Home Blog Page 5

Gold Price Hike Today: ಮತ್ತೆ ಹೆಚ್ಚಾಯ್ತು ಚಿನ್ನದ ಬೆಲೆ, ಬೆಂಗಳೂರಿನಲ್ಲಿ ಎಷ್ಟಿದೆ?

ಬೆಂಗಳೂರು: ಸೇರಿದಂತೆ ದೇಶಾದ್ಯಂತ ಚಿನ್ನದ ಬೆಲೆ ಮತ್ತೆ ಏರಿಕೆಯ ಹಾದಿ ಹಿಡಿದಿದೆ. ನಿನ್ನೆ 230 ರೂ ಇಳಿಕೆಯಾಗಿದ್ದ ಚಿನ್ನದ ಬೆಲೆ ಇಂದು (ಶುಕ್ರವಾರ) ಸುಮಾರು 180–200 ರೂಗಳಷ್ಟು ಏರಿಕೆಯಾಗಿದೆ. ಈ ವಾರದ ಹೆಚ್ಚಿನ ದಿನಗಳಲ್ಲಿ ಬಂಗಾರದ ಬೆಲೆಯಲ್ಲಿ ಏರಿಳಿತಗಳು ಕಂಡುಬಂದಿವೆ.

ಇಂದಿನ ಪ್ರಮುಖ ದರಗಳು (ಭಾರತ)

  • 10 ಗ್ರಾಂ 22 ಕ್ಯಾರಟ್ ಚಿನ್ನ: ₹1,38,350
  • 10 ಗ್ರಾಂ 24 ಕ್ಯಾರಟ್ ಚಿನ್ನ: ₹1,50,930
  • 100 ಗ್ರಾಂ ಬೆಳ್ಳಿ: ₹25,000

ಗ್ರಾಂವಾರು ಬೆಲೆ (ಏಪ್ರಿಲ್ 3)

  • 24 ಕ್ಯಾರಟ್ (1 ಗ್ರಾಂ): ₹15,093
  • 22 ಕ್ಯಾರಟ್ (1 ಗ್ರಾಂ): ₹13,835
  • 18 ಕ್ಯಾರಟ್ (1 ಗ್ರಾಂ): ₹11,320
  • ಬೆಳ್ಳಿ (1 ಗ್ರಾಂ): ₹250

ಬೆಂಗಳೂರು ದರಗಳು

  • 24 ಕ್ಯಾರಟ್ (1 ಗ್ರಾಂ): ₹15,093
  • 22 ಕ್ಯಾರಟ್ (1 ಗ್ರಾಂ): ₹13,835
  • ಬೆಳ್ಳಿ (1 ಗ್ರಾಂ): ₹250

ಇತರೆ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)

  • ಚೆನ್ನೈ: ₹13,850
  • ಮುಂಬೈ: ₹13,835
  • ದೆಹಲಿ: ₹13,850
  • ಕೋಲ್ಕತಾ: ₹13,835
  • ಕೇರಳ: ₹13,835
  • ಅಹ್ಮದಾಬಾದ್: ₹13,840
  • ಜೈಪುರ್: ₹13,850
  • ಲಕ್ನೋ: ₹13,850
  • ಭುವನೇಶ್ವರ್: ₹13,835

ವಿದೇಶಿ ಮಾರುಕಟ್ಟೆಯಲ್ಲಿನ ಏರಿಳಿತಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ನಿರಂತರ ಬದಲಾವಣೆ ಕಾಣಿಸುತ್ತಿದೆ. ಇನ್ನು ಬೆಳ್ಳಿ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

ಕಬ್ಬನ್ ಪಾರ್ಕ್ʼ​​ನಲ್ಲಿ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿ ಆತ್ಮಹತ್ಯೆ!

0

ಬೆಂಗಳೂರು: ನಗರದ ಕಬ್ಬನ್ ಪಾರ್ಕ್‌ನಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮೃತರನ್ನು ಪಶ್ಚಿಮ ಬಂಗಾಳ ಮೂಲದ ಸುರೇಶ್ ಎಂದು ಗುರುತಿಸಲಾಗಿದೆ.

ಪೊಲೀಸರ ಮಾಹಿತಿ ಪ್ರಕಾರ, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಸುರೇಶ್ ಗುರುವಾರದಿಂದಲೇ ಕಾಣೆಯಾಗಿದ್ದು, ಮನೆಗೆ ಮರಳಿರಲಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು ಹೆಚ್‌ಎಸ್‌ಆರ್ ಪೊಲೀಸ್ ಠಾಣೆಗೆ ಕಾಣೆಯಾದ ಬಗ್ಗೆ ದೂರು ನೀಡಿದ್ದರು.

ಇಂದು ಬೆಳಿಗ್ಗೆ ಕಬ್ಬನ್ ಪಾರ್ಕ್‌ನ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮೃತನ ಜೇಬಿನಲ್ಲಿ ದೊರೆತ ಐಡಿ ಕಾರ್ಡ್‌ನ ಆಧಾರದ ಮೇಲೆ ಅವನ ಗುರುತು ಪತ್ತೆಯಾಗಿದೆ. ಆತ ಬೆಂಗಳೂರಿನ ಎಸ್‌ಪಿ ರಸ್ತೆ ಪ್ರದೇಶದಲ್ಲಿರುವ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದನು ಎಂಬುದು ತಿಳಿದುಬಂದಿದೆ.

ಮೃತನ ಬಳಿ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಆತ್ಮಹತ್ಯೆಗೆ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದಾದ್ಯಂತ ಆಟೋ LPG ಪೂರೈಕೆಯನ್ನು ಹೆಚ್ಚಳ ಮಾಡಲಾಗಿದೆ: ಇಂಡಿಯನ್ ಆಯಿಲ್

ಬೆಂಗಳೂರು: ರಾಜ್ಯದಲ್ಲಿ ಆಟೋ ಎಲ್‌ಪಿಜಿ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂರೈಕೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ ಎಂದು ಇಂಡಿಯನ್ ಆಯಿಲ್ ತಿಳಿಸಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಖಾಸಗಿ ಆಟೋ ಎಲ್‌ಪಿಜಿ ಕೇಂದ್ರಗಳು ಮುಚ್ಚಲ್ಪಟ್ಟಿರುವುದು ಅಥವಾ ಭಾಗಶಃ ಕಾರ್ಯನಿರ್ವಹಿಸುತ್ತಿರುವುದರಿಂದ, ದಿಢೀರ್ ಬೇಡಿಕೆ ಏರಿಕೆಯಾಗಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.

ಕರ್ನಾಟಕದಲ್ಲಿ ಇಂಡಿಯನ್ ಆಯಿಲ್‌ನ 55 ಆಟೋ ಎಲ್‌ಪಿಜಿ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 300 ಖಾಸಗಿ ಕೇಂದ್ರಗಳು ಮುಚ್ಚಲ್ಪಟ್ಟಿವೆ ಅಥವಾ ಸೀಮಿತವಾಗಿ ಕಾರ್ಯನಿರ್ವಹಿಸುತ್ತಿವೆ ಎಂಬ ಮಾಹಿತಿ ಇದೆ. ಇದರಿಂದ ಆಟೋ ಚಾಲಕರು ಸರ್ಕಾರಿ ಬಂಕ್‌ಗಳತ್ತ ಮುಖ ಮಾಡುತ್ತಿದ್ದಾರೆ.

ಇಂಡಿಯನ್ ಆಯಿಲ್ ಕೇಂದ್ರಗಳಲ್ಲಿ ದೈನಂದಿನ ಎಲ್‌ಪಿಜಿ ಮಾರಾಟ ಕಳೆದ ಮೂರು ತಿಂಗಳ ಸರಾಸರಿ 43.4 ಮೆಟ್ರಿಕ್ ಟನ್‌ನಿಂದ ಈಗ 59.53 ಮೆಟ್ರಿಕ್ ಟನ್‌ಗೆ ಏರಿಕೆಯಾಗಿದೆ.

ಈ ಸವಾಲಿನ ಪರಿಸ್ಥಿತಿಯಲ್ಲಿಯೂ ಎಲ್‌ಪಿಜಿ ಪೂರೈಕೆಯನ್ನು ಸಮರ್ಪಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಂಸ್ಥೆ ಭರವಸೆ ನೀಡಿದೆ.

ಎರಡು ಉಪಚುನಾವಣೆಗಳಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲಿದೆ: ಬಿ.ವೈ.ವಿಜಯೇಂದ್ರ

ಶಿವಮೊಗ್ಗ: ರಾಜ್ಯದ ಎರಡು ಉಪಚುನಾವಣೆಗಳಲ್ಲಿ ಬಿಜೆಪಿ ವಿಜಯಪತಾಕೆ ಹಾರಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ B. Y. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಏಪ್ರಿಲ್ 9 ರಂದು ನಡೆಯಲಿದ್ದು, ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ಹೇಳಿದರು.ಬಾಗಲಕೋಟೆ ಕ್ಷೇತ್ರದಲ್ಲಿ ಕಳೆದ ಒಂದು ವಾರದಿಂದ ಪಕ್ಷದ ನಾಯಕರೊಂದಿಗೆ ಪ್ರವಾಸ ನಡೆಸಿದ್ದೇನೆ. ಅಲ್ಲಿ ನಮ್ಮ ಅಭ್ಯರ್ಥಿ ವೀರಣ್ಣ ಚರಂತಿಮಠ ಖಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲೂ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. ಪಕ್ಷದ ಅಭ್ಯರ್ಥಿ ಶ್ರೀನಿವಾಸ ದಾಸ್ ಕರಿಯಪ್ಪ ಈ ಬಾರಿ ವಿಜಯಪತಾಕೆ ಹಾರಿಸಲಿದ್ದಾರೆ. ಅಲ್ಲಿ ಅಲ್ಪಸಂಖ್ಯಾತರು ಕಾಂಗ್ರೆಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹತಾಶರಾಗಿದ್ದಾರೆ. ಗ್ಯಾರಂಟಿ ಯೋಜನೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.

ಬಾಗಲಕೋಟೆಯಲ್ಲಿ ಸಚಿವರು ಹಣದ ಪ್ರಭಾವದಿಂದ ಚುನಾವಣೆಯನ್ನು ಎದುರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಇದರಿಂದ ಮತದಾರರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣದ ಪ್ರಜ್ಞಾವಂತ ಮತದಾರರು ಬಿಜೆಪಿ ಪರ ತೀರ್ಮಾನ ಕೈಗೊಳ್ಳಲಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಮಲ ಅರಳುವುದು ಖಚಿತ ಎಂದು ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಫಾರ್ಮಾ ಕಂಪನಿಗಳಿಗೆ ಟ್ರಂಪ್ ಶಾಕ್: ಬ್ರಾಂಡೆಡ್ ಔಷಧಗಳಿಗೆ 100% ಸುಂಕ!

0

ವಾಷಿಂಗ್ಟನ್: ಇರಾನ್ ಯುದ್ಧದ ನಡುವೆಯೇ ಅಮೆರಿಕದ ಅಧ್ಯಕ್ಷ ಟ್ರಂಪ್‌ ಮತ್ತೊಂದು ಆರ್ಥಿಕ ಕ್ರಮಕ್ಕೆ ಕೈ ಹಾಕಿದ್ದು, ಬ್ರಾಂಡೆಡ್ ಔಷಧಗಳ ಮೇಲೆ 100 ಶೇಕಡಾ ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ.

ಪೇಟೆಂಟ್ ಹೊಂದಿರುವ ಮತ್ತು ಬ್ರಾಂಡೆಡ್ ಔಷಧಗಳನ್ನು ಅಮೆರಿಕಕ್ಕೆ ಆಮದು ಮಾಡುವ ಕಂಪನಿಗಳ ಮೇಲೆ 100 ಶೇಕಡಾ ಸುಂಕ ವಿಧಿಸುವ ಕಾರ್ಯಾದೇಶಕ್ಕೆ ಸಹಿ ಹಾಕಲಾಗಿದೆ.

ಈ ನೀತಿಯ ಮುಖ್ಯ ಉದ್ದೇಶ ಔಷಧ ತಯಾರಿಕಾ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಅಮೆರಿಕದಲ್ಲೇ ಸ್ಥಾಪಿಸಲು ಪ್ರೇರೇಪಿಸುವುದು, ಚೀನಾ ಸೇರಿದಂತೆ ಇತರ ದೇಶಗಳ ಮೇಲೆ ಅವಲಂಬಿತೆಯನ್ನು ಕಡಿಮೆ ಮಾಡುವುದು ಹಾಗೂ ದೇಶೀಯ ಉತ್ಪಾದನೆ ಮತ್ತು ಉದ್ಯೋಗವನ್ನು ಹೆಚ್ಚಿಸುವುದಾಗಿದೆ.

ಮುಂದಿನ ನಾಲ್ಕು ವರ್ಷಗಳಲ್ಲಿ ಅಮೆರಿಕದಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲು ಒಪ್ಪುವ ಕಂಪನಿಗಳಿಗೆ ಸುಂಕವನ್ನು 20 ಶೇಕಡಕ್ಕೆ ಇಳಿಸುವ ಅವಕಾಶ ನೀಡಲಾಗಿದೆ. ಆದರೆ, ನಿಗದಿತ ಅವಧಿಯಲ್ಲಿ ಉತ್ಪಾದನೆ ಪ್ರಾರಂಭಿಸದಿದ್ದರೆ ಸುಂಕವನ್ನು ಮತ್ತೆ 100 ಶೇಕಡಕ್ಕೆ ಹೆಚ್ಚಿಸಲಾಗುತ್ತದೆ.

ಅದೇ ವೇಳೆ, ಅಮೆರಿಕದಲ್ಲೇ ಉತ್ಪಾದನೆ ನಡೆಸುವುದರ ಜೊತೆಗೆ ಕಡಿಮೆ ಬೆಲೆಗೆ ಔಷಧ ಪೂರೈಕೆ ಮಾಡಲು ಒಪ್ಪುವ ಕಂಪನಿಗಳಿಗೆ ಸಂಪೂರ್ಣ ಸುಂಕ ವಿನಾಯಿತಿ ನೀಡುವ ವ್ಯವಸ್ಥೆಯೂ ಇದೆ.

ದೊಡ್ಡ ಕಂಪನಿಗಳಿಗೆ ತಮ್ಮ ಯೋಜನೆ ಸಲ್ಲಿಸಲು 120 ದಿನಗಳ ಗಡುವು ನೀಡಲಾಗಿದ್ದು, ಸಣ್ಣ ಕಂಪನಿಗಳಿಗೆ 180 ದಿನಗಳ ಕಾಲಾವಕಾಶ ನೀಡಲಾಗಿದೆ.

ಯುರೋಪಿಯನ್ ಒಕ್ಕೂಟ, ಜಪಾನ್, ದಕ್ಷಿಣ ಕೊರಿಯಾ ಮತ್ತು ಸ್ವಿಟ್ಜರ್ಲೆಂಡ್ ದೇಶಗಳ ಔಷಧಗಳಿಗೆ ಒಪ್ಪಂದದಂತೆ ಸುಮಾರು 15 ಶೇಕಡಾ ಸುಂಕ ವಿಧಿಸಲಾಗುತ್ತದೆ. ಬ್ರಿಟನ್‌ಗೆ ಇದಕ್ಕಿಂತ ಕಡಿಮೆ ದರ ಅಥವಾ ವಿನಾಯಿತಿ ಸಿಗುವ ಸಾಧ್ಯತೆಯಿದೆ.

ಈ ಕ್ರಮವು ಸಾಮಾನ್ಯ ಜನರಿಕ್ ಔಷಧಗಳಿಗೆ ಅನ್ವಯಿಸುವುದಿಲ್ಲ. ಅಮೆರಿಕದಲ್ಲಿ ಬಳಸುವ ಒಟ್ಟು ಔಷಧಗಳಲ್ಲಿ ಸುಮಾರು 90 ಶೇಕಡಾ ಜನರಿಕ್ ಆಗಿರುವುದರಿಂದ, ರೋಗಿಗಳಿಗೆ ತಕ್ಷಣದ ಬೆಲೆ ಏರಿಕೆ ಭಾರವಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಇದರಿಂದ ಭಾರತದಂತಹ ದೇಶಗಳಿಗೆ ತಕ್ಷಣದ ದೊಡ್ಡ ಆರ್ಥಿಕ ಪರಿಣಾಮ ಇರುವುದಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕೇವಲ 2,000 ರೂಪಾಯಿ ನೀಡುವ ಯೋಜನೆಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ: ಶಾಸಕ ಯತ್ನಾಳ್

ಬಾಗಲಕೋಟೆ: ಬಾಗಲಕೋಟೆ ಉಪಚುನಾವಣೆ ಅಖಾಡದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಪ್ರಚಾರ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಜನರ ಮೇಲೆ ತೆರಿಗೆ ಭಾರವನ್ನು ಹೆಚ್ಚಿಸಿವೆ ಎಂದು ಯತ್ನಾಳ್ ಆರೋಪಿಸಿದರು. ಮರಣೋತ್ತರ ಪ್ರಮಾಣಪತ್ರ ಶುಲ್ಕ 25 ರೂಪಾಯಿಯಿಂದ 100 ರೂಪಾಯಿಗೆ ಏರಿಕೆ ಹಾಗೂ ಪ್ರತಿ ಯೂನಿಟ್ ವಿದ್ಯುತ್ ದರ 7.20 ರೂಪಾಯಿಗೆ ಏರಿಕೆಯನ್ನೂ ಉದಾಹರಣೆಯಾಗಿ ಉಲ್ಲೇಖಿಸಿದರು.

ಯುವಕರಿಗೆ ಉದ್ಯೋಗ ಸೃಷ್ಟಿಸುವುದು ಸರ್ಕಾರದ ಮುಖ್ಯ ಆದ್ಯತೆಯಾಗಬೇಕು. ಕೇವಲ 2,000 ರೂಪಾಯಿ ನೀಡುವ ಯೋಜನೆಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಅವರು ಹೇಳಿದರು. ಸುಮಾರು 3 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ಹಿಂದೂ ಸಮಾಜದ ಐಕ್ಯತೆಯನ್ನು ಒತ್ತಿ ಹೇಳಿದ ಯತ್ನಾಳ್, ಮತದಾರರು ಯಾವುದೇ ಆಮಿಷಗಳಿಗೆ ಒಳಗಾಗದೆ ಮತ ಚಲಾಯಿಸಬೇಕು ಎಂದು ಕರೆ ನೀಡಿದರು. 2028ರೊಳಗೆ ಬದಲಾವಣೆ ತರಲು ವೀರಣ್ಣ ಚರಂತಿಮಠ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಮುಸುಕುದಾರಿ ಕಳ್ಳರ ಹಾವಳಿ: ಸಿಸಿಟಿವಿ ದೃಶ್ಯಗಳು ವೈರಲ್!

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಮುಸುಕುದಾರಿ ಕಳ್ಳರ ಗ್ಯಾಂಗ್ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರಲ್ಲಿ ಭೀತಿ ಉಂಟು ಮಾಡಿದೆ. ಕಳೆದ ಒಂದು ವಾರದಿಂದ ಕೇಶವ ಪಾರ್ಕ್ ಮತ್ತು ಪುಟ್ಟರಾಜ ಬಡಾವಣೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮನೆ ಕಳ್ಳತನ ಹಾಗೂ ಕಳ್ಳತನ ಯತ್ನ ಪ್ರಕರಣಗಳು ನಡೆದಿವೆ.

ರಾತ್ರಿ ವೇಳೆಯಲ್ಲಿ ಮುಖಕ್ಕೆ ಮುಸುಕು ಹಾಕಿಕೊಂಡು, ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಸಂಚರಿಸುತ್ತಿರುವ ಐದು ಜನರ ಗ್ಯಾಂಗ್ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಈ ದೃಶ್ಯಗಳು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿವೆ.

ಪುಟ್ಟರಾಜ ಬಡಾವಣೆ ನಿವಾಸಿಯಾದ ಶಿಕ್ಷಕಿ ವಿಜಯಲಕ್ಷ್ಮಿ ಅವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಕುಟುಂಬದವರು ಸಂಬಂಧಿಕರ ಮನೆಯಲ್ಲಿ ಇದ್ದ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಕಳ್ಳರು ಮನೆಯ ಬಾಗಿಲಿನ ಲಾಕ್ ಮುರಿದು ಒಳನುಗ್ಗಿದ್ದಾರೆ.

ಸುಮಾರು 70 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಬೆಟಗೇರಿ-ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಸ್ಥಳೀಯ ನಿವಾಸಿಗಳು ಕಳ್ಳರ ಹಾವಳಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮನೆಗಳಿಗೆ ಸಿಸಿಟಿವಿ ಅಳವಡಿಸುವಂತೆ ಸೂಚಿಸಲಾಗಿದೆ. ಆದಾಗ್ಯೂ, ಕಳ್ಳತನ ಪ್ರಕರಣಗಳು ಮುಂದುವರಿದಿರುವುದರಿಂದ ಜನರು ಭಯಭೀತರಾಗಿದ್ದಾರೆ. ರಾತ್ರಿ ಹೊತ್ತಿನಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಸಂಚರಿಸುತ್ತಿರುವ ಈ ಗ್ಯಾಂಗ್ ವಿರುದ್ಧ ತಕ್ಷಣ ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ನಕಲಿ ನಂಬರ್ ಪ್ಲೇಟ್ ಕೇಸ್: ವಿದೇಶಕ್ಕೆ ಹಾರಿದ ರಿಕ್ಕಿ ರೈ! ಲುಕ್‌ ಔಟ್ ನೋಟಿಸ್ ನೀಡಲು ಸಿದ್ಧತೆ

0

ಬೆಂಗಳೂರು: ನಕಲಿ ನಂಬರ್ ಪ್ಲೇಟ್ ಬಳಸಿ ವಂಚಿಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದರು. ಆದರೆ ನೋಟಿಸ್ ನೀಡುತ್ತಿದ್ದಂತೆಯೇ ರಿಕ್ಕಿ ರೈ ವಿದೇಶಕ್ಕೆ (ರಷ್ಯಾ) ತೆರಳಿರುವುದಾಗಿ ತಿಳಿದುಬಂದಿದೆ.

ಆರೋಪಿ ದೇಶ ಬಿಟ್ಟು ತೆರಳಿರುವ ಹಿನ್ನೆಲೆಯಲ್ಲಿ, ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದ್ದಾರೆ.ಇದಲ್ಲದೆ, ರಿಕ್ಕಿ ರೈ ಬಳಸುತ್ತಿದ್ದ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಪೊಲೀಸರು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಕಾರಿಗೆ ಆರ್‌ಟಿಒನಲ್ಲಿ ನೋಂದಣಿಯಾಗದ KA 05 NR 0009 ಎಂಬ ಫ್ಯಾನ್ಸಿ ನಂಬರ್ ಪ್ಲೇಟ್ ಅಳವಡಿಸಿ ವಂಚನೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನೋಂದಣಿ ಮಾಡಿಸದ ಹಿನ್ನೆಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಆರ್‌ಟಿಒ ಅಧಿಕಾರಿಗಳು ₹35 ಲಕ್ಷ ದಂಡ ವಿಧಿಸಿದ್ದರು.

ಇಷ್ಟಾದರೂ, ಕಬ್ಬನ್ ಪಾರ್ಕ್ ಪ್ರದೇಶದಲ್ಲಿ ಮತ್ತೆ ಡ್ರಿಫ್ಟಿಂಗ್ ನಡೆಸಿದ ಆರೋಪವೂ ಇವರ ಮೇಲಿದೆ. ಪ್ರಕರಣ ಗಂಭೀರವಾಗುತ್ತಿದ್ದಂತೆ ಸೆಂಟ್ರಲ್ ಆರ್‌ಟಿಒನಲ್ಲಿ ನಂಬರ್ ನೋಂದಣಿಗೆ ರಿಕ್ಕಿ ರೈ ಅರ್ಜಿ ಸಲ್ಲಿಸಿರುವುದು ತಿಳಿದುಬಂದಿದೆ.

 

 

ಮಳೆಗೂ ಮಣಿಯದ ನಾಯಕರು: ದಾವಣಗೆರೆಯಲ್ಲಿ ಸಿದ್ದರಾಮಯ್ಯ-ಡಿಕೆಶಿ ಶಕ್ತಿ ಪ್ರದರ್ಶನ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಶಕ್ತಿ ಪ್ರದರ್ಶನ ನಡೆಸಿತು. ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಅಖ್ತರ್ ರಜಾ ವೃತ್ತದಲ್ಲಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಒಟ್ಟಿಗೆ ಮತಯಾಚನೆ ಮಾಡಿದರು.

ವೇದಿಕೆ ಕಾರ್ಯಕ್ರಮಕ್ಕೆ ಆಗಮಿಸಿದ ಇಬ್ಬರು ನಾಯಕರಿಗೆ ಅಲ್ಪಸಂಖ್ಯಾತ ಮತದಾರರು ಭಾರೀ ಸ್ವಾಗತ ಕೋರಿದರು. ಸಿಎಂ ಕೈ ಬೀಸುತ್ತಿದ್ದಂತೆಯೇ ಜನರು ಉತ್ಸಾಹದಿಂದ ಕೂಗಾಟ, ಶಿಳ್ಳೆಗಳೊಂದಿಗೆ ಬೆಂಬಲ ವ್ಯಕ್ತಪಡಿಸಿದರು. ಈ ವೇಳೆ ಶಾಸಕ ರಿಜ್ವಾನ್ ಅರ್ಷದ್, ಯಾಸೀರ್ ಖಾನ್ ಪಠಾಣ್, ಶಿವಲಿಂಗೇಗೌಡ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹಾಗೂ ಬಲ್ಕೀಸ್ ಬಾನು ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು “ಅಸ್ಸಲಾಮು ಅಲೈಕುಮ್” ಎಂದು ಭಾಷಣ ಆರಂಭಿಸಿದ್ದು ಗಮನಸೆಳೆದಿತು. ಕಾರ್ಯಕ್ರಮದ ನಡುವೆ ಮಳೆ ಆರಂಭವಾದರೂ, ಸಿಎಂ ಸಿದ್ದರಾಮಯ್ಯ ಕೊಡೆ ಹಿಡಿದುಕೊಂಡೇ ಭಾಷಣ ಮುಂದುವರಿಸಿದರು.

ಹಗೆದಿಬ್ಬ ಸರ್ಕಲ್‌ನಿಂದ ಅಖ್ತರ್ ರಜಾ ವೃತ್ತದವರೆಗೆ ಸಿಎಂ ಸಿದ್ದರಾಮಯ್ಯ ಅವರು ಅಭ್ಯರ್ಥಿ ಸಮರ್ಥ್ ಶಾಮನೂರು ಜೊತೆ ಭರ್ಜರಿ ರೋಡ್‌ಶೋ ನಡೆಸಿದರು. ಮೆಹಬೂಬ್ ನಗರ, ಮಿಲ್ಲತ್ ಕಾಲೋನಿ, ಮಂಡಕ್ಕಿ ಭಟ್ಟಿ ಲೇಔಟ್ ಸೇರಿದಂತೆ ಹಲವು ಪ್ರದೇಶಗಳಿಂದ ಭಾರೀ ಸಂಖ್ಯೆಯಲ್ಲಿ ಜನ ಸೇರಿ ಬೆಂಬಲ ಸೂಚಿಸಿದರು.

ಸಮರ್ಥ್ ಶಾಮನೂರು ನಮ್ಮ ಮನೆ ಮಗ ಎಂದು ಹೇಳಿದ ಸಿಎಂ, ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು, ಬಡವರು, ದಲಿತರ ಪರ ನಿಲ್ಲುವ ಪಕ್ಷ ಎಂದು ಹೇಳಿದರು. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಕರೆ ನೀಡಿದರು.

ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ನೀಡಿರುವ ಐದು ಗ್ಯಾರಂಟಿಗಳ ಬಗ್ಗೆ ವಿವರಿಸಿದರು. ಗೃಹಲಕ್ಷ್ಮಿ, ಗೃಹಜ್ಯೋತಿ, ಉಚಿತ ಅಕ್ಕಿ ಹಾಗೂ ಉಚಿತ ಬಸ್ ಪ್ರಯಾಣ ಯೋಜನೆಗಳನ್ನು ಉಲ್ಲೇಖಿಸಿ, ಜನರ ಜೀವನ ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದರು. ಒಟ್ಟಾರೆ, ದಾವಣಗೆರೆಯಲ್ಲಿ ನಡೆದ ಈ ಕಾರ್ಯಕ್ರಮ ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನವಾಗಿ ಗಮನ ಸೆಳೆಯಿತು.

ಕರ್ನಾಟಕದಲ್ಲಿ ಇಂದು ಗುಡುಗು ಸಹಿತ ಮಳೆ: 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾರ್ಭಟ ಮುಂದುವರಿದಿದ್ದು, ಇಂದೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಹಿನ್ನೆಲೆ 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

ಬೀದರ್, ಕಲಬುರ್ಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಹಾವೇರಿ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದರ ಜೊತೆಗೆ, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜೊತೆಗೆ ಉತ್ತರ ಒಳನಾಡಿನ ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಬೀದರ್, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು, ಮಳೆ ಜೋರಾಗಿರಲಿದೆ. ಉಳಿದ ಭಾಗಗಳಲ್ಲಿ ಒಣಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.

error: Content is protected !!