Home Blog Page 3205

ಬೈಕ್ ಅಪಘಾತ; ಪುರಸಭೆ ನೌಕರ ಬಸವರಾಜ್ ಸಾವು

ಕರ ವಸೂಲಿ ಸಹಾಯಕರಾಗಿದ್ದ ಬಸವರಾಜ್

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಟ್ಟಣದ ಪುರಸಭೆಯಲ್ಲಿ ಕರ ವಸೂಲಿ ಸಹಾಯಕರಾಗಿದ್ದ ಬಸವರಾಜ ಕೆ. ಬೆಳವಿಗಿ ಶನಿವಾರ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ಕಂಪ್ಯೂಟರ್ ಸಾಕ್ಷರತೆ ಪರೀಕ್ಷೆ ಮುಗಿಸಿ ಶನಿವಾರ ರಾತ್ರಿ ಲಕ್ಷ್ಮೇಶ್ವರ ಪಟ್ಟಣಕ್ಕೆ ಮರಳಿ ಬರುವಾಗ ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದ ಹತ್ತಿರ ಬೈಕ್ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಈ ಕುರಿತು ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರಿಗೆ ಪತ್ನಿ, ಮೂವರು ಪುತ್ರರು ಬಂಧು-ಬಳಗವಿದೆ.

ಜಪಾನ್‌ನ ದಾಖಲೆ ಅಳಿಸಿದ ಆಕಾಶ ಜೋಗರೆಡ್ಡಿ- ಶ್ರವಣಕುಮಾರ; ಕೆಎಲ್‌ಇ ವಿದ್ಯಾರ್ಥಿಗಳ ಗಿನ್ನಿಸ್ ರೆಕಾರ್ಡ್!

ಗದಗನ ಕೀರ್ತಿ ಹೆಚ್ಚಿಸಿದ ವಿದ್ಯಾರ್ಥಿಗಳು

ವಿಜಯಸಾಕ್ಷಿ ಸುದ್ದಿ, ಗದಗ

ಇಲ್ಲಿನ ಕೆಎಲ್‌ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದ ಸ್ನಾತಕೋತ್ತರ (ಇಂಗ್ಲಿಷ್) ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆಕಾಶ ಜೋಗರೆಡ್ಡಿ ಮತ್ತು ಶ್ರವಣಕುಮಾರ ಗಿನ್ನಿಸ್ ದಾಖಲೆ ನಿರ್ಮಿಸಿದ್ದಾರೆ.

ವೀಲ್ ಸ್ಟೈಲ್ ಸ್ಕಿಪಿಂಗ್‌ನಲ್ಲಿ 2512 ಸುತ್ತುಗಳನ್ನು 40 ನಿಮಿಷದಲ್ಲಿ ಪೂರ್ಣಗೊಳಿಸಿದ ಅವರು ಈ ಮೂಲಕ ಜಪಾನ್ ದೇಶದ ಯು-ವಕಮಾಟೋ ಮತ್ತು ನರಿಹಿಷಾ ತಗುಚಿ ಅವರ ಹೆಸರಿನಲ್ಲಿದ್ದ 1559 ಸುತ್ತುಗಳ ದಾಖಲೆಯನ್ನು ಅಳಿಸಿದ್ದಾರೆ.

ಕೆಎಲ್‌ಇ ಆಡಳಿತ ಮಂಡಳಿ ಸದಸ್ಯರಾದ ಶಂಕ್ರಣ್ಣ ಮುನವಳ್ಳಿ ವಿದ್ಯಾರ್ಥಿಗಳ ಸಾಧನೆ ಕುರಿತು ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ಬಾಗಲಕೋಟೆಯ ವಿಜಯಕುಮಾರ ಹಾಗೂ ಗದಗ ಕೆಎಲ್‌ಇ ಸಂಸ್ಥೆಯ ಸಿಬಿಎಸ್‌ಸಿ ಶಾಲೆಯ ಶ್ರೀನಿವಾಸ ಗುಳಗುಂಡಿ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಸಮಯ ಪಾಲಕರಾಗಿ ದೈಹಿಕ ಶಿಕ್ಷಣ ನಿರ್ದೇಶಕ ಬಸವರಾಜ ಚಿಕ್ಕನ್ನವರ ಹಾಗೂ ಸಚ್ಚಿದಾನಂದ ಹೆಗಡೆ ಕಾರ್ಯ ನಿರ್ವಹಿಸಿದ್ದಾರೆ ಎಂದರು.

ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರಾದ ಆಕಾಶ ಜೋಗರಡ್ಡಿ 6ನೇ ತರಗತಿಯಿಂದ ಸ್ಕಿಪ್ಪಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರು. ನೇಪಾಳದ ಕಠ್ಮಂಡುವಿನಲ್ಲಿ ಜರುಗಿದ ದಕ್ಷಿಣ ಏಷ್ಯಾ ವಲಯದ ಸ್ಪರ್ಧೆಯಲ್ಲಿ ಭಾಗವಹಿಸಿ ಬಂಗಾರದ ಪದಕ ಪಡೆದಿದ್ದಾರೆ. ಕಾಲೇಜು ಹಂತದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಆಂಧ್ರ ಪ್ರದೇಶ ಮತ್ತು ಓಡಿಸ್ಸಾ ರಾಜ್ಯಗಳಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದಿದ್ದಾರೆ.

ಗಿನ್ನಿಸ್ ದಾಖಲೆ ಹೊರತುಪಡಿಸಿ ಸ್ಕಿಪಿಂಗ್‌ನಲ್ಲಿ ಒಟ್ಟು 9 ದಾಖಲೆಗಳನ್ನು ನಿರ್ಮಿಸಿದ್ದಾರೆ ಎಂದರು.

ಕೊಪ್ಪಳ ತಾಲೂಕಿನ ಕುಕನೂರ ಪಟ್ಟಣದ ಶ್ರವಣಕುಮಾರ ಆಂಧ್ರ ಪ್ರದೇಶ, ರಾಜಸ್ಥಾನ ಮತ್ತು ಓಡಿಸ್ಸಾ ರಾಜ್ಯಗಳಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಿದ್ದಾರೆ. ಪಿಯುಸಿ ಹಂತದಿಂದ ಸ್ಕಿಪ್ಪಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಈ ಸಾಧನೆ ಗಮನಿಸಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ವಿದ್ಯಾರ್ಥಿಗಳ ಪ್ರವೇಶ ಶುಲ್ಕದಲ್ಲಿ ಶೇ. 50 ರಷ್ಟು ವಿನಾಯಿತಿ ಕೊಟ್ಟು ಪ್ರೋತ್ಸಾಹಿಸಿದ್ದಾರೆ. ಕೆಎಲ್‌ಇ ಸಂಸ್ಥೆ ಪ್ರತಿಭಾವಂತರಿಗೆ ಸಾಕಷ್ಟು ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಈ ಕ್ರೀಡಾ ಸಾಧಕರು ಶೈಕ್ಷಣಿಕವಾಗಿಯೂ ಉನ್ನತ ಸಾಧನೆ ಮಾಡಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಜೆ.ಟಿ.ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಸ್.ಪಿ. ಸಂಶಿಮಠ, ಈಶಣ್ಣ ಮುನವಳ್ಳಿ, ಅಶೋಕ ನೀಲುಗಲ್, ತೊಂಟೇಶ ಮಾನ್ವಿ, ವೀರೇಶ ಕೂಗು, ಪ್ರಾ. ಪಿ.ಜಿ. ಪಾಟೀಲ, ಗಿನ್ನಿಸ್ ದಾಖಲೆ ಬರೆದ ಆಕಾಶ ಜೋಗರೆಡ್ಡಿ ಮತ್ತು ಶ್ರವಣಕುಮಾರ ಉಪಸ್ಥಿತರಿದ್ದರು.

ಅಭಿವೃದ್ಧಿ ಕೆಲಸ ಸಹಿಸದ ಮಾಜಿ ಶಾಸಕ ಕೋನರಡ್ಡಿಗೆ ಮಂಪರು ಪರೀಕ್ಷೆ ಅಗತ್ಯವಿದೆ

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕೇವಲ ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿಯೇ ನೂರಾರು ಕೋಟಿ ಅನುದಾನ ತಂದು ತ್ವರಿತಗತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಮಾಡುತ್ತಿದ್ದರೂ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿಯವರು ನಿದ್ದೆಗಣ್ಣಿನಲ್ಲಿ ಬಿಜೆಪಿ ವಿರುದ್ಧ ಅನವಶ್ಯಕವಾಗಿ ಆರೋಪ ಮಾಡುತ್ತಿರುವುದರಿಂದ ಅವರನ್ನು ಮಂಪರು ಪರೀಕ್ಷೆ ಮಾಡಿಸಬೇಕಾಗಿದೆ ಎಂದು ಬಿಜೆಪಿ ತಾಲ್ಲೂಕಾ ಅಧ್ಯಕ್ಷ ಎಸ್.ಪಿ.ದಾನಪ್ಪಗೌಡರ ಹರಿಹಾಯ್ದರು.

ಶುಕ್ರವಾರ ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಮಾಡಿರುವ ಅವಹೇಳನಕಾರಿ ಆರೋಪದ ವಿರುದ್ಧ ಬಿಜೆಪಿ ಮಾಡಿರುವ ಸಾಧನೆಗಳ ಪಟ್ಟಿ ನೀಡಿ ಅವರು ಮಾತನಾಡಿದರು.

ಬಿಜೆಪಿ ಶಾಸಕರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಎರಡು ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ಸಕ್ಕರೆ ಹಾಗೂ ಜವಳಿ ಸಚಿವರಾಗಿ ರಾಜ್ಯದುದ್ದಕ್ಕೂ ಪ್ರವಾಸ ಕೈಗೊಂಡು ಕಬ್ಬು ಬೆಳೆಗಾರರಿಗೆ, ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ತಮ್ಮ ನಿರಂತರ ಪ್ರವಾಸದಲ್ಲಿಯೂ ನವಲಗುಂದ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪುರಸಭೆಯ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿಯೇ ರೂ.118 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುದಾನವನ್ನು ತಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದಾರೆ.

ಪ್ರಮುಖ ಯೋಜನೆಗಳಾದ ನಿರಂತರ ನೀರು ಸರಬರಾಜು ಯೋಜನೆಗೆ ರೂ.48 ಕೋಟಿ, ಕೊಳಚೆ ಪ್ರದೇಶದ ವಸತಿ ರಹಿತ ನಿವಾಸಿಗಳಿಗೆ ಮನೆ ನಿರ್ಮಿಸಲು ರೂ.25 ಕೋಟಿ, ನಗರೋತ್ತಾನ ಯೋಜನೆಗಾಗಿ ರೂ.10 ಕೋಟಿ, ನೀರಾವರಿ ಇಲಾಖೆಯ ಪ್ರವಾಸಿ ಮಂದಿರಕ್ಕೆ ರೂ.8.65 ಕೋಟಿ, ಅಣ್ಣಿಗೇರಿ ರಸ್ತೆ ನಿರ್ಮಾಣಕ್ಕೆ ರೂ.3 ಕೋಟಿ, ಬಸವೇಶ್ವರ ನಗರದಿಂದ ಹಳ್ಳಿಕೇರಿ ರಸ್ತೆ ನಿರ್ಮಾಣಕ್ಕೆ ರೂ.2 ಕೋಟಿ, ನಾಗಲಿಂಗಜ್ಜನ ಮಠಕ್ಕೆ ರೂ.1 ಕೋಟಿ, ಗವಿಮಠಕ್ಕೆ ರೂ.50 ಲಕ್ಷ, ಪಂಚಗೃಹ ಹಿರೇಮಠಕ್ಕೆ ರೂ.25 ಲಕ್ಷ, ಕೆ.ಇ.ಬಿ ಗ್ರಿಡ್ ಕಂಪೌಂಡ ನಿರ್ಮಾಣಕ್ಕೆ ರೂ.42 ಲಕ್ಷ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಬಾಲಕ ಬಾಲಕಿಯರ ವಸತಿ ನಿಲಯಗಳಿಗೆ ರೂ.3 ಕೋಟಿ, ಪುರಸಭೆ ಹದ್ದಿನಲ್ಲಿನ ಮಾಡೆಲ್ ಹೈಸ್ಕೂಲ್‌ ಬಳಿ 500 ಲಕ್ಷ ಲೀಟರ ನೀರಿನ ಸಾಮಾರ್ಥ್ಯದ ವಾಟರ್ ಟ್ಯಾಂಕ್ ನಿರ್ಮಾಣ ಸೇರಿದಂತೆ ಒಟ್ಟು ರೂ.111.42 ಕೋಟಿ ಅನುದಾನದ ಕಾಮಗಾರಿಗಳು ಪ್ರಾರಂಭದಲ್ಲಿವೆ.

ಆದರೆ ಮಾಜಿ ಶಾಸಕ ಕೋನರಡ್ಡಿಯವರು ಮಾತ್ರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಒಂದು ವರ್ಷವಾದ ಕಾರಣ ಅವರು ಈಚೆಗೆ ಕಿರೆಸೂರ ಗ್ರಾಮದ ಬಳಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ವಿನಾಕಾರಣ ಕಳೆದ 4 ವರ್ಷದಲ್ಲಿ ಏನು ಕೆಲಸ ಮಾಡಿಲ್ಲವೆಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ ಸಚಿವ ಶಂಕರ ಪಾಟೀಲ ಸಹೋದರರು ನಿಧನರಾದಾಗ ಅವರು ಕ್ಷೇತ್ರಕ್ಕೆ ಬಂದಿಲ್ಲ, ನಾನೇ ಮುಂದೆ ನಿಂತು ರೈತರ ಸಮಸ್ಯೆಗಳನ್ನು ಬಗೆ ಹರಿಸಿದ್ದೇನೆಂದು ಹೇಳಿರುವುದು ಮಾಜಿ ಶಾಸಕ ಕೋನಡ್ಡಿಯವರು ಎಂತಹ ಸ್ವಭಾವದವರು ಎಂದು ಜನ ಅರ್ಥೈಸಿಕೊಳ್ಳಬೇಕಾಗಿದೆ.

ನಾಲ್ಕು ವರ್ಷ ಮನೆಯಲ್ಲಿ ಮಲಗಿದ್ದ ಅವರು ಈಗ ಚುನಾವಣೆ ಸಂದರ್ಭದಲ್ಲಿ ಬಂದು ನಾನು ರೈತರ ಪರವಾಗಿದ್ದೇನೆ, ನಾನೇ ಕಾಂಗ್ರೆಸ್ ಟಿಕೆಟ್ ತೆಗೆದುಕೊಳ್ಳುತ್ತೇನೆ, ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡೋಣವೆಂದು ಜನರನ್ನು ನಂಬಿಸಲು ಹೊರಟಿರುವುದು ಅವರ ಕೀಳಮಟ್ಟತನಕ್ಕೆ ಜನರೆ ತಕ್ಕ ಪಾಠ ಕಲಿಸಲಿದ್ದಾರೆ.

ಸುಳ್ಳು ಹೇಳುವುದನ್ನೇ ರೂಢಿಸಿಕೊಂಡು ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದುಕೊಳ್ಳುತ್ತೇನೆಂಬ ಹಗಲುಗನಸು ಕಾಣುತ್ತಿರುವ ಅವರಿಗೆ  ಮಂಪರು ಪರೀಕ್ಷೆಯ ಅವಶ್ಯಕತೆ ಇದೆ ಎಂದು ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಪಿ.ದಾನಪ್ಪಗೌಡರ ಹರಿಹಾಯ್ದರು.

ಈ ಸಂದಭದಲ್ಲಿ ಬಿಜೆಪಿಯ ಹಿರಿಯರಾದ ರಾಯನಗೌಡ ಪಾಟೀಲ, ಪುರಸಭೆ ಸದಸ್ಯರಾದ ಮಹಾಂತೇಶ, ಕಲಾಲ, ಜ್ಯೋತಿ ಗೊಲ್ಲರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. 

ನವಲಗುಂದ ಪುರಸಭೆ ಅಧ್ಯಕ್ಷರಾಗಿ ಮೋದಿನಸಾಬ ಶಿರೂರ ಆಯ್ಕೆ

ಪೆಂಡಾಲ್‍ಗಾರನಿಗೆ ಒಲಿದ ಪುರಸಭೆ ಅಧ್ಯಕ್ಷ ಪಟ್ಟ

ವಿಜಯಸಾಕ್ಷಿ ಸುದ್ದಿ, ನವಲಗುಂದ

ಸ್ಥಳೀಯ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಮೋದಿನಸಾಬ ಶಿರೂರ ಅಧ್ಯಕ್ಷರಾಗಿ ಬಹುಮತದಿಂದ ಚುನಾಯಿತರಾದರೆ  ಪ್ರತಿಸ್ಪರ್ಧಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ಬಾಬಾಜಾನ ಮಕಾನದಾರ ಪರಾಭವಗೊಂಡರು.

ಪುರಸಭೆ ಅಧ್ಯಕ್ಷನಾಗಿದ್ದ ಅಪ್ಪಣ್ಣ ಹಳ್ಳದ ಅವರು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶನಿವಾರ ಇಲ್ಲಿಯ ಪುರಸಭೆ ಸಭಾಭವನದಲ್ಲಿ ಏರ್ಪಡಿಸಿದ್ದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಕಾಂಗ್ರೆಸ್‍ನಿಂದ ಮೋದಿನಸಾಬ ಶಿರೂರ ಹಾಗೂ ಜೆ.ಡಿ.ಎಸ್ ಪಕ್ಷದಿಂದ ಬಾಬಾಜಾನ ಮಕಾನದಾರ  ನಾಮಪತ್ರ ಸಲ್ಲಿಸಿದ್ದರು.

ಮೋದಿನಸಾಬ ಶಿರೂರ 15 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರೆ,  ಬಾಬಾಜಾನ ಮಕಾನದರ ಬಿಜೆಪಿಯ ಬಾಹ್ಯ ಬೆಂಬಲ ಪಡೆದರೂ ಕೇವಲ 7 ಮತಗಳನ್ನು ಪಡೆದು ನಿರಾಶೆ ಅನುಭವಿಸಬೇಕಾಯಿತು.

ತಹಶೀಲ್ದಾರ್ ಅನೀಲ ಬಡಿಗೇರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಒಟ್ಟು 23 ಸದಸ್ಯರಲ್ಲಿ ಕಾಂಗ್ರೆಸ್ 7,  ಜೆಡಿಎಸ್ 9, ಬಿಜೆಪಿ 6 ಹಾಗೂ ಒಬ್ಬರು ಪಕ್ಷೇತರ ಸದಸ್ಯರ ಬಲಾಬಾಲ ಹೊಂದಿತ್ತು. ಇತ್ತೀಚೆಗೆ ಜೆಡಿಎಸ್ ಪಕ್ಷದ ಒಬ್ಬರು ಸದಸ್ಯರು ಮೃತರಾದ ಕಾರಣ ಒಟ್ಟು 22 ಸದಸ್ಯರು ಮತ ಚಲಾಯಿಸಬೇಕಾಗಿತ್ತು.

ಆದರೆ ಇತ್ತೀಚೆಗೆ ಜೆ.ಡಿ.ಎಸ್ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ  ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ ಜೆ.ಡಿ.ಎಸ್ ಪಕ್ಷದಿಂದ ಆಯ್ಕೆಯಾಗಿದ್ದ ಎಲ್ಲ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನನ್ನನ್ನೇ ಕಾಂಗ್ರೆಸ್ ಪಕ್ಷದಿಂದ ಅಧ್ಯಕ್ಷ ಮಾಡುವಂತೆ ಬಾಬಾಜಾನ ಮಕಾನದಾರ ಪಟ್ಟು ಹಿಡಿದಿದ್ದರು. ಆದರೆ ಕಾಂಗ್ರೆಸ್ ಪಕ್ಷ ಮೋದಿನಸಾಬ ಶಿರೂರ ಅವರನ್ನು ಕಣಕ್ಕಿಳಿಸಿದ್ದರಿಂದ ಮುನಿಸಿಕೊಂಡ ಬಾಬಾಜಾನ ಅನಿವಾರ್ಯವಾಗಿ ಈ ಮೊದಲು ಆಯ್ಕೆಯಾಗಿದ್ದ ಜೆ.ಡಿ.ಎಸ್ ಪಕ್ಷದಿಂದಲೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿಬಿಟ್ಟರು.

ಆದರೆ ರಾಷ್ಟ್ರೀಯ ಪಕ್ಷವಾಗಿದ್ದ ಬಿಜೆಪಿ 6 ಸದಸ್ಯರನ್ನು ಹೊಂದಿದ್ದರೂ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಮುಸ್ಲಿಂ ಅಭ್ಯರ್ಥಿಯಾಗಿದ್ದ ಬಾಬಾಜಾನ ಮಕಾನದಾರ ಅವರಿಗೆ ಬಾಹ್ಯ ಬೆಂಬಲ ವ್ಯಕ್ತಪಡಿಸುವ ಮೂಲಕ  ನಾವು ಮುಸ್ಲಿಂ ವಿರೋಧಿಗಳಲ್ಲ ಎಂಬ ಹಣೆಪಟ್ಟಿಯಿಂದ ಹೊರಬಂದಿದ್ದು ಕಂಡುಬಂತು.

ಪೆಂಡಾಲಗಾರನಿಗೆ ಒಲಿದ ಅದೃಷ್ಟ

ವೃತ್ತಿಯಿಂದ ಪೆಂಡಾಲ್ ಗುತ್ತಿಗೆದಾರನಾಗಿದ್ದ ಮೋದಿನಸಾಬ ಶಿರೂರು ಎಲ್ಲ ಪಕ್ಷದವರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು, ಯಾವುದೇ ಸಭೆ ಸಮಾರಂಭಗಳಿರಲಿ ಹಂದರ, ಚಪ್ಪರ ಹಾಕಲು ಇಂತಿಷ್ಟೆ ಹಣ ಕೊಡಬೇಕೆಂದು ಕರಾರು ಹಾಕುತ್ತಿರಲಿಲ್ಲ, ಕೊಟ್ಟಷ್ಟು ಹಣವನ್ನು ಪಡೆದುಕೊಳ್ಳುತ್ತಿದ್ದ ಕಾರಣ ಬಹುತೇಕ ಸದಸ್ಯರ ಮನದಾಳದಲ್ಲಿ ಪೆಂಡಾಲ್ ಮೋದಿನನ್ನು ಅಧ್ಯಕ್ಷ ಮಾಡಬೇಕೆಂಬ ಇಚ್ಚಾಶಕ್ತಿಯ ಫಲವೇ ಇವತ್ತು ಅವರಿಗೆ ಅದೃಷ್ಟ ಒಲಿದು ಬಂದಿದೆ ಎಂದು ಹೇಳಬೇಕಾಗುತ್ತದೆ.  

ಆದರೆ ಸದಸ್ಯರಲ್ಲಿಯೇ ಹಿರಿಯರಾಗಿದ್ದ ಫರಿದಾಬೇಗಂ  ಬಬರ್ಚಿ ಎರಡು ಬಾರಿ ಚುನಾಯಿತರಾಗಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರೂ ಅದೃಷ್ಟ ಅವರ ಕೈಹಿಡಿಯಲಿಲ್ಲ.  ಅಧ್ಯಕ್ಷ ಸ್ಥಾನಕ್ಕೆ ಪ್ರತಿಸ್ಪರ್ಧಿಯಾಗಿದ್ದ ಬಾಬಾಜಾನ ಮಕಾನದಾರ ಕೂಡ ವತ್ತಿಯಿಂದ ಪೆಂಡಾಲ ಗುತ್ತಿಗೆದಾರನಾಗಿದ್ದರೂ ಅದೃಷ್ಟ ಮಾತ್ರ ಮೋದಿನಸಾಬನಿಗೆ ಒಲಿದು ಬಂದಿದ್ದು ಮೊದಲ ಅವಧಿಯಲ್ಲಿ ಬಾಕಿ ಉಳಿದಿರುವ ಮುಂದಿನ ಐದು ತಿಂಗಳು ಅಂದರೆ ಮೇ.3 ರ ವರೆಗೆ ಕಾರ್ಯಭಾರ ಮಾಡಲಿದ್ದಾರೆ.

ಮೋದಿನಸಾಬ ಆಯ್ಕೆಯಾಗುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಬಣ್ಣ ಎರಚುವ ಮೂಲಕ ವಿಜಯೋತ್ಸವ ಆಚರಣೆ ಮಾಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ ಮಾಡಿದ್ದರು.

ಅಪ್ರಾಪ್ತಳ ಅತ್ಯಾಚಾರ ಪ್ರಕರಣ; ಆರೋಪಿಗೆ 24 ವರ್ಷ ಶಿಕ್ಷೆ, 41 ಸಾವಿರ ರೂ. ದಂಡ

ವಿಜಯಸಾಕ್ಷಿ ಸುದ್ದಿ, ಗದಗ

ನಿನ್ನನ್ನು ಪ್ರೀತಿಸುತ್ತಿದ್ದು, ಮದುವೆಯೂ ಆಗಿ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ನಂಬಿಸಿ, ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರವೆಸಗಿದ ಆರೋಪಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪ್ರಕರಣದ ಆರೋಪಿ ಆಸೀಫ್ ಹುಸೇನಸಾಬ ಕುಸುಗಲ್ ಇವನು ಪ್ರಕರಣದ ಫಿರ್ಯಾದಿದಾರರ ಅಲ್ಪವಯಿ ಮಗಳನ್ನು ಪರಿಚಯ ಮಾಡಿಕೊಂಡು, ಮದುವೆಯಾಗುವುದಾಗಿ ನಂಬಿಸಿ, ಗದಗ ಶಹರದ ಟಾಂಗಾಕೂಟ ಹತ್ತಿರ ಬರಲು ಹೇಳಿ, ಅಲ್ಲಿಂದ ಅಪಹರಿಸಿ ಮಂಗಳೂರಿಗೆ ಹೋಗಿ ಅಲ್ಲಿ ಮೋಹನ ತಿಮ್ಮಪ್ಪ ಎಂಬುವರಿಗೆ ಸೇರಿದ ಇಂಡಸ್ಟ್ರೀಸ್ ದಲ್ಲಿರುವ ಒಂದು ರೂಮಿನಲ್ಲಿ ಅಪ್ರಾಪ್ತ ವಯಸ್ಸಿನ ಸಂತೃಸ್ತ ಬಾಲಕಿಯನ್ನು ಅಕ್ರಮ ಬಂಧನದಲ್ಲಿಟ್ಟು, ಅತ್ಯಾಚಾರ ನಡೆಸಿದ ಅಪರಾಧವೆಸಗಿದ ಕುರಿತು ಆರೋಪಿತನ ವಿರುದ್ಧ ಅಂದಿನ ಗದಗ ಶಹರ ಠಾಣೆಯ ಸಿಪಿಐ ನಾಗರಾಜ ಎಂ.ಮಾಡಳ್ಳಿ ಅವರು ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರ ಎಸ್. ಶೆಟ್ಟಿ ಅವರು, ಸದರ ಪ್ರಕರಣದಲ್ಲಿ ಆರೋಪ ರುಜುವಾದ ಹಿನ್ನೆಲೆಯಲ್ಲಿ, ಆರೋಪಿತನಾದ ಆಸೀಫ್ ಹುಸೇನಸಾಬ ಕುಸುಗಲ್‌ನಿಗೆ ಡಿ.5ರಂದು ಭಾ.ದಂ.ಸಂ ಕಲಂ: 363 ಭಾದಂಸಂ ರಡಿ 3 ವರ್ಷ ಸಾದಾ ಶಿಕ್ಷೆ, ರೂ. 5,000 ದಂಡ, ಕಲಂ: 344 ಭಾದಂಸಂ ರಡಿ 1 ವರ್ಷ ಸಾದಾ ಶಿಕ್ಷೆ ಹಾಗೂ ರೂ. 1,000 ದಂಡ, 376 (2)(i) ಭಾದಂಸಂ ರಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ ರೂ. 10,000 ದಂಡ ಮತ್ತು ಕಲಂ 4 ಪೋಕ್ಸೋ ಕಾಯ್ದೆಯಡಿ 10 ವರ್ಷ ಕಠಿಣ ಶಿಕ್ಷೆ ಹಾಗೂ ರೂ. 25,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ವಾದ ಮಂಡಿಸಿದ್ದರು ಎಂದು ಪ್ರಕಟಣೆಯಾದ ತಿಳಿಸಲಾಗಿದೆ.

ಪುಡಿ ರೌಡಿಗಳಿಂದ ಕ್ಷುಲ್ಲಕ ಕಾರಣಕ್ಕಾಗಿ ಟ್ರ್ಯಾಕ್ಟರ್ ಚಾಲಕ, ಮಾಜಿ ಸೈನಿಕನ ಮೇಲೆ ಹಲ್ಲೆ, ನಾಲ್ವರ ಬಂಧನ

ವಿಜಯಸಾಕ್ಷಿ ಸುದ್ದಿ, ಗದಗ

ಗದಗ-ಬೆಟಗೇರಿ ಅವಳಿ ನಗರದಲ್ಲಿ ರೌಡಿ ಶೀಟರ್‌ಗಳ, ಪುಡಿ ರೌಡಿಗಳ ಹಾವಳಿ ಎಲ್ಹೆ ಮೀರಿದೆ. ಎಲ್ಲೆಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು, ಎದುರಿನವರನ್ನು ಮನಬಂದಂತೆ ಥಳಿಸುತ್ತಿದ್ದಾರೆ. ಬೆಟಗೇರಿಯಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಅಮಾಯಕ ಟ್ರ‍್ಯಾಕ್ಟರ್ ಚಾಲಕನೊಂದಿಗೆ ಕ್ಯಾತೆ ತೆಗೆದು, ಹಲ್ಲೆ ಮಾಡಿದ್ದಾರೆ.

ಜಗಳ ಬಗೆಹರಿಸಲು ಮಧ್ಯೆ ಪ್ರವೇಶಿಸಿದ ಮಾಜಿ ಸೈನಿಕನ ಮೇಲೆಯೂ ಹಲ್ಲೆ ನಡೆಸಿ ದರ್ಪ ತೋರಿಸಿದ್ದಾರೆ. ನಾನು ಓರ್ವ ಮಾಜಿ ಸೈನಿಕ ಎಂದು ಹೇಳುತ್ತಿದ್ದರೂ ರೌಡಿ ಶೀಟರ್ ಗ್ಯಾಂಗ್ ಹಲ್ಲೆ ಮಾಡಿ ಪರಾರಿಯಾಗಿದೆ. ರೌಡಿಗಳ ಪುಂಡಾಟಿಕೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವಳಿ ನಗರದ ಜನತೆ ಬೆಚ್ಚಿಬಿದ್ದಿದೆ.

ಕಳೆದ ವಾರವಷ್ಟೇ ಕ್ಷುಲ್ಲಕ ಕಾರಣಕ್ಕೆ ಪುಡಿ ರೌಡಿಗಳು ನಾಲ್ಕು ಜನರಿಗೆ ಚೂರಿ ಇರಿದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಬೆಟಗೇರಿಯಲ್ಲಿ ಮತ್ತೆ ರೌಡಿಗಳು ಮತ್ತೆ ಬಾಲ ಬಿಚ್ಚಿದ್ದಾರೆ.

ಗದಗ ತಾಲೂಕಿನ ನೀರಲಗಿ ಗ್ರಾಮದ ರೈತ ಶರಣಪ್ಪಗೌಡ ಹಿರೇಗೌಡರ್ ಎನ್ನುವಾತ ಡಿಸೇಲ್ ಹಾಕಿಸಿಕೊಳ್ಳಲು ಪೆಟ್ರೋಲ್ ಬಂಕ್ ಗೆ ಬಂದಿದ್ದಾಗ, ಟ್ತ್ಯಾಕ್ಟರ್ ಅವರಿಗೆ ತಾಕದಿದ್ದರೂ ಕೂಡ ನಮ್ಮ ಮೇಲೆ ಟ್ರ‍್ಯಾಕ್ಟರ್ ಹಾಯಿಸ್ತಿಯಾ ಎಂದು ಜಗಳ ತೆಗೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಟ್ರ‍್ಯಾಕ್ಟರ್ ಚಾಲಕ, ಮಾಲೀಕ ಹಾಗೂ ಮಾಜಿ ಯೋಧರಾದ ಶ್ರೀನಿವಾಸ್ ವಾಲ್ಮೀಕಿ ಸ್ಥಳಕ್ಕೆ ಬಂದಿದ್ದಾರೆ. ವಿಚಾರಿಸುತ್ತಿರುವಾಗ, ಏಕಾಏಕಿ ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.

ಈ ವೇಳೆ ನಾನು ಮಾಜಿ ಸೈನಿಕನಿದ್ದೇನೆ, ಕೈಮಾಡಬೇಡಿ ಎಂದರೂ ಕೇಳದ ನಾಗರಾಜ್ ಭಜಂತ್ರಿ, ಶ್ರೀಕಾಂತ ಭಜಂತ್ರಿ, ರಾಜು ಭಜಂತ್ರಿ ಸೇರಿದಂತೆ, ಆರೇಳು ಜನರ ಗ್ಯಾಂಗ್ ಹಲ್ಲೆ ಮಾಡಿದ್ದಾರೆ. ಚಾಲಕ ಹಾಗೂ ಮಾಜಿ ಸೈನಿಕ ಪುಡಿ ರೌಡಿಗಳ ಹಲ್ಲೆಯಿಂದ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುಡಿ ರೌಡಿಗಳ ಅಟ್ಟಹಾಸ ಪೆಟ್ರೋಲ್ ಬಂಕ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ದೃಶ್ಯಗಳನ್ನು ಆಧರಿಸಿ, ರೌಡಿಗಳ ಗ್ಯಾಂಗ್‌ನ ರೌಡಿ ಶೀಟರ್ ರಾಜು ಭಜಂತ್ರಿ ಸೇರಿದಂತೆ ನಾಲ್ವರನ್ನು ಬೆಟಗೇರಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಪ್ರಮುಖ ಆರೋಪಿಗಳಾದ ನಾಗರಾಜ್ ಭಜಂತ್ರಿ, ಶ್ರೀಕಾಂತ್ ಭಜಂತ್ರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿದ್ದಕ್ಕೆ, ಮಾಜಿ ಸೈನಿಕರ ಸಂಘ ಈ ಘಟನೆ ಖಂಡಿಸಿದ್ದು, ಮಾಜಿ ಸೈನಿಕನ ಮೇಲೆ ಹಲ್ಲೆ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಈ ಮಾರ್ಗವಾಗಿ ಸಂಚರಿಸುವ ರೈತರು, ವಾಹನ ಸವಾರರ ಜೊತೆಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ತೆಗೆದು ಹಣ ವಸೂಲಿ ಮಾಡುತ್ತಿದ್ದಾರೆ. ಇಂಥ ಪ್ರಕರಣಗಳು ನಡೆಯದಂತೆ ಕಡಿವಾಣ ಹಾಕಬೇಕೆಂದು ಗಾಯಾಳು ಚಾಲಕ ಶರಣಪ್ಪಗೌಡ ಒತ್ತಾಯಿಸಿದ್ದಾರೆ.

ಶಾಲಾ ಆವರಣಕ್ಕೆ ನುಗ್ಗಿದ ನರಿ; ಓಡೋಡಿ ಹೋದ ವಿದ್ಯಾರ್ಥಿಗಳು!

0

ರಕ್ಷಿಸಿದ ನರಿ ಪ್ರಾಣಿಸಂಗ್ರಹಾಲಯದಲ್ಲಿ

ವಿಜಯಸಾಕ್ಷಿ ಸುದ್ದಿ, ಗದಗ

ಆಕಸ್ಮಿಕವಾಗಿ ನರಿಯೊಂದು ಶಾಲಾ ಆವರಣಕ್ಕೆ ನುಗ್ಗಿ ಅರಣ್ಯ ಇಲಾಖೆಯ ಅತಿಥಿಯಾದ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದೆ.

ಗದಗ ತಾಲೂಕಿನ ಅಸುಂಡಿ ಗ್ರಾಮದ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ಆವರಣಕ್ಕೆ ನರಿಯೊಂದು ಎಂಟ್ರಿ ಕೊಟ್ಟಿದೆ. ಇದನ್ನು ನೋಡಿದ ವಿದ್ಯಾರ್ಥಿಗಳು ಓಡೋಡಿ ಹೋಗಿ ಕ್ಲಾಸ್ ರೂಮ್ ಸೇರಿಕೊಂಡಿದ್ದಾರೆ.

ತಕ್ಷಣವೇ ಶಾಲಾ ಸಿಬ್ಬಂದಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಕರೆಸಿಕೊಂಡಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ಬಲೆ ಹಾಕಿ ನರಿಯನ್ನು ಸೆರೆ ಹಿಡಿದು ಪ್ರಾಣಿ ಸಂಗ್ರಹಾಲಯಕ್ಕೆ ರವಾನಿಸಿದ್ದಾರೆ. ಇದರಿಂದಾಗಿ ಕೆಲಕಾಲ ಶಾಲಾ ವಿದ್ಯಾರ್ಥಿಗಳಲ್ಲಿ ಉಂಟಾಗಿದ್ದ ಆತಂಕ ದೂರು ಆಯಿತು. ಶಿಕ್ಷಕರು ನಿಟ್ಟುಸಿರು ಬಿಟ್ಟರು.

ಕಪ್ಪತಗುಡ್ಡದ ಸೆರೆಗಿನಲ್ಲಿ ಬರುವ ಅಸುಂಡಿ ಗ್ರಾಮದ ಪಕ್ಕವೇ ಪ್ರಾಣಿ ಸಂಗ್ರಹಾಲಯ ಇದೆ.

ವಿದ್ಯುತ್ ತಂತಿಗೆ ಸಿಲುಕಿ ಚಿರತೆ ಸಾವು

0

ಮರದಿಂದ ಮರಕ್ಕೆ ಜಿಗಿಯುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವು

ವಿಜಯಸಾಕ್ಷಿ ಸುದ್ದಿ, ತುಮಕೂರು

ಮರದಿಂದ ಮರಕ್ಕೆ ಜಿಗಿಯುವಾಗ ಚಿರತೆಯೊಂದು ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮವಾಗಿ ಸಾವಿಗೀಡಾಗಿದೆ.

ಜಿಲ್ಲೆಯ ಗುಬ್ಬಿ ತಾಲೂಕಿನ ಕಡಬ ಹೋಬಳಿಯ ಕರೇಗೌಡನ ಹಳ್ಳಿ ಗ್ರಾಮದಲ್ಲಿ ಈ ದುರಂತ ನಡೆದಿದೆ.

ಬಹುಶಃ ಚಿರತೆ ಒಂದು ಮರದಿಂದ ಮತ್ತೊಂದು ಮರಕ್ಕೆ ಜಿಗಿಯುವ ಸಂದರ್ಭದಲ್ಲಿ ಆಯ ತಪ್ಪಿ ವಿದ್ಯುತ್ ತಂತಿಯ ಮೇಲೆ ಬಿದ್ದಿರಬಹುದು, ಆಗ ವಿದ್ಯುತ್ ಸ್ಪರ್ಶಿಸಿ ಚಿರತೆ ಸಾವಿಗೀಡಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿದ್ಯುತ್ ಸ್ಪರ್ಶಿಸಿ ಕಾರ್ಮಿಕ ಸಾವು

ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ

ವಿಜಯಸಾಕ್ಷಿ ಸುದ್ದಿ, ಗದಗ

ಮನೆಯ ಕಟ್ಟಡದ ಬುನಾದಿ ತಗೆಯುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಕಾರ್ಮಿಕನೊಬ್ಬ ಮೃತಪಟ್ಟ ದುರ್ಘಟನೆ ಸೋಮವಾರ ಮಧ್ಯಾಹ್ನ ಜರುಗಿದೆ.

ಗದಗ ಸಮೀಪದ ರಾಧಾಕೃಷ್ಣ ನಗರದಲ್ಲಿ ಈ ಘಟನೆ ನಡೆದಿದ್ದು, ಹರ್ತಿ ಗ್ರಾಮದ ವೀರಣ್ಣ ಹಿರೇಮಠ (38) ಮೃತಪಟ್ಟ ದುರ್ಧೈವಿ.

ಮನೆಯ ಕಟ್ಟಡದ ಬುನಾದಿ ತಗೆಯುತ್ತಿದ್ದಾಗ ಅಂಡರ್ ಗ್ರೌಂಡ್ ನಲ್ಲಿ ಹಾಯ್ದು ಹೋಗಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ವೀರಣ್ಣ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಮಿನಿ ಬಸ್, ಬೈಕ್ ನಡುವೆ ಡಿಕ್ಕಿ; ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವು

ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ

ವಿಜಯಸಾಕ್ಷಿ ಸುದ್ದಿ, ಗದಗ

ಮಿನಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಜರುಗಿದೆ.

ಗದಗ-ರೋಣ ರಸ್ತೆಯ ಗದ್ದಿಹಳ್ಳದ ಬಳಿ  ಇಂದು ಸಂಜೆ ನಡೆದ ಅಪಘಾತದಲ್ಲಿ ನರೇಗಲ್ ಪಟ್ಟಣದ ನಿವಾಸಿಗಳಾದ ಸಂಗಮೇಶ (27) ‌ಹಾಗೂ ದತ್ತಪ್ಪ (30) ಮೃತಪಟ್ಟ ದುರ್ಧೈವಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ಹರಿಹರ ‌ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

error: Content is protected !!