ತಾಲೂಕಿನ ಹುಲಕೋಟಿ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಅಣ್ಣಿಗೇರಿಯ ಸರ್ಕಾರಿ ಆಸ್ಪತ್ರೆಯ ಹತ್ತಿರದ ನಿವಾಸಿ ಯಲ್ಲಪ್ಪ ಪರಶುರಾಮ ಗೊಲ್ಲರ ಹಾಗೂ ಪುರಸಭೆ ಹತ್ತಿರದ ನಿವಾಸಿ ಶಿವಾನಂದ ಮಹೇಶ ಪುರದೀಶ್ವರಮಠ ಅವರನ್ನು ಬಂಧಿಸಲಾಗಿದೆ.
ಬಂಧಿತ ಇಬ್ಬರು ಆರೋಪಿತರು ಬಸ್ ನಿಲ್ದಾಣ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವ ವೇಳೆ ಸೈಬರ್ ಠಾಣೆಯ ಇನ್ಸ್ಪೆಕ್ಟರ್ ಟಿ ಮಹಾಂತೇಶ್ ಹಾಗೂ ಸಿಬ್ಬಂದಿ ದಾಳಿಯ ವೇಳೆ ಸಿಕ್ಕಿ ಬಿದ್ದಿದ್ದು, ಬಂಧಿತರಿಂದ ಸುಮಾರು ೨೦೩೦ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇಲ್ಲಿನ ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಕಿಲ್ಲಾ ಓಣಿಯ ನಿವಾಸಿ ರಾಜನಸಾ ರಾಮನಾಥಸಾ ಮಿಸ್ಕಿನ್ ಎಂಬ 63 ವರ್ಷದ ವ್ಯಕ್ತಿಯನ್ನು ಆರು ತಿಂಗಳವರೆಗೆ ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಆದೇಶಿಸಿದ್ದಾರೆ.
ರಾಜನಸಾ ಮಿಸ್ಕಿನ್ ಈತನು ಸಮಾಜಕ್ಕೆ ಧಕ್ಕೆಯಾಗುವಂತಹ ಹಾಗೂ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವಂತಹ ಕೃತ್ಯಗಳಾದ ಮಟಕಾ ಜೂಜಾಟ ಆಡುವ ಮತ್ತು ಆಡಿಸುವ ಪ್ರವೃತ್ತಿಯಲ್ಲಿ ತೊಡಗಿಕೊಂಡಿದ್ದ. ಅಲ್ಲದೇ, ಇದೇ ಪ್ರವೃತ್ತಿಯನ್ನು ಮುಂದುವರೆಸುಕೊಂಡು ಹೋಗುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಹಾಗೂ ಸಮಾಜಘಾತುಕ ಕಾರ್ಯ ನಿಯಂತ್ರಿಸುವ ಸಲುವಾಗಿ ಗದಗ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ಗದಗ ಉಪವಿಭಾಗದ ಸರಹದ್ದಿನಿಂದ ಮಾ.23 ರಿಂದ ಸೆಪ್ಟಂಬರ್ 22ರವರೆಗೆ ಯಾದಗಿರಿ ಜಿಲ್ಲೆಗೆ ಗಡಿಪಾರು ಮಾಡಿ ಆದೇಶಿದ್ದಾರೆ. ತಕ್ಷಣದಿಂದಲೇ ಯಾದಗಿರಿ ಜಿಲ್ಲೆಗೆ ಸ್ಥಳಾಂತರಿಸುವಂತೆ ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಅವರಿಗೆ ನಿರ್ದೇಶಿಸಿದ್ದಾರೆ.
ಅಲ್ಲದೇ, ಸದರಿ ಆದೇಶವನ್ನು ಉಲ್ಲಂಘಿಸಿದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 61ರ ಪ್ರಕಾರ ಆರೋಪಿತನನ್ನು ಬಂಧಿಸಿ, ಪೊಲೀಸ್ ಸುಪರ್ದಿಯಲ್ಲಿ ಪಡೆದು ನಿಗದಿಪಡಿಸಿದ ಜಿಲ್ಲೆಗೆ ಸ್ಥಳಾಂತರಿಸುವಂತೆ ಎಸಿ ರಾಯಪ್ಪ ಹುಣಸಗಿ ಸೂಚನೆ ನೀಡಿದ್ದಾರೆ.
ಇದರಿಂದ ಪ್ರಸ್ತುತ ವರ್ಷದಲ್ಲಿ ಅಪರಾಧಿಕ ಪ್ರವೃತ್ರಿಯುಳ್ಳ ಇಂತಹ ಒಟ್ಟು ನಾಲ್ವರನ್ನು ಗದಗ ಜಿಲ್ಲೆಯಿಂದ ಗಡಿಪಾರು ಮಾಡಿದಂತಾಗಿದೆ ಎಂದು ಜಿಲ್ಲಾ ಪೊಲೀಸ್ ಕಾರ್ಯಾಲಯ ತಿಳಿಸಿದೆ.
ವಿಜಯಸಾಕ್ಷಿ ಸುದ್ದಿ ಚಿಕ್ಕಬಳ್ಳಾಪುರ
ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಕಾರ್ಯದರ್ಶಿಯೋರ್ವನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಅವುಲನಾಗೇನಹಳ್ಳಿ ಗ್ರಾಮದ ಬಳಿ ನಡೆದಿದೆ.
ರಾಮಾಂಜಿ ಕೊಲೆಯಾದ ದುರ್ದೈವಿಯಾಗಿದ್ದು, ಆತನ ಪತ್ನಿ ಮಂಜುಳಾ ಗೆ ಗಂಭೀರ ಗಾಯವಾಗಿದೆ.
ಬೆಂಗಳೂರು ನಗರ ಜಿಲ್ಲೆಯ ಬಂಡಿಕೊಡಗೇನಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿ ರಾಮಾಂಜಿ ಕಾರ್ಯನಿರ್ವಹಿಸುತ್ತಿದ್ದರು. ಗಾಯಾಳುವಾಗಿರುವ ಆತನ ಪತ್ನಿ ಮಂಜುಳಾಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನು ಘಟನೆ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ಕಾರಣರಾಗಿರಬಹುದು ಎನ್ನುವ ಅನುಮಾನದ ಹಿನ್ನೆಲೆಯಲ್ಲಿ 4 ಜನರನ್ನು ವಶಕ್ಕೆ ಪಡೆದಿರೋದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ತಾಲೂಕಿನ ಕಲಕೇರಿ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಜಗದೀಶ್ ತೊಗರಿಕಟ್ಟಿ ಎಂಬುವವರು ಐದು ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿರುವ ಘಟನೆ ಸೋಮವಾರ ನಡೆದಿದೆ.
ಪಟ್ಟಣದ ಕೊಪ್ಪಳ ಕ್ರಾಸ್ ಬಳಿ ಮುಂಡರಗಿ ತಾಲೂಕಿನ ಪೇಠಾಲೂರ ಗ್ರಾಮದ ಸೋಮನಗೌಡ ಕರಿಗೌಡ ಅವರಿಂದ ಲಂಚ ಸ್ವೀಕರಿಸುತ್ತಿರುವಾಗ ಸಿಕ್ಕಿ ಬಿದ್ದಿದ್ದಾರೆ.
ಖರೀದಿಸಿದ ಜಮೀನಿನ ನೋಂದಣಿ ಮಾಡಲು ಮಾಡಲು ಗ್ರಾಮ ಲೆಕ್ಕಾಧಿಕಾರಿ ಜಗದೀಶ್ ಐದು ಸಾವರಿ ರೂ. ಬೇಡಿಕೆ ಇಟ್ಟಿದ್ದ. ಹೀಗಾಗಿ ಹಣ ಸ್ವೀಕಾರ ಮಾಡುವಾಗ ಪೊಲೀಸ್ ಅಧೀಕ್ಷಕ ಬಿ.ಎಸ್.ನ್ಯಾಮಗೌಡ ಅವರ ಮಾರ್ಗದರ್ಶನದಲ್ಲಿ ಎಸಿಬಿ ಡಿವೈಎಸ್‌ಪಿ ವಾಸುದೇವ ರಾಮ್ ಅವರ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ವೈ.ಎಸ್ ಧರಣನಾಯಕ್, ಆರ್.ಎಫ್.ದೇಸಾಯಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿ ಜಗದೀಶ್ ತೊಗರಿಕಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಲಾಂಗ್, ಕಬ್ಬಿಣ ಸಲಾಕೆ, ಬಡಿಗೆಯಿಂದ ಹೊಡೆದಾಡಿರುವ ಘಟನೆ ಜಿಲ್ಲೆಯ ರೋಣ ಪಟ್ಟಣದಲ್ಲಿ ಸೋಮವಾರ ಸಂಜೆ ನಡೆದಿದೆ.
ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಕುಮಾರ ಬಾರ್‌ನಲ್ಲಿ ಮದ್ಯ ಪ್ರೀಯರು ಹಾಗೂ ಬಾರ್ ಸಪ್ಲಾಯರ್ ನಡುವೆ ಮಾರಾಮಾರಿಯಾಗಿದೆ.
ಮದ್ಯವ್ಯಸನಿ ಗ್ರಾಹಕರು, ಪಾನಮತ್ತಿನಲ್ಲಿ ಟೇಬಲ್ ಬಡೆದಿದ್ದಾರೆ. ಆದರೆ, ಸಪ್ಲಾಯರ್‌ಗಳು ಬೇಗನೆ ಬಾರದಕ್ಕೆ ಪುನಃ ಜೋರಾಗಿ ಕೂಗಾಡಿದ್ದಾರೆ. ನಂತರ ಬಂದ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಆವೇಶದಲ್ಲಿ ಮದ್ಯ ಪ್ರೀಯರು ಹಾಗೂ ಬಾರ್ ಸಪ್ಲಾಯರ್ ಕಬ್ಬಿಣ ರಾಡ್, ಕಟ್ಟಿಗೆ ಹಾಗೂ ಲಾಂಗ್‌ನಿಂದ ಹೊಡೆದಾಡಲು ಆರಂಭಿಸಿದ್ದಾರೆ. ಈ ವೇಳೆ ಎರಡು ಗುಂಪಿನವರಿಗೂ ಗಾಯಗಳಾಗಿವೆ.
ವಿಷಯ ತಿಳಿದ ರೋಣ ಪೊಲೀಸರು ಎರಡೂ ಗುಂಪಿನವರನ್ನೂ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಯಾವುದೇ ಕಾರಣಕ್ಕೂ ಸದ್ಯಕ್ಕೆ ಲಾಕ್ಡೌನ್ ಜಾರಿ ಮಾಡದಿರಲು ಸರ್ಕಾರ ನಿರ್ಧರಿಸಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಬಿ.ಸಿ.ಪಾಟೀಲ್, ಪ್ರಸಕ್ತ ಆರ್ಥಿಕ ಪರಿಸ್ಥಿಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಪರಿಸ್ಥಿತಿ ಇಲ್ಲ. ಕಳೆದ ವರ್ಷಕ್ಕೂ ಈ ವರ್ಷಕ್ಕೂ ಪರಿಸ್ಥಿತಿ ಬೇರೆ ಇದೆ. ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಜನರೂ ಪರಿಸ್ಥಿತಿ ಅರ್ಥಮಾಡಿಕೊಳ್ಳಬೇಕೆಂದರು.
ಕೋರ್ಟ್ ಗೆ ಹೋಗೋದು ನನ್ನ ಹಕ್ಕಾಗಿದ್ದು, ಅದನ್ನು ಪ್ರಶ್ನಿಸಲು ಕಾಂಗ್ರೆಸ್ ನವರಿಗೆ ಯಾವುದೇ ಹಕ್ಕಿಲ್ಲ. ಕಾಂಗ್ರೆಸ್ ನಾಯಕರು ನೀತಿ ಸಿದ್ದಾಂತದ ಮೇಲೆ ಹೊರಾಟ ಮಾಡಬೇಕು. ಅವರಿಗೆ ಹೋರಾಟ ಮಾಡಲು ಯಾವುದೇ ವಿಷಯಗಳು ಸಿಗುತ್ತಿಲ್ಲ. ಹೀಗಾಗಿ ಮೈತ್ರಿ ಸರ್ಕಾರ ಪತನಗೊಂಡ ಕಾರಣಕ್ಕೆ ನಮ್ಮ ಮೇಲೆ ವೈಯಕ್ತಿಕ ದ್ವೇಷ ಸಾಧಿಸುತ್ತಿದ್ದಾರೆಂದು ಬಿ.ಸಿ.ಪಾಟೀಲ್ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳು ರೈತರ ಪರವಾಗಿಯೇ ಇರುವ ಕಾಯ್ದೆಗಳಾದ್ದರಿಂದ ಆ ಕಾಯ್ದೆಗಳಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಕೇಂದ್ರದ ನಡೆಯನ್ನು ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡರು.
ಭಾರತೀಯ ಜನತಾ ಪಕ್ಷ ಅಂದರೆ ಅದು ಮುಸ್ಲಿಂ ವಿರೋಧಿ ಪಕ್ಷ ಎಂಬ ಮಾತಿದೆ. ಇದರ ಮಧ್ಯೆ ಬಿಜೆಪಿ ಸಚಿವರೊಬ್ಬರು ಮಸೀದಿಯಿಂದ ಹೊರಬಂದ ಅಜಾನಗೆ ಗೌರವ ಸಲ್ಲಿಸಿದ ಪ್ರಸಂಗ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗದಗ ತಾಲೂಕಿನ ಅಡವಿಸೋಮಾಪುರ ಗ್ರಾಮದಲ್ಲಿ ಕಳೆದ ಶಿವರಾತ್ರಿ ಅಮವಾಸ್ಯೆ ದಿನದಂದು ಮನೆ ಮನೆಗೆ ನಳ ಸಂಪರ್ಕದ ಮೂಲಕ ನೀರು ತಲುಪಿಸುವ ಜಲ ಜೀವನ್ ಮಿಷನ್(ಜೆಜೆಎಂ) ಸೇರಿ ಒಟ್ಟು 1.86 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಚಿವ ಸಿ.ಸಿ. ಪಾಟೀಲ ಕಾಮಗಾರಿಗೆ ಚಾಲನೆ ನೀಡಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಯೋಜನೆಯ ಉದ್ದೇಶ, ಕಾಮಗಾರಿಗೆ ಡೆಡ್ ಲೈನ್ ಕುರಿತಂತೆ ಮಾತನಾಡುತ್ತಿದ್ದಾಗ, ಪಕ್ಕದ ಮಸೀದೆಯಿಂದ ಅಜಾನ್ ಕೇಳಿದೆ. ತಕ್ಷಣವೇ ಭಾಷಣ ನಿಲ್ಲಿಸಿ ಗೌರವ ಸಲ್ಲಿಸಿದ್ದಾರೆ. ಸುಮಾರು ಒಂದೂವರೆ ನಿಮಷಗಳ ಕಾಲ್ ನಡೆದ ಅಜಾನ್ ಗೆ ತಮ್ಮ ಭಾಷಣ ಬ್ರೇಕ್ ಹಾಕಿ ಅಜಾನ್ ಮುಗಿಯುತ್ತಿದ್ದಂತೆ ಭಾಷಣ ಆರಂಭಿಸಿದ್ದಾರೆ. ಸಚಿವರ ಈ ನಡೆಗೆ ಗ್ರಾಮಸ್ಥರಾದ ರಾಜು ಪೆಂಡಾರ, ಗಿರೀಶ್ ಮುಕ್ಕಣ್ಣವರ, ಗಣೇಶ ಜಡಿ, ಸಣ್ಣಹೊನಕೇರಪ್ಪ ಕರಿ, ರಿಯಾಜ್ ಡಂಬಳ, ಕಾಶಿಮ್ ಹು ಹರಿವಾಣ, ಹುಸೇನ್ ಬಾಷಾ ಮುಜಾವರ್, ಸಿದ್ಧೀಕ ಪೆಂಡಾರ, ಅಬ್ದುಲ್ ಹಳ್ಳಿ ಸೇರಿದಂತೆ ಇಡೀ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿದ್ದು, ಜಿಲ್ಲೆಯಲ್ಲಿ ಚರ್ಚೆಗೆ ನಾಂದಿ ಹಾಡಿದೆ.
ಗ್ರಾಮದಲ್ಲಿ ವಿದ್ಯುತ್ ಟ್ರಾನ್ಸ್‌ಪಾರ್ಮ್‌ರ್ ಸುಟ್ಟು ದಿನಗಳೇ ಉರುಳಿದರೂ ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಇದರ ಪರಿಣಾಮವಾಗಿ ಜಮೀನನಲ್ಲಿ ಬೆಳೆದಿದ್ದ ತೋಟಗಾರಿಕೆ ಬೆಳೆಗಳೆಲ್ಲಾ ನೀರಿಲ್ಲದೇ ಒಣಗುತ್ತಿವೆ.
ತಾಲೂಕಿನ ತೆಗ್ಗಿನ ಭಾವನೂರಿನ ರೈತ ವಿಜಯಗೌಡ್ ಅವರ ಜಮೀನಿನಲ್ಲಿ ಇದ್ದ ವಿದ್ಯುತ್ ಟ್ರಾನ್ಸ್‌ಪಾರ್ಮ್‌ರ್ ಸುಟ್ಟಿದೆ. ಇದರಿಂದ ಜಮೀನುಗಳಿಗೆ ಸಮಯಕ್ಕೆ ಸರಿಯಾಗಿ ನೀರು ಹಾಯಿಸಿಲಾಗದೇ ಬೆಳೆ ಬಾಡುತ್ತಿರುವುದನ್ನು ಕಂಡ ಗ್ರಾಮದ ರೈತ ವಿಜಯಗೌಡ ಶಿವನಗೌಡ ಪಾಟೀಲ್ ಎಂಬುವವರು ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದು, ಅದೀಗ ವೈರಲ್ ಆಗಿದೆ.
ವಿಜಯಗೌಡ ಅವರು ತಮ್ಮ ಒಟ್ಟು ಆರು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಹಾಕಿದ್ದಾರೆ. ಅದರಲ್ಲಿ ಮೂರು ಎಕರೆ ಕ್ಯಾಬಿಜ್, ಎರಡು ಎಕರೆ ಈರುಳ್ಳಿ ಹಾಗೂ ಒಂದು ಎಕರೆ ಜಮೀನಿನಲ್ಲಿ ಬದನೆಕಾಯಿ ಬೆಳೆ ಬೆಳೆದಿದ್ದಾರೆ. ಈಗಾಗಲೇ ಬೆಳೆ ಫಸಲು ಕೊಡುವ ಹಂತಕ್ಕೆ ಬಂದಿವೆ. ಈ ಹೊತ್ತಲ್ಲೇ ಹೀಗಾದರೆ ಕೈ ಬಂದ ತುತ್ತು ಬಾಯಿಗೆ ಬರದಂತಾಗಿ ಆರ್ಥಿಕವಾಗಿ ತುಂಬಾ ಸಂಕಷ್ಟ ಎದುರಿಸಬೇಕಾಗುತ್ತದೆ.
ಈ ಬಗ್ಗೆ ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ, ಅಧಿಕಾರಿಗಳು ಕಚೇರಿಗೆ ಬರುವಂತೆ ಸೂಚಿಸುತ್ತಿದ್ದಾರೆ. ಕಚೇರಿಗೆ ಬಾ ಎನ್ನುತ್ತಿರುವುದರರ್ಥ ಅಧಿಕಾರಿಗಳಿಗೆ ದುಡ್ಡು ಕೊಡಬೇಕು. ಹಣ ಕೊಟ್ಟರೆ ಒಂದೇ ದಿನದಲ್ಲಿ ವಿದ್ಯುತ್ ಟಿಸಿ ಹಾಕುತ್ತಾರೆ. ಇಲ್ಲದಿದ್ದರೆ ಇತ್ತ ಬೇಗ ಸುಳಿಯುವುದಿಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಹೆಸ್ಕಾಂ ಅಧಿಕಾರಿಗಳಿಗೆ ದುಡ್ಡು ಕೊಟ್ಟು ಟಿಸಿ ಹಾಕಿಸಿಕೊಂಡಿದ್ದೇವೆ ಎಂದು ಆರೋಪಿಸಿದರು.
ಸದ್ಯ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದೇವೆ. ಸಾಲ ಮಾಡಿ ಕೊಟ್ಟಾದರೂ ವಿದ್ಯುತ್ ಟ್ರಾನ್ಸ್‌ಫಾರ್ಮ್‌ರ್ ಹಾಕಿಸಿಕೊಳ್ಳಬೇಕು ಎಂದರೇ ಮೊದಲೇ ಸಾಕಷ್ಟು ಸಾಲ ಇದೆ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಒಂದು ವೇಳೆ ಶೀಘ್ರವೇ ವಿದ್ಯುತ್ ಟಿಸಿ ಹಾಕದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ಕುಳಿತುಕೊಳ್ಳಲಾಗುವುದು ಎಂದು ವಿಜಯಗೌಡ ಪಾಟೀಲ್ ಹೆಸ್ಕಾಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಕೇಂದ್ರ ಮೃಗಾಲಯ ಪ್ರಾಧಿಕಾರವು ಬಿಂಕದಕಟ್ಟಿ ಕಿರು ಮೃಗಾಲಯಕ್ಕೆ ಜೋಡಿ ಸಿಂಹಗಳ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಬನ್ನೇರುಘಟ್ಟ ಜೈವಿಕ ಉದ್ಯಾನದಿಂದ 11 ವರ್ಷದ ಧರ್ಮ ಮತ್ತು ಅರ್ಜುನ ಹೆಸರಿನ ಎರಡು ಗಂಡು ಸಿಂಹಗಳು ಗದಗ ತಾಲೂಕಿನ ಬಿಂಕದಕಟ್ಟಿ ಪ್ರಾಣಿ ಸಂಗ್ರಹಾಲಯಕ್ಕೆ ಗುರುವಾರ ತಡರಾತ್ರಿ ಆಗಮಿಸಿವೆ.
ಸಿಂಹಗಳಿಗಾಗಿ ಪ್ರಾಣಿ ಸಂಗ್ರಹಾಲಯದಲ್ಲಿ ನೈಸರ್ಗಿಕ ಆವಾಸ ಸ್ಥಾನದ ಮಾದರಿಯಲ್ಲೇ ವಿಶೇಷ ಪಂಜರ ಸಿದ್ದಪಡಿಸಲಾಗಿದೆ. ಸಿಂಹಗಳು ಸ್ವಚ್ಛಂದವಾಗಿ ವಿಹರಿಸಲು ಅನುಕೂಲಕರವಾದ ವಾತಾವರಣ ನಿರ್ಮಿಸಲಾಗಿದೆ. ಇದಕ್ಕಾಗಿ 1,000 ಚ.ಮೀ. ಸ್ಥಳ ಮೀಸಲಿಡಲಾಗಿದೆ. ಇದರಲ್ಲಿ ಕಲ್ಲಿನ ಬಂಡೆಗಳು, ನೀರಿನ ಹೊಂಡ, ಗಿಡ-ಮರಗಳಿರುವಂತೆ ವಿನ್ಯಾಸಗೊಳಿಸಲಾಗಿದೆ.
ಸಿಂಹಗಳೆರಡು ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲೇ ಹುಟ್ಟಿ ಬೆಳೆದಿದ್ದರೂ ಬಯಲು ಸೀಮೆಯ ಪರಿಸರಕ್ಕೆ ಹೊಂದಿಕೊಳ್ಳುವವರೆಗೆ ಸದ್ಯ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಇರುವುದಿಲ್ಲ. ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿ ಅನ್ವಯ ಸಿಂಹಗಳನ್ನು ೧೫-೩೦ ದಿನಗಳವರೆಗೆ ನಿಗಾದಲ್ಲಿಟ್ಟು, ಇಲ್ಲಿನ ಪರಿಸರಕ್ಕೆ ಹೊಂದಿಕೊಂಡ ಬಳಿಕ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು.
ಬಿಂಕದಕಟ್ಟಿ ಸಂಗ್ರಹಾಲಯದಲ್ಲಿ ಕತ್ತೆ ಕಿರುಬ ವೀಕ್ಷಿಸಲು ಗಾಜಿನ ಪರದೆಯ ವ್ಯವಸ್ಥೆ ಮಾಡಿದ್ದು, ಅದರಂತೆ ಸಿಂಹಗಳನ್ನು ವೀಕ್ಷಿಸಲು 39 ಎಂಎಂ ಗಾಜಿನ ಪರದೆ ವ್ಯವಸ್ಥೆ ಮಾಡಲಾಗಿದೆ. ಈ ಗಾಜುಗಳನ್ನು ಚಂಡಿಗಢದಿಂದ ತರಿಸಿಕೊಳ್ಳಲಾಗುತ್ತಿದೆ.
ಉತ್ತರ ಕರ್ನಾಟಕದಲ್ಲೇ ಬಿಂಕದಕಟ್ಟಿ ಮೃಗಾಲಯವು ಎರಡು ವರ್ಷಗಳ ಹಿಂದಷ್ಟೇ ಜೋಡಿ ಹುಲಿಗಳನ್ನು ಹೊಂದಿರುವ ಖ್ಯಾತಿ ಪಡೆದಿತ್ತು. ಇದೀಗ ಜೋಡಿ ಸಿಂಹಗಳು ಆಗಮಿಸುವ ಮೂಲಕ ಮೃಗಾಲಯದ ಮೆರಗನ್ನು ಇನ್ನಷ್ಟು ಹೆಚ್ಚಿಸಿವೆ.
ಎರಡು ದಿನಗಳ ಹಿಂದಷ್ಟೇ ಮಹಿಳೆಯ ತಲೆಯ ಮೇಲೆ ಹರಿದಿದ್ದ ಚಿಗರಿ ಬಸ್ ಇಂದು ಮತ್ತೊಂದು ಅಪಘಾತಕ್ಕೆ ಕಾರಣವಾಗಿದೆ. ಇಂದು ಚಿಗರಿ ಬಸ್ಸೊಂದು ಬೈಕ್ ಸವಾರ ನ ಮೇಲೆ ಎರಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸದಾ ಒಂದಿಲ್ಲ ಒಂದು ಅಪಘಾಕ್ಕೆ ಹೆಸರಾಗಿರುವ ಇಲ್ಲಿನ ಬಿ ಆರ್ ಟಿ ಎಸ್ ಚಿಗರಿ ಬಸ್ ಸಂಚಾರದ ನಿರ್ಭಂದಿತ ರಸ್ತೆಯಲ್ಲಿ ಸಂಚರಿಸದಿದ್ದರು ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳುವ ಮುನ್ನ ನೂರು ಬಾರಿ ಯೋಚಿಸಿ ನಡೆದರೂ ಕೂಡ “ನಜರ್ ಹಟಿ ದುರ್ಘಟನಾ ಘಟಿ” ಎಂಬುವಂತಾಗಿದೆ.
ಬೈಕ್ ಸವಾರ ಹಾಗೂ ಚಿಗರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಅಮರನಗರ ನಿವಾಸಿ ಮಹೇಶ್ ಹೊಸಮನಿ (೩೦) ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಎಸ್ ಡಿ ಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಆದರೆ ಬಿ ಆರ್ ಟಿ ಎಸ್ ಚಿಗರಿ ಬಸ್ ಸಂಚಾರ ಅವೈಜ್ಞಾನಿಕವಾಗಿದೆ ಎಂದು ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.