ಬೆಂಗಳೂರು: ವಿದ್ಯಾರ್ಥಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೀಪಾ ಕಾಂಪ್ಲೆಕ್ಸ್ ಬಳಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು 19 ವರ್ಷದ ಯೋಗೀಶ್ ಎಂದು ಗುರುತಿಸಲಾಗಿದೆ. ಯೋಗೀಶ್ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದ ಯೋಗೀಶ್, ಉತ್ತಮ ಡಾನ್ಸರ್ ಕೂಡ ಆಗಿದ್ದ ಎನ್ನಲಾಗಿದೆ.
ಇಂದು ಎಂದಿನಂತೆ ಯೋಗೀಶ್ ಕಾಲೇಜಿಗೆ ಬಂದಿದ್ದ. ಮಧ್ಯಾಹ್ನ ಸುಮಾರು 2 ಗಂಟೆ ವೇಳೆಗೆ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಯೋಗೀಶ್‌ಗೆ ಕರೆ ಮಾಡಿ, ಹೊರಗೆ ಬಂದು ಮಾತನಾಡುವಂತೆ ತಿಳಿಸಿದ್ದಾನೆ.
ಅದರಂತೆ ಕಾಲೇಜಿನ ಹಿಂಭಾಗದಲ್ಲಿರುವ ಜಿಮ್‌ವೊಂದರ ಬಳಿ ಯೋಗೀಶ್ ಬಂದಿದ್ದಾನೆ. ಈ ವೇಳೆ ಆತನೊಂದಿಗೆ ಮಾತನಾಡಲು ಏಳೆಂಟು ಮಂದಿ ಅಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಬಳಿಕ ಯೋಗೀಶ್ ಸ್ನೇಹಿತರು ಹಾಗೂ ಮತ್ತೊಂದು ಗುಂಪಿನ ನಡುವೆ ಯಾವುದೋ ವಿಚಾರಕ್ಕೆ ಏಕಾಏಕಿ ಗಲಾಟೆ ನಡೆದಿದೆ.
ಗಲಾಟೆ ನಡೆಯುತ್ತಿದ್ದ ವೇಳೆ ಗುಂಪಿನಲ್ಲಿದ್ದ ಓರ್ವ ವಿದ್ಯಾರ್ಥಿ ಏಕಾಏಕಿ ಚಾಕು ತೆಗೆದು ಯೋಗೀಶ್‌ನ ಎದೆಗೆ ಇರಿದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಯೋಗೀಶ್‌ನನ್ನು ಆತನ ಸ್ನೇಹಿತರು ಬೈಕ್‌ನಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯೋಗೀಶ್ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ನಿಖರ ಕಾರಣವೇನು ಹಾಗೂ ಕೊಲೆಯಲ್ಲಿ ಭಾಗಿಯಾಗಿರುವವರು ಯಾರು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



