HomeGadag News20ರಿಂದ 23 ದಿನಕ್ಕೊಮ್ಮೆ ನೀರು ಪೂರೈಕೆ: ಕಾಂಗ್ರೆಸ್ ಆರೋಪಕ್ಕೆ ಅನಿಲ್ ಮೆಣಸಿನಕಾಯಿ ತಿರುಗೇಟು

20ರಿಂದ 23 ದಿನಕ್ಕೊಮ್ಮೆ ನೀರು ಪೂರೈಕೆ: ಕಾಂಗ್ರೆಸ್ ಆರೋಪಕ್ಕೆ ಅನಿಲ್ ಮೆಣಸಿನಕಾಯಿ ತಿರುಗೇಟು

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಅವಳಿ ನಗರದಲ್ಲಿ 20ರಿಂದ 25 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬಿಡುಗಡೆ ಮಾಡಿರುವ ನಗರಸಭೆಯ ದಾಖಲೆಗಳೇ ಸಾಕ್ಷಿಯಾಗಿವೆ ಎಂದು ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ಹೇಳಿದರು.

ಬುಧವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗಾಗಿ ಮಂಗಳವಾರ ಬಿಜೆಪಿ ನಡೆಸಿದ ಪ್ರತಿಭಟನೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರು ಯಾವ ವಾರ್ಡ್‌ಗೆ ಯಾವ ದಿನ ನೀರು ಪೂರೈಸಲಾಗಿದೆ ಎಂಬ ನಗರಸಭೆಯ ಮಾಹಿತಿಯನ್ನು ಬಿಡುಗಡೆ ಮಾಡಿದ್ದಾರೆ. ಈ ದಾಖಲೆಗಳನ್ನು ಗಮನಿಸಿದರೆ ಹಲವು ವಾರ್ಡ್‌ಗಳಿಗೆ 20ರಿಂದ 23 ದಿನಕ್ಕೊಮ್ಮೆ ನೀರು ಪೂರೈಕೆಯಾಗಿರುವುದು ಸ್ಪಷ್ಟವಾಗುತ್ತದೆ ಎಂದರು.

ಬಿಜೆಪಿ ನೀರಿನ ಸಮಸ್ಯೆ ಕುರಿತು ರಾಜಕಾರಣ ಮಾಡುತ್ತಿದೆ ಹಾಗೂ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಕಾಂಗ್ರೆಸ್ ಕಾರ್ಯಕರ್ತರೇ ಬಿಡುಗಡೆ ಮಾಡಿರುವ ದಾಖಲೆಗಳಲ್ಲಿ ಕೆಲವು ಬಡಾವಣೆಗಳಿಗೆ 20, 21, 22, 23 ಹಾಗೂ 24 ದಿನಗಳ ಅಂತರದಲ್ಲಿ ನೀರು ಪೂರೈಕೆಯಾಗಿರುವ ಮಾಹಿತಿ ದಾಖಲಾಗಿದೆ. ಹೀಗಿರುವಾಗ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಹೇಗೆ ಹೇಳುತ್ತಾರೆ ಎಂದು ಅನಿಲ್ ಮೆಣಸಿನಕಾಯಿ ಪ್ರಶ್ನಿಸಿದರು.

     ಪೈಪ್‌ಲೈನ್ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹ

2017ರಲ್ಲಿ 24×7 ಕುಡಿಯುವ ನೀರು ಯೋಜನೆ ಆರಂಭವಾಯಿತು. ಅಂದಿನಿಂದ ಈವರೆಗೆ ಪೈಪ್‌ಲೈನ್‌ ಪದೇಪದೆ ಒಡೆಯುತ್ತಲೇ ಇದೆ. ಕಾಮಗಾರಿಯ ಗುಣಮಟ್ಟ, ಗುತ್ತಿಗೆದಾರರ ಹೊಣೆಗಾರಿಕೆ ಹಾಗೂ ವಾರಂಟಿ ಅವಧಿಯನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪದೇಪದೆ ದುರಸ್ತಿ ಮಾಡುವ ಬದಲು ಅಗತ್ಯವಿರುವ ಕಡೆ ಪೈಪ್‌ಲೈನ್ ಬದಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಈ ಕುರಿತು ಹಲವು ಬಾರಿ ಒತ್ತಾಯಿಸಿದರೂ ಶಾಸಕರು ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.

     ₹55 ಕೋಟಿ ಅನುದಾನ ಸದ್ಬಳಕೆಯಾಗಲಿ

ಸಂಸದ ಬಸವರಾಜ ಬೊಮ್ಮಾಯಿ ಅವರು ಪೈಪ್‌ಲೈನ್ ಬದಲಾವಣೆಗೆ ಅಮೃತ ಯೋಜನೆಯಡಿ ₹55 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಈ ಹಣವನ್ನು ಕೇವಲ ತಾತ್ಕಾಲಿಕ ದುರಸ್ತಿಗೆ ಬಳಸದೆ, ಅಗತ್ಯವಿರುವ ಕಡೆ ಪೈಪ್‌ಲೈನ್ ಬದಲಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಪೈಪ್‌ಲೈನ್ ಸಂಪೂರ್ಣ ಬದಲಾವಣೆಗೆ ಇನ್ನಷ್ಟು ಅನುದಾನ ಅಗತ್ಯವಿದ್ದರೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಲು ಬಿಜೆಪಿ ಸಹಕಾರ ನೀಡಲಿದೆ ಎಂದರು.

           ಹುಲಕೋಟಿಗೆ ಪಾದಯಾತ್ರೆ

ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡಲಾಗಿದೆ. ಈ ಅವಧಿಯಲ್ಲಿ ಸಮಸ್ಯೆ ಬಗೆಹರಿಸದಿದ್ದರೆ ಮುಂದಿನ ಹಂತದಲ್ಲಿ ಹುಲಕೋಟಿವರೆಗೆ ಪಾದಯಾತ್ರೆ ನಡೆಸಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಅನಿಲ್ ಮೆಣಸಿನಕಾಯಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ದು ಪಲ್ಲೇದ, ವಸಂತ ಪಡಗದ, ಶರಣಪ್ಪ ಚಿಂಚಲಿ, ಅಶೋಕ ಕುಡತಿನಿ, ಪರಮೇಶ ನಾಯಕ್, ದೇವೇಂದ್ರ ಹೂಗಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕುಡಿಯುವ ನೀರಿನ ವಿಷಯದಲ್ಲಿ ರಾಜಕಾರಣ ಮಾಡುತ್ತಿಲ್ಲ. ಅದಕ್ಕೆ ಇನ್ನು ಎರಡು ವರ್ಷ ಸಮಯವಿದೆ. ನಮ್ಮ ಹೋರಾಟ ಜನರಿಗೆ ನೀರು ಸಿಗಬೇಕು ಎಂಬುದಷ್ಟೇ. ಶಾಸಕರು, ಅಧಿಕಾರಿಗಳು ನಮ್ಮೊಂದಿಗೆ ಒಂದು ದಿನ ನಗರ ಸುತ್ತಾಡಿ ವಾಸ್ತವ ಪರಿಸ್ಥಿತಿ ಪರಿಶೀಲಿಸಲಿ. ಸಮಸ್ಯೆ ಪರಿಹರಿಸಲಿ. ನೀರಿನ ಸಮಸ್ಯೆ ಪರಿಹಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು.

-ಅನಿಲ್ ಮೆಣಸಿನಕಾಯಿ, ಬಿಜೆಪಿ ಮುಖಂಡ

 

       ‘ಸುಳ್ಳು ವರ್ಸಸ್ ಸತ್ಯ’ ಪೋಸ್ಟ್‌ಗೆ ತಿರುಗೇಟು

‘ಸುಳ್ಳು ವರ್ಸಸ್ ಸತ್ಯ’ ಎಂಬ ಶೀರ್ಷಿಕೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್ ಕಾರ್ಯಕರ್ತರು ಮೊದಲು ತಾವು ಬಿಡುಗಡೆ ಮಾಡಿರುವ ದಾಖಲೆಗಳನ್ನು ಪರಿಶೀಲಿಸಬೇಕಿತ್ತು. ಜನರಿಗೆ ಮೂರು ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ ಎಂಬುದನ್ನು ತೋರಿಸಲು ಮುಂದಾಗಿ, 20ಕ್ಕೂ ಹೆಚ್ಚು ದಿನಗಳ ಅಂತರದಲ್ಲಿ ನೀರು ಪೂರೈಕೆಯಾಗಿರುವ ಮಾಹಿತಿಯನ್ನೇ ಬಹಿರಂಗಪಡಿಸಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ವ್ಯಂಗ್ಯವಾಡಿದರು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img