Home Blog Page 3171

ಲಾಕ್ ಡೌನ್ ವಿಸ್ತರಣೆಗೆ ಅವಕಾಶ ಕೊಡಬೇಡಿ ಎಂದು ಕೈಮುಗಿದು ಕೇಳಿಕೊಂಡ ಡಿಸಿ

ವಿಜಯಸಾಕ್ಷಿ ಸುದ್ದಿ, ಉಡುಪಿ

ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿರುವ ಘಟನೆ ನಡೆದಿದೆ.
ಹೀಗಾಗಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಜನರಲ್ಲಿ ಮನವಿ ಮಾಡಿದ್ದಾರೆ. ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಡಿ. ಆದಷ್ಟು ಸಂಭ್ರಮದ ಕಾರ್ಯಕ್ರಮಗಳಿಂದ ದೂರ ಇರಿ ಎಂದಿದ್ದಾರೆ.

ಸೋಂಕಿತರನ್ನು ಭೇಟಿಯಾದ ಸಂದರ್ಭದಲ್ಲಿ ನಾನು ಪೂರ್ಣ ಮಾಹಿತಿ ಪಡೆದುಕೊಂಡಿದ್ದೇನೆ. ಮದುವೆಯಲ್ಲಿ ಭಾಗಿ ಆದವರಲ್ಲಿ ಸೋಂಕು ಹೆಚ್ಚಾಗಿ ವ್ಯಾಪಿಸಿದೆ ಎಂದು ಜನರಿಗೆ ಕಿವಿ ಮಾತು ಹೇಳಿದ್ದಾರೆ.
ಹೀಗಾಗಿ ಜನರು ಮದುವೆ ಕಾರ್ಯಕ್ರಮಗಳನ್ನು ಮುಂದೂಡಿದರೆ ಒಳ್ಳೆಯದು. ಒಂದು ವೇಳೆ ನಡೆದರೂ ಅಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಡಿ ಎಂದು ಹೇಳಿದ್ದಾರೆ.

ಮೆಹಂದಿ ಕಾರ್ಯಕ್ರಮ ಆಯೋಜಿಸಿದರೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿರುವ ಅವರು, ನಿಮ್ಮ ನಿರ್ಲಕ್ಷ್ಯದಿಂದಾಗಿ ಮತ್ತೊಮ್ಮೆ ಲಾಕ್ ಡೌನ್ ವಿಸ್ತರಿಸಲು ಅವಕಾಶ ಕೊಡಬೇಡಿ. ನಿಮ್ಮಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತೇನೆ ಎಂದು ಮನವಿ ಮಾಡಿದ್ದಾರೆ.

ರಾಜ್ಯದಲ್ಲಿ ಇಂದಿನಿಂದ ಕಠಿಣ ಲಾಕ್ ಡೌನ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಇಂದಿನಿಂದ ಮತ್ತೆ ಲಾಕ್ ಡೌನ್ ಜಾರಿಯಾಗಿದೆ. ಮೇ. 10ರಂದು ಘೋಷಣೆಯಾಗಿದ್ದ ಲಾಕ್ ಡೌನ್ ಅಂತ್ಯವಾಗಬೇಕಿತ್ತು. ಆದರೆ, ಕೊರೊನಾ ಹತೋಟಿಗೆ ಬಾರದ ಹಿನ್ನೆಲೆಯಲ್ಲಿ ಸರ್ಕಾರ ಇನ್ನೂ 14 ದಿನ ಲಾಕ್ ಡೌನ್ ವಿಸ್ತರಣೆ ಮಾಡಿದೆ. ಈ ಲಾಕ್ ಡೌನ್ ನ್ನು ಕಠಿಣಗೊಳಿಸಲಾಗಿದೆ.

ಇಂದಿನಿಂದ ಜೂ. 7ರ ವರೆಗೆ ಬೆಳಿಗ್ಗೆ 6ರ ವರೆಗೆ 2ನೇ ಹಂತದ ಲಾಕ್ಡೌನನ್ ಜಾರಿಯಲ್ಲಿರಲಿದೆ. ವಿಮಾನ ಮತ್ತು ರೈಲುಗಳಲ್ಲಿ ಪ್ರಯಾಣಕ್ಕೆ ಅವಕಾಶ ಇದೆ. ದಿನಸಿ ಖರೀದಿಗೆ ಬೆಳಿಗ್ಗೆ 10ರವರೆಗೆ ಅವಕಾಶ ನೀಡಲಾಗಿದೆಯಾದರೂ ಆಯಾ ಜಿಲ್ಲೆಯಲ್ಲಿ ಕೆಲವು ಬದಲಾವಣೆಗಳಾಗಿವೆ.
ಧಾರವಾಡ ಜಿಲ್ಲೆಯಲ್ಲಿ ಇಂದು ಮಾತ್ರ ದಿನಸಿ ಖರೀದಿಗೆ ಅನುಮತಿ ಇದ್ದು, ನಾಳೆಯಿಂದ ಸಂಪೂರ್ಣ ಲಾಕ್ ಡೌನ್ ಜಾರಿಯಲ್ಲಿರಲಿದೆ.

ಇನ್ನುಳಿದಂತೆ ವಿವಿಧ ಜಿಲ್ಲೆಗಳಲ್ಲಿ ಅಲ್ಲಿನ ಜಿಲ್ಲಾಡಳಿತ ಬೇರೆ ಬೇರೆ ನಿರ್ಧಾರ ಕೈಗೊಂಡಿವೆ. ಕೆಲವು ಜಿಲ್ಲೆಗಳಲ್ಲಿ ವಾರದಲ್ಲಿ ಎರಡು ದಿನ ದಿನಸಿ ಖರೀದಿಗೆ ಅವಕಾಶ ನೀಡಲಾಗಿದೆ.

ತಡರಾತ್ರಿ ಆಸ್ಪತ್ರೆಗೆ ನುಗ್ಗಿ ವೈದ್ಯರ ಮೇಲೆ ಹಲ್ಲೆ ನಡೆಸಿದ ಯುವಕ!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಯುವಕನೊಬ್ಬ ಇಲ್ಲಿಯ ವಿಮ್ಸ್ ಆಸ್ಪತ್ರೆಗೆ ನುಗ್ಗಿ ಕಾರ್ಯನಿರತ ಮಹಿಳಾ ವೈದ್ಯರ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಇಲ್ಲಿಯ ವಿಮ್ಸ್ ಆಸ್ಪತ್ರೆಯಲ್ಲಿ ತಡರಾತ್ರಿ ನಡೆದಿದೆ. ಕೊರೊನಾ ಸೋಂಕಿತರ ಸೇವೆಯಲ್ಲಿ ನಿರತರಾಗಿದ್ದ ಮಹಿಳಾ ವೈದ್ಯೆಯ ಮೇಲೆ ಈ ಯುವಕ ತಡ ರಾತ್ರಿ 3ಗಂಟೆಯ ಹೊತ್ತಿಗೆ ನುಗ್ಗಿ ಹಲ್ಲೆ ಮಾಡಿ, ರಂಪಾಟ ನಡೆಸಿದ್ದಾನೆ.

ಈ ಯುವಕ ಡಾ. ಪ್ರಿಯದರ್ಶಿನಿ ಎಂಬ ವೈದ್ಯೆಯ ಮೇಲೆ ಹಲ್ಲೆ ನಡೆಸಿದ್ದಾನೆ. ವೈದ್ಯೆಯ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತಿಪ್ಪೇಸ್ವಾಮಿ ಎಂಬ ಯುವಕ ವೈದ್ಯೆಯ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಈ ವ್ಯಕ್ತಿಯ ತಂದೆ ಮಲ್ಲಿಕಾರ್ಜುನ ಗೌಡ ಕೊರೊನಾದಿಂದ ಸಾವನ್ನಪ್ಪಿದ್ದರು. ಹೀಗಾಗಿ ಆಕ್ರೋಶಗೊಂಡು ವೈದ್ಯೆಯ ಮೇಲೆಯೇ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಮಲ್ಲಿಕಾರ್ಜುನಗೊಡ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ವೈದ್ಯರು ಹೇಳಿದ್ದಾರೆ. ಆದರೆ, ನಮ್ಮ ತಂದೆಯ ಸಾವಿಗೆ ವೈದ್ಯರೇ ಕಾರಣ ಎಂದು ತಿಪ್ಪೇಸ್ವಾಮಿ ಹಲ್ಲೆ ನಡೆಸಿದ್ದಾರೆ. ರೋಗಿಯ ಸಂಬಂಧಿಕರ ದುರ್ವರ್ತನೆಗೆ ಸದ್ಯ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ವೈದ್ಯರ ಮೇಲೆ ಈ ರೀತಿ ಹಲ್ಲೆಗಳಾದರೆ, ವೈದ್ಯರು ಕರ್ತವ್ಯ ನಿರ್ವಹಿಸುವುದು ಹೇಗೆ ಎಂದು ವೈದ್ಯಕೀಯ ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ.

ಸದ್ಯ ಹಲ್ಲೆ ನಡೆಸಿದ ತಿಪ್ಪೇಸ್ವಾಮಿ ವಿರುದ್ಧ ಕೌಲ್ ಬಜಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ನಡುವೆ ಕೊರೊನಾ ಸೋಂಕು ಹೇಗಿದೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕಠಿಣ ಲಾಕ್ ಡೌನ್ ಜಾರಿಯಾದಾಗಿನಿಂದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿವೆ. ಆದರೆ, ಬಲಿಯಾಗುತ್ತಿರುವವರ ಸಂಖ್ಯೆ ಮಾತ್ರ ಆತಂಕ ಮೂಡಿಸುತ್ತಿದೆ.
ಇಂದು ರಾಜ್ಯದಲ್ಲಿ 25,979 ಜನರಲ್ಲಿ ಸೋಂಕು ತಗುಲಿದ್ದು, ಬರೋಬ್ಬರಿ 626 ಜನ ಸಾವನ್ನಪ್ಪಿದ್ದಾರೆ. ಅಲ್ಲದೇ, ಇಂದು 35,573 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸಕ್ರಿಯ ಪ್ರಕರಣಗಳ ಸಂಖ್ಯೆ 4,72,986ಕ್ಕೆ ಏರಿಕೆಯಾಗಿದೆ. ಇಂದು 626 ಜನ ಸಾವನ್ನಪ್ಪಿದ್ದು, ಈ ಮೂಲಕ ಸತ್ತವರ ಸಂಖ್ಯೆ 25,282ಕ್ಕೆ ಏರಿದೆ.

ಇಂದು 35,573 ಜನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಬೆಂಗಳೂರಿನಲ್ಲಿ 7,494 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 362 ಜನ ಬಲಿಯಾಗಿದ್ದಾರೆ. ಇನ್ನುಳಿದಂತೆ ಮೈಸೂರಿನಲ್ಲಿ 2,222, ಹಾಸನ 1,618, ತುಮಕೂರು 1,269, ಬಳ್ಳಾರಿ 1,190 ಹಾಗೂ ಬೆಳಗಾವಿಯಲ್ಲಿ 1,066 ಪ್ರಕರಣಗಳು ವರದಿಯಾಗಿವೆ.

ಬಿಗ್ ಬಾಸ್ ಸ್ಪರ್ಧಿಗಳೊಂದಿಗೆ ವಾರದ ಪಂಚಾಯಿತಿ ನಡೆಸಿದ ಸುದೀಪ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕೊರಾನಾದಿಂದಾಗಿ ಜನಪ್ರಿಯ ಬಿಗ್ ಬಾಸ್ ಅರ್ಧಕ್ಕೆ ನಿಂತಿದೆ. ಹೀಗಾಗಿ ಅದರ ಅಭಿಮಾನಿಗಳು ಬೇಸರದಲ್ಲಿದ್ದಾರೆ. ಮನೆಯ ಸದಸ್ಯರು 71 ದಿನಕ್ಕೆ ಹೊರ ನಡೆದರು. ಆದರೆ, ಮನರಂಜನೆ ಮಾತ್ರ ಇನ್ನೂ ನಿಂತಿಲ್ಲ.

ಸದ್ಯ ಮತ್ತೆ ಬಿಗ್ ಬಾಸ್ ಸ್ಪರ್ಧಿಗಳ ಜೊತೆಗೆ ಸುದೀಪ್ ವಾರದ ಪಂಚಾಯಿತಿ ನಡೆಸಿದ್ದಾರೆ. ಎಲ್ಲರನ್ನೂ ಜೊತೆ ಸೇರಿಸಿ ಮಾತನಾಡಿದ್ದಾರೆ. ಪ್ರತಿ ವಾರ ಬಿಗ್ ಬಾಸ್ ನಿಂದ ಎಲಿಮಿನೇಟ್ ಆದ ಸ್ಪರ್ಧಿಗಳನ್ನು ವೇದಿಕೆ ಕರೆಯಿಸಿ ಕಿಚ್ಚ ಸುದೀಪ್ ಮಾತನಾಡಿಸುತ್ತಿದ್ದರು.
ಆದರೆ ಈ ಶೋ ಮುಗಿಯುವುದಕ್ಕಿಂತಲೂ ನಾಲ್ಕು ವಾರ ಮೊದಲೇ ಸುದೀಪ್ಗೆ ಆರೋಗ್ಯ ಕೂ ಕೈ ಕೊಟ್ಟಿತ್ತು. ಹೀಗಾಗಿ ಅವರಿಗೆ ವೀಕೆಂಡ್ ಎಪಿಸೋಡ್ ಗಳನ್ನು ನಡೆಸಲು ಸಾಧ್ಯವಾಗಿರಲಿಲ್ಲ. ಅಲ್ಲದೇ, ಕೊನೆಯ ದಿನ ಮನೆಯಿಂದ ಹೊರಬಂದ 11 ಸ್ಪರ್ಧಿಗಳಿಗೂ ಸುದೀಪ್ ಜೊತೆ ಮಾತನಾಡುವ ಅವಕಾಶ ಸಿಕ್ಕಿರಲಿಲ್ಲ.

ಸದ್ಯ ಸುದೀಪ್ ಜೊತೆ ಅವರೆಲ್ಲರ ಮಾತುಕತೆಗಾಗಿ ಕಲರ್ಸ್ ಕನ್ನಡ ವಾಹಿನಿ ಒಂದು ವೇದಿಕೆ ಒದಗಿಸಿದೆ. ಆದರೆ, ಕೊರೊನಾ ಇರುವುದರಿಂದಾಗಿ ಯಾರನ್ನೂ ನೇರವಾಗಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವಿಡಿಯೋ ಕಾಲ್ ಮೂಲಕ ಎಲ್ಲರ ಜೊತೆಗೆ ಸುದೀಪ್ ಮಾತನಾಡಿದ್ದಾರೆ.

ಈ ಜಿಲ್ಲೆಯ 180 ಜನ ಗರ್ಭಿಣಿಯರಲ್ಲಿ ಸೋಂಕು – 7 ಜನ ಬಲಿ!

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯಲ್ಲಿ 180ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೋಂಕು ದೃಢಪಟ್ಟಿದ್ದು, 7 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಜನ ಆತಂಕದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಅಲ್ಲದೇ, ನಾಲ್ಕು ಸೋಂಕಿತ ಗರ್ಭಿಣಿಯರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಮಗು ಬದುಕಿಸಲು ಸಾಧ್ಯವಾಗಲಿಲ್ಲ. ಅಲ್ಲದೇ, ಇದರ ಜೊತೆಗೆ ಕಳೆದ ಹತ್ತು ದಿನಗಳಲ್ಲಿಯೇ 7 ಜನ ಸೋಂಕಿತ ಗರ್ಭಿಣಿಯರ ಗರ್ಭದಲ್ಲಿಯೇ ಕಂದಮ್ಮಗಳು ಸಾವನ್ನಪ್ಪಿವೆ. ಹೀಗಾಗಿ ಜಿಲ್ಲೆಯ ಗರ್ಭಿಣಿಯರಲ್ಲಿ ಭಯ ಕಾಡುತ್ತಿದೆ.

ಸದ್ಯ 180 ಜನ ಗರ್ಭಿಣಿಯರ ಪೈಕಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ 134 ಜನ ಗರ್ಭಿಣಿಯರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಹೆರಿಗೆ ಸಮಯದಲ್ಲಿ ಯಾವುದೇ ತೊಂದರೆ ಆಗಬಾರದು ಎಂಬ ಉದ್ಧೇಶದಿಂದ ಕೋವಿಡ್ ಟೆಸ್ಟ್ ಮಾಡಿಸಿದಾಗ ಸೋಂಕು ಪತ್ತೆಯಾಗಿದೆ. ಹೀಗಾಗಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ.

ಗರ್ಭಿಣಿಯರಿಗೆ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡುವುದರಿಂದ ಮುಂದೆ ಆಗುವ ಅನಾಹುತ ತಪ್ಪಿಸಿಬಹುದಾಗಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಕೊರೊನಾ: ಶುಭಸುದ್ದಿ ನೀಡಿದ ಭಾನುವಾರ, ಗುಣಮುಖರ ಸಂಖ್ಯೆ ಏರಿಕೆ, ಸೋಂಕಿತರ ಸಂಖ್ಯೆ ಇಳಿಕೆ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ ಜಿಲ್ಲೆಯಲ್ಲಿ ಸೋಂಕು ನಿನ್ನೆಯಿಂದ ಇಳಿಮುಖವಾಗುತ್ತಿದೆ. ನಿನ್ನೆ ನಾಲ್ಕು ನೂರರ ಗಡಿ ದಾಟಿದ್ದ ಸೋಂಕಿನ ಸಂಖ್ಯೆಯಲ್ಲಿ ಇಂದು ಮೂನ್ನೂರರ ಗಡಿ ದಾಟಿದೆ. ಸೋಂಕಿತರಕ್ಕಿಂತ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದವರೇ ಹೆಚ್ಚು.

ಇಂದಿನ 371 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಇದುವರೆಗೂ ಸೋಂಕಿತರ ಸಂಖ್ಯೆ 21129 ಕ್ಕೆ ಏರಿಕೆ ಕಂಡಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -188, ಮುಂಡರಗಿ-23, ನರಗುಂದ-10, ರೋಣ-73, ಶಿರಹಟ್ಟಿ-65, ಹೊರಜಿಲ್ಲೆಯ-12 ಸೇರಿದಂತೆ 371 ಪ್ರಕರಣಗಳು ದೃಢಪಟ್ಟಿವೆ.

ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಂತೆ ನಾಲ್ವರು ಮೃತಪಟ್ಟಿದ್ದು, ಮೃತರ ಸಂಖ್ಯೆ 215 ಕ್ಕೇರಿದೆ.

ಗದಗ ಶಹರದ ‌ನಿವಾಸಿ
60 ವರ್ಷದ ವ್ಯಕ್ತಿ ಮೇ-11 ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ನಿಂದಾಗಿ ಮೇ 19 ರಂದು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಬೊಚನಹಳ್ಳಿ ನಿವಾಸಿ 65 ವರ್ಷದ ವ್ಯಕ್ತಿ ಮೇ -11 ಮುಂಡರಗಿ ‌ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್ ದೃಢಪಟ್ಟಿತ್ತು, ಮೇ 19 ರಂದು ಮೃತಪಟ್ಟಿದ್ದಾರೆ.

ಗದಗ ತಾಲೂಕಿನ ಮುಳಗುಂದ ನಿವಾಸಿ ,60 ವರ್ಷದ ವ್ಯಕ್ತಿ ಮೇ 19 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 20 ರಂದು ಮೃತಪಟ್ಟಿದ್ದಾರೆ.

ರೋಣ ತಾಲೂಕಿನ ಸೂಡಿ ನಿವಾಸಿ 74 ವರ್ಷದ ವ್ಯಕ್ತಿ ಮೇ 19 ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಮೇ 22 ರಂದು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇವರೆಲ್ಲರ ಅಂತ್ಯಕ್ರಿಯೆ ಕೋವಿಡ್ ನಿಯಮಾವಳಿ ಪ್ರಕಾರ ನಡೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ಕೂಡ ದಾಖಲೆಯ 421 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 17511 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 3403 ಪ್ರಕರಣಗಳು ಸಕ್ರಿಯವಾಗಿದ್ದು ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 192 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಇದೇನು ಅಧಿಕಾರಿಗಳೇ? ಪತ್ರಕರ್ತರ ಮೊಬೈಲ್ ಸಂಖ್ಯೆಯನ್ನೂ ನೀಡಿದ್ದಾರೆ…17 ಜನ ಒಂದೇ ಸಂಖ್ಯೆ ನೀಡಿದ್ದಾರೆ!

ವಿಜಯಸಾಕ್ಷಿ ಸುದ್ದಿ, ಕಲಬುರಗಿ

ಕೊರೊನಾದಿಂದಾಗಿ ಹೋಂ ಐಸೋಲೇಷನ್ ನಲ್ಲಿರುವ 17 ಜನರು ಒಂದೇ ಮೊಬೈಲ್ ಸಂಖ್ಯೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಅಲ್ಲದೇ, ಕೆಲವರು ತಮ್ಮ ಸಂಖ್ಯೆ ನೀಡದೆ ಪತ್ರಕರ್ತರ ಸಂಖ್ಯೆಯನ್ನು ಕೂಡ ನೀಡಿದ್ದಾರೆ. ಈ ಘಟನೆ ಜಿಲ್ಲೆಯ ಶಹಾಬಾದ್ ನಲ್ಲಿ ನಡೆದಿವೆ.

ಹೆಚ್ಚಿನ ಜನ ಸೋಂಕಿತರು ಬೇರೆಯವರ ಸಂಖ್ಯೆ ನೀಡಿರುವುದು ಕೂಡ ಬಯಲಿಗೆ ಬಂದಿದೆ. ಇದೆಲ್ಲ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ನಡೆದಿದೆ ಎನ್ನಲಾಗಿದೆ.

ನಗರಸಭೆ ಸಿಬ್ಬಂದಿಗಳು ಬೇರೆಯವರ ಸಂಖ್ಯೆ ನೀಡಿದ್ದರಿಂದಾಗಿ ಅಧಿಕಾರಿಗಳು ಕರೆ ಮಾಡಿದರೆ ಅದು ಬೇರೆಯವರಿಗೆ ತೆರಳುತ್ತಿದೆ. ನಮಗೆ ಯಾವುದೇ ಲಕ್ಷಣವಿಲ್ಲ, ನಾವು ಇದೇ ಊರಲ್ಲಿದ್ದೇವೆ. ಆರಾಮವಾಗಿದ್ದೇವೆ ಎಂದು ಜನ ಅಧಿಕಾರಿಗಳ ಕರೆಗೆ ಸ್ಪಷ್ಟನೆ ನೀಡುತ್ತಿದ್ದಾರೆ. ಇದರಿಂದ ಅಧಿಕಾರಿಗಳು ತಲೆ ಚಚ್ಚಿಕೊಳ್ಳುವಂತಾಗಿದೆ.

ಒಂದೇ ಮೊಬೈಲ್‌ ಸಂಖ್ಯೆ 17 ಜನರ ಹೆಸರಲ್ಲಿದೆ. ಇನ್ನೊಂದು ಮೊಬೈಲ್‌ ಸಂಖ್ಯೆಯನ್ನು 22 ಜನರು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಹೋಮ್‌ ಐಸೋಲೇಷನ್‌ ಇದ್ದವರ ಹೆಸರು ರಿಜಿಸ್ಟರ್‌ ಆದ ನಂತರ ಅವರ ಮೊಬೈಲ್‌ ಗೆ ಓಟಿಪಿ ಸಂಖ್ಯೆ ಬರುತ್ತದೆ. ಅದು ಹೇಗೆ? 17 ಜನ ಒಂದೇ ಸಂಖ್ಯೆ ನೀಡಿದ್ದಾರೆ. ಅಲ್ಲದೇ, ಅಧಿಕಾರಿಗಳು ಓಟಿಪಿ ಹೇಗೆ ಪಡೆದಿದ್ದಾರೆ ಎಂಬ ಚರ್ಚೆ ಈಗ ಶುರುವಾಗಿದೆ.

ಅಧಿಕಾರಿಗಳು ಒಂದೇ ಸಂಖ್ಯೆಯಿಂದ 17 ಜನರನ್ನು ಸಂಪರ್ಕಿಸಿ ಕಿಟ್‌ ನೀಡಿದ್ದಾದರೂ ಹೇಗೆ? ಎಂಬ ಪ್ರಶ್ನೆ ಸದ್ಯ ಮೂಡುತ್ತಿದೆ. ಇದಕ್ಕೆ ಜವಾಬ್ದಾರಿ ಯಾರು? ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳು, ಜಿಲ್ಲಾವೈದ್ಯಾಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ತಾಲೂಕು ವೈದ್ಯಾಧಿಕಾರಿಗಳಿಂದ ತನಿಖೆ ನಡೆಸುತ್ತೇನೆ. ಎಲ್ಲಿ, ಯಾರಿಂದ ತಪ್ಪಾಗಿದೆ ಎಂದು ವಿಚಾರಣೆ ನಡೆಸಲಾಗುವುದು ಎಂದು ವೈದ್ಯಾಧಿಕಾರಿ ಡಾ. ಶರಣಬಸಪ್ಪ ಗಣಜಲಖೇಡ ತಿಳಿಸಿದ್ಧಾರೆ. ಇಂತಹ ಘಟನೆಗಳು ರಾಜ್ಯದಲ್ಲಿಯೂ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

ಅನಗತ್ಯವಾಗಿ ಓಡಾಡುತ್ತಿದ್ದವರಿಗೆ ಬಸ್ಕಿ ಹೊಡಿಸಿದ ಲೇಡಿ ಪೊಲೀಸ್!

ವಿಜಯಸಾಕ್ಷಿ ಸುದ್ದಿ, ಹಾವೇರಿ

ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದರೆ, ಜನರು ಮಾತ್ರ ಬೇಕಾಬಿಟ್ಟಿಯಾಗಿ ತಿರುಗಾಡುತ್ತಿದ್ದಾರೆ. ಹೀಗಾಗಿ ಮಹಿಳಾ ಎಎಸ್‍ ಐ ಒಬ್ಬರು ಹೀಗೆ ತಿರುಗಾಡುತ್ತಿದ್ದವರಿಗೆ ಬಸ್ಕಿ ಹೊಡೆಸಿ ಪಾಠ ಕಲಿಸಿದ್ದಾರೆ.

ಸರ್ಕಾರ ಹಾಗೂ ಜಿಲ್ಲಾಡಳಿತಗಳು ಅಗತ್ಯ ವಸ್ತುಗಳ ಖರೀದಿಗೆ ಜನರಿಗೆ ಬೆಳಿಗ್ಗೆ 10ರ ವರೆಗೆ ಅವಕಾಶ ನೀಡಿದೆ. ಅದರೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದಲ್ಲಿ ಲಾಕ್ ಡೌನ್ ಇದ್ದರೂ ಅನಗತ್ಯವಾಗಿ ಹೊರಗೆ ಓಡಾಡುತ್ತಿದ್ದವರಿಗೆ ಮಹಿಳಾ ಎಎಸ್‍ ಐ ಬಸ್ಕಿ ಹೊಡೆಸಿ ಪಾಠ ಕಲಿಸಿದ್ದಾರೆ.

ಕಿವಿ ಹಿಡಿಸಿ ಇಪ್ಪತ್ತೈದು ಬಸ್ಕಿ ಹೊಡೆಸಿ ಹಂಸಭಾವಿ ಮಹಿಳಾ ಎಎಸ್‍ ಐ ಎಂ.ಎ. ಅಸಾದಿ ಶಿಕ್ಷೆ ನೀಡಿ, ಜನರಿಗೆ ಬುದ್ಧಿ ಹೇಳಿದ್ದಾರೆ. ಈ ಗ್ರಾಮದಲ್ಲಿ ಆಸ್ಪತ್ರೆ, ಮೆಡಿಕಲ್ ಶಾಪ್ ಹಾಗೂ ರೈತರು ಜಮೀನಿಗೆ ಹೋಗಲು ಮಾತ್ರ ಬಿಡುತ್ತಿದ್ದಾರೆ. ಕೆಲವು ವಾಹನ ಸವಾರರಿಗೆ ದಂಡ ಹಾಕುತ್ತಿದ್ದಾರೆ. ಅಲ್ಲದೆ ಕೆಲವು ವಾಹನಗಳನ್ನು ಸೀಜ್ ಮಾಡಲಾಗುತ್ತಿದೆ.

ಹೊಸ ಮರಳು ನೀತಿ ಜಾರಿಗೆ!

ವಿಜಯಸಾಕ್ಷಿ ಸುದ್ದಿ, ಮೈಸೂರು

ರಾಜ್ಯದಲ್ಲಿ ಮತ್ತೆ ಮರಳು ಮಾಫಿಯಾ ಸದ್ದು ಮಾಡುತ್ತಿದೆ. ಎಗ್ಗಿಲ್ಲದೆ ಮರಳು ಸಾಗಾಟವಾಗುತ್ತಿದೆ. ಉಳ್ಳವರು ಮರಳು ಮಾರಾಟ ಮಾಡಿ ಶ್ರೀಮಂತರಾಗುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ಮರಳು ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಇನ್ನು ಮುಂದೆ ಬೈಕ್, ಎತ್ತಿನ ಗಾಡಿಯಲ್ಲಿ ಮರಳು ಸಾಗಿಸಿಕೊಳ್ಳಬಹುದು. ಸ್ಥಳೀಯರು, ರೈತರಿಗೆ ಮಾತ್ರ ಮರಳು ಸಾಗಾಟಕ್ಕೆ ಅವಕಾಶವಿದೆ. ತಮ್ಮ ಅಗತ್ಯಕ್ಕೆ ಮರಳು ಸಾಗಿಸಿಕೊಂಡರೆ ಕೇಸ್ ಹಾಕಲ್ಲ. ಮರಳು ಮಾಫಿಯ ತಡೆಯಲು ಶೀಘ್ರದಲ್ಲಿಯೇ ಕಠಿಣ ಮರಳು ನೀತಿ ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಕೋವಿಡ್ ನಿರ್ವಹಣೆಗಾಗಿ ಶೇ. 30ರಷ್ಟು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.

error: Content is protected !!