ಬೆಂಗಳೂರು: ಸುಪ್ರೀಂ ಕೋರ್ಟ್‌ನ ನಕಲಿ ಆದೇಶ ಸೃಷ್ಟಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯನ್ನು ಜೈಲಿನಿಂದ ಬಿಡುಗಡೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಜೈಲು ಡಿಐಜಿ ಸೋಮಶೇಖರ್ ಅವರನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಪರಪ್ಪನ ಅಗ್ರಹಾರ ಪೊಲೀಸರು ಚುರುಕುಗೊಳಿಸಿದ್ದು, 2018ರಲ್ಲಿ ಜೈಲು ಚೀಫ್ ಸೂಪರಿಂಟೆಂಡೆಂಟ್ ಆಗಿದ್ದ ಹಾಗೂ ಸದ್ಯ ಡಿಐಜಿ ಹುದ್ದೆಯಲ್ಲಿರುವ ಸೋಮಶೇಖರ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.
2018ರಲ್ಲಿ ನಕಲಿ ಆದೇಶದ ಆಧಾರದ ಮೇಲೆ ಕೈದಿ ಬಿಡುಗಡೆ:
2018ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಶಂಕರ್ ಎಂಬ ಕೈದಿಯನ್ನು ಸುಪ್ರೀಂ ಕೋರ್ಟ್‌ನ ನಕಲಿ ಆದೇಶದ ಆಧಾರದ ಮೇಲೆ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಶಂಕರ್ ಬಿಡುಗಡೆಗೆ ಸಂಬಂಧಿಸಿದಂತೆ ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಟಿಸಲಾಗಿದ್ದು, ಈ ದಾಖಲೆಯನ್ನು ಅಂದಿನ ಜೈಲು ಎಸ್‌ಡಿಎ ಆಗಿದ್ದ ಶ್ರೀಕಾಂತ್ ಎಸ್. ಎಂಬಾತ ಸೃಷ್ಟಿಸಿದ್ದಾನೆ ಎಂಬ ಆರೋಪವಿದೆ. ತನಿಖೆಯ ಪ್ರಕಾರ, 2018ರ ನವೆಂಬರ್ 13ರಂದು ನಕಲಿ ಆದೇಶದ ಆಧಾರದ ಮೇಲೆ ಶಂಕರ್‌ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈದಿ ಶಂಕರ್ ಹಾಗೂ ನಕಲಿ ಆದೇಶ ಸೃಷ್ಟಿಸಿದ ಆರೋಪ ಎದುರಿಸುತ್ತಿರುವ ಶ್ರೀಕಾಂತ್ ಎಸ್. ಅವರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಇದೀಗ ಪ್ರಕರಣದಲ್ಲಿ ಅಂದಿನ ಜೈಲು ಚೀಫ್ ಸೂಪರಿಂಟೆಂಡೆಂಟ್ ಆಗಿದ್ದ ಸೋಮಶೇಖರ್ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.



