ್ರೀನಿವಾಸ್ ರಾವ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಈ ಪ್ರಕರಣದಲ್ಲಿ ಕರ್ನಾಟಕದ ಸಚಿವ ಬಿ. ನಾಗೇಂದ್ರ ಅವರ ಹೆಸರೂ ಕೇಳಿಬಂದಿದ್ದು, ಪ್ರಕರಣದ ತನಿಖೆಯನ್ನು ಸಿಬಿಐ, ಇಡಿ (ED) ಹಾಗೂ ಎಸ್‌ಐಟಿ ನಡೆಸುತ್ತಿವೆ.

ಪ್ರಕರಣ ಏನು?

2024ರಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನಕಲಿ ದಾಖಲೆಗಳು ಮತ್ತು ಬೋಗಸ್ ಬ್ಯಾಂಕ್ ಖಾತೆಗಳ ಮೂಲಕ ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಣವನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಿ ವಂಚನೆ ನಡೆಸಲಾಗಿದೆ ಎಂದು ತನಿಖೆಯಲ್ಲಿ ಬಹಿರಂಗವಾಗಿತ್ತು.

ಕಾಕಿ ಶ್ರೀನಿವಾಸ್ ರಾವ್ ವಿರುದ್ಧದ ಆರೋಪ:

ಚಾರ್ಜ್‌ಶೀಟ್ ಪ್ರಕಾರ, ಷೇರು ವಹಿವಾಟು ಸಂಸ್ಥೆ ನಡೆಸುತ್ತಿದ್ದ ಕಾಕಿ ಶ್ರೀನಿವಾಸ್ ರಾವ್ ಅವರು ಹಣವನ್ನು ನಗದಿನಿಂದ ಚಿನ್ನವಾಗಿ ಪರಿವರ್ತಿಸಲು ನೆರವಾಗಿದ್ದು, 18 ನಕಲಿ ಬ್ಯಾಂಕ್ ಖಾತೆಗಳ ಸೃಷ್ಟಿಗೆ ಸಹಕರಿಸಿದ್ದಾರೆ ಎಂಬ ಆರೋಪವಿದೆ. ಆದರೆ ಹಣದ ದುರ್ಬಳಕೆಯ ಮುಖ್ಯ ಸಂಚುಕೋರ ಎಂಬ ಆರೋಪ ಅವರ ವಿರುದ್ಧ ಇಲ್ಲ ಎಂದು ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ.

ಸುಪ್ರೀಂ ಕೋರ್ಟ್ ಜಾಮೀನು ಯಾಕೆ ನೀಡಿತು?

ಕರ್ನಾಟಕ ಹೈಕೋರ್ಟ್ 2024ರ ಡಿಸೆಂಬರ್‌ನಲ್ಲಿ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠವು ಈ ಅರ್ಜಿಯನ್ನು ಪರಿಗಣಿಸಿ ಜಾಮೀನು ನೀಡಿದೆ.

ಕೋರ್ಟ್ ಜಾಮೀನು ನೀಡಲು ಪ್ರಮುಖ ಕಾರಣಗಳು:

  • ಆರೋಪಿ ಕಳೆದ 22 ತಿಂಗಳಿಗೂ ಹೆಚ್ಚು ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.

  • ವಿಚಾರಣೆ ಶೀಘ್ರ ಪೂರ್ಣಗೊಳ್ಳುವ ಸಾಧ್ಯತೆ ಕಡಿಮೆ ಇದೆ.

  • ಅವರಿಗೆ ಬೆನ್ನುಮೂಳೆಯ ತೀವ್ರ ಆರೋಗ್ಯ ಸಮಸ್ಯೆ ಇದೆ.

  • ಚಾರ್ಜ್‌ಶೀಟ್‌ನಲ್ಲಿ ಅವರ ವಿರುದ್ಧ ಮುಖ್ಯ ಪಾತ್ರದ ಆರೋಪ ಇಲ್ಲ ಎಂದು ಉಲ್ಲೇಖಿಸಲಾಗಿದೆ.

ಪ್ರಕರಣದ ಹಿನ್ನೆಲೆ:

  • ಮೇ 2024: ವಾಲ್ಮೀಕಿ ನಿಗಮ ಯೂನಿಯನ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ದೂರು ನೀಡಿತು.

  • ಜೂನ್ 2024: ಯೂನಿಯನ್ ಬ್ಯಾಂಕ್ ಸಿಬಿಐಗೆ ದೂರು ಸಲ್ಲಿಸಿತು.

  • ರಾಜ್ಯ ಸರ್ಕಾರ ಸಿಐಡಿ ಎಸ್‌ಐಟಿ ರಚಿಸಿತು.

  • ಇಡಿ (ED) ಮತ್ತು ಸಿಬಿಐ ಪ್ರತ್ಯೇಕ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದವು.

  • ಜುಲೈ 15, 2024: ಕಾಕಿ ಶ್ರೀನಿವಾಸ್ ರಾವ್ ಅವರನ್ನು ಬಂಧಿಸಲಾಯಿತು.

ಪ್ರಕರಣದ ತನಿಖೆ ಇನ್ನೂ ಮುಂದುವರಿದಿದ್ದು, ಇತರ ಆರೋಪಿಗಳ ವಿರುದ್ಧವೂ ಕಾನೂನು ಕ್ರಮ ಮುಂದುವರಿದಿದೆ.

ರಾತ್ರಿ ಮಲಗುವ ಮುನ್ನ ಕೊತ್ತಂಬರಿ ನೀರು ಕುಡಿಯುತ್ತೀರಾ? ಈ 7 ಪ್ರಯೋಜನಗಳು ನಿಮಗೆ ಗೊತ್ತೇ?

0

ಕೊತ್ತಂಬರಿ ಬೀಜವು ಅಡುಗೆಯ ರುಚಿ ಹೆಚ್ಚಿಸುವುದಷ್ಟೇ ಅಲ್ಲ, ಆರೋಗ್ಯಕ್ಕೂ ಹಲವು ರೀತಿಯಲ್ಲಿ ಸಹಕಾರಿ.

ಇದರಲ್ಲಿ ಪೊಟ್ಯಾಸಿಯಮ್, ನಾರು, ವಿಟಮಿನ್ C ಮತ್ತು K, ಕಬ್ಬಿಣ ಹಾಗೂ ಆಂಟಿಆಕ್ಸಿಡೆಂಟ್‌ಗಳು ಇದ್ದು, ರಾತ್ರಿ ನೆನೆಸಿದ ಕೊತ್ತಂಬರಿ ಬೀಜದ ನೀರನ್ನು ಮಲಗುವ ಒಂದು ಗಂಟೆ ಮೊದಲು ಕುಡಿಯುವುದರಿಂದ ಕೆಲವು ಆರೋಗ್ಯಕರ ಪ್ರಯೋಜನಗಳು ದೊರೆಯಬಹುದು.

ಕೊತ್ತಂಬರಿ ನೀರು ಕುಡಿಯುವುದರಿಂದ ಸಿಗಬಹುದಾದ ಪ್ರಯೋಜನಗಳು:

1. ಜೀರ್ಣಕ್ರಿಯೆಗೆ ನೆರವು: ಹೊಟ್ಟೆಯುಬ್ಬರ, ಆಮ್ಲೀಯತೆ ಮತ್ತು ಮಲಬದ್ಧತೆ ಕಡಿಮೆಯಾಗಲು ಸಹಾಯ ಮಾಡಬಹುದು.

2. ದೇಹ ಹೈಡ್ರೇಟ್ ಆಗಿರಲು ನೆರವು: ದೇಹಕ್ಕೆ ಜಲಸಂಚಯನ ಒದಗಿಸಲು ಸಹಕಾರಿ.

3. ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಾಯಕ: ಕೆಲವು ಅಧ್ಯಯನಗಳು ಸಹಾಯ ಮಾಡಬಹುದು ಎಂದು ಸೂಚಿಸುತ್ತವೆ. ಆದರೆ ಮಧುಮೇಹದ ಔಷಧಿ ಸೇವಿಸುವವರು ವೈದ್ಯರ ಸಲಹೆ ಪಡೆಯಬೇಕು.

4. ದೇಹದ ವಿಷಕಾರಿ ಅಂಶಗಳನ್ನು ಹೊರಹಾಕಲು ನೆರವು: ದೇಹದ ಸಹಜ ನಿರ್ವಿಷೀಕರಣ ಪ್ರಕ್ರಿಯೆಗೆ ಬೆಂಬಲ ನೀಡಬಹುದು.

5. ತೂಕ ನಿರ್ವಹಣೆಗೆ ಸಹಕಾರಿ: ಚಯಾಪಚಯ ಕ್ರಿಯೆಗೆ ನೆರವಾಗುವ ಮೂಲಕ ತೂಕ ನಿಯಂತ್ರಣಕ್ಕೆ ಸಹಾಯ ಮಾಡಬಹುದು.

6. ಉತ್ತಮ ನಿದ್ರೆಗೆ ನೆರವು: ಒತ್ತಡ ಕಡಿಮೆಯಾಗಲು ಸಹಾಯ ಮಾಡುವ ಕೆಲವು ಸಂಯುಕ್ತಗಳು ಇದರಲ್ಲಿ ಇರಬಹುದು.

7. ಬೆಳಿಗ್ಗೆ ಹಗುರವಾದ ಅನುಭವ: ಜೀರ್ಣಕ್ರಿಯೆ ಸುಧಾರಿಸಿದರೆ ಹೊಟ್ಟೆ ಹಗುರವಾಗಿರುವ ಅನುಭವವಾಗಬಹುದು.

ಕೊತ್ತಂಬರಿ ನೀರು ಮಾಡುವ ವಿಧಾನ:

  • 1 ಚಮಚ ಕೊತ್ತಂಬರಿ ಬೀಜವನ್ನು ಒಂದು ಗ್ಲಾಸ್ ನೀರಿನಲ್ಲಿ ರಾತ್ರಿ ನೆನೆಸಿಡಿ.

  • ಮಲಗುವ ಸುಮಾರು ಒಂದು ಗಂಟೆ ಮೊದಲು ನೀರನ್ನು ಸೋಸಿ ಕುಡಿಯಬಹುದು.

ಕೊತ್ತಂಬರಿ ನೀರು ಆರೋಗ್ಯಕರ ಅಭ್ಯಾಸದ ಭಾಗವಾಗಬಹುದು. ಆದರೆ ಇದು ಯಾವುದೇ ಕಾಯಿಲೆಗೆ ಖಚಿತ ಚಿಕಿತ್ಸೆ ಅಲ್ಲ. ಮಧುಮೇಹ, ಕಿಡ್ನಿ ಸಮಸ್ಯೆ ಅಥವಾ ಇತರ ಆರೋಗ್ಯ ಸಮಸ್ಯೆಗಳಿದ್ದರೆ ನಿಯಮಿತವಾಗಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯುವುದು ಸೂಕ್ತ.

ಕಸದ ಬುಟ್ಟಿಯ ಸುತ್ತ ನೊಣಗಳ ಕಾಟವೇ? ಲವಂಗದಿಂದ ಹೀಗೆ ಮಾಡಿ, ದುರ್ವಾಸನೆಯೂ ಕಡಿಮೆಯಾಗುತ್ತದೆ

0

ಅಡುಗೆಮನೆಯ ಕಸದ ಬುಟ್ಟಿಯಿಂದ ಬರುವ ದುರ್ವಾಸನೆ ನೊಣಗಳನ್ನು ಹೆಚ್ಚು ಆಕರ್ಷಿಸುತ್ತದೆ.

ಹಣ್ಣು-ತರಕಾರಿ ಸಿಪ್ಪೆ, ಉಳಿದ ಆಹಾರ, ಟೀ-ಕಾಫಿ ಪುಡಿ ಮುಂತಾದ ತೇವಯುಕ್ತ ಕಸದಿಂದ ನೊಣಗಳು ಕಸದ ಬುಟ್ಟಿಯ ಸುತ್ತ ಸೇರಿ ಮೊಟ್ಟೆ ಇಡುವ ಸಾಧ್ಯತೆಯೂ ಇರುತ್ತದೆ. ಇದನ್ನು ತಡೆಯಲು ಮನೆಯಲ್ಲೇ ಇರುವ ಲವಂಗ ಸುಲಭವಾದ ಪರಿಹಾರವಾಗಬಹುದು.

ನೊಣಗಳನ್ನು ದೂರವಿಡಲು 3 ಸರಳ ಉಪಾಯಗಳು:

1. ಲವಂಗ ಬಳಸಿ:

4 ರಿಂದ 5 ಲವಂಗವನ್ನು ಕಸದ ಬುಟ್ಟಿಯ ಮುಚ್ಚಳದ ಮೇಲೆ ಅಥವಾ ಬುಟ್ಟಿಯ ಒಳಭಾಗದಲ್ಲಿ ಇಡಿ. ಲವಂಗದ ತೀಕ್ಷ್ಣ ಪರಿಮಳವು ನೊಣಗಳು ಮತ್ತು ಕೆಲವು ಕೀಟಗಳನ್ನು ದೂರವಿಡಲು ಸಹಾಯ ಮಾಡಬಹುದು.

2. ಲವಂಗದ ಎಣ್ಣೆ ಸಿಂಪಡಿಸಿ:

ಸ್ಪ್ರೇ ಬಾಟಲಿಯಲ್ಲಿ ಕೆಲವು ಹನಿ ಲವಂಗದ ಎಣ್ಣೆಯನ್ನು ನೀರಿನೊಂದಿಗೆ ಬೆರೆಸಿ, ಕಸದ ಬುಟ್ಟಿಯ ಒಳಗೆ, ಹೊರಗೆ ಮತ್ತು ಸುತ್ತಮುತ್ತ ಸಿಂಪಡಿಸಿ. ಇದರಿಂದ ದುರ್ವಾಸನೆ ಕಡಿಮೆಯಾಗಲು ಸಹಾಯವಾಗಬಹುದು.

3. ನಿಂಬೆ + ಲವಂಗ:

ನಿಂಬೆಹಣ್ಣನ್ನು ಅರ್ಧಕ್ಕೆ ಕತ್ತರಿಸಿ ಅದರಲ್ಲಿ 7-8 ಲವಂಗ ಚುಚ್ಚಿ, ಕಸದ ಬುಟ್ಟಿಯ ಪಕ್ಕದಲ್ಲಿ ಇಡಿ. ನಿಂಬೆ ಮತ್ತು ಲವಂಗದ ಪರಿಮಳವು ನೊಣಗಳನ್ನು ದೂರವಿಡಲು ನೆರವಾಗಬಹುದು.

ಉತ್ತಮ ಫಲಿತಾಂಶಕ್ಕಾಗಿ:

  • ಕಸದ ಬುಟ್ಟಿಗೆ ಯಾವಾಗಲೂ ಮುಚ್ಚಳ ಹಾಕಿ.

  • ಪ್ರತಿದಿನ ಕಸವನ್ನು ಹೊರಗೆ ಹಾಕಿ.

  • ವಾರಕ್ಕೊಮ್ಮೆ ಸಾಬೂನು ಅಥವಾ ಕ್ರಿಮಿನಾಶಕದಿಂದ ಕಸದ ಬುಟ್ಟಿಯನ್ನು ತೊಳೆಯಿರಿ.

  • ತೇವಯುಕ್ತ ಕಸವನ್ನು ಹೆಚ್ಚು ಸಮಯ ಬುಟ್ಟಿಯಲ್ಲಿ ಇರಿಸಬೇಡಿ.

ಗಮನಿಸಿ: ಲವಂಗ ಮತ್ತು ಲವಂಗದ ಎಣ್ಣೆ ನೊಣಗಳನ್ನು ದೂರವಿಡಲು ಸಹಾಯಕವಾಗಬಹುದು, ಆದರೆ ಇದು ವೈಜ್ಞಾನಿಕವಾಗಿ ಖಚಿತವಾದ ಶಾಶ್ವತ ಪರಿಹಾರವಲ್ಲ. ಸ್ವಚ್ಛತೆ ಮತ್ತು ನಿಯಮಿತ ಕಸ ನಿರ್ವಹಣೆಯೇ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ.