Home Blog Page 3191

ಚಾಲಕನ ನಿಯಂತ್ರಣ ತಪ್ಪಿ 100 ಅಡಿ ದೂರದಲ್ಲಿ ಬಿದ್ದ ಕಾರು!

ವಿಜಯಸಾಕ್ಷಿ ಸುದ್ದಿ, ಗದಗ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಘಟನೆ ಮುಂಡರಗಿ ತಾಲೂಕಿನ ಕದಾಂಪುರ ಗ್ರಾಮದ ಬಳಿ ನಡೆದಿದೆ.

ಗದಗನಿಂದ ಹಡಗಲಿ ತಾಲೂಕಿನ ಹಕ್ಕಂಡಿ ಗ್ರಾಮದ ಕಡೆಗೆ ಹೊರಟಿದ್ದ ಕಾರು ನಿಯಂತ್ರಣ ತಪ್ಪಿ ಮೂರು ಪಲ್ಟಿ ಹೊಡೆದು ಸುಮಾರು 100 ಅಡಿ ದೂರದಲ್ಲಿ ಬಿದ್ದಿದೆ.

ಸೇತುವೆಗೆ ಡಿಕ್ಕಿ ಹೊಡೆದ ಕಾರು, ಸೇತುವೆ ಮೇಲೆ ಸುಮಾರು 50 ಅಡಿ ಮುಂದೆ ಹೋಗಿ ರಸ್ತೆ ಬದಿಯಲ್ಲಿರುವ ಸೂಚನಾ ಫಲಕಕ್ಕೆ ಡಿಕ್ಕಿ ಹೊಡೆದು ನಂತರ ಮತ್ತೆ 50 ಅಡಿ ದೂರದಲ್ಲಿ ಪಲ್ಟಿಯಾಗಿ ಬಿದ್ದಿದೆ.

ಅದೃಷ್ಟವಶಾತ್ ಕಾರು ಚಲಾಯಿಸುತ್ತಿದ್ದ ಮಾಲೀಕ ಶಿವನಗೌಡ ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಕಾರು ಮಾಲೀಕ ಶಿವನಗೌಡ ಅವರನ್ನು ಗದಗನ ಆಸ್ಪತ್ರೆಗೆ ರವಾನಿಸಲಾಗಿದೆ.

ಇನ್ನು ಈ ಅಪಘಾತದಲ್ಲಿ ಸ್ಥಳೀಯ ಬಾಲಕನೊಬ್ಬ ಆಶ್ಚರ್ಯಕರವಾಗಿ ಬಚಾವಾಗಿದ್ದಾನೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಮತ್ತೊಮ್ಮೆ ಉಡಾಫೆಯಿಂದ ಉತ್ತರಿಸಿದ ಕತ್ತಿ!

ವಿಜಯಸಾಕ್ಷಿ ಸುದ್ದಿ, ಬಾಗಲಕೋಟೆ

ಸಚಿವ ಉಮೇಶ ಕತ್ತಿ ಅವರು ಮತ್ತೊಮ್ಮೆ ಜನರ ನೋವಿನ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಬೀಳಗಿ ಪಟ್ಟಣದ ತಾಪಂ ಸಭಾಭವನದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಹಾರ್ಟ್ ಅಟ್ಯಾಕ್, ಶುಗರ್ ನಿಂದ ಜನ ಸತ್ತರೆ ಏನೂ ಮಾಡಲು ಆಗುವುದಿಲ್ಲ ಎಂದು ಉಡಾಫೆ ಉತ್ತರ ನೀಡಿದ್ದಾರೆ.

ಕೋವಿಡ್ ನಲ್ಲಿ ಸಾಕಷ್ಟು ಜನ ಸಾಯುತ್ತಿದ್ದಾರೆ. ನಾನು ಯಾರು ಸಾಯಬಾರದು ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಸಾಯುವವರು ಯಾಕೆ ಸತ್ತರೂ ಅಂತ ಎನ್ನುವುದಕ್ಕೆ ಲೆಕ್ಕ ಇಲ್ಲ. ಕೋವಿಡ್ ನ ಸಂದರ್ಭದಲ್ಲಿ ತೊಂದರೆಯಾಗುತ್ತಿವೆ. ರೆಮಿಡಿಸಿವರ್ ಕೊಟ್ಟರೂ ಜನ ಸಾಯುತ್ತಿದ್ದಾರೆ. ಅದಕ್ಕೆ ಏನು ಮಾಡೋಕಾಗುತ್ತದೆ. ಅವರಿಗೆ ಹಾರ್ಟ್ ಅಟ್ಯಾಕ್, ಶುಗರ್ ಇರುತ್ತದೆ. ಅಂತಹ ವ್ಯಕ್ತಿಗಳಿಗೆ ಪಂಪ್ ಹೊಡೆದು ಧೈರ್ಯ ತುಂಬಲು ಆಗುವುದಿಲ್ಲ ಎಂದು ಉಡಾಫೆಯಾಗಿ ಉತ್ತರ ನೀಡಿದ್ದಾರೆ.

ಮಾಧ್ಯಮದಲ್ಲಿ ಹೆಣ, ಆಂಬುಲೆನ್ಸ್, ಹೆಣ ಸುಡೋದು ತೋರಿಸಿ ಭಯ ಹುಟ್ಟಿಸಲಾಗುತ್ತಿದೆ. ಹಲವರು ಮಾಧ್ಯಮದಿಂದ ಮಾನಸಿಕವಾಗುತ್ತಿದ್ದಾರೆ. ಯಾರು ಏಕೆ ಸತ್ತರು ಎಂದು ಗೊತ್ತಿಲ್ಲ. ಬುಲೆಟಿನ್ ನಲ್ಲಿ ತಪ್ಪು ಆಗಿರಬಹುದು. ನಾವು ಸತ್ಯಹರಿಶ್ಚಂದ್ರನ ಮೊಮ್ಮಕ್ಕಳು ಅಂತ ಹೇಳುತ್ತಿಲ್ಲ. ತಪ್ಪಾಗಿದ್ದರೆ ತಿಳಿಸಿ ಎಂದು ಹೇಳಿದ್ದಾರೆ.

ಸರ್ಕಾರದ ನಿಯಮ ಗಾಳಿಗೆ ತೂರಿ ಜವಳಿ ವ್ಯಾಪಾರ; ಇಬ್ಬರ ಬಂಧನ!

ವಿಜಯಸಾಕ್ಷಿ ಸುದ್ದಿ, ಗದಗ

ರಾಜ್ಯದಾದ್ಯಂತ ಕೊರೊನಾ ಮಹಾಮಾರಿಯ ಅಟ್ಟಹಾಸ ಮಿತಿ ಮೀರುತ್ತಿದೆ. ಹೀಗಾಗಿ ಸರ್ಕಾರ ಲಾಕ್ ಡೌನ್ ಅಸ್ತ್ರ ಪ್ರಯೋಗ ಮಾಡಿದೆ. ಆದರೆ, ಆ ನಿಯಮವನ್ನು ಗಾಳಿಗೆ ತೂರಿ ಹಲವರು ವ್ಯಾಪಾರ ಮಾಡುತ್ತಿರುವ ಆಘಾತಕಾರಿ ಸಂಗತಿ ಬಹಿರಂಗವಾಗುತ್ತಿದೆ. ಇದಕ್ಕೆ ಪೊಲೀಸರು ತಕ್ಕ ಶಾಸ್ತಿ ಮಾಡುತ್ತಿದ್ದಾರೆ.

ಕೊರೊನಾ ಹಾವಳಿಯಿಂದಾಗಿ ನಾಳೆಯಿಂದ ರಾಜ್ಯದಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಇದರ ಮೂಲಕ ರಾಜ್ಯ ಸರ್ಕಾರ ಹಲವು ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಈ ಸಂದರ್ಭದಲ್ಲಿಯೇ ನಗರದಲ್ಲಿನ ಬಟ್ಟೆ ಅಂಗಡಿಯ ಮಾಲೀಕ, ಗ್ರಾಹಕರಿಗೆ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಧನಲಕ್ಷ್ಮಿ ಜವಳಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ.

ಅಂಗಡಿ ಮಾಲೀಕ ಮದನಲಾಲ್ ಓಸ್ವಾಲ್ ಹಾಗೂ ಆತನ ಮಗ ಕಲ್ಪೇಶ್ ಓಸ್ವಾಲ್ ತಮ್ಮ ಅಂಗಡಿಯ ಒಳಗೆ ಗ್ರಾಹಕರನ್ನು ಕರೆದುಕೊಂಡು ವ್ಯಾಪಾರ ನಡೆಸುತ್ತಿದ್ದರು.

ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ಇವರ ಅಂಗಡಿ ಮೇಲೆ ಖಚಿತ ಮಾಹಿತಿ ಮೇರೆಗೆ ಶಹರ ಪೊಲೀಸರು ದಾಳಿ ಮಾಡಿ, ಅಂಗಡಿ ಮಾಲೀಕರನ್ನು ವಶಕ್ಕೆ ಪಡೆದಿದ್ದಾರೆ.

ಧನಲಕ್ಷ್ಮೀ ಬಟ್ಟೆ ಅಂಗಡಿಯನ್ನು ಸೀಜ್ ಮಾಡಲಾಗಿದೆ. ಅಂಗಡಿ ಮಾಲೀಕರಿಗೆ ವ್ಯಾಪಾರ ಆದರೆ ಸಾಕು, ಉಳಿದವರಿಗೆ ಏನಾದರೂ ನಮಗೇನು? ಎನ್ನುವ ವರ್ತನೆ ತೋರುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮದುವೆಗೆ ಜನರು ಜವಳಿ ಹಾಕಲು ತಂಡೋಪ ತಂಡವಾಗಿ ಬಂದು ಬಟ್ಟೆ ಖರೀದಿಯಲ್ಲಿ ಬ್ಯುಸಿಯಾಗಿದ್ದರು. ಸದ್ಯ ಇಬ್ಬರನ್ನು ಬಂಧಿಸಿದ ಪೊಲೀಸರು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇನಾಗಿದೆ ಚಾಮರಾಜನಗರ ಜಿಲ್ಲಾಸ್ಪತ್ರೆಗೆ? ಒಂದೇ ದಿನ ಇಷ್ಟೊಂದು ಸಾವು?

ವಿಜಯಸಾಕ್ಷಿ ಸುದ್ದಿ, ಚಾಮರಾಜನಗರ

ಮಹಾಮಾರಿಯ ಎರಡನೇ ಅಲೆಯಲ್ಲಿ ಮರಣ ಮೃದಂಗ ತನ್ನ ಅಟ್ಟಹಾಸ ಮೆರೆಯುತ್ತಿದೆ. ಅದರಲ್ಲೂ ಜಿಲ್ಲೆಯಲ್ಲಿಯೇ ಹೆಚ್ಚಿನ ಸೋಂಕಿತರು ಬಲಿಯಾಗುತ್ತಿರುವುದಕ್ಕೆ ಜನ ತೀವ್ರ ಕಳವಳ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ 24 ಗಂಟೆಯಲ್ಲಿ ಜಿಲ್ಲೆಯ 20 ಜನ ಸಾವನ್ನಪ್ಪಿದ್ದಾರೆ. ಈ ಪೈಕಿ 6 ಜನ ಸಿಎಲ್ ಎಸ್ ರೋಗಿಗಳು ಸಾವನ್ನಪ್ಪಿದ್ದು, 14 ಜನ ಉಸಿರಾಟದ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ರಾತ್ರಿ ಸಂದರ್ಭದಲ್ಲಿಯೇ ಹೆಚ್ಚಿನ ಜನ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಸೋಂಕಿತರ ಸಂಖ್ಯೆಯೊಂದಿಗೆ ಮೃತರ ಸಂಖ್ಯೆಯೂ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗುತ್ತಿದೆ. ಇತ್ತೀಚೆಗಷ್ಟೇ ಆಸ್ಪತ್ರೆಯಲ್ಲಿ ಆಕ್ಸಿಜನ್ ತೊಂದರೆಯಿಂದಾಗಿ 24 ರೋಗಿಗಳು ಉಸಿರು ಚೆಲ್ಲಿದ್ದರು. ಆದರೆ, ವಿರೋಧ ಪಕ್ಷದ ನಾಯಕರು ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಬರೋಬ್ಬರಿ 34 ಜನ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಆದರೆ, ಸದ್ಯ ಈ ಜಿಲ್ಲೆಯಲ್ಲಿ ಕೊರೊನಾ 2ನೇ ಅಲೆ ಶುರುವಾದಾಗಿನಿಂದ ಬರೋಬ್ಬರಿ 113 ಜನ ಸಾವನ್ನಪ್ಪಿದ್ದಾರೆ. ಇದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.

ನಾಳೆಯಿಂದ ಮನೆಯ ಆಚೆಗೆ ಬಂದರೆ ಪೊಲೀಸರಿಂದ ಬಿಸಿ ಬಿಸಿ ಕಜ್ಜಾಯ ಗಿಫ್ಟ್!

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಕಳೆದ ತಿಂಗಳಾಂತ್ಯದಲ್ಲಿ ಹೇರಿದ್ದ ಜನತಾ ಕರ್ಫ್ಯೂ ಯಾವುದೇ ಫಲ ನೀಡಿಲ್ಲ. ಹೀಗಾಗಿ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ರಾಜ್ಯ ಲಾಕ್ ಡೌನ್ ಘೋಷಣೆಯಾಗಿದೆ.

ನಾಳೆಯಿಂದ ಮೇ. 24ರ ವರೆಗೆ ಸಂಪೂರ್ಣ ಲಾಕ್ ಡೌನ್ ನ್ನು ಸರ್ಕಾರ ಘೋಷಿಸಿದೆ. ಸುಳ್ಳು ಹೇಳಿ ಹೊರಗೆ ಬಂದರೆ ಪೊಲೀಸರು ಲಾಠಿ ಪೆಟ್ಟು ನೀಡಲಿದ್ದಾರೆ. ನಾಳೆ ಬೆಳಿಗ್ಗೆ 6ರಿಂದ 10ರ ವರೆಗೆ ಸಾರ್ವಜನಿಕರು ತಮಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಹತ್ತಿರದ ಅಂಗಡಿಗಳಿಗೆ ಹೋಗಬಹುದು. ಆ ನಂತರ ಲಾಕ್ ಡೌನ್ ಹೇರಲಾಗುತ್ತದೆ. ಆ ಸಂದರ್ಭದಲ್ಲಿ ಜನ ಓಡಾಡಿದರೆ ಪೊಲೀಸರಿಂದ ತಕ್ಕ ಶಿಕ್ಷೆ ಅನುಭವಿಸಬೇಕಾಗುತ್ತದೆ.

ನಾಳೆಯಿಂದ ಅಂತರ್ ಜಿಲ್ಲೆ, ಅಂತರ್ ರಾಜ್ಯ ಸಂಚಾರ ಬಂದ್ ಆಗಿರಲಿದೆ. ಯಾರಾದರೂ ಕುಂಟು ನೆಪ ಹೇಳಿ ಹೊರ ಬಂದರೆ, ಪೊಲೀಸರಿಂದ ಲಾಠಿ ರುಚಿ ತಿನ್ನಬೇಕಾಗುತ್ತದೆ. ಈ ಸಂದರ್ಭದಲ್ಲಿ ನಾಳೆಯಿಂದ ಜಾರಿಯಾಗುವ ಲಾಕ್ ಡೌನ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

ಈಗಾಗಲೇ ಬೆಂಗಳೂರು ನಗರದಲ್ಲಿ ಅನಗತ್ಯವಾಗಿ ಓಡಾಡುವವರಿಗೆ ಲಾಕ್ ಡೌನ್ ಉಲ್ಲಂಘನೆ ಕಂಡು ಬಂದರೆ, ಅನಗತ್ಯವಾಗಿ ಹೊರಗೆ ಓಡಾಡಿದರೆ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ವೈದ್ಯನೆಂದು ಹೇಳಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದ ಹಣ್ಣು ವ್ಯಾಪಾರಿ!

ವಿಜಯಸಾಕ್ಷಿ ಸುದ್ದಿ, ಮುಂಬಯಿ

ಹಣ್ಣು ವ್ಯಾಪಾರಿಯೊಬ್ಬ ವೈದ್ಯನೆಂದು ಸುಳ್ಳು ಹೇಳಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು, ಈ ಕುರಿತು ತಿಳಿಯುತ್ತಿದ್ದಂತೆ ಪೊಲೀಸರು ನಕಲಿ ವೈದ್ಯನನ್ನು ಬಂಧಿಸಿದ್ದಾರೆ. ಈ ಘಟನೆ ಮಹಾರಾಷ್ಟ್ರದ ನಾಗ್ಪುರದ ಕಾಮತಿ ಪ್ರದೇಶದಲ್ಲಿ ನಡೆದಿದೆ. ಈ ನಕಲಿ ವೈದ್ಯನನ್ನು ಚಂದನ್ ನರೇಶ್ ಚೌಧರಿ ಎಂದು ಗುರುತಿಸಲಾಗಿದೆ. ಈ ನಕಲಿ ವೈದ್ಯ ಕೊರೊನಾ ರೋಗಿಗಳಿಗೆ ಚಕಿತ್ಸೆ ನೀಡಿದ್ದಾನೆ.

ಈ ವ್ಯಕ್ತಿ ಮೊದಲು ಹಣ್ಣು ಹಾಗೂ ಐಸ್ ಕ್ರೀಮ್ ವ್ಯಾಪಾರ ಮಾಡುತಿದ್ದ. ಆ ನಂತರ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡಿದ್ದಾನೆ. ಸದ್ಯ ಈತ ವೈದ್ಯನೆಂದು ಹಲವರಿಗೆ ಚಿಕಿತ್ಸೆ ನೀಡಿದ್ದು, ಓಂ ನಾರಾಯಣ ಮಲ್ಟಿಪರ್ಪಸ್ ಸೊಸೈಟಿ ಹೆಸರಿನ ಚಾರಿಟೇಬಲ್ ಔಷಧಾಲಯ ಕೂಡ ನಡೆಸುತ್ತಿದ್ದಾನೆ. ಕಳೆದ 5 ವರ್ಷಗಳಿಂದ ಈತ ಈ ಔಷಧಾಲಯ ನಡೆಸುತ್ತಿದ್ದು, ರೋಗಿಗಳಿಗೆ ಆಯುರ್ವೇದ, ನ್ಯಾಚುರೋಪತಿ ಚಿಕಿತ್ಸೆ ನೀಡುತ್ತಿದ್ದಾನೆ ಎನ್ನಲಾಗಿದೆ.

ಕೊರೊನಾ ಹಾವಳಿ ಹೆಚ್ಚಾಗಿರುವ ಸ್ಥಿತಿ ಬಳಸಿಕೊಂಡಿರುವ ಈತ, ನಾಗ್ಪುರದ ತನ್ನ ಔಷಧಾಲಯದಲ್ಲಿಯೇ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಆರಂಭಿಸಿದ್ದಾನೆ. ಈತನಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬರು ಜಿಲ್ಲಾ ಪೊಲಿಸರಿಗೆ ದೂರು ನೀಡಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಅಲ್ಲದೇ, ಮಹಾರಾಷ್ಟ್ರ ಪ್ರಾಕ್ಟೀಷನರ್ಸ್ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.

ಮೋದಿ ಸರ್, ನಮ್ಮ ಜನ ನಿಮಗೇನು ಅನ್ಯಾಯ ಮಾಡಿದ್ದಾರೆ?

ವಿಜಯಸಾಕ್ಷಿ ಸುದ್ದಿ, ಹಾಸನ

ಕೊರೊನಾ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ವಿಫಲವಾಗುತ್ತಿವೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಬರೀ ಸುಳ್ಳುಗಳನ್ನು ಹೇಳುತ್ತಿದ್ದಾರೆ. ದೆಹಲಿಯಲ್ಲಿ ಹತ್ತು ಸಾವಿರ ಬೆಡ್ ನಿರ್ಮಾಣ ಮಾಡಿದ್ದೇವೆ ಎಂದು ಸುಳ್ಳು ಹೇಳಿದ್ದಾರೆ. ಬಜೆಟ್ ನಲ್ಲಿ ರೂ. 35 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಹೇಳಿದ್ದರು. ಬಜೆಟ್ ಅಪ್ರೂವಲ್ ಕೂಡ ಆಗಿದೆ. ಆದರೆ, ಆ ದುಡ್ಡು ಎಲ್ಲಿಗೆ ಹೋಗಿದೆ ಎಂಬುವುದೇ ತಿಳಿಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಸಿಕೆಗೆ ಸರ್ಕಾರವು ರೂ. 400 ನ್ನು ನಿಗದಿ ಮಾಡಿದೆ. ಇನ್ನೊಂದೆಡೆ ಜಿಎಸ್ ಟಿ ಕೂಡ ಕೊಡುತ್ತಿಲ್ಲ. ಆಕ್ಸಿಜನ್ ಹೆಚ್ಚುವರಿ ಕೇಳಿದರೆ ನಮ್ಮ ವಿರುದ್ದ ಸುಪ್ರೀಂಕೋರ್ಟ್ ನಲ್ಲಿ ಕೇಸ್ ಹಾಕುತ್ತಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಏಕೆ ಸರ್, ಕರ್ನಾಟಕದ ಜನತೆ ಏನು ತಪ್ಪು ಮಾಡಿದೆ ನಿಮಗೆ? ಯಾವ ಅನ್ಯಾಯ ಮಾಡಿದ್ದಾರೆ? 25 ಸಂಸದರನ್ನು ಕೊಟ್ಟಿದ್ದು ತಪ್ಪಾ ನಿಮಗೆ. ಸ್ವರ್ಗಾನೇ ಇಳಿಸುತ್ತಾರೆಂದು ಮಾತನಾಡುತ್ತಿದ್ದ ರಾಜ್ಯ ಬಿಜೆಪಿ ನಾಯಕರು, ಈಗ ಜನರ ನೋವು ಕಂಡು ಏನು ಹೇಳುತ್ತಾರೆ? ಎಂದು ಪ್ರಜ್ವಲ್ ರೇವಣ್ಣ ಪ್ರಶ್ನಿಸಿದ್ದಾರೆ.

ಸದ್ಯದ ಅಂಕಿ – ಅಂಶಗಳನ್ನು ಗಮನಿಸಿದರೆ ಇಡೀ ದೇಶದಲ್ಲಿ ಅತಿಹೆಚ್ಚು ಸೋಂಕಿತರು ರಾಜ್ಯದಲ್ಲಿ ಪತ್ತೆಯಾಗುತ್ತಿದ್ದಾರೆ. ಸ್ಮಶಾನದಲ್ಲಿ ಕಿಲೋಮೀಟರ್ ಗಟ್ಟಲೆ ಕ್ಯೂ ಇದೆ. ಕೂಡಲೇ ಈ ರಾಜ್ಯದಲ್ಲಿ ಪ್ರಧಾನಿ ನೋಡಬೇಕು ಎಂದು ಮನವಿ ಮಾಡಿದ್ದಾರೆ.

ಕೋವಿಡ್ ಸೋಂಕಿಗೆ ತುಮಕೂರ ವಾರ್ತಾಧಿಕಾರಿ ಮಂಜುನಾಥ್ ಬಲಿ!

ವಿಜಯಸಾಕ್ಷಿ ಸುದ್ದಿ, ಗದಗ

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ತುಮಕೂರು ಹಿರಿಯ ಸಹಾಯಕ ನಿರ್ದೇಶಕ ಡಿ. ಮಂಜುನಾಥ ಅವರು ಭಾನುವಾರ ಮಹಾಮಾರಿಗೆ ಬಲಿಯಾಗಿದ್ದಾರೆ. ಅವರ ನಿಧನಕ್ಕೆ ವಾರ್ತಾ ಇಲಾಖೆ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರಾದ ಡಿ. ಮಂಜುನಾಥ (42) ಅವರಿಗೆ ಇತ್ತೀಚೆಗೆ ಸೋಂಕು ದೃಢ ಪಟ್ಟಿತ್ತು. ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ರವಿವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ಕರಿಣಿಸಲಿ ಎಂದು ವಾರ್ತಾ ಸಚಿವ ಸಿ.ಸಿ. ಪಾಟೀಲ ಕೋರಿದ್ದಾರೆ.

ಮೃತರು ತುಮಕೂರು ಜಿಲ್ಲೆಯಲ್ಲಿ ಕಳೆದ 5 ವರ್ಷಗಳಿಂದ ವಾರ್ತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಬೆಂಗಳೂರಿನ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ರು.

ತುಮಕೂರು ಜಿಲ್ಲೆಯಲ್ಲಿ ಮಾ. 2016ರಿಂದ ವಾರ್ತಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ನಗು ಮುಗದಿ ಎಲ್ಲರ ಸ್ನೇಹ ಸಂಬಂಧಗಳನ್ನು ಬೆಳೆಸಿಕೊಂಡಿದ್ದ ಅವರು, ನಮ್ಮನ್ನು ಅಗಲಿದ್ದು ತುಂಬಾ ನೋವಿನ ಸಂಗತಿಯಾಗಿದೆ.

ಮೃತರು ಪತ್ನಿ ಸವಿತ, ಒಂದು ಮಗು ಸೇರಿದಂತೆ ತಂದೆ ತಾಯಿ, ಸಹೋದರ, ಸಹೋದರಿಯರು ಹಾಗೂ ಇತರೆ ಬಂಧು ಬಳಗವನ್ನು ಅಗಲಿದ್ದಾರೆ. ಆ ದೇವರು ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ನೀಡಲೆಂದು ಪತ್ರಕರ್ತರು, ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ.

ಹತೋಟಿಗೆ ಬಾರದ ಮಹಾಮಾರಿ; ರಾಜಧಾನಿಯಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ

ವಿಜಯಸಾಕ್ಷಿ ಸುದ್ದಿ, ನವದೆಹಲಿ

ಕೊರೊನಾ ಹತೋಟಿಗೆ ತರುವ ನಿಟ್ಟಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಮತ್ತೆ ಲಾಕ್ ಡೌನ್ ಮುಂದುವರೆಸಲಾಗಿದೆ. ಸದ್ಯ ಲಾಕ್ ಡೌನ್ ನ್ನು ಮೇ. 17ರ ವರೆಗೆ ಜಾರಿಯಲ್ಲಿರಲಿದೆ ಎಂದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡ್ಮೂರು ದಿನಗಳಿಂದ ದೆಹಲಿಯಲ್ಲಿ ಕೋವಿಡ್ ಪಾಸಿಟಿವ್ವಿಟಿ ದರ ಶೇ. 35 ರಿಂದ ಶೇ. 23ಕ್ಕೆ ಇಳಿಕೆಯಾಗಿದೆ. ಹೀಗಾಗಿ ಇನ್ನು ಒಂದು ವಾರಗಳ ಕಾಲ ಲಾಕ್ ಡೌನ್ ನ್ನು ವಿಸ್ತರಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಮೆಟ್ರೋ ರೈಲಿನ ಸೇವೆಯೂ ಬಂದ್ ಇರಲಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ನಾವು ವೈದ್ಯಕೀಯ ಮೂಲ ಸೌಕರ್ಯಗಳನ್ನು ಹೆಚ್ಚಳ ಮಾಡುತ್ತಿದ್ದೇವೆ. ಆಕ್ಸಿಜನ್ ಬೆಡ್ ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ. ದೆಹಲಿಯಲ್ಲಿ ಆಕ್ಸಿಜನ್ ಪರಿಸ್ಥಿತಿ ಸುಧಾರಿಸಿದೆ. ಆಸ್ಪತ್ರೆಗಳಿಗೆ ಬರುತ್ತಿರುವ ದೂರವಾಣಿ ಕರೆಗಳೂ ಕಡಿಮೆಯಾಗಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಶಾಲೆಗಳಲ್ಲಿ ಉತ್ತಮ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಹೆಚ್ಚೆಚ್ಚು ಸಂಖ್ಯೆಯಲ್ಲಿ ಯುವಕರು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ನಮ್ಮಲ್ಲಿ ಇದೀಗ ಲಸಿಕೆಯ ಕೊರತೆಯಿದೆ. ಆದರೆ, ಕೇಂದ್ರ ಸರ್ಕಾರ ಸಹಾಯ ಮಾಡುವ ಭರವಸೆ ಇದೆ ಎಂದು ಹೇಳಿದ್ದಾರೆ.

ದೆಹಲಿಯಲ್ಲಿ ಏ. 20ರಿಂದ ಲಾಕ್ ಡೌನ್ ಘೋಷಿಸಲಾಗಿದೆ. ಲಾಕ್ ಡೌನ್ ಜಾರಿಯಿಂದ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಬಹುದಾಗಿದ್ದು, ಈ ಕಾರಣದಿಂದ ಮತ್ತೊಮ್ಮೆ ಲಾಕ್ ಡೌನ್ ವಿಸ್ತರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮೇ. 3 ರಿಂದ ಮೇ. 8ರ ವರೆಗೆ ದೆಹಲಿಯಲ್ಲಿ 1,15,285 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ 2,105 ಜನರು ಸಾವನ್ನಪ್ಪಿದ್ದಾರೆ. ಈ ನಿಟ್ಟಿನಲ್ಲಿ ಲಾಕ್ ಡೌನ್ ನ್ನು ವಿಸ್ತರಣೆ ಮಾಡಲಾಗಿದೆ.

ಇಂತಹ ತುಘಲಕ್ ಸರ್ಕಾರದ ಮಧ್ಯೆ ಸಾಮಾನ್ಯರು ಬದುಕುವುದು ಹೇಗೆ?

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಲಾಕ್ ಡೌನ್ ಕುರಿತು ಈಗಾಗಲೇ ಜನ ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ.

ಬೆಳಿಗ್ಗೆ ಅಂಗಡಿ, ಮುಂಗಟ್ಟು ತೆರೆಯಲು ಅವಕಾಶ ನೀಡಿ ವಾಹನ ಸಂಚಾರ ನಿಷೇಧಿಸಲಾಗಿದೆ. ಆದರೆ, ಜನ ಖರೀದಿಸಿದ ಮನೆ ಸಾಮಾನುಗಳನ್ನು ಹೇಗೆ ಒಯ್ಯಬೇಕು? ಹಳ್ಳಿಗಳಲ್ಲಿ ಅಂಗಡಿಗಳು ದೂರ ಇರುತ್ತವೆ. ಅವರೇನು ತಲೆಯ ಮೇಲೆ ಹೊತ್ತು ಹೋಗಬೇಕೆ? ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ರೋಗಕ್ಕಿಂತ ಹೆಚ್ಚಾಗಿ ಇಲ್ಲಿನ ರೋಗಗ್ರಸ್ಥ ಸರ್ಕಾರದಿಂದ ರಾಜ್ಯದ ಜನತೆ ಬವಣೆ ಪಡುವಂತಾಗಿದೆ. ಸೋಮವಾರದಿಂದ ಜಾರಿಗೆ ಬರಲಿರುವ ಲಾಕ್‍ ಡೌನ್ ಗೊಂದಲದ ಗೂಡಾಗಿದ್ದು, ಗ್ರಾಮೀಣ ಪ್ರದೇಶದ ಜನತೆ ಇದರ ವಿರುದ್ಧ ದಂಗೆ ಎದ್ದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪರಿಷ್ಕೃತ ಲಾಕ್‍ ಡೌನ್ ಅನ್ವಯ ಬೆಳಿಗ್ಗೆ ಆರರಿಂದ ಹತ್ತರ ವರೆಗೆ ದಿನಸಿ, ತರಕಾರಿ, ಮೀನು – ಮಾಂಸದ ಅಂಗಡಿಗಳು ತೆರೆಯಲು ಅವಕಾಶ ನೀಡಿ, ಈ ಅವಧಿಯಲ್ಲಿ ವಾಹನ ಸಂಚಾರ ಮಾತ್ರ ನಿಷೇಧಿಸಿರುವುದು ಸರ್ಕಾರದ ಮೂರ್ಖತನದ ನಿರ್ಧಾರ. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿ-ಮುಂಗಟ್ಟುಗಳು 2-3 ಕಿ.ಮೀ.ದೂರದಲ್ಲಿವೆ. ಅಲ್ಲಿಂದ ಮನೆ ಸಾಮಾನುಗಳನ್ನು ಹಿರಿಯರು, ಅಶಕ್ತರು ಹೊತ್ತುಕೊಂಡು ಬರಬೇಕೇ ಮುಖ್ಯಮಂತ್ರಿಗಳೇ? ಆಯಾಸ-ಪ್ರಯಾಸದಿಂದ ಅವರಿಗೇನಾದರೂ ಆಗಿಬಿಟ್ಟರೆ ಯಾರು ಹೊಣೆ? ಈ ಸಾಮಾನ್ಯ ಜ್ಞಾನವೂ ಆಡಳಿತ ನಡೆಸುವವರಿಗೆ ಬೇಡವೇ ಎಂದು ಖಾರವಾಗಿ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.

ಹೊಸ ಲಾಕ್‍ ಡೌನ್ ನಿಯಮಾವಳಿ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಬ್ಯಾಂಕ್, ಎಟಿಎಂ, ಆಸ್ಪತ್ರೆ ತೆರೆದಿರುತ್ತವೆ. ಆದರೆ, ಅಲ್ಲಿಗೆ ಗ್ರಾಹಕರು ಮತ್ತು ಅಸ್ವಸ್ಥರು ವಾಹನ ಬಳಸಲು ನಿಷೇಧ ಇದೆ. ಹೊಟೇಲ್‍ ನಲ್ಲಿ ಪಾರ್ಸಲ್‍ ಗೆ ಅವಕಾಶ ಇದೆ. ವಾಹನ ಮಾತ್ರ ಬಳಸುವಂತಿಲ್ಲ. ಇದೆಂತಹ ತುಘಲಕ್ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

error: Content is protected !!