Home Blog Page 3203

ವಿದ್ಯುತ್ ಶಾರ್ಟ್ ಸರ್ಕ್ಯೂಟ್; ಲಕ್ಷಾಂತರ ರೂ. ಮೌಲ್ಯದ ಕಬ್ಬು ನಾಶ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಸಮೀಪದ ದೊಡ್ಡೂರು ಗ್ರಾಮದ ಹತ್ತಿರದಲ್ಲಿರುವ ಕಬ್ಬಿನ ಹೊಲಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆಕಸ್ಮಿಕ ಬೆಂಕಿ ತಗುಲಿ, ೩ ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದ್ದು, ಲಕ್ಷಾಂತರ ರೂ. ಹಾನಿ ಸಂಭವಿಸಿದೆ.

ದೊಡ್ಡೂರು ಗ್ರಾಮದ ರತ್ನವ್ವ ಬಸವರಾಜ ಗುಳೇದ ಎನ್ನುವವರ 3 ಎಕರೆ ಹೊಲದಲ್ಲಿ ಕಬ್ಬು  ಬೆಳೆಯಲಾಗಿದ್ದು, ಏಕಾಏಕಿ ಬೆಂಕಿ ಹತ್ತಿಕೊಂಡು ಇಡೀ ಹೊಲವನ್ನು ವ್ಯಾಪಿಸಿಕೊಂಡಿತ್ತು. ತಕ್ಷಣ ಊರಿನ ಹಿರಿಯರು, ಯುವಕರು ಸೇರಿ ಬೆಂಕಿ ಆರಿಸಲು ಪ್ರಯತ್ನಿಸಿದರು.

ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಯಶಸ್ವಿಯಾದರು. ಸುಮಾರು 3 ಎಕರೆಯಷ್ಟು ಕಬ್ಬು ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಿಸಿದ ಇಲಾಖೆಯವರು ಈ ರೈತ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಗ್ರಾಮದ ಹಿರಿಯರು ಆಗ್ರಹಿಸಿದ್ದಾರೆ.

ಕೊಲೆಗೆ ಪ್ರಯತ್ನಿಸಿದ ಆರೋಪಿತರಿಗೆ 7 ವರ್ಷ 9 ತಿಂಗಳು ಜೈಲು; 7,500 ರೂ. ದಂಡ

ಕುಡಗೋಲನಿಂದ ಹಲ್ಲೆ ಮಾಡಿದ್ದ ಪ್ರಕರಣ……..

ವಿಜಯಸಾಕ್ಷಿ ಸುದ್ದಿ, ಗದಗ

ಕೊಲೆ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬರ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂದಂಧಿಸಿದಂತೆ ಆರೋಪಿತರಿಬ್ಬರಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

ಪ್ರಕರಣದ ಆರೋಪಿತರಾದ ಬಸಪ್ಪ ಸಿದ್ದಪ್ಪ ಮಾದರ ಹಾಗೂ ಇನ್ನೊಬ್ಬ ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯ ಕುರ್ಲಗೇರಿ ಗ್ರಾಮದ ಪಿರ್ಯಾದಿಯ ಮನೆಯ ಮುಂದೆ ಸಾರ್ವಜನಿಕ ರಸ್ತೆ ಮೇಲೆ 12-11-2014ರಂದು ರಾತ್ರಿ 8ಗಂಟೆಯ ಸುಮಾರಿಗೆ ಆರೋಪಿ ಬಸಪ್ಪ ಬೈದಾಡುತ್ತಾ ಕ್ಷುಲ್ಲಕ ಕಾರಣಕ್ಕಾಗಿ ತನ್ನ ಕೈಯಲ್ಲಿದ್ದ ಕುಡಗೋಲಿನಿಂದ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಗಾಯಪಡಿಸಿದ್ದು, ಇನ್ನೊಬ್ಬ ಆರೋಪಿಯೂ ಕೂಡಿ ಕೊಲೆ ಮಾಡಲು ಪ್ರಯತ್ನ ಮಾಡಿದ ಅಪರಾಧದ ಕುರಿತು ಆರೋಪಿತರ ವಿರುದ್ಧ ನರಗುಂದ ಠಾಣೆಯ ಆರಕ್ಷಕ ಉಪ ನಿರೀಕ್ಷಕ ಎಚ್.ಬಿ. ತಳವಾರ ತನಿಖೆಯನ್ನು ಪೂರೈಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಸವರಾಜರು ಸದರ ಪ್ರಕರಣದಲ್ಲಿ ಆರೋಪ ರುಜುವಾತಾಗಿದ್ದರಿಂದ ಆರೋಪಿತರಾದ ಬಸಪ್ಪ ಸಿದ್ದಪ್ಪ ಮಾದರ ಹಾಗೂ ಇನ್ನೊಬ್ಬರಿಗೆ ಡಿ.23ರಂದು 7 ವರ್ಷ ಸಾದಾ ಕಾರವಾಸ ಶಿಕ್ಷೆ ಹಾಗೂ ತಲಾ ರೂ.7000 ದಂಡ, ಕಲಂ: 323 ಭಾದಂಸಂರಡಿ 9 ತಿಂಗಳ ಸಾದಾ ಕಾರಾವಾಸ ಶಿಕ್ಷೆ ಹಾಗೂ ತಲಾ ರೂ. 500 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕಿ ಸವಿತಾ.ಎಂ. ಶಿಗ್ಲಿ ವಾದ ಮಂಡಿಸಿದ್ದರು.

ಕೆವೈಸಿ ಅಪ್ಡೇಟ್ ಹೆಸರಲ್ಲಿ ಚೀಟಿಂಗ್; ಲಕ್ಷಾಂತರ ರೂ. ಹಣ ಕಳೆದುಕೊಂಡ ಸರಕಾರಿ ನೌಕರ

ವಿಜಯಸಾಕ್ಷಿ ಸುದ್ದಿ, ಗದಗ

ಸರಕಾರಿ ನೌಕರರೊಬ್ಬರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕೆವೈಸಿ ಅಪ್ಡೇಟ್ ಮಾಡುವಂತೆ ಲಿಂಕ್ ಕಳುಹಿಸಿ ಲಕ್ಷಾಂತರ ರೂ. ಹಣ ಲಪಟಾಯಿಸಿದ ಪ್ರಕರಣ ನಡೆದಿದೆ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಳ್ಳಿಯೊಂದರಲ್ಲಿ ವಾಸವಾಗಿರುವ ಬಸವರಾಜ್ ಎಂಬುವವರೇ ಪೇಕ್ ಲಿಂಕ್ ಅನುಸರಿಸಿ ತಮ್ಮ ಎಸ್ ಬಿ ಐ ಬ್ಯಾಂಕ್ ಖಾತೆಯಲ್ಲಿನ 2, 24, 997 ರೂ ಹಣವನ್ನು ಕಳೆದುಕೊಂಡವರು.

ಮೊ.ನಂ 8580192724 ನಿಂದ ಯಿನೋ ಆ್ಯಪ್ ಕೆವೈಸಿ ಅಪ್ಡೇಟ್ ಮಾಡುವಂತೆ http://shrtco.de/Tz519x ಎಂಬ ಲಿಂಕ್ ಕಳುಹಿಸಿದ್ದಾನೆ. ನಂತರ ಲಿಂಕ್ ಓಪನ್ ಮಾಡಿ ಅದರಲ್ಲಿ ಕೇಳಿದ ಮಾಹಿತಿ ಫಿಲ್ ಮಾಡಿದ ನಂತರ ಬಸವರಾಜ್ ಅವರ ಖಾತೆಯಲ್ಲಿನ ರೂ. 24,998 ಹಾಗೂ 1.99.999 ರಂತೆ ಒಟ್ಟು 2ಲಕ್ಷ 24ಸಾವಿರದ 997 ರೂಪಾಯಿಗಳನ್ನು ಆರೋಪಿ ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾನೆ.

ಈ ಕುರಿತು ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಬಸವರಾಜ್ ಎಂಬುವವರು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಅಂಗಡಿಯ ಬೀಗ ಮುರಿದು ನಗದು ಲಕ್ಷ ರೂ. ಹಣ ಕಳ್ಳತನ

ವಿಜಯಸಾಕ್ಷಿ ಸುದ್ದಿ, ಮುಂಡರಗಿ

ಕಿರಾಣಿ/ಕೋಲ್ಡಿಂಕ್ಸ್ ಅಂಗಡಿಯೊಂದರ ಬೀಗವನ್ನು ಮೀಟಿ ತೆಗೆದು, ಅಂಗಡಿಯ ಡ್ರಾದಲ್ಲಿಟ್ಟಿದ್ದ 1,05,000 ರೂ. ನಗದು ಹಣವನ್ನು ದೋಚಿರುವ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರೇವಡ್ಡಟ್ಟಿ ಗ್ರಾಮದ ಬಸ್ ನಿಲ್ದಾಣದ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಹಿರೇವಡ್ಡಟ್ಟಿಯ ಚಂದ್ರಶೇಖರ ಹನುಮಪ್ಪ ಮೇಸ್ತಿ ಎಂಬುವರಿಗೆ ಸೇರಿದ ಕಿರಾಣಿ/ ಕೋಲ್ಡ್ರಿಂಕ್ಸ್ ಅಂಗಡಿಯಲ್ಲಿ ಯಾರೋ ಕಳ್ಳರು ಅಂಗಡಿಯ ಬಾಗಿಲಿಗೆ ಹಾಕಿದ್ದ ಕೀಲಿಯನ್ನು ಮೀಟಿ ಮುರಿದು, ಅಂಗಡಿಯ ಒಳಹೊಕ್ಕು, ಟೇಬಲ್ ಡ್ರಾದಲ್ಲಿರಿಸಿದ್ದ 1,05,000 ರೂ. ನಗದು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾವೆಂಶ್ರೀ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಮೆಚ್ಚುಗೆ

ವಿಜಯಸಾಕ್ಷಿ ಸುದ್ದಿ, ಗದಗ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ನಗರದ ಸಾಂಸ್ಕೃತಿಕ ಸಂಘಟಕ ಕಾವೆಂಶ್ರೀ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗದಗನಲ್ಲಿ ಕಳೆದ 25ವರ್ಷಗಳಿಂದ ಕಲಾಚೇತನ ಅಕಾಡೆಮಿ ಮೂಲಕ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ಕಾವೆಂಶ್ರೀ (ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ) ಅವರ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ನಲ್ಲಿ ಮುಕ್ತಕಂಠದಿಂದ ಹೊಗಳಿದ್ದಾರೆ.

ಗದಗನ ಹೋಟೆಲ್‌ವೊಂದರಲ್ಲಿ ಕೆಲಸಕ್ಕೆ ಸೇರಿ, ಸತತ ಪರಿಶ್ರಮದಿಂದ ಸ್ವಂತ ಹೋಟೆಲ್ ಆರಂಭಿಸಿ, ಇವತ್ತು ಯಶಸ್ವಿ ಉದ್ಯಮಿಯಾಗಿದ್ದಾರೆ. ತಮ್ಮ ಪೂರ್ಣ ಹೆಸರನ್ನೆ ಕಾವ್ಯನಾಮ ಮಾಡಿಕೊಂಡು ಕಲೆ- ಸಾಹಿತ್ಯ- ಸಂಸ್ಕೃತಿಯ ಕುರಿತು ಕಾವೆಂಶ್ರೀ ಹಲವಾರು ಲೇಖನಗಳನ್ನು ಬರೆದಿದ್ದಾರೆ.

ಕಲಾಚೇತನ ಅಕಾಡೆಮಿ ಮೂಲಕ ೨೫ ವರ್ಷಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಿ ಕಲಾಸೇವೆ ಮಾಡುತ್ತಿದ್ದಾರೆ.

ಕಳೆದ ನವೆಂಬರ್ ನಲ್ಲಿ ಕಲಾಚೇತನ ಅಕಾಡೆಮಿಯ ಬೆಳ್ಳಿಮಹೋತ್ಸವ ಕಾರ್ಯಕ್ರಮವನ್ನು ಕಾವೆಂಶ್ರೀ ಅರ್ಥಪೂರ್ಣವಾಗಿ ಸಂಘಟಿಸಿದ್ದರು. ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಅವರ ಉಪನ್ಯಾಸ, ಖ್ಯಾತ ಕೊಳಲುವಾದಕ ಪ್ರವೀಣ ಗೋಡಖಿಂಡಿ, ಷಡ್ಜ ಗೋಡಖಿಂಡಿ ಹಾಗೂ ತಬಲಾ ವಾದಕ ಕಿರಣ ಗೋಡಖಿಂಡಿ ಅವರ ಜುಗಲ್‌ಬಂದಿ ಕಲಾಸಕ್ತರನ್ನು ಮಂತ್ರಮುಗ್ಧಗೊಳಿಸಿತ್ತು. ಬೆಳ್ಳಿ ಮಹೋತ್ಸವ ಸಂಭ್ರಮ ಕಳೆಯುವ ಮುನ್ನವೇ ಕಾವೆಂಶ್ರೀ ಅವರ ಸಾಧನೆಯನ್ನು ಪ್ರಧಾನಿ ಕೊಂಡಾಡಿರುವುದು ಜಿಲ್ಲೆಯ ಸಾಹಿತಿಗಳ, ಕಲಾವಿದರ ಸಂಭ್ರಮಕ್ಕೆ ಕಾರಣವಾಗಿದೆ.

1996 ಏಪ್ರಿಲ್ 6ರಂದು ಕಲಾಚೇತನ ಸಾಂಸ್ಕೃತಿಕ ಸಂಘಟನೆ ಆರಂಭಿಸಿರುವ ಕಾವೆಂಶ್ರೀ, ಮುಂದೆ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ಮೂಲಕ ಸಾಂಸ್ಕೃತಿಕ ಪ್ರಜ್ಞೆಯನ್ನು ಹೆಚ್ಚಿಸಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರು, 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಶಾಂತರಸರು ಕಲಾಚೇತನ ಅಕಾಡೆಮಿಯನ್ನು ಉದ್ಘಾಟಿಸಿದ್ದರು. ಅದೇ ದಿನ ಪಂಪ ಪ್ರಶಸ್ತಿ ವಿಜೇತ ಚನ್ನವೀರ ಕಣವಿ ಅವರಿಗೆ ಸಾಹಿತ್ಯಶ್ರೀ ಪ್ರಶಸ್ತಿ ನೀಡಲಾಯಿತು.

ಅಂದಿನಿಂದ ಇಂದಿನವರೆಗೂ ಯುವ ಕಲಾವಿದರನ್ನು, ಹಿರಿಯ ಸಾಹಿತಿಗಳನ್ನು, ಜಾನಪದ ಕಲಾವಿದರನ್ನು ನಾಡಿಗೆ ಪರಿಚಯಿಸುವ ಕಾರ್ಯವನ್ನು ಕಾವೆಂಶ್ರೀ ಕಲಾಚೇತನ ಅಕಾಡೆಮಿ ಮೂಲಕ ಮಾಡುತ್ತಿದ್ದಾರೆ. ಈವರೆಗೂ 100ಕ್ಕೂ ಹೆಚ್ಚು ಖ್ಯಾತನಾಮರು ಉಪನ್ಯಾಸ ನೀಡಿದ್ದಾರೆ. ಅಕಾಡೆಮಿಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಷಡ್ಜ ಗೋಡಖಿಂಡಿ ಸಹಿತ ಈವರೆಗೆ 65ಕ್ಕೂ ಹೆಚ್ಚು ಸಾಧಕರಿಗೆ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಖ್ಯಾತಿಯ ರಂಗಭೂಮಿ ಕಲಾವಿದರು, ಚಲನಚಿತ್ರ, ಯಕ್ಷಗಾನ, ಜಾನಪದ, ಸಂಗೀತ ವಾದ್ಯಕರು ನೀಡಿದ ಕಾರ್ಯಕ್ರಮಗಳು ಸ್ಮರಣೀಯವಾಗಿದೆ.

ಪತ್ರಕರ್ತರ ಬೇಡಿಕೆಗೆ ಆಗ್ರಹಿಸಿ ಬೆಳಗಾವಿ ತೆರಳಲು ನಿರ್ಧಾರ; ಉಚಿತವಾಗಿ ಟೋಲ್ ಪ್ರವೇಶಕ್ಕೆ ಕೂಡಲೇ ಆದೇಶ ಹೊರಡಿಸಿ

0

ವಿಜಯಸಾಕ್ಷಿ ಸುದ್ದಿ, ನವಲಗುಂದ

ರಾಜ್ಯ ಸರ್ಕಾರ ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಡಿ.27 ರಂದು ಸುವರ್ಣಸೌಧದ ಎದುರು ರಾಜ್ಯ ಪತ್ರಕರ್ತರ ಧ್ವನಿ ಸಂಘಟನೆಯ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಕೊಡಲು ಬೆಳಗಾವಿಗೆ ತೆರಳಲು ತಾಲೂಕಿನ ಕಾ.ನಿ.ಪ.ಧ್ವನಿ ಸಂಘಟನೆಯವರು ನಿರ್ಣಯ ಕೈಗೊಂಡರು.  

ಭಾನುವಾರ ಇಲ್ಲಿಯ ಲೋಕೊಪಯೋಗಿ ಇಲಾಖೆಯ ನಿರೀಕ್ಷಣಾಲಯದಲ್ಲಿ ಏರ್ಪಡಿಸಿದ ಪತ್ರಕರ್ತರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. 

ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಚರಂತಯ್ಯ ಹಿರೇಮಠ ಮಾತನಾಡಿ, ಪತ್ರಕರ್ತರ ಪ್ರಾಧಿಕಾರ ರಚನೆ, ಪ್ರತಿ ಪತ್ರಕರ್ತರಿಗೆ ನಿವೇಶನ ನೀಡುವುದು, ಪ್ರತಿ ತಾಲೂಕಿನಲ್ಲಿ ಪತ್ರಿಕಾಭವನ ನಿರ್ಮಾಣ ಮಾಡುವುದು, ಉಚಿತವಾಗಿ ಟೋಲ್ ಪ್ರವೇಶಕ್ಕೆ ಕೂಡಲೇ ಆದೇಶ ಹೊರಡಿಸಬೇಕು, ನಿವೃತ್ತ ಪತ್ರಕರ್ತರಿಗೆ ರೂ.20 ಸಾವಿರಕ್ಕೆ ಮಾಶಾಸನ ಹೆಚ್ಚಳ ಮಾಡಬೇಕು, ಗ್ರಾಮೀಣ ಪತ್ರಕರ್ತರಿಗೆ ಬಸ್‍ಪಾಸ್ ವಿತರಣೆ, ಪತ್ರಕರ್ತರ ಕುಟುಂಬಕ್ಕೆ ಆರೋಗ್ಯ ವಿಮೆ, ಪತ್ರಕರ್ತರ ರಕ್ಷಣಾ ಕಾಯ್ದೆ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ಭೋವಿ, ಸದಸ್ಯರಾದ ಅಬ್ದುಲ್‍ರಝಾಕ್ ನದಾಫ್, ಮೆಹಬೂಬ ಅಣ್ಣಿಗೇರಿ, ಶಂಕ್ರು ಸುಭೆದಾರಮಠ, ಶಿವು ನಾಯಕ, ವಿನೋದ ಇಚ್ಚಂಗಿ, ಮಮತಾ ಬೀಳಗಿ, ರಾಜು ಕೊಣ್ಣೂರ, ಶರೀಫ ಶಿವಯೋಗಿ ಸೂರಪ್ಪನವರ ಉಪಸ್ಥಿತರಿದ್ದರು. 

ಜಗಲಿ ಮೇಲೆ ಮಲಗಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ

0

ಮಗಳ ಮನೆಗೆ ಬಂದಿದ್ದ ಮಹದೇವಯ್ಯ

ವಿಜಯಸಾಕ್ಷಿ ಸುದ್ದಿ, ಮೈಸೂರು

ಮನೆಯ ಜಗಲಿ‌ ಮೇಲೆ ಮಲಗಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಜಿಲ್ಲೆಯ ಟಿ. ನರಸೀಪುರ ತಾಲೂಕಿನ ಮುತ್ತತ್ತಿ ಗ್ರಾಮದಲ್ಲಿ ಮಗಳ ಮನೆಗೆ ಬಂದಿದ್ದ ಕರೋಹಟ್ಟಿ ಗ್ರಾಮದ ಮಹದೇವಯ್ಯ ಎಂಬಾತ ಜಗಲಿ ಮೇಲೆ ಮಲಗಿದ್ದ ವೇಳೆ ಚಿರತೆ ದಾಳಿ ಮಾಡಿದೆ. ತಕ್ಷಣವೇ ಎಚ್ಚೆತ್ತ ಮಹಾದೇವಯ್ಯ ತಾನು ಹೊದ್ದಿಕೊಂಡಿದ್ದ ರಗ್ಗನ್ನು ಚಿರತೆ ಮೇಲೆ ಹಾಕಿದ್ದಾನೆ. ಇದರಿಂದಾಗಿ ಗಾಬರಿಗೊಂಡ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.

ನರಸೀಪುರ ಸರಕಾರಿ ಆಸ್ಪತ್ರೆಯಲ್ಲಿ ಮಹಾದೇವಯ್ಯ ಚಿಕಿತ್ಸೆಗಾಗಿ ದಾಖಲಾಗಿದ್ದು, ಸುದ್ದಿ ತಿಳಿದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಟಿ. ನರಸೀಪುರ ತಾಲೂಕಿನಲ್ಲಿ ಚಿರತೆಗಳು ನಿರಂತರವಾಗಿ ದಾಳಿ ಮಾಡುತ್ತಿದ್ದು, ಈಗಾಗಲೇ ಎರಡು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಕುಡಿಯುವ ನೀರಿಗೆ ಹಾಹಾಕಾರ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಡಿಸಿಗೆ ಒತ್ತಾಯ

ವಿಜಯಸಾಕ್ಷಿ ಸುದ್ದಿ, ನವಲಗುಂದ

ಪಟ್ಟಣದ ಜಲದೇವತೆಯಂದೇ ಖ್ಯಾತಿ ಪಡೆದಿರುವ ಚೆನ್ನಮ್ಮನ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ  ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಪರದಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣ ಉಂಟಾಗಿದೆ.

ಸುಮಾರು 50 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದಲ್ಲಿ ಬೇಸಿಗೆಯಲ್ಲಿ ಶುದ್ದ ಕುಡಿಯುವ ನೀರು ಪೂರೈಕೆಗೆ ಯಾವುದೇ ತೊಂದರೆಯಾಗಬಾರದೆಂದು ಚೆನ್ನಮ್ಮ ಜಲಾಗಾರದಲ್ಲಿ ಮುಂದಿನ ಐದು ತಿಂಗಳಿಗಾಗುವಷ್ಟು ನೀರಿನ ಶೇಖರಣೆ ಮಾಡಲಾಗಿದೆ.

ಕೊಟ್ಯಂತರ ರೂಪಾಯಿ ಖರ್ಚು ಮಾಡಿ ನೀರೆತ್ತುವ ಪಂಪ್‍ಗಳನ್ನು ಅಳವಡಿಸಲಾಗಿದೆ. ಹೊಸದಾಗಿ ಪೈಪ್‍ಲೈನ್‍ಗಳ ಜೋಡಣೆ ಮಾಡಲಾಗಿದ್ದು, ನಿರ್ವಹಣೆಗೆ ಬೇಕಾದಂತಹ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ಅಷ್ಟೇ ಅಲ್ಲದೇ ಒಂದುವೇಳೆ ನೀರೆತ್ತುವ ಪಂಪ್ ದುರಸ್ತಿ ಬಂದರೆ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಬಾರದೆಂದು ಮುನ್ನೆಚ್ಚರಿಕೆಯಾಗಿಯೇ ಮೀಸಲಾಗಿ ಸುಸಜ್ಜಿತವಾದ ಇನ್ನೊಂದು ಪಂಪ್‍ನ್ನು ಕಾಯ್ದಿರಿಸುವ ವ್ಯವಸ್ಥೆ ಇಲ್ಲಿ ಅಳವಡಿಸಲಾಗಿದೆ.

ಆದರೆ ನಿರ್ವಹಣೆ ಮಾಡಬೇಕಾದ ಸಿಬ್ಬಂದಿ ಹಾಗೂ ಮುಖ್ಯಾಧಿಕಾರಿಗಳ ನಿಷ್ಕಾಳಜಿಯಿಂದಾಗಿ ನೀರೆತ್ತುವ ಎರಡು ಪಂಪ್‍ಗಳು ಸುಟ್ಟಿವೆ. ಇದರಿಂದಾಗಿ ನಿರಂತರವಾಗಿ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗದೇ ಸಿಬ್ಬಂದಿ ಕೈಚೆಲ್ಲಿ ಕುಳಿತಿದ್ದಾರೆ.  

ಕಳೆದ ಒಂದು ತಿಂಗಳ ಹಿಂದೆಯೇ ಒಂದು ಪಂಪ್‍ಸೆಟ್ ಸುಟ್ಟಿತ್ತು,  ಪಂಪ್‍ಸೆಟ್ ದುರಸ್ತಿ ಮಾಡಿಸುವಂತೆ ತಮ್ಮ ಮೇಲಾಧಿಕಾರಿಗಳಿಗೆ ಸಿಬ್ಬಂದಿ ಹೇಳುತ್ತಲೇ ಬಂದಿದ್ದರಾದರೂ ನೀರು ಪೂರೈಕೆಯಲ್ಲಿ ಯಾವುದೇ ತೊಂದರೆಯಾಗಬಾರದೆಂದು ಕಾಯ್ದಿರಿಸಿದ ಪಂಪ್‍ಸೆಟ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತ್ತು. ಈಗ ಕಾಯ್ದಿರಿಸಿದ ಪಂಪ್‍ಸೆಟ್ ಕೂಡ ಸುಟ್ಟಿರುವುದರಿಂದ ನೀರೆತ್ತಬೇಕಾದ ಎರಡು ಪಂಪ್‍ಸೆಟ್‍ಗಳು ಬಂದ್ ಆಗಿದ್ದರ ಫಲವೇ ಪಟ್ಟಣಕ್ಕೆ ಶುದ್ದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ.

ಈ ಮೊದಲು ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾದರೇ ಸಾರ್ವಜನಿಕರು ಪಟ್ಟಣದ ಹೃದಯಭಾಗದಲ್ಲಿರುವ ನೀಲಮ್ಮನ ಕೆರೆಗೆ ಹೋಗಿ ನೀರು ತರುತ್ತಿದ್ದರು. ಈಗ ನೀಲಮ್ಮನ ಕೆರೆಯ ನೀರನ್ನೆಲ್ಲ ಹೊರಹಾಕಿ ಹೂಳೆತ್ತುವ, ತಡೆಗೊಡೆ, ಪಾದಚಾರಿಗಳ ಮಾರ್ಗದ ದುರಸ್ತಿ ಕೆಲಸ ಮಾಡುತ್ತಿರುವುದರಿಂದ ನೀರಿಲ್ಲದೇ ಜನರು ಪರದಾಡುತ್ತಿದ್ದಾರೆ.

ಚೆನ್ನಮ್ಮನ ಜಲಾಶಯದಿಂದಲೂ ನೀರು ಪೂರೈಕೆಯಾಗುತ್ತಿಲ್ಲ, ನೀಲಮ್ಮನ ಕೆರೆಯಲ್ಲಿಯೂ ನೀರಿಲ್ಲದೇ ಸಾರ್ವಜನಿಕರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಸುಸಜ್ಜಿತವಾದ ವ್ಯವಸ್ಥೆಯನ್ನು ಹಾಳು ಮಾಡಿರುವ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಶಿಸ್ತು ಕ್ರಮ ಜರುಗಿಸಬೇಕು,  ಎರಡು ಪಂಪ್‍ಸೆಟ್‍ಗಳು ಸುಟ್ಟು ಹೋಗುವವರೆಗೆ ಅಧಿಕಾರಿಗಳು ಯಾಕೆ ನಿರ್ಲಕ್ಷ್ಯ ವಹಿಸಿದರು. ಮೇಲಿಂದ ಮೇಲೆ ಪಂಪ್‍ಸೆಟ್‍ಗಳು ಸುಟ್ಟು ಹೋಗುತ್ತಿರುವುದೇಕೆ ? ನಿರ್ವಹಣೆ ಮಾಡಬೇಕಾದ ಸಿಬ್ಬಂದಿಯ ನಿಷ್ಕಾಳಜಿಯೇ ?  ತಾಂತ್ರಿಕ ಸಮಸ್ಯೆ ಏನಾದರೂ ಇದೆಯೇ ?  ಅಥವಾ ಕುಡಿಯುವ ನೀರು ಪೂರೈಕೆಯಲ್ಲಿ ತೊಂದರೆ ಉಂಟು ಮಾಡಿದರೆ ಬೇಕಾದಷ್ಟು ಹಣವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂಬ ದುರುದ್ದೇಶವೇನಾದರೂ ಅಡಗಿದೆಯೇ ಎಂಬೆಲ್ಲ ಪ್ರಶ್ನೆಗಳು ಎದುರಾಗಿದ್ದು,  ಮೇಲಾಧಿಕಾರಿಗಳು ತನಿಖೆ ಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಒತ್ತಾಸೆಯಾಗಿದೆ.

ಕೊಟ್ಯಾಂತರ ರೂಪಾಯಿ ಖರ್ಚು ಮಾಡಿ ಅಳವಡಿಸಲಾಗಿರುವ ನೀರೆತ್ತುವ ಪಂಪ್‍ಸೆಟ್‍ಗಳು ಮೇಲಿಂದ ಮೇಲೆ ಸುಡುತ್ತಿರುವುದಾದರೂ ಯಾತಕ್ಕಾಗಿ, ವಿದ್ಯುತ್ ಪೂರೈಕೆಯಲ್ಲಿ ಏನಾದರೂ ತೊಂದರೆಯಾಗಿದೆಯೇ  ಎಂಬೆಲ್ಲ ಯಕ್ಷ ಪ್ರಶ್ನೆಗಳಿಗೆ ಸಂಬಂದಪಟ್ಟ ಅಧಿಕಾರಿಗಳು ಉತ್ತರಿಸಬೇಕಾಗಿದೆ.

ಗ್ಯಾರಂಟಿ ನಂಬಿ ತಪ್ಪಾಯಿತು

ಮೇಲಿಂದ ಮೇಲೆ ಪಂಪ್‍ಸೆಟ್‍ಗಳು ದುರಸ್ತಿ ಬರುತ್ತಿರುವ ಹಿನ್ನಲೆಯಲ್ಲಿ ಗ್ಯಾರಂಟಿ ಕೊಡುವಂತೆ ದುರಸ್ತಿದಾರರಿಗೆ ಮನವಿ ಮಾಡಿದ್ದೇವು. ಹುಬ್ಬಳ್ಳಿಯ ಇಲೆಕ್ಟ್ರಿಕಲ್ ಇಂಜನಿಯರ್ ಅಂಗಡಿಯವರಿಗೆ ಉಚಿತವಾಗಿ ದುರಸ್ತಿ ಮಾಡಿ ಕೊಡುವಂತೆ ಒತ್ತಾಯಿಸಿದ್ದವು. ಆದರೆ ಅವರು ಇಲೆಕ್ಟ್ರಿಕಲ್ ಮಷಿನ್‍ಗಳಿಗೆ ಗ್ಯಾರಂಟಿ ಕೊಡುವುದಿಲ್ಲ ಎಂದು ಹೇಳುತ್ತಿದ್ದರಿಂದ, ಹಗ್ಗ ಜಗ್ಗಾಟದ ನಡುವೆ ವಿಳಂಬವಾಗಿ ಈ ಸಮಸ್ಯೆ ಎದುರಾಗಿದೆ. ಸೋಮವಾರದಿಂದ ನೀರಂತರ ನೀರು ಸರಬರಾಜು ಮಾಡಲು ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆಂದು ಪುರಸಭೆಯ ಕಿರಿಯ ಅಭಿಯಂತರ ಪ್ರವೀಣ ಗ್ವಾರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬೈಕ್ ಅಪಘಾತ; ಸೆಕ್ಯೂರಿಟಿ ಗಾರ್ಡ್ ಸ್ಥಳದಲ್ಲಿಯೇ ಸಾವು

ವಿಂಡ್ ಪ್ಯಾನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಭೈರಪ್ಪ

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ಸೂರಟೂರನಿಂದ ಶಿರಹಟ್ಟಿ ಕಡೆಗೆ ಬೈಕ್ ನಲ್ಲಿ ಬರುತ್ತಿದ್ದ ಸೆಕ್ಯೂರಿಟಿ ಗಾರ್ಡ್ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಥಳದಲ್ಲಿಯೇ ಮೃತಪಟ್ಟ ದುರ್ಘಟನೆ ಜರುಗಿದೆ.

ಬೈರಪ್ಪ ತಂದೆ ಮಲ್ಲಪ್ಪ ಹಳ್ಳಿ (48)ಮೃತಪಟ್ಟ ದುರ್ಧೈವಿಯಾಗಿದ್ದಾನೆ.

ಸಮೀಪದ ಯಲಿಶಿರುಂದ ಗ್ರಾಮದ ಬಳಿ ಇರುವ ವಿಂಡ್ ಪ್ಯಾನ್ ಕಂಪನಿಯಲ್ಲಿ ಮೃತ ಭೈರಪ್ಪ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಶಿರಹಟ್ಟಿಯ ತಮ್ಮ ಸಂಬಂಧಿಕರ ಮನೆಗೆ ಬೈಕ್ ನಲ್ಲಿ ಹೊರಟಾಗ ಬೈಕ್ ಮೇಲಿನ ನಿಯಂತ್ರಣ ಕಳೆದುಕೊಂಡು ಸೇತುವೆಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ಮನೆಯ ಮೂವರ ಆತ್ಮಹತ್ಯೆ; ಮನಕಲಕುವ ಘಟನೆ

0

ಪ್ರೀತಿಸಿದ ಹುಡುಗಿಯೊಂದಿಗೆ ಊರು ತೊರೆದ ಕಿರಿಯ ಮಗ/ ಯುವತಿಯ ಪಾಲಕರಿಂದ ಕಿರುಕುಳದ ಆರೋಪ

ವಿಜಯಸಾಕ್ಷಿ ಸುದ್ದಿ, ಹಾವೇರಿ

ಮಗನ ಹುಚ್ಚು ಪ್ರೀತಿಗೆ ಕುಟುಂಬವೇ ಬಲಿಯಾಗಿದೆ. ತಾಯಿ, ಸಹೋದರ, ಗರ್ಭಿಣಿ ಅತ್ತಿಗೆ ನೇಣಿಗೆ ಶರಣಾಗಿದ್ದು, ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದೆ. ಹಾವೇರಿಯ ಅಗಡಿ ಗ್ರಾಮದಲ್ಲಿ ನಡೆದ ಈ ದುರ್ಘಟನೆ ಎಂಥ ಕಲ್ಲು ಹೃದಯದವರನ್ನೂ ಕ್ಷಣಕಾಲ ಕರಗಿಸುವಂತಿದೆ.

ಅಗಡಿ ಗ್ರಾಮದಲ್ಲಿ ವಾಸವಾಗಿರುವ ವಿರೂಪಾಕ್ಷಪ್ಪನ‌ ಮನೆಯಲ್ಲಿ ಮೂವರು ನೇಣು ಕುಣಿಕೆಗೆ ಕೊರಳೊಡ್ಡಿದ್ದಾರೆ. ಮುಂಜಾನೆ ಉಪಹಾರ ಸೇವಿಸಿದ ಬಳಿಕ ಮನೆಯಿಂದ ಹೊರಗಡೆ ಬಂದಿದ್ದ ಮನೆಯ ಯಜಮಾನ ವಿರೂಪಾಕ್ಷಪ್ಪ ಮರಳಿ ಮನೆಗೆ ಬಂದಾಗ ಬೆಚ್ಚಿಬೀಳುವ ಘಟನೆ ನಡೆದುಹೋಗಿತ್ತು.

ಇದನ್ನೂ ಓದಿ ಶಿಕ್ಷಕನ ಅಟ್ಟಹಾಸಕ್ಕೆ ನಲುಗಿದ್ದ ಶಿಕ್ಷಕಿ ಗೀತಾ ಆಸ್ಪತ್ರೆಯಲ್ಲಿ ಸಾವು

ಪತ್ನಿ ಭಾರತಿ, ಹಿರಿಯ ಮಗ ಕಿರಣ, ಹಿರಿಯ ಸೊಸೆ ಸೌಜನ್ಯ ಎಲ್ಲರೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಮೂರು ತಿಂಗಳ ಹಿಂದಷ್ಟೇ ಹಿರಿಯ ಮಗ ಕಿರಣ ಸೌಜನ್ಯಳನ್ನು ಪ್ರೀತಿಸಿ ಮದುವೆಯಾಗಿದ್ದ.

ಸೌಜನ್ಯಳ ಒಡಲಲ್ಲಿ ಕುಟುಂಬದ ಕುಡಿ ಚಿಗುರೊಡೆದಿತ್ತು. ಸೊಸೆ ಗರ್ಭಿಣಿಯಾಗಿರುವ ಸಂತಸದ ನಡುವೆಯೇ ಕುಟುಂಬಕ್ಕೆ ಬರಸಿಡಿಲಾಗಿ ಬಡಿದಿದ್ದು ಮಾತ್ರ ವಿರೂಪಾಕ್ಷಪ್ಪನ ಕಿರಿಯ ಪುತ್ರ ಅರುಣನ ಪ್ರೇಮ ಪ್ರಕರಣ.

ಗ್ರಾಮದ ಯುವತಿ ಗೌರಮ್ಮನಳನ್ನು ಅರುಣ ಪ್ರೀತಿಸುತ್ತಿದ್ದ. ಯುವತಿ ಮನೆಯವರ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಪ್ರೀತಿಸಿದ ಹುಡುಗಿಯೊಂದಿಗೆ ಅರುಣ್ ಊರು ಬಿಟ್ಟು ಪರಾರಿಯಾಗಿದ್ದ.

ಇದೇ ವಿಚಾರಕ್ಕೆ ಸಂಬಂಧಿಸಿ ಯುವತಿಯ ಕುಟುಂಬದವರು ಅರುಣ್‌ನ ಮನೆಯವರಿಗೆ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ನೀಡಿದ ಕಿರುಕುಳದಿಂದ ಬೇಸತ್ತು ತನ್ನ ಪತ್ನಿ, ಹಿರಿಯ ಮಗ, ಹಾಗೂ ಸೊಸೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವಿರೂಪಾಕ್ಷಪ್ಪ ಆರೋಪಿಸಿದ್ದಾರೆ.

ಒಟ್ಟಿನಲ್ಲಿ, ಬದುಕಿ ಬಾಳಬೇಕಿದ್ದ ನವವಿವಾಹಿತರು ಉಸಿರು ನಿಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿ ಗ್ರಾಮೀಣ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!