HomeGadag Newsನಾಗಪ್ಪನಿಗೆ ಹಾಲೆರೆದು... ಮನೆಯವರ ‘ಪಾಲು’ ನೆನೆದ ನಾರಿಯರು!

ನಾಗಪ್ಪನಿಗೆ ಹಾಲೆರೆದು… ಮನೆಯವರ ‘ಪಾಲು’ ನೆನೆದ ನಾರಿಯರು!

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನಾಗರ ಪಂಚಮಿ ಅಂದ್ರೆ ಹಳ್ಳಿ ಹೆಣ್ಮಕ್ಕಳಿಗೆ ಬರೀ ಹಬ್ಬ ಅಲ್ಲ… ಅದು ತವರುಮನೆಯ ನೆನಪು, ಕುಟುಂಬದ ಮೇಲಿನ ಕಾಳಜಿ, ಹಿರಿಯರ ಸ್ಮರಣೆ ಹಾಗೂ ತಲೆತಲಾಂತರದಿಂದ ಬಂದಿರುವ ಗ್ರಾಮೀಣ ಸಂಪ್ರದಾಯಗಳ ಸಮ್ಮಿಲನ. ಜಕ್ಕಲಿ ಗ್ರಾಮದಲ್ಲಿ ರವಿವಾರ ನಡೆದ ನಾಗರ ಪಂಚಮಿ ಆಚರಣೆಯಲ್ಲೂ ಈ ಹಳ್ಳಿ ಸೊಗಡು ಮನಮೋಹಕವಾಗಿ ಅನಾವರಣಗೊಂಡಿತು.

ಬೆಳಿಗ್ಗೆಯಿಂದಲೇ ಗ್ರಾಮದ ಬಾಕಿಷ್ಠಪ್ಪ ಭಾವಿ ಮೇಲಿರುವ ನಾಗಮೂರ್ತಿ ಹಾಗೂ ಶ್ರೀ ಕಲ್ಲೇಶ್ವರ ದೇವಸ್ಥಾನದ ಮುಂದಿನ ನಾಗಮೂರ್ತಿಗಳ ಬಳಿ ಭಕ್ತರ ದಂಡೇ ಸೇರಿತ್ತು. ಬಣ್ಣಬಣ್ಣದ ಸೀರೆ ತೊಟ್ಟು, ತಲೆಯ ಮೇಲೆ ಹೂವು ಮುಡಿದು, ಕೈಯಲ್ಲಿ ಪೂಜಾ ಸಾಮಗ್ರಿ ಹಿಡಿದು ಬಂದ ಮಹಿಳೆಯರು ನಾಗಮೂರ್ತಿಗೆ ಹಾಲೆರೆದು, ಹೂವು, ಬೆಲ್ಲ, ಕೊಬ್ಬರಿ ಅರ್ಪಿಸಿ ಭಕ್ತಿಯಿಂದ ಪೂಜೆ ಸಲ್ಲಿಸಿದರು.

ಮಳೆ ಚೆನ್ನಾಗಿ ಸುರಿದು, ಹೊಲಗಳಲ್ಲಿ ಬೆಳೆ ಸಮೃದ್ಧಿಯಾಗಲಿ, ಕುಟುಂಬದ ಸದಸ್ಯರಿಗೆ ಆರೋಗ್ಯ–ನೆಮ್ಮದಿ ದೊರೆಯಲಿ ಎಂದು ನಾಗದೇವರಲ್ಲಿ ಪ್ರಾರ್ಥಿಸಿದರು.

‘ಅಪ್ಪನ ಪಾಲು… ಅಮ್ಮನ ಪಾಲು…’—ಮನೆಯವರನ್ನೆಲ್ಲ ನೆನೆದರು

ಜಕ್ಕಲಿಯ ನಾಗರ ಪಂಚಮಿ ಆಚರಣೆಯ ವಿಶೇಷವೆಂದರೆ ‘ಹಾಲು ಹಾಕುವ’ ವಿಶಿಷ್ಟ ಸಂಪ್ರದಾಯ. ಮನೆಯಿಂದ ತಂದ ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲದಚ್ಚು ಹಾಗೂ ಹಾಲು ಹಾಕಿಕೊಂಡು ನಾಗಪ್ಪನಿಗೆ ಅರ್ಪಿಸುವ ವೇಳೆ ಕುಟುಂಬದ ಪ್ರತಿಯೊಬ್ಬರನ್ನೂ ಹೆಸರಿಟ್ಟು ಸ್ಮರಿಸಲಾಯಿತು.

‘ದೇವರ ಪಾಲು, ದಿಂಡರ ಪಾಲು, ಗುರು–ಹಿರಿಯರ ಪಾಲು, ಅಪ್ಪನ ಪಾಲು, ಅಮ್ಮನ ಪಾಲು, ಅಣ್ಣನ ಪಾಲು, ತಮ್ಮನ ಪಾಲು, ಅಕ್ಕನ ಪಾಲು, ತಂಗಿಯ ಪಾಲು, ಮಾವನ ಪಾಲು, ಅಳಿಯನ ಪಾಲು, ಅತ್ತೆಯ ಪಾಲು, ಸೊಸೆಯ ಪಾಲು…’ ಎಂದು ಹೇಳುತ್ತಾ ಹಾಲಿನ ಪಾಲು ಅರ್ಪಿಸಿದರು.

ಒಬ್ಬೊಬ್ಬರ ಹೆಸರು ಹೇಳುತ್ತಾ ಹಾಲು ಅರ್ಪಿಸುವಾಗ, ‘ನಮ್ಮ ಮನಿ ಮಂದಿ ಎಲ್ಲರೂ ಚೆನ್ನಾಗಿರಲಿ’ ಎಂಬ ಕಾಳಜಿ ಮಹಿಳೆಯರ ಮೊಗದಲ್ಲಿ ಎದ್ದು ಕಾಣುತ್ತಿತ್ತು. ಹೀಗಾಗಿ ನಾಗರ ಪಂಚಮಿ ಇಲ್ಲಿ ಕೇವಲ ನಾಗಪೂಜೆಯಾಗದೆ, ಕುಟುಂಬದ ಎಲ್ಲರನ್ನೂ ಒಂದೇ ಮನಸ್ಸಿನಿಂದ ನೆನೆಯುವ ಭಾವನಾತ್ಮಕ ಆಚರಣೆಯಾಗಿ ಕಂಡುಬಂತು.

ಅಣ್ಣ–ತಮ್ಮಂದಿರ ಒಳಿತಿಗಾಗಿ ಉಪವಾಸ

ಕೆಲವು ಮಹಿಳೆಯರು ಅಣ್ಣ–ತಮ್ಮಂದಿರ ಆಯುಷ್ಯ, ಆರೋಗ್ಯ ಮತ್ತು ಒಳಿತಿಗಾಗಿ ಉಪವಾಸ ಆಚರಿಸಿದರು. ನಾಗಪ್ಪನಿಗೆ ಪೂಜೆ ಸಲ್ಲಿಸಿ ಸಹೋದರರ ಕ್ಷೇಮಕ್ಕಾಗಿ ಪ್ರಾರ್ಥಿಸಿದರು. ಹೀಗೆ ಅಣ್ಣ–ತಂಗಿ, ಅಕ್ಕ–ತಮ್ಮನ ಬಾಂಧವ್ಯವನ್ನು ಗಟ್ಟಿಗೊಳಿಸುವ ಸಂಪ್ರದಾಯವೂ ಹಬ್ಬದಲ್ಲಿ ಜೀವಂತವಾಗಿತ್ತು.

ನಾಗರ ಪಂಚಮಿಯ ಅಂಗವಾಗಿ ಮನೆಗಳಲ್ಲೂ ಹಬ್ಬದ ವಾತಾವರಣ ಮನೆಮಾಡಿತ್ತು. ಕುಚ್ಚುಕಡುಬು, ಅಳಿಟ್ಟು, ನೆನೆಸಿದ ಕಡಲೆಕಾಳು, ತೆಂಗಿನಕಾಯಿ ಸೇರಿದಂತೆ ವಿವಿಧ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

ಪೂಜೆ ಮುಗಿಸಿ ಮನೆಗೆ ಮರಳಿದ ಬಳಿಕ ಕುಟುಂಬದ ಸದಸ್ಯರೆಲ್ಲ ಒಟ್ಟಿಗೆ ಕುಳಿತು ಅಳಿಟ್ಟು ಉಂಡೆ, ಕಡ್ಲಿ ಉಂಡೆ, ಗುಳಿಗೆ ಉಂಡೆ, ಶೇಂಗಾ ಉಂಡೆ, ಎಳ್ಳುಂಡೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ತಿಂಡಿಗಳನ್ನು ಸವಿದರು.

ಜೋಕಾಲಿಯಲ್ಲಿ ಜೀಕಿದ ಮಕ್ಕಳು; ಬೊಲ್‌ಬುಗುರಿಯಲ್ಲಿ ಸಂಭ್ರಮ

ಸಂಜೆಯಾಗುತ್ತಿದ್ದಂತೆ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಾಯಿತು. ಕೆಲವರು ಹಂಗನೂಲು ಕಟ್ಟಿಕೊಂಡರೆ, ಮಹಿಳೆಯರು ಮತ್ತು ಮಕ್ಕಳು ಜೋಕಾಲಿಯತ್ತ ಹೆಜ್ಜೆ ಹಾಕಿದರು. ಬೇವಿನ ಮರಕ್ಕೆ ಕಟ್ಟಿದ್ದ ಜೋಕಾಲಿಯಲ್ಲಿ ಹದಿಹರೆಯದವರು ಜೀಕಿ ಸಂಭ್ರಮಿಸಿದರು.

ಮನೆಗಳಲ್ಲಿ ಕಟ್ಟಿದ್ದ ಜೋಕಾಲಿಯಲ್ಲಿ ಪುಟ್ಟ ಮಕ್ಕಳು ಆಟವಾಡಿದರು. ಹಿರಿಯರು ಒಣ ಕೊಬ್ಬರಿ ಬಟ್ಟಲಿಗೆ ದಾರ ಕಟ್ಟಿ ನೀಡಿದ ಬಳಿಕ ಮಕ್ಕಳು ‘ಬೊಲ್‌ಬುಗುರಿ’ ಆಡುತ್ತಾ ಓಡಾಡಿದ್ದು ಹಬ್ಬದ ಸಡಗರಕ್ಕೆ ಮತ್ತಷ್ಟು ಮೆರುಗು ನೀಡಿತು.

ಹಳ್ಳಿ ಬದುಕಿನ ಜೀವಂತ ಕೊಂಡಿ

ಮೊಬೈಲ್, ಟಿವಿ ಹಾಗೂ ಆಧುನಿಕ ಜೀವನಶೈಲಿಯ ಪ್ರಭಾವದಿಂದ ಗ್ರಾಮೀಣ ಬದುಕಿನ ಹಲವು ಆಚರಣೆಗಳು ನಿಧಾನವಾಗಿ ಮರೆಯಾಗುತ್ತಿರುವ ಕಾಲದಲ್ಲೂ ಜಕ್ಕಲಿಯಲ್ಲಿ ನಾಗರ ಪಂಚಮಿಯನ್ನು ಸಾಂಪ್ರದಾಯಿಕ ಸೊಗಡಿನೊಂದಿಗೆ ಆಚರಿಸಿರುವುದು ಗಮನ ಸೆಳೆಯಿತು.

ನಾಗಪ್ಪನಿಗೆ ಹಾಲಿನ ಧಾರೆ ಅರ್ಪಿಸಿದ ಮಹಿಳೆಯರು, ಕುಟುಂಬದ ಪ್ರತಿಯೊಬ್ಬರ ಹೆಸರನ್ನೂ ನೆನೆದು ‘ಪಾಲು’ ಹಾಕಿದ ಸಂಪ್ರದಾಯ, ಸಹೋದರರಿಗಾಗಿ ಉಪವಾಸ, ಮನೆಯಲ್ಲಿ ಸಿದ್ಧವಾದ ಸಾಂಪ್ರದಾಯಿಕ ತಿಂಡಿಗಳು ಹಾಗೂ ಜೋಕಾಲಿಯಲ್ಲಿ ಜೀಕಿದ ಮಕ್ಕಳು—ಇವೆಲ್ಲವೂ ಸೇರಿ ಜಕ್ಕಲಿಯ ನಾಗರ ಪಂಚಮಿಯನ್ನು ಜೀವಂತ ಗ್ರಾಮೀಣ ಸಂಸ್ಕೃತಿಯ ಪ್ರತಿಬಿಂಬವಾಗಿಸಿತು.

ಹಿರಿಯರು ಆಚರಿಸುವುದನ್ನು ಕಣ್ಣಾರೆ ನೋಡುತ್ತಾ ಮಕ್ಕಳು ಸಂಪ್ರದಾಯಗಳನ್ನು ಕಲಿಯುತ್ತಿರುವುದರಿಂದ ತಲೆತಲಾಂತರದಿಂದ ಬಂದಿರುವ ಹಳ್ಳಿ ಸಂಸ್ಕೃತಿಯ ಕೊಂಡಿ ಇನ್ನೂ ಗಟ್ಟಿಯಾಗಿಯೇ ಉಳಿದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img