Home Blog Page 3174

ಬಿಜೆಪಿ ಯುವ ಮುಖಂಡ ಅನಿಲ ಮೆಣಸಿನಕಾಯಿಗೆ ಕೊರೊನಾ

ವಿಜಯಸಾಕ್ಷಿ ಸುದ್ದಿ, ಗದಗ

ಬಿಜೆಪಿಯ ಯುವ ಮುಖಂಡ ಅನಿಲ ಮೆಣಸಿನಕಾಯಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಸೋಂಕು ಇರುವುದು ಪತ್ತೆಯಾಗಿದೆ.

ಜ್ವರದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ತೆರೆಳಿದಾಗ ಸೋಂಕು ಇರುವುದು ಗೊತ್ತಾಗಿದೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಭಿಮಾನಿಗಳ ಪ್ರಾರ್ಥನೆ : ತಮ್ಮ ನೆಚ್ಚಿನ ಮುಖಂಡ ಅನಿಲ ಮೆಣಸಿನಕಾಯಿ ಅವರಿಗೆ ಕೊರೊನಾ ಸೋಂಕು ಇರುವುದು ಗೊತ್ತಾಗಿ ಸ್ನೇಹಿತರು, ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

ಅಡವಿಸೋಮಾಪುರದಲ್ಲಿ ಮಾಸ್ಕ್ ವಿತರಣೆ

ವಿಜಯಸಾಕ್ಷಿ ಸುದ್ದಿ, ಗದಗ

ಸಮೀಪದ ಅಡವಿಸೋಮಾಪುರದಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಸಾರ್ವಜನಿಕರಿಗೆ ಮಾಸ್ಕ್ ವಿತರಣೆ ಮಾಡಲಾಯಿತು. ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ಅಧ್ಯಕ್ಷ ಶಾಮಸುಂದರ್ ಡಂಬಳ ನೇತೃತ್ವದಲ್ಲಿ ಮಾಸ್ಕ್ ವಿತರಣೆ ಮಾಡಲಾಯಿತು.

ಅನಾವಶ್ಯಕವಾಗಿ ಮನೆಯಿಂದ ಹೊರಗೆ ಬರಬಾರದು, ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳವಂತೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸೇರಿದಂತೆ ಮಾಜಿ ಸದಸ್ಯ ರಾಜು ಪೆಂಡಾರ, ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

ಕೊರೋನಾ; ಬುಧವಾರ 189 ಜನರಿಗೆ ಸೋಂಕು, ಮೂವರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 05 ಬುಧವಾರ ಜಿಲ್ಲೆಯಲ್ಲಿ ಕೊರೋನಾ ಸೋಂಕು ತನ್ನ ‌ಅಟ್ಟಹಾಸ ಮುಂದುವರಿಸಿದೆ. ಸತತ ಮೂರನೇ ದಿನವೂ ಎರಡು ನೂರರ ಗಡಿ ಸಮೀಪದಲ್ಲಿ ಬಂದು ನಿಂತಿದೆ. ಅದರಲ್ಲೂ ಸೋಂಕಿಗೆ ಮೂವರು ಮೃತಪಟ್ಟಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

ಇಂದಿನ 189 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13596 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -118 , ಮುಂಡರಗಿ-16, ನರಗುಂದ-14, ರೋಣ-33, ಶಿರಹಟ್ಟಿ-02, ಹೊರಜಿಲ್ಲೆಯ-06 ಸೇರಿದಂತೆ 189 ಪ್ರಕರಣಗಳು ದೃಢಪಟ್ಟಿವೆ.

ರಾಜ್ಯ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಿಂದಾಗಿ ಮೂವರು ಮೃತಪಟ್ಟಿದ್ದಾರೆ. ಗದಗನ ಸಿಡಿಒ ಜೈನ ಶಾಲೆಯ ಹತ್ತಿರದ 65, ಮೇ 02 ರಂದು ಖಾಸಗಿ ಆಸ್ಪತ್ರೆಯಲ್ಲಿ, ಬೆಟಗೇರಿಯ 60 ವರ್ಷದ ಪುರುಷ ಮೇ.1 ರಂದು ಜಿಮ್ಸ್ ನಲ್ಲಿ, ಹಾಗೂ ಜಿಲ್ಲೆಯ ಲಕ್ಷ್ಮೇಶ್ವರ ದ 78 ವರ್ಷದ ಮಹಿಳೆ ಮೇ 04 ರಂದು ಜಿಮ್ಸ್ ನಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.
ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
147 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 123 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 12521 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 928 ಪ್ರಕರಣಗಳು ಸಕ್ರಿಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 213 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗ್ರಾಮೀಣ ಠಾಣೆ ಪೊಲೀಸರ ಕಾರ್ಯಚರಣೆ; ಮೂವರು ಹೆದ್ದಾರಿ ಸುಲಿಗೆಕೋರರ ಬಂಧನ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹೆದ್ದಾರಿಯಲ್ಲಿ ವಾಹನ ಸವಾರರನ್ನು ತಡೆದು ಜೀವ ಬೆದರಿಕೆ ಹಾಕಿ ಹಣ ವಸೂಲಿ ಮಾಡುತ್ತಿದ್ದ ಮೂವರು ಸುಲಿಗೆಕೋರರನ್ನು ಬಂಧನ ಮಾಡುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ಮೂರು ದಿನಗಳ ಹಿಂದೆಯಷ್ಟೇ ಹುಬ್ಬಳ್ಳಿಯ ಬೆಳಗಲಿ ಕ್ರಾಸ್ ಬಳಿಯಲ್ಲಿ ರಾತ್ರಿ ವೇಳೆ ಶಿರಾಜ್ ಕೋಳೂರ ಹಾಗೂ ಆತನ ಸ್ನೇಹಿತರಿಗೆ ಮೂವರು ಸುಲಿಗೆಕೋರರು ಚಾಕುವಿನಿಂದ ಹೊಡೆದು, ಗನ್ ತೋರಿಸಿ ಕಳ್ಳತನ ಮಾಡಿಕೊಂಡ ಹೋದ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಖಾಕಿ ಪಡೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಿ ಮೂವರು ಸುಲಿಗೆಕೋರರನ್ನು ವಶಕ್ಕೆ ಪಡೆದಿದ್ದಾರೆ.

ಸೆಟ್ಲಮೆಂಟ್ ನಿವಾಸಿ ಶ್ರೀನಿವಾಸ ತಿರುಪತಿ, ಸಿದ್ಧಾರ್ಥ್ ನವಲಗುಂದ, ಸುಧಾಕರ್ ಗಬ್ಬೂರ ಎಂಬುವವರೇ ಬಂಧಿತ ಆರೋಪಿಗಳು. ಇನ್ನೂ ಬಂಧಿತ ಆರೋಪಿಗಳಿಂದ ಒಂದು ಬುಲೆಟ್ ಬೈಕ್, 7,500ರೂ ನಗದು ಸೇರಿದಂತೆ ಒಂದು ಏರ್ ಗನ್, ಒಂದು ಕತ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೂ ಬಂಧಿತ ಆರೋಪಿಯಲ್ಲಿ ಒಬ್ಬ ರೌಡಿಶೀಟರ್ ಆಗಿರುವುದು ತನಿಖೆಯ ನಂತರ ಬೆಳಕಿಗೆ ಬಂದಿದೆ.

ಇನ್ನೂ ಈ ಕುರಿತು ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಪಿ.ಕೃಷ್ಣಕಾಂತ, ರಾತ್ರಿಯಲ್ಲಿ ಹೈವೆ ಮೇಲೆ ನಿಂತು ರಾಬರಿ ಮಾಡುತ್ತಿದ್ದ ಕಳ್ಳರ ಗ್ಯಾಂಗ್ ಬಂಧನ ಮಾಡಲಾಗಿದೆ. ಮೂರು ಜನರ ಕಳ್ಳರ ಗ್ಯಾಂಗ್ ನಿಂದ ರಾಬರಿ ಮಾಡುತ್ತಿದ್ದ ಮಾಹಿತಿ ಲಭ್ಯವಾದ ಬೆನ್ನಲ್ಲೇ ಕಾರ್ಯಾಚರಣೆ ಮೂಲಕ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಸಾರ್ವಜನಿಕರ ಭಯಪಡದೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

5ಲಕ್ಷ ರೂ, ವೆಚ್ಚದ ಉದ್ಯೋಗ ಖಾತ್ರಿ ಯೋಜನೆಗೆ ಗ್ರಾ.ಪಂ ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ

ವಿಜಯಸಾಕ್ಷಿ ಸುದ್ದಿ, ನರಗುಂದ

5 ಲಕ್ಷ, ರೂಗಳ ಉದ್ಯೋಗ ಖಾತ್ರಿ ಯೋಜನೇಯ ಅಡಿಯಲ್ಲಿ ನ. ಶಾ.ಕಾ. 12ನೇ ಬ್ಲಾಕ್‌ ನ 1 ಆರ್ ಕಾಲುವೆಯ ಹೂಳು ಎತ್ತುವ ಕೆಲಸಕ್ಕೆ ಚಿಕ್ಕ ನರಗುಂದ ಗ್ರಾಮ ಪಂಚಾಯತಿ ಅಧ್ಯಕ್ಷ ಮುತ್ತು ರಾಯರಡ್ಡಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಕಾರ್ಮಿಕರು ಪಾಲ್ಗೊಂಡು ಉದ್ಯೋಗ ಖಾತ್ರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕೋವಿಡ್- 19 ಎರಡನೇ ಅಲೆ ಅತಿ ವೇಗವಾಗಿ ಜನರು ಸರಕಾರದ ಮಾರ್ಗಸೂಚಿ ಪಾಲಿಸಬೇಕು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದರು.

ಅನಗತ್ಯ ಸಂಚರಿಸದೇ, ಸಾಮಾಜಿಕ ಅಂತರ ದೊಂದಿಗೆ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ಯಾನಿಟೇಸರ್ ನಿಂದ ಆಗಾಗ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಮುತ್ತು ರಾಯರಡ್ಡಿ ಹೇಳಿದರು.

ಗ್ರಾಮಕ್ಕೆ ಹೊರ ಜಿಲ್ಲೆ, ಹೊರರಾಜ್ಯದಿಂದ ಬಂದಿರುವ ಯಾರಾದರೂ ಇದ್ದರೆ ಅಂತವರ ಮಾಹಿತಿಯನ್ನು ಗ್ರಾ.ಪಂ. ಸದಸ್ಯರಿಗೆ, ಸಿಬ್ಬಂದಿಗಳಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಅಥವಾ ಅರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಕೂಡಲೆ ತಿಳಿಸಿಬೇಕು ಎಂದು ಸೂಚನೆ ನೀಡಿದರು.

ಕೊರೊನಾ ಎಂಬ ಮಹಾಮಾರಿ ರೋಗವನ್ನು ಚಿಕ್ಕನರಗುಂದ ಗ್ರಾಮದಲ್ಲಿ ಬರದೆ ಇರುವ ಹಾಗೆ ನೋಡಿಕೊಳ್ಳಲು ತಾವೆಲ್ಲರೂ ಕೈ ಜೋಡಿಸಬೇಕು ಎಂದು ಮುತ್ತು ರಾಯರಡ್ಡಿ ಮನವಿ ಮಾಡಿದರು.

ಗ್ರಾ.ಪಂ. ಸೆಕ್ರೆಟರಿ ಕೆಂಚಪ್ಪ ಮಾದರ, ಕ್ಲರ್ಕ್ ಶಿವು ಯಲಿಗಾರ, ಸಿಪಾಯಿ ಸಿದ್ದಪ್ಪ ಹಳಕಟ್ಟಿ ಸೇರಿದಂತೆ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು.

ಅಪರಿಚಿತರ ಮನೆಗೆ ನುಗ್ಗಿ ಆತ್ಮಹತ್ಯೆಗೆ ಯತ್ನಿಸಿದ ಯುವಕ!

ವಿಜಯಸಾಕ್ಷಿ ಸುದ್ದಿ, ಉಪ್ಪಿನಂಗಡಿ

ಅಪರಿಚಿತ ವ್ಯಕ್ತಿಯೊಬ್ಬ ಮನೆಯ ಕೊಟ್ಟಿಗೆಗೆ ನುಗ್ಗಿ ಆತ್ಮಹತ್ಯೆಗೆ ಯತ್ನಿಸಿ, ರಾದ್ಧಾಂತ ಸೃಷ್ಟಿಸಿರುವ ಘಟನೆ ನಡೆದಿದೆ.

ಈ ಘಟನೆ 34 ನೆಕ್ಕಿಲಾಡಿಯಲ್ಲಿ ನಡೆದಿದೆ. ದರ್ಬೆಯ ಮಂಚು ನಾಯ್ಕ ಎಂಬುವವರ ಮನೆಗೆ ಏಕಾಏಕಿ ನುಗ್ಗಲು ಯುವಕ ಯತ್ನಿಸಿದ್ದಾನೆ. ಕೂಡಲೇ ಮನೆಯವರು ಬಾಗಿಲು ಹಾಕಿ ತಡೆಯಲು ಯತ್ನಿಸಿದ್ದಾರೆ. ಆಗ ಅಲ್ಲಿದ ಓಡಿ ಹೋಗಿ ಅವರ ಮನೆಯ ಹೊರಗೆ ಇದ್ದ ಕೊಟ್ಟಿಗೆಗೆ ನುಗ್ಗಿ, ಅಲ್ಲಿನ ಬಾಗಿಲು, ಕಿಟಕಿಗಳನ್ನೆಲ್ಲ ಮುಚ್ಚಿ ಒಳಗಿನಿಂದ ಲಾಕ್‌ ಮಾಡಿ ಬೇರೆಯವರೊಂದಿಗೆ ಫೋನ್ ನಲ್ಲಿ ಮಾತನಾಡಲು ಪ್ರಾರಂಭಿಸಿದ್ದಾನೆ.

ಈ ವ್ಯಕ್ತಿಯ ವರ್ತನೆಯಿಂದ ಗಾಬರಿಗೊಂಡ ಕುಟುಂಬಸ್ಥರು, ನೆರೆ ಹೊರೆಯವರನ್ನು ಕರೆದಿದ್ದಾರೆ. ಕಳ್ಳನಾಗಿರಬಹುದೆಂದು ಭಾವಿಸಿ, ಆತ ನುಗ್ಗಿದ ಕೊಠಡಿಯ ಬಾಗಿಲಿಗೆ ಹೊರಗಿನಿಂದ ಚಿಲಕ ಹಾಕಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆದರೆ, ನೆರೆ ಹೊರೆಯವರು ಹೆಚ್ಚಾಗಿದ್ದರಿಂದಾಗಿ ಈ ವ್ಯಕ್ತಿಯನ್ನು ಮಾತನಾಡಿಸಲು ಬಾಗಿಲು ತೆರೆದಿದ್ದಾರೆ. ಅಷ್ಟರಲ್ಲಿ ಆತ, ತನ್ನ ಕೈಯಲ್ಲಿದ್ದ ಶಾಲಿನಿಂದ ಕೊಠಡಿಯ ಛಾವಣಿಗೆ ನೇಣು ಹಾಕಿಕೊಂಡು ಅದರಲ್ಲಿ ತನ್ನ ಕುತ್ತಿಗೆಯನ್ನು ಬಿಗಿದು ನೇತಾಡುತ್ತಿದ್ದ. ಕೂಡಲೇ ಸ್ಥಳೀಯರು ಸೇರಿ ಆತನನ್ನು ರಕ್ಷಿಸಿದ್ದಾರೆ. ಅದೃಷ್ಟವಶಾತ್ ಆ ವ್ಯಕ್ತಿ ಬದುಕುಳಿದಿದ್ದಾನೆ.

ಪೊಲೀಸರು ಆಗಮಿಸಿ, ಆತನನ್ನು ವಿಚಾರಿಸಿದಾಗ ಮಾನಸಿಕ ಅಸ್ವಸ್ಥನಂತೆ ವರ್ತಿಸಿದ್ದಾನೆ. ಈ ವ್ಯಕ್ತಿ ಮಂಜಲಪಡ್ಪು ಸಮೀಪದ ಚೇವುರೆಯ ರಮೇಶ (28) ಎಂದು ತಿಳಿದು ಬಂದಿದೆ. ತನ್ನು ಕುಟುಂಬಸ್ಥರೊಂದಿಗೆ ಈತ ಸಂಬಂಧಿಕರ ಮನೆಗೆ ಬಂದಿದ್ದನಂತೆ. ಆ ನಂತರ ಕುಟುಂಬಸ್ಥರನ್ನು ಸ್ಥಳಕ್ಕೆ ಕರೆಯಿಸಿದಾಗ, ಈತ ಬೆಳಗ್ಗೆಯಿಂದ ನಾಪತ್ತೆಯಾಗಿದ್ದ. ಕುಮಾರಧಾರ ನದಿ ಸೇರಿದಂತೆ ಹಲವು ಕಡೆ ಈತನಿಗಾಗಿ ಹುಡುಕಾಡಿದ್ದೆವು ಎಂದು ಹೇಳಿದ್ದಾರೆ.

ಸ್ಮಶಾನದಲ್ಲಿ ಬಿಸಾಡಿದರಾ ಕೋವಿಡ್ ಸೋಂಕಿತ ಶವ?

ವಿಜಯಸಾಕ್ಷಿ ಸುದ್ದಿ, ಚಿಕ್ಕಬಳ್ಳಾಪುರ

ಇಲ್ಲಿಯ ನಿಮ್ಮಾಕಲಕುಂಟೆ ಹತ್ತಿರದ ಸ್ಮಶಾನದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದು, ಜನ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ನೋಡಿದ ಸ್ಥಳೀಯರು ಕೋವಿಡ್ ಸೋಂಕಿತ ಶವವನ್ನು ಮಣ್ಣು ಮಾಡದೆ ಬಿಸಾಡಿ ಹೋಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

ಈ ಮೃತ ದೇಹವನ್ನು ಬಿಸಾಡಿ ಮೂರ್ನಾಲ್ಕು ದಿನಗಳೇ ಕಳೆದಿವೆ. ಮೃತ ದೇಹ ಆಸ್ಪತ್ರೆಯಲ್ಲಿ ಪ್ಯಾಕ್ ಮಾಡಿದ ರೀತಿಯಲ್ಲಿದೆ. ನಾಯಿಗಳು ಮೃತದೇಹದ ಭಾಗಗಳನ್ನು ಎಳೆದು ತಿನ್ನುತ್ತಿವೆ. ಅಷ್ಟೇ ಇಲ್ಲ, ಈ ಸ್ಮಶಾನದ ಅಕ್ಕ ಪಕ್ಕದಲ್ಲಿಯೇ ಜನರು ವಾಸಿಸುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಜನ ಭಯದಲ್ಲಿದ್ದಾರೆ.

ಇದು ಕೋವಿಡ್ ಸೋಂಕಿತ ವ್ಯಕ್ತಿಯ ಶವವಾಗಿದ್ದರೆ ಸೋಂಕು ಹಬ್ಬಿದರೆ ಯಾರು ಹೊಣೆ? ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೇ, ಮತ್ತೊಂದೆಡೆ ಕುಣಿ ಅಗೆಯುವ ಸಂದರ್ಭದಲ್ಲಿ ಹೂತಿದ್ದ ಮೃತದೇಹವನ್ನು ಹೊರಗೆ ಹಾಕಿದಾರಾ? ಎಂಬ ಅನುಮಾನ ಕೂಡ ವ್ಯಕ್ತವಾಗುತ್ತಿದೆ. ಇದು ಏನೇ ಆಗಿದ್ದರೂ ಮೃತ ದೇಹವನ್ನು ಮಣ್ಣು ಮಾಡಿ ಆತಂಕ ದೂರ ಮಾಡುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ಐಪಿಎಲ್ ಪಂದ್ಯಗಳು ರದ್ದಾಗಿದ್ದಕ್ಕೆ ಆದ ನಷ್ಟ ಎಷ್ಟು ಗೊತ್ತಾ?

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಮಹಾಮಾರಿಯಿಂದಾಗಿ ಪ್ರಸಕ್ತ ಸಾಲಿನ ಐಪಿಎಲ್ ಪಂದ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ. ಇದರಿಂದಾಗಿ ಬಿಸಿಸಿಐಗೆ ರೂ. 2 ಸಾವಿರ ಕೋಟಿ ನಷ್ಟವಾಗಿದೆ.

ಐಪಿಎಲ್‍ ನಲ್ಲಿ ಭಾಗವಹಿಸಿದ್ದ ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಿಸಿಸಿಐ 14ನೇ ಆವೃತ್ತಿಯ ಪಂದ್ಯಗಳನ್ನು ಮುಂದೂಡಿದೆ.

ನಿಗದಿಯಂತೆ ಒಟ್ಟು 60 ಪಂದ್ಯಗಳು ನಡೆಯಬೇಕಿತ್ತು. ಆದರೆ, ಸದ್ಯ 29 ಪಂದ್ಯಗಳು ನಡೆದಿದ್ದವು. ಈ ಸಂದರ್ಭದಲ್ಲಿಯೇ ಟೂರ್ನಿಯನ್ನು ಅರ್ಧದಲ್ಲಿಯೇ ಸ್ಥಗಿತಗೊಳಿಸಲಾಗಿದೆ. ಇದರಿಂದಾಗಿ ಬಿಸಿಸಿಐ ಪ್ರಸಾರದ ಹಕ್ಕು, ಶೀರ್ಷಿಕೆ ಪ್ರಾಯೋಜಕತ್ವ ಸೇರಿದಂತೆ ಹಲವು ವಿಭಾಗಗಳಿಂದ ಬರಬೇಕಿದ್ದ ರೂ. 2 ಸಾವಿರ ಕೋಟಿ ಅಧಿಕ ಆದಾಯಕ್ಕೆ ಬ್ರೇಕ್ ಬಿದ್ದಿದೆ.

ಈ ಬಾರಿಯ ಐಪಿಎಲ್ ಅರ್ಧದಲ್ಲಿಯೇ ಸ್ಥಗಿತಗೊಂಡಿರುವುದರಿಂದಾಗಿ ರೂ. 2 ಸಾವಿರದಿಂದ ರೂ. 2.5 ಸಾವಿರ ಕೋಟಿ ವರೆಗೆ ನಷ್ಟ ಅನುಭವಿಸಲಿದ್ದೇವೆ. ನನ್ನ ಲೆಕ್ಕಾಚಾರದ ಪ್ರಕಾರ ರೂ. 2200 ಕೋಟಿ ನಷ್ಟ ಅನುಭವಿಸಿದ್ದೇವೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಐಪಿಎಲ್ ಪಂದ್ಯಗಳು ಒಟ್ಟು 52 ದಿನಗಳ ಕಾಲ ನಡೆಯಬೇಕಿದ್ದವು. ಹೀಗಾಗಿ ಅತಿ ಹೆಚ್ಚಿನ ನಷ್ಟ ಪ್ರಸಾರದ ಹಕ್ಕಿನಿಂದ ಬಿಸಿಸಿಐಗೆ ಆಗಿದೆ. ಖಾಸಗಿ ವಾಹಿನಿ ರೂ. 3,269.4 ಕೋಟಿ ನೀಡಿ ಒಂದು ವರ್ಷದ ಪ್ರಸಾರದ ಹಕ್ಕನ್ನು ಪಡೆದುಕೊಂಡಿತ್ತು. ಇದರಿಂದ ಬಿಸಿಸಿಐಗೆ ಪ್ರತಿ ಪಂದ್ಯಕ್ಕೆ ಅಂದಾಜು ರೂ. 54.5 ಕೋಟಿ ಆದಾಯ ಹರಿದು ಬರುತ್ತಿತ್ತು. ಕೇವಲ 29 ಪಂದ್ಯಗಳು ನಡೆದಿದ್ದರಿಂದಾಗಿ ರೂ. 1580 ಕೋಟಿ ಬಿಸಿಸಿಐಗೆ ಸಿಗಲಿದೆ. ಇನ್ನುಳಿದ ರೂ. 1690 ಕೋಟಿ ಬರುವುದಿಲ್ಲ ಎನ್ನಲಾಗಿದೆ.

ಶೀರ್ಷಿಕೆ ಪ್ರಯೋಜಕತ್ವ ಪಡೆದಿದ್ದ ಮೊಬೈಲ್ ಕಂಪನಿ ವರ್ಷಕ್ಕೆ ರೂ. 440 ಕೋಟಿ ರೂ. ಬಿಸಿಸಿಐಗೆ ಕೊಡುವ ಒಪ್ಪಂದವಿತ್ತು. ಆದರೆ, ಸದ್ಯ ಅರ್ಧ ಹಣ ಮಾತ್ರ ಬರುವ ಸಾಧ್ಯತೆ ದೆ. ಅಲ್ಲದೇ, ಸಹ ಪ್ರಯೋಜಕತ್ವ ಪಡೆದುಕೊಂಡಿದ್ದ ಕಂಪನಿಗಳು ಕೂಡ ಅರ್ಧ ಹಣ ನೀಡಬಹುದು. ಇದರಿಂದಾಗಿ ಬಿಸಿಸಿಐಗೆ ಹೆಚ್ಚಿನ ನಷ್ಟವಾಗುವ ಭೀತಿ ಎದುರಾಗಿದೆ.

ಬಂಗಾಳದ ಸಿಎಂ ಆಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ದೀದಿ!

ವಿಜಯಸಾಕ್ಷಿ ಸುದ್ದಿ, ಕೋಲ್ಕತ್ತ : ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ಸಿಎಂ ಆಗಿ ಮಮತಾ ಬ್ಯಾನರ್ಜಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಭರ್ಜರಿಯಾಗಿ ಜಯ ಗಳಿಸಿದ್ದಾರೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವು 210 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ರಾಜ್ಯದಲ್ಲಿ ಸರ್ಕಾರ ರಚನೆ ಮಾಡಲು ಮುಂದಾಗಿದೆ.

ಹೀಗಾಗಿ ದೀದಿ ಬಂಗಾಳದಲ್ಲಿ ಹ್ಯಾಟ್ರಿಕ್ ಬಾರಿಸಿದ್ದಾರೆ. ಮಂಗಳವಾರ (ಮೇ. 5) ದಂದು ಮಮತಾ ಬ್ಯಾನರ್ಜಿ ಅವರು ರಾಜ್ಯಪಾಲ ಜಗದೀಪ್ ಧನ್‌ಕರ್ ಅವರನ್ನು ಭೇಟಿ ಮಾಡಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೇ, ಇಂದು ರಾಜ ಭವನದಲ್ಲಿ ಬುಧವಾರ ಬೆಳಿಗ್ಗೆ 10.45ಕ್ಕೆ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ.

ಆದರೆ, ಚುನಾವಣೆಯಲ್ಲಿ ಮಮತಾ ಅವರು ಸೋಲು ಕಂಡಿದ್ದಾರೆ. ಪಕ್ಷ ಬಹುಮತ ಪಡೆದ ಕಾರಣ ಅವರು 3ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿಯಾದ ಆರು ತಿಂಗಳ ಒಳಗಾಗಿ ಅವರು ವಿಧಾನಸಭೆ ಅಥವಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕು.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ 294 ಸ್ಥಾನಗಳಿವೆ. ಇವುಗಳಲ್ಲಿ ಸದ್ಯ 292 ಕ್ಷೇತ್ರಗಳಿಗೆ ಚುನಾವಣಎ ನಡೆದಿದೆ. ಕೋವಿಡ್ ಕಾರಣದಿಂದಾಗಿ ಅಭ್ಯರ್ಥಿಗಳು ಮೃತಪಟ್ಟ ಕಾರಣ ಎರಡು ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ನಂದಿಗ್ರಾಮ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿದಿದ್ದ ಮಮತಾ ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ದ ಸೋಲು ಕಂಡಿದ್ದಾರೆ. ಈ ಕ್ಷೇತ್ರಗಳಲ್ಲಿ ಮಮತಾ ಬ್ಯಾನರ್ಜಿ ಸ್ಪರ್ಧೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಟಿಎಂಸಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರು, ಮಮತಾ ಬ್ಯಾನರ್ಜಿ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

ಕೊರೋನಾ; ಮಂಗಳವಾರವೂ 191 ಜನರಿಗೆ ಸೋಂಕು, ಇಬ್ಬರ ಸಾವು

ವಿಜಯಸಾಕ್ಷಿ ಸುದ್ದಿ, ಗದಗ

ಮೇ 04 ಮಂಗಳವಾರ ಜಿಲ್ಲೆಯಲ್ಲಿ ಕೊರೋನಾ ಸೋಂಕು ತನ್ನ ‌ಅಟ್ಟಹಾಸ ಮುಂದುವೃಸಿದೆ. ಸತತ ಎರಡನೇ ದಿನವೂ 191 ಜನರಿಗೆ ಸೋಂಕು ತಗುಲಿದೆ. ಇಬ್ಬರು ಮೃತಪಟ್ಟಿದ್ದಾರೆ.

ಇಂದಿನ 191 ಜನರಿಗೆ ಸೋಂಕು ತಗುಲುವ ಮೂಲಕ ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 13407 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.

ಗದಗ ನಗರ ಹಾಗೂ ತಾಲೂಕಿನಲ್ಲಿ -139 , ಮುಂಡರಗಿ-15, ನರಗುಂದ-03, ರೋಣ-23, ಶಿರಹಟ್ಟಿ-01 ಹೊರಜಿಲ್ಲೆಯ-10 ಸೇರಿದಂತೆ 191 ಪ್ರಕರಣಗಳು ದೃಢಪಟ್ಟಿವೆ.

ರಾಜ್ಯ ಆರೋಗ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಹೊರಡಿಸಿದ ಮಾಹಿತಿಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ. ಗದಗನ ವಿರೇಶ್ವರ ನಗರದ 54 ವರ್ಷದ ಮಹಿಳೆ, ಹಾಗೂ ಹುಡ್ಕೋ ಕಾಲೋನಿಯ 54 ವರ್ಷದ ಮಹಿಳೆ ಕೋವಿಡ್ ನಿಂದಾಗಿ ಮೃತಪಟ್ಟಿದ್ದಾರೆ.
ಇದರಿಂದಾಗಿ ಇದುವರೆಗೂ ಜಿಲ್ಲೆಯಲ್ಲಿ
144 ಜನರು ಸೋಂಕಿಗೆ ಬಲಿಯಾದಂತಾಗಿದೆ.

ಇಂದು 160 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 12398 ಜನರು ‌ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ.

ಇಂದು ಜಿಲ್ಲೆಯಲ್ಲಿ 865 ಪ್ರಕರಣಗಳು ಸಕ್ರಿಯವಾಗಿದ್ದು, 544 ಜನರು ಮನೆಯಲ್ಲಿ, 321 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇನ್ನೂ 211 ಜನರ ವರದಿ ಬರಲು ಬಾಕಿ ಇದೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

error: Content is protected !!