ಕುಮಾರಸ್ವಾಮಿಗಳ ಜೀವನವನ್ನು ಆಧರಿಸಿದ ‘ವಿರಾಟಪುರ ವಿರಾಗಿ’ ಸಿನಿಮಾ ಶುಕ್ರವಾರ ದೇಶದಾದ್ಯಂತ ಬಿಡುಗಡೆಯಾಗಲಿದೆ ಎಂದು ತೋಂಟೇಶ್ ಮಾನ್ವಿ ಹೇಳಿದರು.
ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿ ಮಾತನಾಡಿ, ನಗರದಲ್ಲಿ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶೇಷ ಪೂಜೆ ಮಾಡಲಾಗುತ್ತದೆ. ದೇಶದ ವಿವಿಧ ಚಿತ್ರಮಂದಿರಗಳಲ್ಲಿ ವಿರಾಟಪುರ ವಿರಾಗಿ ಚಲನಚಿತ್ರ ಬಿಡುಗಡೆಯಾಗಲಿದೆ ಎಂದರು.
ವಿರಾಟಪುರ ವಿರಾಗಿ ಸಿನಿಮಾದ ಮಣಿಕಾಂತ ಕದ್ರಿ ಸಂಗೀತ ಸಂಯೋಜನೆಯ, ರವೀಂದ್ರ ಸೋರಗಾಂವಿ ಅವರ ಧ್ವನಿಯಲ್ಲಿ ಮೂಡಿಬಂದ ‘ನೋಡಲಾಗದೆ ದೇವಾ’ ಹಾಡು ಕೂಡ ಬಿಡುಗಡೆ ಆಗಿದ್ದು, ಅಪಾರ ಸಂಖ್ಯೆಯ ಕೇಳುಗರು ಈ ಗೀತೆಯನ್ನು ಮೆಚ್ಚಿಕೊಂಡಿದ್ದಾರೆ. ಹೀಗಾಗಿ ಇಂದು ಹೆಚ್ಚಿನ ಪ್ರಮಾಣದಲ್ಲಿ ಜನರು ವಿರಾಟಪುರ ವಿರಾಗಿ ಚಲನಚಿತ್ರ ಗೀತೆಗಳನ್ನು ನೋಡಲು ಮುಂದಾಗಿದ್ದಾರೆ ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್.ಲಿಂಗದೇವರು ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಸುಚೇಂದ್ರಪ್ರಸಾದ್ ಸೇರಿದಂತೆ ಹಲವು ಕಲಾವಿದರು ಮತ್ತು ಮಠಾಧೀಶರು ಕೂಡ ತಾರಾಗಣದಲ್ಲಿ ಇದ್ದಾರೆ. ಸಮಾಧಾನ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಹಾನಗಲ್ಲ ಶ್ರೀಗಳ ಭವ್ಯ ಚರಿತ್ರೆಯನ್ನು ಈ ಸಿನಿಮಾ ಒಳಗೊಂಡಿದೆ ಎಂದರು. ಹಾನಗಲ್ಲ ಕುಮಾರ ಶಿವಯೋಗಿಗಳ ಚಿತ್ರವನ್ನು ಉತ್ತರ ಕರ್ನಾಟಕ ಭಾಗದ ಅನೇಕ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮಶೇಖರ್ ಹೊನಗುಡಿ, ಕುಮಾರಸ್ವಾಮಿ ಹಿರೇಮಠ, ಶಿವಾನಂದ ಹಿರೇಮಠ ಇದ್ದರು.
ಬಸಾಪೂರ ಗ್ರಾಮದ ಬಳಿ 76 ಎಕರೆ ಪ್ರದೇಶದಲ್ಲಿ ಜಲಾಗಾರ ನಿರ್ಮಾಣ
ವಿಜಯಸಾಕ್ಷಿ ಸುದ್ದಿ, ನವಲಗುಂದ/ಅಣ್ಣಿಗೇರಿ
ಅಮೃತೇಶ್ವರನ ಪುಣ್ಯ ಭೂಮಿ, ಪಂಪ ಹುಟ್ಟಿದ ನಾಡಿನ ಜನತೆಯ ದಶಕಗಳ ಬೇಡಿಕೆಯಾಗಿದ್ದ ಶಾಶ್ವತ ಶುದ್ಧ ಕುಡಿಯುವ ನೀರಿನ ಕನಸು ನನಸಾಗುತ್ತಿದ್ದು ರೂ.54 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡು ಜ.13 ರಂದು ಬಸಾಪೂರ ಗ್ರಾಮದ ಬಳಿ ಲೋಕಾರ್ಪಣೆಗೊಳ್ಳುತ್ತಲಿರುವುದು ಸೌಭಾಗ್ಯವೆ ಸರಿ.
ಅಣ್ಣಿಗೇರಿ ಪಟ್ಟಣದ ಜನತೆ ಕುಡಿಯುವ ನೀರಿಗಾಗಿ ಎಷ್ಟು ಹೋರಾಟ ಮಾಡಿದ್ದಾರೆಂದರೆ ಕಣ್ಣು ಒದ್ದೆಯಾಗುತ್ತದೆ. ಸಿಹಿ ನೀರು ಸಿಗುವುದಿರಲಿ ಉಪ್ಪು ನೀರು ಕುಡಿಯಲು ಕೂಡ ಸಾಕಷ್ಟು ಕಷ್ಟಪಟ್ಟಿದ್ದಾರೆ. ಸಿಹಿ ನೀರು ಕುಡಿಯಲಿಕ್ಕಾಗಿಯೇ ಬಸಾಪೂರ ಹಾಗೂ ಅಣ್ಣಿಗೇರಿ ಜನತೆಯ ನಡುವೆ ಗಲಾಟೆಯಾಗಿ ಜೈಲುವಾಸ ಅನುಭವಿಸಿಯೂ ಬಂದಿದ್ದನ್ನು ಯಾರು ಮರೆಯುವಂತಿಲ್ಲ.
ಈ ಸಮಸ್ಯೆಯಿಂದಾಗಿ ಅಣ್ಣಿಗೇರಿಗೆ ಕನ್ಯೆ ಕೊಡಲು ಹಿಂದೇಟು ಹಾಕುತ್ತಿದ್ದರು. ಫಲವತ್ತಾದ ಭೂಮಿ, ಸಮೃದ್ಧವಾದ ಈ ನಾಡಿನಲ್ಲಿ “ಬಂಡಿ ತುಂಬ ಅನ್ನ, ಗಿಂಡಿ ತುಂಬ ನೀರು” ಎಂಬ ನಾಣ್ಣುಡಿ ಎಲ್ಲರ ಬಾಯಲ್ಲು ಹರಿದಾಡುತ್ತಿತ್ತು.
ಈ ಜನತೆ ಅನುಭವಿಸುತ್ತಿದ್ದ ಕಷ್ಟವನ್ನು ಅರಿತಿದ್ದ ಅಂದಿನ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅಣ್ಣಿಗೇರಿ ಜನತೆಗೊಂದು ಶಾಶ್ವತವಾಗಿ ಶುದ್ಧ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಬೇಕೆಂದು ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಿದ್ದ ಸಂದರ್ಭದಲ್ಲಿ ರೂ.44.75 ಕೋಟಿ ವೆಚ್ಚದ ಕ್ರೀಯಾ ಯೋಜನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದುಕೊಂಡು ಯಶಸ್ವಿಯಾದರು.
ನಂತರದ ಅವಧಿಗೆ ಶಾಸಕರಾದ ಎನ್.ಎಚ್.ಕೋನರಡ್ಡಿ ಭೂಮಿ ಖರೀದಿ ಪ್ರಕ್ರಿಯೆ ಪ್ರಾರಂಭ ಮಾಡಿ ಬಸಾಪೂರ ಗ್ರಾಮದ ರೈತರ ಮನವೊಲಿಸಿದ ಫಲವಾಗಿ 76 ಎಕರೆ ಜಮೀನನ್ನು ಖರೀದಿಸಲು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಬೆನ್ನುಬಿದ್ದು ವಿಶೇಷ ಅನುದಾನ ಬಿಡುಗಡೆ ಮಾಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ನಂತರ 2017 ರಲ್ಲಿ ಅಣ್ಣಿಗೇರಿ ಪುರಸಭೆ ಅಧ್ಯಕ್ಷರಾಗಿದ್ದ ರೂಪಾ ಶಿವಶಂಕರ ಕಲ್ಲೂರ, ಶಾಸಕ ಎನ್.ಎಚ್.ಕೋನರಡ್ಡಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಲಕರ್ಣಿ ನೇತ್ರತ್ವದಲ್ಲಿ ಭೂಮಿ ಪೂಜೆ ಮಾಡಿ ಚಾಲನೆ ನೀಡಲಾಯಿತು.
ಕೆರೆ ನಿರ್ಮಾಣ ಕಾಮಗಾರಿ ಪ್ರಾರಂಭವಾಯಿತು ನಿಜ. ನಂತರ ಹಣದ ಕೊರತೆಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದುಬಿಟ್ಟಿತು. ನಂತರ 2018 ರಲ್ಲಿ ಮತ್ತೇ ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ ನಿರಂತರ ಪರಿಶ್ರಮ ವಹಿಸಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದ ಪರಿಣಾಮ ಈಗ ಬಸಾಪೂರ ಗ್ರಾಮದ ಬಳಿ ರೂ.54 ಕೋಟಿ ವೆಚ್ಚದ ನೀರಂತರ ನೀರು ಸರಬರಾಜು ಯೋಜನೆ ಕಾಮಗಾರಿ ಪೂರ್ಣಗೊಂಡು ಮಲಪ್ರಭೆಯ ಕೃಪೆಯಿಂದ ಜಲಾಗಾರ ತುಂಬಿಕೊಂಡಿದ್ದು ಜ.13 ರಂದು ಲೋಕಾರ್ಪಣೆಗೊಳ್ಳುತ್ತಲಿದೆ.
ಸಚಿವರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಕೆರೆಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕೆರೆಗೆ ಭೂಮಿ ನೀಡಿದ ರೈತರಿಗೆ ಸನ್ಮಾನ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿದೆ.
ಕೊಟ್ಟ ಭರವಸೆ ಈಡೇರಿಸಿದ ಸಾರ್ಥಕತೆ ಮನೋಭಾವನೆ – ಸಚಿವ ಮುನೇನಕೊಪ್ಪ
ಅಣ್ಣಿಗೇರಿ ಜನತೆಯ ಕುಡಿಯುವ ನೀರಿಗೊಂದು ಶಾಶ್ವತ ಪರಿಹಾರ ಮಾಡಬೇಕೆಂಬುದು ನನ್ನ ಜೀವನದ ಗುರಿಯಾಗಿತ್ತು. ಜಗದೀಶ ಶೆಟ್ಟರ ಮುಖ್ಯಮಂತ್ರಿ ಅವಧಿಯಲ್ಲಿ ಅನುಮೋದನೆ ಪಡೆದು, ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ಸಹಕಾರದೊಂದಿಗೆ ಈಗಿನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿಯವರ ನೇತ್ರತ್ವದ ಸರ್ಕಾರದಲ್ಲಿ ಸಚಿವನಾಗಿ ಕೊಟ್ಟ ಭರವಸೆಯನ್ನು ಈಡೇರಿಸಿ ಲೋಕಾರ್ಪಣೆ ಮಾಡುತ್ತಿರುವುದು ನನ್ನ ಸೌಭಾಗ್ಯ. ಯೋಜನೆಗೆ ಭೂಮಿ ನೀಡಿದ ರೈತರು, ಸಹಕರಿಸಿದ ಎಲ್ಲ ಜನಪ್ರತಿನಿಧಿಗಳಿಗೂ, ಅಧಿಕಾರಿಗಳಿಗೆ ಚಿರಋಣಿಯಾಗಿದ್ದೇನೆಂದು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಅಣ್ಣಿಗೇರಿ ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ನಿರಂತರ ಪರಿಶ್ರಮ ಪಟ್ಟಿದ್ದ ಹಿಂದಿನ ಎಲ್ಲ ಶಾಸಕರು, ಪುರಸಭೆ ಅಧ್ಯಕ್ಷರು, ಸದಸ್ಯರು, ಭೂಮಿ ನೀಡಿದ ರೈತರನ್ನು ಮತ್ತು ಮೊದಲು ಕ್ರಿಯಾ ಯೋಜನೆ ತಯಾರಿಸಿದ್ದ ಅಂದಿನ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಮುಖ್ಯ ಅಭಿಯಂತರರಾಗಿದ್ದ ಎಸ್.ಚಂದ್ರಪ್ಪ ಅವರನ್ನು ವಿಶೇಷವಾಗಿ ಆಹ್ವಾನಿಸಿ ಗೌರವಿಸಬೇಕಾಗಿತ್ತು.
ಕೆಲವರು ಏನೂ ಕೆಲಸ ಮಾಡದೇ ಮಾತಾಡುವುದನ್ನು ಕಲಿತಿದ್ದು ಅಂಥವರ ಮಾತಿಗೆ ನನ್ನ ಅಭಿವೃದ್ದಿ ಕಾರ್ಯಗಳು ಉತ್ತರ ನೀಡುತ್ತಿವೆ. ರಾಜ್ಯ ಹಾಗೂ ದೇಶ ಕೋವಿಡ್ ಮಹಾಮಾರಿ ಸಮಸ್ಯೆಯಲ್ಲಿ ಸಿಲುಕಿದರೂ ಸಹ ನರಗುಂದ ಮತಕ್ಷೇತ್ರ ಅಭಿವೃದ್ಧಿಯಿಂದ ವಂಚಿತಗೊಂಡಿಲ್ಲ. ನರಗುಂದ ಮತಕ್ಷೇತ್ರದಲ್ಲಿ 1683 ಕೋಟಿ ರೂ.ಗಳ ವೆಚ್ಚದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳೇ ಇದಕ್ಕೆ ಸಾಕ್ಷಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ಅವರು ಬುಧವಾರ ತಾಲೂಕಿನ ಯಾಸ ಹಡಗಲಿ ಗ್ರಾಮದಲ್ಲಿ 9 ಕೋಟಿ 25 ಲಕ್ಷ ರೂಗಳ ಹಾಗೂ ಯಾವಗಲ್ಲ ಗ್ರಾಮದಲ್ಲಿ 1 ಕೋಟಿ 68 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಯಾಸ ಹಡಗಲಿ ಗ್ರಾಮ ರೋಣ ತಾಲೂಕಿನ ಕೊನೆ ಹಳ್ಳಿ ಅಭಿವೃದ್ಧಿಯಿಂದ ವಂಚಿತಗೊಂಡ ಗ್ರಾಮ ಎಂಬ ಹೆಗ್ಗಳಿಕೆಯನ್ನು ಈ ಹಿಂದೆ ಹೊಂದಿತ್ತು. ಆದರೆ ಈಗಿನ ಸ್ಥಿತಿಯಲ್ಲಿ ಗ್ರಾಮ ಸಂಪೂರ್ಣ ಬದಲಾಗಿದೆ. ಹಳೆ ಗ್ರಾಮದಿಂದ ನೂತನ ಗ್ರಾಮದವರೆಗೆ 1.5 ಕಿಮಿ ಸಿಸಿ ರಸ್ತೆಯಾಗುವ ಜೊತೆಗೆ 1 ಕೋಟಿಗೂ ಅಧಿಕ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣಗೊಂಡಿದೆ. ಮುಖ್ಯವಾಗಿ ಗ್ರಾಮದ ಅಭಿವೃದ್ಧಿಗೆ 3 ಕೋಟಿ ರೂ. ಗಳ ಅನುದಾನವನ್ನು ನೀಡಲಾಗಿತ್ತು. ಈಗ ಮತ್ತೆ 9 ಕೋಟಿ 25 ಲಕ್ಷ ರೂ.ಗಳ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ ಎಂದ ಅವರು ಇನ್ನೂ ಯಾವಗಲ್ಲ ಗ್ರಾಮದ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದು ಕೆಲವು ಕೆಲಸಗಳು ಮುಗಿದಿದ್ದು ಇನ್ನು ಕೆಲವು ಕಾಮಗಾರಿಗಳು ಪ್ರಗತಿಯಲ್ಲಿವೆ.
ಈಗ ಗ್ರಾಮದ ಅಭಿವೃದ್ಧಿಗೆ 1.68 ಲಕ್ಷ ರೂ.ಗಳ ಅನುದಾನವನ್ನು ನೀಡಲಾಗಿದ್ದು, ಹಲವು ವರ್ಷಗಳ ಬೇಡಿಕೆಯಾಗಿದ್ದ ಯಾವಗಲ್ಲ-ಶಲವಡಿ ರಸ್ತೆ ಸುಧಾರಣೆಗೆ 90 ಲಕ್ಷ ರೂ.ಗಳ ಅನುದಾನವನ್ನು ಬಿಡುಗಡೆಗೊಳಿಸಿ ಭೂಮಿ ಪೂಜೆಯನ್ನು ಮಾಡಲಾಗಿದೆ.
ಗ್ರಾಮದ ಜನರು ಈ ಹಿಂದೆ ಇಷ್ಟೊಂದು ಅಭಿವೃದ್ಧಿ ಕಾರ್ಯಗಳನ್ನು ನೋಡಿರಲಿಲ್ಲ. ಈಗ ಪ್ರತಿ ಬಡಾವಣೆಗಳು ಸಿಸಿ ರಸ್ತೆಯಿಂದ ಕೂಡಿದ್ದು, ಗ್ರಾಮದಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಮುತ್ತಣ್ಣ ಜಂಗಣ್ಣವರ, ಅಶೋಕ ಹೆಬ್ಬಳ್ಳಿ, ಈರಪ್ಪ ತಾಳಿ ಸೇರಿದಂತೆ ಗ್ರಾಪಂ ಅಧ್ಯಕ್ಷರು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ಹಿಂದೆ ಆಡಳಿತ ನಡೆಸಿದವರು ಬರಿ ಮಾತಾಡಿದರೆ ಹೊರತು ಕೆಲಸ ಮಾಡಲಿಲ್ಲ. ಧರ್ಮಸಿಂಗ್ ಸರಕಾರವಿದ್ದಾಗ ಮುಖ್ಯಮಂತ್ರಿ ಬೊಮ್ಮಾಯಿಯವರು ಹಾಗೂ ನಾನು ರಕ್ತದಲ್ಲಿ ಪತ್ರ ಬರೆಯುವ ಮೂಲಕ ಮಹದಾಯಿ ಮತ್ತು ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿದ್ದು ಇತಿಹಾಸ. ಈಗ ನಮ್ಮ ಅಧಿಕಾರದಲ್ಲಿ ಅನುಷ್ಠಾನಕ್ಕೆ ಆದೇಶ ಬಂದಿದ್ದು, ಶೀಘ್ರ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು.
ವಿಕಲಚೇತನನೊಬ್ಬ ಆಶ್ರಯ ಮನೆ ಮಂಜೂರಾತಿ ಮಾಡುವಂತೆ ಒತ್ತಾಯಿಸಿ ಇಲ್ಲಿನ ಪಟ್ಟಣ ಪಂಚಾಯತಿ ಕಾರ್ಯಾಲಯದ ಎದುರು ಗರ್ಭಿಣಿ ಪತ್ನಿ ಹಾಗೂ ಮಕ್ಕಳೊಂದಿಗೆ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ನಡೆದಿದೆ.
ಮುಳಗುಂದ ಪಟ್ಟಣದ ಹಜರೇಶಾ ಮಕಾಂದಾರ ಎಂಬ ವಿಕಲಚೇತನ 2000ನೇ ಇಸ್ವಿಯಿಂದ ಪಪಂಗೆ ಜಾಗ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಅಂದಿನಿಂದ ಇಂದಿನವರೆಗೂ ಈತನಿಗೆ ಪಪಂನವರು ನಿವೇಶನ ಮಂಜೂರು ಮಾಡದೇ ಬರೀ ಆಶ್ವಾಸನೆ ನೀಡುತ್ತಾ ಬಂದಿದ್ದರು.
ಇದರಿಂದ ಬೇಸತ್ತ ಹಜರೇಶಾ 2017ರಲ್ಲಿ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದರೂ ಅದಕ್ಕೂ ಯಾವುದೇ ಉತ್ತರ ಬರಲಿಲ್ಲ. ಈತನಿಗೆ ನಾಲ್ಕು ಮಕ್ಕಳಿದ್ದು, ಹೆಂಡತಿ ಮಕ್ಕಳೊಂದಿಗೆ ದಯಾಮರಣ ಕೋರಿ ಅರ್ಜಿ ಸಲ್ಲಿಸಿದರೂ ಯಾವೊಬ್ಬ ಅಧಿಕಾರಿಗಳು ತಿರುಗಿ ಕೂಡಾ ನೋಡಲಿಲ್ಲ. ಇದರಿಂದ ಬೇಸತ್ತ ಈತ ಈಗ ಹೆಂಡತಿಯ ಹೆರಿಗೆಯಾದರೆ ಬೀದಿಯಲ್ಲಿರುವುದು ಬೇಡ ಪಪಂನಲ್ಲಿಯೇ ಆಗಲಿ ಎಂದು ಹೊರಸು ಸಮೇತ ಪಪಂ ಮುಂದೆ ಪ್ರತಿಭಟನೆ ನಡೆಸಿದ.
ಈತನ ಪ್ರತಿಭಟನೆಗೆ ಮಣಿದ ಸದಸ್ಯರೆಲ್ಲ ಸೇರಿ ನಿವೇಶನ ನೀಡುವವರೆಗೂ ತಾತ್ಕಾಲಿಕವಾಗಿ ಖಾಲಿ ಇದ್ದ ಒಂದು ಆಶ್ರಯ ಮನೆ ನೀಡುವಂತೆ ಸೂಚಿಸಿದರು.
ನನ್ನ ವಿಕಲಚೇತನಕ್ಕೆ ಪಪಂ ಕಾರಣ. ಈ ಹಿಂದೆ 2006ರಲ್ಲಿ ಪಪಂ ದಿನಗೂಲಿ ಕೆಲಸಗಾರನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಆಗ ಪಪಂ ಟ್ಯಾಂಕರಗೆ ನೀರು ತುಂಬಲು ಹೋಗಿ ಟ್ಯಾಂಕರನ ಉದ್ದಿಗೆ ಕಾಲ ಮೇಲೆ ಬಿದ್ದು ಕಾಲು ಕಳೆದುಕೊಳ್ಳಬೇಕಾಯಿತು. ಇದರಿಂದ ನಾನು ಜೀವನಪರ್ಯಂತ ನೋವು ಅನುಭವಿಸುವಂತಾಗಿದೆ.
-ಹಜರೇಶಾ ಮಕಾಂದಾರ, ವಿಕಲಚೇತನ
ಆತ ವಿಕಲಚೇತನನಾಗಿದ್ದರಿಂದ ಸರಕಾರ ನಿವೇಶನ ನೀಡುವವರೆಗೂ ತಾತ್ಕಾಲಿಕವಾಗಿ ಖಾಲಿ ಇದ್ದ ಒಂದು ಆಶ್ರಯ ಮನೆಯನ್ನು ನೀಡಿ ಆತನಿಗೆ ಅಲ್ಲಿಯೇ ಇರಲು ಸೂಚಿಸಲಾಗಿದೆ. ನಿವೇಶನ ನೀಡಲು ಈತನಿಗೆ ಮೊದಲ ಆದ್ಯತೆ ನೀಡುತ್ತೇವೆ.
ಇಲ್ಲಿನ ಆದರ್ಶ ಶಿಕ್ಷಣ ಸಮಿತಿಯ ಲಕ್ಷ್ಮಣರಾವ್ ಅನಂತರಾವ್ ಪೋತ್ನೀಸ್ ಮೆಮೋರಿಯಲ್ ವಾಣಿಜ್ಯ ಮಹಾವಿದ್ಯಾಲಯದ ಸಹನಾ ರಮೇಶ ಬಾಗೋಡಿ ಚಾರ್ಟರ್ಡ್ ಅಕೌಂಟೆಂಟ್ ಅಂತಿಮ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.
ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಸಹನಾ ಬಾಗೋಡಿಗೆ ಆದರ್ಶ ಶಿಕ್ಷಣ ಸಮಿತಿಯ ಚೇರ್‌ಮನ್ ಆನಂದ ಪೋತ್ನೀಸ್, ಅಧ್ಯಕ್ಷ ಕೋದಂಡರಾಮ ಕುಷ್ಟಗಿ, ಉಪಾಧ್ಯಕ್ಷ ಪ್ರಾ.ಪಿ.ಆರ್.ಅಡವಿ, ನಿರ್ದೇಶಕ ಪ್ರಾ.ಆನಂದ ಗೋಡಖಿಂಡಿ, ಪ್ರಾ.ರವೀಂದ್ರ ಕುಲಕರ್ಣಿ, ಉದ್ದಿಮೆದಾರ ಈಶ್ವರಪ್ಪ ಬೇವಿನಮರದ, ಈಶ್ವರ ರೇವಣಕಿ, ಸೂರ್ಯನಾರಾಯಣ ನರಗುಂದಕರ ಮುಂತಾದವರು ಅಭಿನಂದಿಸಿದ್ದಾರೆ.
ಬೆಂಗಳೂರು ನಾಗವಾರ ಬಳಿ (ಹೆಣ್ಣೂರು ಕ್ರಾಸ್) ನಡೆಯುತ್ತಿದ್ದ ಎರಡನೇ ಹಂತದ ಮೆಟ್ರೋ ಕಾಮಗಾರಿ ವೇಳೆ ಕಬ್ಬಿಣದ ಸರಳುಗಳ ಪಿಲ್ಲರ್ ಕುಸಿದು ತಾಯಿ ಹಾಗೂ ಮಗು ಮೃತಪಟ್ಟ ದುರ್ಘಟನೆ ಮಂಗಳವಾರ ಜರುಗಿದೆ.
ಗದಗ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಗದಗನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ನಿವೃತ್ತಿಯಾಗಿರುವ ವಿಜಯಕುಮಾರ್ ಸುಲಾಖೆ ಅವರ ಹಿರಿಯ ಮಗ ಲೋಹಿತ್ ಸುಲಾಖೆ ಅವರ ಪತ್ನಿ ತೇಜಸ್ವಿನಿ (23) ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟ ದುರ್ಧೈವಿಗಳು.
ಬೈಕ್ ನಲ್ಲಿ ಹೋಗುವಾಗ ಈ ಘಟನೆ ನಡೆದಿದೆ.
ಗದಗ ನಗರದ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿಗಳಾಗಿದ್ದ ವಿಜಯಕುಮಾರ್ ಸುಲಾಖೆ ಅವರು ಕಳೆದ ಆರು ವರ್ಷಗಳ ಹಿಂದೆ ಗದಗನಿಂದ ಬೆಂಗಳೂರಿಗೆ ಶಿಪ್ಟ್ ಆಗಿದ್ದರು.
ವಿಜಯಕುಮಾರ್ ಸುಲಾಖೆ ಅವರ ಹಿರಿಯ ಮಗ ಲೋಹಿತ್ ಸಾಫ್ಟವೇರ್ ಇಂಜಿನಿಯರ್ ಆಗಿದ್ದಾರೆ.
ಈ ಕುರಿತು ಬೆಂಗಳೂರಿನ ಗೋವಿಂದಪುರ ಠಾಣೆಯಲ್ಲಿ ನಿರ್ಲಕ್ಷ್ಯ ಆರೋಪದಡಿ ಐಪಿಸಿ 337,338,427,34 ಅನ್ವಯ ಪ್ರಕರಣ ದಾಖಲಾಗಿದೆ.
ಕಣ್ಣೀರಾದ ಸ್ಥಳೀಯರು
ಮಂಗಳವಾರ ಮಧ್ಯಾಹ್ನ ಘಟನೆಯ ಸುದ್ದಿ ತಿಳಿದು ಸಿದ್ದರಾಮೇಶ್ವರ ಬಡಾವಣೆಯ ಜನ ಕಣ್ಣೀರಾದರು.
ಸುಲಾಖೆ ಅವರ ಕುಟುಂಬದೊಂದಿಗೆ ಒಡನಾಟ ಹೊಂದಿದ್ದ ಸ್ಥಳೀಯರು, ತೇಜಸ್ವಿನಿ ಹಾಗೂ ಮಗು ಮೃತಪಟ್ಟ ಸುದ್ದಿ ಕೇಳಿ ಅಘಾತಗೊಂಡಿದ್ದಾರೆ.
ಇತ್ತೀಚೆಗೆ ಅಷ್ಟೇ ಬೆಂಗಳೂರಿನಿಂದ ಬಂದು ಹೋಗಿದ್ದನ್ನು ನೆನಪು ಮಾಡಿಕೊಂಡು ಮಮ್ಮಲ ಮರಗಿದರು.
ಘಟನೆಯ ಕುರಿತು ಮಾತನಾಡಿದ ಸಚಿವ ಸಿ ಸಿ ಪಾಟೀಲ, ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕುಟುಂಬದವರಿಗೆ ಪರಿಹಾರ ದೊರಕಿಸುವ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುತ್ತೇನೆ ಎಂದರು.
ಕಾಂಗ್ರೆಸ್ ನ ಹಿರಿಯ ಮುಖಂಡ, ಶಾಸಕ ಎಚ್. ಕೆ. ಪಾಟೀಲ ಮಾತನಾಡಿ, ಬೇಜವಬ್ದಾರಿ ಕೆಲಸದಿಂದ ಎರಡು ಜೀವಗಳನ್ನು ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದಿದ್ದು ದುರ್ದೈವದ ಸಂಗತಿಯಾಗಿದ್ದು, ಸರಕಾರ ಮೃತರ ಕುಟುಂಬಕ್ಕೆ ಯೋಗ್ಯ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ಮೃತರ ಕುಟುಂಬದ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ಸಂತಾಪ ವ್ಯಕ್ತಪಡಿಸಿದರು.
ತನ್ನ ಜಮೀನಿಗೆ ನಡೆದುಕೊಂಡು ಹೊರಟಿದ್ದ ರೈತನೊಬ್ಬನಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ರೈತ ಮೃತಪಟ್ಟ ಘಟನೆ ಜರುಗಿದೆ.
ಇಲ್ಲಿನ ಹೊಂಬಳ ರಸ್ತೆಯ ಇಟಗಿ ಎಂಬುವರ ಜಮೀನಿನ ಬಳಿ ಭಾನುವಾರ ರಾತ್ರಿ ಒಕ್ಕಲಿಗೇರಿ ಓಣಿಯ ಮಂಜುನಾಥ ಯಲ್ಲಪ್ಪ ಕಂಬಳಿ (29)ಎಂಬಾತ ತನ್ನ ಜಮೀನಿಗೆ ನಡೆದುಕೊಂಡು ಹೊರಟಿದ್ದ.
ಆಗ ವೇಗವಾಗಿ ಬಂದ ಅಪರಿಚಿತ ವಾಹನವೊಂದು ಮಂಜುನಾಥಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಸೋಮವಾರ ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೇ ಮಂಜುನಾಥ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಈ ಕುರಿತು ಮೃತನ ತಂದೆ ಯಲ್ಲಪ್ಪ ಪಕ್ಕೀರಪ್ಪ ಕಂಬಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಡಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನದ ಶೋಧ ನಡೆಸಿದ್ದಾರೆ.
ನಟರಾಜ್ ಪೆನ್ಸಿಲ್ ಕಂಪನಿಯಿಂದ ಮನೆಯಿಂದಲೇ ಹಣ ಗಳಿಸಬಹುದು ಅಂತ ಹೇಳಿ 2,35,000ರೂ. ಗಳ ಮೋಸ
ಬ್ಲಿಂಕಿಟ್ ಎಂಬ ಅರ್ನ್ ಮನಿ ಆ್ಯಪ್ ಕಳುಹಿಸಿ ಅದನ್ನು ಪ್ಲೇ ಮಾಡುತ್ತಾ ಹೋದರೆ ಹಣ ದ್ವಿಗುಣವಾಗುತ್ತದೆ ಎಂದು ಪ್ರತಿಷ್ಠಿತ ಮಹಿಳೆಯೊಬ್ಬರಿಗೆ ನಂಬಿಸಿ ಹತ್ತು ಲಕ್ಷ ರೂಪಾಯಿಗೂ ಹೆಚ್ಚು ಹಣ ವಂಚಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದ ವಿದ್ಯಾ ಎಂಬ ಪ್ರತಿಷ್ಠಿತ ಮನೆತನದ ಮಹಿಳೆಗೆ ಅಕ್ಟೋಬರ್ 3ರಂದು +63991427160 ಮತ್ತು +639498074279 ಈ ನಂಬರಿನಿಂದ ಅರ್ನ್ ಮನಿ ಆ್ಯಪ್ ಕಳುಹಿಸಿ ಪ್ಲೇ ಮಾಡುತ್ತು ಹೋದರೆ ಹಣ ದ್ವಿಗುಣವಾಗುತ್ತದೆ ಅಂತ ಹೇಳಿ ಮೊದಲಿಗೆ ಎರಡು ಸಾವಿರ ಹಣ ಹಾಕಿ ಆಶೆ ಹುಟ್ಟಿಸಿದ್ದಾರೆ.
ನಂತರ ಅಕೌಂಟ್ ಫ್ರೀಜ್ ಆಗಿದೆ ಅದು ಒಪನ್ ಆಗಲು ಯುಪಿಐಡಿ ನಂಬರ್ ಗಳನ್ನು ಕಳುಹಿಸಿ ಹಂತ-ಹಂತವಾಗಿ ಒಟ್ಟು 10,57,950ರೂ.ಗಳನ್ನು ಹಾಕಿಸಿಕೊಂಡಿದ್ದಾರೆ.
ಮತ್ತೆ ರಾಕೇಶ್ ಸಿಂಗ್- 9647251753 ಹಾಗೂ ವಿಪಿನ್ ಗುಪ್ತಾ-9733184532 ನಂಬರನಿಂದ ಕರೆ ಮಾಡಿ ನಟರಾಜ್ ಪೆನ್ಸಿಲ್ ಕಂಪನಿಯಿಂದ ಮನೆಯಿಂದಲೇ ಹಣ ಗಳಿಸಬಹುದು ಅಂತ ಹೇಳಿ 2,35,000ಗಳನ್ನು ಹಾಕಿಸಿಕೊಂಡು, ಅಷ್ಟೇ ಅಲ್ಲದೆ ಕೊಟಕ್ ಮಹೀಂದ್ರಾ ಬ್ಯಾಂಕ್ ನಲ್ಲಿ ಫೇಕ್ ಅಕೌಂಟ್ ತೆರೆದು ಬೇರೆದವರಿಗೆ ವಂಚನೆ ಮಾಡಿದ್ದಾರೆ.
ಈ ಕುರಿತು ಗದಗ ಸಿಇಎನ್ ಠಾಣೆಯಲ್ಲಿ it act 2008 U/s-66(d),66(c):IPC 1860 (U/s-420) 0004/2023 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯ ಶಿರಹಟ್ಟಿ ತಾಲೂಕಿನ ನಾದಿಗಟ್ಟಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದ ಆರು ಜನರ ತಂಡವನ್ನು ಶಿರಹಟ್ಟಿ ಪೊಲೀಸರು ಬಂಧಿಸಿದ್ದಾರೆ.
ಪಿಎಸ್ಐ ಈರಪ್ಪ ರಿತ್ತಿ ನೇತೃತ್ವದಲ್ಲಿ ಸಿಬ್ಬಂದಿ ವರ್ಗ ಈ ದಾಳಿ ಮಾಡಿತ್ತು.
ಬಂಧಿತರಿಂದ ನಗದು 1730 ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಕರ್ನಾಟಕ ಪೊಲೀಸ್ ಆ್ಯಕ್ಟ್ 1963(U/s-87) 10/2023 ರಂತೆ ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳಸಾ-ಬಂಡೂರಿ ಡಿ.ಪಿ.ಆರ್ ಜಯ ರೈತ ಹೋರಾಟಗಾರರಿಗೆ ಸಲ್ಲಬೇಕು
ವಿಜಯಸಾಕ್ಷಿ ಸುದ್ದಿ, ನವಲಗುಂದ
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ರಾಜ್ಯದ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು ಅದರಲ್ಲಿ ರೈತರ ಬಂಡಾಯದ ನೆಲವಾದ ನವಲಗುಂದ ಕ್ಷೇತ್ರದಲ್ಲಿಯೂ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಅನಂತಕುಮಾರ ಬುಗಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ಇಲ್ಲಿನ ಲೋಕೊಪಯೋಗಿ ಇಲಾಖೆಯ ನಿರೀಕ್ಷಣಾಲಯದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮತದಾರರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಆಮ್ ಆದ್ಮಿ ಪಕ್ಷ ದೆಹಲಿ ಮತ್ತು ಪಂಚಾಬ್ ರಾಜ್ಯಗಳಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚನೆ ಮಾಡಿ ದೇಶದಲ್ಲಿಯೇ ಮಾದರಿ ಆಡಳಿತ ಮಾಡುತ್ತಿರುವುದು ಸಾಕ್ಷಿಯಾಗಿದೆ. ಇದೇ ಮಾದರಿಯ ಆಡಳಿತವನ್ನು ಕೊಡುವ ಸ್ಪಷ್ಟ ಭರವಸೆಯೊಂದಿಗೆ ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ‘ಜನರ ತೆರಿಗೆ, ಜನರ ಸೇವೆಗೆ’ ಎಂಬ ಘೋಷವಾಕ್ಯದೊಂದಿಗೆ ಸ್ಪರ್ಧಿಸಲಿದ್ದು ಮತದಾರರು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಮುಖಂಡರಾದ ವಿಕಾಸ ಸೊಪ್ಪಿನ ಮಾತನಾಡಿ, ಈ ನಾಡಿನ ರೈತರು ನಿರಂತರ ಹೊರಾಟ, ಜೈಲುವಾಸ, ಪೊಲೀಸರ ಬೂಟಿನೇಟು, ಉಪವಾಸ ಸತ್ಯಾಗ್ರಹದಂತಹ ಚಳುವಳಿ ಮಾಡಿದ ಫಲವಾಗಿ ಮಹದಾಯಿ ಹಾಗೂ ಕಳಸಾ ಬಂಡೂರಿ ಹೋರಾಟಕ್ಕೊಂದು ಜಯ ಸಿಕ್ಕಿದೆ.
ರೈತರ ಹೋರಾಟಕ್ಕೆ ಮಣಿದ ರಾಜ್ಯ ಹಾಗೂ ಕೇಂದ್ರ ಸರ್ಕಾರ ಡಿ.ಪಿ.ಆರ್ ಗೆ ಮಂಜೂರಾತಿ ನೀಡಿವೇ ಹೊರತು ಬಿಜೆಪಿಯವರ ಕಸರತ್ತು ಇದರಲ್ಲಿ ಏನು ಇಲ್ಲ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ನಿಜವಾದ ಹೊರಾಟಗಾರರಿಗೆ ಕಿಂಚಿತ್ತು ಕಿಮ್ಮತ್ತು ಕೊಡದೇ ನಾನೇನೊ ಸಾಧನೆ ಮಾಡಿದ್ದೇನೆಂದು ಚುನಾವಣಾ ಸಂದರ್ಭದಲ್ಲಿ ಲಾಭ ಮಾಡಿಕೊಳ್ಳಲು ಹೊರಟಿರುವುದು ಹಾಸ್ಯಾಸ್ಪದ. ಮುಗ್ದ ರೈತ ಬಾಂಧವರು ಬಂಡ ಬಿಜೆಪಿ ಪಕ್ಷವನ್ನು ನಂಬಬಾರದೆಂದು ಹೇಳಿದರು.
ನವಲಗುಂದ ವಿಧಾನಸಭಾ ಕ್ಷೇತ್ರದ ಸಂಚಾಲಕ ಡಾ.ಎಂ.ಜೆ.ಜೇಡರ ಮಾತನಾಡಿ, ಭ್ರಷ್ಟಾಚಾರ ಮುಕ್ತ ಆಡಳಿತ ಕೊಡುವುದೇ ನಮ್ಮ ಮೂಲ ಉದ್ದೇಶವಾಗಿದೆ. ಪ್ರತಿ ಗ್ರಾಮ ಗ್ರಾಮಗಳಿಗೂ ನಾನು ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಜನರು ಬಿಜೆಪಿ, ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಪಕ್ಷಗಳ ಭರವಸೆಗಳನ್ನು ನಂಬಿ ಬೇಸತ್ತು ಹೋಗಿದ್ದಾರೆ. ಖಂಡಿತವಾಗಿಯು ಈ ಭಾರಿ ಬದಲಾವಣೆ ಮಾಡುವ ಮನಸ್ಥಿತಿ ಹೊಂದಿದ್ದಾರೆ. ಕಾರಣ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸಿ ಜನರ ತೆರಿಗೆ ಹಣ ಜನರ ಸೇವೆಗಾಗಿಯೇ ಇಟ್ಟು, ಗುತ್ತಿಗೆದಾರರ ಬಳಿಯಾಗಲಿ, ಜನರ ಬಳಿಯಾಗಲಿ ಒಂದು ನಯಾಪೈಸೆಯನ್ನು ತೆಗೆದುಕೊಳ್ಳದೇ ಸೇವೆ ಮಾಡುತ್ತೇನೆಂದು ಭರವಸೆ ನೀಡಿದರು.
ಸ್ಥಳಿಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಹಾಂತೇಶ ಕಮತರ, ಹುಬ್ಬಳ್ಳಿ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹಿರೇಮಠ ಉಪಸ್ಥಿತರಿದ್ದರು.