ಇಲ್ಲಿನ ಗೋಕುಲ ರಸ್ತೆಯ ಇಂಡಸ್ಟ್ರೀಯಲ್ ಎಸ್ಟೇಟ್‌ನಲ್ಲಿನ ಶ್ರೀಶಿವಶಕ್ತಿ ಎಂಟರ್‌ಪ್ರೈಜಿಸ್ ಗೋಡೌನನಲ್ಲಿದ್ದ ಟೈಯರ್, ಟ್ಯೂಬ್ ಮತ್ತು ಪ್ಲ್ಯಾಪ್‌ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಗೋಕುಲ್ ರಸ್ತೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಗೋಕುಲ ರಸ್ತೆಯ ಮಾರುತಿನಗರದ ಹಳ್ಳೆಪ್ಪ ದೇವಪ್ಪ ಪೂಜಾರ ಹಾಗೂ ಗದಗ-ಬೆಟಗೇರಿ ನರಸಾಪೂರದ ವಸೀಂ ಮಕ್ತುಮಸಾಬ್ ಸೈದಾಪೂರ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಸುಮಾರು 2 ಲಕ್ಷ 10 ಸಾವಿರ ರೂ.ಮೌಲ್ಯದ ಟ್ರಕ್‌ನ(ಲಾರಿ) 11 ಟೈಯರ್, ಟ್ಯೂಬ್ ಹಾಗೂ ಪ್ಲ್ಯಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಗೋಡೌನದ ಸಿಮೆಂಟ್ ಸೀಟಿನ ನಟ್ ಬೋಲ್ಟ್ ಬಿಚ್ಚಿ ಗೋಡೌನದಲ್ಲಿ ಇಳಿದು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಖದಿಮರು ಬಾಯಿ ಬಿಟ್ಟಿದ್ದಾರೆ. ಇನ್ನು ಕಳ್ಳತನಕ್ಕೆ ಸಹಾಯ ಸಹಕಾರ ನೀಡಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರೆಸಿದ್ದಾರೆ.
ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವಂಥದ್ದು ಸರಕಾರದ ಕರ್ತವ್ಯ ಎಂದು ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಪಂಚಮಸಾಲಿ ೨ಎ ಮೀಸಲಾತಿ ಹೋರಾಟ ಕುರಿತು ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀಗಳು, ಮೀಸಲಾತಿ ಹೋರಾಟ ಇಂದು ನಿನ್ನೆಯದಲ್ಲ. ಮೀಸಲಾತಿಗಾಗಿ ಹಲವು ದಶಕಗಳಿಂದ ಹೋರಾಟ ನಡೆಯುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ ಈ ಬಗ್ಗೆ ಮೀನಾಮೇಷ ಎಣಿಸಬಾರದು. ಕಾಲಹರಣ ಮಾಡದೇ ಬೇಗನೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಜಾತಿಸಂಘಟನೆ ವಿಷಯಗಳನ್ನು ಸರಕಾರ ನಿರ್ಲಕ್ಷಿಸಬಾರದು. ಜಾತಿ ಸಂಘರ್ಷ ನಿರ್ಲಕ್ಷಿಸಿದರೆ, ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಸಮುದಾಯದವರು ರೊಚ್ಚಿಗೇಳುತ್ತಾರೆ. ಇದರಿಂದ ಸಾರ್ವಜನಿಕ ಆಸ್ತಿ, ಪಾಸ್ತಿಗಳು ಹಾನಿಯಾಗಬಹುದು. ಅಂತಹ ಘಟನೆಗಳಿಗೆ ಸರಕಾರ ಹೊಣೆಯಾಗಬಾರದು ಎಂದು ಕಿವಿಮಾತು ಹೇಳಿದರು.
ಮೀಸಲಾತಿ ಪಡೆಯುವದು ಅವರ ಹಕ್ಕು, ಅದೇನೂ ಭಿಕ್ಷೆ ಅಲ್ಲ. ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು. ಸಮುದಾಯ ಒಟ್ಟಾಗಿ ಕೆಲಸ ಮಾಡಿದಲ್ಲಿ ಸರಕಾರ ಬಿದ್ದು ಹೋಗುವ ಸಂದರ್ಭ ಬರಬಹುದು. ಸಮಾಜದ ಎಲ್ಲ ಶಾಸಕರು ಪಕ್ಷಭೇದ ಮರೆತು ರಾಜೀನಾಮೆಗೆ ತಯಾರಾದರೆ, ಮೀಸಲಾತಿ ಕೊಡಲೇಬೇಕಾಗುತ್ತದೆ. ನಾಯಕತ್ವ ಬದಲಾವಣೆಗೆ ಸಾಕಷ್ಟು ಕಾರಣಗಳಿರುತ್ತವೆ. ಮುಂದೊಂದು ದಿನ ಮೀಸಲಾತಿ ವಿಷಯವೂ ನಾಯಕತ್ವ ಬದಲಾವಣೆಗೆ ಕಾರಣವಾಗಬಹುದು ಎಂದು ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ: ಹನಿ ನೀರಾವರಿ ಯೋಜನೆಯ ಫಲಾನುಭವಿಗಳಿಗೆ ಸಬ್ಸಿಡಿ ಹಣ ಮಂಜೂರಾತಿ ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಎಸಿಬಿ ಬಲೆಗೆ ಸಿಕ್ಕಿಬಿದ್ದಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ನಡೆದಿದೆ.
ಗುಂಡ್ಲುಪೇಟೆಯ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎಸಿಬಿ ಬಲೆಗೆ ಸಿಕ್ಕಿ ಬಿದ್ದ ಅಧಿಕಾರಿಯಾಗಿದ್ದಾರೆ.
ಎಸಿಬಿ ಅಧಿಕಾರಿಗಳಿಂದ ಕಡತ ಪರಿಶೀಲನೆ
ಹನಿನೀರಾವರಿ ಯೋಜನೆಯ ಸಲಕರಣೆಗಳ ವಿತರಕ ಕಡಬೂರು ಮಂಜು ರವರ ಬಳಿ 50 ಸಾವಿರ ರೂಪಾಯಿ ಬೇಡಿಕೆಯಿಟ್ಟಿದ್ದ ಶಿವಲಿಂಗಪ್ಪರವರಿಂದ ಬೇಸತ್ತ ಕಡಬೂರು ಮಂಜು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಎಸಿಬಿಗೆ ಬಂದ ದೂರಿನನ್ವಯ ಡಿವೈಎಸ್ಪಿ ಸದಾನಂದ, ಇನ್ಸ್ ಪೆಕ್ಟರ್ ದೀಪಕ್, ಕಿರಣ್, ಸಿಬ್ಬಂದಿಗಳಾದ ಸತೀಶ್, ಮಹದೇವಸ್ವಾಮಿ, ಕಾರ್ತಿಕ್, ನಾಗೇಂದ್ರ ರವರು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದರೆ.
ಗುಂಡ್ಲುಪೇಟೆ ತಾಲೂಕಿನ ರೈತರಿಗೆ ಹನಿ ನೀರಾವರಿ ಯೋಜನೆಯಡಿ ಸಬ್ಸಿಡಿ ಹಣ ಮಂಜೂರು ಮಾಡಲು ಪ್ರತಿ ಘಟಕಕ್ಕೆ ಇಂತಿಷ್ಟು ಎಂದು ಲಂಚದ ಹಣ ನಿಗದಿಪಡಿಸಿದ್ದ ಶಿವಲಿಂಗಪ್ಪ ಎಸಿಬಿ ದಾಳಿಗೆ ಬೆಚ್ಚಿ ಬಿದಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಟ್ರಾಫಿಕ್ ರೂಲ್ಸ್ ಗಳನ್ನು ಕಟ್ಟು ನಿಟ್ಟಾಗಿ ಜಾರಿತರಲಾಗುತ್ತಿದೆ. ಕೊಪ್ಪಳ ಸಬ್ ಡಿವಿಷನ್ ನಲ್ಲಿ ಇದೇ ತಿಂಗಳ 2ರಂದು 22 ಡ್ರಂಕ್ ಆಂಡ್ ಡ್ರೈವ್ ಕೇಸ್ ಗಳನ್ನು ಪೊಲೀಸರು ದಾಖಲಿಸಿದ್ದರು. ಆ ಕೇಸ್ ನಲ್ಲಿ ಕುಡಿದು ಬೈಕ್ ಚಲಾಯಿಸುತ್ತಿದ್ದ ವಾಹನ ಸವಾರನಿಗೆ ಕೊಪ್ಪಳ ಪಿ. ಸಿವಿಲ್ ಜಡ್ಜ್ & ಜೆಎಮ್ ಎಫ್ ಸಿ ಕೋರ್ಟ್ 10 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಒಂದು ವಾರದಲ್ಲಿ 10ಕ್ಕೂ ಹೆಚ್ಚು ವಾಹನಗಳ ಅಪಘಾತ ಸಂಭವಿಸಿವೆ. ಅದರಲ್ಲಿ ಬೈಕ್ ಆಕ್ಸಿಡೆಂಟ್ ಗಳೇ ಹೆಚ್ಚು. ಅದರಲ್ಲಿ 8 ಜನ ಸವಾರರು ಸಾವನ್ನಪ್ಪಿದ್ದಾರೆ. ಅವರಲ್ಲಿ ಹೆಲ್ಮೆಟ್ ಧರಿಸದೇ ಇರುವುದಕ್ಕೆ ಸಂಭವಿಸಿದ ಸಾವುಗಳೇ ಹೆಚ್ಚು. ಹೀಗಾಗಿ ಕಳೆದ ಹಲವಾರು ದಿನಗಳಿಂದ ಕಟ್ಟು ನಿಟ್ಟಾಗಿ ಎಲ್ಲ ವಾಹನಗಳ ಪರಿಶೀಲನೆ ಮಾಡಲಾಗುತ್ತಿದೆ.
ದಿ.2ರಂದು ಕೊಪ್ಪಳ ಸಬ್ ಡಿವಿಜನ್ ನಲ್ಲಿ 275 ಹೆಲ್ಮೆಟ್ ರಹಿತ ಸವಾರರಿಗೆ ದಂಡ ವಿಧಿಸಲಾಗಿದ್ದು. 1,35,500/- ರೂ ಗಳನ್ನು ವಸೂಲಿ ಮಾಡಲಾಗಿದೆ. ಡ್ರಂಕ್ ಆಂಡ್ ಡ್ರೈವ್ 22 ಕೇಸ್ ಗಳ ದಂಡವನ್ನು ನ್ಯಾಯಾಲಯವು ವಿಧಿಸುತ್ತದೆ. ವಾಹನವನ್ನು ವಶಕ್ಕೆ ಪಡೆಯಲಾಗಿರುತ್ತದೆ. ದಂಡ ಕಟ್ಟಿಬಂದು ವಾಹನ ಬಿಡಿಸಿಕೊಂಡು ಹೋಗಬೇಕು. ದಂಡ ವಸೂಲಿ ಮಾಡುವುದು ಮುಖ್ಯವಲ್ಲ . ಜನರಲ್ಲಿ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸಬೇಕಿದೆ. ಈ ಕಾರಣಕ್ಕಾಗಿ ಕೇಸ್ ಗಳನ್ನು ದಾಖಲಿಸಲಾಗುತ್ತಿದೆ. ಜನರ ಪ್ರಾಣ ರಕ್ಷಣೆ ಬಹಳ ಮುಖ್ಯ ಜನರೂ ಸಹ ಜಾಗೃತರಾಗಬೇಕು ಎಂದು ಕೊಪ್ಪಳ ಡಿವೈಎಸ್ಪಿ ವೆಂಕಟಪ್ಪ ನಾಯಕ್ ಹೇಳಿದ್ದಾರೆ.
ತಾಲೂಕಿನ ಹೊಂಬಳ ರಸ್ತೆಯಲ್ಲಿ ಸುಮಾರು 162 ಎಕರೆ ವಿಸ್ತೀರ್ಣದ ಜಾಗದಲ್ಲಿ ನಿರ್ಮಾಣಗೊಂಡಿರುವ ಪಶುವೈದ್ಯಕೀಯ ಮಹಾವಿದ್ಯಾಲಯ ಸೂಕ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಿಲ್ಲದೆ ನರಳುತ್ತಿದೆ. ಅನುದಾನದ ಅಭಾವದಿಂದಾಗಿ ಮೂಲಸೌಲಭ್ಯಗಳ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಆರಂಭದಿಂದಲೂ ಮಹಾವಿದ್ಯಾಲಯ ಹಲವು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಬೀದರ್‌ನಲ್ಲಿರುವ ರಾಜ್ಯದ ಏಕೈಕ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆವಿಎಎಫ್‌ಎಸ್‌ಯು) ಸಹಿತ ರಾಜ್ಯದ ಬಹುತೇಕ ಪಶು ಮಹಾವಿದ್ಯಾಲಯಗಳದ್ದು ಇದೇ ಗೋಳಾಗಿದೆ ಎನ್ನಲಾಗಿದೆ.
ಮೂಲ ಸೌಲಭ್ಯಗಳ ಹಾಗೂ ಬೋಧಕ ಸಿಬ್ಬಂದಿಯ ಕೊರತೆಯಿಂದಾಗಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಗದಗದಲ್ಲಿ ಪಶುವೈದ್ಯಕೀಯ ಕಾಲೇಜು ಇದ್ದೂ ಇಲ್ಲದಂತೆ ಭಾಸವಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಗದಗ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮೊದಲ ಸೆಮಿಸ್ಟರ್‌ಗೆ 50 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎರಡನೇ ಸೆಮಿಸ್ಟರ್‌ನಲ್ಲಿ 50, ಮೂರನೇ ಸೆಮಿಸ್ಟರ್‌ನಲ್ಲಿ 48, ನಾಲ್ಕನೇ ಸೆಮಿಸ್ಟರ್‌ನಲ್ಲಿ 45 ಸೇರಿ ಸುಮಾರು 250 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಉಪನ್ಯಾಸಕರ ಕೊರತೆ: ಭಾರತೀಯ ಪಶುವೈದ್ಯಕೀಯ ಮಂಡಳಿ (ವಿಸಿಐ) ಪ್ರಕಾರ ಪಶುವೈದ್ಯಕೀಯ ಮಹಾವಿದ್ಯಾಲಕ್ಕೆ ಒಟ್ಟು 76 ಬೋಧಕ ಸಿಬ್ಬಂದಿಯ ಅವಶ್ಯಕತೆ ಇದೆ. ಆದರೆ, ಇಲ್ಲಿ ಕೇವಲ 22 ಜನ ನಿಯಮಿತ, 10-12 ಜನ ಉಪನ್ಯಾಸಕರು ಒಪ್ಪಂದದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿನಲ್ಲಿ ಪರ‍್ಯಾಪ್ತ ಸಂಖ್ಯೆಯ ಬೋಧಕ ಸಿಬ್ಬಂದಿ ಇಲ್ಲದಿದ್ದರೂ ಇದ್ದವರೇ ಅದು ಹೇಗೋ ಪಾಠ ಪ್ರವಚನಗಳನ್ನು ನಿರ್ವಹಿಸುತ್ತಿದ್ದಾರೆ. ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಬಹುದೊಡ್ಡ ಪೆಟ್ಟು ಬೀಳುವ ಸಾಧ್ಯತೆಗಳಿವೆ.
17 ಬೋಧನಾ ವಿಭಾಗಗಳು: ಪಶುವೈದ್ಯಕೀಯ ಮಹಾವಿದ್ಯಾಲಯ 2005ರಲ್ಲಿ ಮಂಜೂರಾಗಿದ್ದರೂ, 2017ರಲ್ಲಿ 50 ವಿದ್ಯಾರ್ಥಿಗಳೊಂದಿಗೆ ಪ್ರಾರಂಭಗೊಂಡಿದ್ದು, ಇದರಲ್ಲಿ ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರ, ಪಶುವೈದ್ಯಕೀಯ ಶರೀರ ಶಾಸ್ತ್ರ ಮತ್ತು ಜೀವರಾಸಾಯನಿಕತೆ, ಪಶುವೈದ್ಯಕೀಯ ಪರಾವಲಂಬಿ ಶಾಸ್ತ್ರ ಸಹಿತ ಒಟ್ಟು 17 ಬೋಧನಾ ವಿಭಾಗಗಳಿವೆ.
ನೇಮಕಾತಿ ಆದೇಶಿಸದಿದ್ದರೆ ಕಷ್ಟ: ಸರ್ಕಾರ ಪಶುವೈದ್ಯಕೀಯ ಮಹಾವಿದ್ಯಾಲಯಕ್ಕೆ ಬೋಧಕ ಸಿಬ್ಬಂದಿಯನ್ನು ಭರ್ತಿ ಮಾಡಲು ಅನುಮತಿ ನೀಡದಿದ್ದರೆ, ಬಹಳಷ್ಟು ಕಷ್ಟಕ್ಕೆ ಸಿಲುಕಿಕೊಳ್ಳಬೇಕಾಗುತ್ತದೆ. ವಿಶ್ವವಿದ್ಯಾಲಯ ಹಾಗೂ ಮಹಾವಿದ್ಯಾಲಯಗಳಲ್ಲಿ ನೌಕರರ ನೇಮಕಾತಿ ಬಹಳ ಮುಖ್ಯವಾಗಿದೆ. ಇಲ್ಲದಿದ್ದರೆ, ಭಾರತೀಯ ಪಶುವೈದ್ಯಕೀಯ ಪರಿಷತ್ ಮಹತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಬೀದಿ ಪಾಲಾಗುವ ಸಾಧ್ಯತೆಗಳಿವೆ ಎಂದು ಸ್ವತಃ ಪಶುವೈದ್ಯಕೀಯ ಕುಲಸಚಿವರೇ ಅಳಲು ತೋಡಿಕೊಂಡಿದ್ದಾರೆ.
67 ಕೋಟಿ ರೂ.ಗೆ ಪ್ರಸ್ತಾವನೆ ಪಶುವೈದ್ಯಕೀಯ ಕಾಲೇಜಿನ ಮೊದಲ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿಗೆ ಅನುದಾನದ ಆವಶ್ಯಕತೆ ಇದೆ. ಮಹಾವಿದ್ಯಾಲಯದಿಂದ ಒಟ್ಟು 67 ಕೋಟಿ ರೂ. ಅನುದಾನ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ ಅವರಿಗೂ ಮನವಿ ಮಾಡಲಾಗಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪಶುವೈದ್ಯಕೀಯ ವಿಶ್ವವಿದ್ಯಾಲಯಕ್ಕೆ 360 ಕೋಟಿ ರೂ. ಅನುದಾನ ಮೀಸಲಿಡುವಂತೆ ಪ್ರಸ್ತಾವನೆ ಸಲ್ಲಿಸಿದೆ.
ಗದಗನಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಪ್ರಾರಂಭಿಸಲಾಗಿದ್ದು, ಅಲ್ಲಿ ಪಾಠ ಮಾಡಲು ಸಹಿತ ಬೋಧಕ ಸಿಬ್ಬಂದಿಗಳಿಲ್ಲ. ಬಹಳ ಕಷ್ಟಪಟ್ಟು ಇರುವವರಲ್ಲಿಯೇ ನಿರ್ವಹಿಸಿಕೊಂಡು ಹೋಗಲಾಗುತ್ತಿದೆ.
-ಅಪಘಾತದಿಂದಾಗಿ ಗಾಯಗೊಂಡಿದ್ದ ವ್ಯಕ್ತಿಗೆ ಚಿಕಿತ್ಸೆ ನೀಡುವಲ್ಲಿ ನಿರ್ಲಕ್ಷ್ಯ: ಸಂಬಂಧಿಕರ ಆರೋಪ
-ವ್ಯಕ್ತಿಯ ಆರೋಗ್ಯ ಸಲಹೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎನ್ನುತ್ತಿವೆ ಆಸ್ಪತ್ರೆಯ ಮೂಲಗಳು
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಬುಧವಾರ ರಾತ್ರಿ ನಡೆದ ಅಪಘಾತವೊಂದರಲ್ಲಿ ಗಾಯಗೊಂಡಿದ್ದ ಇಬ್ಬರನ್ನು ನಗರದ ಕೆ.ಎಸ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಓರ್ವನನ್ನು ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತೀವ್ರವಾಗಿ ತಲೆಗೆಗಾಯವಾಗಿದ್ದ ಫಕೀರಪ್ಪ (26)ನಿಗೆ ಕೆ.ಎಸ್.ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡಿದರು. ಬೆಳಗ್ಗೆ ಫಕೀರಪ್ಪ ಮೃತಪಟ್ಟಿದ್ದಾನೆ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿರುವುದಾಗಿ ಸಂಬಂಧಿಕರು ಹೇಳಿದರು. ಸುಮಾರು ನಲವತ್ತು ಸಾವಿರ ರೂಪಾಯಿ ಪಾವತಿಸಿದ ನಂತರ ಫಕೀರಪ್ಪನನ್ನು ಸಂಬಂಧಿಕರ ಸುಪರ್ದಿಗೆ ಒಪ್ಪಿಸಿದರು. ಅಚ್ಚರಿ ಎಂದರೆ ಫಕೀರಪ್ಪ ಇನ್ನೂ ಉಸಿರಾಡುತ್ತಿದ್ದ. ಹಾಗಾಗಿ ಕೆ.ಎಸ್.ಆಸ್ಪತ್ರೆ ಸಿಬ್ಬಂದಿ ಜೊತೆ ಫಕೀರಪ್ಪನ ಕೆಲ ಸಂಬಂಧಿಕರು ವಾಗ್ವಾದ ನಡೆಸಿದ್ದರಿಂದ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ರೋಗಿ ಬದುಕಿರುವುದು ಗೊತ್ತಾದ ನಂತರವೂ ಜಿಲ್ಲಾ ಆಸ್ಪತ್ರೆಗೆ ರೋಗಿಯನ್ನು ಸಾಗಿಸಲು ಆಸ್ಪತ್ರೆಯವರು ಆ್ಯಂಬುಲೆನ್ಸ್ ನೀಡದೇ ಅಮಾನವೀಯವಾಗಿ ವರ್ತಿಸಿದ್ದಾರೆ. ಬದುಕಿದ್ದವನನ್ನೇ ಸಾಯಿಸಿದ ಈ ಆಸ್ಪತ್ರೆಯ ಸಿಬ್ಬಂದಿಗೆ ಮನುಷ್ಯತ್ವ ಎಲ್ಲಿಂದ ಬರಬೇಕು ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.
ಕೊನೆಗೆ ಫಕೀರಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಸುಮಾರು ಒಂದು ಗಂಟೆಗಳ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಫಕೀರಪ್ಪ ಕೊನೆಯುಸಿರೆಳೆದ.
ಜೀವ ಇರುವಾಗಲೇ ಸಾವು ಎಂದು ಕೆ.ಎಸ್. ಆಸ್ಪತ್ರೆಯ ವೈದ್ಯರು ಹೇಳಿದ್ದರಿಂದ ಆಘಾತವಾಗಿದೆ. ಈ ಆಸ್ಪತ್ರೆಯಲ್ಲಿ ಇಂಥ ಪ್ರಕರಣ ಇದೊಂದೇ ಅಲ್ಲ, ಈ ಹಿಂದೆಯೂ ಇಂಥ ಪ್ರಕರಣಗಳು ನಡೆದಿವೆ. ಬಡವರ ಜೀವದ ಜೊತೆ ಚಲ್ಲಾಟ ಆಡುವ ಕೆ.ಎಸ್.ಆಸ್ಪತ್ರೆಯ ವೈದ್ಯ ಸಿಬ್ಬಂದಿ ವಿರುದ್ಧ ಕ್ರಮ ಜರುಗಲಿ.
ರಮೇಶ್ ಕಲ್ಲತಾವರಗೆರೆ, ಮೃತನ ಮಾವ
ಬೆಳಗ್ಗೆ 9-30ಕ್ಕೆ ಬನ್ನಿ… ಒಟ್ಟಾರೆ ಪ್ರಕರಣದ ಸತ್ಯಾಂಶ ತಿಳಿಯಲು ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿದಾಗ ಆಸ್ಪತ್ರೆಯ ಸಿಇಒ ಅನೌಪಚಾರಿಕವಾಗಿ ಪ್ರಕರಣದ ಹಿನ್ನೆಲೆ ತಿಳಿಸಿದರು. ಅಧಿಕೃತ ಮಾಹಿತಿಗೆ ಶುಕ್ರವಾರ ಬೆಳಗ್ಗೆ 9-30ಕ್ಕೆ ಬನ್ನಿ. ವೈದ್ಯರೇ ಪ್ರಕರಣದ ಕುರಿತು ಮಾಧ್ಯಮಗಳಿಗೆ ವಿವರಣೆ ನೀಡುತ್ತಾರೆ ಎಂದರು.
ಗೊಂದಲಕ್ಕೆ ಕಾರಣವಾಯ್ತಾ “ಡೆತ್” ಎನ್ನುವ ಪದ.. ರೋಗಿಯ ವೈದ್ಯಕೀಯ ಸಲಹೆ ಮತ್ತು ಬಿಡುಗಡೆ ನಮೂನೆಯ ರೋಗಿಯ ವೈದ್ಯಕೀಯ ರಿಸ್ಕ್ ಎನ್ನುವ ಕಾಲಂನಲ್ಲಿದ್ದ “ಡೆತ್” ಎನ್ನುವ ಪದ ಗೊಂದಲಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ, ರೋಗಿಯ ಕಂಡೀಷನ್ ವಿವರಿಸುವಾಗ ಸಾವು ಸಂಭವಿಸಬಹುದು ಎಂದು ಬರೆದಿರುವುದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದರಿಂದ ಇಷ್ಟೆಲ್ಲಾ ರಾದ್ಧಾಂತವಾಗಿದೆ. ಎಲ್ಲೂ ಸಹ ಸಾವು ಎಂದು ಡೀಕ್ಲೇರ್ ಮಾಡಿಲ್ಲ. ಬಹುಶಃ ನಮೂನೆ ಕನ್ನಡದಲ್ಲಿದ್ದು ವಿವರಣೆ ನೀಡಿದ್ದರೆ ಹೀಗಾಗುತ್ತಿರಲಿಲ್ಲವೇನೋ ಎಂದು ಪ್ರಕರಣವನ್ನು ವಿಶ್ಲೇಷಿಸಲಾಗುತ್ತಿದೆ. ಜೊತೆಗೆ ಪರ ಮತ್ತು ವಿರುದ್ಧ ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ತಾಲೂಕಿನ ನೀರಲಗಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನೀಲವ್ವ ಶಿವಪ್ಪ ಮಣ್ಣೂರ ಆಯ್ಕೆಯಾದರು.
ಈ ಸಂದರ್ಭದಲ್ಲಿ ಗದಗ ತಾ.ಪಂ. ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ವಿಶ್ವನಾಥ್ ದೇಸಾಯಿ, ಗ್ರಾ.ಪಂ. ಮಾಜಿ ಸದಸ್ಯರಾದ ಬಸವರಾಜ್ ಬಿಂಗಿ, ಅಂದಪ್ಪ ಬಿಂಗಿ ಇದ್ದರು
ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದ್ದ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದೆ. ಕಳೆದ ಸಾಲಿಗಿಂತಲೂ ಹೆಚ್ಚಿನ ಮತಗಳನ್ನು ಪಡೆದು ಜಯಭೇರಿ ಬಾರಿಸುವ ಮೂಲಕ ಅಶೋಕ ಮಂದಾಲಿ ದ್ವಿತೀಯ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ನಿರೀಕ್ಷೆಯಂತೆ ಗದಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ ಮಂದಾಲಿ ಅವರು 1348 ಮತಗಳನ್ನು ಪಡೆದು ಅಧ್ಯಕ್ಷರಾಗಿ ಮರು ಆಯ್ಕೆಯಾದರು.
ಚುನಾವಣೆಗೆ ಸ್ಪರ್ಧಿಸಿದ್ದ ಮತ್ತೋರ್ವ ಅಭ್ಯರ್ಥಿ ಉದಯಗೌಡ ವೀರನಗೌಡ್ರ 409 ಮತ ಪಡೆದು ಉಪಾಧ್ಯಕ್ಷರಾಗಿ, ಪರಿಶಿಷ್ಟ ಜಾತಿ ಮೀಸಲಿನಲ್ಲಿ ವಿಜಯಕುಮಾರ ಚಲವಾದಿ 36 ಮತಗಳನ್ನು ಪಡೆಯುವ ಮೂಲಕ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರಾಮಾಣಿಕ ಕಾರ್ಯಕರ್ತರು ಪಕ್ಷದ ಪ್ರಮುಖ ಹುದ್ದೆಗಳನ್ನು ಅಲಂಕರಿಸುವುದಕ್ಕಾಗಿಯೇ ರೂಪಿಸಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿಗಳ ಹುದ್ದೆಗಳಿಗೆ ಜ.11 ರಂದು ಆನ್‌ಲೈನ್ ಮೂಲಕ ಮತದಾನ ನಡೆದಿತ್ತು. ಹೆಚ್ಚು ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿರುವ ಯುವಕರೇ ಈ ಬಾರಿ ಆಯ್ಕೆಗೊಂಡಿರುವುದು ವಿಶೇಷವಾಗಿದೆ.
ಪಕ್ಷದ ಹಿರಿಯರ ಮಾರ್ಗದರ್ಶನ, ಯುವ ಕಾರ್ಯಕರ್ತರ ಶ್ರಮದಿಂದ ಗೆಲುವು ಸಾಧ್ಯವಾಗಿದೆ. ಹಿಂದಿನ ಅವಧಿಯಲ್ಲಿ ನನ್ನನ್ನು ಆಯ್ಕೆ ಮಾಡಿದ್ದ ಯುವಕರೊಂದಿಗೆ ನಿರಂತರ ಸಂಪರ್ಕ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ಮಾಡಿದ್ದು, ಮತ್ತೊಂದು ಬಾರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿ ಎಲ್ಲರ ಸೇವೆ ಮಾಡಲು ಅವಕಾಶ ಸಿಕ್ಕಿದೆ, ಇದು ಎಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗಿದೆ.
ಅಶೋಕ ಮಂದಾಲಿ, ಅಧ್ಯಕ್ಷರು, ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕ
ಯುವ ಕಾಂಗ್ರೆಸ್ ಅನ್ನುವುದು ಪಕ್ಷದ ದೊಡ್ಡ ಶಕ್ತಿಯಾಗಿದ್ದು, ಪಕ್ಷದಲ್ಲಿನ ಯುವಕರಲ್ಲಿ ಆಂತರಿಕ ಪ್ರಜಾಪ್ರಭುತ್ವದ ಕಲ್ಪನೆಯ ಸಾಕಾರದೊಂದಿಗೆ ಪಕ್ಷ ಸಂಘಟನೆಯಲ್ಲಿ ನಿರಂತರವಾಗಿ ಶ್ರಮಿಸಿದವರನ್ನು ಆಯ್ಕೆ ಮಾಡುವ ಈ ಮಹತ್ವದ ಆನ್‌ಲೈನ್ ಮತದಾನದಲ್ಲಿ ಯುವಕ ಅಶೋಕ ಮಂದಾಲಿ ಎಲ್ಲಾ ಯುವ ಕಾಂಗ್ರೆಸ್ ಮನಸ್ಸುಗಳನ್ನು ಗೆದ್ದುಕೊಂಡು, ಆ ಮೂಲಕ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಅವರಿಗೆ ಹಾರ್ದಿಕ ಅಭಿನಂದನೆಗಳು.
ತಾಲೂಕಿನ ಚಿಕ್ಕನರಗುಂದ ಗ್ರಾಮ ಪಂಚಾಯತಿಗೆ ನಡೆದ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮುತ್ತು ರಾಯರಡ್ಡಿ ಹಾಗೂ ಉಪಾಧ್ಯಕ್ಷರಾಗಿ ಮಲ್ಲವ್ವ ಮರಿಯಣ್ಣವರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಇಂದಿನಿಂದ ಆರಂಭವಾಗಿರುವ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಹವ್ಯಾಸಿ ಛಾಯಾಗ್ರಾಹ , ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಸಹಾಯಕ ಆಡಳಿತಾಧಿಕಾರಿ ಅಮರದೀಪ್ ಪಿ.ಎಸ್.ರಿಂದ ಛಾಯಾಚಿತ್ರ ಪ್ರದರ್ಶನ ನಡೆಯುತ್ತಿದೆ.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಫೆ. 4 ಮತ್ತು 5ರಂದು ಆಯೋಜನೆಯಾಗಿರುವ ಜಿಲ್ಲಾ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ ಛಾಯಾಚಿತ್ರಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಕೋವಿಡ್ ನಂತರದ ಮೊದಲ ಚಿತ್ರ ಪ್ರದರ್ಶನ ಇದಾಗಿದೆ.
ಅಮರದೀಪ ಖ್ಯಾತ ಹವ್ಯಾಸಿ ಛಾಯಾಗ್ರಾಹಕರೂ ಹೌದು. ಈ ಹಿಂದೆಯೂ ಅವರು ಹಲವಾರು ಸಂದರ್ಭಗಳಲ್ಲಿ ವಿವಿಧ ವಿಷಯಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಈ ಹಿಂದಿನ ಛಾಯಾಚಿತ್ರಗಳ ಪ್ರದರ್ಶನಗಳಿಗೆ ನೋಡುಗರಿಂದ, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗಿತ್ತು. ಛಾಯಾಚಿತ್ರ ಪ್ರದರ್ಶನದಲ್ಲಿ 60 ವಿವಿಧ ಛಾಯಾಚಿತ್ರಗಳ ಪ್ರದರ್ಶನ ನಡೆಯುತ್ತಿದೆ. ಟ್ರಾವೆಲ್ ಫೋಟೋಗ್ರಾಫಿ ವಿಷಯದಡಿಯಲ್ಲಿ ತೆಗೆದ ಪೋಟೊಗಳ ಪ್ರದರ್ಶನ ಗಮನ ಸೆಳೆಯಿತು.