Home Blog Page 3174

ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾಮಲೈ ಗೆಲುವು ಸಾಧಿಸುವರೇ?

ವಿಜಯಸಾಕ್ಷಿ ಸುದ್ದಿ, ಚೆನ್ನೈ

ತಮಿಳುನಾಡು ಚುನಾವಣೆಯಲ್ಲಿ ಯಾವಾಗಲೂ ಸೆಲೆಬ್ರಿಟಿಗಳದ್ದೇ ಸದ್ದು. ಈ ವರ್ಷದ ಚುನಾವಣೆಯಲ್ಲಿ ಸ್ವಂತ ಪಕ್ಷ ಕಟ್ಟಿ ನಟ ಕಟ್ಟಿ ಕಮಲ್ ಹಾಸನ್ ಹೆಚ್ಚು ಸದ್ದು ಮಾಡಿದ್ದರು. ಅಲ್ಲದೇ, ತಮ್ಮ ಐಪಿಎಸ್ ಗೆ ರಾಜೀನಾಮೆ ನೀಡಿ ಅಣ್ಣಾಮಲೈ ಬಿಜೆಪಿ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದರು.

ಸದ್ಯ ಕೊಯಮತ್ತೂರು ದಕ್ಷಿಣದಲ್ಲಿ ಸ್ಪರ್ಧೆ ಮಾಡಿದ್ದ ಕಮಲ ಹಾಸನ್ ಗೆ ಆರಂಭಿಕ ಹಿನ್ನಡೆಯಾಗಿದೆ. ಅರವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಸಿಂಗಂ ಅಣ್ಣಾಮಲೈ ಗೆ ಆರಂಭಿಕ ಮುನ್ನಡೆ ಸಿಕ್ಕಿದೆ. ಥೌಸಂಡ್ ಲೈಟ್ಸ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ನಟಿ ಖುಷ್ಬೂ ಅವರು ಮುನ್ನಡೆ ಸಾಧಿಸಿದ್ದಾರೆ.

ದೀದಿ ಸ್ಪರ್ಧೆ ಮಾಡಿದ್ದ ನಂದಿಗ್ರಾಮದ ಮೇಲೆಯೇ ಎಲ್ಲರ ಕಣ್ಣು! ಅಷ್ಟಕ್ಕೂ ಅಲ್ಲಿನ ಹಿಂದಿನ ಶಾಸಕರು ಯಾರು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಕೋಲ್ಕತ್ತಾ

ಸದ್ಯ ಐದು ರಾಜ್ಯಗಳಿಗೆ ನಡೆದ ಚುನಾವಣೆಯ ಮತ ಎಣಿಕೆಯ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಇಡೀ ದೇಶದ ಜನರ ಕಣ್ಣು ಪಶ್ಚಿಮ ಬಂಗಾಳದ ನಂದಿಗ್ರಾಮದ ಮೇಲಿದೆ. ಏಕೆಂದರೆ ಸಿಎಂ ಮಮತಾ ಬ್ಯಾನರ್ಜಿ ಅವರು ಅಲ್ಲಿ ಸ್ಪರ್ಧೆ ಮಾಡಿದ್ದಾರೆ. ಅಷ್ಟೇ ಅಲ್ಲ ದೀದಿ ತಮ್ಮ ಆಪ್ತನ ವಿರುದ್ಧ ಸ್ಪರ್ಧೆ ಮಾಡಿದ್ದಾರೆ.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಹಾಗೂ ಅವರ ಮಾಜಿ ಆಪ್ತ ಸುವೇಂದು ಅಧಿಕಾರಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಹೀಗಾಗಿ ಅವರ ವಿರುದ್ಧವೇ ದೀದಿ ಸ್ಪರ್ಧೆ ಮಾಡಿದ್ದಾರೆ.
ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಸೋಲುತ್ತಾರೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಕೂಡ ಸೋಲುತ್ತಾರೆ ಎಂದು ಬಿಜೆಪಿ ಚುನಾವಣಾ ಪ್ರಚಾರ ಮಾಡಿತ್ತು. ಮಮತಾ ಬ್ಯಾನರ್ಜಿ ಮಾತ್ರ ಯಾವುದೇ ಕ್ಷೇತ್ರದಲ್ಲಿಯೂ ಸ್ಪರ್ಧೆ ಮಾಡದೆ ಕೇವಲ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ್ದರು.

ಈ ಕ್ಷೇತ್ರದಲ್ಲಿ ಈ ಹಿಂದೆ ಸುವೇಂದು ಅಧಿಕಾರಿ ತಂದೆ ಶಾಸಕರಾಗಿದ್ದರು. ಈಗ ಸತತ ಮೂರು ಬಾರಿ ಸುವೇಂದು ಅಧಿಕಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಹಜವಾಗಿ ಈ ಕ್ಷೇತ್ರದ ಮೇಲೆ ಸುವೇಂದು ಅಧಿಕಾರಿಯ ಪ್ರಭಾವವೇ ಜಾಸ್ತಿಯಿದೆ. ಆದರೂ ದೀದಿ ತಮ್ಮ ಹಠ ಬಿಡಲಿಲ್ಲ.

ದ್ರಾವಿಡ ನೆಲದಲ್ಲಿ ಡಿಎಂಕೆ…ಬಂಗಾಳದಲ್ಲಿ ದೀದಿ….ದೇವರ ನಾಡಿನಲ್ಲಿ ಎಲ್ ಡಿಎಫ್ ಮುಂದೆ!

ವಿಜಯಸಾಕ್ಷಿ ಸುದ್ದಿ, ಚೈನ್ನೈ

ದೇಶದಲ್ಲಿನ ಐದು ರಾಜ್ಯಗಳ ವಿಧಾನಸಭ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಹೊರ ಬೀಳಲಿದೆ. ಈಗಾಗಲೇ ಮತ ಎಣಿಕೆ ಕಾರ್ಯ ಎಲ್ಲೆಡೆ ಪ್ರಗತಿಯಲ್ಲಿದೆ. ತಮಿಳುನಾಡಿನಲ್ಲಿ ಡಿಎಂಕೆ ಆರಂಭಿಕ ಮುನ್ನಡೆ ಪಡೆದಿದ್ದು, ಕೇರಳದಲ್ಲಿ ಎಲ್ ಡಿಎಫ್ ಮುಂದಿದೆ.

ತಮಿಳುನಾಡಿನಲ್ಲಿ ಒಟ್ಟು 234 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಈ ಪೈಕಿ ಈಗಾಗಲೇ ಡಿಎಂಕೆ 50 ಮತ್ತು ಎಐಎಡಿಎಂಕೆ ಎರಡು ಕ್ಷೇತ್ರಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಇದರಿಂದ ಡಿಎಂಕೆ ಭಾರೀ ಮುನ್ನಡೆ ಕಾಯ್ದುಕೊಂಡಂತಾಗಿದೆ.
ಕೇರಳದಲ್ಲಿ 140 ವಿಧಾನಸಭೆ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಎಲ್ ಡಿಎಫ್ 38, ಯುಡಿಎಫ್ 24 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ಎಲ್ ಡಿಎಫ್ ಮುನ್ನಡೆ ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.

ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಲ್ಲಿ ಟಿಎಂಸಿ 58 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 55 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪುದುಚೇರಿಯಲ್ಲಿ ಬಿಜೆಪಿ 1, ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಅಸ್ಸಾಂನಲ್ಲಿ 126 ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 4, ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.

ಈ ಸಮಯದಲ್ಲಿ ರಾಜ್ಯದಲ್ಲಿ ಇರಲಿದೆಯಂತೆ ಮೂರನೇ ಅಲೆ; ಜನ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಅಪಾಯ ಗ್ಯಾರಂಟಿ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಸೋಂಕಿನ ಎರಡನೇ ಅಲೆ ಈಗಾಗಲೇ ಜನರನ್ನು ಸಾಕಷ್ಟು ಆತಂಕಕ್ಕೆ ದೂಡಿದೆ. ಇದರ ಮಧ್ಯೆಯೂ ರಾಜ್ಯದಲ್ಲಿ ಮೂರನೇ ಅಲೆಯ ಮಾತು ಕೇಳಿ ಬರುತ್ತಿದ್ದು, ಜನ ಬೆಚ್ಚಿ ಬೀಳುವಂತಾಗಿದೆ.

ಸದ್ಯ ರಾಜ್ಯದಲ್ಲಿ ಪ್ರತಿ ದಿನ 40 ಸಾವಿರದ ಆಸುಪಾಸಿನಲ್ಲಿ ಸೋಂಕಿತರ ಸಂಖ್ಯೆ ದಾಖಲಾಗುತ್ತಿದೆ. ಈ ಸಂದರ್ಭದಲ್ಲಿ ಇದೇ ವರ್ಷದ ಅಕ್ಟೋಬರ್ ತಿಂಗಳ ಸಮಯದಲ್ಲಿ ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ತಾಂತ್ರಿಕ ಸಲಹಾ ಸಮಿತಿಯ ವಿಶ್ಲೇಷಕರ ತಂಡ ನೀಡಿರುವ ವರದಿಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ರಾಜ್ಯದಲ್ಲಿ ಮೇ ಹಾಗೂ ಜುಲೈ ತಿಂಗಳವರೆಗೆ 2ನೇ ಅಲೆಯೇ ಇರಲಿದ್ದು, ಆದಾದ ನಂತರ ಮೂರನೇ ಅಲೆ ಇರಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಯುರೋಪಿಯನ್ ರಾಷ್ಟ್ರಗಳಲ್ಲಿ ಕೊರೊನಾ ಪರಿಸ್ಥಿತಿ ಗಮನಿಸಿದರೆ ಖಂಡಿತವಾಗಿಯೂ ರಾಜ್ಯದಲ್ಲಿಯೂ ಮೂರನೇ ಅಲೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಈಗಿನಿಂದಲೇ ಜನರು ಎಚ್ಚರ ವಹಿಸಬೇಕು ಎಂದು ತಜ್ಞರು ಕಿವಿ ಮಾತು ಹೇಳಿದ್ದಾರೆ.

ಲಸಿಕೆ ಪಡೆದುಕೊಳ್ಳುವುದರ ನಡುವೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕೈಗಳನ್ನು ಶುದ್ಧವಾಗಿ ತೊಳೆಯುವುದು ಸೇರಿದಂತೆ ಕೊವಿಡ್-19 ತೊಲಗಿಸಲು ವೈದ್ಯರು ನೀಡಿರುವ ಸಲಹೆಗಳನ್ನು ಚಾಚು ತಪ್ಪದೆ ಜನರು ನಿರ್ವಹಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ರಾಜ್ಯದ ಕೆಲವು ಪ್ರದೇಶಗಲ್ಲಿ ಭರ್ಜರಿ ಮಳೆ; ಕೆಲವೆಡೆ ಅವಾಂತರ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಗದಗ ಜಿಲ್ಲೆಯೂ ಸೇರಿದಂತೆ ರಾಜ್ಯದ ಕೆಲವು ಪ್ರದೇಶಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಅಲ್ಲದೇ, ಹಲವು ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಕಲಬುರಗಿ ಜಿಲ್ಲೆಯಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾರೆ.

ಗದಗ ತಾಲೂಕಿನ ಹೊಂಬಳ, ವೆಂಕಟಾಪೂರ ಜಿಲ್ಲೆಯ ನರಗುಂದದಲ್ಲೂ ಮಳೆಯಾಗಿದೆ. ನರಗುಂದದ ಯಡಿಯೂರು ಸಿದ್ಧಲಿಂಗೇಶ್ವರ ಶಾಲೆಯ ಆವರಣದಲ್ಲಿನ ತಿಂಗಿನ ಮರಕ್ಕೆ ಬೆಂಕಿ ಬಿದ್ದಿದೆ. ಹಾವೇರಿ ಜಿಲ್ಲೆಯಲ್ಲಿ ಮೂರು ತೆಂಗಿನ ಮರಗಳು ಹೊತ್ತಿ ಉರುದಿವೆ. ದಾವಣಗೆರೆಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿವೆ. ಹುಬ್ಬಳ್ಳಿ, ಹಾವೇರಿ, ಕಲಬುರಗಿ, ದಾವಣಗೆರೆ ಹಾಗೂ ಮಲೆನಾಡು ಪ್ರದೇಶ, ಕರಾವಳಿ ಪ್ರದೇಶದ ಹಲವು ಭಾಗಗಳಲ್ಲಿ ಮಳೆ ಭರ್ಜರಿಯಾಗಿ ಸುರಿದಿದೆ.

ಕಲಬುರಗಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ. ಹೀಗಾಗಿ ಅಫಜಲಪುರ ತಾಲೂಕಿನ ಬಡದಾಳ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಸಾವನ್ನಪ್ಪಿದ್ದಾನೆ. ಭೋಜರಾಜ ಅತನೂರೆ (54) ಸಾವಿಗೀಡಾದ ದುರ್ದೈವಿ ರೈತ. ದಾವಣಗೆರೆ ಜಿಲ್ಲೆಯ ಹರಿಹರ, ಹರಪ್ಪನಹಳ್ಳಿ ಸೇರಿದಂತೆ ಹಲವು ಕಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಪರಿಣಾಮ ಮನೆಗಳ ಮೇಲ್ಛಾವಣಿಗಳು ಹಾರಿ ಹೋಗಿವೆ.

ಹಾವೇರಿ ನಗರದ ಹತ್ತರಗೇರಿ ಓಣಿಯಲ್ಲಿ ಸಿಡಿಲು ಬಡಿದು ಮೂರು ತೆಂಗಿನ ಮರಗಳು ಹೊತ್ತಿ ಉರಿದಿವೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಹುಬ್ಬಳ್ಳಿ ನಗರ ಹಾಗೂ ಸುತ್ತಮುತ್ತಲಿನ ಕೆಲವು ಹಳ್ಳಿಗಳಲ್ಲಿ ಮಳೆ ಸುರಿದಿದೆ. ನಗರದ ತುಂಬಾ ಮಳೆ ಉತ್ತಮವಾಗಿ ಸುರಿದ ಪರಿಣಾಮ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜನರು ಪರದಾಟ ನಡೆಸಿದ್ದಾರೆ. ಅಲ್ಲದೇ, ರಸ್ತೆಗಳು ತುಂಬಿ ಹರಿದಿವೆ. ಶಿವಮೊಗ್ಗ ಹಾಗೂ ಮಡಿಕೇರಿ ಸುತ್ತಮುತ್ತ ಮಳೆ ಉತ್ತಮವಾಗಿ ಸುರಿದ ವರದಿಯಾಗಿದೆ.

ಪಂಜಾಬ್ ಗೆ ಗೆಲುವಿನ ಸಿಹಿ ಉಣಿಸಿದ್ದ ಬ್ರಾರ್ ಆಟಕ್ಕೆ ಮನಸೋತ ಯುವರಾಜ್!

ವಿಜಯಸಾಕ್ಷಿ ಸುದ್ದಿ, ಅಹ್ಮದಾಬಾದ್

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏ. 30ರಂದು ನಡೆದಿದ್ದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಪಂಜಾಬ್ ತಂಡ ರಾಯಲ್ ಚಾಲೆಂಜರ್ಸ್ ತಂಡದ ವಿರುದ್ಧ ಭರ್ಜರಿಯಾಗಿ ಜಯ ಗಳಿಸಿದೆ.

ಆತ್ಮವಿಶ್ವಾಸದಲ್ಲಿ ತೇಲುತ್ತಿದ್ದ ಬೆಂಗಳೂರು ತಂಡವನ್ನು ಸತತ ಸೋಲನ್ನು ಕಂಡಿದ್ದ ಪಂಜಾಬ್ ಬರೋಬ್ಬರಿ 34 ರನ್ ಗಳ ಅಂತರದಿಂದ ಭರ್ಜರಿಯಾಗಿ ಜಯಗಳಿಸಿ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಪಂಜಾಬ್‌ ನ ಸ್ಪಿನ್ನರ್ ಹರ್‌ಪ್ರೀತ್‌ ಬ್ರಾರ್.

ಈ ಆವೃತ್ತಿಯ ಪ್ರಥಮ ಪಂದ್ಯವಾಡಿರುವ ಬ್ರಾರ್, ಆರ್‌ ಸಿಬಿಯ ಪ್ರಮುಖ ವಿಕೆಟ್‌ ಗಳನ್ನು ಕೆಡವಿ ಪಂಜಾಬ್‌ ಪಾಲಿಗೆ ಭರ್ಜರಿ ಜಯ ಧಕ್ಕಿಸಿ ಕೊಟ್ಟರು. ಬ್ರಾರ್, ವಿರಾಟ್ ಕೊಹ್ಲಿ (35 ರನ್), ಗ್ಲೆನ್ ಮ್ಯಾಕ್ಸವೆಲ್ (0), ಎಬಿ ಡಿ ವಿಲಿಯರ್ಸ್ (3) ಸೇರಿದಂತೆ ಪ್ರಮುಖ ಮೂರು ವಿಕೆಟ್ ಗಳನ್ನು ಕಿತ್ತರು. ಅಲ್ಲದೇ, ಬ್ಯಾಟಿಂಗ್ ನಲ್ಲಿ ಕೂಡ ಅಜೇಯ 25ರನ್ (17 ಎಸೆತ) ಅಮೋಘ ಪ್ರದರ್ಶನ ನೀಡಿ ತಂಡದ ಮೊತ್ತ ಹಿಗ್ಗುವಂತೆ ಮಾಡಿದ್ದರು.

ಅವರ ವಿರೋಚಿತ ಪ್ರದರ್ಶನಕ್ಕೆ ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್‌ ಟ್ವೀಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹರ್‌ಪ್ರೀತ್ ಬ್ರಾರ್ ಪ್ರದರ್ಶನಕ್ಕೆ ಖುಷಿಯಾಗಿದೆ. ಗುಣಮಟ್ಟದ ಬ್ಯಾಟ್ಸಮನ್ ಗಳ ವಿಕೆಟ್ ಪಡೆಯುವುದು ಮತ್ತು ಪಂದ್ಯದ ಕೊನೆಯಲ್ಲಿ ಅಗತ್ಯ ರನ್‌ ಕೊಡುಗೆ ನೀಡಿದ್ದು ಖುಷಿಯಾಗಿದೆ ಎಂದು ಯುವಿ ಟ್ವೀಟ್‌ ನಲ್ಲಿ ಬರೆದುಕೊಂಡಿದ್ದಾರೆ.

ಅಲ್ಲದೇ, ರಾಜ್ಯ ಕ್ರಿಕೆಟ್‌ ನ ವಿಚಾರಕ್ಕೆ ಬಂದರೆ ನಿನ್ನ ಮೇಲಿನ ಟೀಕೆಗಳಿಗೆ ಉತ್ತರಿಸಲು ಉತ್ತಮ ವಿಧಾನವಿದು. ಮ್ಯಾಚ್ ವಿನ್ನರ್ ಆಟಗಾರನ ನೀಡಿ ಪಂಜಾಬ್ ಕ್ರಿಕೆಟ್ ಅಸೋಸಿಯೇಶನ್, ಹರ್ಭಜನ್‌ ಸಿಂಗ್ ಒಳ್ಳೆಯ ಕೆಲಸ ಮಾಡಿದಿರಿ ಎಂದು ಬರೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತನ್ನ ದಾಖಲೆಯನ್ನು ತಾನೇ ಮುರಿದು ಸಾಗುತ್ತಿರುವ ಮಹಾಮಾರಿ!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಸೋಂಕು ಇಂದು ಕೂಡ ತನ್ನ ದಾಖಲೆ ಮುರಿದು ಶರವೇಗದಲ್ಲಿ ಸಾಗಿದೆ. ಇಂದು ಬರೋಬ್ಬರಿ 40,990 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಅಲ್ಲದೇ, 271 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು 19,353 ಜನರಲ್ಲಿ ಸೋಂಕು ಬಂದಿದೆ. 21 ವರ್ಷದ ಯುವಕ ಸೇರಿದಂತೆ 162 ಜನ ಬಲಿಯಾಗಿದ್ದಾರೆ. ಇಂದು ಮೈಸೂರಿನಲ್ಲಿ 3,529 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 4,05,068ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15,64,131ಕ್ಕೆ ಏರಿಕೆ ಕಂಡಿದೆ. ಈ ಪೈಕಿ 11,43,250 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ಇಲ್ಲಿಯವರೆಗೆ 15,794 ಜನ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನುಳಿದಂತೆ ರಾಜ್ಯದಲ್ಲಿ ತುಮಕೂರು 2,308, ಕಲಬುರಗಿ 1,407, ಮಂಡ್ಯ 1,235, ಬಳ್ಳಾರಿ 1,163, ಕೊಪ್ಪಳ 1019 ದಕ್ಷಿಣ ಕನ್ನಡ 933, ಚಿಕ್ಕಬಳ್ಳಾಪುರದ 820, ಹಾಸನ 790, ಉತ್ತರ ಕನ್ನಡ 687 ಮತ್ತು ಉಡುಪಿಯ 670 ಜನರಿಗೆ ಸೇರಿದಂತೆ ವಿವಿಧ ಜಿಲ್ಲೆಗಳ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಕೊರೋನಾ; ಶನಿವಾರ ಜಿಲ್ಲೆಯಲ್ಲಿ 147 ಜನರಿಗೆ ಸೋಂಕು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 01 ಶನಿವಾರ ಜಿಲ್ಲೆಯಲ್ಲಿ ಐದನೇ ದಿನವೂ ಕೊರೋನಾ ಸೋಂಕು ಶತಕ ದಾಟುತ್ತಾ ಸಾಗಿದೆ. ಇಂದು 147 ಜನರಿಗೆ ಸೋಂಕು ತಗುಲುವ ಮೂಲಕ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಸಾಗಿದೆ.

ಇಂದಿನ 147 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 12849 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -76, ಮುಂಡರಗಿ-21, ನರಗುಂದ-11, ರೋಣ-17, ಶಿರಹಟ್ಟಿ-20, ಹೊರಜಿಲ್ಲೆಯ-02 ಸೇರಿದಂತೆ 147 ಪ್ರಕರಣಗಳು ದೃಢಪಟ್ಟಿವೆ.

ಇದುವರೆಗೂ ಜಿಲ್ಲೆಯಲ್ಲಿ
141 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಇಂದು 120 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 11958 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲಿ 750 ಪ್ರಕರಣಗಳು ಸಕ್ರಿಯವಾಗಿದ್ದು, 592 ಜನರು ಮನೆಯಲ್ಲಿ, 158 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 205 ಜನರ ವರದಿ ಬರಲು ಬಾಕಿ ಇದೆ.

ಪರೀಕ್ಷೆಗಾಗಿ ಸಂಗ್ರಹಿಸಿದ 344592 ಮಾದರಿಗಳಲ್ಲಿ 331538 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಒಂದು ವಾರಗಳ ಲಾಕ್ ಡೌನ್!

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೊರೊನಾ ಹಾವಳಿ ನಿಯಂತ್ರಣಕ್ಕೆ ಬಾರದ ಕಾರಣದಿಂದಾಗಿ ದೆಹಲಿಯಲ್ಲಿ ಮತ್ತೆ ಒಂದು ವಾರಗಳ ಕಾಲ ಲಾಕ್ ಡೌನ್ ಮುಂದುವರೆಸಸಾಲಿದೆ.

ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಲಾಕ್ ಡೌನ್ ಅವಧಿಯನ್ನು ಒಂದು ವಾರ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಈ ಹಿಂದೆ ಘೋಷಿಸಿದ್ದ ಲಾಕ್ ಡೌನ್ ಮೇ. 3ರ ಬೆಳಿಗ್ಗೆ 5ಕ್ಕೆ ಅಂತ್ಯವಾಗಲಿತ್ತು. ಆದರೆ, ಕೊರೊನಾ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ, ಒಂದು ವಾರದ ಲಾಕ್‍ ಡೌನ್ ಘೋಷಿಸಿದೆ.

ಈ ಹಿಂದೆಯೇ ಅರವಿಂದ್ ಕೇಜ್ರಿವಾಲ್ ಅವರು ಲಾಕ್ ಡೌನ್ ವಿಸ್ತರಿಸುವ ಕುರಿತು ಹೇಳಿದ್ದರು. ಸದ್ಯ ಮೇ 10ರ ಬೆಳಿಗ್ಗೆ 5ರ ವರೆಗೂ ದೆಹಲಿ ಲಾಕ್ ಆಗಿರಲಿದೆ ಎಂದು ಹೇಳಿದ್ದಾರೆ. ಹಿಂದಿನ ಎಲ್ಲ ಮಾರ್ಗಸೂಚಿಗಳು ಕೂಡ ಅನ್ವಯವಾಗಲಿವೆ.

ಮೇ 3ಕ್ಕೆ ಲಾಕ್‍ ಡೌನ್ ತೆರವಾದರೂ ಅಂಗಡಿ ತೆರೆಯಲ್ಲ ಎಂದು ದೆಹಲಿಯ ವ್ಯಾಪಾರಿಗಳು ಶುಕ್ರವಾರ ಘೋಷಣೆ ಮಾಡಿದ್ದರು. ಸರ್ಕಾರದ ಲಾಕ್ ಸಡಿಲಗೊಳಿಸಿದರೂ ನಾವು ಸ್ವಯಂ ನಿರ್ಬಂಧ ಹಾಕಿಕೊಳ್ಳುತ್ತಿದ್ದೇವೆ ಎಂದು 150ಕ್ಕೂ ಅಧಿಕ ವ್ಯಾಪಾರಿ ಸಂಘಟನೆಗಳು ಹೇಳಿದ್ದವು. ಸದ್ಯದ ಸ್ಥಿತಿಯಲ್ಲಿ ಸರ್ಕಾರ ಇನ್ನೂ ಕೆಲವು ದಿನಗಳ ಕಾಲ ಲಾಕ್ ಡೌನ್ ಹೇರುವುದು ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದರು.

ಕೊರೊನಾಗಿಂತ ನೀರಿನದೇ ದೊಡ್ಡ ಸಮಸ್ಯೆ! ಎಂಟು ದಿನಗಳಿಂದ ನೀರಿಲ್ಲದೆ ಪರಿತಪಿಸುತ್ತಿರುವ ಗುಡಗೇರಿ ಗ್ರಾಮಸ್ಥರು


ನೀರಿಲ್ಲದೆ ಸ್ವಚ್ಛತೆ ಕಾಪಾಡುವುದು ಹೇಗೆ?

ವಿಜಯಸಾಕ್ಷಿ ಸುದ್ದಿ, ಅಳವಂಡಿ

ಅಳವಂಡಿ ಹೊಬಳಿಯ ಕವಲೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಡುಗೇರಿ ಗ್ರಾಮದ ಜನತಾ ಕಾಲನಿಯಲ್ಲಿ ಕೊರೊನಾದಿಂದ ಕಂಗಾಲಾದ ಜನತೆಗೆ ನೀರಿನ ಸಮಸ್ಯೆಯೂ ತಲೆನೋವಾಗಿ ಕಾಡುತ್ತಿದೆ.

ಗುಡಿಗೇರಿಯು ಕೊಪ್ಪಳ ವಿಧಾನಸಭಾ ಕ್ಷೇತ್ರದ ಕೊನೆಯ ಗ್ರಾಮವಾಗಿದ್ದು, ಜನತಾ ಕಾಲನಿಯಲ್ಲಿ ೫೦ಕ್ಕೂ ಹೆಚ್ಚು ಮನೆಗಳಿವೆ. ಸುಮಾರು ೮ ದಿನಗಳಿಂದ ನೀರು ಬಂದಿಲ್ಲ.

ನೀರು ಸರಬರಾಜು ಸರಿಯಾಗಿ ಆಗದಿರುವುದರಿಂದ ತುಂಬ ಸಮಸ್ಯೆ ಎದುರಿಸುತ್ತಿದ್ದೇವೆ. ಮುಸುರೆ ತೊಳೆದರೆ ಬಟ್ಟೆ ಒಗೆಯಲು ಆಗುವುದಿಲ್ಲ, ಬಟ್ಟೆ ಒಗೆದರೆ ಸ್ನಾನಕ್ಕೆ ನೀರು ಇರುವುದಿಲ್ಲ. ಈ ಕಾಲನಿಯಲ್ಲಿ ವಯಸ್ಸಾದವರು ಇದ್ದಾರೆ, ತವರು ಮನೆಗೆ ಬಾಣಂತಿ ಆರೈಕೆಗೆ ಬಂದವರಿದ್ದಾರೆ. ಆದರೆ, ನೀರು ಪೂರೈಕೆಯೇ ಸಮರ್ಪಕವಾಗಿಲ್ಲ. ವಾಟರ್ ಮ್ಯಾನ್ ನೀರು ಬಿಟ್ಟು ಮನೆಗೆ ಹೊಗುತ್ತಾನೆ. ನೀರು ಬಂದಿದೆಯೇ ಇಲ್ಲವೇ ಎನ್ನುವುದನ್ನು ಗಮನಿಸುವುದಿಲ್ಲ. ಸರಿಯಾಗಿ ಕೆಲಸ ಮಾಡುವುದಿಲ್ಲ. ನೀರು ಬಂದಿರುವುದಿಲ್ಲ ಎಂದು ಕೇಳಿದರೆ ಕರೆಂಟ್ ಇಲ್ಲ, ನೀರು ಸಂಜೆ ಬರುತ್ತೆ, ಮೋಟರ್ ಸುಟ್ಟಿದೆ ಎನ್ನುವ ಕಾರಣ ಹೇಳುತ್ತಾನೆ ಎಂದು ಗ್ರಾಮಸ್ಥರು ದೂರಿದರು.

ನೀರು ಕೊಟ್ಟರೆ ಸಾಕು

ಇನ್ನು, ಜನಪ್ರತಿನಿಧಿಗಳೂ ಕೈಗೆ ಸಿಗುವುದಿಲ್ಲ. ಬಾಣಂತಿಯ ಬಟ್ಟೆಗಳನ್ನು ತೊಳೆಯಲು ಹಳ್ಳಕ್ಕೆ ಹೊತ್ತುಕೊಂಡು ಹೊಗಬೇಕು. ಇಲ್ಲಿ ನೀರು ಬರದೇ ಇದ್ದರೆ, ಕೆರೆಗಳಿಗೆ ನೀರು ತರಲು ಹೊಗುತ್ತೇವೆ. ಮಳೆ ಬಂದರೆ ಅದನ್ನು ತರಲಾಗದು. ಕೆರೆಯ ದಾರಿ ಕೆಸರಾಗಿ ನಡೆಯದಂತಾಗುತ್ತದೆ. ಆರೋಗ್ಯ ಇಲಾಖೆಯವರು ಕೊರೊನಾ ಇದೆ, ಸ್ವಚ್ಛತೆ ಕಾಪಾಡಿ ಎನ್ನುತ್ತಾರೆ.

ಬರುವ ನೀರಿನಲ್ಲಿ ಹೇಗೆ ಸ್ವಚ್ಛತೆ ಕಾಪಾಡಿಕೊಳ್ಳುವುದೆಂದು ನಮಗೆ ತಿಳಿಯುತ್ತಿಲ್ಲ. ಚಿಕ್ಕ ಮಕ್ಕಳು, ವಯಸ್ಸಾದವರು, ಬಾಣಂತಿಯರು, ಬಸುರಿಯರು ಇದ್ದಾರೆ. ನಮಗೆ ಸಿ.ಸಿ. ರಸ್ತೆ ಬೇಡ, ಯಾವ ಸೌಲಭ್ಯವೂ ಬೇಡ. ಮೊದಲು ಸರಿಯಾಗಿ ನೀರು ಕೊಡಿ. ಇಂತಹ ದುಃಸ್ಥಿತಿಯಲ್ಲಿ ಜೀವನ ಸಾಗಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲಾ ಪಂಚಾಯತ್ ಕ್ಷೇತ್ರವಾದರೂ ಸಮಸ್ಯಗಳು ತಪ್ಪಲಿಲ್ಲವೆಂದು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.

ನೀರಿನ ವ್ಯವಸ್ಥೆ ಮಾಡುತ್ತೇವೆ
ನೀರಿನ ಸಮಸ್ಯೆಯನ್ನು ಸರಿಪಡಿಸಲು ಕ್ರಮ ತೆಗೆದುಕೊಂಡಿದ್ದೇವೆ. ಈಗಲೇ ನೀರು ಬಿಡಲು ವಾಟರ್ ಮ್ಯಾನ್‌ಗೆ ತಿಳಿಸಿದ್ದೇನೆ. ಸಂಪೂರ್ಣ ಸರಿಯಾದ ನೀರಿನ ವ್ಯವಸ್ಥೆ ಮಾಡುತ್ತೇವೆ.

  • ಜ್ಯೋತಿ ಮಹಾಂತಯ್ಯ ಸಿಂಧೋಗಿಮಠ
    ಗ್ರಾ.ಪಂ. ಅಧ್ಯಕ್ಷೆ, ಕವಲೂರು

ಎಂಟು ದಿನವಾಯಿತು
ಸರಿಯಾಗಿ ನೀರು ಬರುವುದಿಲ್ಲ. ಈಗ ೮ ದಿನವಾಯಿತು. ನೀರು ಬಂದಿಲ್ಲ. ಬಾಣಂತಿ ಮನೆಯವರು ನೀರು ಬಾರದೆ ಹಳ್ಳಕ್ಕೆ ಬಟ್ಟೆ ತೆಗೆದುಕೊಂಡು ಹೋಗಿದ್ದಾರೆ. ಕೊರೊನಾಗಿಂತ ನೀರಿನ ಸಮಸ್ಯೆ ನಮ್ಮನ್ನು ಬಹಳವಾಗಿ ಕಾಡುತ್ತಿದೆ.

  • ದೇವಮ್ಮ, ಗುಡಗೇರಿ ಗ್ರಾಮಸ್ಥೆ
error: Content is protected !!