HomeSports Newsಗವಾಸ್ಕರ್, ಸೆಹ್ವಾಗ್ʼಗೂ ಸ್ಥಾನವಿಲ್ಲ! ಭಾರತದ ಸಾರ್ವಕಾಲಿಕ ಟಾಪ್-3 ಟೆಸ್ಟ್ ಬ್ಯಾಟರ್ʼಗಳನ್ನು ಆಯ್ಕೆ ಮಾಡಿದ ಅಶ್ವಿನ್

ಗವಾಸ್ಕರ್, ಸೆಹ್ವಾಗ್ʼಗೂ ಸ್ಥಾನವಿಲ್ಲ! ಭಾರತದ ಸಾರ್ವಕಾಲಿಕ ಟಾಪ್-3 ಟೆಸ್ಟ್ ಬ್ಯಾಟರ್ʼಗಳನ್ನು ಆಯ್ಕೆ ಮಾಡಿದ ಅಶ್ವಿನ್

For Dai;y Updates Join Our whatsapp Group

ನವದೆಹಲಿ: ಸುನಿಲ್ ಗವಾಸ್ಕರ್‌ನಿಂದ ವಿರೇಂದ್ರ ಸೆಹ್ವಾಗ್‌ವರೆಗೆ ಹಲವು ದಿಗ್ಗಜ ಬ್ಯಾಟರ್‌ಗಳು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ. ಹೀಗಾಗಿ ಭಾರತದ ಸಾರ್ವಕಾಲಿಕ ಶ್ರೇಷ್ಠ ಮೂವರು ಟೆಸ್ಟ್ ಬ್ಯಾಟರ್‌ಗಳನ್ನು ಆಯ್ಕೆ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಟೀಂ ಇಂಡಿಯಾದ ಮಾಜಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಈ ಸವಾಲನ್ನು ಸ್ವೀಕರಿಸಿದ್ದು, ಅವರ ಆಯ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಅಶ್ವಿನ್ ಮೊದಲು ಭಾರತದ ಐವರು ಶ್ರೇಷ್ಠ ಟೆಸ್ಟ್ ಬ್ಯಾಟರ್‌ಗಳನ್ನು ಆಯ್ಕೆ ಮಾಡಿದ್ದಾರೆ. ಬಳಿಕ ಆ ಪಟ್ಟಿಯನ್ನು ಮೂವರಿಗೆ ಇಳಿಸಿದ್ದಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ, ಅವರ ಅಂತಿಮ ಟಾಪ್-3 ಪಟ್ಟಿಯಲ್ಲಿ ಭಾರತದ ಮಾಜಿ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್‌ಗೆ ಸ್ಥಾನ ಸಿಕ್ಕಿಲ್ಲ.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಡುವ ಗವಾಸ್ಕರ್ ಅವರನ್ನು ಕೈಬಿಟ್ಟಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ತಮ್ಮ ಆಯ್ಕೆಯನ್ನು ಎಲ್ಲರೂ ಒಪ್ಪಿಕೊಳ್ಳುವುದು ಕಷ್ಟವಾಗಬಹುದು ಎಂಬುದನ್ನು ಅಶ್ವಿನ್ ಕೂಡ ಒಪ್ಪಿಕೊಂಡಿದ್ದಾರೆ.

ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 10 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 125 ಟೆಸ್ಟ್ ಪಂದ್ಯಗಳನ್ನಾಡಿರುವ ಗವಾಸ್ಕರ್, 51.12ರ ಸರಾಸರಿಯಲ್ಲಿ 10,122 ರನ್ ಗಳಿಸಿದ್ದಾರೆ. ಇದರಲ್ಲಿ 34 ಶತಕ ಹಾಗೂ 45 ಅರ್ಧಶತಕಗಳು ಸೇರಿವೆ. ಬಲಿಷ್ಠ ವೆಸ್ಟ್ ಇಂಡೀಸ್ ಬೌಲಿಂಗ್ ದಾಳಿಯ ವಿರುದ್ಧವೇ 13 ಶತಕಗಳನ್ನು ಸಿಡಿಸಿರುವುದು ಅವರ ಬ್ಯಾಟಿಂಗ್ ಸಾಮರ್ಥ್ಯಕ್ಕೆ ಪ್ರಮುಖ ಸಾಕ್ಷಿಯಾಗಿದೆ. ಅವರ ಗರಿಷ್ಠ ಸ್ಕೋರ್ 236 ರನ್.

ಇನ್ನು ಸ್ಪೋಟಕ ಆರಂಭಿಕ ಬ್ಯಾಟರ್ ವಿರೇಂದ್ರ ಸೆಹ್ವಾಗ್ ಕೂಡ ಅಶ್ವಿನ್ ಅವರ ಟಾಪ್-3 ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ. ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡು ತ್ರಿಶತಕಗಳನ್ನು ಬಾರಿಸಿದ ಭಾರತದ ಏಕೈಕ ಬ್ಯಾಟರ್ ಎಂಬ ಹೆಗ್ಗಳಿಕೆ ಸೆಹ್ವಾಗ್ ಅವರದ್ದಾಗಿದೆ. ಎದುರಾಳಿ ತಂಡದ ಬೌಲರ್‌ಗಳನ್ನು ಆರಂಭದಿಂದಲೇ ಒತ್ತಡಕ್ಕೆ ಸಿಲುಕಿಸುತ್ತಿದ್ದ ಸೆಹ್ವಾಗ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಇಂದಿಗೂ ಜನಪ್ರಿಯವಾಗಿದೆ.

ಅಶ್ವಿನ್ ಅವರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್. ಟೆಸ್ಟ್ ಕ್ರಿಕೆಟ್‌ನಲ್ಲಿ 200ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಸಚಿನ್, 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ 51 ಶತಕ ಹಾಗೂ 68 ಅರ್ಧಶತಕಗಳಿವೆ.

ಎರಡನೇ ಸ್ಥಾನವನ್ನು ರಾಹುಲ್ ದ್ರಾವಿಡ್ ಅವರಿಗೆ ನೀಡಲಾಗಿದೆ. ‘ದಿ ವಾಲ್’ ಎಂದೇ ಖ್ಯಾತರಾಗಿರುವ ದ್ರಾವಿಡ್ 164 ಟೆಸ್ಟ್ ಪಂದ್ಯಗಳಿಂದ 52.31ರ ಸರಾಸರಿಯಲ್ಲಿ 13,288 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಸೆತಗಳನ್ನು ಎದುರಿಸಿದ ದಾಖಲೆ ದ್ರಾವಿಡ್ ಅವರ ಹೆಸರಿನಲ್ಲಿದ್ದು, ಒಟ್ಟು 31,258 ಎಸೆತಗಳನ್ನು ಎದುರಿಸಿದ್ದಾರೆ. ಅಲ್ಲದೆ, ಕ್ರೀಸ್‌ನಲ್ಲಿ 44,152 ನಿಮಿಷಗಳ ಕಾಲ ಕಳೆದ ದಾಖಲೆ ಕೂಡ ಅವರದ್ದಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ದ್ರಾವಿಡ್ 36 ಶತಕಗಳನ್ನು ಬಾರಿಸಿದ್ದಾರೆ.

ಅಶ್ವಿನ್ ಅವರ ಟಾಪ್-3 ಪಟ್ಟಿಯ ಮೂರನೇ ಸ್ಥಾನದಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟು 123 ಟೆಸ್ಟ್ ಪಂದ್ಯಗಳಲ್ಲಿ 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿರುವ ಕೊಹ್ಲಿ, ಕಳೆದ ವರ್ಷ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ನಾಯಕನಾಗಿ ಭಾರತ ತಂಡವನ್ನು ಅತಿ ಹೆಚ್ಚು ಟೆಸ್ಟ್ ಪಂದ್ಯಗಳಲ್ಲಿ ಗೆಲ್ಲಿಸಿದ ನಾಯಕ ಎಂಬ ಹೆಗ್ಗಳಿಕೆಯೂ ಕೊಹ್ಲಿ ಅವರದ್ದಾಗಿದೆ.

ಹೀಗಾಗಿ ಅಶ್ವಿನ್ ಅವರ ಟಾಪ್-3 ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದರೆ, ಸುನಿಲ್ ಗವಾಸ್ಕರ್ ಮತ್ತು ವಿರೇಂದ್ರ ಸೆಹ್ವಾಗ್ ಅವರಂತಹ ದಿಗ್ಗಜರಿಗೆ ಸ್ಥಾನ ಸಿಗದಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img