ಜೂನ್-2020 ರಿಂದ ಅಕ್ಟೋಬರ್-2020 ರವರೆಗಿನ ಒಟ್ಟು 64 ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ, 2 ಲಕ್ಷ 90 ಸಾವಿರ ರೂ. ಮೌಲ್ಯದ ಒಟ್ಟು 24 ಮೊಬೈಲ್ ಕಳ್ಳತನ ಪ್ರಕರಣಗಳನ್ನು ಮುಂಡರಗಿ ಪೊಲೀಸರು ಬೇಧಿಸಿದ್ದು, ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿದೆ.
ಮೊಬೈಲ್ ಫೋನ್ ಕಳ್ಳತನ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿರುವ ಮುಂಡರಗಿ ಪೊಲೀಸರು, ನವನವೀನ ತಂತ್ರಜ್ಞಾನ ಹಾಗೂ ಸಿಡಿಆರ್ ಮೂಲಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಅವರ ಮಾರ್ಗದರ್ಶನದಲ್ಲಿ, ಡಿಸಿಆರ್ಬಿಯ ಗುರು ಬೂದಿಹಾಳ ಮಾಹಿತಿಯಂತೆ ಸಾರ್ವಜನಿಕರು ಕಳೆದುಕೊಂಡಿದ್ದ ಸಕ್ರಿಯಗೊಂಡ ಸಿಮ್ ನಂಬರ್ ಟ್ರ್ಯಾಕ್ ಮಾಡಿ ಮೊಬೈಲ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಶುಕ್ರವಾರ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಮೊಬೈಲ್ ಕಳೆದುಕೊಂಡಿದ್ದ ಮಾಲೀಕರಿಗೆ ನರಗುಂದ ಡಿಎಸ್ಪಿ ಶಂಕರ್ ರಾಗಿ, ಸಿಪಿಐ ಸುಧೀರ್ ಬೆಂಕಿ, ಪಿಎಸ್ಐ ನೂರಜಾನ್ ಸಬರ ಹಸ್ತಾಂತರಿಸಿದರು.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಸಿಬ್ಬಂದಿಗಳಾದ ಜಾಫರ್ ಬಚ್ಚೇರಿ, ನೀಲಕಂಠ ಭಂಗಿ, ಶರಣಪ್ಪ ನಾಗೇಂದ್ರಗಡ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಹಾಗೂ ನರಗುಂದ ಡಿವೈಎಸ್ಪಿ ಶಂಕರ ರಾಗಿ ಅವರು, ಸಿಬ್ಬಂದಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೇರ್ ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಪ್ರತಿಷ್ಠಿತ ಗ್ರಾನೈಟ್ ಉದ್ಯಮಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಘಟನೆ ಗದಗನಲ್ಲಿ ನಡೆದಿದ್ದು, ವಂಚಿಸಿದ ಇಬ್ಬರು ಆರೋಪಿಗಳನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಪಟ್ಟಣದ ಪ್ರತಿಷ್ಠಿತ ಗ್ರಾನೈಟ್ ಉದ್ಯಮಿ ಪ್ರಕಾಶ್ ಮಲ್ಲನಗೌಡರ ಪಾಟೀಲ್ ಎಂಬುವವರು ವಂಚನೆಗೊಳಗಾಗಿದ್ದಾರೆ.
ದಾವಣಗೆರೆ ಮೂಲದ ವಿನಯ್ ಯಲಿಗಾರ ಹಾಗೂ ಶಂಕರ್ ಯಲಿಗಾರ ಎಂಬುವರು ತಮ್ಮ ವಿವೈ ಕ್ಯಾಪಿಟಲ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ತಾವು ಕಟ್ಟಿದ ಹಣಕ್ಕೆ 4 ತಿಂಗಳಿಗೊಮ್ಮೆ ಶೇ.30 ರಷ್ಟು ಹಣ ಲಾಭ ಪಡೆಯಬಹುದೆಂದು ಉದ್ಯಮಿಗೆ ನಂಬಿಸಿದ್ದರು.
ಕಳೆದ ವರ್ಷ ಜೂ.28ರಂದು ಗದಗನ ಪಂಚಾಕ್ಷರಿ ನಗರದಲ್ಲಿರುವ ಉದ್ಯಮಿಯ ಸಹೋದರ ನಾಗರಾಜ್ ಪಾಟೀಲ್ ಮನೆಯಲ್ಲಿ ವ್ಯವಹಾರ ಕುದುರಿಸಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 35 ಲಕ್ಷ ರೂ. ಹಣ ಆರೋಪಿತರ ಕೈಗೆ ಕೊಟ್ಟಿದ್ದಾರೆ.
ಅಂದಿನಿಂದ ಇಂದಿನವರೆಗೂ ಒಂದು ನಯಾ ಪೈಸೆನೂ ಉದ್ಯಮಿಯ ಕೈಗೆ ಸಿಕ್ಕಿಲ್ಲ. ಬಳಿಕ ಇದೇ ರೀತಿ ಕೆಲವರಿಗೆ ವಂಚನೆ ಮಾಡಿರುವ ಆರೋಪದಡಿ ವಿನಯ್ ಯಲಿಗಾರ ಹಾಗೂ ಶಂಕರ್ ಯಲಿಗಾರ ಎಂಬ ಇಬ್ಬರು ಆರೋಪಿತರು ಬೆಂಗಳೂರಿನಲ್ಲಿ ಬಂಧನವಾಗಿದೆ.
ಸದ್ಯ ಉದ್ಯಮಿ ಪ್ರಕಾಶ್ ಜಿಲ್ಲಾ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇನ್ಸ್ಪೆಕ್ಟರ್ ಟಿ ಮಹಾಂತೇಶ್ ತನಿಖೆ ಕೈಗೊಂಡಿದ್ದಾರೆ. ಸದ್ಯ ಆರೋಪಿಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸಲು ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ.
ನಗರದ ಪಂಡಿತ ಪುಟ್ಟರಾಜ ವೃತ್ತದ ಪಾಲಾ-ಬದಾಮಿ ರಸ್ತೆಯಲ್ಲಿ ಯುಜಿಡಿ ಯೋಜನೆಯಡಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಚರಂಡಿ ಗುಂಡಿಯಲ್ಲಿ ಹಸು ಬಿದ್ದು ನರಳಾಡಿದ ಘಟನೆ ಬೆಳಗಿನ ಜಾವ ನಡೆದಿದೆ.
ಬೆಳ್ಳಂಬೆಳಗ್ಗೆ ಆಯಾತಪ್ಪಿ ಸುಮಾರು 5 ಅಡಿ ಆಳದ ಗುಂಡಿಯೊಳಗೆ ಬಿದ್ದು ಅತ್ತಿತ್ತ ಹೊರಳಾಡಲು ಜಾಲವಿಲ್ಲದೇ ಮೇಲೆದ್ದೇಳಲು ಆಗದೆ ಒದ್ದಾಡಿದೆ.
ಸುಮಾರು 2 ಗಂಟೆಗಳ ಕಾಲ ಆಕಳು ಗುಂಡಿಯಲ್ಲಿ ಬಿದ್ದು ನರಳಾಡಿದೆ. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಕಾರ್ಮಿಕರು ಸೇರಿ ಹಿಟಾಚಿ ಮೂಲಕ ಹಸುವನ್ನು ಮೇಲಕ್ಕೆತ್ತಿದ್ದಾರೆ.
ಯುಜಿಡಿ ಕಾಮಗಾರಿ ಸುಮಾರು 4 ವರ್ಷಗಳಿಂದ ಆಮೆವೇಗದಲ್ಲಿ ಸಾಗುತ್ತಿರುವುದರಿಂದ ನಗರದ ಜನರು ಹೈರಾಣಾಗಿದ್ದಾರೆ. ಅಲ್ಲದೇ, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿರುವುದರಿಂದ ವಾಹನ ಸವಾರರು ಪರದಾಡುತ್ತಿದ್ದು, ನಗರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಆಕಸ್ಮಿಕ ಬೆಂಕಿಗೆ ಎಲೆಕ್ಟ್ರಿಕಲ್ ಸಾಮಾಗ್ರಿಗಳು ಸುಟ್ಟು ಭಸ್ಮವಾಗಿರುವ ಘಟನೆ ಗುರುವಾರ ಸಂಜೆ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದಲ್ಲಿ ಎಲೆಕ್ಟ್ರಿಕಲ್ ವಸ್ತುಗಳನ್ನು ರಿಪೇರಿ ಮಾಡುತ್ತಿದ್ದ ವಿಶ್ವನಾಥ ಬಾಕಳೆ ಎಂಬುವರಿಗೆ ಸೇರಿದ ಸಾಮಾಗ್ರಿಗಳು ಅಗ್ನಿ ಕೆನ್ನಾಲೆಗೆ ಸುಟ್ಟು ಕರಕಲಾಗಿವೆ.
ಹಳೆಯ ಎಲೆಕ್ಟ್ರಿಕಲ್ ಸಾಮಾಗ್ರಿ ರಿಪೇರಿ ಮಾಡಲು ತಂದು ಮನೆಯ ಮೇಲ್ಭಾಗದಲ್ಲಿ ಟಿವಿ, ರೆಡಿಯೋ, ಗಡಿಯಾರ, ಪ್ರಿಡ್ಜ್, ಮಿಕ್ಸರ್, ಪ್ಯಾನ್ ಹೀಗೆ ಸಂಗ್ರಹಿಸಿಡಲಾಗಿದ್ದ ಅನೇಕ ಎಲೆಕ್ಟ್ರಿಕಲ್ ವಸ್ತುಗಳು ಬೂದಿಯಾಗಿವೆ.
ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ನಿರತರಾಗಿದ್ದಾರೆ.
ಗದಗ ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳ ಪೈಕಿ ಚಿಂಚಲಿ ಗ್ರಾ.ಪಂ. ಆಡಳಿತ ಸಂಪೂರ್ಣ ಹಳಿ ತಪ್ಪಿ, ತುಕ್ಕು ಹಿಡಿದಿದೆ. ಅಧಿಕಾರಿಗಳು ಕಚೇರಿಗೆ ಬೇಕಾಬಿಟ್ಟಿಯಾಗಿ ಆಗಮಿಸುತ್ತಿದ್ದು, ವಾರದಲ್ಲಿ 1-2 ದಿನ ಕಚೇರಿಯಲ್ಲಿ ಕಾಣಸಿಗುತ್ತಾರೆ. ಇದರಿಂದ ಜನರು ತಮ್ಮ ಕೆಲಸ ಮಾಡಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ತುರ್ತು ಕೆಲಸಗಳಿದ್ದಲ್ಲಿ ಸಾರ್ವಜನಿಕರು ಅಧಿಕಾರಿಗಳು ಇರುವಲ್ಲಿಗೆ ಹುಡುಕಿಕೊಂಡು ದೂರದ ಗದಗ ನಗರಕ್ಕೇ ಬರಬೇಕಿದೆ.
ಚಿಂಚಲಿ ಗ್ರಾ.ಪಂ.ನಲ್ಲಿ ಹಲವು ವರ್ಷಗಳಿಂದ ಅಧಿಕಾರಿಗಳ ಕಾರ್ಯವೈಖರಿ ಹದಗೆಟ್ಟು ಹಳ್ಳ ಹಿಡಿದಿದ್ದು, ಸಮಸ್ಯೆಗಳ ಕೂಪವಾಗಿದೆ. ಗ್ರಾ.ಪಂ. ವ್ಯಾಪ್ತಿಯ ನೀಲಗುಂದ ಗ್ರಾಮಸ್ಥರು ಸಾಕಷ್ಟು ವರ್ಷಗಳಿಂದ ಇಲ್ಲಿನ ಅನನೂಕೂಲ ನೋಡಿ ಬೇಸತ್ತಿದ್ದರು. ನಿತ್ಯ ಪಂಚಾಯತಿಗೆ ಬಂದರೂ ಆಗಬೇಕಿದ್ದ ಕೆಲಸ ಒಂದು ದಿನದಲ್ಲಿ ಆಗುತ್ತಿರಲಿಲ್ಲ. ಹಾಗಾಗಿ ಪ್ರತ್ಯೇಕ ಪಂಚಾಯತಿಗಾಗಿ ಆಗ್ರಹಿಸಿ ಗ್ರಾಮಸ್ಥರು ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಗ್ರಾ.ಪಂ.ಚುನಾವಣೆ ಬಹಿಷ್ಕರಿಸಿದ್ದರು. ಕರೆದು ಕಟ್ಟುವರಿಲ್ಲ, ತುರಿಸಿ ಮೇವು ಹಾಕುವವರಿಲ್ಲ ಎಂಬಂತೆ ಇಲ್ಲಿ ಯಾರು ಹೇಳುವವರಿಲ್ಲ, ಕೇಳುವವರಿಲ್ಲ. ತಮ್ಮಿಚ್ಛೆ, ತಮ್ಮ ಕಾರುಬಾರು ಎಂಬಂತೆ ವರ್ತಿಸುತ್ತಿರುವ ಅಧಿಕಾರಿಗಳಿಗೆ ಕಾಸು ಕೊಟ್ಟರೆ ಏನು ಬೇಕಾದರೂ ಕೆಲಸ ಮಾಡಿ ಕೊಡುತ್ತಾರೆ ಎನ್ನಲಾಗುತ್ತಿದೆ. ಕೆಲಸಕ್ಕಾಗಿ ಅಲೆದಾಡುತ್ತಿರುವ ಇಲ್ಲಿನ ಜನರ ಪರಿಸ್ಥಿತಿ ಗಂಟೂ ಹೋಯ್ತು, ನಂಟೂ ಹೊಂಟೋಯ್ತು! ಎಂಬಂತಾಗಿದೆ.
ಗುತ್ತಿಗೆದಾರರ ಹಾವಳಿ: ಇಲ್ಲಿ ಬಹುತೇಕ ಕರ್ತವ್ಯ ನಿರ್ವಹಿಸಿದ ಅಧಿಕಾರಿಗಳು ಗುತ್ತಿಗೆದಾರರ ಕೆಲಸ ಮಾತ್ರ ಸಲೀಸಾಗಿ ಮಾಡಿಕೊಟ್ಟಿರುವ ಮತ್ತು ಮಾಡಿಕೊಡುತ್ತಿರುವ ನಿದರ್ಶನಗಳು ಸಾಕಷ್ಟಿವೆ. ಕಾಂಟ್ರ್ಯಾಕ್ಟ್ ದಾರರು ಇದ್ದಲ್ಲಿಯೇ ಬಂದು ಕೆಲಸ ಮಾಡಿಕೊಟ್ಟು ಹೋಗುತ್ತಿದ್ದಾರೆ. ಸಾರ್ವಜನಿಕರ ಕೆಲಸವೆಂದರೆ ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಕೆಲಸಕ್ಕಾಗಿ ಕಾಲಾವಕಾಶ ತೆಗೆದುಕೊಂಡು ಅಲೆದಾಡಿಸುವ ಸಂಸ್ಕೃತಿ ಮುಂದುವರೆದಿದೆ. ಕೆಲಸವಾಗಬೇಕಾದರೆ ಜನರು ಅವರಿರವರ ಕೈ-ಕಾಲು ಹಿಡಿಯಬೇಕಾದ ಅನಿವಾರ್ಯತೆ ಬಂದೊದಗಿದೆ. ಹಾಗಾಗಿ ಜನರು ಪಂಚಾಯತಿಗೆ ಬರುವುದನ್ನೆ ಬಿಟ್ಟು ಬಿಟ್ಟಿದ್ದಾರೆ. ಆದರೆ, ಗುತ್ತಿಗೆದಾರರ ಹಾವಳಿ ಮಿತಿ ಮೀರಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಹಗರಣಗಳ ತಾಣ: ಚಿಂಚಲಿ ಗ್ರಾಮ ಪಂಚಾಯತಿ ಮೇಲೆ ಯಾವೊಬ್ಬ ಅಧಿಕಾರಿಗಳು ಕಣ್ಣು ಹಾಯಿಸುತ್ತಿಲ್ಲ. ಇದರಿಂದ ಹಗರಣಗಳು ತಾಂಡವಾಡುತ್ತಿವೆ. ಅಧಿಕಾರಿಗಳು ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸದೆ ಗುತ್ತಿಗೆದಾರರ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳು ಹಣ ಲೂಟಿ ಮಾಡುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಸರ್ಕಾರದ ಸುಮಾರು 15 ಲಕ್ಷ ರೂ. ಹಣ ದುರ್ಬಳಕೆ ಮಾಡಿಕೊಂಡಿದ್ದ, ಓರ್ವ ಪಿಡಿಒ ಮೇಲೆ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ ಅಕ್ರಮಗಳಿಗೆ ಹೆಚ್ಚು ಆಸ್ಪದ ನೀಡುತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಬೇಕಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕಿದೆ.
ವಾರಕ್ಕೆಷ್ಟು ಸಭೆ?: ಚಿಂಚಲಿ ಗ್ರಾ.ಪಂ. ಪಿಡಿಒ ಬರೀ ಗದಗದಲ್ಲಿ ಜಿಪಂ, ತಾಪಂ ಸಭೆ ಇದೆ ಎಂದು ದಿನನಿತ್ಯ ಒಂದಿಲ್ಲೊಂದು ಸುಳ್ಳು ಹೇಳಿ ಜನರ ಕಣ್ಣಿಗೆ ಮಂಕುಬೂದಿ ಎರಚುತ್ತಿದ್ದಾರೆ. ಸಭೆಯ ಹೆಸರಿನಲ್ಲಿ ಕಚೇರಿಗೆ ಗೈರಾಗಿ ಜಿಲ್ಲಾ ಕೇಂದ್ರದಲ್ಲಿ ಕುಳಿತು ಗುತ್ತಿಗೆದಾರರ ಕೆಲಸ ಮಾಡಿ ಕೊಡುತ್ತಿದ್ದಾರೆ. ಹಾಗಾಗಿ, ಒಂದು ವಾರದಲ್ಲಿ ಜಿಪಂ ಮತ್ತು ತಾಪಂಗಳಲ್ಲಿ ಪಿಡಿಒಗಳ ಸಭೆಗಳು ಎಷ್ಟು ನಡೆಯುತ್ತವೆ ಎಂಬುವುದನ್ನು ಸಿಇಒ ಹಾಗೂ ಇಒ ಅವರೇ ಉತ್ತರಿಸಬೇಕಿದೆ.
ನಡೆಯದ ಸಭೆಗಳು ಪ್ರತಿ 6 ತಿಂಗಳಿಗೊಮ್ಮೆ ವಾರ್ಡ್ ಮತ್ತು ಗ್ರಾಮಸಭೆ ನಡೆದಿರುವ ಉದಾಹರಣೆಗಳಿಲ್ಲ. ಜನರ ಬೇಕುಬೇಡಗಳನ್ನು ತಿಳಿಯದೆ, ಗುತ್ತಿಗೆದಾರರ ಆಣತಿಯಂತೆ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಗ್ರಾಮಸ್ಥರ ಅಗತ್ಯಕ್ಕೆ ತಕ್ಕಂತೆ ಕ್ರಿಯಾಯೋಜನೆ ತಯಾರಿ ಆಗುತ್ತಿಲ್ಲ. ಪಿಡಿಒ ಅವರು ತಂದುಕೊಟ್ಟ ಇಂತಹ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯತಿ, ತಾಲ್ಲೂಕು ಪಂಚಾಯತಿಯ ಅಧಿಕಾರಿಗಳು ಕಣ್ಣುಮುಚ್ಚಿ ಅನುಮೋದನೆ ನೀಡುತ್ತಿದ್ದಾರೆ. ಇದರಿಂದ ಸಾರ್ವಜನಿಕರ ಕುಂದು ಕೊರತೆಗಳಿಗೆ ಶ್ವಾಶತ ಪರಿಹಾರ ಸಿಗುತ್ತಿಲ್ಲ.
ಎರಡನೇ ಬಾರಿಗೆ ಸಿಪಿಐ(ಎಂ)ಗೆ ಅಧಿಕಾರ– ಕಳಕವ್ವ ಮೈಲಾರಪ್ಪ ಮಾದರಗೆ ಅಧ್ಯಕ್ಷ ಪಟ್ಟ?
ವಿಜಯಸಾಕ್ಷಿ ಸುದ್ದಿ, ಗದಗ
ಪ್ರಮುಖ ರಾಜಕೀಯ ಪಕ್ಷಗಳ ಭರಾಟೆಯ ನಡುವೆಯೂ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಬೆಂಬಲಿತ ಅಭ್ಯರ್ಥಿಗಳು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಲ್ಲದೆ, ಅಧ್ಯಕ್ಷ ಸ್ಥಾನವನ್ನೂ ಅಲಂಕರಿಸಲಿದ್ದಾರೆ.
ರೋಣ ತಾಲೂಕಿನ ಬೆಳವಣಕಿ ಸ್ವತಂತ್ರ ಗ್ರಾಮ ಪಂಚಾಯತಿಯಲ್ಲಿ ಸಿಪಿಐ(ಎಂ) ಬೆಂಬಲಿತ ನಾಲ್ವರು ಸದಸ್ಯರು ಜಯಭೇರಿ ಬಾರಿಸಿದ್ದಾರೆ. ಬೆಳವಣಕಿ ಗ್ರಾಪಂನಲ್ಲಿ ಆರು ವಾರ್ಡ್‌ಗಳಿದ್ದು, 13 ಸದಸ್ಯ ಬಲ ಹೊಂದಿದೆ. ಇದರಲ್ಲಿ ಸಿಪಿಐ(ಎಂ) ಬೆಂಬಲಿತ ನಾಲ್ವರು ಗೆಲುವು ಸಾಧಿಸಿದ್ದು, ಹುಬ್ಬೇರುವಂತೆ ಮಾಡಿದೆ. ಇನ್ನುಳಿದ 9 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ತಲಾ ನಾಲ್ಕು ಸದಸ್ಯರು ವಿಜೇತರಾಗಿದ್ದಾರೆ. ಒಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.
ಬೆಳವಣಕಿ ಗ್ರಾ.ಪಂ. ಅಧ್ಯಕ್ಷ ಪಟ್ಟ ದಕ್ಕಬೇಕಾದರೆ 8 ಸದಸ್ಯರ ಬೆಂಬಲ ಇರಬೇಕು. ಆದರೆ, ಇಲ್ಲಿನ ಜನರು ಯಾರಿಗೂ ಸ್ಪಷ್ಟ ಬಹುಮತ ನೀಡಿಲ್ಲ. ಸಿಪಿಐ(ಎಂ), ಕಾಂಗ್ರೆಸ್ ಹಾಗೂ ಬಿಜೆಪಿ ಮೂರು ಪಕ್ಷಗಳು ಬೆಳವಣಕಿಯಲ್ಲಿ ಸಮಬಲ ಸಾಧಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಇನ್ನಿಲ್ಲದ ಕಸರತ್ತು ನಡೆಸಿವೆ.
ಸಿಪಿಐ(ಎಂ), ಕಾಂಗ್ರೆಸ್ ಮೈತ್ರಿ:
ಬಿಜೆಪಿಗೆ ಬೆಳವಣಕಿ ಪಟ್ಟ ಬಿಟ್ಟು ಕೊಡಬಾರದೆಂಬ ಕಾರಣಕ್ಕೆ ಸಿಪಿಐ(ಎಂ) ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿವೆ. ಒಂದು ಸುತ್ತಿನ ಮಾತುಕತೆ ನಡೆಸಿವೆ. ಸಿಪಿಐಎಂಗೆ ಅಧ್ಯಕ್ಷ ಸ್ಥಾನ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಉಪಾಧ್ಯಕ್ಷ ಸ್ಥಾನ ನೀಡಲು ಒಪ್ಪಂದ ಮಾಡಿಕೊಂಡಿವೆ. ಬಿಜೆಪಿ ಆಪರೇಷನ್ ಕಮಲ ಮಾಡುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ತಮ್ಮ ಸದಸ್ಯರನ್ನು ಭದ್ರವಾಗಿಟ್ಟುಕೊಂಡಿವೆ. ಓರ್ವ ಪಕ್ಷೇತರ ಸದಸ್ಯರನ್ನೂ ಸೆಳೆದುಕೊಳ್ಳಲು ಚಿಂತನೆ ನಡೆದಿದೆ. ಇತ್ತ ಬಿಜೆಪಿಯೂ ಓಲೈಕೆಯ ನೀತಿ ಅನುಸರಿಸುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮೀಸಲು:
ಬೆಳವಣಕಿ ಗ್ರಾ.ಪಂ.ಗೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ‘ಅ’ ವರ್ಗ ಮೀಸಲಾತಿ ಬಂದಿದೆ. ಒಪ್ಪಂದದಂತೆ ಫೆ. 4ರಂದು ನಡೆಯುವ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಸಿಪಿಐ(ಎಂ) ಬೆಂಬಲಿತ ಅಭ್ಯರ್ಥಿ ಕಳಕವ್ವ ಮೈಲಾರಪ್ಪ ಮಾದರ ಅವರಿಗೆ ಅಧ್ಯಕ್ಷ ಸ್ಥಾನ ಸಿಗುವುದು ಖಚಿತವಾಗಿದೆ. ಆದರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಇನ್ನೂ ಯಾರ ಹೆಸರನ್ನೂ ಅಂತಿಮಗೊಳಿಸಿಲ್ಲ. ಹಾಗಾಗಿ, ಅದು ಗೌಪ್ಯವಾಗಿಯೇ ಉಳಿದಿದೆ.
ಕಳಕವ್ವ ಮಾದರ
ಸಿಪಿಐ(ಎಂ) ಪಾರದರ್ಶಕ ಆಡಳಿತ:
2010ರಲ್ಲೂ ಭಾರತೀಯ ಕಮ್ಯೂನಿಸ್ಟ್ ಪಕ್ಷ ಇಲ್ಲಿ ಅಧಿಕಾರಕ್ಕೆ ಬಂದಿತ್ತು. ಆಗ ಎರಡೂವರೆ ವರ್ಷ ಅಧಿಕಾರ ನಡೆಸಿತ್ತು. 7 ಸದಸ್ಯರನ್ನೊಳಗೊಂಡಿದ್ದ ಸಿಪಿಐ(ಎಂ) ಪಕ್ಷವನ್ನು ಕೌಜಗೇರಿ ಗ್ರಾಮದ ಮೂವರು ಪಕ್ಷೇತರ ಸದಸ್ಯರು ಬೆಂಬಲಿಸಿದ್ದರು. ಅಲ್ಪಾವಧಿಯಲ್ಲೇ ಪಾರದರ್ಶಕ ಆಡಳಿತ ನಡೆಸಿತ್ತು. ಕಾಲಕಾಲಕ್ಕೆ ವಾರ್ಡ್ ಹಾಗೂ ಗ್ರಾಮ ಸಭೆ ನಡೆಸಿ ಕುಡಿಯುವ ನೀರು, ರಸ್ತೆ ನಿರ್ಮಾಣ, ಬಡವರಿಗೆ ಮನೆ ನಿವೇಶನ, ಉದ್ಯೋಗ ಖಾತ್ರಿ ಯೋಜನೆ ಮೂಲಕ ದುಡಿಯುವ ಕೈಗಳಿಗೆ ಕೆಲಸ ನೀಡಿತ್ತು.
ರಾಜ್ಯದಲ್ಲಿಯೇ ಪ್ರಥಮ
ಬೆಳವಣಕಿಯಲ್ಲಿ ಸಿಪಿಐ(ಎಂ) ಬೆಂಬಲಿತ ನಾಲ್ವರು ಸದಸ್ಯರು ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿಯೇ ಭಾರತದ ಕಮ್ಯೂನಿಸ್ಟ್ ಪಕ್ಷ ಗದಗ ಜಿಲ್ಲೆಯಲ್ಲಿ ಮಾತ್ರ ಅಧಿಕಾರ ಹಿಡಿಯುತ್ತಿರುವುದು ವಿಶೇಷ. 1ನೇ ವಾರ್ಡ್‌ನ ಸಿಪಿಐ(ಎಂ) ಬೆಂಬಲಿತ ಸದಸ್ಯ ಬಸವರಾಜ ವೀರಪ್ಪ ಮಂತೂರ ಸತತ ನಾಲ್ಕನೇ ಬಾರಿಗೆ ಗ್ರಾಪಂ ಸದಸ್ಯರಾಗಿ ಆಯ್ಕೆಯಾಗಿದ್ದರೆ, 2ನೇ ವಾರ್ಡ್‌ನ ಸುವರ್ಣ ಮಾರುತಿ ಶಗಣಿ ಅವರು ಮೂರನೇ ಬಾರಿಗೆ ಪುನರಾಯ್ಕೆಯಾಗಿದ್ದಾರೆ. ಅದರಂತೆ, ಸಿಪಿಐ(ಎಂ) ಬೆಂಬಲಿತ ಇನ್ನಿಬ್ಬರು ಗ್ರಾಪಂ ಸದಸ್ಯರಾದ ರೇಣುಕಾ ಕರಿಯಪ್ಪ ಕರ್ಕಿಕಟ್ಟಿ ಹಾಗೂ ಬೆಳವಣಕಿ ಗ್ರಾಪಂನ ಸಂಭಾವ್ಯ ಅಧ್ಯಕ್ಷೆ ಕಳಕವ್ವ ಮೈಲಾರಪ್ಪ ಮಾದರ ಸೇರಿ ನಾಲ್ವರು ಸದಸ್ಯರು ಆಯ್ಕೆಯಾಗಿದ್ದಾರೆ.
ಜನಪರ ಕೆಲಸ ಮಾಡಲು ಮತ್ತೊಮ್ಮೆ ಅವಕಾಶ ಸಿಕ್ಕಿದ್ದು, ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು. ಮಹಿಳೆಯರಿಗೆ ಸೂಕ್ತ ಶೌಚಾಲಯ ನಿರ್ಮಿಸಲಾಗುವುದು. ಗ್ರಾಮದ ಜನರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುವುದು.
ವಿಜಯಸಾಕ್ಷಿ ಸುದ್ದಿ, ರಾಯಚೂರು: ಅಕ್ರಮ ಸಂಬಂಧದಲ್ಲಿದ್ದ ಪ್ರೇಮಿಗಳಿಬ್ಬರ ನಡುವೆ ವೈಮನಸ್ಸು ಬಂದ ಕಾರಣಕ್ಕೆ ನೇಣಿಗೆ ಶರಣಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಹೇಮನಾಳ ಗ್ರಾಮದಲ್ಲಿ ನಡೆದಿದೆ.
ರಂಗಣ್ಣ ನಾಯಕ್ ( 30), ರಂಗಮ್ಮ(18) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು. ಮದುವೆಯಾಗಿ ಆರು ವರ್ಷವಾದರೂ ರಂಗಣ್ಣ ನಾಯಕ್ ಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಚಪ್ಪರ ಗುಂಡಿ ಮಸೀದಿ ಗ್ರಾಮದ ರಂಗಮ್ಮ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ.
ರಂಗಮ್ಮ ಸಹ ವಿವಾಹವಾಗಿ ಆಕೆಯ ಪತಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ತವರುಮನೆಯಲ್ಲಿ ಉಳಿದುಕೊಂಡಿದ್ದ ರಂಗಮ್ಮ ರಂಗಣ್ಣ ನಾಯಕ್ ನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಜಾತ್ರೆಯ ನಿಮಿತ್ತ ರಂಗಣ್ಣನ ಪತ್ನಿ ಶಿವಮ್ಮ ತನ್ನ ತವರುಮನೆ ಕೊತ್ತದೊಡ್ಡಿ ಗ್ರಾಮಕ್ಕೆ ಹೋಗಿದ್ದಳು.
ಈ ವೇಳೆ ರಂಗಣ್ಣನ ಮನೆಗೆ ರಂಗಮ್ಮ ಬಂದಿದ್ದಾಳೆ. ಪ್ರೇಮಿಗಳ ಮಧ್ಯೆ ವೈಮನಸ್ಸು ಉಂಟಾಗಿ ಆತ್ಮಹತ್ಯೆಯ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪತಿಯ ಸಾವಿನ ಬಳಿಕವಷ್ಟೇ ಪತ್ನಿ ಶಿವಮ್ಮಳಿಗೆ ಪತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದುಬಂದಿದೆ. ಮೃತನ ಪತ್ನಿ ಶಿವಮ್ಮಳ ಹೇಳಿಕೆ ಆಧಾರದ ಮೇಲೆ ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಸಾಕ್ಷಿ ಸುದ್ದಿ, ಕೋಲಾರ: ತಮ್ಮನಿಂದಲೇ ಅಣ್ಣನ ಕೊಲೆಯಾಗಿದ್ದ ಪ್ರಕಣವನ್ನು ಪೊಲೀಸರು ಈಗ ಬೇಧಿಸುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.
ಜ.22 ರಂದು ಜಿಲ್ಲೆಯ ಬಂಗಾರಪೇಟೆಯಲ್ಲಿ ಅಣ್ಣ ರಮೇಶ್ ನನ್ನು ಕೊಲೆ ಮಾಡಿದ ತಮ್ಮ ರಾಜೇಶ್ ಅಣ್ಣನ ಮೃತದೇಹವನ್ನು ಆಟೋದಲ್ಲಿ ಒಯ್ದು ಆಟೋ ಸಮೇತ ಸುಟ್ಟು ಹಾಕಿದ್ದ.
ಆರೋಪಿ ರಾಜೇಶನಿಗೆ ಮಕ್ಕಳಿಲ್ಲದ ಕಾರಣ ರಮೇಶನ ಮಕ್ಕಳನ್ನು ದತ್ತು ನೀಡುವಂತೆ ಒತ್ತಾಯ ಮಾಡ್ತಿದ್ದ. ಇದಕ್ಕೆ ರಮೇಶ್ ನಿರಾಕರಿಸಿದ್ದಕ್ಕೆ ಮಾತಿಗೆ ಮಾತು ಬೆಳೆದು ತಲೆಗೆ ಮಚ್ಚಿನಿಂದ ರಾಜೇಶ್ ಹಲ್ಲೆ ನಡೆಸಿ ರಮೇಶನನ್ನು ಕೊಂದಿದ್ದ.
ನಂತರ ಸ್ನೇಹಿತ ಅಜಯ್ ಸಹಾಯದಿಂದ ಆಟೋದಲ್ಲಿ ಹೋಗಿ ಸುಟ್ಟು ಹಾಕಿದ್ದ ಆರೋಪಿಗಳು. ಆಟೋ ನಂಬರ್ ನಿಂದ ಪೊಲೀಸರು ತನಿಖೆ ಆರಂಭಿಸಿದಾಗ ಮಾಹಿತಿ ಬಯಲಾಗಿದೆ.
ಬಂಗಾರಪೇಟೆ ಹೊರಹೊರವಲಯದ ಇಂದಿರಾನಗರ – ಮಲ್ಲಂಗುರ್ಕಿ ಅಂಡರ್ ಪಾಸ್ ಬಳಿ ಆಟೋ ಸಮೇತ ಆರೋಪಿತರು ಬೆಂಕಿ ಹಾಕಿದ್ದರು. ಸದ್ಯ ಆರೋಪಿಗಳಿಬ್ಬರು ಬಂಗಾರಪೇಟೆ ಪೊಲೀಸರ ವಶದಲ್ಲಿದ್ದಾರೆ.
ವಿಜಯಸಾಕ್ಷಿ ಸುದ್ದಿ, ದಾವಣಗೆರೆ: 500 ರೂ. ನೋಟು ತೋರಿಸಿ, 4.85 ಲಕ್ಷ ರೂಪಾಯಿಗಳನ್ನು ಖದೀಮರು ಲಪಟಾಯಿಸಿರುವ ಘಟನೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದಿದೆ.
ಹೊನ್ನಾಳಿಯ ಕೆನರಾ ಬ್ಯಾಂಕ್ ಬಳಿ ಈ ಘಟನೆ ನಡೆದಿದ್ದು, ಘಂಟ್ಯಾಪುರದ ಚಂದ್ರನಾಯ್ಕ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ದಾರೆ. ಚಂದ್ರಾನಾಯ್ಕ ಅವರ ಗಮನ ಬೇರೆಡೆ ಸೆಳೆದು 4.85 ರೂ. ಲಕ್ಷ ಹಣವನ್ನು ಖಯರ್ನಾಕ್ ಕಳ್ಳರು ದೋಚಿದ್ದಾರೆ.
ಚಂದ್ರಾನಯ್ಕ ಕೆನರಾ ಬ್ಯಾಂಕಿನಿಂದ ಹಣ ಬಿಡಿಸಿಕೊಂಡು ಮರಳುತ್ತಿದ್ದರು. ಇದನ್ನು ಗಮನಿಸಿ ಚಂದ್ರನಾಯ್ಕ ಅವರನ್ನು ಖದೀಮರು ಹಿಂಬಾಲಿಸಿ, 500 ನೋಟನ್ನು ಕೆಳಗೆ ಬೀಳಿಸಿ ಚಂದ್ರನಾಯ್ಕರನ್ನು ಯಾಮಾರಿಸಿ ಹಣ ಕಳ್ಳತನ ಮಾಡಿದ್ದಾರೆ.
ಕಳ್ಳರ ಈ ಕೃತ್ಯ ಸಿಸಿ ಕ್ಯಾಮೆರಗಳಲ್ಲಿ ದೃಶ್ಯಾವಳಿ ಸೆರೆಯಾಗಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.