Home Blog Page 3200

ಕೊಪ್ಪಳ ನಗರಸಭೆ: 16.85 ಲಕ್ಷ ರೂ. ಉಳಿತಾಯ ಬಜೆಟ್

0

ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಎರಡು ವರ್ಷಗಳ ನಂತರ ಕೊಪ್ಪಳ ನಗರಸಭೆಯಲ್ಲಿ‌ ಬುಧವಾರ ಸದಸ್ಯರೆದುರು 2022-23ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಲಾಯಿತು. 16.85 ಲಕ್ಷ ರೂಪಾಯಿ ಉಳಿತಾಯ ಬಜೆಟ್‌ ಮಂಡಿಸಲಾಗಿದ್ದು,  ನಗರಸಭೆ ಸದಸ್ಯರು ಕೆಲ ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ಕಂಡು ಬಂತು.

ಸುಮಾರು ಅರ್ಧ ಗಂಟೆ ವಿಳಂಬವಾಗಿ ಆರಂಭಗೊಂಡ ಸಭೆ ಸುಸೂತ್ರವಾಗಿ ನಡೆಯಿತು. ರಾಜಶೇಖರ ಆಡೂರು ಸೇರಿದಂತೆ ಕೆಲ ಸದಸ್ಯರು ಬಜೆಟ್ ಮಂಡನೆ ಮುಗಿದ ಮೇಲೆ ಸಭೆಗೆ ಪ್ರವೇಶಿಸಿದರು.

ಬಜೆಟ್‌ನ ಸಂಕ್ಷಿಪ್ತ ವಿವರ:
ನಗರಸಭೆಗೆ 23.87 ಕೋಟಿ ರೂಪಾಯಿ ರಾಜತ್ವ ಸ್ವೀಕೃತಿಯಾಗಿದ್ದು, 8.31 ಕೋಟಿ ರೂಪಾಯಿ ಬಂಡವಾಳ ಸ್ವೀಕೃತಿ ಮತ್ತು 4.15 ಕೋಟಿ ರೂಪಾಯಿ ಅಸಾಧಾರಣ ಸ್ವೀಕೃತಿಯಾಗಿದ್ದು ಒಟ್ಟಾರೆ ನಗರಸಭೆಗೆ ಬಂದ ಸ್ವೀಕೃತಿ 36.34 ಕೋಟಿ ರೂಪಾಯಿ.

ಹಾಗೆಯೇ ಈ ಸಾಲಿನಲ್ಲಿ ಪಾವತಿಯಾದ ರಾಜಸ್ವ 22.75 ಕೋಟಿ ರೂಪಾಯಿ. 9.26 ಕೋಟಿ ರೂಪಾಯಿ ಬಂಡವಾಳ ಪಾವತಿ ಹಾಗೂ 4.15 ಕೋಟಿ ರೂಪಾಯಿ ಅಸಾಧಾರಣ ಪಾವತಿಯಾಗಿದ್ದು, ಒಟ್ಟಾರೆ‌ ನಗರಸಭೆಯಿಂದ ಪಾವತಿಯಾಗಿದ್ದು 36.17 ಕೋಟಿ ರೂಪಾಯಿ.

ನಗರಸಭೆಯ ಸ್ವೀಕೃತಿ ಮತ್ತು ಪಾವತಿಯನ್ನು ತಾಳೆ ಮಾಡಿದಾಗ 16.85 ಲಕ್ಷ ರೂಪಾಯಿ ಉಳಿತಾಯವಾಗಿದೆ. ಇದರಲ್ಲಿ ಸರಕಾರದ ಅನುದಾನ ಹೊರತುಪಡಿಸಿ ನಗರಸಭೆ ನಿಧಿಗೆ 8.93 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ಪ್ರತಿಭಟನೆ ಹಿಂಪಡೆದ ಬಿಜೆಪಿ; ಕಾಂಗ್ರೆಸ್‌ಗೆ ನುಂಗಲಾರದ ಬಿಸಿತುಪ್ಪ- ಹೈಕಮಾಂಡ್ ಅಂಗಳಕ್ಕೆ ಚೆಂಡು!

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಒಳಒಪ್ಪಂದದಂತೆ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದಿದ್ದು ರಾಜೀನಾಮೆ ಕೊಡುವಂತೆ ಬಿಜೆಪಿ ಪಕ್ಷದವರು ಪುರಸಭೆ ಎದುರು ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದನ್ನು ತಾತ್ಕಾಲಿಕವಾಗಿ ಹಿಂಪಡೆದುಕೊಂಡಿದ್ದಾರೆ.
 

ಈ ಕುರಿತು ಸ್ಪಷ್ಟನೆ ನೀಡಿದ ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಪಿ.ದಾನಪ್ಪಗೌಡರ, ಒಳ ಒಪ್ಪಂದದಂತೆ ಎರಡೂ ಪಕ್ಷದವರಿಗೆ ಅಧಿಕಾರ ಹಂಚಿಕೆ ಮಾಡಲಾಗಿತ್ತು. ಈಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಉಪಾಧ್ಯಕ್ಷರ ಅವಧಿ ಮುಗಿದಿರುವ ಕಾರಣ ರಾಜೀನಾಮೆ ಕೊಡುವಂತೆ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಗೆ ಮಣಿದ ಪುರಸಭೆ ಅಧ್ಯಕ್ಷ ಮಂಜುನಾಥ ಜಾಧವ ರಾಜೀನಾಮೆ ಸಲ್ಲಿಸಿದ್ದಾರೆ.  ಆದರೆ ಉಪಾಧ್ಯಕ್ಷರಾದ ಖೈರುನಬಿ ನಾಶಿಪುಡಿ ಇನ್ನು ರಾಜೀನಾಮೆ ಕೊಡದ ಕಾರಣ ಪ್ರತಿಭಟನೆಯನ್ನು ಮುಂದುವರೆಸಿದ್ದೇವು. ಆದರೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳು ಇರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದೇವೆ ಎಂದರು.
         

ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಂಬ ವಿಶ್ವಾಸದಲ್ಲಿದ್ದೇವೆ. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ ಮುಂದೆ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದೆಂದು ತಿಳಿಸಿದರು.

ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡದ ಕಾರಣ ಖೈರುನಬಿ ನಾಶಿಪುಡಿ ಅವರ ಪುತ್ರ ಸುಲೇಮಾನ ನಾಶಿಪುಡಿ ಅವರನ್ನು ಸಂಪರ್ಕಿಸಿದಾಗ, ನಮ್ಮ ತಾಯಿಯವರು ಊರಲ್ಲಿರದ ಕಾರಣ ರಾಜೀನಾಮೆ ಕೊಟ್ಟಿಲ್ಲ, ಅವರು ಬಂದ ತಕ್ಷಣ ರಾಜೀನಾಮೆ ಕೊಡಿಸುತ್ತೇವೆಂದು ಹೇಳಿದರು.

ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ಬಿಸಿತುಪ್ಪ

ಬಹುಮತ ಇಲ್ಲದ ಸಂದರ್ಭದಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಅಧಿಕಾರ ಹಂಚಿಕೆ ಮಾಡಿಕೊಂಡಿದ್ದವು. ಆದರೆ ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಈಗ ಕಾಂಗ್ರೆಸ್ ಪಕ್ಷದ ಬಲ 17 ಸ್ಥಾನಕ್ಕೇರಿದ್ದು ಸ್ಪಷ್ಟ ಬಹುಮತದಲ್ಲಿದ್ದಾರೆ. ಪಕ್ಷದ ಹಿರಿಯರ ಸಲಹೆಯಂತೆ ಅಧ್ಯಕ್ಷರು ರಾಜೀನಾಮೆ ಸಲ್ಲಿಸಿದ್ದಾರೆ, ಉಪಾಧ್ಯಕ್ಷರು ಸಲ್ಲಿಸಬಹುದು. ಆದರೆ ಅಧಿಕಾರವನ್ನು ಈಗ ಬಿಜೆಪಿಗೆ ಬಿಟ್ಟುಕೊಡುವುದಾದರೂ ಹೇಗೆಂಬ ಪ್ರಶ್ನೆ ಉದ್ಭವಿಸಿದ್ದು ನುಂಗಲಾರದ ಬಿಸಿತುಪ್ಪವಾಗಿದೆ. ಅಧಿಕಾರ ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್ ಪಕ್ಷದ ಮುಖಂಡರು ಯಾರು ಸ್ಪಷ್ಟನೆ ಕೊಡುತ್ತಿಲ್ಲ. ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಕೋಮುವಾದಿ ಬಿಜೆಪಿ ಪಕ್ಷದ ಜೊತೆ ಕೈಜೋಡಿಸಿದರೆ ಸಾರ್ವಜನಿಕ ವಲಯದಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡಬೇಕೆಂಬ ಉದ್ದೇಶದಿಂದಲೇ ಜೆಡಿಎಸ್ ಪಕ್ಷದ 9 ಸದಸ್ಯರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ.

ಈಗ ಬಿಜೆಪಿಯೊಂದಿಗೆ ಈ ಹಿಂದೆ ನುಡಿದಂತೆ ನಡೆದುಕೊಳ್ಳಬೇಕೆ ಅಥವಾ ಸಂಪೂರ್ಣ ಬಹುಮತ ಇರುವ ಕಾರಣ ನಾವೇ ಅಧಿಕಾರದ ಗದ್ದುಗೆ ಏರಬೇಕೆಂಬ ಪ್ರಶ್ನೆ ಕಾಂಗ್ರೆಸ್ ಪಕ್ಷದಲ್ಲಿ ಕಗ್ಗಾಂಟಾಗಿರುವ ಕಾರಣ ಸ್ಥಳೀಯ ನಾಯಕರು ಚೆಂಡನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಳಿ ತೆಗೆದುಕೊಂಡು ಹೋಗಿದ್ದು ಅವರು ಕೊಡುವ ಸೂಚನೆಯಂತೆಯೇ ನಡೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂದು ಕಾಂಗ್ರೆಸ್ ವಲಯದಿಂದ ತಿಳಿದುಬಂದಿದೆ.

ಬಿಜೆಪಿಗೆ ಅಧಿಕಾರ ಸಿಕ್ಕರೆ ನಮ್ಮವರೆ ಸಚಿವರಿದ್ದಾರೆ, ನಮ್ಮದೇ ಡಬಲ್ ಎಂಜಿನ್ ಸರ್ಕಾರವಿದ್ದು ಹೆಚ್ಚು ಅನುದಾನ ತಂದು ಪಟ್ಟಣದ ಅಭಿವೃದ್ಧಿ ಮಾಡುವುದಾಗಿ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿಯವರು ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಕಗ್ಗಂಟನ್ನು ಬಗೆಹರಿಸುವಲ್ಲಿ ನಿಸ್ಸಿಮರಾಗಿರುವ ಬಿಜೆಪಿಯ ಮುಖಂಡ ರಾಯನಗೌಡ ಪಾಟೀಲ ಯಾವ ನಡೆ ಇಡುತ್ತಾರೆಂಬುದು ಬಹು ಚರ್ಚಿತ ವಿಷಯವಾಗಿದೆ.
 
 

ಅತ್ಯಾಚಾರ ಆರೋಪಿಗೆ ಶಿಕ್ಷೆ ಪ್ರಕಟ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ 20 ಸಾವಿರ ರೂಪಾಯಿಗಳ ದಂಡವನ್ನು ವಿಧಿಸಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ತೀರ್ಪು ಪ್ರಕಟಿಸಿದ್ದಾರೆ.

ಕೊಪ್ಪಳದ ಬಸವರಾಜ ಸತ್ಯಪ್ಪ ದೊಡ್ಡಮನಿ ಎಂಬ ವ್ಯಕ್ತಿಯು ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಣ ಮಾಡಿ, ಬೇರೆ ಊರಿಗೆ ಕರೆದೊಯ್ದು ಗೃಹ ಬಂಧನದಲ್ಲಿಟ್ಟು ಅತ್ಯಾಚಾರ ಮಾಡಿದ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಮಹಿಳಾ ಠಾಣೆ ಪಿ.ಐ ಮೌನೇಶ್ವರ ಮಾಲಿಪಾಟೀಲ್ ಅವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಆರೋಪಿಯ ಮೇಲಿನ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.20 ಸಾವಿರಗಳ ದಂಡವನ್ನು ವಿಧಿಸಲಾಗಿದೆ. ದಂಡದ ಮೊತ್ತದಲ್ಲಿ ರೂ.10 ಸಾವಿರಗಳನ್ನು ಬಾಧಿತಳಿಗೆ ಪರಿಹಾರ ರೂಪದಲ್ಲಿ ವಿತರಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಶಾಲೆಯ ಕಟ್ಟಡ ಉಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ

0

ವಿಜಯಸಾಕ್ಷಿ ಸುದ್ದಿ,
ಕೊಪ್ಪಳ: ಕೊಪ್ಪಳದಲ್ಲಿ 100 ವರ್ಷಕ್ಕೂ ಹೆಚ್ಚಿನ ಇತಿಹಾಸ ಇರುವ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ (MHPS) ಶಾಲೆಯ ಕಟ್ಟಡ ಉಳಿಸುವಂತೆ ಶಾಲೆಯ ಹಳೇ ವಿದ್ಯಾರ್ಥಿಗಳ ಬಳಗ ಮಂಗಳವಾರ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಈ ಶಾಲಾ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು ಹೈದ್ರಾಬಾದ್ ನಿಜಾಮ್ ಆಳ್ವಿಕೆಯ ಕಾಲದಲ್ಲಿ ಉಪವಿಭಾಗಿಧಿಕಾರಿಗಳ ಬಂಗಲೆಯಾಗಿತ್ತು. ಈ ಕಟ್ಟಡ ನೆಲಸಮಗೊಳಿಸಿ ಅಲ್ಲಿ ಗುರುಭವನ ಕಟ್ಟಲು ಉದ್ದೇಶಿಸಿರುವ ನಿರ್ಧಾರ ಕೂಡಲೇ ಕೈ ಬಿಡಬೇಕು. ಕಟ್ಟಡವನ್ನು ಸಂರಕ್ಷಿಸಿ ಶೈಕ್ಷಣಿಕ ಚಟುವಟಿಕೆಗೆ ಕಟ್ಟಡ ಬಳಕೆಯಾಗಲಿ ಎಂದು ಆಗ್ರಹಿಸಿದರು.

100 ವರ್ಷಕ್ಕಿಂತ ಹೆಚ್ಚು ಹಳೆಯದಾದ ಕಟ್ಟಡ ಉಳಿಸಲು ಕಾನೂನಿನಲ್ಲಿ ಅವಕಾಶ ಇದೆ. ಹೈ.ಕ.ವಿಮೋಚನೆಗೆ ಮೊದಲ ಹೆಜ್ಜೆಯಾಗಿ ಅಂದಿನ ಭಾರತ ಸರಕಾರ ಇದೇ ಬಂಗಲೆಯನ್ನು ವಶಪಡಿಸಿಕೊಂಡಿತ್ತು. ಹಳೆಯ ಕಟ್ಟಡಗಳನ್ನು ಐತಿಹಾಸಿಕ ಕಮಾನುಗಳನ್ನು ಉಳಿಸಿಕೊಳ್ಳಬೇಕು. ಈ ಕಟ್ಟಲು ಉದ್ದೇಶಿಸಿರುವ ಗುರುಭವನ ಬೇರೆ ಕಡೆ ನಿರ್ಮಿಸಬೇಕು ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳು ಒತ್ತಾಯಿಸಿದರು.

ಕಟ್ಟಡವನ್ನು ನೆಲಸಮಗೊಳಿಸುವ ಬದಲು, ಅದನ್ನು ಸಂರಕ್ಷಿಸಿ ಅಲ್ಲಿ ಹೈದ್ರಾಬಾದ್ ವಿಮೋಚನೆಯ ಹೋರಾಟದ ಮ್ಯೂಸಿಯಂ, ಗ್ರಂಥಾಲಯ, ಆವರಣದಲ್ಲಿ ಸುಂದರ ಉದ್ಯಾನ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಅಮರೇಶ ಮುರಳಿ, ಬಸವರಾಜ ಕರುಗಲ್, ಡಿ.ಗುರುರಾಜ, ನಾಗರಾಜ ನಾಯಕ ಡೊಳ್ಳಿನ್, ಗಿರೀಶ್ ಪಾನಘಂಟಿ, ಮುನೀರ್ ಸಿದ್ದಕಿ, ರಫೀಕ್, ಮಂಜುನಾಥ ಸೊಂಡಲಿ, ಕಾಶೀನಾಥ ಹಂಚಿನಾಳ, ಸಚ್ಚಿದಾನಂದ, ಶ್ರೀಕಾಂತ್ ಭದ್ರಾಪುರ, ಹುಸೇನ್ ಪಾಷಾ, ಜಯರಾಮರಡ್ಡಿ ತೋಟದ ಮತ್ತಿತರರು ಇದ್ದರು.

ಎಸ್ಎಸ್ಎಲ್ಸಿ ಪರೀಕ್ಷೆ; ಗುಲಾಬಿ ಹೂ ನೀಡಿ ಸ್ವಾಗತಿಸಿದ ಸಚಿವ ಮುನೇನಕೊಪ್ಪ, ಸೌಹಾರ್ದತೆ  ಮೆರೆದ ವಿದ್ಯಾರ್ಥಿಗಳು

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತಮ್ಮೋಳಗಿನ ಭಯ ಒತ್ತಡಗಳನ್ನು ಬದಿಗಿಟ್ಟು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ ಉತ್ತಮ ಅಂಕಗಳನ್ನು ಗಳಿಸುವುದರ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದರ ಮೂಲಕ ಸ್ವಾಗತಿಸಿದರು.

ಸೋಮವಾರ ಕ್ಷೇತ್ರದ ಕುಸುಗಲ್ಲ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿ ಶುಭ ಹಾರೈಸಿದರು.

ನವಲಗುಂದ ಬಾಲಕ ಬಾಲಕಿಯರ ಮಾಡೆಲ್ ಹೈಸ್ಕೂಲ್ ಪರೀಕ್ಷಾ ಕೇಂದ್ರಗಳಲ್ಲಿ ತಹಶೀಲ್ದಾರ್ ನವೀನ ಹುಲ್ಲೂರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಎಸ್.ಮಾಯಾಚಾರಿ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವುದ ಮೂಲಕ ಸ್ವಾಗತಿಸಿಕೊಂಡರು.

ಪರೀಕ್ಷಾ ಅವಧಿ ಮುಗಿದ ನಂತರ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಮಾಯಾಚಾರಿ, ಕೊವಿಡ್ ಮಾರ್ಗಸೂಚಿಯಂತೆಯೇ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಗೆ ಹಾಜರಾಗಲು ಒಟ್ಟು 2588 ವಿದ್ಯಾರ್ಥಿಗಳು ನೊಂದಾಯಿಸಲ್ಪಟ್ಟಿದ್ದರು ಇದರಲ್ಲಿ 10 ಪರೀಕ್ಷಾ ಕೇಂದ್ರಗಳಲ್ಲಿ 24 ವಿದ್ಯಾರ್ಥಿಗಳು ಮಾತ್ರ ಗೈರಾಗಿದ್ದಾರೆ.
ಬಹು ಚರ್ಚಿತ ಹಿಜಾಬ್ ಧರಿಸುವ ವಿಚಾರವಾಗಿ ಯಾವೊಬ್ಬ ಮುಸ್ಲಿಂ ವಿದ್ಯಾರ್ಥಿನಿಯು ಗೈರಾಗದೇ ಸಾಮರಸ್ಯ ಮೆರೆದಿದ್ದು ಈ ಕ್ಷೇತ್ರದ ಕೋಮು ಸೌಹಾರ್ದತೆಗೆ ಹಿಡಿದ ಕನ್ನಡಿಯಾಗಿದೆ. ಮುನ್ನೆಚ್ಚರಿಕೆಯಾಗಿ ಎಲ್ಲ ವಿದ್ಯಾರ್ಥಿಗಳಿಗೂ ಪರೀಕ್ಷಾ ಪೂರ್ವದಲ್ಲಿಯೇ ಮೇಲಾಧಿಕಾರಿಗಳು ಹಾಗೂ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಮಾರ್ಗದರ್ಶನದಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಭವಿಷ್ಯದ ಬಗ್ಗೆ ತಿಳುವಳಿಕೆ ನೀಡಿದ ಪರಿಣಾಮವೇ ಮಕ್ಕಳು ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದಿದ್ದು ಹೆಮ್ಮೆ ಎನಿಸುತ್ತದೆ ಎಂದು ಬಿ.ಎಸ್.ಮಾಯಾಚಾರಿ ಹೇಳಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ ಒದಗಿಸಲಾಗಿತ್ತು. 

ಪರೀಕ್ಷಾ ಕೇಂದ್ರಕ್ಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಭೇಟಿ

ವಿಜಯಸಾಕ್ಷಿ ಸುದ್ದಿ, ನರಗುಂದ:

ತಾಲೂಕಿನ ಚಿಕ್ಕನರಗುಂದ ಗ್ರಾಮದ ಕೆಪಿಎಸ್ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮುತ್ತು ರಾಯರಡ್ಡಿ ಭೇಟಿ ನೀಡಿ, ಪ್ರೌಢಶಾಲೆ ವತಿಯಿಂದ ನೀಡಿದ ಪೆನ್, ಮಾಸ್ಕ್‌ಗಳನ್ನು ಪರೀಕ್ಷಾರ್ಥಿಗಳಿಗೆ ವಿತರಿಸಿ ಶುಭ ಹಾರೈಸಿದರು.

ನರಗುಂದ ಪೊಲೀಸ್ ಠಾಣೆಯ ಸಿಪಿಐ ಜಯಂತ್ ಗೌಳಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ತಿಳಿಸಿದರು.

ಸೋಮವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗುವ ಹಿನ್ನೆಲೆಯಲ್ಲಿ ರವಿವಾರವೇ ಗ್ರಾಮ ಪಂಚಾಯತಿ ವತಿಯಿಂದ ಪರೀಕ್ಷಾ ಕೇಂದ್ರದ ಕೊಠಡಿಗಳಿಗೆ ಗ್ರಾಪಂ ಪಿಡಿಒ ಶೈನಾಜ್ ಮುಜಾವರ ಅವರು ಸಿಬ್ಬಂದಿಗಳಿಂದ ಸ್ಯಾನಿಟೈಸ್ ಮಾಡಿಸಿ, ಸ್ವಚ್ಚಗೊಳಿಸಿದ್ದರು.

ಇನ್ನು, ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮುಂಜಾಗೃತಾ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಶಾಂತ್ ಮಲ್ಲಾಪೂರ ಅವರು ಪ್ರತಿ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಒಳಪಡಿಸಿದರು. ಅದರಂತೆ, ಸೋಮವಾರ ನಡೆದ ಪರೀಕ್ಷೆ ಶಾಂತಿ ಹಾಗೂ ನಿರ್ಭೀತಿಯಿಂದ ನಡೆಯಲು ಸಹಕರಿಸಿದ ಪರೀಕ್ಷಾ ಮೇಲ್ವಿಚಾರಕರು, ಮುಖ್ಯ ಅಧೀಕ್ಷಕರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಸಿಬ್ಬಂದಿ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಮುತ್ತು ರಾಯರಡ್ಡಿ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಐ.ಎಂ.ಹುರಕಡ್ಲಿ, ಎಸ್‌ಡಿಎಂಸಿ ಅಧ್ಯಕ್ಷ ಶರಣಬಸಪ್ಪ ಹಳೇಮನಿ ಸೇರಿದಂತೆ ಅನೇಕರು ಇದ್ದರು.

ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಮಂಜು ಜಾಧವ್ ರಾಜೀನಾಮೆ

ಕೊನೆಗೂ ರಾಜೀನಾಮೆ ಸಲ್ಲಿಸಿದ ಪುರಸಭೆ ಅಧ್ಯಕ್ಷ ಮಂಜು ಜಾಧವ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ತೀವ್ರ ಕುತೂಹಲ ಮೂಡಿಸಿದ್ದ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ವಿಷಯದಲ್ಲಿ ಕೊನೆಗೂ ಅಧ್ಯಕ್ಷ ಮಂಜು ಜಾಧವ್ ಧಾರವಾಡ ಜಿಲ್ಲಾ ಉಪವಿಭಾಗಾಧಿಕಾರಿ ಅಶೋಕ ತೇಲಿ ಅವರಿಗೆ ಸೋಮವಾರ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು ಪ್ರಕರಣ ಸುಖಾಂತ್ಯ ಕಂಡಂತಾಗಿದೆ.

ಈ ಹಿಂದೆ ಯಾರಿಗೂ ಬಹುಮತ ಇಲ್ಲದ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಒಳ ಒಪ್ಪಂದ ಮಾಡಿಕೊಂಡು 30 ತಿಂಗಳ ಅಧಿಕಾರವಧಿಯಲ್ಲಿ ಮೊದಲು 15 ತಿಂಗಳು ಕಾಂಗ್ರೆಸ್ ಹಾಗೂ ಉಳಿದ 15 ತಿಂಗಳು ಬಿಜೆಪಿಯವರು ಆಡಳಿತ ಮಾಡುವುದಾಗಿ ಹಿರಿಯರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಂಡಿದ್ದರು.

ಆ ಒಪ್ಪಂದದಂತೆ ಈಗ ಅಧ್ಯಕ್ಷ ಮಂಜು ಜಾಧವ್ ಅವರ ಅಧಿಕಾರದ ಅವಧಿ ಮುಗಿದಿದ್ದು ರಾಜೀನಾಮೆ ಕೊಡುವಂತೆ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು.
ಆದರೆ ಇದಕ್ಕೆ ಒಪ್ಪದ ಮಂಜು ಜಾಧವ್ ಪಕ್ಷದ ಹಿರಿಯರು ಒಳ ಒಪ್ಪಂದ ಏನು ಮಾಡಿಕೊಂಡಿದ್ದಾರೆಂಬುದು ನನಗೆ ಗೊತ್ತಿಲ್ಲ, ಈಗ ನಮ್ಮ ಪಕ್ಷಕ್ಕೆ 17 ಸದಸ್ಯರ ಬೆಂಬಲವಿದ್ದು ಸಂಪೂರ್ಣ ಬಹುಮತ ಹೊಂದಿರುವ ಕಾರಣ ರಾಜೀನಾಮೆ ಕೊಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಪಕ್ಷದ ಹಿರಿಯರು ರಾಜೀನಾಮೆ ಕೊಡುವಂತೆ ಸೂಚನೆ ನೀಡಿದರೆ ಮಾತ್ರ ಕೊಡುವುದಾಗಿ ಹೇಳಿದ್ದರು.


ಕಾಂಗ್ರೆಸ್ ಪಕ್ಷದವರು ಸಮಯ ಕಳೆಯುತ್ತಿದ್ದಾರೆ ಹೊರತು ರಾಜೀನಾಮೆ ಕೊಡುತ್ತಿಲ್ಲವಾದ ಕಾರಣ ಬಿಜೆಪಿ ಸದಸ್ಯರು ಹಾಗೂ  ಪಕ್ಷದ ಮುಖಂಡರು ಪುರಸಭೆ ಎದುರು ನಿರಂತರ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದರು. ಅಷ್ಟೇ ಅಲ್ಲದೇ ರಾಜೀ ಸಂಧಾನದ ಸಂದರ್ಭದಲ್ಲಿ ಮುತುವರ್ಜಿ ವಹಿಸಿದ್ದ ಮಾಜಿ ಸಚಿವ ಕೆ.ಎನ್.ಗಡ್ಡಿ ಅವರನ್ನು ಒತ್ತಾಯಿಸಿದ್ದರು.

ಹೊಸದಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ಬಂದಿರಬಹುದು. ಆದರೆ ವಚನಭ್ರಷ್ಟರು ಎನಿಸಿಕೊಳ್ಳುವುದಕ್ಕಿಂತ ಕೊಟ್ಟ ಮಾತಿನಂತೆ ನಡೆದುಕೊಳ್ಳುವುದು ಒಳಿತು ಎಂದು ಸಲಹೆ ನೀಡಿದ್ದರಿಂದ ಮಂಜು ಜಾಧವ್ ಅನಿವಾರ್ಯವಾಗಿ ರಾಜೀನಾಮೆ ಸಲ್ಲಿಸಿ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ.

ಈ ಮೊದಲು ಜೆ.ಡಿ.ಎಸ್ 9, ಕಾಂಗ್ರೆಸ್ 7, ಬಿಜೆಪಿ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದರು. ಬದಲಾದ ರಾಜಕೀಯದಲ್ಲಿ ಜೆಡಿಎಸ್ ಮುಖಂಡ ಎನ್.ಎಚ್.ಕೋನರಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವ ಕಾರಣ ಅವರ ಜೊತೆಗಿದ್ದ ಪುರಸಭೆ ಸದಸ್ಯರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದು ಈಗ ಕಾಂಗ್ರೆಸ್ ಬಲ 17 ಕ್ಕೆ ಏರಿಕೆಯಾಗಿದೆ.  ಬಿಜೆಪಿ ಬಳಿ ಕೇವಲ 6 ಸದಸ್ಯರಿದ್ದು ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಭಾರಿ ಮಳೆ ಗಾಳಿಗೆ ಧರೆಗುರುಳಿದ ಮರಗಳು

0

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಸಂಜೆ ಸುರಿದ ಭಾರಿ ಮಳೆ ಸಹಿತ ಬಿರುಗಾಳಿಗೆ ಪಟ್ಟಣದ ಜನನಿಬೀಡ ಪ್ರದೇಶದಲ್ಲಿ ಹೆಚ್ಚು ಮರಗಳು ನೆಲಕ್ಕುರುಳಿದ ಘಟನೆ ಭಾನುವಾರ ಸಂಜೆ ಸಂಭವಿಸಿದೆ.
ಸಂಜೆ ಬೀಸಿದ ಬಿರುಗಾಳಿಗೆ ಪಟ್ಟಣದ ಮಿನಿ ವಿಧಾನಸೌದ, ಮಾಡೆಲ್ ಹೈಸ್ಕೂಲ್ ಆವರಣ ಹಾಗೂ ಲಿಂಗರಾಜ ವೃತ್ತದ ಬಳಿಯ ರೈತ ಭವನದ ಮುಂದೆ ಗಿಡಗಳು ನೆಲಕ್ಕುರಳಿದ್ದು ಕಂಡುಬಂತು.

ಇದರಿಂದಾಗಿ ಘಟನಾ ಸ್ಥಳಗಳಿಗೆ ಆಗಮಿಸಿದ್ದ ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬದ ಮೇಲೆ ಬಿದ್ದಿದ್ದ ಮರಗಳನ್ನು ತ್ವರಿತವಾಗಿ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಕಂಡುಬಂತು.

ಆದರೂ 4 ಗಂಟೆಗೂ ಹೆಚ್ಚುಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು ಕಂಡುಬಂತು.

ಬಿಂಕದಕಟ್ಟಿ ಝೂದಲ್ಲಿ ಸಿಬ್ಬಂದಿ ಮೇಲೆ ಮೊಸಳೆ ದಾಳಿ

ವಿಜಯಸಾಕ್ಷಿ ಸುದ್ದಿ, ಗದಗ:

ತಾಲೂಕಿನ ಬಿಂಕದಕಟ್ಟಿ ಮೃಗಾಲಯದಲ್ಲಿ ಮೊಸಳೆ ಕಚ್ಚಿ ಮೃಗಾಲಯದ ಪ್ರಾಣಿಪಾಲಕ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ.

ಗದಗ ತಾಲೂಕಿನ ಬಿಂಕದಕಟ್ಟಿ ಮೂಲದ ಮೃತ್ಯುಂಜಯ ಬಸಯ್ಯ ಹಿರೇಮಠ ಎಂಬ ಪ್ರಾಣಿಪಾಲಕ ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಎಂದಿನಂತೆ ಶನಿವಾರ ಮೊಸಳೆ ಮನೆ ಸ್ವಚ್ಚಗೊಳಿಸಲು ಹೋದಾಗ ದೊಡ್ಡ ಮೊಸಳೆ ಪ್ರಾಣಿಪಾಲಕ ಮೃತ್ಯುಂಜಯ ಅವರ ಮೇಲೆ ದಾಳಿ‌ ನಡೆಸಿ ತಲೆಗೆ ಕಚ್ಚಿ ಗಾಯಗೊಳಿಸಿದೆ. ಈ ವೇಳೆ ಅಲ್ಲಿಯೇ ಇದ್ದ ಇನ್ನಿತರ ಸಿಬ್ಬಂದಿಗಳು ಕಟ್ಟಿಗೆಯಿಂದ ಮೊಸಳೆಗೆ ಹೊಡೆದು ಬಿಡಿಸಿದ್ದಾರೆ‌. ಬಡ ಕುಟುಂಬದ ಮೃತ್ಯುಂಜಯ ಅವರು ಬಿಂಕದಕಟ್ಟಿ‌ ಮೃಗಾಯಲದಲ್ಲಿ ಕಳೆದ 20 ವರ್ಷಗಳಿಂದ ‌ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ‌‌.

ಈ ಬಗ್ಗೆ ಪ್ರತಿಕ್ರಿಯಿಸಿದ ಆರ್ ಎಫ್ ಒ ಚೈತ್ರಾ ಮೆಣಸಿನಕಾಯಿ, ‘ಗದಗ ಮೃಗಾಲಯದಲ್ಲಿ ಪ್ರಾಣಿ ಪಾಲಕ ಮೃತ್ಯುಂಜಯ ಅವರು ಮೊಸಳೆ ಮನೆ ಸ್ವಚ್ಛಗೊಳಿಸಲು ಹೋದಾಗ ಮೊಸಳೆ ದಾಳಿ ಮಾಡಿದ್ದು, ತಕ್ಷಣ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. 20 ವರ್ಷದಿಂದ ಮೃತ್ಯುಂಜಯ ಅವರೇ ಮೊಸಳೆ ಮನೆ ಸ್ವಚ್ಚಗೊಳಿಸುವುದು, ಮೊಸಳೆಗೆ ಆಹಾರ ನೀಡುವುದನ್ನು ಮಾಡುತ್ತಿದ್ದರು. ಯಾವತ್ತೂ ಹೀಗೆ ಆಗಿರಲಿಲ್ಲ. ಆದರೆ, ದುರದೃಷ್ಟವಶಾತ್ ಶನಿವಾರ ಈ ಘಟನೆ ನಡೆದಿದೆ’ ಎಂದರು.

‘ಮೃಗಾಲಯದಲ್ಲಿರುವ ಮೊಸಳೆ ಮನೆಯಲ್ಲಿ ಎರಡು ಭಾಗ ಮಾಡಲಾಗಿದೆ. ಒಂದು ಭಾಗಕ್ಕೆ ಮೊಸಳೆಯನ್ನು ಸ್ಥಳಾಂತರಿಸಿದ ಮೇಲೆಯೇ ಆ ಮನೆಯನ್ನು ಸ್ಪಚ್ಚಗೊಳಿಸಲಾಗುತ್ತದೆ. ಆದರೆ, ಮೃಗಾಲಯದಲ್ಲಿ ಇವತ್ತು ಬಹಳ ಗದ್ದಲ ಇದ್ದಿದ್ದರಿಂದ ಅವರೊಬ್ಬರೆ ಸ್ವಚ್ಛಗೊಳಿಸಲು ಹೋಗಿದ್ದರು. ಈ ವೇಳೆ ದೊಡ್ಡ‌ ಮೊಸಳೆ ದಾಳಿ ಮಾಡಿದೆ. ಇಪ್ಪತ್ತು ವರ್ಷಗಳಿಂದ ಕೆಲಸ‌ ಮಾಡುತ್ತಿರುವುದರಿಂದ ಜಾಗೃತಿ ವಹಿಸದೆ ನಿಷ್ಕಾಳಜಿ ತೋರಿರಬಹುದು. ಆದರೆ, ಈ ಘಟನೆ ಹೇಗಾಯಿತು ಎಂಬುವುದರ ಬಗ್ಗೆ ಮಾಹಿತಿ ತೆಗೆದುಕೊಳ್ಳಲಾಗಿದೆ’ ಎಂದು ತಿಳಿಸಿದರು.

‘ಕಳೆದ ಇಪ್ಪತ್ತು ವರ್ಷಗಳಿಂದ ಮೃತ್ಯುಂಜಯ ಅವರೇ ಮೊಸಳೆ ‌ಮನೆ ಸ್ವಚ್ಚಗೊಳಿಸುತ್ತಾ ಬಂದಿದ್ದಾರೆ. ಶನಿವಾರ ಸ್ವಚ್ಛಗೊಳಿಸಲು ಹೋದಾಗ ಮನೆಯಲ್ಲಿದ್ದ ಹುಲ್ಲಿನ ಮೇಲಿದ್ದ‌ ಮೊಸಳೆ ದಾಳಿ‌ ನಡೆಸಿ ಗಾಯಗೊಳಿಸಿದ್ದು, ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಸದ್ಯ ಆರೋಗ್ಯವಾಗಿದ್ದಾರೆ’ ಎಸಿಎಫ್ ಪರಿಮಳ ತಿಳಿಸಿದರು.

ಅಕ್ರಮ ಮರಳು ಸಾಗಾಟ; ನವಲಗುಂದ ಪೊಲೀಸರ ವಿರುದ್ಧ ಲಾರಿ ಮಾಲಿಕರ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ನವಲಗುಂದ:

ಮರಳು ಸಾಗಿಸಲು ಅಧಿಕೃತ ದಾಖಲೆಗಳನ್ನು ಹೊಂದಿರುವ ಲಾರಿಗಳನ್ನು ಹಿಡಿದು ಪ್ರಕರಣ ದಾಖಲಿಸುವುದು, ಪರವಾನಿಗೆ ಇಲ್ಲದೇ ಮರಳು ಸಾಗಿಸುವ ಲಾರಿಗಳನ್ನು ಹಿಡಿದು ತಮಗಿಷ್ಟ ಬಂದಂತೆ ಪೊಲೀಸ್ ಇಲಾಖೆಯವರು ಬಿಟ್ಟು ಕಳಿಸುವುದನ್ನು ಖಂಡಿಸಿ ಲಾರಿ ಹಾಗೂ ಟಿಪ್ಪರ್ ಮಾಲಿಕರ ಸಂಘದವರು ಪೊಲೀಸ್ ಠಾಣೆಯ ಎದುರು ಶನಿವಾರ ಪ್ರತಿಭಟನೆ ಮಾಡಿದರು.
     

ಮರಳು ಸಾಗಿಸಲು ಪರವಾನಿಗೆ ಹೊಂದಿರದ ಹಾಗೂ ಹೇವಿ ಲೋಡ್ ಹಾಕಿಕೊಂಡು ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದನ್ನು (ಕೆಎ26 ಎ 5742) ಪೊಲೀಸ್ ಅಧಿಕಾರಿಗಳು ಶುಕ್ರವಾರ ರಾತ್ರಿ ಹಿಡಿದು ಯಾವುದೇ ಪ್ರಕರಣವನ್ನು ದಾಖಲಿಸದೇ ಮೌಖಿಕವಾಗಿ ಮಾತುಕತೆ ನಡೆಸಿ ಬಿಟ್ಟು ಕಳುಹಿಸುತ್ತಿದ ಸಂದರ್ಭದಲ್ಲಿ ಸ್ಥಳೀಯ ಲಾರಿ ಹಾಗೂ ಟಿಪ್ಪರ್ ಮಾಲಿಕರ ಸಂಘದವರು ಪೊಲೀಸ್ ಠಾಣೆಯ ಎದುರು ಲಾರಿ ತಡೆದು ಪ್ರತಿಭಟನೆ ನಡೆಸಿದರು.

ಪೊಲೀಸ್ ಅಧಿಕಾರಿಗಳು ತಮಗಿಷ್ಟ ಬಂದಂತೆ ಮರಳು ಸಾಗಿಸುವ ಲಾರಿಗಳನ್ನು ಹಿಡಿಯುತ್ತಾರೆ, ಮಾತುಕತೆ ಸಫಲವಾದರೆ ಬಿಟ್ಟು ಕಳಿಸುತ್ತಾರೆ, ಮಾತುಕತೆ ಸಫಲವಾಗದಿದ್ದರೆ ಪ್ರಕರಣ ದಾಖಲಿಸುತ್ತಿದ್ದು, ಇದು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಅಧಿಕೃತ ಪರವಾನಿಗೆ ಹೊಂದಿರುವ ಪ್ರಾಮಾಣಿಕ ಟಿಪ್ಪರ್ ಮಾಲಿಕರಿಗೆ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಪೊಲೀಸರ ವಿರುದ್ದ ಹರಿಹಾಯ್ದರು. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಬಂದು ನ್ಯಾಯ ಒದಗಿಸುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ಪಟ್ಟು ಹಿಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಪಿಐ ಚಂದ್ರಶೇಖರ ಮಠಪತಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ್‍ನ ದಾಖಲೆಗಳನ್ನು ಪರಿಶೀಲಿಸಿದಾಗ ಮರಳು ಸಾಗಿಸುವ ಯಾವುದೇ ಪರವಾನಿಗೆ ಹೊಂದಿರದ ಕಾರಣ ಗಣಿ ಮತ್ತು ಭೂವಿಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಹೇಳಿ ಟಿಪ್ಪರನ್ನು ಪೊಲೀಸ್ ವಶಕ್ಕೆ ಪಡೆದುಕೊಂಡ ಘಟನೆ ನಡೆಯಿತು.

ಪ್ರತಿಭಟನೆಯಲ್ಲಿ ಲಾರಿ ಹಾಗೂ ಟಿಪ್ಪರ್ ಮಾಲಿಕರ ಸಂಘದ ಗೌರವಾಧ್ಯಕ್ಷ ರಾಜೇಸಾಬ ಹಂಚಿನಾಳ, ಅಧ್ಯಕ್ಷ ಖಾಜೆಸಾಬ ಹಂಚಿನಾಳ, ಉಪಾಧ್ಯಕ್ಷ ಸಿದ್ದಪ್ಪ ಹಿರಶೆಡ್ಡಿ, ಕಾರ್ಯದರ್ಶಿ ಆನಂದ ಕುಮ್ಮಿ, ಬಸವರಾಜ ಕರಮಳ್ಳಿ, ಲಿಯಾಕಲ್ ಕಾಸ್ತರ, ಹೈದರಲಿ ಜಮಖಾನ, ಸಿದ್ದಪ್ಪ ಮೇಲಿನಮನಿ ಪಾಲ್ಗೊಂಡಿದ್ದರು.

error: Content is protected !!