ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ೮೦ನೇ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ರಾಮದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿ ಮುಂಭಾಗದಲ್ಲಿ ಮಾಜಿ ಸೈನಿಕರಾದ ಈಶಪ್ಪ ತಳಕಲ್ ಹಾಗೂ ಹನುಮಪ್ಪ ಜೋಗಿನ ಧ್ವಜಾರೋಹಣ ನೆರವೇರಿಸಿದರು. ದೇಶಕ್ಕಾಗಿ ಸೇವೆ ಸಲ್ಲಿಸಿದ ಮಾಜಿ ಸೈನಿಕರ ಕೈಯಿಂದ ರಾಷ್ಟ್ರಧ್ವಜ ಹಾರಿಸಲಾಯಿತು.
ಈ ಸಂದರ್ಭದಲ್ಲಿ ಕೆವಿಎಸ್‌ಆರ್ ಕಾಲೇಜಿನ ಮುಖ್ಯೋಪಾಧ್ಯಾಯ ರಾಮಣ್ಣ ಕುರುಡಗಿ ಮಾತನಾಡಿ, ಸ್ವಾತಂತ್ರ್ಯದ ಮಹತ್ವ ಹಾಗೂ ಸಂಗೊಳ್ಳಿ ರಾಯಣ್ಣನ ತ್ಯಾಗ, ಹೋರಾಟದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗದಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಎಚ್. ಬಾಬರಿ ಮಾತನಾಡಿ, ಇಂದಿನ ಯುವಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಧೈರ್ಯ, ದೇಶಭಕ್ತಿ ಹಾಗೂ ತ್ಯಾಗದ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ದೇಶದ ಪ್ರಗತಿಗೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ನಿಜವಾದ ದೇಶಪ್ರೇಮವನ್ನು ತೋರಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಕುಕನೂರು ಪಟ್ಟಣದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ರಾಯಣ್ಣನ ಪುತ್ಥಳಿಗೆ ಹಾಲಿನ ಅಭಿಷೇಕ ನೆರವೇರಿಸಲಾಯಿತು. ಈ ವೇಳೆ ‘ಭಾರತ ಮಾತಾ ಕಿ ಜೈ’, ‘ಸಂಗೊಳ್ಳಿ ರಾಯಣ್ಣ ಕಿ ಜೈ’ ಎಂಬ ಘೋಷಣೆಗಳು ಮೊಳಗಿದವು.
ಬಸವರಾಜ ದೇವರವರ, ಹನುಮಪ್ಪ ಯತ್ನಟ್ಟಿ, ಬಸವರಾಜ ಜೋಗಿನ, ಉದಯ ಗಂಗರಾತ್ರಿ, ಸಿದ್ದಪ್ಪ ಹಾಗಲದ, ಹನುಮಪ್ಪ ಜೋಗಿನ, ರಾಮಣ್ಣ ಖಂಡ್ರೆ, ಮಾರುತಿ ಕಟಗಿ, ಶರಣಪ್ಪ ಜೋಗಿನ ಸೇರಿದಂತೆ ಗ್ರಾಮದ ಹಿರಿಯರು, ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ರೈತ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗಳ ಗಾಯನ ಹಾಗೂ ಸಂಗೊಳ್ಳಿ ರಾಯಣ್ಣನ ಜೀವನ ಮತ್ತು ಹೋರಾಟವನ್ನು ಬಿಂಬಿಸುವ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು.



