ವಿಜಯಸಾಕ್ಷಿ ಸುದ್ದಿ, ಗದಗ: ಅನೇಕ ಮಹಾತ್ಮರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ. ೮೦ನೇ ಸ್ವಾತಂತ್ರ್ಯೋತ್ಸವವನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸುತ್ತಿರುವ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲೂ ‘ನಮ್ಮ ದೇಶ, ನಾವೆಲ್ಲರೂ ಒಂದು’ ಎಂಬ ಭಾವನೆ ಬೆಳೆಯಬೇಕು ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.
ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ದುರಾಸೆಯಿಂದ ಸುತ್ತಮುತ್ತಲಿನ ಪರಿಸರ, ಪ್ರಾಣಿ–ಪಕ್ಷಿಗಳು ಹಾಗೂ ನೈಸರ್ಗಿಕ ಸಂಪನ್ಮೂಲಗಳ ನಾಶ ಹೆಚ್ಚಾಗುತ್ತಿದೆ. ಗಿಡಮರ, ಪ್ರಾಣಿ–ಪಕ್ಷಿಗಳು ಮತ್ತು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಅಣ್ಣಿಗೇರಿಯ ಶಿವಯೋಗಿ ಹುಬ್ಬಳ್ಳಿ ಹಾಗೂ ಶರಣಪ್ಪ ಸವಡಿ ಪಾಲ್ಗೊಂಡಿದ್ದರು. ಡಾ. ಜಿ.ಬಿ. ಪಾಟೀಲ, ಅಶೋಕ ಬರಗುಂಡಿ, ದಾನಯ್ಯ ಗಣಾಚಾರಿ, ಕರೆಗೌಡ್ರ, ವಿಜಯಕುಮಾರ ಮಾಲಗಿತ್ತಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿದರು. ಶ್ರೀಮತಿ ಹಾಸಿಲಕರ ಕಾರ್ಯಕ್ರಮ ನಿರೂಪಿಸಿದರು. ಗುರುಬಸವ ಸಿಬಿಎಸ್‌ಇ ಶಾಲೆಯ ವಿದ್ಯಾರ್ಥಿಗಳಿಂದ ರಾಷ್ಟ್ರಭಕ್ತಿ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಬಾಲಚಂದ್ರ ಭರಮಗೌಡರ, ವಿರೂಪಾಕ್ಷಪ್ಪ ಬೊಳ್ಳೊಳ್ಳಿ, ರಾಜಪ್ಪ ಮೆಣಜಿಗಿ, ಚನ್ನಯ್ಯ ಹಿರೇಮಠ, ವೀರಣ್ಣ ಗೋಟಡಕಿ, ಗಿರಿಜಕ್ಕ ಧರ್ಮರೆಡ್ಡಿ, ಪ್ರಕಾಶ್ ಅಶುಂಡಿ, ಸೋಮು ಪುರಾಣಿಕ ಸೇರಿದಂತೆ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.
“ನಮ್ಮ ದೇಶ, ನಾವೆಲ್ಲರೂ ಒಂದು ಎಂಬ ಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಪರಿಸರ, ಗಿಡಮರ ಹಾಗೂ ಪ್ರಾಣಿ–ಪಕ್ಷಿಗಳ ಸಂರಕ್ಷಣೆಯನ್ನು ನಮ್ಮೆಲ್ಲರ ಜವಾಬ್ದಾರಿಯನ್ನಾಗಿ ಮಾಡಿಕೊಳ್ಳಬೇಕು.”
— ತೋಂಟದಾರ್ಯ ಶ್ರೀಗಳು



