ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಕೇಂದ್ರ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ಸಜ್ಜಾಗುತ್ತಿರುವ ಬೆನ್ನಲ್ಲೇ ಅನುಭವಿ ನಾಯಕರು ಹಾಗೂ ಪ್ರಮುಖ ಮುಖಂಡರಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗಿದೆ.
ಬಿಜೆಪಿ ಹೊಸ ರಾಷ್ಟ್ರೀಯ ಘಟಕದಲ್ಲಿ 13 ರಾಷ್ಟ್ರೀಯ ಉಪಾಧ್ಯಕ್ಷರು, 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿವಿಧ ಮೋರ್ಚಾಗಳಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಹಾಗೂ ಹಿರಿಯ ನಾಯಕ ರಾಮ್ ಮಾಧವ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಕರ್ನಾಟಕದ ಪ್ರೊ. ಎಂ. ನಾಗರಾಜ್ ಅವರಿಗೆ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನ ನೀಡಲಾಗಿದ್ದು, ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಅನಿಲ್ ಆಂಟನಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮುಂದುವರಿದರೆ, ಅನಿಲ್ ಬಲೂನಿ ಅವರಿಗೆ ರಾಷ್ಟ್ರೀಯ ಮಾಧ್ಯಮದ ಜವಾಬ್ದಾರಿ ಮುಂದುವರಿಸಲಾಗಿದೆ.
ಹೊಸ ತಂಡದಲ್ಲಿ 13 ರಾಷ್ಟ್ರೀಯ ಉಪಾಧ್ಯಕ್ಷರ ಪೈಕಿ ಐವರು ಮಹಿಳೆಯರಾಗಿದ್ದಾರೆ. 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪೈಕಿ ಸ್ಮೃತಿ ಇರಾನಿ ಏಕೈಕ ಮಹಿಳೆಯಾಗಿದ್ದಾರೆ.
ಇದೇ ವೇಳೆ ಬಿಜೆಪಿ ಸಾಮಾಜಿಕ ಜಾಲತಾಣ ಮತ್ತು ಐಟಿ ಸೆಲ್‌ನ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದ ಅಮಿತ್ ಮಾಳವೀಯ ಅವರ ಹೆಸರು ಹೊಸ ಪಟ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ದೀಪಕ್ ಮಹಾಸ್ಕರೆ ಅವರನ್ನು ಸಾಮಾಜಿಕ ಜಾಲತಾಣ ಸಂಚಾಲಕರಾಗಿ ನೇಮಕ ಮಾಡಲಾಗಿದೆ.
ಯುವ ಮೋರ್ಚಾದಲ್ಲೂ ಮಹತ್ವದ ಬದಲಾವಣೆ
ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿದ್ದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಬದಲಾಗಿ ಗುಜರಾತ್ ಮೂಲದ ಡಾ. ಹೇಮಾಂಗ್ ಜೋಶಿ ಅವರನ್ನು ನೂತನ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರು: ವಸುಂಧರಾ ರಾಜೇ ಸಿಂಧಿಯಾ, ತೀರತ್ ಸಿಂಗ್ ರಾವತ್, ರಾಮ್ ಮಾಧವ್, ವೈಜಯಂತ್ ಜಯ್ ಪಾಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಾಬೆನ್ ನರೇಂದ್ರಭಾಯ್ ದೋಷಿ, ಡಾ. ಭಾರತಿ ಪ್ರವೀಣ್ ಪವಾರ್, ಸರ್ದಾರ್ ಮನ್‌ಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಪ್ರೊ. ಎಂ. ನಾಗರಾಜ್, ಪ್ರೊ. ತಾರಿಕ್ ಮನ್ಸೂರ್ ಹಾಗೂ ಡಾ. ಮಧುಚಂದ್ರ ಕರ್.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ): ಬಿ.ಎಲ್. ಸಂತೋಷ್ — ಕರ್ನಾಟಕ.
ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಗಳು: ಶಿವಪ್ರಕಾಶ್, ಸೌದನ್ ಸಿಂಗ್.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು: ವಿನೋದ್ ತಾವ್ಡೆ, ಸುನಿಲ್ ಬನ್ಸಾಲ್, ಬಿಪ್ಲಬ್ ಕುಮಾರ್ ದೇವ್, ಸ್ಮೃತಿ ಇರಾನಿ, ಸತೀಶ್ ಪೂನಿಯಾ, ಗಜೇಂದ್ರ ಪಟೇಲ್, ಹರೀಶ್ ದ್ವಿವೇದಿ ಹಾಗೂ ಸಂಜಯ್ ಭಾಟಿಯಾ.
ರಾಷ್ಟ್ರೀಯ ಕಾರ್ಯದರ್ಶಿಗಳು: ಕವಿತಾ ಪಾಟಿದಾರ್, ಕೆ. ಸುರೇಂದ್ರನ್, ಡಾ. ಭೋಲಾ ಸಿಂಗ್, ಡಾ. ಪ್ರದೀಪ್ ವರ್ಮಾ, ಜಗದೀಶ್ ಈಶ್ವರ್‌ಭಾಯ್ ಪಟೇಲ್, ಡಾ. ಸಂದೀಪ್ ಪಾಠಕ್, ಫಾಂಗ್ನಾನ್ ಕೊನ್ಯಾಕ್, ಸಂಗೀತಾ ಯಾದವ್, ಅನಿಲ್ ಆಂಟನಿ, ಎಂ. ವೆಂಕಟೇಶನ್, ಮನೋಜ್ ಟಿಗ್ಗಾ, ಸಿದ್ಧಾರ್ಥ ಶಂಭು, ಡಾ. ಸ್ವದೇಶ್ ಸಿಂಗ್, ಮೃಗಾಂಕ ದೇವ್ ಬರ್ಮನ್, ರೋಹನ್ ಗುಪ್ತಾ ಹಾಗೂ ಜೈ ಪ್ರಕಾಶ್.



