Home Blog Page 4

‘ಆಖ್ರಿ ಸವಾಲ್’ ಸಿನಿಮಾ ವೀಕ್ಷಕರಿಗೆ ಬಂಪರ್ ಆಫರ್: ಒಂದು ಟಿಕೆಟ್ ಕೊಂಡರೆ ಮತ್ತೊಂದು ಫ್ರೀ

ಮುಂಬೈ: ಭಾರೀ ಚರ್ಚೆಗೆ ಕಾರಣವಾಗಿರುವ ಬಾಲಿವುಡ್ ಸಿನಿಮಾ ‘ಆಖ್ರಿ ಸವಾಲ್’ ಇದೀಗ ಪ್ರೇಕ್ಷಕರನ್ನು ಸೆಳೆಯಲು ವಿಶೇಷ ತಂತ್ರ ಅನುಸರಿಸಿದೆ. ಚಿತ್ರತಂಡ ‘ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಉಚಿತ’ ಆಫರ್ ಘೋಷಿಸಿದ್ದು, ಸಿನಿಪ್ರೇಮಿಗಳ ಗಮನ ಸೆಳೆಯುತ್ತಿದೆ.

ಚಿತ್ರದ ನಿರ್ಮಾಪಕ ನಿಖಿಲ್ ನಂದಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, AAKHRISAWAL ಪ್ರೋಮೋ ಕೋಡ್ ಬಳಸಿ ಟಿಕೆಟ್ ಬುಕ್ ಮಾಡಿದರೆ Buy 1 Get 1 Free ಆಫರ್ ದೊರೆಯಲಿದೆ ಎಂದು ತಿಳಿಸಿದ್ದಾರೆ.

ಆರ್‌ಎಸ್‌ಎಸ್ ಹಿನ್ನೆಲೆ, ರಾಜಕೀಯ ಟಚ್ ಮತ್ತು ತನಿಖಾ ಶೈಲಿಯ ಕಥಾಹಂದರದಿಂದ ಸಿನಿಮಾ ಈಗಾಗಲೇ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಟ್ರೇಲರ್ ಬಿಡುಗಡೆಯಾದ ಕ್ಷಣದಿಂದಲೇ ಸಿನಿಮಾ ಪರ-ವಿರೋಧ ಚರ್ಚೆಗಳು ಜೋರಾಗಿದ್ದವು.

ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಹಲವು ಗಣ್ಯರು ಚಿತ್ರದ ವಿಶೇಷ ಪ್ರದರ್ಶನ ವೀಕ್ಷಿಸಿದ್ದಾರೆ. ದೆಹಲಿಯಲ್ಲಿ ನಡೆದ ಪ್ರೀಮಿಯರ್ ಶೋಗೆ ಪ್ರಮುಖ ರಾಜಕೀಯ ನಾಯಕರು ಭಾಗಿಯಾಗಿದ್ದು, ರಾಷ್ಟ್ರಪತಿ ಭವನದಲ್ಲೂ ಸಿನಿಮಾ ಪ್ರದರ್ಶನಗೊಂಡಿದೆ ಎಂಬ ಮಾಹಿತಿ ಹೊರಬಂದಿದೆ.

ಆದರೆ ಚಿತ್ರದ ವಿರುದ್ಧ ವಿವಾದವೂ ಮುಂದುವರಿದಿದೆ. ಯುಎಇ ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ಸೂಚಿಸಿತ್ತು. ಆದರೆ ಮೂಲ ಕಥೆಗೆ ಧಕ್ಕೆಯಾಗುತ್ತದೆ ಎಂದು ನಿರ್ಮಾಪಕರು ಬದಲಾವಣೆ ಮಾಡಲು ನಿರಾಕರಿಸಿದ ಹಿನ್ನೆಲೆ ಯುಎಇನಲ್ಲಿ ಚಿತ್ರ ಬಿಡುಗಡೆ ಸ್ಥಗಿತಗೊಂಡಿದೆ.

ಚಿತ್ರದ ಕೆಲವು ಅಂಶಗಳನ್ನು ಪ್ರಶ್ನಿಸಿ ನ್ಯಾಯಾಲಯದಲ್ಲೂ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ದಾಖಲಾಗಿದ್ದು, ಸಿನಿಮಾ ಸದ್ಯ ಬಾಕ್ಸ್ ಆಫೀಸ್ ಜೊತೆಗೆ ರಾಜಕೀಯ ವಲಯದಲ್ಲೂ ಚರ್ಚೆಯ ಕೇಂದ್ರಬಿಂದುವಾಗಿದೆ.

ಋಷಿಕೇಶದ ಬಳಿ ಹಳಿ ತಪ್ಪಿದ ಉಜ್ಜಯಿನಿ ಎಕ್ಸ್ ಪ್ರೆಸ್: ತಪ್ಪಿದ ಭಾರೀ ದುರಂತ

ಡೆಹ್ರಾಡೂನ್: ಉತ್ತರಾಖಂಡದ ಋಷಿಕೇಶದ ಖಾಂಡ್ ಗಾಂವ್ ಪ್ರದೇಶದಲ್ಲಿರುವ ಯೋಗ ನಗರಿ ರೈಲು ನಿಲ್ದಾಣದ ಸಮೀಪ ಸೋಮವಾರ ರಾತ್ರಿ ಉಜ್ಜಿಯಿನಿ ಎಕ್ಸ್‌ಪ್ರೆಸ್ ರೈಲಿನ ಮೂರು ಬೋಗಿಗಳು ಹಳಿತಪ್ಪಿದ ಘಟನೆ ನಡೆದಿದೆ. ಅದೃಷ್ಟವಶಾತ್ ಈ ವೇಳೆ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರದ ಕಾರಣ ಭಾರೀ ದುರಂತ ತಪ್ಪಿದೆ.

ಸೋಮವಾರ ರಾತ್ರಿ ಸುಮಾರು 9:30ರ ವೇಳೆಗೆ ಈ ಘಟನೆ ಸಂಭವಿಸಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ರೈಲು ದಿನನಿತ್ಯದ ನಿರ್ವಹಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿತ್ತು. ಈ ವೇಳೆ ಬ್ರೇಕ್ ವೈಫಲ್ಯ ಸಂಭವಿಸಿದ ಪರಿಣಾಮ ಬೋಗಿಗಳು ಹಳಿತಪ್ಪಿರುವ ಶಂಕೆ ವ್ಯಕ್ತವಾಗಿದೆ.

ಘಟನೆಯಲ್ಲಿ ಯಾವುದೇ ಪ್ರಯಾಣಿಕರು ಅಥವಾ ಸಿಬ್ಬಂದಿಗೆ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ರೈಲ್ವೆ ಅಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತಕ್ಷಣವೇ ರೈಲು ತೆರವು ಕಾರ್ಯಾಚರಣೆ ಆರಂಭಿಸಿದರು.

ಘಟನೆಗೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಆರಂಭಿಸಲಾಗಿದ್ದು, ತಾಂತ್ರಿಕ ದೋಷವೋ ಅಥವಾ ನಿರ್ವಹಣಾ ಲೋಪವೋ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಹಳಿತಪ್ಪಿದ ಬೋಗಿಗಳನ್ನು ಮರುಹಳಿಗೆ ಏರಿಸುವ ಕಾರ್ಯಾಚರಣೆ ಮುಂದುವರಿದಿದ್ದು, ರೈಲು ಸಂಚಾರದ ಮೇಲೆ ಯಾವುದೇ ದೊಡ್ಡ ಮಟ್ಟದ ವ್ಯತ್ಯಯ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಮಹಿಳೆ ಬಲಿ ಪಡೆದ ದುಬಾರೆ ಕಾದಾಟ; ಚಿಕಿತ್ಸೆ ಫಲಿಸದೆ ‘ಮಾರ್ಥಾಂಡ’ ಆನೆ ಕೂಡ ಸಾವು

0

ಮಡಿಕೇರಿ: ದುಬಾರೆ ಆನೆ ಶಿಬಿರದಲ್ಲಿ ನಡೆದಿದ್ದ ಆನೆಗಳ ಕಾದಾಟ ಭೀಕರ ದುರಂತಕ್ಕೆ ತಿರುಗಿದೆ. ಕಾದಾಟದ ವೇಳೆ ಚೆನ್ನೈ ಮೂಲದ ಮಹಿಳೆ ಮೃತಪಟ್ಟಿದ್ದ ಘಟನೆ ಮಾಸುವ ಮುನ್ನವೇ, ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಆನೆ ಕೂಡ ಇಂದು ಸಾವನ್ನಪ್ಪಿದೆ.

ನಿನ್ನೆ ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ಕರೆತರಲಾಗಿದ್ದ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಏಕಾಏಕಿ ಕಾದಾಟ ಆರಂಭವಾಗಿತ್ತು. ಕಂಜನ್ ಆನೆ ದಂತದಿಂದ ತಿವಿದ ಪರಿಣಾಮ ಮಾರ್ತಾಂಡ ನೆಲಕ್ಕುರುಳಿತ್ತು. ಮಾವುತರು ನಿಯಂತ್ರಿಸಲು ಹರಸಾಹಸ ಪಟ್ಟರೂ ಕಂಜನ್ ಆನೆ ಮದವೇರಿದಂತೆ ವರ್ತಿಸುತ್ತಿತ್ತು.

ಈ ವೇಳೆ ಆನೆಗಳ ನಡುವೆ ಸಿಲುಕಿದ್ದ ಚೆನ್ನೈ ಮೂಲದ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಘಟನೆ ವೇಳೆ ಮಹಿಳೆಯ ಪತಿ ಹಾಗೂ ಮಗು ಅದೃಷ್ಟವಶಾತ್ ಪಾರಾಗಿದ್ದರು.

ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ಶಿಬಿರದಲ್ಲೇ ಚಿಕಿತ್ಸೆ ಮುಂದುವರಿಸಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ರಾಜ್ಯದ ಎಲ್ಲಾ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರು ಕನಿಷ್ಠ 100 ಅಡಿ ದೂರದಿಂದಲೇ ಆನೆಗಳನ್ನು ವೀಕ್ಷಿಸಬೇಕು ಎಂದು ಆದೇಶಿಸಲಾಗಿದೆ.

ಆನೆಗಳ ಬಳಿ ಹೋಗಿ ಸೆಲ್ಫಿ ತೆಗೆದುಕೊಳ್ಳುವುದು, ಮೈತೊಳೆಯುವುದು, ಆಹಾರ ನೀಡುವುದು ಸೇರಿದಂತೆ ಯಾವುದೇ ನೇರ ಸಂಪರ್ಕಕ್ಕೂ ಅವಕಾಶ ಇರಬಾರದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ನಾಯಿ ಕಡಿತ ನಿರ್ಲಕ್ಷ್ಯ ಬೇಡ: ಬೀದಿ ನಾಯಿಗಳ ತೆರವಿಗೆ ಸುಪ್ರೀಂ ಕೋರ್ಟ್ ಖಡಕ್ ಆದೇಶ

ನವದೆಹಲಿ: ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದ ತನ್ನ ಮಹತ್ವದ ಆದೇಶವನ್ನು ಹಿಂಪಡೆಯಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸುವ ಕುರಿತು 2025ರ ನವೆಂಬರ್‌ನಲ್ಲಿ ನೀಡಿದ್ದ ಆದೇಶವನ್ನು ತಿದ್ದುಪಡಿ ಮಾಡಬೇಕು ಎಂದು ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ. ಅಂಜಾರಿಯಾ ಅವರಿದ್ದ ತ್ರಿಸಭ್ಯ ಪೀಠ, ಹಿಂದಿನ ತೀರ್ಪು ಸಾರ್ವಜನಿಕ ಹಿತದೃಷ್ಟಿಯಿಂದ ನೀಡಲಾಗಿದ್ದು ಅದನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

2025ರ ನವೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಕಂಡುಬರುವ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕು. ಅವುಗಳಿಗೆ ಸಂತಾನಹರಣ ಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಲಸಿಕೆ ನೀಡಬೇಕು. ಬಳಿಕ ಅವುಗಳನ್ನು ಹಿಂದಿನ ಸ್ಥಳಗಳಿಗೆ ಮರುಬಿಡಬಾರದು ಎಂದು ಸೂಚಿಸಿತ್ತು.

ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿ ಶ್ವಾನಪ್ರಿಯರು ಹಾಗೂ ಸಾಮಾಜಿಕ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದರು. ಬೀದಿ ನಾಯಿಗಳನ್ನು ಸ್ಥಳಾಂತರಿಸುವುದರಿಂದ ಪರಿಸ್ಥಿತಿ ಇನ್ನಷ್ಟು ಸಂಕೀರ್ಣವಾಗಬಹುದು ಹಾಗೂ ದಾಳಿ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ವಾದಿಸಿದ್ದರು.

ಆದರೆ ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯ, ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಅತಿಯಾದ ಹಾಜರಾತಿ ಆತಂಕಕಾರಿ ಎಂದು ಅಭಿಪ್ರಾಯಪಟ್ಟಿತು.

“ಪ್ರಾಣಿಗಳು ಹಾಗೂ ಜನರ ಮೇಲೆ, ವಿಶೇಷವಾಗಿ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಅನೇಕ ಪ್ರಕರಣಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಇದೇ ವೇಳೆ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಹೊರಡಿಸಿದ್ದ ಮಾನದಂಡ ಕಾರ್ಯಾಚರಣಾ ವಿಧಾನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಹಿಂದಿನ ಆದೇಶವನ್ನು ಹಿಂಪಡೆಯುವಂತೆ ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. ಆದರೆ ಅವುಗಳಲ್ಲಿ ತೀರ್ಪು ಬದಲಿಸುವಂತಹ ಯಾವುದೇ ಸಮರ್ಥ ಕಾರಣ ಕಂಡುಬಂದಿಲ್ಲ ಎಂದು ಪೀಠ ತಿಳಿಸಿದೆ.

ರಾಜ್ಯ ಸರ್ಕಾರಗಳ ಕಾರ್ಯವೈಖರಿಯ ಮೇಲೂ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬೀದಿ ನಾಯಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯ ಕ್ರಮ ಕೈಗೊಳ್ಳಲು ರಾಜ್ಯಗಳು ವಿಫಲವಾಗಿವೆ ಎಂದು ಟೀಕಿಸಿದೆ.

ಪ್ರಾಣಿ ಜನನ ನಿಯಂತ್ರಣ ಹಾಗೂ ರೇಬಿಸ್ ಲಸಿಕಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸದ ಕಾರಣ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಸುಪ್ರೀಂ ಕೋರ್ಟ್ ನೀಡಿದ ಪ್ರಮುಖ ನಿರ್ದೇಶನಗಳು:

  • ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು AWBI ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
  • ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದು ಪ್ರಾಣಿ ಜನನ ನಿಯಂತ್ರಣ ಕೇಂದ್ರ ಸ್ಥಾಪಿಸಬೇಕು.
  • ರೇಬೀಸ್ ವಿರೋಧಿ ಲಸಿಕೆಗಳು ಹಾಗೂ ಇಮ್ಯುನೊಗ್ಲಾಬ್ಯುಲಿನ್‌ಗಳ ಸಮರ್ಪಕ ಲಭ್ಯತೆ ಖಚಿತಪಡಿಸಬೇಕು.
  • ಈ ಕಾರ್ಯಾಚರಣೆಗೆ ನಿಯೋಜಿಸಲಾದ ಅಧಿಕಾರಿಗಳಿಗೆ ಕಾನೂನು ರಕ್ಷಣೆ ಒದಗಿಸಬೇಕು.

ಅಂತಹ ಅಧಿಕಾರಿಗಳ ವಿರುದ್ಧ ಅನಗತ್ಯ ಎಫ್‌ಐಆರ್ ಅಥವಾ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಕಳೆದ ವರ್ಷ ನೀಡಿದ್ದ ಆದೇಶದಲ್ಲಿ ಆಸ್ಪತ್ರೆಗಳು, ಉದ್ಯಾನವನಗಳು, ರೈಲು ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಿಂದ ಬೀದಿ ನಾಯಿಗಳನ್ನು ತೆರವುಗೊಳಿಸಿ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ನ್ಯಾಯಾಲಯ ಸೂಚಿಸಿತ್ತು. ಇದೀಗ ಆ ಆದೇಶವನ್ನು ಮತ್ತೊಮ್ಮೆ ದೃಢಪಡಿಸಿದೆ.

“ಅಂಬೇಡ್ಕರ್ ಸರ್ಕಲ್‌ಗೆ 50 ಲಕ್ಷ ಅನುದಾನ ಎಲ್ಲಿದೆ?”: ದಲಿತ ಸಂಘಟನೆಗಳ ಆಕ್ರೋಶ

ಹಗರಿಬೊಮ್ಮನಹಳ್ಳಿ: ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಲ್ ನಿರ್ಮಾಣ ವಿಚಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ದಲಿತ ಸಂಘಟನೆಗಳು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಹಲವು ವರ್ಷಗಳಿಂದ ಅಂಬೇಡ್ಕರ್ ಸರ್ಕಲ್ ನಿರ್ಮಾಣಕ್ಕೆ ಆಗ್ರಹಿಸುತ್ತಿದ್ದ ಸಂಘಟನೆಗಳು, ಅಂಬೇಡ್ಕರ್ ಜಯಂತಿಗೆ ಎರಡು ವಾರಗಳ ಮುಂಚಿತವಾಗಿ ನಡೆದ ಭೂಮಿ ಪೂಜೆಯನ್ನು “ರಾಜಕೀಯ ಗಿಮಿಕ್” ಎಂದು ಆರೋಪಿಸಿವೆ.

ಪಟ್ಟಣದ ರಾಮನಗರ ಪೊಲೀಸ್ ಠಾಣೆ ಸಮೀಪದಲ್ಲಿ ನಿರ್ಮಾಣವಾಗಲಿರುವ ಅಂಬೇಡ್ಕರ್ ಸರ್ಕಲ್‌ಗೆ 50 ಲಕ್ಷ ರೂ. ಅನುದಾನ ಮಂಜೂರಾಗಿದೆ ಎಂದು ಹೇಳಿ ಹಾಲಿ ಶಾಸಕ ಕೆ. ನೇಮಿರಾಜ್ ನಾಯ್ಕ್ ಭೂಮಿ ಪೂಜೆ ನೆರವೇರಿಸಿದ್ದರು. ಆದರೆ, “ನಿಜವಾಗಿಯೂ 50 ಲಕ್ಷ ರೂ. ಅನುದಾನ ಮಂಜೂರಾಗಿದೆಯೇ?, ಯಾವ ಇಲಾಖೆಯಡಿ ಕಾಮಗಾರಿ ನಡೆಯುತ್ತಿದೆ?, ಟೆಂಡರ್ ಪ್ರಕ್ರಿಯೆ ನಡೆದಿದೆಯೇ?, ಟೆಂಡರ್ ಪ್ರತಿಯನ್ನು ಕೇಳಿದಾಗ ಯಾಕೆ ನೀಡಲಾಗುತ್ತಿಲ್ಲ?, ಕಾಮಗಾರಿ ಸ್ಥಳದಲ್ಲಿ ಇಲಾಖೆಯ ನಾಮಫಲಕ ಯಾಕಿಲ್ಲ?” ಎಂದು ದಲಿತ ಸಂಘಟನೆಗಳು ಪ್ರಶ್ನೆಗಳ ಸುರಿಮಳೆಗೈದಿವೆ.

ಇದೇ ವೇಳೆ, “20 ವರ್ಷಗಳ ಕಾಲ ಎಸ್‌ಸಿ ಮೀಸಲು ಕ್ಷೇತ್ರದಿಂದ ರಾಜಕೀಯ ಲಾಭ ಪಡೆದು ಅಧಿಕಾರ ಅನುಭವಿಸಿದವರು, ಅಂಬೇಡ್ಕರ್ ಅವರ ಹೆಸರಿನ ಸರ್ಕಲ್ ನಿರ್ಮಾಣಕ್ಕೆ ಇಷ್ಟು ವರ್ಷ ಯಾಕೆ ಕಾಯಬೇಕಾಯಿತು?” ಎಂದು ಸಾರ್ವಜನಿಕ ವಲಯದಲ್ಲೂ ಚರ್ಚೆ ಜೋರಾಗಿದೆ.

ಪ್ರತಿಭಟನಾಕಾರರು ಮಾತನಾಡಿ, “ಅಂಬೇಡ್ಕರ್ ಅವರ ಹೆಸರನ್ನು ರಾಜಕೀಯ ಲಾಭಕ್ಕಾಗಿ ಬಳಸಬಾರದು. ಅದು ದಲಿತ ಸಮುದಾಯದ ಆತ್ಮಗೌರವದ ಸಂಕೇತ. ಅಂಬೇಡ್ಕರ್ ಸಂವಿಧಾನದ ಆಶಯಗಳನ್ನು ಮಾತಿನಲ್ಲಿ ಮಾತ್ರ ಹೊಗಳದೇ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಕಾರ್ಯರೂಪಕ್ಕೆ ತರುವುದೇ ಅವರಿಗೆ ಸಲ್ಲುವ ನಿಜವಾದ ಗೌರವ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರತಿಭಟನೆಯಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ತಾಲೂಕು ಅಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕದ ಪದಾಧಿಕಾರಿಗಳು ಹಾಗೂ ಡಿಎಸ್‌ಎಸ್ ತಾಲೂಕು ಅಧ್ಯಕ್ಷ ಪರಶುರಾಮ್ ಹೆಗ್ಡಳ್ ಸೇರಿದಂತೆ ಮರಿಯಪ್ಪ ದಸಮಾಪುರ, ರಾಮೇಶ್ ಚಿಂತ್ರಪಳ್ಳಿ, ಬಾಸವರಾಜ್ ಕಾಳಿ, ಪಕ್ಕೀರಪ್ಪ ಕಡ್ಲಬಾಳು, ಕೊಟೆಪ್ಪ ದೂಪದಹಳ್ಳಿ, ನಾಗರಾಜ್ ಕಲ್ಲಹಳ್ಳಿ, ಮೈಲಪ್ಪ ಕೋಗಳಿ, ರಾಮೇಶ್ ಪೂಜಾರ್, ಬಸವರಾಜ್ ಕೆಚ್ಚಿನಬಂಡಿ, ಗೋಣೆಪ್ಪ ಕೆಚ್ಚಿನಬಂಡಿ ಮತ್ತಿತರರು ಉಪಸ್ಥಿತರಿದ್ದರು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: RCC ಕೋಚಿಂಗ್ ಸೆಂಟರ್ ಮಾಲೀಕ ಅರೆಸ್ಟ್!

ಮುಂಬೈ: ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಲಾತೂರ್‌ನ ಖಾಸಗಿ ಕೋಚಿಂಗ್ ಸಂಸ್ಥೆಯ ಸಂಸ್ಥಾಪಕ ಶಿವರಾಜ್ ರಘುನಾಥ್ ಮೋಟೆಗಾಂವ್ಕರ್‌ನನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.

ಲಾತೂರ್‌ನಲ್ಲಿರುವ ರೇಣುಕೈ ರಸಾಯನಶಾಸ್ತ್ರ ತರಗತಿಗಳ ಸಂಸ್ಥಾಪಕರಾದ ಶಿವರಾಜ್ ಮೋಟೆಗಾಂವ್ಕರ್ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ಭಾನುವಾರ ದಾಳಿ ನಡೆಸಿತ್ತು. ಶೋಧ ಕಾರ್ಯಾಚರಣೆ ವೇಳೆ ಅವರ ಮೊಬೈಲ್‌ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದ ಮಹತ್ವದ ಮಾಹಿತಿ ಪತ್ತೆಯಾದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಬಿಐ ಪ್ರಕಾರ, ಮೋಟೆಗಾಂವ್ಕರ್ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪ್ರಸರಣದಲ್ಲಿ ತೊಡಗಿದ್ದ ಸಂಘಟಿತ ಜಾಲದ ಸಕ್ರಿಯ ಸದಸ್ಯನಾಗಿದ್ದಾನೆ. ಇತರ ಆರೋಪಿಗಳೊಂದಿಗೆ ಸೇರಿ 2026ರ ನೀಟ್-ಯುಜಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಮತ್ತು ಉತ್ತರಗಳನ್ನು ಏಪ್ರಿಲ್ 23ರಂದು ಪರೀಕ್ಷೆಗೆ ಮುನ್ನವೇ ಪಡೆದು ಹಲವು ಮಂದಿಗೆ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ.

ಶಿವರಾಜ್ ರಘುನಾಥ್ ನಡೆಸುತ್ತಿದ್ದ ತರಬೇತಿ ಕೇಂದ್ರವು ಲಾತೂರ್‌ನ ಮುಖ್ಯ ಶಾಖೆಯೊಂದಿಗೆ ಒಟ್ಟು ಒಂಬತ್ತು ಶಾಖೆಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಈಗಾಗಲೇ ಎಫ್‌ಐಆರ್ ದಾಖಲಿಸಿಕೊಂಡಿದ್ದು, ತನಿಖೆಗಾಗಿ ವಿಶೇಷ ತಂಡಗಳನ್ನು ರಚಿಸಿದೆ. ಪ್ರಕರಣದಲ್ಲಿ ಇದುವರೆಗೆ ದೆಹಲಿ, ಜೈಪುರ, ಗುರುಗ್ರಾಮ್, ನಾಸಿಕ್, ಪುಣೆ, ಲಾತೂರ್ ಹಾಗೂ ಅಹಲ್ಯಾನಗರ ಸೇರಿದಂತೆ ವಿವಿಧ ನಗರಗಳಿಂದ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.

ಶಿವರಾಜ್ ಬಂಧನಕ್ಕೂ ಮುನ್ನ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಹಾಗೂ ಜೀವಶಾಸ್ತ್ರ ಉಪನ್ಯಾಸಕಿ ಮನೀಶಾ ಮಾಂಧರೆ ಅವರನ್ನು ಕೂಡ ಸಿಬಿಐ ಬಂಧಿಸಿತ್ತು. ಈ ಇಬ್ಬರೂ ಮನೀಶಾ ವಾಘ್ಮಾರೆ ಎಂಬ ಮಹಿಳೆಯ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೀಶಾ ವಾಘ್ಮಾರೆ ಕೂಡ ಸಿಬಿಐ ವಶದಲ್ಲಿದ್ದಾರೆ.

“‘ಖುಷಿಯಾಗಿ ಬದುಕಿದ್ರೆ ದೇವರ ಕಣ್ಣು ಬೀಳುತ್ತೆ’ – ದಿಲೀಪ್ ರಾಜ್ ಪತ್ನಿ ಶ್ರೀವಿದ್ಯಾ ಭಾವುಕ

ಬೆಂಗಳೂರು: ದಿವಂಗತ ನಟ ದಿಲೀಪ್ ರಾಜ್ ಅಗಲಿಕೆಯ ನೋವು ಅವರ ಕುಟುಂಬವನ್ನು ಇನ್ನೂ ಕಾಡುತ್ತಿದೆ. ಪತಿಯ ನೆನಪಿನಲ್ಲಿ ದಿನ ಕಳೆಯುತ್ತಿರುವ ಪತ್ನಿ ಶ್ರೀವಿದ್ಯಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಮತ್ತೊಂದು ಭಾವನಾತ್ಮಕ ಪೋಸ್ಟ್ ವೈರಲ್ ಆಗಿದೆ.

25 ವರ್ಷಗಳ ಕಾಲ ಜೊತೆಯಾಗಿ ಬದುಕಿದ್ದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ದಂಪತಿ ಕಿರುತೆರೆ ಲೋಕದ ಆದರ್ಶ ಜೋಡಿಯಾಗಿದ್ದರು. ಪತಿಯ ಅಗಲಿಕೆಯ ಬಳಿಕ ಒಂದರ ಹಿಂದೆ ಒಂದರಂತೆ ಭಾವನಾತ್ಮಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿರುವ ಶ್ರೀವಿದ್ಯಾ, ಈ ಬಾರಿ ತಮ್ಮ ಮನದಾಳದ ನೋವನ್ನು ದೇವರನ್ನೇ ಪ್ರಶ್ನಿಸುವ ರೀತಿಯಲ್ಲಿ ಹೊರಹಾಕಿದ್ದಾರೆ.

“ಒಂದು ಮನೆಯಲ್ಲಿ ಶಾಂತಿ, ನೆಮ್ಮದಿ, ಪ್ರೀತಿ ಇರಬಾರದು. ಒಬ್ಬರು ಒಬ್ಬರು ಕಿತ್ತಾಡ್ಕೊಂಡೇ ಇರಬೇಕು. ಯಾಕೆಂದರೆ ದೇವರಿದ್ದಾನೆ. ಯಾರ ಮನೆಯಲ್ಲಿ ಯಾವಾಗಲೂ ನಗು ಇರುತ್ತದೋ, ಯಾರು ಖುಷಿಯಾಗಿ ಬದುಕುತ್ತಿರ್ತಾರೋ ಅಂಥವರ ಮನೆಯ ಮೇಲೆ ಅವನಿಗೆ ಕಣ್ಣು ಇರುತ್ತದೆ” ಎಂದು ಅವರು ಬರೆದಿದ್ದಾರೆ.

ಈ ಪೋಸ್ಟ್ ನೋಡಿದ ಅಭಿಮಾನಿಗಳು ಭಾವುಕರಾಗಿದ್ದು, ಶ್ರೀವಿದ್ಯಾಗೆ ಸಾಂತ್ವನ ಹೇಳುತ್ತಿದ್ದಾರೆ. ಕೆಲವರು “ದಿಲೀಪ್ ರಾಜ್ ಅವರನ್ನು ಯಾರೂ ಮರೆತೇ ಮರೆತಾರೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಇದೇ ವೇಳೆ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ದಿಲೀಪ್ ರಾಜ್ ಅಭಿನಯದ ವಿಡಿಯೋ ಹಂಚಿಕೊಂಡಿರುವ ಶ್ರೀವಿದ್ಯಾ, ಪತಿಯ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ವ್ಯಕ್ತಪಡಿಸಿದ್ದಾರೆ. ದಿಲೀಪ್ ರಾಜ್ ಅವರ ನಗು ಮತ್ತು ಸ್ಕ್ರೀನ್ ಪ್ರೆಸೆನ್ಸ್ ನೋಡಿ ಅಭಿಮಾನಿಗಳು ಮತ್ತೆ ಕಣ್ಣೀರಾಗಿದ್ದಾರೆ.

ರಷ್ಯಾ ತೈಲ ಖರೀದಿ ನಿರ್ಬಂಧಕ್ಕೆ ತಾತ್ಕಾಲಿಕ ರಿಲೀಫ್: ಮತ್ತೊಂದು ತಿಂಗಳು ಅವಕಾಶ

ಅಮೆರಿಕ: ರಷ್ಯಾದ ತೈಲ ಖರೀದಿಗೆ ವಿಧಿಸಲಾಗಿದ್ದ ನಿರ್ಬಂಧಗಳ ಮೇಲಿನ ವಿನಾಯಿತಿಯನ್ನು ಅಮೆರಿಕ ಮತ್ತೊಂದು ತಿಂಗಳ ಕಾಲ ವಿಸ್ತರಿಸಿದೆ. ಸಮುದ್ರದಲ್ಲಿ ಈಗಾಗಲೇ ಸಾಗಣೆಯಲ್ಲಿರುವ ರಷ್ಯಾ ತೈಲಕ್ಕೆ ಈ ವಿನಾಯಿತಿ ಅನ್ವಯವಾಗಲಿದೆ ಎಂದು ಅಮೆರಿಕದ ಖಜಾನೆ ಇಲಾಖೆ ತಿಳಿಸಿದೆ.

ಅಮೆರಿಕ ಖಜಾನೆ ಇಲಾಖೆಯ ವಿದೇಶಿ ಆಸ್ತಿ ನಿಯಂತ್ರಣ ಕಚೇರಿ (OFAC) ಹೊರಡಿಸಿರುವ ಆದೇಶದ ಪ್ರಕಾರ, ಏಪ್ರಿಲ್ 17 ಅಥವಾ ಅದಕ್ಕೂ ಮೊದಲು ಸಮುದ್ರ ಮಾರ್ಗದಲ್ಲಿ ಸಾಗಣೆಯಲ್ಲಿರುವ ರಷ್ಯಾ ತೈಲದ ಮೇಲಿನ ನಿರ್ಬಂಧ ವಿನಾಯಿತಿಯನ್ನು ಜೂನ್ 17ರವರೆಗೆ ವಿಸ್ತರಿಸಲಾಗಿದೆ.

ಈ ಹಿಂದೆ ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಏಪ್ರಿಲ್ 17ರಿಂದ ಮೇ 16ರವರೆಗೆ ಒಂದು ತಿಂಗಳ ಕಾಲ ಭಾರತ ಸೇರಿದಂತೆ ಹಲವು ದೇಶಗಳಿಗೆ ರಷ್ಯಾ ತೈಲ ಖರೀದಿಗೆ ಅಮೆರಿಕ ವಿನಾಯಿತಿ ನೀಡಿತ್ತು. ಇದೀಗ ತೈಲ ಬಿಕ್ಕಟ್ಟು ಮುಂದುವರಿದಿರುವ ಹಿನ್ನೆಲೆ ಮತ್ತೆ ಅವಧಿ ವಿಸ್ತರಣೆ ಮಾಡಲಾಗಿದೆ.

ಇದಕ್ಕೂ ಮೊದಲು ಮಾರ್ಚ್ 5ರಿಂದ ಆರಂಭವಾಗುವಂತೆ ಒಂದು ತಿಂಗಳ ಕಾಲ ಭಾರತಕ್ಕೆ ರಷ್ಯಾ ತೈಲ ಖರೀದಿಯಲ್ಲಿ ನಿರ್ಬಂಧ ಸಡಿಲಿಕೆ ನೀಡಲಾಗಿತ್ತು. ಬಳಿಕ ಇದೇ ಮಾದರಿಯ ವಿನಾಯಿತಿಯನ್ನು ಹಲವು ಇತರ ರಾಷ್ಟ್ರಗಳಿಗೂ ವಿಸ್ತರಿಸಲಾಗಿತ್ತು.

ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್, ಇರಾನ್ ಹಾಗೂ ಅಮೆರಿಕ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಪರಿಣಾಮ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ನಿರ್ಮಾಣವಾಗಿದೆ. ವಿಶೇಷವಾಗಿ ಹಾರ್ಮುಜ್ ಜಲಮಾರ್ಗದ ಮೇಲೆ ಇರಾನ್ ಪ್ರಭಾವ ಹೆಚ್ಚಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವರದಿಯಾಗಿದೆ.

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಪಾಡುವ ಉದ್ದೇಶದಿಂದ ಈ ತಾತ್ಕಾಲಿಕ ಕ್ರಮ ಕೈಗೊಳ್ಳಲಾಗಿದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಸಾಗಣೆಯಲ್ಲಿರುವ ರಷ್ಯಾ ತೈಲವನ್ನು ಇತರ ರಾಷ್ಟ್ರಗಳು ಖರೀದಿಸಲು ಅವಕಾಶ ನೀಡುವುದರಿಂದ ಜಾಗತಿಕ ಪೂರೈಕೆ ಸ್ಥಿರವಾಗಲಿದೆ ಎಂದು ತಿಳಿಸಿದೆ.

ಇದು ಕೇವಲ ಅಲ್ಪಾವಧಿಯ ಕ್ರಮವಾಗಿದ್ದು, ಸಮುದ್ರದಲ್ಲಿ ಸಾಗಣೆಯಲ್ಲಿರುವ ತೈಲಕ್ಕೆ ಮಾತ್ರ ಅನ್ವಯಿಸುತ್ತದೆ. ಇದರಿಂದ ರಷ್ಯಾ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಲಾಭವಾಗುವುದಿಲ್ಲ ಎಂದು ಅಮೆರಿಕ ಹೇಳಿದೆ.

ಜೈಲಿನಲ್ಲೇ ದರ್ಶನ್, ಹೊರಗೆ ವಿಜಯಲಕ್ಷ್ಮೀ ಭಾವನಾತ್ಮಕ ಪೋಸ್ಟ್! ವೈರಲ್ ಆಯ್ತು ಮದುವೆ ಕಾರ್ಡ್

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ವಿಜಯಲಕ್ಷ್ಮೀ ದಂಪತಿ ಇಂದು ತಮ್ಮ 23ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದು, ಈ ಬಾರಿ ಸಂಭ್ರಮದ ಬದಲು ಭಾವುಕ ಕ್ಷಣಗಳು ಹೆಚ್ಚಾಗಿ ಕಾಣಿಸಿಕೊಂಡಿವೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲಿನಲ್ಲಿರುವ ಹಿನ್ನೆಲೆ, ಈ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ದಂಪತಿಗೆ ದೂರದಲ್ಲೇ ಕಳೆಯುವಂತಾಗಿದೆ.

ಈ ವಿಶೇಷ ದಿನದಂದು ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಫೋಟೋ ಹಂಚಿಕೊಂಡಿದ್ದು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದೇ ವೇಳೆ ದರ್ಶನ್-ವಿಜಯಲಕ್ಷ್ಮೀ ಮದುವೆಯ ಹಳೆಯ ಆಮಂತ್ರಣ ಪತ್ರಿಕೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

2003ರ ಮೇ 19ರಂದು ಧರ್ಮಸ್ಥಳದ ವಸಂತ ಮಹಲ್‌ನಲ್ಲಿ ಬೆಳಿಗ್ಗೆ 9:10 ರಿಂದ 9:50ರ ಮಿಥುನ ಲಗ್ನದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮೀ ಸರಳವಾಗಿ ವಿವಾಹವಾಗಿದ್ದರು. ಯಾವುದೇ ಆಡಂಬರವಿಲ್ಲದೆ ನಡೆದಿದ್ದ ಈ ಮದುವೆಯಲ್ಲಿ ಕುಟುಂಬಸ್ಥರು ಹಾಗೂ ಆಪ್ತರು ಮಾತ್ರ ಭಾಗಿಯಾಗಿದ್ದರು. ಕೆಮಿಕಲ್ ಇಂಜಿನಿಯರಿಂಗ್ ಪದವೀಧರೆಯಾಗಿರುವ ವಿಜಯಲಕ್ಷ್ಮೀ ಹಾಗೂ ನಟ ದರ್ಶನ್ ನಡುವೆ ಪ್ರೀತಿ ಬೆಳೆದು ನಂತರ ಹಿರಿಯರ ಸಮ್ಮುಖದಲ್ಲಿ ಮದುವೆ ನಡೆದಿತ್ತು.

ಈ ದಂಪತಿಗೆ ವಿನೀಶ್ ಹೆಸರಿನ ಮಗನಿದ್ದಾನೆ. ದಾಂಪತ್ಯ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಎದುರಿಸಿದ್ದರೂ, ವಿಜಯಲಕ್ಷ್ಮೀ ಯಾವಾಗಲೂ ದರ್ಶನ್ ಪರ ನಿಂತಿದ್ದಾರೆ. ದರ್ಶನ್ ಕಾನೂನು ಹೋರಾಟದಲ್ಲೂ ಅವರು ಪ್ರಮುಖ ಬೆಂಬಲವಾಗಿದ್ದರು.

ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ದರ್ಶನ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಇನ್ನೂ ಒಂದು ವರ್ಷಗಳ ಕಾಲ ಜೈಲು ವಾಸ ಮುಂದುವರಿಯುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ದಂಪತಿ ಒಟ್ಟಿಗೆ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಅವಕಾಶ ಕೈ ತಪ್ಪಿದೆ.

ನಾಳೆಯ ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್​​: ಮುಷ್ಕರ ನಡೆಸದಂತೆ ಆದೇಶ

ಬೆಂಗಳೂರು: ಮೇ 20ರಂದು ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದ ಸಾರಿಗೆ ನೌಕರರ ಸಂಘಟನೆಗಳಿಗೆ ಕರ್ನಾಟಕ ಹೈಕೋರ್ಟ್ ತೀವ್ರ ಹಿನ್ನಡೆ ಉಂಟುಮಾಡಿದೆ. ಸಾರಿಗೆ ನೌಕರರು ಮುಷ್ಕರ ನಡೆಸದಂತೆ ಹೈಕೋರ್ಟ್ ತಾತ್ಕಾಲಿಕ ನಿರ್ಬಂಧ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.

ನ್ಯಾ. ಸೂರಜ್ ಗೋವಿಂದರಾಜ್ ಹಾಗೂ ನ್ಯಾ. ಕೆ. ಮನ್ಮಥರಾವ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದ್ದು, ಸರ್ಕಾರ ಹಾಗೂ ಸಾರಿಗೆ ಸಂಘಟನೆಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ಸೂಚಿಸಿದೆ.

ಇದೇ ವೇಳೆ ಸರ್ಕಾರ ಮತ್ತು ಸಾರಿಗೆ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯ, ಸಾರಿಗೆ ಸಚಿವರೊಂದಿಗೆ ತುರ್ತು ಸಭೆ ನಡೆಸಿ ಸಮಸ್ಯೆ ಪರಿಹರಿಸುವಂತೆ ನಿರ್ದೇಶನ ನೀಡಿದೆ.

ಸಾರಿಗೆ ನೌಕರರ ಮುಷ್ಕರ ಪ್ರಶ್ನಿಸಿ ಕೆಲಸದ ಮಹಿಳೆ ಹಾಗೂ ಕಟ್ಟಡ ಕಾರ್ಮಿಕರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಅರ್ಜಿದಾರರ ಕುರಿತು ಅಚ್ಚರಿ ವ್ಯಕ್ತಪಡಿಸಿದರೂ, ಸಾರ್ವಜನಿಕ ಹಿತದೃಷ್ಟಿಯಿಂದ ವಿಚಾರಣೆ ಕೈಗೆತ್ತಿಕೊಂಡಿತು.

ನ್ಯಾಯಾಲಯದ ಮುಂದೆ ಮಂಡನೆಯಾದ ಮಾಹಿತಿಯ ಪ್ರಕಾರ, ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (KESMA) ಅಡಿ ಜನವರಿ 1ರಿಂದ ಜೂನ್ 30ರವರೆಗೆ ಮುಷ್ಕರಕ್ಕೆ ನಿರ್ಬಂಧವಿದೆ. ಜೊತೆಗೆ 2025ರ ಜುಲೈ 18ರಂದು ಆರಂಭವಾದ ಕಾರ್ಮಿಕ ಆಯುಕ್ತರ ರಾಜಿ ಸಂಧಾನ ಪ್ರಕ್ರಿಯೆ ಇನ್ನೂ ಮುಂದುವರಿದಿದ್ದು, ಮುಂದಿನ ವಿಚಾರಣೆಯನ್ನು ಮೇ 25ಕ್ಕೆ ನಿಗದಿಪಡಿಸಲಾಗಿದೆ.

ಈ ಸಂದರ್ಭದಲ್ಲಿ ಮುಷ್ಕರ ನಡೆಸುವುದು ಕಾನೂನುಬಾಹಿರವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೆ, ನಿಯಮಾನುಸಾರ 14 ದಿನಗಳ ನೋಟಿಸ್ ನೀಡಬೇಕಾದರೆ, ಕೇವಲ 7 ದಿನಗಳ ನೋಟಿಸ್ ನೀಡಲಾಗಿದೆ ಎಂಬುದನ್ನೂ ಗಮನಿಸಿದೆ.

ಮೇ 20ರಂದು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಗಳೂ ನಿಗದಿಯಾಗಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಮುಷ್ಕರ ತಡೆಯುವಂತೆ ಮನವಿ ಮಾಡಲಾಗಿತ್ತು.

ಇತ್ತ, ಬೆಂಗಳೂರಿನ ಬನ್ನೇರುಘಟ್ಟ ಕಾರ್ಮಿಕ ಭವನದಲ್ಲಿ ನಿನ್ನೆ ನಡೆದ ಸಂಧಾನ ಸಭೆ ವಿಫಲವಾಗಿತ್ತು. ಅಧಿಕಾರಿಗಳ ಮನವೊಲಿಕೆಗೆ ಸಾರಿಗೆ ನೌಕರರ ಮುಖಂಡರು ಒಪ್ಪದಿದ್ದು, ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಭೆ ನಡೆಸಬೇಕೆಂದು ಪಟ್ಟು ಹಿಡಿದಿದ್ದರು.

ಇಂದು ಮಧ್ಯಾಹ್ನದೊಳಗೆ ಸಭೆ ನಡೆಸಿ ಬೇಡಿಕೆಗಳ ಕುರಿತು ಸ್ಪಷ್ಟ ಭರವಸೆ ನೀಡದಿದ್ದರೆ ಮುಷ್ಕರ ನಡೆಸುವುದು ಖಚಿತ ಎಂದು ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಆದರೆ ಇದೀಗ ಹೈಕೋರ್ಟ್ ಆದೇಶದಿಂದ ಮುಷ್ಕರಕ್ಕೆ ತಾತ್ಕಾಲಿಕ ತಡೆ ಬಿದ್ದಿದೆ.

error: Content is protected !!