ದೇವಸ್ಥಾನದಲ್ಲಿನ ನಿರ್ಬಂಧ ಮರಳಿ ತೆಗೆದುಕೊಳ್ಳಿ, ಇಲ್ಲವಾದರೆ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಚಿಂಚಲಿ ಗ್ರಾಮದಲ್ಲಿ ಮುತಾಲಿಕ್ ಮಾತನಾಡಿ, ಮಸೀದಿ, ಚರ್ಚ್‌ಗಳಿಗಿಲ್ಲದ ನಿರ್ಬಂಧ ದೇವಸ್ಥಾನಗಳಿಗೇಕೆ ಎಂದು ಪ್ರಶ್ನಿಸಿದರು.
ಚಿಂಚಲಿಯ ಪ್ರಸಿದ್ಧ ಮಾಯಕ್ಕದೇವಿ ದೇವಸ್ಥಾನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯದಿಂದ ಬರುವ ಭಕ್ತರಿಗೆ ಅವಕಾಶ ನೀಡಬೇಕು. ತಕ್ಷಣ ದೇವಸ್ಥಾನದ ಮೇಲಿನ ನಿರ್ಬಂಧ ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
ಮಸೀದಿಗಳಲ್ಲಿ ನಮಾಜ್, ಚರ್ಚಗಳಲ್ಲಿ ಪ್ರಾರ್ಥನೆ ನಡೆಯುತ್ತಿದೆ. ಆದರೆ, ದೇವಸ್ಥಾನಗಳಿಗೆ ಏಕೆ ತೊಂದರೆ ನೀಡುತ್ತಿದ್ದೀರಿ. ಬಾರ್, ಹೋಟೆಲ್, ಸಂತೆಗಳೆಲ್ಲವೂ ಓಪನ್ ಇವೆ. ಎಲ್ಲವನ್ನೂ ಬಂದ್‌ಗೊಳಿಸಿ ಲಾಕ್‌ಡೌನ್ ಮಾಡಿ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು.
ವಿಜಯಸಾಕ್ಷಿ ಸುದ್ದಿ, ಗದಗ: ಖಾತೆ ಹಂಚಿಕೆ ಮತ್ತು ಬದಲಾವಣೆ ಮುಖ್ಯಮಂತ್ರಿಗಳ ಪರಾಮಾಧಿಕಾರ. ನನಗೆ ಯಾವುದೇ ಖಾತೆ ಕೊಟ್ಟರೂ, ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಸ್ಪಷ್ಟಪಡಿಸಿದರು.
ಈ ಕುರಿತು ವಿಜಯಸಾಕ್ಷಿ ಪತ್ರಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಮೊದಲಿದ್ದ ಗಣಿ ಮತ್ತು ಭೂ ವಿಜ್ಞಾನ ಖಾತೆಯಲ್ಲೂ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದು, ಸದ್ಯ ಇದರ ಬದಲು ಯಾವುದೇ ಖಾತೆಯಾದರೂ ಸರಿ ಅದೇ ರೀತಿ ಅಚ್ಚುಕಟ್ಟಾಗಿ ನಿಭಾಯಿಸುತ್ತೇನೆ. ಖಾತೆ ಬದಲಾವಣೆ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದರು.
ಖಾತೆ ಬದಲಾವಣೆ ಬಗ್ಗೆ ಅಸಮಾಧಾನವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ‘ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ಏನೇ ಹಂಚಿಕೊಳ್ಳುವುದಿದ್ದರೂ ಪಕ್ಷದೊಳಗೆ ಚರ್ಚೆ ಮಾಡುತ್ತೇನೆ ಎಂದು ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಸದ್ಯ ಸಿ.ಸಿ ಪಾಟೀಲ್ ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಖಾತೆಯ ಬದಲು ಸಣ್ಣ ಕೈಗಾರಿಕೆ ಮತ್ತು ವಾರ್ತಾ ಇಲಾಖೆ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
*ಅಮೃತಸಿಟಿ ಯೋಜನೆಯಡಿ 1.5 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ *ಜನರ ಕಣ್ಣಿಗೆ ಮಣ್ಣೆರಚಲು ಸಜ್ಜಾದ ಅಧಿಕಾರಿಗಳು *ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಿ: ಸ್ಥಳೀಯರು
ದುರಗಪ್ಪ ಹೊಸಮನಿ ವಿಜಯಸಾಕ್ಷಿ ವಿಶೇಷ, ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಅಮೃತಸಿಟಿ ಯೋಜನೆಯಡಿ ಹಲವಾರು ಕಾಮಗಾರಿಗಳನ್ನು ಕೈಗೊಂಡು ವರ್ಷಗಳೇ ಉರುಳಿದರೂ, ಬಹುತೇಕ ಕಡೆ ಕಾಮಗಾರಿ ಆಮೆ ವೇಗದಲ್ಲಿ ಸಾಗುತ್ತಿದೆ. ಕ್ರಿಯಾ ಯೋಜನೆಯಲ್ಲಿದ್ದಂತೆ ಕಾಮಗಾರಿ ನಡೆಯದೆ ಅಕ್ರಮಕ್ಕೆ ನಗರಸಭೆ ಅಧಿಕಾರಿಗಳು ಆಸ್ಪದ ನೀಡುತ್ತಿದ್ದಾರೆ ಎಂದು ಅವಳಿ ನಗರದ ಜನತೆ ಆರೋಪಿಸುತ್ತಿದ್ದಾರೆ.
ನಗರದ ಹಾತಲಗೇರಿ ನಾಕಾದಲ್ಲಿ ಬರುವ ರಾಜ ಕಾಲುವೆಗೆ ಸುಮಾರು 3-4 ಕಿ.ಮೀ. ವ್ಯಾಪ್ತಿಯ ಪ್ರದೇಶದಿಂದ ನೀರು ಹರಿದು ಬರುತ್ತಿದೆ. ಹಾಗಾಗಿ ಕೊಳಚೆ ನೀರು ಹೊರ ಹಾಕಲು ರಾಜಕಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ, ರಾಜಕಾಲುವೆಯ ಮೂರು ಪಟ್ಟು ಜಾಗವನ್ನು ಮುಚ್ಚಿ ನಾಲ್ಕನೇ ಭಾಗದಷ್ಟು ಮಾತ್ರ ಕಾಲುವೆ ಕೆಲಸ ಮಾಡಲಾಗುತ್ತಿದೆ. ಬಹುತೇಕ ನಗರಸಭೆ ಜಾಗೆ ಒತ್ತುವರಿಯಾಗಿದ್ದು, ಮತ್ತಷ್ಟು ಜಾಗೆ ಒತ್ತುವರಿಗೆ ನಗರಸಭೆ ಅವಕಾಶ ಕಲ್ಪಿಸಿಕೊಟ್ಟಿದೆ.
10 ಅಡಿ ಕಾಲುವೆ: ಹಾತಲಗೇರಿ ನಾಕಾದಲ್ಲಿರುವ ರಾಘವೇಂದ್ರ ಸ್ವಾಮಿ ದೇವಸ್ಥಾನದಿಂದ ಕಣಗಿನಹಾಳ ರಸ್ತೆಯವರೆಗೆ ಸುಮಾರು 1.50 ಕೋಟಿ ರೂ. ವೆಚ್ಚದಲ್ಲಿ ಒಟ್ಟು 831 ಮೀ. ಉದ್ಧದ ರಾಜಕಾಲುವೆ ದುರಸ್ತಿಗೊಳಿಸಲಾಗುತ್ತಿದೆ. ಆದರೆ, ಒಟ್ಟು 40 ಅಡಿ ಅಗಲದ ರಾಜಕಾಲುವೆಯಲ್ಲಿ ಕೇವಲ 10 ಅಡಿ ಕಾಲುವೆಯನ್ನು ಮಾತ್ರ ನಿರ್ಮಿಸಲಾಗುತ್ತಿದೆ. ಇನ್ನುಳಿದ 30 ಅಡಿ ಜಾಗವನ್ನು ಖಾಲಿ ಬಿಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೇವಲ 831 ಅಡಿ ಉದ್ದ ಮತ್ತು 10 ಅಡಿ ಅಗಲದ ಕಾಲುವೆ ಕಾಮಗಾರಿಯಲ್ಲಿ ದುಡ್ಡು ಲಪಟಾಯಿಸುವ ಹುನ್ನಾರ ಅಡಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹಲವು ಸಮಸ್ಯೆ: ನಗರದ ರಾಜೀವ್ ಗಾಂಧಿ, ಹುಡ್ಕೋ ಕಾಲನಿ, ಸಾಯಿಬಾಬಾ ದೇವಸ್ಥಾನದಿಂದ ನೀರು ಹರಿದು ಬರುತ್ತಿದೆ. ಮಳೆಗಾಲದಲ್ಲಿ ಇಡೀ ರಾಜಕಾಲುವೆ ಭರ್ತಿಯಾಗಿ ಹರಿಯುವುದರಿಂದ ಪಕ್ಕದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗುತ್ತಿವೆ. ಕಾಲುವೆ ತುಂಬಿ ರಸ್ತೆ ಮೇಲೆಲ್ಲ ನೀರು ಹರಿಯುವುದರಿಂದ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದೆ. ಇದರಿಂದ ಕಳೆದ ವರ್ಷ ಓರ್ವ ವ್ಯಕ್ತಿ ಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಲ್ಲದೆ, ವಾಹನಗಳು ನೀರಿನ ರಭಸಕ್ಕೆ ಹರಿದು ಹೋಗಿದ್ದವು. ಹೀಗೆ ಪ್ರತಿವರ್ಷ ಒಂದಿಲ್ಲೊಂದು ಸಮಸ್ಯೆ ಉದ್ಭವಿಸುತ್ತಿದೆ. ಹಾಗಾಗಿ ಇಂತಹ ದುರಂತಗಳನ್ನು ತಪ್ಪಿಸಲು ಅಮೃತಸಿಟಿ ಯೋಜನೆಯಡಿ ರಾಜಕಾಲುವೆ ನಿರ್ಮಿಸಲಾಗುತ್ತಿದ್ದು, ಈ ಯೋಜನೆ ಕೇವಲ ನೆಪ ಮಾತ್ರಕ್ಕೆ ಎನ್ನುವಂತಾಗಿದೆ.
ಅಧಿಕಾರಿಗಳ ಸಮರ್ಥನೆ: ಮುಳ್ಳು ಕಂಟಿಗಳು ತುಂಬಿ ಪ್ರವಾಹ ಬರುತ್ತಿದ್ದು, ನೀರು ಸರಾಗವಾಗಿ ಹೋಗುವುದಕ್ಕೆ 10 ಅಡಿ ಅಗಲದ ಕಾಲುವೆ ಸಾಕಾಗುತ್ತದೆ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮುಂದೆ ಸಂಭವಿಸಬಹುದಾದ ದುರಂತಗಳಿಗೆ ಮುಂಚಿತವಾಗಿಯೇ ದೀರ್ಘಕಾಲದ ಪರಿಹಾರ ಕಂಡುಕೊಂಡರೆ ಸದ್ಯದ ರಾಜಕಾಲುವೆ ಮಾಡುತ್ತಿರುವುದು ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಕೋಟಿಗಟ್ಟಲೆ ಹಣ ವ್ಯಯಿಸಿ ಜನರ ಕಣ್ಣಿಗೆ ಮಣ್ಣೆರೆಚಿದಂತಾಗುತ್ತದೆ ಎಂದು ನಗರದ ಜನರು ದೂರುತ್ತಿದ್ದಾರೆ.
ಭೂಗಳ್ಳರಿಗೆ ಅನುಕೂಲ?: ರಾಜಕಾಲುವೆ ಸಂಕುಚಿತಗೊಳಿಸಿರುವುದರಿಂದ ಸರ್ಕಾರಿ ಜಾಗೆ ಒತ್ತುವರಿ ಮಾಡಿಕೊಳ್ಳುವ ಭೂಗಳ್ಳರಿಗೆ ಮತ್ತಷ್ಟು ಅನುಕೂಲ ಮಾಡಿಕೊಟ್ಟಂತಾಗಿದ್ದು, ಕಾಮಗಾರಿಯಲ್ಲಿ ಅಕ್ರಮ ನಡೆದಿರುವ ಸಂಶಯ ವ್ಯಕ್ತವಾಗುತ್ತಿದೆ. ಹೈಕೋರ್ಟ್ ನಿಯಮ ಮೀರಿ ರಾಜಕಾಲುವೆ ದುರಸ್ತಿಗೆ ಗುತ್ತಿಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿ ಹಾಗೂ ಗುತ್ತಿಗೆದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಮೊದಲಿನಷ್ಟೇ ಅಗಲ ಇರಲಿ ಮಳೆಗಾಲದಲ್ಲಿ ರಾಜಕಾಲುವೆಯಲ್ಲಿ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಕ್ಕಪಕ್ಕದ ಮನೆಗಳಿಗೆ ನೀರು ನುಗ್ಗಿ ತುಂಬಾ ತೊಂದರೆಯಾಗುತ್ತಿದೆ. ಹಾಗಾಗಿ ಮೊದಲಿನ ಅಳತೆಯಂತೆ ಕಾಲುವೆ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು. ಎಸ್.ಎಂ. ಅಂಗಡಿ, ಸ್ಥಳೀಯರು
40 ಅಡಿ ಕಾಲುವೆ ಇಲ್ಲ ಚರಂಡಿ ಇಲ್ಲದಿದ್ದ ಕಾರಣ ನೀರು ಸರಾಗವಾಗಿ ಹರಿಯಲಾಗದೆ ಒಂದೆಡೆ ನಿಲ್ಲುತ್ತಿತ್ತು. ಇದರಿಂದ ನೀರು ಅಗಲವಾಗುತ್ತಿತ್ತು. ಇಲ್ಲಿ 40 ಅಡಿ ಅಗಲದ ರಾಜ ಕಾಲುವೆ ಇಲ್ಲ. ಅಲ್ಲದೆ, ಇದು ಸರ್ಕಾರದಿಂದ ಅನುಮೋದಿತಗೊಂಡಿದೆ. ಸದ್ಯ ನಿರ್ಮಾಣವಾಗುತ್ತಿರುವ ಕಾಲುವೆಯಲ್ಲಿ ಮೊದಲಿಗಿಂತ ಒಂದೂವರೆ ಪಟ್ಟು ಹೆಚ್ಚು ನೀರು ಹೋಗುತ್ತದೆ. ಒಂದು ವೇಳೆ ರಾಜಕಾಲುವೆ ಅತಿಕ್ರಮಣವಾಗಿದ್ದರೆ ತೆರವುಗೊಳಿಸುತ್ತೇವೆ. ರಮೇಶ್ ಜಾಧವ, ಪೌರಾಯುಕ್ತರು, ಗದಗ-ಬೆಟಗೇರಿ ನಗರಸಭೆ
ವಿಜಯಸಾಕ್ಷಿ ಸುದ್ದಿ, ಬೀದರ್: ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ ಜಿಲ್ಲೆಯ ಔರಾದ್ ತಾಲೂಕಿನ ಹುಲ್ಯಾಳ ತಾಂಡದ ಯುವಕ ಅಪಹರಣಕ್ಕೊಳಗಾಗಿರುವ ಘಟನೆ ನಡೆದಿದೆ.
ಹುಲ್ಯಾಳ ತಾಂಡಾದ 21 ವರ್ಷದ ಅಜಯ್ ರಾಠೋಡ್ ಡಿ.14 ರಂದು ವೈದ್ಯಕೀಯ ಶಿಕ್ಷಣಕ್ಕಾಗಿ ಉಕ್ರೇನ್ ದೇಶಕ್ಕೆ ಹೋಗಿದ್ದ. ಜನವರಿ 16 ರಂದು ಅಜಯ್ನನ್ನು ಅಪಹರಿಸಿದ ದುಷ್ಕರ್ಮಿಗಳು, ಹುಲ್ಯಾಳ ತಾಂಡದಲ್ಲಿರುವ ಆತನ ಸಂಬಂಧಿಕರಿಗೆ ಫೋನ್ ಮಾಡಿ 1 ಕೋಟಿ ರೂ. ನೀಡುವಂತೆ ಬೆದರಿಕೆ ಕರೆ ಮಾಡಿದ್ದಾರೆ.
ಯುವಕನ ಸಂಬಂಧಿಕರು ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ್ ಡಿ.ಎಲ್ ಅವರ ಗಮನಕ್ಕೆ ತಂದಿದ್ದಾರೆ. ದುಷ್ಕರ್ಮಿಗಳು ಆ ಬಳಿಕ ಅಜಯ್ನನ್ನು ಕಿರ್ಗಿಸ್ತಾನ್ಗೆ ಕರೆದುಕೊಂಡು ಹೋಗಿ 1 ಕೋಟಿ ನೀಡದಿದ್ದಲ್ಲಿ ಅಫ್ಘಾನಿನಿಸ್ತಾನ ಗಡಿಯಲ್ಲಿ ಕೊಂದು ಬಿಸಾಕುವ ಬೆದರಿಕೆ ಕರೆ ಮಾಡುವುದರ ಜೊತೆಗೆ ಆತನ ಕೈ-ಕಾಲುಗಳನ್ನು ಕಟ್ಟಿ ಹಾಕಿರುವ ಫೋಟೋ ರವಾನಿಸಿದ್ದಾರೆ.
ಎರಡು ಬಾರಿ ವಿಡಿಯೋ ಕಾಲ್ ಮೂಲಕ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿರುವ ದುಷ್ಕರ್ಮಿಗಳು ಕೂಡಲೇ ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಈ ಘಟನೆ ಕುರಿತು ಸ್ಪಷ್ಟನೆ ನೀಡಿರುವ ಬೀದರ್ ಎಸ್ಪಿ ನಾಗೇಶ್, ಕಿಡ್ನಾಪ್ ಆಗಿರುವ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಆ ಹುಡುಗನೇ ಕುಟುಂಬಸ್ಥರನ್ನು ಸಂಪರ್ಕಿಸಿದ್ದು, ಕಿರ್ಗಿಸ್ಥಾನಕ್ಕೆ ಹೋಗಿರುವುದಾಗಿ ತಿಳಿಸಿದ್ದಾನೆ. ನಾವು ಇಂಡಿಯನ್ ಅಂಬಾಸಿ ಅಧಿಕಾರಿಗಳಿಗೆ ಸಂಪರ್ಕಿಸಿದ್ದು, ಅವರು ಈಗ ಆ ಹುಡುಗನನ್ನು ಮರಳಿ ತವರಿಗೆ ಕಳಿಸುತ್ತಿದ್ದಾರೆ. ಕಿಡ್ನ್ಯಾಪ್ ಕುರಿತು, ಅಲ್ಲಿಯ ಅಧಿಕಾರಿಗಳಿಗೂ ಸಹ ಹುಡುಗ ಸರಿಯಾದ ಮಾಹಿತಿ ನೀಡಿಲ್ಲ ಎಂದಿದ್ದಾರೆ. ಆತ ಮರಳಿ ಬಂದ ನಂತರ ಹೆಚ್ಚಿನ ಮಾಹಿತಿಗೆ ಆತನನ್ನೇ ಸಂಪರ್ಕಿಸಬೇಕಾಗುತ್ತದೆ ಎಂದರು.
ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಇಲ್ಲಿನ ಪ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶ ನಡೆಸುತ್ತಿದ್ದು, ಈ ವೇಳೆ ಪೊಲೀಸರು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದಿದ್ದಾರೆ.
ಈ ವೇಳೆ ಶಾಸಕಿ ಸೌಮ್ಯಾರೆಡ್ಡಿ ಅವರನ್ನು ಪೊಲೀಸರು ವಶಕ್ಕೆ ಪಡೆಯಲು ಯತ್ನಿಸಿದ ವೇಳೆ ಶಾಸಕಿ ಕಾರ್ಯನಿರತ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ.
ಅಲ್ಲದೇ, ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿರುವ ಪೊಲೀಸರ ಮೇಲೆ ದೌವಲತ್ತು ಪ್ರದರ್ಶಿಸಿರುವ ಶಾಸಕಿ ಅಲ್ಲೇ ಇದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗೆ ದೂರು ನೀಡಿದ್ದಾರೆ.
ಕಳೆದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಶಾಸಕಿ ಸೌಮ್ಯಾರೆಡ್ಡಿಯವರ ತಂದೆಯಾಗಿರುವ ರಾಮಲಿಂಗಾರೆಡ್ಡಿಯವರು ಗೃಹ ಸಚಿವರಾಗಿದ್ದರು.
ಹಾಗಾಗಿ, ಅಂತಹ ಹಿರಿಯ ರಾಜಕಾರಣಿ ಹಾಗೂ ಮಾಜಿ ಗೃಹ ಮಂತ್ರಿಯ ಪುತ್ರಿ ಸೌಮ್ಯಾರೆಡ್ಡಿ ಅವರ ಸಭ್ಯತೆ ಇದೆನಾ? ಎಂಬ ಪ್ರಶ್ನೆ ಎದ್ದಿದೆ. ಸದ್ಯ ಶಾಸಕರ ಈ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ವಿಜಯಸಾಕ್ಷಿ ಸುದ್ದಿ, ಕೊಪ್ಪಳ : ಕಲ್ಯಾಣ ಕರ್ನಾಟಕ ದಾಟುವುದರೊಳಗೆ ಸರಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ದಾವಣಗೆರೆಯಲ್ಲಿ ನಮ್ಮ ಘೋಷಣಾ ವಾಕ್ಯ ಬದಲಾಗುತ್ತೆ ಎಂದು ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಕೊಪ್ಪಳದಲ್ಲಿ ಹಮ್ಮಿಕೊಂಡಿರುವ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಸಮಿತಿಯ ಪಾದಯಾತ್ರೆ ಕಾರ್ಯಕ್ರಮದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. 1994 ರಿಂದಲೂ ಪಂಚಮಸಾಲಿ ಸಮುದಾಯ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಶುರು ಮಾಡಿದ್ವಿ. ಲಿಂಗಾಯತರಲ್ಲೇ ಹಿಂದುಳಿದ ಪಂಚಮಸಾಲಿ ಸಮುದಾಯಕ್ಕೆ ಸಂವಿಧಾನಿಕ ಹಕ್ಕು ಬೇಕಿದೆ. ಕುರುಬ ಮತ್ತು ವಾಲ್ಮೀಕಿ ಸಮುದಾಯದ ಸದ್ಯ ಮೀಸಲಾತಿಗೆ ದೊಡ್ಡ ಹೋರಾಟ ಆರಂಭಿಸಿವೆ.
ಇದೇ ವೇಳೆ ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗೆ ಹೋರಾಟ ಆರಂಭಿಸಿದ್ದು ಸಮಯೋಚಿತ. ಇದುವರೆಗೆ ಪಂಚಮಸಾಲಿ ಸಮುದಾಯ ನಾಡಿಗಾಗಿ, ರೈತರಿಗಾಗಿ, ಜನತೆಗಾಗಿ ಹೋರಾಟ ಮಾಡಿದೆ ಇದೇ ಮೊದಲ ಬಾರಿಗೆ ತಮ್ಮ ಸಮುದಾಯಕ್ಕಾಗಿ ಹೋರಾಟ ಮಾಡ್ತಿದೆ. ಸಿಎಂ ಯಡಿಯೂರಪ್ಪ ನಿಜವಾಗಿಯೂ ಸಮಾಜಕ್ಕೆ ನ್ಯಾಯ ಒದಗಿಸಬೇಕು ಎಂದರೆ ಮೀಸಲಾತಿ ನೀಡಬೇಕು .ಕರ್ನಾಟಕದ 3 ಪ್ರಭಲ ಸಮುದಾಯಕ್ಕೆ ಮೀಸಲಾತಿ ನೀಡಬೇಕಿದೆ.
ದಾವಣಗೆರೆ ತಲುಪುವ ಒಳಗೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೆ ಹೋರಾಟದ ತೀವ್ರತೆ ಬದಲಾಗಲಿದೆ. ನಮ್ಮ ಘೋಷ ವಾಕ್ಯಗಳೂ ಬದಲಾಗಲಿವೆ ಎಂದು ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ ನೀಡಿದರು. ಪಕ್ಷಾತೀತವಾಗಿ ಎಲ್ಲ ನಾಯಕರು ಜನಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಅಮರೇಗೌಡ ಪಾಟೀಲ್ ಬಯ್ಯಾಪೂರ, ದೊಡ್ಡನಗೌಡ ಪಾಟೀಲ್, ಬಸವರಾಜ ರಾಯರೆಡ್ಡಿ ಸೇರಿದಂತೆ ಎಲ್ಲರೂ ಬೆಂಬಲ ನೀಡಿದ್ಧಾರೆ. ಸಚಿವರಾದ ಸಿ.ಸಿ.ಪಾಟೀಲ್ ಮತ್ತು ಸಂಸದ ಕರಡಿ ಸಂಗಣ್ಣ ನಮ್ಮ ಪರವಾಗಿ ಸರಕಾರದ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.
ಕೊಪ್ಪಳದಲ್ಲಿ ಜಯಮೃತ್ಯುಂಜಯ ಶ್ರೀಗಳ ನೇತೃತ್ವದಲ್ಲಿ ರ‌್ಯಾಲಿ
ನಾವು ಯಾವುದೇ ಕಾರಣಕ್ಕೂ ನಮ್ಮ ಸಮುದಾಯದ ಜನಪ್ರತಿನಿಧಿಗಳನ್ನು ರಾಜೀನಾಮೆ ನೀಡಿ ಹೋರಾಟ ಮಾಡಿ ಎಂದು ಹೇಳುವುದಿಲ್ಲ. ಸರಕಾರದೊಳಗೆ ಇದ್ದೇ ಹೋರಾಟ ಮಾಡಿ ಎನ್ನುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಸದ ಕರಡಿ ಸಂಗಣ್ಣ, ಮಾಜಿ ಸಂಸದ ಶಿವರಾಮೆಗೌಡ, ವಿಜಯ ಕಾಶಪ್ಪನವರ್, ಜಿಲ್ಲಾಧ್ಯಕ್ಷ ಬಸವರಾಜ್ ಭೂತೆ, ವೀಣಾ ಕಾಶಪ್ಪನವರ, ಕಿಶೋರಿ ಬೂದನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.
2ಎ ಮೀಸಲಾತಿ ಬೇಡಿಕೆ ಈಡೇರದಿದ್ದರೆ ಕ್ರಾಂತಿಯ ಹೋರಾಟ- ವಿಜಯ ಕಾಶಪ್ಪನವರ್ ಎಚ್ಚರಿಕೆ ಕೊಪ್ಪಳ : ಪಂಚಮಸಾಲಿ ಮೀಸಲಾತಿ ಹೋರಾಟ ಕಳೆದ 26 ವರ್ಷಗಳಿಂದ ನಡೆದಿದೆ. ಈಗಾಗಲೇ ಮೂರು ಹಂತದ ಹೋರಾಟವಾಗಿದೆ. ಇದು ನಾಲ್ಕನೇ ಹಂತದ ಕೊನೆಯ ಹೋರಾಟ ಪಾದಯಾತ್ರೆ . ಇದು ಅಂತಿಮ ಹೋರಾಟ ಮಾಡು ಇಲ್ಲವೆ ಮಡಿ ಎನ್ನುವಂತಹ ಹೋರಾಟ. ಜೀವವಾದರೂ ಕಳೆದುಕೊಳ್ಳುತ್ತೇವೆ ಆದರೆ ಮೀಸಲಾತಿಯನ್ನು ಬಿಡುವುದಿಲ್ಲ ಎಂದು ಮಾಜಿ ಶಾಸಕ , ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಹೇಳಿದರು. ಇಂದು ಕೊಪ್ಪಳದಲ್ಲಿ ನಡೆದ ಪಾದಯಾತ್ರೆ ಪೂರ್ವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹೋರಾಟ ಯಾವುದೇ ಹಂತಕ್ಕೆ ಹೋಗಲಿ. ಶಾಂತಿಯುವಾಗಿ ಹೋರಾಟ ನಡೆಯುತ್ತಿದೆ. ಮುಂದೆ ಕ್ರಾಂತಿಯಾಗುತ್ತೆ ಬೆಂಗಳೂರು ಮುಟ್ಟುವುದರಲ್ಲಿ ಘೋಷಣೆ ಮಾಡದೇ ಹೋದರೆ ಕ್ರಾಂತಿಯ ರೂಪ ಪಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ನಾವು ಕೇಳುತ್ತಿರುವುದು ಶೈಕ್ಷಣಿಕ ಹಾಗೂ ಉದ್ಯೋಗ ಮೀಸಲಾತಿಯನ್ನು ರಾಜಕೀಯ ಮೀಸಲಾತಿಯನ್ನು ಕೇಳುತ್ತಿಲ್ಲ. ಗೋವಿಂದ ಕಾರಜೋಳ ತಮ್ಮ ಸಮುದಾಯಕ್ಕೆ ಮೀಸಲಾತಿಯನ್ನು ಪಡೆದುಕೊಂಡಿದ್ದಾರೆ ನಾವು ಅವರ ಬಗ್ಗೆ ಮಾತನಾಡುವುದಿಲ್ಲ . ನಮಗೆ ಮೀಸಲಾತಿ ಬೇಕಾಗಿದೆ ನಾವು ಪಾದಯಾತ್ರೆ ಮಾಡುತ್ತಿದ್ದೇವೆ. ಕಾರಜೋಳ ಗೆಲುವಿನಲ್ಲೂ ಪಂಚಮಸಾಲಿ ಸಮಾಜದ ಬಹುಪಾಲಿದೆ. ಯಡಿಯೂರಪ್ಪ ಸರಕಾರ ರಚನೆಯಲ್ಲಿ 15ಜನ ಪಂಚಮಸಾಲಿ ಸಮಾಜದ ಶಾಸಕರು ಮತ್ತು ಪಂಚಮಸಾಲಿ ಸಮಾಜದಿಂದ ಎಂದು ಹೇಳಿದರು.
ವಿಜಯಸಾಕ್ಷಿ ಸುದ್ದಿ,ಬೆಂಗಳೂರು: ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಬೆಂಬಲಿಸಿ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ‌್ಯಾಲಿ ನಡೆಯುತ್ತಿದೆ.
ರೈತರ ಹೋರಾಟ ಬೆಂಬಲಿಸಿ ಕಾಂಗ್ರೆಸ್ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಿಂದ ‘ರಾಜಭವನ ಚಲೋ’ ಹಮ್ಮಿಕೊಂಡಿದೆ. ಈಗಾಗಲೇ ಪ್ರತಿಭಟನಾ ಮೆರವಣಿಗೆ ಆನಂದ್ ರಾವ್ ಸರ್ಕಲ್ ನಿಂದ ಪ್ರೀಡಂಪಾರ್ಕ್ ಕಡೆ ಹೊರಟಿದೆ. ಇಲ್ಲಿಂದ ರಾಜ ಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಲಾಗುತ್ತದೆ.
ಪ್ರತಿಭಟನೆಯಲ್ಲಿ ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತರು ಆಗಮಿಸಿದ್ದು, ಬೆಂಗಳೂರು ಸಂಪೂರ್ಣ ಸ್ತಬ್ಧವಾಗಿದೆ. ಇದರಿಂದ ಮೆಜೆಸ್ಟಿಕ್ ಅಕ್ಕಪಕ್ಕದ ರಸ್ತೆ, ವೃತ್ತಗಳಲ್ಲಿ ಟ್ರಾಫಿಕ್ ಉಂಟಾಗಿದೆ.
ಒಂದೆಡೆ ರಾಜಭವನ ಚಲೋಗೆ ಕಾಂಗ್ರೆಸ್ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಂದ ಅಪಾರ ಸಂಖ್ಯೆಯಲ್ಲಿ ಜನರನ್ನು ಕರೆ ತಂದಿದ್ದಾರೆ. ಇನ್ನೊಂದೆಡೆ ಸ್ವಯಂ ಪ್ರೇರಿತವಾಗಿಯೂ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಮಸೂದೆಗಳನ್ನು ಹಿಂಪಡೆಯುವಂತೆ ಆಗ್ರಹಿಸುತ್ತಿದ್ದಾರೆ.
ವಿಜಯಸಾಕ್ಷಿ ಸುದ್ದಿ, ಕಲಬುರಗಿ: ಅಧಿಕಾರಿ ಮೇಲೆ ಹಲ್ಲೆ ಮಾಡುವ ಮೂಲಕ ಪುರಸಭೆ ಸದಸ್ಯನೊಬ್ಬ ಗೂಂಡಾಗಿರಿ ಪ್ರದರ್ಶನ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಚಿಂಚೋಳಿ ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಅಭಯ್ ಮೇಲೆ ಹಲ್ಲೆ ಮಾಡಲಾಗಿದೆ.
ಪುರಸಭೆ ಕಚೇರಿಯಲ್ಲಿಯೇ ಸದಸ್ಯ ಆನಂದ್ ಟೈಗರ್ ತನ್ನ ಬೆಂಬಲಿಗ ಶಶಿಕುಮಾರ್ ಜೊತೆ ಆಗಮಿಸಿ ಅಭಯ್ ಅವರ ಮೇಲೆ ಹಲ್ಲೆ ಮಾಡಿದ್ದು, ಸದಸ್ಯನ ಈ ಗೂಂಡಾಗಿರಿ ಪುರಸಭೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪುರಸಭೆ ಮುಖ್ಯಾಧಿಕಾರಿ ಅಭಯ್
ಪುರಸಭೆ ಕಚೇರಿಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸದಸ್ಯ ಆನಂದ್ ನಕಲಿ ಬಿಲ್ ಗಳಿಗೆ ಸಹಿ ಮಾಡಿ, ಚೆಕ್ ನೀಡುವಂತೆ ಡಿಮ್ಯಾಂಡ್ ಮಾಡುವ ಮೂಲಕ, ಮುಖ್ಯಾಧಿಕಾರಿ ಅಭಯ್ ಅವರ ಮೇಲೆ ಒತ್ತಡ ಹಾಕುತ್ತಿದ್ದ ಎನ್ನಲಾಗಿದೆ. ಅಧಿಕಾರಿ ಅಭಯ್ ಸಹಿ ಮಾಡದೇ ಇರೋದಕ್ಕೆ ಆನಂದ್ ಟೈಗರ್ ಹಲ್ಲೆ ನಡೆಸಿದ್ದಾರೆ ಎನ್ನಲಾಗುತ್ತಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವ ಸದಸ್ಯ ಆನಂದ್ ಹಾಗೂ ಆತನ ಸಹಚರ ಶಶಿಕುಮಾರ್ ಅವರ ವಿರುದ್ಧ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯಸಾಕ್ಷಿ ಸುದ್ದಿ, ಕಾರವಾರ: ಚಿರತೆಯೊಂದು ಜನವಸತಿ ಪ್ರದೇಶದ ಬಳಿ ಓಡಾಟ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಡೆದಿದೆ.
ತಾಲೂಕಿನ ಕೊಂಡಳ್ಳಿ ಗ್ರಾಮದ ನಿವಾಸಿ ರಮಾನಂದ ಎನ್ನುವವರ ಮನೆಯ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ. ಬೆಳಗಿನ ಜಾವದಲ್ಲಿ ನಾಯಿಗಳನ್ನು ಹಿಡಿಯಲು ಚಿರತೆ ಆಗಮಿಸಿದ್ದು ಈ ವೇಳೆ ನಾಯಿ ಸಿಗದೇ ಸಮೀಪದ ಗೂಡಿನಲ್ಲಿದ್ದ ಕೋಳಿಯನ್ನ ಕಚ್ಚಿಕೊಂಡು ಕಾಡಿನತ್ತ ಪರಾರಿಯಾಗಿದೆ.
ಮನೆಯವರು ಬೆಳಿಗ್ಗೆ ಕೋಳಿ ಇಲ್ಲದಿರುವುದನ್ನು ಗಮನಿಸಿದ ಬಳಿಕ ಸಿಸಿಟಿವಿ ಪರಿಶೀಲಿಸಿದ್ದು ಈ ವೇಳೆ ಚಿರತೆ ಓಡಾಟ ಕಂಡುಬಂದಿದೆ. ಜನವಸತಿ ಪ್ರದೇಶದ ಬಳಿ ಚಿರತೆ ಪ್ರತ್ಯಕ್ಷವಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ್ದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದ ವಾಟ್ಸಾಪ್ ಸ್ಟೇಟಸ್
ವಿಜಯಸಾಕ್ಷಿ ಸುದ್ದಿ, ಗದಗ: ‘ನೋಡ್ರಪ್ಪ ಗದುಗಿನ ಬಿಜೆಪಿ ಕಾರ್ಯಕರ್ತರೇ, ನಿಮ್ಮ ಬಿಜೆಪಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಪೋಸ್ಟ್ ಹಾಕುತ್ತಿರುವ ಸುರೇಶ್ ಮಗದುಮ್ ಅವರನ್ನು ಯಾಕೆ ಉಚ್ಚಾಟನೆ ಮಾಡುತ್ತಿಲ್ಲ? ಬಿಜೆಪಿ ಕಾರ್ಯಕರ್ತರು ಮೌನವೇಕೆ? ಕೇವಲ ಗುಲಾಮರಾಗಿ ಇರುತ್ತೀರಾ? ನಿಮ್ಮ ಪಕ್ಷದ ಅಧ್ಯಕ್ಷರು ಯಾಕೆ ಸುಮ್ಮನೆ ಕೂಡುತ್ತಿದ್ದಾರೆ? ಎಂದು ಇತ್ತೀಚೆಗಷ್ಟೆ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮಂಜುನಾಥ ಎಚ್. ಮುಳಗುಂದ ತಮ್ಮ ಪೇಸ್ಬುಕ್ ಪೇಜ್ ನಲ್ಲಿ ಸ್ಟೇಟಸ್ ಹಾಕಿಕೊಳ್ಳುವ ಮೂಲಕ ಜಿಲ್ಲಾ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ಮುಖಂಡ ಸುರೇಶ್ ಮುಗದುಮ್ ಎಂಬುವರು ಹಾಕಿದ್ದ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್ ಶಾಟ್ ತೆಗೆದು ತಮ್ಮ ಫೇಸ್ಬುಕ್ ಪೇಜ್ ಗೆ ಹಾಕಿಕೊಂಡು, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರನ್ನು ಪ್ರಶ್ನಿಸಿದ್ದಾರೆ.
ನುಂಗಲಾರದ ತುತ್ತು: ಇದಕ್ಕೆ ಕಾರಣ ಹೀಗಿದೆ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಬಳಿಕ ಸಚಿವಾಕಾಂಕ್ಷಿಗಳು ಅಸಮಾಧಾನಗೊಂಡಿದ್ದಾರೆ. ಸಿಎಂ ಯಡಿಯೂರಪ್ಪ ವಿರುದ್ಧ ಬಹಿರಂಗವಾಗಿಯೇ ಆಕ್ರೋಶ ಹೊರ ಹಾಕುತ್ತಿರುವುದು ಜಗಜ್ಜಾಹೀರು ಆಗಿದೆ. ಇದು ಯಡಿಯೂರಪ್ಪ ಅವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಸಚಿವಾಕಾಂಕ್ಷಿಗಳಲ್ಲಿ ಓರ್ವರಾಗಿದ್ದ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅಂತೂ ಯಡಿಯೂರಪ್ಪ ವಿರುದ್ಧ ಮಾತಿನ ’ಸಿಡಿ’ಗುಂಡುಗಳನ್ನು ಸಿಡಿಸುತ್ತಿದ್ದಾರೆ. ಇದು ಪಕ್ಷಕ್ಕೆ ಇರುಸು ಮುರುಸುಂಟು ಮಾಡಿದೆ. ಸ್ವ ಪಕ್ಷದ ಕೆಲವರು ಆಂತರಿಕ ಬೆಂಬಲ ನೀಡುತ್ತಿರುವುದು ಗೊತ್ತಿರುವ ಸಂಗತಿ.
ಯತ್ನಾಳ್ ಬೆಂಬಲಿಸಿ ಸ್ಟೇಟಸ್: ಈ ಬೆನ್ನಲ್ಲೇ ಜಿಲ್ಲಾ ಬಿಜೆಪಿಯ ಮುಖಂಡ ಸುರೇಶ್ ಮುಗದುಮ್ ಎಂಬುವರು ಯತ್ನಾಳ್ ಅವರನ್ನು ಬೆಂಬಲಿಸಿ ವಾಟ್ಸಾಪ್ ಸ್ಟೇಟಸ್ ಒಂದನ್ನು ಹಾಕಿಕೊಂಡಿದ್ದು, ಜಿಲ್ಲಾ ಬಿಜೆಪಿಯಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿವೆ.
‘ವರ್ಗಾವಣೆ ದಂಧೆ ಮಾಡಲಿಲ್ಲ. ಯೋಜನೆಗಳಲ್ಲಿ ಇಂದಿಗೂ ಕಮಿಷನ್ ಪಡೆಯಲಿಲ್ಲ. ಅಪ್ಪಟ ಹಿಂದುತ್ವದ ಕಟ್ಟಾಳು. ಜನಸಂಘದಿಂದ ಪಕ್ಷ ಕಟ್ಟಿ ಬೆಳೆಸಿದವರು. ವಾಜಪೇಯಿ ಅವರ ಸಂಪುಟದಲ್ಲಿ ರೈಲ್ವೇ ಖಾತೆ ರಾಜ್ಯ ಸಚಿವರಾಗಿದ್ದರು. ಯಡಿಯೂರಪ್ಪ ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಅವರ ಜೊತೆ ಹೋಗಲಿಲ್ಲ ಎಂಬ ಕಾರಣಕ್ಕೆ ಇವತ್ತು ಬಿಜೆಪಿಯಲ್ಲಿ ಸೈಡ್ ಲೈನ್’ ಎಂಬ ಅಡಿಬರಹವಿರುವ ಮತ್ತು ಯತ್ನಾಳ್ ಅವರ ಭಾವಚಿತ್ರವಿರುವ ಪೋಸ್ಟ್ ಹಾಕಿದ್ದಾರೆ. ಕಾಡಿಗೆ ಯಾವತ್ತೂ ಸಿಂಹನೇ ರಾಜ ಎಂದು ಯಡಿಯೂರಪ್ಪ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಯಡಿಯೂರಪ್ಪ ನಾಯಕರಲ್ಲ?: ನಾಯಕ ಬದಲಾವಣೆ ಕುರಿತು ಚರ್ಚೆಗಳು ಶುರುವಾಗಿರುವ ಹೊತ್ತಲ್ಲೇ ’ನಮ್ಮ ಹಿಂದೂ ಹೃದಯ ಸಾಮ್ರಾಟ್ ಬಸವನಗೌಡ ಪಾಟೀಲ್ ಯತ್ನಾಳ್ ನಮ್ಮ ನಾಯಕರು’ ಎನ್ನುವ ಮೂಲಕ ಯಡಿಯೂರಪ್ಪ ನಮ್ಮ ನಾಯಕರಲ್ಲ ಎಂಬುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಆಪ್ತರೆಂದು ಸುಮ್ಮನಿದ್ದಾರೆಯೇ?: ಇನ್ನು, ಬಿಜೆಪಿ ಕಾರ್ಯಕರ್ತ ಸುರೇಶ್ ಮುಗದುಮ್ ಬಿಜೆಪಿ ಜಿಲ್ಲಾಧ್ಯಕ್ಷ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸದಾ ಯತ್ನಾಳ್ ಅವರನ್ನು ಬೆಂಬಲಿಸಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುತ್ತಿದ್ದಾರಂತೆ. ಈ ಹಿಂದೆಯೂ ಅನೇಕ ಬಾರಿ ಇಂತಹ ಪೋಸ್ಟ್ ಗಳನ್ನು ಹಾಕಿಕೊಂಡಿರುವ ಉದಾಹರಣೆಗಳಿವೆ. ಮೋಹನ್ ಮಾಳಶೆಟ್ಟಿ ಅವರ ಆಪ್ತ ಎಂಬ ಕಾರಣಕ್ಕೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿದೆ.
ಮಂಜುನಾಥ ಅವರ ಪೋಸ್ಟ್ ಬೆಂಬಲಿಸಿ ಕೆಲವರು, ’ ಧಮ್ ಇಲ್ಲರೀ ಮೆಂಬರ್’ ಎಂದು ಕಮೆಂಟ್ ಮಾಡಿದ್ದು, ಸುರೇಶ್ ಮುಗದುಮ್ ಜಿಲ್ಲಾ ಬಿಜೆಪಿ ಅಧ್ಯಕ್ಷರ ಬೆಂಬಲಿಗ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮಂಜುನಾಥ ಅವರು, ’ಬಿಜೆಪಿ ಅಧ್ಯಕ್ಷರ ಚೇಲಾ ಆಗಿರುವುದರಿಂದ ಉಚ್ಚಾಟನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಲು ಯತ್ನಿಸಿದ್ದಾರೆ.
ಇದು ರಾಜ್ಯದಂತೆ ಜಿಲ್ಲಾ ಬಿಜೆಪಿಯಲ್ಲೂ ಎಲ್ಲವೂ ಸರಿಯಿಲ್ಲ ಎಂಬುವುದನ್ನು ಸಾರಿ ಹೇಳಿದಂತಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಅವರು ಸುರೇಶ್ ಮುಗದುಮ್ ಅವರ ಮೇಲೆ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.
ಮುಳುಗುಂದ ತಲೆದಂಡ ಕೆಲವು ತಿಂಗಳ ಹಿಂದೆ ನಗರಸಭೆ ಮಾಜಿ ಸದಸ್ಯ ಮಂಜುನಾಥ ಮುಳಗುಂದ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬಿಜೆಪಿ ನಾಯಕರ ವಿರುದ್ಧ ಹಣ ವಸೂಲಿಯಂತಹ ಗಂಭೀರ ಆರೋಪ ಮಾಡಿದ್ದರು. ಇಬ್ಬರು ನಾಯಕರು ಜಿಲ್ಲೆಯ ೩೫ ಇಲಾಖೆಗಳ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದರು. ಇದರಲ್ಲಿ ಜಿಲ್ಲಾಧ್ಯಕ್ಷರ ಹೆಸರೂ ಇತ್ತೆಂದು ಹೇಳಲಾಗುತ್ತಿತ್ತು. ಜಿಲ್ಲಾ ಬಿಜೆಪಿಯಲ್ಲಿ ಜಾತಿ ರಾಜಕಾರಣ ನಡೆಯುತ್ತಿದ್ದು, ಇಲ್ಲಿ ಕೆಳ ಜಾತಿಯವರಿಗೆ ಮೂರು ಕಾಸಿನ ಕಿಮ್ಮತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಸ್ವಪಕ್ಷದ ಮುಖಂಡನ ಸರಣಿ ಪೋಸ್ಟ್ ನಿಂದ ರೋಸಿ ಹೋಗಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ್ ಮಾಳಶೆಟ್ಟಿ ಮಂಜುನಾಥ ಮುಳಗುಂದ ಅವರನ್ನು ಪಕ್ಷದಿಂದ ಉಚ್ಚಾಟಿಸಿದ್ದರು.