ಎಪ್ರಿಲ್ 16 ಶುಕ್ರವಾರವೂ ಜಿಲ್ಲೆಯಲ್ಲಿ 34 ಜನರಲ್ಲಿ ಸೋಂಕು ಪತ್ತೆಯಾಗಿದೆ. ಗದಗ ನಗರದಲ್ಲಿಯೇ ಅತಿ ಹೆಚ್ಚು ಅಂದರೆ 27 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ನಗರ ಪ್ರದೇಶದಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಕಂಡು ಬರುತ್ತದೆ. ಮುಂಡರಗಿಯ 00, ನರಗುಂದದ 00, ರೋಣ ತಾಲೂಕಿನಲ್ಲಿ-03, ಹಾಗೂ ಶಿರಹಟ್ಟಿ ತಾಲೂಕಿನ-04 ಜನರಿಗೆ ಸೋಂಕು ತಗುಲಿದೆ.
ಶುಕ್ರವಾರ 34 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11504 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 20 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, ಒಟ್ಟು ಇದುವರೆಗೂ 11188 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 175 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 280 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 316348 ಮಾದರಿಗಳಲ್ಲಿ 304564 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೋವಿಡ್-19 ಸಾಂಕ್ರಾಮಿಕ ರೋಗವು ರಾಜ್ಯದಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಒಂದೆಡೆ ಗುಂಪು ಗುಂಪಾಗಿ ಸೇರುವುದನ್ನು ತಡಗಟ್ಟಲು ಹಾಗೂ ಸಾರ್ವಜನಿಕರಿಗೆ ಈ ಸಾಂಕ್ರಾಮಿಕ ರೋಗವು ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ 2021 ರ ಎಪ್ರಿಲ್ ಮಾಹೆಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಹಳ್ಳಿಗಳಿಗೆ ಭೇಟಿ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸ್ಥಗಿತಗೊಳಿಸುವಂತೆ ಸರಕಾರ ಸುತ್ತೋಲೆ ಹೊರಡಿಸಿದೆ.
ಸರಕಾರದ ಸುತ್ತೋಲೆಯನ್ವಯ ಗದಗ ಜಿಲ್ಲೆಯಲ್ಲಿ ಏಪ್ರಿಲ್ 17 ರಂದು ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿದೆ.
ವಿಜಯಸಾಕ್ಷಿ ಸುದ್ದಿ, ಗದಗ: ಅಪಘಾತದಿಂದ ಮೃತಪಟ್ಟಿದ್ದ ಬಾಲಕನ ಸಂಬಂಧಿಗಳಿಗೆ ಪರಿಹಾರ ಹಣ ನೀಡುವಲ್ಲಿ ವಿಳಂಬ ಮಾಡಿದ ಕಾರಣ ವಾಯುವ್ಯ ಸಾರಿಗೆ ಕಚೇರಿಯ ವಸ್ತುಗಳನ್ನು ಜಪ್ತಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.
ನಗರದ ಮುಳಗುಂದ ನಾಕಾ ಬಳಿ ಇರುವ ವಾಯುವ್ಯ ಸಾರಿಗೆ ಕಚೇರಿಯಲ್ಲಿನ ಕಂಪ್ಯೂಟರ್, ಮಾನಿಟರ್, ಸಿಪಿಯು ಸೇರಿದಂತೆ ಹಲವಾರು ವಸ್ತುಗಳನ್ನು, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಪಾಟೀಲ್ ಅವರ ಆದೇಶದ ಮೇರೆಗೆ ಜಪ್ತಿ ಮಾಡಲಾಗಿದೆ.
2009 ರಲ್ಲಿ ಗದಗನ ದಂಡಿನದುರ್ಗಮ್ಮ ದೇವಸ್ಥಾನದ ಬಳಿ ಅಪಘಾತ ನಡೆದು, ಈ ಘಟನೆಯಲ್ಲಿ ಬೆಟಗೇರಿ ನಿವಾಸಿ ಸಂಕಪ್ಪ ಶಿವಾನಂದ ಆಲೂರ (15) ಸ್ಥಳದಲ್ಲಿಯೇ ಮೃತಪಟ್ಟಿದ್ದ. ಹುಬ್ಬಳ್ಳಿ-ಬಾಗಲಕೋಟೆ ಬಸ್ ಹರಿದು ಸ್ಥಳದಲ್ಲಿ ಸಂಕಪ್ಪನ ಸಾವು ಸಂಭವಿಸಿತ್ತು. ಪರಿಹಾರಕ್ಕೆ ಆಗ್ರಹಿಸಿ 2009 ರಲ್ಲಿ ಮೃತ ಬಾಲಕನ ಸಂಬಂಧಿಗಳು ನ್ಯಾಯಾಲಯದ ಮೊರೆಹೋಗಿದ್ದರು.
ಪ್ರಕರಣದ ಕುರಿತು ಆದೇಶ ನೀಡಿದ್ದ ನ್ಯಾಯಾಲಯ ಗದಗ ಘಟಕದಿಂದ 5 ಲಕ್ಷ ಪರಿಹಾರ ಘೋಷಣೆ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಸಾರಿಗೆ ಇಲಾಖೆಯವರು 2014 ಹೈಕೋರ್ಟ್ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಒಟ್ಟು 8 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಅದರಲ್ಲಿ 5 ಲಕ್ಷ ಪರಿಹಾರ ನೀಡಲಾಗಿತ್ತು. ಉಳಿದ 3 ಲಕ್ಷ 16 ಸಾವಿರ ಪರಿಹಾರ ನೀಡದ ಕಾರಣ ಈಗ ಇಲಾಖೆಯ ವಸ್ತುಗಳ ಜಪ್ತಿಗೆ ಅದೇಶ ನೀಡಿಲಾಗಿದ್ದು, ಅರ್ಜಿದಾರರ ಪರ ವಕೀಲರಾದ ಅಶೋಕ ಹೊಸೂರ ನೇತೃತ್ವದಲ್ಲಿ ಜಪ್ತಿ ಕಾರ್ಯ ನಡೆಯಿತು.
ಅಂಜನಾದ್ರಿ ಬೆಟ್ಟ ಹನುಮ ಜನಿಸಿದ ತಾಣ ಎಂದೇ ಫೇಮಸ್. ಇದಕ್ಕೆ ಪುಷ್ಠಿ ನೀಡುವಂತೆ ಅಂಜನಾದ್ರಿ ಬೆಟ್ಟ ಹಾಗೂ ಸುತ್ತ ಮುತ್ತ ಸದಾ ವಾನರ ಸೇನೆ ಇದ್ದೇ ಇರುತ್ತೆ. ಮನುಷ್ಯರೊಂದಿಗೆ ಅವು ಸಹಜವಾಗಿ ಬೆರೆಯುತ್ತವೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಅರವಿಂದ ಲಿಂಬಾವಳಿ ಶುಕ್ರವಾರ ಅಂಜನಾದ್ರಿ ಹಾಗೂ ಪಂಪಾ ಸರೋವರಕ್ಕೆ ಭೇಟಿ ನೀಡಿದ್ದರು. ಅರಣ್ಯ ಖಾತೆಯನ್ನೂ ಹೊಂದಿರುವ ಅರವಿಂದ ಲಿಂಬಾವಳಿಯವರು ಅಂಜನಾದ್ರಿಯಲ್ಲಿ ವಾನರ ಸೇನೆ ಕಂಡು, ಅವುಗಳೊಂದಿಗೆ ಪ್ರೀತಿಯಿಂದ ಕೆಲ ಕಾಲ ಕಳೆದರು. ಆಹಾರ, ಹಣ್ಣು ನೀಡಿ ಆರೈಕೆ ಮಾಡಿದರು. ಸಚಿವರ ಪ್ರೀತಿ-ಕಾಳಜಿಗೆ ಮನಸೋತ ವಾನರವೊಂದು ಅವರ ಹೆಗಲೇರಿ ಆಹಾರ ತಿಂದದ್ದು ವಿಶೇಷವಾಗಿತ್ತು.
ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ಜನರೂ ಸಹಕಾರ ನೀಡಬೇಕು. ಜನರು ಸಹಕರಿಸದಿದ್ದರೆ ಲಾಕ್‌ಡೌನ್ ಅನಿವಾರ್ಯ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿದರು.
ಕೊಪ್ಪಳದ ಗಿಣಗೇರಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರವೇ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ. ಜನರ ಸಹಕಾರವೂ ಮುಖ್ಯವಾಗಿದೆ ಎಂದರು.
ಕೊಪ್ಪಳ ತಾಲೂಕಿನ ಕಾಸನಕಂಡಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ನನೆಗುದಿಗೆ ಬಿದ್ದಿದೆ. ಈ ಬಗ್ಗೆ ಈ ಹಿಂದೆ ಕೆಡಿಪಿ ಸಭೆಯಲ್ಲಿ ಚರ್ಚೆ ನಡೆದಿದೆ. 46 ಕೋಟಿ ರೂಪಾಯಿ ಖರ್ಚು ಮಾಡಿದ್ದು, ಅವು ಪೈಪ್ ಸರಿ ಇಲ್ಲ. ಸ್ಥಳ ಪರಿಶೀಲನೆ ಮಾಡಿದ್ದೇವೆ. ಕಾಮಗಾರಿ ನಡೆಸಿದ ಗುತ್ತಿಗೆದಾರರನ್ನ ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಈ ಕಾಮಗಾರಿಗೆ ತ್ವರಿತಗತಿಯಲ್ಲಿ ಪುನಃ ಚಾಲನೆ ನೀಡಲಾಗುವುದು ಎಂದರು.
ಇನ್ನೂ 240 ಎಕರೆ ವಿಸ್ತಾರದ ಗಿಣಗೇರಿ ಕೆರೆ ಹೂಳೆತ್ತುವ ಕಾಮಗಾರಿ ಜನರ ಸಹಕಾರದ ಜೊತೆಗೆ ನಡೆದಿದೆ. ಗವಿಶ್ರೀ ನೇತೃತ್ವದಲ್ಲಿ ಕೆರೆ ಹೂಳೆತ್ತುವ ಕೆಲಸಕ್ಕೆ ಚಾಲನೆ ನೀಡಿದ್ದಾರೆ. ಸಮಾಜಮುಖಿ ಕಾರ್ಯಗಳತ್ತ ಗಮನ ಹರಿಸುವ ಸ್ವಾಮೀಜಿ ಕೊಪ್ಪಳದ ನೆಲದಲ್ಲಿರುವುದು ಈ ಭಾಗದ ಜನರ ಪುಣ್ಯ ಎಂದು ಹೇಳಿದರು.
ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ. ಈಶ್ವರಪ್ಪ- ಸಿದ್ದರಾಮಯ್ಯ ಎರಡೂ ಮದ್ದಾನೆಗಳು. ಅವರವರ ಮಾತುಗಳಿಗೆ ಅವರವರೇ ಪ್ರತಿಕ್ರಿಯೆ ಕೊಡ್ತಾರೆ. ನಾನ್ಯಾಕೆ ಪ್ರತಿಕ್ರಿಯೆ ಕೊಡಲಿ ಎಂದರು.
ಬೆಳೆ ಕುಸಿತ ಪ್ರಶ್ನೆಗೆ ಉಡಾಫೆ ಉತ್ತರ: ಬೆಳೆಗಳ ಬೆಲೆ ಕುಸಿತಕ್ಕೆ ಸಂಬಂಧಿಸಿದಂತೆ ಪ್ರಶ್ನೆಗೆ ಸಚಿವ ಬಿ. ಸಿ ಪಾಟೀಲ್ ಸುಖಾಸುಮ್ಮನೆ ಗರಂ ಆಗಿ, ನೀವೆಲ್ಲ ಕಾಂಟ್ರಾವರ್ಸಿ ಪ್ರಶ್ನೆ ಕೇಳಬೇಡಿ ಎಂದು ಮಾಧ್ಯಮದವರ ವಿರುದ್ಧ ಹರಿಹಾಯ್ದರು.
ರೈತರು ಸಂಕಷ್ಟದಲ್ಲಿದ್ದಾರೆ. ಈ ವೇಳೆ ಸರ್ಕಾರ ರೈತರ ನೆರವಿಗೆ ಬರಬೇಕು ಎನ್ನುವುದಕ್ಕೂ ಅವರು ಗರಂ ಆದರು. ಕೊನೆಗೆ ರೈತರು ಬೆಲೆ ಕುಸಿತದಿಂದ ನಷ್ಟ ಅನುಭವಿಸಿದರೆ ಬೆಳೆ ನಾಶ ಮಾಡದೇ ಸ್ವಲ್ಪ ದಿನ ಕಾಯ್ದು ಬೆಳೆ ಮಾರಾಟ ಮಾಡಬೇಕು. ರೈತರಿಗೆ ತಾಳ್ಮೆ ಬೇಕು ಎಂದು ಸಮಜಾಯಿಷಿ ನೀಡಿದರು.
ತುಂಗಭದ್ರಾ ಜಲಾಶಯದಿಂದ ಏ.30ರ ವರೆಗೂ ಕಾಲುವೆಗೆ ನೀರು ಹರಿಸಲು ಹಂತ ಹಂತವಾಗಿ ನಿರ್ಧಾರ ಮಾಡಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು.
ಅಮರೇಶ ಕರಡಿ-ರಾಘಣ್ಣ ಅಕ್ಕಪಕ್ಕ
ಗಿಣಗೇರಾ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಸಚಿವ ಬಿ.ಸಿ.ಪಾಟೀಲ ಭೇಟಿ ನೀಡಿದ ವೇಳೆ ಸಚಿವರು ಮಾಧ್ಯಮದವರೊಂದಿಗೆ ಮಾತನಾಡುವಾಗ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನ ಕರೆದು ಪಕ್ಕದಲ್ಲಿ ನಿಲ್ಲಿಸಿಕೊಂಡರು. ಪರಿಶೀಲನೆ ಮುಗಿದ ಬಳಿಕ ಗುಳದಳ್ಳಿಗೆ ತೆರಳುವಾಗ ಅಮರೇಶ್ ಕರಡಿ ಕುಳಿತಿದ್ದ ವಾಹನವೇರಿದ ಶಾಸಕ ರಾಘವೇಂದ್ರ ಹಿಟ್ನಾಳ ಅಮರೇಶ್ ಕರಡಿ ಪಕ್ಕದಲ್ಲಿ ಕುಳಿತುಕೊಂಡು ಒಟ್ಟಿಗೆ ತೆರಳಿದರು. ಈ ಸನ್ನಿವೇಶ ಹೊಂದಾಣಿಕೆ ರಾಜಕಾರಣಕ್ಕೆ ಸಾಕ್ಷ್ಯ ನೀಡಿದಂತಿತ್ತು.
ಎಪ್ರಿಲ್ 15 ಗುರುವಾರದಂದು ಜಿಲ್ಲೆಯಲ್ಲಿ 34 ಜನರಿಗೆ ಸೋಂಕು ಪತ್ತೆಯಾಗಿದೆ. ಗದಗ ನಗರ ಹಾಗೂ ತಾಲೂಕಿನ 18 ಜನರಿಗೆ, ಮುಂಡರಗಿಯ 02, ನರಗುಂದದ 03, ರೋಣ ತಾಲೂಕಿನಲ್ಲಿ 05 ಹಾಗೂ ಶಿರಹಟ್ಟಿ ತಾಲೂಕಿನ 05 ಹಾಗೂ ಹೊರಜಿಲ್ಲೆಯ-01 ಜನರಿಗೆ ಸೋಂಕು ತಗುಲಿದೆ.
ಗುರುವಾರ 34 ಜನರಿಗೆ ಸೋಂಕು ತಗುಲುವ ಮೂಲಕ ಗದಗ ಜಿಲ್ಲೆಯಲ್ಲಿ ಇದುವರೆಗೂ 11470 ಪಾಸಿಟಿವ್ ಪ್ರಕರಣಗಳು ದೃಢಪಟ್ಟಂತಾಗಿದೆ.
ಇದುವರೆಗೂ ಜಿಲ್ಲೆಯಲ್ಲಿ ಕೋವಿಡ್ ನಿಂದ 141 ಜನರು ಮೃತಪಟ್ಟಿದ್ದಾರೆ. ಇಂದು 18 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೂ 11168 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಸದ್ಯ ಕೋವಿಡ್ ಆಸ್ಪತ್ರೆಯಲ್ಲಿ 161 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನೂ 311 ಜನರ ವರದಿ ಬರಲು ಬಾಕಿ ಇದ್ದು, ಇದುವರೆಗೂ ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ 314431 ಮಾದರಿಗಳಲ್ಲಿ 302650 ಮಾದರಿಗಳು ನಕಾರಾತ್ಮಕವಾಗಿವೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆನ್ ಲೈನ್ ಮೂಲಕ ಲಕ್ಷಾಂತರ ರೂ, ಹಣ ವಂಚಿಸಿದ ಆರೋಪಿಯನ್ನು ಗದಗ ಜಿಲ್ಲಾ ಸೈಬರ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಆಂದ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಮಾರ್ಕಾಪುರಂ ಹಳ್ಳಿಯ 24 ವರ್ಷದ ಮುರಾರಿ ವೆಂಕಟಯ್ಯ ಅಲಿಯಾಸ್ ರಾಜು ಮಿಖಾಯೆಲು ಎಂಬಾತನೇ ಬಂದಿಸಿಲಾಗಿದೆ.
ಬಂಧಿತನಿಂದ ಒಂದು ಲ್ಯಾಪ್‌ಟಾಪ್, ಮೊಬೈಲ್ ಹಾಗೂ ನಗದು 68 ಸಾವಿರ ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಮುರಾರಿ ವೆಂಕಟಯ್ಯ ಎಂಬಾತ ಕಳೆದ ವರ್ಷ 2020 ಜುಲೈ 04 ರಂದು ವೀರಪ್ಪ ಚನ್ನಪ್ಪ ಮಾಳಗಿ ಎಂಬುವವರ ಎಸ್ ಬಿ ಐ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ, 21 ಸಾವಿರದ 726 ರೂ,ಗಳನ್ನು ಆನ್ ಲೈನ್ ಮುಖಾಂತರ ವರ್ಗಾವಣೆ ಮಾಡಿಕೊಂಡು ಮೋಸವೆಸಗಿದ್ದ.
ಸೈಬರ್ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು.
ಸೈಬರ್ ಠಾಣೆಯ ಇನ್ಸ್‌ಪೆಕ್ಟರ್ ಮಹಾಂತೇಶ್ ಟಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ ಪಿ ದೊಡ್ಡಮನಿ, ಎಮ್ ವ್ಹಿ ಹೂಲಿಹಳ್ಳಿ, ಎಸ್ ಬಿ ಪಮ್ಮಾರ್, ಆನಂದಸಿಂಗ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಬೇದಿಸುವಲ್ಲಿ ಯಶಸ್ವಿಯಾಗಿದ ಪೊಲೀಸ್ ತಂಡಕ್ಕೆ ಎಸ್ಸಿ ಯತೀಶ್ ಎನ್ ಶ್ಲಾಘಿಸಿದ್ದಾರೆ.
ಏಪ್ರಿಲ್ 11ರಂದು ನಡೆಸಬೇಕಿದ್ದ ಕೆಸೆಟ್ ಪರೀಕ್ಷೆಯನ್ನು ಕೆಲ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿತ್ತು. ಇದೀಗ ಮೈಸೂರು ವಿವಿಯ ಕೆಸೆಟ್ ಕೇಂದ್ರ ಮೌಲ್ಯ ಭವನದ ಸಂಯೋಜನಾಧಿಕಾರಿಗಳು ಕೆಸೆಟ್ ಪರೀಕ್ಷೆಯನ್ನು ಇದೇ ಏಪ್ರಿಲ್ 25ರಂದು ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬುಧವಾರ ರಾತ್ರಿ ಸುರಿದ ಗುಡುಗು ಸಿಡಿಲು ಸಹಿತ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಬುಧವಾರ ತಡರಾತ್ರಿ ಸಿಡಿಲು ಬಡಿದು 16 ಕುರಿಗಳು ಸಾವನ್ನಪಿದ ಘಟನೆ ನಡೆದಿದೆ. ಗದಗ ತಾಲೂಕಿನ ಲಿಂಗಧಾಳ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ.
ಕುರಿಗಾಯಿ ಹನುಮಂತಪ್ಪ ಬ್ಯಾಡಗಿ ಎಂಬುವವರಿಗೆ ಸೇರಿದ ಕುರಿಗಳಾಗಿದ್ದು ಸುಮಾರು 1 ಲಕ್ಷ ರೂ. ವರೆಗೆ ನಷ್ಟವಾಗಿದೆ ಅಂತ ಕುಟುಂಬಸ್ಥರು ಅಳಲುತೋಡಿಕೊಂಡಿದ್ದಾರೆ.
ಲಿಂಗಧಾಳ ಗ್ರಾಮದ ನಿವಾಸಿಯಾಗಿರುವ ಹನುಮಂತಪ್ಪ ಅವರು ಪ್ರತಿ ದಿನ ಊರ ಹೊರಗಡೆ ಇರುವ ಕುರಿದೊಡ್ಡಿಯಲ್ಲಿ ನಿಲ್ಲಿಸುತ್ತಿದ್ದರು.
ಜೋರಾಗಿ ಮಳೆ ಬರ್ತಿದ್ದರಿಂದ ಕುರಿದೊಡ್ಡಿಯಿಂದ ಪಕ್ಕದಲ್ಲಿ ಇದ್ದ ಬನ್ನಿಮರದ ಕೆಳೆಗೆ ಅವಿತು ಕುಳಿತಿದ್ದವು. ಈ ವೇಳೆ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರದ ಕೆಳಗಿದ್ದ ಕುರಿ ಮತ್ತು ಮರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಆದ್ರೆ ಕುರಿಗಾಯಿ ಹನುಮಂತಪ್ಪ ರಾತ್ರಿ ಮನೆಗೆ ಬಂದಿದ್ದ. ಬೆಳಿಗ್ಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ಸರ್ಕಾರ ಪರಿಹಾರ ನೀಡುವಂತೆ ಕುರಿಗಾಯಿ ಹನುಮಂತಪ್ಪ ಮನವಿ ಮಾಡಿಕೊಂಡಿದ್ದಾನೆ. ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾತಂತ್ರ್ಯ ನಂತರದಲ್ಲಿ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕರು, ಶತಾಯಷಿ ಸದಾಶಿವ ಬಾಪುಸಾಹೇಬ ಭೋಸಲೆ ವಿಧಿವಶರಾಗಿದ್ದಾರೆ.
ಕಡೋಲಿ ಗ್ರಾಮದ ಸುಪುತ್ರರಾಗಿದ್ದ ಸದಾಶಿವ ಬಾಪುಸಾಹೇಬ ಭೋಸಲೆ 1947ರಲ್ಲಿ ನಡೆದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿಯ ದಕ್ಷಿಣ ಮತಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಅದಾದ ಬಳಿಕ 1952ರಲ್ಲಿ ಬಾಗೇವಾಡಿ ಕ್ಷೇತ್ರದಿಂದ ಮತ್ತೆ ಶಾಸಕರಾಗಿ ಪುನರ್ ಆಯ್ಕೆಯಾಗಿದ್ದರು. ಅಪ್ಪಟ ಗಾಂಧೀಜಿ ಅನುಯಾಯಿ ಆಗಿದ್ದ ಭೋಸಲೆಯವರು 1955ರಲ್ಲಿ ಗಾಂಧೀಜಿ ತತ್ವಗಳಿಗೆ ವಿರುದ್ಧವಾಗಿ ಆಡಳಿತ ನಡೆಯುತ್ತಿದೆ ಎಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಕ್ರಿಯರಾಗಿದ್ದ ಭೋಸಲೆಯವರು 1942ರಲ್ಲಿ ಅರಣ್ಯ ಅಧಿಕಾರಿ ಹುದ್ದೆಗೆ ಸಂದರ್ಶನವೊಂದರಲ್ಲಿ ಪಾಲ್ಗೊಳ್ಳಲು ಪುಣೆಗೆ ಹೋದಾಗ ಆ ಹೊತ್ತಿಗೆ ಮಹಾತ್ಮ ಗಾಂಧಿ ಕ್ವಿಟ್ ಇಂಡಿಯಾ ಚಳವಳಿಯನ್ನು ಪ್ರಾರಂಭಿಸಿದರು ಮತ್ತು ಸದಾಶಿವ್ ಭೋಸಲೆ ದಾದಾ ಸಂದರ್ಶನಕ್ಕೆ ಹಾಜರಾಗದೆ ಚಳವಳಿಗೆ ಸೇರಿದ್ದರು.
ಆಚಾರ್ಯ ವಿನೋಬಾ ಭಾವೆ ಅವರ ಗ್ರಾಮ ಸ್ವರಾಜ್ ಮತ್ತು ಭೂದಾನ್ ಚಳವಳಿಯನ್ನು ಅಕ್ಷರಶಃ ಪಾಲಿಸಿದ್ದ ಭೋಸಲೆಯವರು ತಮ್ಮ 25 ಏಕರೆ ಭೂಮಿಯಲ್ಲಿ 24 ಏಕರೆಯನ್ನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಬಡ ಜನರಿಗೆ ಹಂಚಿದ್ದು ಅವರ ಸಾಮಾಜಿಕ, ಮಾನವೀಯ ಕಳಕಳಿಗೆ ಹಿಡಿದ ಕೈಗನ್ನಡಿಯಾಗಿತ್ತು.
ಇನ್ನು ದೇವಗಿರಿಯಲ್ಲಿ ಎಕರೆ ಭೂಮಿಯಲ್ಲಿ ಗಾಂಧಿ ಘರಾಚಿ ಸ್ಥಾಪಿಸಿದರು. ಅವರು ತಮ್ಮ ಜೀವನದುದ್ದಕ್ಕೂ ಗಾಂಧಿ ತತ್ವವನ್ನು ಪಾಲಿಸುತ್ತಾ ಬಂದಿದ್ದರು. ಗುರುವಾರ ಬೆಳಿಗ್ಗೆ 5 ಗಂಟೆ ಸುಮಾರಿಗೆ ಕಡೋಲಿಯ ಕಚೇರಿ ಗಲ್ಲಿಯ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಒಬ್ಬ ಮಗ, ಸೊಸೆ, ವಿವಾಹಿತ ಮಗಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.