Home Blog Page 2

ಗ್ರಾಮ ಪಂಚಾಯಿತಿ ಮೇಲೆ ಹರಿದ ರಾಷ್ಟ್ರಧ್ವಜ ಹಾರಾಟ: ಗ್ರಾಮಸ್ಥರ ಆಕ್ರೋಶ

ಗದಗ: ಹರಿದ ರಾಷ್ಟ್ರಧ್ವಜವನ್ನು ಗ್ರಾಮ ಪಂಚಾಯಿತಿ ಕಚೇರಿ ಮೇಲೆ ಹಾರಿಸಿದ ಘಟನೆ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರು ಗ್ರಾಮದಲ್ಲಿ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಹಾಗೂ ರೈತ ಸಂಘದ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿದ ರಾಷ್ಟ್ರಧ್ವಜ ಹಾರಿಸುವ ಮೂಲಕ ರಾಷ್ಟ್ರಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಈ ನಿರ್ಲಕ್ಷ್ಯಕ್ಕೆ ಕಾರಣರಾದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಘಟನೆ ತಿಳಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಕಚೇರಿ ಎದುರು ಜಮಾಯಿಸಿದ ರೈತ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಪಿಡಿಒ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು. ರಾಷ್ಟ್ರಧ್ವಜದಂತಹ ಗೌರವದ ಸಂಕೇತದ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರಧ್ವಜಕ್ಕೆ ಅವಮಾನವಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಾವೇರಿಯಲ್ಲಿ ಮಳೆಗಾಗಿ ಮೋಡ ಬಿತ್ತನೆ: ಮಂಗಳವಾರದಿಂದ ಕ್ಲೌಡ್ ಸೀಡಿಂಗ್ ಆರಂಭ!

ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ರೈತರ ನೆರವಿಗೆ ಜಿಲ್ಲೆಯ ಶಾಸಕರು ಮುಂದಾಗಿದ್ದಾರೆ.

ಮಂಗಳವಾರದಿಂದ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ಆರಂಭಿಸಲು ಸಿದ್ಧತೆ ನಡೆಸಲಾಗಿದೆ.

ಹಾವೇರಿ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಎಂಟು ತಾಲೂಕುಗಳ ಬಹುತೇಕ ರೈತರು ಕೃಷಿಯನ್ನೇ ಅವಲಂಬಿಸಿದ್ದಾರೆ. ಆದರೆ ಈ ಬಾರಿ ಮುಂಗಾರು ಆರಂಭದಲ್ಲಿ ಒಂದೇ ಬಾರಿ ಮಳೆಯಾಗಿದ್ದು, ನಂತರ ಮಳೆ ಕೈಕೊಟ್ಟಿದೆ. ಪರಿಣಾಮ ಹಲವು ಕಡೆ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆಯದೆ ಉಳಿದರೆ, ಕೆಲವೆಡೆ ಮೊಳಕೆಯೊಡೆದ ಬೆಳೆಗಳು ತೇವಾಂಶದ ಕೊರತೆಯಿಂದ ಒಣಗುತ್ತಿವೆ.

ಬ್ಯಾಡಗಿ ಹಾಗೂ ಹಾನಗಲ್ ಸೇರಿದಂತೆ ಹಲವು ಭಾಗಗಳಲ್ಲಿ ರೈತರು ಬಿತ್ತನೆ ಮಾಡಿದ ಬೆಳೆ ನಾಶವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಮೋಡ ಬಿತ್ತನೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಮಳೆಗಾಗಿ ದೇವರ ಮೊರೆ ಹೋಗಿ ವಿಶೇಷ ಪೂಜೆ, ಕಪ್ಪೆ ಮದುವೆ ಸೇರಿದಂತೆ ವಿವಿಧ ಆಚರಣೆಗಳನ್ನು ಸಹ ರೈತರು ನಡೆಸಿದ್ದಾರೆ.

ರೈತರ ಸಂಕಷ್ಟವನ್ನು ಮನಗಂಡು ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ನೇತೃತ್ವದಲ್ಲಿ ಮಂಗಳವಾರದಿಂದ ಮೋಡ ಬಿತ್ತನೆ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಈಗಾಗಲೇ ಸಂಬಂಧಿತ ಇಲಾಖೆಯಿಂದ ಅನುಮತಿ ದೊರೆತಿದ್ದು, ಜಿಲ್ಲೆಯ ಆರು ಮಂದಿ ಶಾಸಕರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ಪ್ರಕಾಶ್ ಕೋಳಿವಾಡ ಅವರ ಸ್ವಂತ ವಿಮಾನದ ಮೂಲಕವೇ ಮೋಡ ಬಿತ್ತನೆ ನಡೆಸಲಾಗುತ್ತದೆ. ಈ ಕಾರ್ಯಕ್ಕೆ ಪ್ರತಿ ಗಂಟೆಗೆ ಸುಮಾರು ₹15 ಲಕ್ಷ ವೆಚ್ಚವಾಗಲಿದ್ದು, ಅದನ್ನು ಜಿಲ್ಲೆಯ ಆರು ಕ್ಷೇತ್ರಗಳ ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ಭರಿಸಲು ಮುಂದಾಗಿದ್ದಾರೆ.

ಈ ಹಿಂದೆ ಬರ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಕೂಡ ಪ್ರಕಾಶ್ ಕೋಳಿವಾಡ ಅವರು ಅನುಮತಿ ಪಡೆದು ಮೋಡ ಬಿತ್ತನೆ ನಡೆಸಿದ್ದರು.

 

ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯಬಾರದು: ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್

ವಿಜಯಸಾಕ್ಷಿ ಸುದ್ದಿ, ಗದಗ: ಅರ್ಹ ಮತದಾರರು ಯಾರೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ನಿಖರ ಮತ್ತು ದೋಷರಹಿತ ಮತದಾರರ ಪಟ್ಟಿಯೇ ಬಲಿಷ್ಠ ಪ್ರಜಾಪ್ರಭುತ್ವದ ಅಡಿಪಾಯ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಹಾಗೂ ತಾಲೂಕು ಸ್ವೀಪ್ ಸಮಿತಿಗಳ ಸಹಯೋಗದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026 ಅಂಗವಾಗಿ ಶುಕ್ರವಾರ ನಗರದ ಮುನ್ಸಿಪಲ್ ಹೈಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ಇಪ್ಪತ್ತು ವರ್ಷಗಳಿಗೊಮ್ಮೆ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಷ್ಕರಿಸುವ ಪ್ರಕ್ರಿಯೆ ನಡೆಯುತ್ತದೆ. ಈ ಬಾರಿ 2026ರ ವಿಶೇಷ ಪರಿಷ್ಕರಣೆಯಡಿ ಈಗಿರುವ ಮತದಾರರ ಮಾಹಿತಿಯನ್ನು ದೃಢೀಕರಿಸುವ ಜೊತೆಗೆ ಹೊಸ ಅರ್ಹ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಾರ್ವಜನಿಕರು ಅಗತ್ಯ ದಾಖಲೆಗಳು ಹಾಗೂ ಮಾಹಿತಿಯನ್ನು ನೀಡಿ ಸಹಕರಿಸಬೇಕು. ಯುವಜನರು ತಮ್ಮ ಕುಟುಂಬದ ಸದಸ್ಯರು ಹಾಗೂ ಪರಿಚಿತರ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂಬುದನ್ನು ಪರಿಶೀಲಿಸಿ, ಅಗತ್ಯ ನಮೂನೆಗಳನ್ನು ಭರ್ತಿ ಮಾಡಿ ಪ್ರಕ್ರಿಯೆ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಹಾಗೂ ಜಿಲ್ಲಾ ನೋಡಲ್ ಅಧಿಕಾರಿ ಎ.ಎ. ಕಂಬಾಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಚುನಾವಣೆಗಳ ಯಶಸ್ಸಿಗೆ ನಿಖರ ಮತದಾರರ ಪಟ್ಟಿಯೇ ಮೂಲಾಧಾರವಾಗಿದೆ. ಈ ಬಾರಿ ಸಮಗ್ರ ಪರಿಶೀಲನೆಯ ಮೂಲಕ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮುನ್ಸಿಪಲ್ ಹೈಸ್ಕೂಲ್‌ನಿಂದ ಆರಂಭವಾದ ಜಾಗೃತಿ ಜಾಥಾ ಗಾಂಧಿ ಸರ್ಕಲ್, ಮಹೇಂದ್ರಕರ ಸರ್ಕಲ್, ಟಾಂಗಾ ಕೂಟ, ಬಸವೇಶ್ವರ ಸರ್ಕಲ್, ಜೋಡು ಮಾರುತಿ ರಸ್ತೆ ಮೂಲಕ ಮುಳಗುಂದ ನಾಕಾದವರೆಗೆ ಸಂಚರಿಸಿತು. ಎನ್‌ಸಿಸಿ, ಸ್ಕೌಟ್ಸ್-ಗೈಡ್ಸ್, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಸಾರ್ವಜನಿಕರು ಮತದಾರರ ಜಾಗೃತಿ ಘೋಷಣೆಗಳನ್ನು ಕೂಗಿ ಗಮನ ಸೆಳೆದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಡಿಡಿಪಿಐ ಆರ್.ಎಸ್. ಬುರಡಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

“ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು. ಸಾರ್ವಜನಿಕರ ಸಹಕಾರದಿಂದ ಮಾತ್ರ ದೋಷರಹಿತ ಹಾಗೂ ನಿಖರ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಸಾಧ್ಯ.”

– ಸಿ.ಎನ್. ಶ್ರೀಧರ್, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು

ಸಹಕಾರವೇ ರೈತರ ಸಮೃದ್ಧಿಯ ಹೆಬ್ಬಾಗಿಲು: ಅಶೋಕಪ್ಪ ಯಾವಗಲ್

ವಿಜಯಸಾಕ್ಷಿ ಸುದ್ದಿ, ಗದಗ: ಸಹಕಾರ ಸಂಘಗಳು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿದ್ದು, ರೈತರ ಆದಾಯ, ಸ್ವಾವಲಂಬನೆ ಹಾಗೂ ಉದ್ಯೋಗ ವೃದ್ಧಿಗೆ ಸಹಕಾರ ಚಳವಳಿ ಮತ್ತಷ್ಟು ಬಲಗೊಳ್ಳಬೇಕಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಪ್ಪ ಯಾವಗಲ್ ಹೇಳಿದರು.

ಜಕ್ಕಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಗದಗ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ಧಾರವಾಡ ಹಾಲು ಒಕ್ಕೂಟ ಹಾಗೂ ಸ್ಥಳೀಯ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕೇಂದ್ರ ಸಹಕಾರ ಸಚಿವಾಲಯದ ಐದು ವರ್ಷಗಳ ಸಂಭ್ರಮದ ಅಂಗವಾಗಿ ನಡೆದ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕೆಸಿಸಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಸಿ.ಕೆ. ಮಾಳಶೆಟ್ಟಿ ಬ್ಯಾಂಕ್‌ನ ಕೃಷಿ ಸಾಲ, ಉಳಿತಾಯ ಖಾತೆ, ಠೇವಣಿ ಹಾಗೂ ವಿವಿಧ ಸಾಲ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ರೋಣ ತಾಲೂಕು ವೈದ್ಯಾಧಿಕಾರಿ ಡಾ. ಪಿ.ಎಂ. ಕಮತಿ ಮತ್ತು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ಕೆ.ವಿ. ಹಾದಿಮನಿ ಆರೋಗ್ಯಕರ ಜೀವನಶೈಲಿ, ಹೃದಯಾಘಾತ ತಡೆ ಹಾಗೂ ಪೌಷ್ಟಿಕ ಆಹಾರದ ಮಹತ್ವದ ಕುರಿತು ಅರಿವು ಮೂಡಿಸಿದರು.

ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ವಿ.ಎಸ್. ಪಾಟೀಲ ಬ್ಯಾಂಕಿಂಗ್ ಸೇವೆಗಳು ಹಾಗೂ ಡಿಜಿಟಲ್ ಸೌಲಭ್ಯಗಳನ್ನು ವಿವರಿಸಿದರೆ, ಧಾರವಾಡ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಜಿ.ಸಿ. ಸಾಲೋಟಿಮಠ ಹಾಲು ಉತ್ಪಾದಕರಿಗೆ ದೊರೆಯುವ ಪ್ರೋತ್ಸಾಹಧನ, ವಿಮೆ ಹಾಗೂ ಅನುದಾನಿತ ಯೋಜನೆಗಳ ಮಾಹಿತಿ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಶಿವನಾಗಪ್ಪ ಜಂಬೂನಾಥ ದೊಡ್ಡಮೇಟಿ, ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ಕಲ್ಪಿಸಿ ಸಹಕಾರ ಸಂಘಗಳನ್ನು ಮತ್ತಷ್ಟು ಬಲಪಡಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಸೇರಿದಂತೆ ವಿವಿಧ ಸಹಕಾರ ಸಂಘಗಳ ಪದಾಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು, ರೈತರು ಹಾಗೂ ಸಾರ್ವಜನಿಕರು ಪಾಲ್ಗೊಂಡರು.

“ಸಹಕಾರದಿಂದ ಸಮೃದ್ಧಿ ಎಂಬ ಧ್ಯೇಯ ಸಾಕಾರಗೊಳ್ಳಬೇಕಾದರೆ ರೈತರು ಮತ್ತು ಸಹಕಾರ ಸಂಘಗಳು ಪರಸ್ಪರ ಕೈಜೋಡಿಸಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಬೇಕು.”

ಅಶೋಕಪ್ಪ ಯಾವಗಲ್

ಆಶ್ರಮದ ಪಾವಿತ್ರ್ಯಕ್ಕೆ ಧಕ್ಕೆ ಬಂದರೆ ಸುಮ್ಮನಿರುವುದಿಲ್ಲ: ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು

ವಿಜಯಸಾಕ್ಷಿ ಸುದ್ದಿ, ಗದಗ: ವೀರೇಶ್ವರ ಪುಣ್ಯಾಶ್ರಮವು ತ್ರಿಕಾಲಜ್ಞಾನಿ ಹಾನಗಲ್ ಕುಮಾರೇಶ್ವರರ ಕನಸಿನ ಕೂಸಾಗಿದ್ದು, ಅದರ ಪಾವಿತ್ರ್ಯ, ಪರಂಪರೆ ಮತ್ತು ಮೂಲ ತತ್ವಗಳಿಗೆ ಯಾವುದೇ ಧಕ್ಕೆ ಬರದಂತೆ ಎಲ್ಲರೂ ಜಾಗರೂಕರಾಗಬೇಕು ಎಂದು ಶಿರಹಟ್ಟಿಯ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ಹೇಳಿದರು.

ನಗರದ ವೀರೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಉಭಯ ಶ್ರೀಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಕೀರ್ತನ ಸಮ್ಮೇಳನ ಹಾಗೂ ಅಂಧರ ಗೋಷ್ಠಿಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಆಶ್ರಮವು ಎಲ್ಲರಿಗೂ ತಾಯಿಯಂತಿದ್ದು, ಅದರ ಮೇಲೆ ಯಾರೇ ಕಣ್ಣು ಹಾಕಿದರೂ ಸಹಿಸುವ ಪ್ರಶ್ನೆಯೇ ಇಲ್ಲ. ಆಶ್ರಮದ ರಕ್ಷಣೆ ಮತ್ತು ಪಾವಿತ್ರ್ಯ ಕಾಪಾಡುವುದು ಪ್ರತಿಯೊಬ್ಬ ಭಕ್ತನ ಜವಾಬ್ದಾರಿ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ರಾಜ್ಯದ ಅನೇಕ ಧಾರ್ಮಿಕ ಸಂಸ್ಥೆಗಳು ಮತ್ತು ಗೌರವಾನ್ವಿತ ಸ್ಥಾನಗಳು ವಿವಾದಕ್ಕೆ ಒಳಗಾಗುತ್ತಿರುವುದು ವಿಷಾದನೀಯ. ಆದರೆ ಸತ್ಯ ಎಲ್ಲರಿಗೂ ಗೊತ್ತಿದ್ದರೂ ಪ್ರತಿಕ್ರಿಯಿಸುವ ಸಮಯ ಇನ್ನೂ ಬಂದಿಲ್ಲ. ಆಶ್ರಮದ ಕಲಾವಿದರು, ಭಕ್ತರು ಹಾಗೂ ಆಡಳಿತ ಮಂಡಳಿ ತಾಳ್ಮೆ ಕಾಪಾಡಿಕೊಂಡರೆ ಎಲ್ಲ ಸಮಸ್ಯೆಗಳಿಗೂ ಸೂಕ್ತ ಪರಿಹಾರ ಸಿಗಲಿದೆ ಎಂದು ಹೇಳಿದರು.

ಯಾರಾದರೂ ಆಶ್ರಮದ ಸಮಸ್ಯೆ ಬಗೆಹರಿಸುವ ನೆಪದಲ್ಲಿ ಪ್ರವೇಶಿಸಲು ಯತ್ನಿಸಿದರೆ ಎಚ್ಚರಿಕೆಯಿಂದಿರಬೇಕು. ಕಾಣದ ಕೈಗಳು ಕೆಲವೊಮ್ಮೆ ಧಾರ್ಮಿಕ ಸಂಸ್ಥೆಗಳನ್ನೇ ಗುರಿಯಾಗಿಸುತ್ತವೆ. ಪುಣ್ಯಕ್ಷೇತ್ರದೊಳಗೆ ಪ್ರವೇಶಿಸುವಾಗ ಪಾದರಕ್ಷೆಗಳಷ್ಟೇ ಅಲ್ಲ, ಜಾತಿ ಮತ್ತು ರಾಜಕಾರಣವನ್ನೂ ಹೊರಗಿಟ್ಟು ಬರಬೇಕು ಎಂದು ಕಿವಿಮಾತು ಹೇಳಿದರು.

ಪಂಚಾಕ್ಷರಿ ಗವಾಯಿಗಳು ಮತ್ತು ಪುಟ್ಟರಾಜ ಗವಾಯಿಗಳು ರಾಜಕಾರಣ ಹಾಗೂ ಜಾತೀಯತೆಯಿಂದ ದೂರವಿದ್ದು ಸಂಗೀತ, ಸಾಹಿತ್ಯ, ಕಲೆ ಮತ್ತು ಸೇವೆಯ ಮೂಲಕ ಆಶ್ರಮವನ್ನು ಬೆಳೆಸಿದರು. ಆ ಪರಂಪರೆಯೇ ಮುಂದುವರಿಯಬೇಕು. ಆಶ್ರಮದಲ್ಲಿ ಕಲಾವಿದರು, ಸಂಗೀತಗಾರರು, ಪ್ರವಚನಕಾರರು ಹಾಗೂ ಸಾಹಿತ್ಯ ಸೇವಕರನ್ನು ರೂಪಿಸುವುದೇ ಮುಖ್ಯ ಉದ್ದೇಶವಾಗಿದ್ದು, ಇಲ್ಲಿ ಯಾವುದೇ ರೀತಿಯ ರಾಜಕೀಯ ಅಥವಾ ಜಾತಿ ಪ್ರಭಾವಕ್ಕೆ ಅವಕಾಶ ಇರಬಾರದು ಎಂದು ಹೇಳಿದರು.

ಆಶ್ರಮದ ರಕ್ಷಣೆಗೆ ಎಲ್ಲರೂ ಒಂದಾಗಬೇಕು. ಇಲ್ಲಿ ವ್ಯಕ್ತಿಗಳಿಗಿಂತ ವ್ಯವಸ್ಥೆ, ಪರಂಪರೆ ಮತ್ತು ಮೌಲ್ಯಗಳು ಮುಖ್ಯ. ಕಾಲ ಬದಲಾದರೂ ಆಶ್ರಮದ ಮೂಲ ಸ್ವರೂಪ ಬದಲಾಗಬಾರದು. ಮಾಧ್ಯಮಗಳ ಮುಂದೆ ಅನಗತ್ಯ ಹೇಳಿಕೆಗಳನ್ನು ನೀಡುವುದನ್ನು ತಪ್ಪಿಸಿ, ತಾಳ್ಮೆಯಿಂದ ನಡೆದುಕೊಳ್ಳುವುದು ಒಳಿತು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದುಗಿನ ಶಿವಾನಂದ ಬ್ರಹ್ಮಮಠದ ಜಗದ್ಗುರು ಅಭಿನವ ಶಿವಾನಂದ ಮಹಾಸ್ವಾಮಿಗಳು ವಹಿಸಿದ್ದರು. ಯಲಬುರ್ಗಾದ ಬಸವಲಿಂಗೇಶ್ವರ ಶಿವಾಚಾರ್ಯರು, ಗುಳೇದಗುಡ್ಡದ ಅಭಿನವ ಒಪ್ಪತ್ತೇಶ್ವರ ಮಹಾಸ್ವಾಮಿಗಳು, ಅಡ್ನೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯರು, ಅರಳಿಹಳ್ಳಿಯ ಗವಿಸಿದ್ದೇಶ್ವರ ತಾತನವರು, ಜಿಗೇರಿಯ ಗುರುಸಿದ್ದೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು.

ಈ ಸಂದರ್ಭದಲ್ಲಿ ಅರಳಹಳ್ಳಿ ಬೃಹನ್ಮಠದ ಶರಣಬಸವಯ್ಯ ತಾತನವರ ‘ಲೀಲಾಮೃತ ಪುರಾಣ’ ಹಾಗೂ ‘ವಿಶ್ವಯೋಗಿ ವೇಮ ಮತ್ತು ಮಹಾಸಾಧ್ವಿ ಬದುಕು-ಚಿಂತನೆ’ ಗ್ರಂಥಗಳನ್ನು ಜಗದ್ಗುರುಗಳ ಸಾನ್ನಿಧ್ಯದಲ್ಲಿ ಲೋಕಾರ್ಪಣೆ ಮಾಡಲಾಯಿತು. ಬಳಿಕ ಪಂ. ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘದ ಕಲಾವಿದರು ‘ಬಂಜೆ ತೊಟ್ಟಿಲು’ ಸಾಮಾಜಿಕ ನಾಟಕ ಪ್ರದರ್ಶಿಸಿದರು.

“ವೀರೇಶ್ವರ ಪುಣ್ಯಾಶ್ರಮದೊಳಗೆ ಜಾತಿ, ರಾಜಕಾರಣ ಹಾಗೂ ಸ್ವಾರ್ಥದ ಪ್ರವೇಶಕ್ಕೆ ಅವಕಾಶ ಇರಬಾರದು. ಪರಂಪರೆ ಮತ್ತು ಪಾವಿತ್ರ್ಯ ಉಳಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ.”

ಜ. ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು

ಮುಂಗಾರು ಕೊರತೆಯಿಂದ ತುಂಗಭದ್ರಾ ಡ್ಯಾಂ ಖಾಲಿ ಖಾಲಿ, ರೈತರ ಬೆಳೆಗಳಿಗಿಲ್ಲ ನೀರು!

ಕೊಪ್ಪಳ: ಮಳೆ ಕೊರತೆಯಿಂದ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಕುಸಿದಿದ್ದು, ಮುಂಗಾರು ಬೆಳೆಗಳಿಗೆ ಎಡ ಮತ್ತು ಬಲದಂಡೆ ನಾಲೆಗಳ ಮೂಲಕ ನೀರು ಹರಿಸಲು ಸಾಧ್ಯವಿಲ್ಲ ಎಂದು ಕರ್ನಾಟಕ ನೀರಾವರಿ ನಿಗಮ ತಿಳಿಸಿದೆ.

ಸರ್ಕಾರದ ನಿರ್ದೇಶನದಂತೆ ಸದ್ಯ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಸಹಕರಿಸುವಂತೆ ನೀರಾವರಿ ನಿಗಮ ಮನವಿ ಮಾಡಿದೆ.

ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗಿ ತುಂಗಭದ್ರಾ ಜಲಾಶಯ ಭರ್ತಿಯಾದರೆ, ಕೃಷಿ ನೀರು ಬಿಡುಗಡೆ ಮಾಡುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೀರಾವರಿ ನೀರು ಸಿಗದ ಹಿನ್ನೆಲೆಯಲ್ಲಿ ಮುಂಗಾರು ಬಿತ್ತನೆ ಮಾಡಿರುವ ಹಾಗೂ ಬಿತ್ತನೆಗೆ ಸಿದ್ಧತೆ ನಡೆಸುತ್ತಿರುವ ರೈತರು ಆತಂಕಕ್ಕೆ ಒಳಗಾಗಿದ್ದು, ಮುಂದಿನ ಕೃಷಿ ಚಟುವಟಿಕೆಗಳ ಬಗ್ಗೆ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ.

ಆನೇಕಲ್ ನಿರ್ಜನ ರಸ್ತೆಯಲ್ಲಿ ಭಯಾನಕ ಘಟನೆ! ಬೈಕ್ ಜೊತೆ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಬೆಂಗಳೂರು: ಆನೇಕಲ್ ತಾಲೂಕಿನ ಸರ್ಜಾಪುರ ಸಮೀಪದ ಬಿಕ್ಕನಹಳ್ಳಿ ರಸ್ತೆಯ ನಿರ್ಜನ ಪ್ರದೇಶದಲ್ಲಿ ಬೈಕ್ ಜೊತೆಗೆ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ.

ಮೃತನನ್ನು ಆಂಧ್ರಪ್ರದೇಶದ ಗುಂಟೂರು ಮೂಲದ 26 ವರ್ಷದ ವಂಶಿ ಕೃಷ್ಣ ಎಂದು ಗುರುತಿಸಲಾಗಿದೆ.

ನಿನ್ನೆ ಸಂಜೆ ಸ್ಥಳೀಯರು ರಸ್ತೆ ಬದಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಬೈಕ್ ಹಾಗೂ ಯುವಕನ ದೇಹ ಸಂಪೂರ್ಣ ಸುಟ್ಟು ಕರಕಲಾಗಿರುವುದು ಕಂಡುಬಂದಿದೆ.

ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ವೆಂಕಟೇಶ್ ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೋಕೋ ತಂಡ ಹಾಗೂ ಶ್ವಾನದಳ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹ ಕಾರ್ಯ ಕೈಗೊಂಡಿದೆ.

ಮೃತ ವಂಶಿ ಕೃಷ್ಣ ಎಲೆಕ್ಟ್ರಾನಿಕ್ ಸಿಟಿಯ ಪಿಜಿಯಲ್ಲಿ ವಾಸವಾಗಿದ್ದು, ಎನ್‌ಟಿಟಿಎಫ್ ಕಾಲೇಜಿನಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದನು. ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದ ಆತ, ಕಳೆದ ಕೆಲವು ವರ್ಷಗಳಿಂದ ಉದ್ಯೋಗದಲ್ಲಿರಲಿಲ್ಲ ಎಂದು ತಿಳಿದುಬಂದಿದೆ.

ಘಟನೆ ದಿನ ಮಧ್ಯಾಹ್ನ ವಂಶಿ ಕೃಷ್ಣ ಪಿಜಿಯಿಂದ ಬೈಕ್‌ನಲ್ಲಿ ಹೊರಟಿದ್ದ. ನಂತರ ಸಂಜೆ ವೇಳೆ ಆತನ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಬಿಕ್ಕನಹಳ್ಳಿ ರಸ್ತೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಬೈಕ್ ನೋಂದಣಿ ಸಂಖ್ಯೆ ಆಧರಿಸಿ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ಗುರುತಿಸಿದ್ದಾರೆ.

ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ದೃಶ್ಯಗಳು, ಮೊಬೈಲ್ ಕರೆ ವಿವರಗಳು ಸೇರಿದಂತೆ ಹಲವು ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಕುಟುಂಬಸ್ಥರು ಇದು ಆತ್ಮಹತ್ಯೆ ಅಲ್ಲ, ಯೋಜಿತ ಕೊಲೆ ಎಂದು ಆರೋಪಿಸಿದ್ದಾರೆ.

ವಿಜಯಪುರದಲ್ಲಿ ಭೀಕರ ಘಟನೆ: ಹೆಂಡತಿಯ ಕತ್ತು ಕೊಯ್ದು ಭೀಕರ ಕೊಲೆ, ಪತಿ ಅರೆಸ್ಟ್

ವಿಜಯನಗರ: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಆಗಸರ ಓಣಿಯಲ್ಲಿ ನಡೆದಿದೆ.

ಪ್ರಭಾವತಿ (50) ಹತ್ಯೆಯಾದ ಮಹಿಳೆ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ರಾಮಮೂರ್ತಿ (55) ಪತ್ನಿಯನ್ನು ಕತ್ತು ಕೊಯ್ದು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಇಂದು ಬೆಳಗಿನ ಜಾವ ಅಥವಾ ರಾತ್ರಿ ವೇಳೆಯಲ್ಲಿ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದ ಬಳಿಕ ಆರೋಪಿ ರಾಮಮೂರ್ತಿ ಮನೆಯಲ್ಲೇ ಇದ್ದಿದ್ದು, ಸ್ಥಳಕ್ಕೆ ಆಗಮಿಸಿದ ಪಟ್ಟಣ ಠಾಣೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಜಾಹ್ನವಿ, ಅಡಿಷನಲ್ ಎಸ್‌ಪಿ ಮಂಜುನಾಥ್ ಹಾಗೂ ಡಿಎಸ್‌ಪಿ ಮುರುಳಿಧರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿ ಪ್ರಕರಣದ ತನಿಖೆ ಆರಂಭಿಸಲಾಗಿದೆ.

ಮೃತದೇಹವನ್ನು ಪೊಲೀಸರು ವಶಕ್ಕೆ ಪಡೆದು ಶವ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ಹೊಸಪೇಟೆ ಪಟ್ಟಣ ಠಾಣೆ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ನಿತ್ಯ ಬೆಳಗ್ಗೆ ಎದ್ದಾಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು?

ಬೆಳಗ್ಗೆ ಎದ್ದ ತಕ್ಷಣ ಟೀ ಅಥವಾ ಕಾಫಿ ಸೇವಿಸುವ ಅಭ್ಯಾಸ ಸಾಮಾನ್ಯವಾಗಿದ್ದರೂ, ಖಾಲಿ ಹೊಟ್ಟೆಯಲ್ಲಿ ಈ ಪಾನೀಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಹಾನಿಕರವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಬದಲಾಗಿ ಬೆಳಗ್ಗೆ ಮೊದಲಿಗೆ ಒಂದು ಗ್ಲಾಸ್ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ದೇಹಕ್ಕೆ ಹೆಚ್ಚಿನ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಲಾಗಿದೆ.

ರಾತ್ರಿಯ ನಿದ್ರೆಯ ಬಳಿಕ ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವುದರಿಂದ ಬೆಳಗ್ಗೆ ನೀರು ಕುಡಿಯುವುದರಿಂದ ದೇಹ ಪುನಶ್ಚೇತನಗೊಳ್ಳುತ್ತದೆ ಹಾಗೂ ಅಂಗಾಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ ಎಂದು ಹೇಳಲಾಗಿದೆ. ಇದರಿಂದ ದೇಹದ ಉಷ್ಣತೆ ನಿಯಂತ್ರಣವಾಗುವುದರ ಜೊತೆಗೆ ಶಕ್ತಿ ಮಟ್ಟವೂ ಹೆಚ್ಚುತ್ತದೆ.

ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಚಯಾಪಚಯ ಕ್ರಿಯೆ (ಮೆಟಾಬಾಲಿಸಂ) ವೇಗಗೊಳ್ಳುತ್ತದೆ, ಇದು ತೂಕ ಇಳಿಕೆಗೆ ಸಹಾಯಕವಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಜೀರ್ಣಕ್ರಿಯೆ ಸುಧಾರಿಸಿ ಪೋಷಕಾಂಶಗಳ ಶೋಷಣೆಯೂ ಉತ್ತಮವಾಗುತ್ತದೆ ಎಂದು ತಿಳಿಸಲಾಗಿದೆ.

ಮಾನಸಿಕ ಆರೋಗ್ಯದ ದೃಷ್ಟಿಯಿಂದಲೂ ಬೆಳಗಿನ ನೀರು ಸೇವನೆ ಒತ್ತಡವನ್ನು ಕಡಿಮೆ ಮಾಡಿ ಮನಸ್ಸನ್ನು ಚುರುಕು ಮಾಡುತ್ತದೆ ಎಂದು ಹೇಳಲಾಗಿದ್ದು, ತಲೆನೋವಿನಂತಹ ಸಮಸ್ಯೆಗಳಿಗೂ ಇದು ಪರಿಹಾರಕಾರಿಯಾಗಿದೆ.

ಚರ್ಮದ ಆರೋಗ್ಯಕ್ಕೂ ಬೆಳಗಿನ ನೀರು ಸೇವನೆ ಸಹಕಾರಿ ಆಗಿದ್ದು, ದೇಹದ ತೇವಾಂಶವನ್ನು ಕಾಪಾಡಿ ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಆರೋಗ್ಯಕರ ದಿನಾರಂಭಕ್ಕಾಗಿ ಬೆಳಗ್ಗೆ ಒಂದು ಗ್ಲಾಸ್ ಉಗುರುಬೆಚ್ಚಗಿನ ನೀರು ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಗೃಹಜ್ಯೋತಿ ಮರು ಪರಿಶೀಲನೆಗೆ ಜಾತಿ ಪ್ರಮಾಣಪತ್ರ ಕಡ್ಡಾಯವಾ? ಜನರ ಗೊಂದಲಕ್ಕೆ ತೆರೆ ಎಳೆದ ಬೆಸ್ಕಾಂ!

ಬೆಂಗಳೂರು: ರಾಜ್ಯದಲ್ಲಿ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಪ್ರಕ್ರಿಯೆ ಆರಂಭವಾಗಿದ್ದು, ಎಲ್ಲಾ ಎಸ್ಕಾಂಗಳ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಮಾಹಿತಿ ಸಂಗ್ರಹದ ವೇಳೆ ಜಾತಿ ಪ್ರಮಾಣಪತ್ರ ಕೇಳಲಾಗುತ್ತಿರುವ ವಿಚಾರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಉಚಿತ ವಿದ್ಯುತ್ ಯೋಜನೆಗೆ ಜಾತಿ ಮಾಹಿತಿ ಏಕೆ ಬೇಕು ಎಂಬ ಪ್ರಶ್ನೆ ಎದ್ದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಈ ಹಿನ್ನೆಲೆ ಬೆಸ್ಕಾಂ ಜಾತಿ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಅಧಿಕೃತವಾಗಿ ಸ್ಪಷ್ಟನೆ ನೀಡಿದೆ. ಪರಿಶೀಲನೆ ವೇಳೆ ಜಾತಿ ಮಾಹಿತಿ ನೀಡಲು ಇಚ್ಛಿಸದ ಗ್ರಾಹಕರಿಗಾಗಿ ‘ಮಾಹಿತಿ ನೀಡಲು ನಿರಾಕರಣೆ’ ಎಂಬ ಆಯ್ಕೆಯನ್ನೂ ಫಾರ್ಮ್‌ನಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದೆ.

ಈ ಆಯ್ಕೆಯನ್ನು ಗುರುತಿಸುವ ಮೂಲಕ ಫಲಾನುಭವಿಗಳು ತಮ್ಮ ಜಾತಿ ವಿವರ ನೀಡದೇಯೇ ಮರು ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಗೃಹ ಜ್ಯೋತಿ ಯೋಜನೆಗೆ ಆಧಾರ್ ನಂಬರ್ ಆಧಾರವಾಗಿ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಈಗ ಆಧಾರ್ ಜೊತೆಗೆ ವೋಟರ್ ಐಡಿ ಹಾಗೂ ಪ್ಯಾನ್ ಕಾರ್ಡ್ ದಾಖಲೆಗಳನ್ನು ಪರಿಶೀಲನೆಗಾಗಿ ಕೇಳಲಾಗುತ್ತಿದೆ ಎಂದು ತಿಳಿದುಬಂದಿದೆ.

ತೀವ್ರ ವಿರೋಧದ ನಡುವೆ ಜಾತಿ ಮಾಹಿತಿ ಕಡ್ಡಾಯವಲ್ಲ ಎಂಬ ಬೆಸ್ಕಾಂ ಸ್ಪಷ್ಟನೆ ಸಾರ್ವಜನಿಕರಿಗೆ ಸಮಾಧಾನ ತಂದಿದೆ.