Home Blog Page 3189

ಸಂಕಷ್ಟದಲ್ಲಿರುವ ಪತ್ರಕರ್ತರ ಕುಟುಂಬಕ್ಕೆ ನೆರವು ಮುಂದುವರಿಕೆ, ವಿವಿಗಳಲ್ಲಿ ಅಧ್ಯಯನ ಪೀಠ: ಸಿಎಂ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಕಾರ್ಯನಿರತ ಪತ್ರಕರ್ತರಾಗಿದ್ದು ಅನಾರೋಗ್ಯ ಅಥವಾ ಸಾವಿಗೆ ತುತ್ತಾದ ಸಂದರ್ಭದಲ್ಲಿ ಆ ಕುಟುಂಬಕ್ಕೆ ಗರಿಷ್ಠ 5 ಲಕ್ಷ ರೂ ನೀಡುತ್ತಿರುವ ನೆರವನ್ನು ಮುಂದುವರೆಸಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸಮ್ಮತಿಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (KUWJ) ಅಧ್ಯಕ್ಷರಾದ ಶಿವಾನಂದ ತಗಡೂರು ನೇತೃತ್ವದ ನಿಯೋಗದ ಮನವಿಯನ್ನು‌ ಸ್ವೀಕರಿಸಿದ ಮುಖ್ಯಮಂತ್ರಿಗಳು, ಪತ್ರಕರ್ತರ ಕಲ್ಯಾಣಕ್ಕೆ ಪೂರಕವಾದ ಬೇಡಿಕೆಗಳ ಈಡೇರಿಕೆಗೆ ಬಜೆಟ್ ನಲ್ಲಿ ಸೇರ್ಪಡೆಗೊಳಿಸುವ ಬಗ್ಗೆ ಸಕರಾತ್ಮಕವಾಗಿ ಸ್ಪಂದಿಸಿದ್ದಲ್ಲದೆ ಹಾಲಿ ನೀಡಲಾಗುತ್ತಿರುವ ನೆರವನ್ನು ಮುಂದುವರೆಸಲಾಗುವುದು ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ವಿಜಯಪುರ ವಿವಿಯಲ್ಲಿ ಹಿರಿಯ ಪತ್ರಕರ್ತರಾದ ಮೊಹರೆ ಹಣುಮಂತರಾಯ ಬೆಂಗಳೂರು ವಿವಿಯಲ್ಲಿ ಎಚ್.ಎಸ್.ದೊರೆಸ್ವಾಮಿ ಮತ್ತು ಧಾರವಾಡ ವಿಶ್ವವಿದ್ಯಾಲಯಗಳಲ್ಲಿ ಹಿರಿಯ ಪತ್ರಕರ್ತರಾದ ಪಾಟೀಲ್ ಪುಟ್ಟಪ್ಪ (ಪಾಪು) ಅವರ ಹೆಸರಿನಲ್ಲಿ ಪತ್ರಿಕೋದ್ಯಮ ವಿಭಾಗದಲ್ಲಿ ಆಧ್ಯಯನ‌ಪೀಠ ಸ್ಥಾಪಿಸಬೇಕೆಂಬ ಸಂಘದ ಮನವಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದು ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ತಾಲ್ಲೂಕು ಕೇಂದ್ರಗಳಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಹಣಕಾಸು ಸ್ಥಿತಿ ನೋಡಿ ನೆರವು, ಬಸ್ ಪಾಸ್, ಜಾಹೀರಾತು ಹಣ ಶೀಘ್ರ ಬಿಡುಗಡೆ ಸೇರಿದಂತೆ ಅನೇಕ ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ನಿಯೋಗದಲ್ಲಿ ಕೆಯುಡಬ್ಲ್ಯಜೆ ಪ್ರಧಾನ ಕಾರ್ಯದರ್ಶಿ ಲೊಕೇಶ್, ನಿರ್ದೇಶಕರಾದ ಎನ್.ರವಿಕುಮಾರ್, ಜೆ.ಆರ್.ಕೆಂಚೇಗೌಡ, ಚೆಲುವರಾಜ್, ದೇವೇಂದ್ರಪ್ಪ ಕಪನೂರು, ಸೋಮಶೇಖರ ಕೆರಗೋಡು, ಮುನಿಕೃಷ್ಣಪ್ಪ, ಗಣಪತಿ ಗಂಗೊಳ್ಳಿ, ದೇವರಾಜು, ತೇಜಸ್ವಿನಿ, ರಶ್ಮಿಪಾಟೀಲ್ ಮೊದಲಾದವರಿದ್ದರು.

ಟಾಟಾ ಏಸ್ ಮಗುಚಿ ಬಿದ್ದು ಸ್ಥಳದಲ್ಲೇ ಓರ್ವ ಸಾವು; ಐದು ಜನರಿಗೆ ಗಾಯ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಚಾಲಕನ‌ ನಿಯಂತ್ರಣ ತಪ್ಪಿದ ಪರಿಣಾಮ ಟಾಟಾ ಏಸ್ ಗಾಡಿ ಮಗುಚಿ ಬಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಐದು ಜನರಿಗೆ ಗಾಯಗಾಳಗಿರುವ ಘಟನೆ ತಾಲೂಕಿನ ಅಕ್ಕಿಗುಂದ ಗ್ರಾಮದ ಬಳಿ ನಡೆದಿದೆ.

ಮೃತ ದುರ್ದೈವಿಯನ್ನು 65 ವರ್ಷದ ರೂಪ್ಲಪ್ಪ ಲಮಾಣಿ ಎಂದು ಗುರುತಿಸಲಾಗಿದೆ. ಅಕ್ಕಿಗುಂದ ಗ್ರಾಮದಿಂದ ಲಕ್ಷ್ಮೇಶ್ವರಕ್ಕೆ ಬರುವಾಗ ಈ ದುರ್ಘಟನೆ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವ ಐದು ಜನರನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಭೆ ನಡೆಯುವಾಗ ಮೊಬೈಲ್ ಹಾಗೂ ನಿದ್ದೆಯಲ್ಲಿ ಬ್ಯುಸಿಯಾದ ಅಧಿಕಾರಿಗಳು

0

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜಿಪಂ ಅಧ್ಯಕ್ಷ ಈರಪ್ಪ ನಾಡಗೌಡ್ರ ನೇತೃತ್ವದಲ್ಲಿ ಸಾಮಾನ್ಯ ಸಭೆ ನಡೆಯಿತು.

ಆರೋಗ್ಯ, ಶಿಕ್ಷಣ ಇಲಾಖೆಗಳ ಪ್ರಗತಿಯ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಈ ಇಲಾಖೆಯ ಅಧಿಕಾರಿಗಳನ್ನು ಹೊರತುಪಡಿಸಿ, ಬಹುತೇಕ ಇನ್ನುಳಿದ ಇಲಾಖೆಯ ಅಧಿಕಾರಿಗಳು ಸಭೆಗೂ ನಮಗೂ ಸಂಬಂಧವಿಲ್ಲವೆಂಬಂತೆ ಮೊಬೈಲ್ ನಲ್ಲಿ ತಲ್ಲೀನರಾಗಿದ್ದರು.

ವಿಷಯದ ಗಂಭೀರತೆ ಅರಿಯದ ಅಧಿಕಾರಿಗಳು ಮೊಬೈಲ್ ನಲ್ಲಿ ಬ್ಯುಸಿಯಾಗಿದ್ದರು. ಅವರದೊಂದಿಗೆ ಕೆಲ ಜಿಲ್ಲಾ ಪಂಚಾಯತಿ ಸದಸ್ಯರೂ ಸಹಿತ ಮೊಬೈಲ್ ನಲ್ಲಿ ಮಗ್ನರಾಗಿದ್ದು, ಸಭೆಯ ಉದ್ದೇಶಕ್ಕೆ ತಣ್ಣೀರು ಎರಚಿದರು.

ಇನ್ನು ಜಿಲ್ಲೆಯಲ್ಲಿರುವ ಸಮಸ್ಯೆಗಳ ಕುರಿತು ಚರ್ಚಿಸಬೇಕಾಗಿದ್ದ, ಎಸಿ ಹಾಲ್ ನಲ್ಲಿ ಕೂತಿದ್ದ ಅಧಿಕಾರಿ ಮಹೋದಯರು ನಿದ್ದೆಗೆ ಜಾರುವ ಮೂಲಕ ಬೇಜವಾಬ್ದಾರಿತನದಿಂದ ವರ್ತಿಸಿದರು.

ಜನರ ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳು, ಜನಪ್ರತಿನಿಧಿಗಳು ಹೀಗೆ ಮೊಬೈಲ್ ನೋಡುತ್ತಾ, ನಿದ್ದೆ ಮಾಡುತ್ತಾ ಇದ್ದರೆ, ಜನರ ಸಮಸ್ಯೆ ಹೇಗೆ ಬಗೆಹರಿಸುತ್ತಾರೆ ಅಂತ ಜನಸಾಮಾನ್ಯರು ಪ್ರಶ್ನೆ ಮಾಡುತ್ತಿದ್ದಾರೆ.

ರಾಜ್ಯಸಭಾ ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ರಾಜ್ಯಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಹಿರಿಯ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಮೊದಲು ವಿರೋಧ ಪಕ್ಷದ ನಾಯಕರಾಗಿದ್ದ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ನಿವೃತ್ತರಾಗಿರುವ ಹಿನ್ನೆಲೆಯಲ್ಲಿ ಖರ್ಗೆಯವರನ್ನು ಆಯ್ಕೆ ಮಾಡಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯಸಭೆಯ ಸಭಾಪತಿಗೆ ಪತ್ರ ಬರೆದಿದೆ.

ಗುಲಾಂ ನಬಿ ಆಜಾದ್ ಸೇರಿದಂತೆ ನಾಲ್ವರು ರಾಜ್ಯಸಭಾ ಸದಸ್ಯರು ನಿವೃತ್ತರಾಗುತ್ತಿದ್ದಾರೆ. ಸದಸ್ಯತ್ವದಿಂದ ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಗುಲಾಂ ನಬಿ ಆಜಾದ್, “ಪಾಕಿಸ್ತಾನಕ್ಕೆ ತೆರಳದ ಅದೃಷ್ಟವಂತರಲ್ಲಿ ನಾನೂ ಒಬ್ಬ. ಪಾಕಿಸ್ತಾನದಲ್ಲಿನ ಪರಿಸ್ಥಿತಿಗಳ ಬಗ್ಗೆ ಓದಿದಾಗ, ನಾನೊಬ್ಬ ಹಿಂದುಸ್ತಾನಿ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆಯಿದೆ.

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನನಗೆ ಜನರ ಪ್ರೀತಿ ದೊರೆತಿದೆ” ಎಂದು ಹೇಳಿದ್ದರು.

ಕಳೆದ ವಾರ ರಾಜ್ಯಸಭೆಯಲ್ಲಿ ನಿವೃತ್ತರಾಗುತ್ತಿರುವ ಸದಸ್ಯರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು ಗುಲಾಂ ನಬಿ ಆಜಾದ್ ಬಗ್ಗೆ ಪ್ರಸ್ತಾಪಿಸುವಾಗ ಕಣ್ಣೀರು ಹಾಕಿದ್ದರು.

ವರದಿ ಡಾ.ಅಬ್ದುಲ್ ರಜಾಕ್

ಸಿದ್ರಾಮಯ್ಯರ ಆರೋಪದ ಹಿಂದೆ ಸಿಎಂ ಖುರ್ಚಿಯ ಕನಸಿದೆ: ಸಚಿವ ಶ್ರೀರಾಮುಲು ವ್ಯಂಗ್ಯ

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರದ ವಿರುದ್ಧ ಸಿದ್ದರಾಮಯ್ಯ ಅವರು ಮಾಡುತ್ತಿರುವ ಆರೋಪದ ಹಿಂದೆ ಸಿಎಂ ಖುರ್ಚಿಯ ಕನಸಿದೆ. ವಿರೋಧ ಪಕ್ಷದ ನಾಯಕ ಸ್ಥಾನದಿಂದ ಸಿಎಂ ಸ್ಥಾನಕ್ಕೆ ನೆಗೆಯಬೇಕೆಂದು ಹಾತೊರೆಯುತ್ತಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅವರು ವ್ಯಂಗ್ಯವಾಡಿದರು.

ನಗರದ ತಮ್ಮ ನಿವಾಸದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಆರೋಪದಲ್ಲಿ ಹುರುಳಿಲ್ಲ. ರಾಜ್ಯ ಸರಕಾರ ಜನರ ಹಿತದೃಷ್ಟಿಗಾಗಿ ಕೆಲಸ‌ ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಪಕ್ಷದಲ್ಲೇ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಜಿ.ಪರಮೇಶ್ವರ್ ಮಧ್ಯೆ ಪೈಪೋಟಿ ಇದೆ. ಅವರಲ್ಲೇ ಸರಿಯಾಗಿ ಹೊಂದಾಣಿಕೆ ಇಲ್ಲ ಎಂದು ತಿಳಿಸಿದರು.

ಸಿದ್ದರಾಮಯ್ಯ ಮೊದಲು ‘ಅಹಿಂದ’ ಅಂದ್ರು, ಈಗ ‘ಹಿಂದ’ ಎನ್ನುತ್ತಿದ್ದಾರೆ. ಮತ್ತೊಮ್ಮೆ ಅಹಿಂದ ವರ್ಗಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ದರಾಮಯ್ಯ ಮುಂದಾಗುತ್ತಿದ್ದಾರೆ.

ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನೆರೆ ಹಾವಳಿ, ಕೊರೊನಾ ಸೋಂಕು ಇದ್ದಿರಲಿಲ್ಲ. ಆದರೂ,
ಬರಗಾಲ, ಕೊರೊನಾ, ನೆರೆ ಹಾವಳಿಯಲ್ಲೂ ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ.
ಸರಕಾರ ಡಕೋಟಾ ಎಕ್ಸ್‌ಪ್ರೆಸ್‌ ಅಲ್ಲ, ಎಲ್ಲ ಕಡೆಗೂ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ನಮ್ಮ ಸರಕಾರ ರಾಜ್ಯದ ಅಭಿವೃದ್ಧಿ ಪರವಾಗಿದೆ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಇಂದು ಬಾದಾಮಿಯಲ್ಲಿ 19.5 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ವಸತಿ ಶಾಲೆಗೆ ಸಿದ್ದರಾಮಯ್ಯ ಅವರೊಂದಿಗೆ ಶಂಕುಸ್ಥಾಪನೆ ಮಾಡಲಾಗುತ್ತಿದೆ. ಅಲ್ಲದೇ, ಮಸ್ಕಿಯಲ್ಲೂ 25 ಕೋಟಿ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಸರಕಾರ ಬದ್ಧವಾಗಿದೆ ಎಂದು ಸಚಿವ ಶ್ರೀರಾಮುಲು ಅವರು ಸ್ಪಷ್ಟಪಡಿಸಿದರು.

ಪೈಪ್ ಲೈನ್ ಒಡೆದು ನೀರು ಪೋಲು: ಗದಗ-ಬೆಟಗೇರಿ ಅವಳಿ ನಗರದಲ್ಲಿ ನೀರಿನದ್ದೇ ಗೋಳು!

0

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಅವಳಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್ ಲೈನ್ ಒಡೆದು ನಿತ್ಯ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ.

ಡಿಬಿಒಟಿ ಮೂಲಕ ದಿನದ 24×7 ತುಂಗಭದ್ರಾ ನದಿ ನೀರು ಪೂರೈಸಲಾಗುತ್ತಿದೆ. ಆದರೆ, ಕಳೆದ ಎರಡು ತಿಂಗಳಿಂದ ನಗರದ ಮುಂಡರಗಿ ರಸ್ತೆಯಲ್ಲಿರುವ ಹೊಸ ಎಲ್ಐಸಿ ಕಚೇರಿ ಹತ್ತಿರ ಪೈಪ್ ಲೈನ್ ಒಡೆದು ಕೃತಕ ನದಿ ಹರಿದಂತೆ ಹರಿದು ಚರಂಡಿ ಸೇರುತ್ತಿದೆ‌. ಬೆಳಗ್ಗೆ ಒಂದು ಹನಿ ನೀರು ಆಚೆ ಬರುವುದಿಲ್ಲ. ಆದರೆ, ರಾತ್ರಿ ಹತ್ತು ಗಂಟೆ ಮೇಲಾದರೆ ಸಾಕು ರಭಸದಿಂದ ನೀರು ಹರಿಯುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

ನಗರದ ಜನರಿಗೆ ತಲುಪಬೇಕಾದ ನೀರು ಮಧ್ಯದಲ್ಲೇ ಹಾಳಾಗುತ್ತಿದೆ. ರಸ್ತೆ ಮೇಲೆಲ್ಲಾ ಹರಿದು ಎಲ್ಐಸಿ ಪಕ್ಕದಲ್ಲಿರುವ ಜಮೀನಿನಲ್ಲಿ ಸಂಗ್ರಹವಾಗುತ್ತಿದೆ. ಇದರಿಂದ ನೀರು ನಿಂತು ಭೂಮಿ ಜವಳುಗಟ್ಟಿದಂತಾಗಿದೆ. ನಿತ್ಯ ನೀರು ಹರಿದು ಪೋಲಾಗುತ್ತಿರುವ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಗೊತ್ತಿದ್ದರೂ ಸುಮ್ಮನೆ ಕುಳಿತುಕೊಂಡಿದ್ದಾರೆ. ಅಲ್ಲದೇ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬೇಸಿಗೆ ಆರಂಭಕ್ಕೂ ಮುನ್ನವೇ ಅವಳಿ ನಗರದಲ್ಲಿ 10-15 ದಿನಕೊಮ್ಮೆ ನೀರು ಪೂರೈಸಲಾಗುತ್ತಿದೆ. ನೀರಿಗಾಗಿ ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ ತಲೆಕೆಡಸಿಕೊಳ್ಳುತ್ತಿಲ್ಲ ಎಂದು
ನಗರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರಿದರು.

ಮಾರಕಾಸ್ತ್ರಗಳಿಂದ ಇರಿದು ಯುವಕನ ಕೊಲೆ

ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಮಾರಕಾಸ್ತ್ರಗಳಿಂದ ಇರಿದು, ತಲೆ ಮೇಲೆ ಕಲ್ಲು ಎತ್ತಿಹಾಕಿ ಯುವಕನ ಬರ್ಬರ ಕೊಲೆ ಮಾಡಿರುವ ಘಟನೆ ತಾಲೂಕಿನ ಸಿಂದಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಮೃತ ಯುವಕನನ್ನು 28 ವರ್ಷದ ವೀರೇಶ್ ಬೀಮಳ್ಳಿ ಎಂದು ಗುರುತಿಸಲಾಗಿದೆ.

ವೀರೇಶ್, ಕಲಬುರಗಿ ನಗರದ ದುಬೈ ಕಾಲೋನಿ ನಿವಾಸಿಯಾಗಿದ್ದು, ನಗರದ ಸೂಪರ್ ಮಾರ್ಕೆಟ್ ನಲ್ಲಿನ ಬಾಂಡೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ‌. ಬುಧವಾರ ಮುಂಜಾನೆ ಪ್ರತಿದಿನದಂತೆ ವೀರೇಶ್ ತನ್ನ ಕೆಲಸಕ್ಕೆ ಹೋಗಿದ್ದ. ಈ ವೇಳೆ ಆತ ಕೆಲಸ ಮಾಡುವ ಅಂಗಡಿಗೆ ಮೂವರು ಬಂದು ಆತನನ್ನು ಕರೆದುಕೊಂಡು ಹೋಗಿದ್ದರು.

ಮೃತದೇಹ ಪತ್ತೆಯಾಗಿರುವ ಸ್ಥಳ

ಬುಧವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ವೀರೇಶನ ಬಗ್ಗೆ ಚೌಕ್ ಠಾಣೆ ಪೊಲೀಸರಿಗೆ ವೀರೇಶನ ಹೆತ್ತವರು ಮಾಹಿತಿ ನೀಡಿದ್ದರು. ಗುರುವಾರ ಸಂಜೆ ವೀರೇಶ್ ಶವ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ವೀರಬಲ್ಲಾಳ ವೀರೇಶನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಗುಂಡಿಯಲ್ಲಿ ಶವ ಹಾಕಿದ್ದಾರೆ. ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಸಚಿವ ರಮೇಶ್ ಜಾರಕಿಹೊಳಿಗೆ ಬಿಜೆಪಿ ಮುಖಂಡರಿಂದ ಸನ್ಮಾನ

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಬುಧವಾರ ಬೆಂಗಳೂರಿನಲ್ಲಿ ಗದಗ ಜಿಲ್ಲೆಯ ಬಿಜೆಪಿ ಮುಖಂಡರು ಭೇಟಿ ಮಾಡಿ ಸನ್ಮಾನಿಸಿದರು. ಇದೇ ವೇಳೆ ಬಿಜಾಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ವೈನ್ ಪಾರ್ಕ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಕಾಂತಿಲಾಲ್ ಬನ್ಸಾಲಿ, ಗದಗ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಅನಿಲ್ ಮೆಣಸಿನಕಾಯಿ, ಕರ್ನಾಟಕ ದ್ರಾಕ್ಷಾರಸ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸೋಮು, ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರಶಾಂತ ನಾಯ್ಕರ್, ಅನಿಲ್ ಅಬ್ಬಿಗೇರಿ, ಭದ್ರೇಶ್ ಕುಸ್ಲಾಪುರ ಉಪಸ್ಥಿತರಿದ್ದರು.

ಬಿಜೆಪಿಯಲ್ಲಿ ಬೀಜದ ಹೋರಿಗಳಿಲ್ಲ: ತಂಗಡಗಿ

-ಬಿಜೆಪಿಯಲ್ಲಿರೋದು ಕಾಂಗ್ರೆಸ್-ಜೆಡಿಎಸ್‌ನ ಬೀಜಗಳು

ವಿಜಯಸಾಕ್ಷಿ ಸುದ್ದಿ, ಕಾರಟಗಿ: ಬಿಜೆಪಿಯಲ್ಲಿ ಬೀಜದ ಹೋರಿಗಳಿಲ್ಲ ಅಲ್ಲಿ ಇರೋದೆಲ್ಲಾ ಕಾಂಗ್ರೆಸ್, ಜೆಡಿಎಸ್ ಬೀಜಗಳು. ನಮ್ಮವರನ್ನೇ ಎತ್ತುಕೊಂಡು ಹೋಗಿ ತಮ್ಮ ಪಕ್ಷದವರು ಅನ್ನುತ್ತಾರೆ ಎಂದು
ಡಿಸಿಸಿ ಅದ್ಯಕ್ಷ ಮಾಜಿ ಸಚಿವ ಶಿವರಾಜ್ ತಂಗಡಗಿ ಕಾರಟಗಿಯಲ್ಲಿ ವಿವಾದಾಸ್ಪದ ಹೇಳಿಕೆ ನೀಡಿದರು.

ಟ್ರಾಕ್ಟರ್ ರ‌್ಯಾಲಿಗೆ ಸಂಬಂದಿಸಿದಂತೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಂಗಡಗಿ, ಕನಕಗಿರಿ ಕ್ಷೇತ್ರಕ್ಕೆ ಶಾಸಕ ಬಸವರಾಜ್ ದಡೆಸುಗೂರು ಕೊಡುಗೆ ಎಂದರೆ ಎಂಎಸ್ ಐಎಲ್ ಲಿಕ್ಕರ್ ಶಾಪ್ ಗಳು, ನಾನು ತಂದ ಯೋಜನೆಗಳನ್ನೇ ತಮ್ಮವು ಎನ್ನುತ್ತಿದ್ದಾರೆ, ನಾನು ಯಾವತ್ತೂ ಸ್ವಜಾತಿಯ ಅಧಿಕಾರಿಗಳನ್ನು ತರಲಿಲ್ಲ ಆದರೆ ಬಸವರಾಜ್ ದಡೆಸೂಗೂರ್ ಆ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಿಂದ ಹಮ್ಮಿಕೊಳ್ಳಲಾಗಿರುವ ಪ್ರತಿಭಟನೆಗಳ ಮುಕ್ತಾಯದ ನಂತರ ದೆಹಲಿಯ ಬಾರ್ಡರ್ ಗೆ ಹೋಗುತ್ತೇನೆ ರೈತರ ಹೋರಾಟದ ಜೊತೆ ನಿಲ್ಲುತ್ತೇನೆ.
ಕಾರಟಗಿಯಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಟ್ರಾಕ್ಟರ್ ರ‌್ಯಾಲಿ ಇಡೀ ರಾಜ್ಯದಲ್ಲಿಯೇ ಮಾದರಿಯಾಗಬೇಕು. ದಿ.೧೫ ರಂದು ಬೃಹತ್ ಟ್ರಾಕ್ಟರ್ ರ‌್ಯಾಲಿಯನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶ್ರೀನಿವಾಸ್ ರೆಡ್ಡಿ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

ಸೆಂಟ್ರಲ್ ಬ್ಯಾಂಕ್ ನಲ್ಲಿ ಹೊತ್ತಿದ ಬೆಂಕಿ: ಸಮಯ ಪ್ರಜ್ಞೆಯಿಂದ ತಪ್ಪಿದ ಅನಾಹುತ

0

ವಿಜಯಸಾಕ್ಷಿ ಸುದ್ದಿ, ಗದಗ
ನಗರದ ರೋಟರಿ ಸರ್ಕಲ್ ಹತ್ತಿರವಿರುವ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದರ ಪರಿಣಾಮವಾಗಿ ವಿದ್ಯುತ್ ಬೋರ್ಡ್ ಸುಟ್ಟು ಕರಕಲಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪೀಠೋಪಕರಣಕ್ಕೆ ಹತ್ತಿದ್ದ ಬೆಂಕಿ ನಂದಿಸುವ ಮೂಲಕ ಭಾರಿ
ಅನಾಹುತವೊಂದನ್ನು ತಪ್ಪಿಸಿದ್ದಾರೆ.

error: Content is protected !!