HomeDharwadಅಭಿವೃದ್ಧಿ ಕೆಲಸ ಸಹಿಸದ ಮಾಜಿ ಶಾಸಕ ಕೋನರಡ್ಡಿಗೆ ಮಂಪರು ಪರೀಕ್ಷೆ ಅಗತ್ಯವಿದೆ

ಅಭಿವೃದ್ಧಿ ಕೆಲಸ ಸಹಿಸದ ಮಾಜಿ ಶಾಸಕ ಕೋನರಡ್ಡಿಗೆ ಮಂಪರು ಪರೀಕ್ಷೆ ಅಗತ್ಯವಿದೆ

Spread the love

ವಿಜಯಸಾಕ್ಷಿ ಸುದ್ದಿ, ನವಲಗುಂದ

ಕೇವಲ ನವಲಗುಂದ ಪುರಸಭೆ ವ್ಯಾಪ್ತಿಯಲ್ಲಿಯೇ ನೂರಾರು ಕೋಟಿ ಅನುದಾನ ತಂದು ತ್ವರಿತಗತಿಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಬಿಜೆಪಿ ಮಾಡುತ್ತಿದ್ದರೂ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿಯವರು ನಿದ್ದೆಗಣ್ಣಿನಲ್ಲಿ ಬಿಜೆಪಿ ವಿರುದ್ಧ ಅನವಶ್ಯಕವಾಗಿ ಆರೋಪ ಮಾಡುತ್ತಿರುವುದರಿಂದ ಅವರನ್ನು ಮಂಪರು ಪರೀಕ್ಷೆ ಮಾಡಿಸಬೇಕಾಗಿದೆ ಎಂದು ಬಿಜೆಪಿ ತಾಲ್ಲೂಕಾ ಅಧ್ಯಕ್ಷ ಎಸ್.ಪಿ.ದಾನಪ್ಪಗೌಡರ ಹರಿಹಾಯ್ದರು.

ಶುಕ್ರವಾರ ಇಲ್ಲಿಯ ಬಿಜೆಪಿ ಕಾರ್ಯಾಲಯದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಮಾಡಿರುವ ಅವಹೇಳನಕಾರಿ ಆರೋಪದ ವಿರುದ್ಧ ಬಿಜೆಪಿ ಮಾಡಿರುವ ಸಾಧನೆಗಳ ಪಟ್ಟಿ ನೀಡಿ ಅವರು ಮಾತನಾಡಿದರು.

ಬಿಜೆಪಿ ಶಾಸಕರಾಗಿರುವ ಶಂಕರ ಪಾಟೀಲ ಮುನೇನಕೊಪ್ಪ ಅವರು ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಎರಡು ಜಿಲ್ಲೆಯ ಉಸ್ತುವಾರಿ ಸಚಿವರಾಗಿ, ಸಕ್ಕರೆ ಹಾಗೂ ಜವಳಿ ಸಚಿವರಾಗಿ ರಾಜ್ಯದುದ್ದಕ್ಕೂ ಪ್ರವಾಸ ಕೈಗೊಂಡು ಕಬ್ಬು ಬೆಳೆಗಾರರಿಗೆ, ರೈತರಿಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ತಮ್ಮ ನಿರಂತರ ಪ್ರವಾಸದಲ್ಲಿಯೂ ನವಲಗುಂದ ಕ್ಷೇತ್ರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಪುರಸಭೆಯ ವಿವಿಧ ಅಭಿವೃದ್ಧಿ ಕೆಲಸಗಳಿಗಾಗಿಯೇ ರೂ.118 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುದಾನವನ್ನು ತಂದು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಿದ್ದಾರೆ.

ಪ್ರಮುಖ ಯೋಜನೆಗಳಾದ ನಿರಂತರ ನೀರು ಸರಬರಾಜು ಯೋಜನೆಗೆ ರೂ.48 ಕೋಟಿ, ಕೊಳಚೆ ಪ್ರದೇಶದ ವಸತಿ ರಹಿತ ನಿವಾಸಿಗಳಿಗೆ ಮನೆ ನಿರ್ಮಿಸಲು ರೂ.25 ಕೋಟಿ, ನಗರೋತ್ತಾನ ಯೋಜನೆಗಾಗಿ ರೂ.10 ಕೋಟಿ, ನೀರಾವರಿ ಇಲಾಖೆಯ ಪ್ರವಾಸಿ ಮಂದಿರಕ್ಕೆ ರೂ.8.65 ಕೋಟಿ, ಅಣ್ಣಿಗೇರಿ ರಸ್ತೆ ನಿರ್ಮಾಣಕ್ಕೆ ರೂ.3 ಕೋಟಿ, ಬಸವೇಶ್ವರ ನಗರದಿಂದ ಹಳ್ಳಿಕೇರಿ ರಸ್ತೆ ನಿರ್ಮಾಣಕ್ಕೆ ರೂ.2 ಕೋಟಿ, ನಾಗಲಿಂಗಜ್ಜನ ಮಠಕ್ಕೆ ರೂ.1 ಕೋಟಿ, ಗವಿಮಠಕ್ಕೆ ರೂ.50 ಲಕ್ಷ, ಪಂಚಗೃಹ ಹಿರೇಮಠಕ್ಕೆ ರೂ.25 ಲಕ್ಷ, ಕೆ.ಇ.ಬಿ ಗ್ರಿಡ್ ಕಂಪೌಂಡ ನಿರ್ಮಾಣಕ್ಕೆ ರೂ.42 ಲಕ್ಷ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಬಾಲಕ ಬಾಲಕಿಯರ ವಸತಿ ನಿಲಯಗಳಿಗೆ ರೂ.3 ಕೋಟಿ, ಪುರಸಭೆ ಹದ್ದಿನಲ್ಲಿನ ಮಾಡೆಲ್ ಹೈಸ್ಕೂಲ್‌ ಬಳಿ 500 ಲಕ್ಷ ಲೀಟರ ನೀರಿನ ಸಾಮಾರ್ಥ್ಯದ ವಾಟರ್ ಟ್ಯಾಂಕ್ ನಿರ್ಮಾಣ ಸೇರಿದಂತೆ ಒಟ್ಟು ರೂ.111.42 ಕೋಟಿ ಅನುದಾನದ ಕಾಮಗಾರಿಗಳು ಪ್ರಾರಂಭದಲ್ಲಿವೆ.

ಆದರೆ ಮಾಜಿ ಶಾಸಕ ಕೋನರಡ್ಡಿಯವರು ಮಾತ್ರ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿ ಒಂದು ವರ್ಷವಾದ ಕಾರಣ ಅವರು ಈಚೆಗೆ ಕಿರೆಸೂರ ಗ್ರಾಮದ ಬಳಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಬಿಜೆಪಿ ವಿರುದ್ಧ ವಿನಾಕಾರಣ ಕಳೆದ 4 ವರ್ಷದಲ್ಲಿ ಏನು ಕೆಲಸ ಮಾಡಿಲ್ಲವೆಂದು ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ ಸಚಿವ ಶಂಕರ ಪಾಟೀಲ ಸಹೋದರರು ನಿಧನರಾದಾಗ ಅವರು ಕ್ಷೇತ್ರಕ್ಕೆ ಬಂದಿಲ್ಲ, ನಾನೇ ಮುಂದೆ ನಿಂತು ರೈತರ ಸಮಸ್ಯೆಗಳನ್ನು ಬಗೆ ಹರಿಸಿದ್ದೇನೆಂದು ಹೇಳಿರುವುದು ಮಾಜಿ ಶಾಸಕ ಕೋನಡ್ಡಿಯವರು ಎಂತಹ ಸ್ವಭಾವದವರು ಎಂದು ಜನ ಅರ್ಥೈಸಿಕೊಳ್ಳಬೇಕಾಗಿದೆ.

ನಾಲ್ಕು ವರ್ಷ ಮನೆಯಲ್ಲಿ ಮಲಗಿದ್ದ ಅವರು ಈಗ ಚುನಾವಣೆ ಸಂದರ್ಭದಲ್ಲಿ ಬಂದು ನಾನು ರೈತರ ಪರವಾಗಿದ್ದೇನೆ, ನಾನೇ ಕಾಂಗ್ರೆಸ್ ಟಿಕೆಟ್ ತೆಗೆದುಕೊಳ್ಳುತ್ತೇನೆ, ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಮಾಡೋಣವೆಂದು ಜನರನ್ನು ನಂಬಿಸಲು ಹೊರಟಿರುವುದು ಅವರ ಕೀಳಮಟ್ಟತನಕ್ಕೆ ಜನರೆ ತಕ್ಕ ಪಾಠ ಕಲಿಸಲಿದ್ದಾರೆ.

ಸುಳ್ಳು ಹೇಳುವುದನ್ನೇ ರೂಢಿಸಿಕೊಂಡು ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದುಕೊಳ್ಳುತ್ತೇನೆಂಬ ಹಗಲುಗನಸು ಕಾಣುತ್ತಿರುವ ಅವರಿಗೆ  ಮಂಪರು ಪರೀಕ್ಷೆಯ ಅವಶ್ಯಕತೆ ಇದೆ ಎಂದು ತಾಲ್ಲೂಕಾ ಬಿಜೆಪಿ ಅಧ್ಯಕ್ಷ ಎಸ್.ಪಿ.ದಾನಪ್ಪಗೌಡರ ಹರಿಹಾಯ್ದರು.

ಈ ಸಂದಭದಲ್ಲಿ ಬಿಜೆಪಿಯ ಹಿರಿಯರಾದ ರಾಯನಗೌಡ ಪಾಟೀಲ, ಪುರಸಭೆ ಸದಸ್ಯರಾದ ಮಹಾಂತೇಶ, ಕಲಾಲ, ಜ್ಯೋತಿ ಗೊಲ್ಲರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು. 


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!