ವಿಜಯಸಾಕ್ಷಿ ಸುದ್ದಿ, ನರಗುಂದ: ಗ್ರಾಮೀಣ ಕುಟುಂಬಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಿಕಸಿತ ಭಾರತ–ವ್ಹಿಬಿಜಿರಾಮ್ ಜಿ ಯೋಜನೆಯಡಿ ನರಗುಂದ ತಾಲೂಕಿನ 13 ಗ್ರಾಮ ಪಂಚಾಯಿತಿಗಳಲ್ಲಿ ಆ.15ರಿಂದ ಸೆ.15ರವರೆಗೆ ಜಾಬ್ ಕಾರ್ಡ್ ಮೇಳ ಹಾಗೂ ವಿಶೇಷ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ತಿಳಿಸಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯ ಕೂಲಿಕಾರ್ಮಿಕರಿಗೆ ಯೋಜನೆಯಡಿ ಉದ್ಯೋಗ ಕಲ್ಪಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಪಿಡಿಒಗಳಿಗೆ ಸೂಚಿಸಿದರು.
ಜಾಬ್ ಕಾರ್ಡ್ ಹೊಂದಿರುವ ಕುಟುಂಬಗಳ ಮಾಹಿತಿಯನ್ನು ಪರಿಶೀಲಿಸಿ, ಅಗತ್ಯವಿರುವವರಿಗೆ ಹೊಸ ಜಾಬ್ ಕಾರ್ಡ್ ವಿತರಿಸಬೇಕು. ಜಾಬ್ ಕಾರ್ಡ್ ನವೀಕರಣ, ಇ-ಕೆವೈಸಿ ಪೂರ್ಣಗೊಳಿಸುವಿಕೆ ಹಾಗೂ ಉದ್ಯೋಗದ ಬೇಡಿಕೆ ಸ್ವೀಕರಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಕುಟುಂಬಗಳಿಗೆ ನಿಯಮಾನುಸಾರ ಸ್ವೀಕೃತಿ ನೀಡುವ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಮನೆ-ಮನೆಗೆ ತೆರಳಿ ಜಾಗೃತಿ
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ-ಮನೆ ಭೇಟಿ ಮೂಲಕ ಯೋಜನೆಯ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಗ್ರಾಮಸಭೆ ಹಾಗೂ ಜಾಗೃತಿ ಸಭೆಗಳನ್ನು ನಡೆಸುವುದರ ಜತೆಗೆ ಪೋಸ್ಟರ್, ಬ್ಯಾನರ್ಗಳ ಮೂಲಕ ಜಾಬ್ ಕಾರ್ಡ್ ಮೇಳದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಾರ್ಮಿಕರ ಹಾಜರಾತಿ, ಕಾಮಗಾರಿಗಳ ಪ್ರಗತಿ ಹಾಗೂ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ನಿರ್ವಹಿಸಬೇಕು. ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಂಬಂಧಿತ ಕಾರ್ಯಕರ್ತರು ಸಮನ್ವಯದಿಂದ ಕಾರ್ಯನಿರ್ವಹಿಸಿ ಅರ್ಹ ಕುಟುಂಬಗಳಿಗೆ ಯೋಜನೆಯ ಸೌಲಭ್ಯ ತಲುಪಿಸಬೇಕು ಎಂದರು.
ಉದ್ಯೋಗದ ಅವಕಾಶವನ್ನು ಅರ್ಹ ಕುಟುಂಬಗಳ ಮನೆಬಾಗಿಲಿಗೆ ತಲುಪಿಸುವುದು ನಮ್ಮ ಮುಖ್ಯ ಉದ್ದೇಶ. ಜಾಬ್ ಕಾರ್ಡ್, ಇ-ಕೆವೈಸಿ ಹಾಗೂ ಉದ್ಯೋಗದ ಬೇಡಿಕೆ ಸಲ್ಲಿಕೆ ಕುರಿತು ಯಾವುದೇ ಮಾಹಿತಿ ಅಗತ್ಯವಿದ್ದರೂ ಸಾರ್ವಜನಿಕರು ತಮ್ಮ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಬೇಕು. ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಜನರ ಸಹಕಾರ ಅಗತ್ಯ ಎಂದು ಹೇಳಿದರು.
ತಾಲೂಕಿನ ಎಲ್ಲ 13 ಗ್ರಾಮ ಪಂಚಾಯಿತಿಗಳ ಕೂಲಿಕಾರ್ಮಿಕರು ಜಾಬ್ ಕಾರ್ಡ್ ಮೇಳದ ಪ್ರಯೋಜನ ಪಡೆದುಕೊಂಡು ವ್ಹಿಬಿಜಿರಾಮ್ ಜಿ ಯೋಜನೆಯಡಿ ಉದ್ಯೋಗ ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ಅರ್ಜಿ ಸಲ್ಲಿಸಿದ ದಿನವೇ ಜಾಬ್ ಕಾರ್ಡ್
ಜಾಬ್ ಕಾರ್ಡ್ ಹೊಂದಿರದ ಕೂಲಿಕಾರ್ಮಿಕರು ಅಭಿಯಾನದ ಸದುಪಯೋಗ ಪಡೆದುಕೊಳ್ಳಬೇಕು. ಅರ್ಹ ಕೂಲಿಕಾರ್ಮಿಕರು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದರೆ, ನಿಯಮಾನುಸಾರ ಅರ್ಜಿ ಸಲ್ಲಿಸಿದ ದಿನವೇ ಜಾಬ್ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀಧರ್ ಚಿನಗುಂಡಿ ತಿಳಿಸಿದರು.



