ನವದೆಹಲಿ: ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಐದು ಚೀತಾ ಮರಿಗಳು ಜನಿಸಿದ್ದು, ಭಾರತದ ಚೀತಾ ಸಂರಕ್ಷಣಾ ಯೋಜನೆಗೆ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ.
ಈ ಐದು ಮರಿಗಳ ಸೇರ್ಪಡೆಯೊಂದಿಗೆ ಭಾರತದಲ್ಲಿರುವ ಒಟ್ಟು ಚೀತಾಗಳ ಸಂಖ್ಯೆ 60ಕ್ಕೆ ಏರಿಕೆಯಾಗಿದೆ. ಈ ಪೈಕಿ 41 ಚೀತಾಗಳು ಭಾರತದಲ್ಲೇ ಜನಿಸಿರುವುದು ವಿಶೇಷವಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಈ ಕುರಿತು ಮಾಹಿತಿ ನೀಡಿದ್ದು, ‘ಪ್ರಾಜೆಕ್ಟ್ ಚೀತಾ’ಗಾಗಿ ಶ್ರಮಿಸುತ್ತಿರುವ ಪಶುವೈದ್ಯರು, ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ನಿರ್ವಹಣಾ ತಂಡವನ್ನು ಅಭಿನಂದಿಸಿದ್ದಾರೆ.
ಕೆಜೆಪಿ21 ಎಂಬ ಹೆಣ್ಣು ಚೀತಾ ಐದು ಮರಿಗಳಿಗೆ ಜನ್ಮ ನೀಡಿದೆ. ಭಾರತದಲ್ಲೇ ಜನಿಸಿ ಬೆಳೆದಿರುವ ಈ ಚೀತಾ, ಮುಖಿ ಮತ್ತು ಕೆಜಿಪಿ12 ಬಳಿಕ ದೇಶದಲ್ಲಿ ಜನಿಸಿದ ಮೂರನೇ ಹೆಣ್ಣು ಚೀತಾ ಎಂದು ತಿಳಿಸಲಾಗಿದೆ. ಭಾರತದಲ್ಲಿ ಜನಿಸಿದ ಚೀತಾವೊಂದು ಇದೀಗ ಮತ್ತೊಂದು ಪೀಳಿಗೆಗೆ ಜನ್ಮ ನೀಡಿರುವುದು ‘ಪ್ರಾಜೆಕ್ಟ್ ಚೀತಾ’ಗೆ ಮಹತ್ವದ ಬೆಳವಣಿಗೆಯಾಗಿದೆ.
ಈ ಮರಿಗಳ ತಂದೆ ಬೋಟ್ಸ್ವಾನಾದಿಂದ ಭಾರತಕ್ಕೆ ತರಲಾಗಿದ್ದ ಚೀತಾ ಎನ್ನಲಾಗಿದ್ದು, ಇದರೊಂದಿಗೆ ಭಾರತದಲ್ಲಿ ಬೋಟ್ಸ್ವಾನಾ ವಂಶಾವಳಿಯ ಹೊಸ ಚೀತಾ ಸಂತತಿ ಆರಂಭವಾಗಿದೆ. ಇದರಿಂದ ದೇಶದ ಚೀತಾ ಸಂತತಿಯಲ್ಲಿ ಆನುವಂಶಿಕ ವೈವಿಧ್ಯತೆ ಹೆಚ್ಚಲು ಸಹಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ವೈಜ್ಞಾನಿಕ ನಿರ್ವಹಣೆ, ನಿರಂತರ ನಿಗಾ ಹಾಗೂ ಸಂರಕ್ಷಣಾ ಕ್ರಮಗಳ ಮೂಲಕ ಚೀತಾಗಳ ಸಂತತಿ ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಐದು ಹೊಸ ಚೀತಾ ಮರಿಗಳ ಜನನವು ದೇಶದ ಚೀತಾ ಸಂರಕ್ಷಣಾ ಪ್ರಯತ್ನಗಳಿಗೆ ಮತ್ತಷ್ಟು ಬಲ ನೀಡಿದೆ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಸಂತಸ ವ್ಯಕ್ತಪಡಿಸಿದ್ದಾರೆ.



