Home Blog Page 3210

ಆಟಕ್ಕುಂಟು, ಲೆಕ್ಕಕ್ಕಿಲ್ಲದ ತಾಲೂಕು ಕೇಂದ್ರ!

0

ಪೂರ್ಣಪ್ರಮಾಣದ ಸೌಲಭ್ಯಗಳಿಗಾಗಿ ಆಗ್ರಹ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಲಕ್ಷ್ಮೇಶ್ವರ ತಾಲೂಕು ಕೇಂದ್ರವಾಗಿ ಘೋಷಣೆಯಾಗಿ ೫ ವರ್ಷ ಕಳೆಯುತ್ತಾ ಬಂದರೂ ತಹಸೀಲ್ದಾರ ಕಚೇರಿ ಹೊರತುಪಡಿಸಿ ಪೂರ್ಣ ಪ್ರಮಾಣದ ತಾಲೂಕು ಕಚೇರಿಗಳು, ಸಿಬ್ಬಂದಿ ಮತ್ತು ಪ್ರತ್ಯೇಕ ಬಜೆಟ್ ಇಲ್ಲದ್ದರಿಂದ ತಾಲೂಕು ಕೇಂದ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

೨೦೧೭ ರ ಕೊನೆಗೆ ಲಕ್ಷ್ಮೇಶ್ವರ ತಾಲೂಕು ಕೇಂದ್ರ ಘೋಷಣೆಯಾಗಿ ಇದುವರೆಗೂ ಸೋರುತ್ತಿರುವ ಎಪಿಎಂಸಿ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಿದ ತಹಸೀಲ್ದಾರ ಕಚೇರಿ ಇದೀಗ ಸಣ್ಣದಾದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದೆ. ಭೂದಾಖಲೆಗಳ ಕೊಠಡಿ ಸ್ಥಳಾಂತಗೊಳ್ಳದ್ದರಿಂದ ಮತ್ತು ಸ್ಥಳಾಂತರಗೊಳ್ಳಲು ಭದ್ರವಾದ ಸ್ಥಳಾವಕಾಶ ಇಲ್ಲದ್ದರಿಂದ ಭೂ ದಾಖಲೆಗಾಗಿ ಶಿರಹಟ್ಟಿಗೆ ಅಲೆಯಬೇಕಾದ ಪರಿಸ್ಥಿತಿ ತಪ್ಪಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಪ್ರತ್ಯೇಕ ತಾಲೂಕು ಪಂಚಾಯತಿ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯಾರಂಭಗೊಂಡಿದ್ದರೂ ಸಿಬ್ಬಂದಿ, ಕಟ್ಟಡ, ಅನುದಾನ ಇಲ್ಲದ್ದರಿಂದ ಇದೂ ಸಹ ತಹಸೀಲ್ದಾರ ಕಚೇರಿಗೆ ಹೊರತಾಗಿಲ್ಲ ಎನ್ನಬಹುದು.

ಯಾವ ತಾಲೂಕು ಕಚೇರಿಗಳಿಲ್ಲ?

ಮುಖ್ಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಆರಕ್ಷಕ, ಸಮಾಜ ಕಲ್ಯಾಣ ಇಲಾಖೆ, ಭೂದಾಖಲೆ ಮತ್ತು ಮಾಪನ ಇಲಾಖೆ, ಬಿಸಿಎಂ, ಪಿಡಬ್ಲ್ಯೂಡಿ, ಆರೋಗ್ಯ, ರೇಷ್ಮೆ, ಅರಣ್ಯ(ಸಾಮಾಜಿಕ ಮತ್ತು ಪ್ರಾದೇಶಿಕ), ಕೃಷಿ, ತೋಟಗಾರಿಕೆ, ಅಬಕಾರಿ, ಜಲಾನಯನ ಸೇರಿ ಬಹುತೇಕ ಇಲಾಖೆಗಳಿಲ್ಲದ್ದರಿಂದ ಆಯಾ ಇಲಾಖೆಗೆ ಸಂಬಂಧಿಸಿದ ಕೆಲಸ ಕಾರ್ಯಗಳಿಗಾಗಿ ಸಾರ್ವಜನಿಕರು, ನೌಕರರು ಶಿರಹಟ್ಟಿ ತಾಲೂಕಿಗೆ ಅಲೆದಾಡಬೇಕಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕೃಷಿ, ತೋಟಗಾರಿಕೆ, ರೇಷ್ಮೆ ಸೇರಿ ಕೆಲ ತಾಲೂಕು ಕಚೇರಿಗಳು ಧೂಳು ತಿನ್ನುತ್ತಿದ್ದು, ಹಾಕಿದ ಬೀಗ ತುಕ್ಕು ಹಿಡಿದಿವೆ ಎನ್ನಲಾಗಿದೆ.

ಆಗ್ರಹ

ಲಕ್ಷ್ಮೇಶ್ವರ ಪೂರ್ಣ ಪ್ರಮಾಣದ ತಾಲೂಕು ಕೇಂದ್ರವಾಗಬೇಕು. ಅದಕ್ಕಾಗಿ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸುವಂತಾಗಬೇಕು ಮತ್ತು ಮಿನಿ ವಿಧಾನಸೌಧ ನಿರ್ಮಾಣವಾಗಬೇಕು.

ಕೈಗಾ-ಇಳಕಲ್ ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಬೇಕು. ಗದಗ-ಯಲವಗಿ ರೇಲ್ವೆ ಮಾರ್ಗ ಕಾರ್ಯಾರಂಭಗೊಳ್ಳುವಂತಬೇಕು. ಲಕ್ಷ್ಮೇಶ್ವರಕ್ಕೆ ತುಂಗಭದ್ರಾ ಕುಡಿಯುವ ನೀರಿನ ಪ್ರತ್ಯೇಕ ಯೋಜನೆ ಕಲ್ಪಿಸಬೇಕು. ಹೊಸ ಪದವಿ, ಪಪೂ, ವಸತಿಯುವ ಶಾಲೆಗಳು, ಹಾಸ್ಟೆಲ್‌ಗಳು ಸ್ಥಾಪನೆಯಾಗಬೇಕು. ಕೈಗಾರಿಕಾ ವಲಯಕ್ಕೆ ಆದ್ಯತೆ ನೀಡಬೇಕು. ತಾಲೂಕಾ ಆಸ್ಪತ್ರೆ, ಕ್ರೀಡಾಂಗಣ ನಿರ್ಮಾಣವಾಗಬೇಕು.

ಲಕ್ಷ್ಮೇಶ್ವರ ಸೇರಿ ತಾಲೂಕಿನ ಬಹುತೇಕ ರಸ್ತೆಗಳು ಹಾಳಾಗಿದ್ದು ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ಕಲ್ಪಿಸಬೇಕು, ಪಟ್ಟಣ ತೀವ್ರಗತಿಯಲ್ಲಿ ಬೆಳೆಯುತ್ತಿದ್ದು ಅನುದಾನದ ಕೊರತೆಯಿಂದ ಜನರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿಲ್ಲ. ಅದಕ್ಕಾಗಿ ವಿಶೇಷ ಅನುದಾನ ಕಲ್ಪಿಸಬೇಕು, ಎಂಬಿತ್ಯಾದಿ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಎಂಬುದು ಲಕ್ಷ್ಮೇಶ್ವರ ಭಾಗದ ಜನರ ಒತ್ತಾಸೆಯಾಗಿದೆ ಎಂದು ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ ಆಗ್ರಹಿಸಿದ್ದಾರೆ.

ಲಕ್ಷ್ಮೇಶ್ವರ ತಾಲೂಕು ಕೇಂದ್ರ ಘೋಷಣೆ ಮಾಡಿ ಕೈ ತೊಳೆದುಕೊಂಡಿರುವ ಸರ್ಕಾರ ಅವಶ್ಯಕ ಕಚೇರಿ, ಸಿಬ್ಬಂದಿ, ಬಜೆಟ್ ನೀಡುವ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ. ಲಕ್ಷ್ಮೇಶ್ವರ ತಾಲೂಕು ಜಿಲ್ಲೆಯಲ್ಲಿಯೇ ಶಿಕ್ಷಣ, ವಾಣಿಜ್ಯ, ಕೃಷಿ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ೫೦ ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣ ಸೇರಿ ೩೮ ಗ್ರಾಮಗಳ ಜನರು ಸರ್ಕಾರಿ ಕೆಲಸಕ್ಕಾಗಿ ಶಿರಹಟ್ಟಿಗೆ ಅಲೆಯುವುದು ತಪ್ಪದಂತಾಗಿದೆ. ನೆರೆಯ ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ವಿಪ ಸದಸ್ಯರು ಜವಾಬ್ದಾರಿಯುತವಾದ ಕಾರ್ಯಕ್ಕೆ ಮುಂದಾಗಬೇಕು.

-ಪದ್ಮರಾಜ ಪಾಟೀಲ್, ಜೆಡಿಎಸ್ ತಾಲೂಕಾ ಅಧ್ಯಕ್ಷ

ಮಿನಿ ವಿಧಾನಸೌಧ ನಿರ್ಮಾಣಕ್ಕೆ ಜಾಗ ಗುರುತಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಭೂದಾಖಲೆಗಳ ಸಂಗ್ರಹ-ಸಂರಕ್ಷಣೆಗೆ ಸೂಕ್ತವಾದ ಸ್ಥಳಾವಕಾಶದ ಕೊರತೆಯಿಂದ ಭೂದಾಖಲೆಗಾಗಿ ಶಿರಹಟ್ಟಿಗೆ ಹೋಗಬೇಕಾಗಿದೆ. ಹೊಸ ತಾಲೂಕಿಗೆ ಶಿಕ್ಷಣ, ಭೂಮಾಪನ, ಕೃಷಿ, ಆರೋಗ್ಯ ಸೇರಿ ಎಲ್ಲ ತಾಲೂಕು ಕಚೇರಿಗಳ ಕಾರ್ಯಾರಂಭದ ಬಗ್ಗೆ ವರದಿ ಮತ್ತು ಸಾರ್ವಜನಿಕರ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ತಲುಪಿಸಲಾಗಿದೆ.

-ಪರಶುರಾಮ ಸತ್ತಿಗೇರಿ, ತಹಸೀಲ್ದಾರ್, ಲಕ್ಷ್ಮೇಶ್ವರ

ಬೆಕ್ಕಿನ ಮರಿಯಾಸೆಗೆ ಮನೆ ಸೇರಿದ ನಾಗರಹಾವು!

0

ವಿಜಯಸಾಕ್ಷಿ ಸುದ್ದಿ, ಗದಗ/ನರಗುಂದ

ಹಾವು-ಮುಂಗುಸಿಯಾಟ ನೋಡಿರುತ್ತೀರಿ. ಇಲಿ-ಬೆಕ್ಕುಗಳಾಟವನ್ನೂ ಸಾಕಷ್ಟು ಕಂಡಿರುತ್ತೀರಿ. ಆದರೆ, ಹಾವು-ಬೆಕ್ಕಿನಾಟ ತುಸು ಅಪರೂಪವೇ. ಅಂಥದೊಂದು ದೃಶ್ಯ ಇತ್ತೀಚೆಗೆ ಗದಗ ಜಿಲ್ಲೆಯ ನರಗುಂದ ಪಟ್ಟಣದಿಂದ ಎರಡು ಕಿ.ಮೀ ಅಂತರದಲ್ಲಿರುವ ಅಜ್ಜು ಪಾಟೀಲ ಎಂಬುವವರ ತೋಟದ ಮನೆಯಲ್ಲಿ ಕಂಡುಬಂತು.

ತೋಟದ ನಡುವೆಯಿರುವ ಮನೆಯಾಗಿದ್ದರಿಂದ ಹುಳ-ಹುಪ್ಪಟೆಗಳು, ಹೆಸರೂ ಕೇಳಿರದ ಕೀಟಗಳು, ಹಾವುಗಳ ಸಂಚಾರ ಸಾಮಾನ್ಯವೇ. ಮನೆಯಲ್ಲಿ ಸಾಕಷ್ಟು ಬೆಕ್ಕುಗಳು, ಪುಟ್ಟ ಪುಟ್ಟ ಬೆಕ್ಕಿನ ಮರಿಗಳೂ ಇದ್ದವು. ಅದು ಹೇಗೋ ನಾಗರಹಾವೊಂದು ತೋಟದ ಮನೆಯೊಳಗೆ ಸೇರಿಕೊಂಡಿತ್ತು. ನಾಗರ ಹಾವನ್ನು ಕಂಡ ಬೆಕ್ಕುಗಳು ಚೀರತೊಡಗಿದ್ದವು. ಮನೆಯವರು ಗಲಾಟೆ ಕೇಳಿ ಮನೆಯೆಲ್ಲ ತಡಕಾಡಿದಾಗ ಭಾರೀ ಗಾತ್ರದ ನಾಗರಹಾವು ಕಣ್ಣಿಗೆ ಬಿದ್ದಿತ್ತು.

ಗಾಬರಿಗೊಂಡ ಬೆಕ್ಕು ಹಾಗೂ ಬೆಕ್ಕಿನ ಮರಿಗಳ ಗಲಾಟೆಯೂ ಜೋರಾಗಿತ್ತು. ಹಾವು ಅಲ್ಲಿ ಇಲ್ಲಿ ಸುತ್ತಾಡಿ, ಅಡುಗೆ ಮನೆಯನ್ನು ಸೇರಿಕೊಂಡಿತ್ತು. ದಿಕ್ಕು ತೋಚದ ಮನೆಯವರು ಹಾವು ಹಿಡಿಯುವ ಸ್ನೇಕ್ ಬುಡ್ಡಾರಿಗೆ ಫೋನಾಯಿಸಿ ಕರೆಸಿದರು. ಸ್ಥಳಕ್ಕಾಗಮಿಸಿದ ಸ್ನೇಕ್ ಬುಡ್ಡಾ ನಾಗರ ಹಾವನ್ನು ಹುಡುಕಿ, ಸುರಕ್ಷಿತವಾಗಿ ಹಿಡಿದು, ಕಾಡಿನ ಪ್ರದೇಶದಲ್ಲಿ ಬಿಟ್ಟುಬಂದಿದ್ದಾರೆ.

ಬೆಕ್ಕಿನ ಮರಿಗಳ ಆಸೆಯಿಂದ ಹಾವು ಮನೆಯೊಳಗೆ ಸೇರಿಕೊಂಡಿರಬಹುದು ಎಂದು ಸ್ನೇಕ್ ಬುಡ್ಡಾ ಅಭಿಪ್ರಾಯಪಟ್ಟಿದ್ದಾರೆ.

ವಾಹನ ಕಳುವಾದರೆ ಆನ್‌ಲೈನ್‌ನಲ್ಲೇ ಕಂಪ್ಲೇಂಟ್ ಕೊಡಿ!!

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ

ರಾಜ್ಯ ಪೊಲೀಸ್ ಇಲಾಖೆ ನಾಗರಿಕ ಸ್ನೇಹಿ ಸೇವೆಗಳನ್ನು ಒದಗಿಸುತ್ತಿದೆ. ಇತ್ತೀಚೆಗೆ ಮೋಟಾರು ವಾಹನ ಕಳ್ಳತನಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ಪ್ರಥಮ ವರ್ತಮಾನ ವರದಿ ಇ-ಎಫ್‌ಐಆರ್ ನೋಂದಣಿ ಮಾಡಲು ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಜಾಲತಾಣದ ಮೂಲಕ ಪಡೆಯಬಹುದಾಗಿದೆ. ಇದರಿಂದ ದೂರುದಾರರು ತಾವು ಕುಳಿತಲ್ಲೇ ಇಂಟರ್‌ನೆಟ್ ಸಹಾಯದಿಂದ ಕಂಪ್ಯೂಟರ್ ಇಲ್ಲವೇ ಮೊಬೈಲ್ ಮೂಲಕ ಕೆಲವೇ ಕ್ಷಣಗಳಲ್ಲಿ ಇ-ಎಫ್‌ಐಆರ್ ದಾಖಲಿಸಬಹುದಾಗಿದೆ.

ಇ-ಎಫ್‌ಐಆರ್ ದಾಖಲಿಸುವುದು ಹೇಗೆ ?

ಲಾಗಿನ್ ಆಗಬೇಕು, ನಂತರ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಪೇಜ್‌ನಲ್ಲಿ ಸಾರ್ವಜನಿಕ ಸೇವಾ ಕೇಂದ್ರ ಪೋರ್ಟಲ್‌ನ ಮೇಲೆ ಕ್ಲಿಕ್ ಮಾಡಿದ ನಂತರ ನಾಗರಿಕ ಕೇಂದ್ರಿತ ಪುಟ ತೆರೆಯುತ್ತದೆ. ಇಲ್ಲಿ ಈಗಾಗಲೇ ನೋಂದಾಯಿತ ಬಳಕೆದಾರರಿದ್ದಲ್ಲಿ ನೇರವಾಗಿ ಲಾಗ್ ಇನ್ ಆಗಬಹುದು. ಇಲ್ಲವಾದರೆ ತಮ್ಮ ನೋಂದಾಯಿತ ಆಧಾರ ಹಾಗೂ ಮೊಬೈಲ್ ನಂಬರ್ ಮೂಲಕ ನೋಂದಣಿ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಆಯ್ಕೆ ಮಾಡಿಕೊಳ್ಳಬೇಕು.

ತದನಂತರ ಪೋರ್ಟಲ್‌ನಲ್ಲಿ ಕ್ರಿಯೇಟ್ ಮಾಡಿಕೊಂಡಂತಹ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಬಳಸಿಕೊಂಡು ಸೈನ್-ಇನ್ ಆಗಿ ಕಳ್ಳತನವಾದಂತಹ ವಾಹನದ ಬಗ್ಗೆ ಇ-ಎಫ್‌ಐಆರ್ ನೋಂದಾಯಿಸುವುದಕ್ಕೆ ವೆಹಿಕಲ್ ಥೆಫ್ಟ್ ಆಪ್ಸ್ನ್ ಕ್ಲಿಕ್ ಮಾಡಿ, ಅದರಲ್ಲಿ ಬರುವ ಹೆಸರು ವಿಳಾಸ ಮತ್ತು ಕಳ್ಳತನವಾದ ವಾಹನದ ಸಂಪೂರ್ಣ ಮಾಹಿತಿಯನ್ನು ದಾಖಲಿಸಬೇಕು.


ಈ ಸಂದರ್ಭದಲ್ಲಿ ಆಧಾರ ದತ್ತಾಂಶದಿಂದ ಬರುವಂತಹ ಮಾಹಿತಿಗಳನ್ನು ತಿದ್ದುಪಡಿ ಮಾಡಲಿಕ್ಕೆ ಅವಕಾಶವಿರುವದಿಲ್ಲ. ಜೊತೆಗೆ ಕಳವಾದ ಸ್ಥಳವನ್ನು ಜಿಪಿಎಸ್ ಮೂಲಕ ಮತ್ತು ಸಮಯ ಹಾಗೂ ಸಂಬಂಧಿಸಿದ ಪೊಲೀಸ್ ಠಾಣೆಯನ್ನು ನಮೂದಿಸಬೇಕು.

ವಾಹನದ ನೋಂದಣಿ ನಂಬರ್ ದಾಖಲು ಮಾಡಿದ ನಂತರ ಇನ್ನಿತರೆ ಮಾಹಿತಿಯು ತಾನಾಗಿಯೇ ಭರ್ತಿ ಮಾಡಿಕೊಳ್ಳುತ್ತದೆ. ದೂರು ಪ್ರತಿ, ವಾಹನದ ನೋಂದಣಿ ಪತ್ರ, ಇನ್ಶುರೆನ್ಸ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ನೋಂದಾಯಿತ ಆಧಾರ್ ಹಾಗೂ ಮೊಬೈಲ್ ಸಂಖ್ಯೆಯ ಮೂಲಕ ಇ-ಸಹಿಯನ್ನು ದೃಢೀಕರಿಸಿದ ನಂತರ ಭರ್ತಿ ಮಾಡಿದ ಎಲ್ಲ ಮಾಹಿತಿಯನ್ನು ಸಬ್‌ಮಿಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ದೂರನ್ನು ದಾಖಲಿಸಬೇಕು.

ಇ-ಎಫ್‌ಐಆರ್ ಪಡೆಯುವುದು ಹೇಗೆ ?

ದೂರು ದಾಖಲಾದ ನಂತರ ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಠಾಣೆಯ ಠಾಣಾಧಿಕಾರಿ ಹಾಗೂ ಫಿರ್ಯಾದಿದಾರರಿಗೆ ನೋಂದಾಯಿಸಿದ ಎಸ್‌ಎಂಎಸ್ ಸಂದೇಶ ರವಾನಿಸಲಾಗುತ್ತದೆ. ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಸಬ್‌ಮಿಟ್ ಮಾಡಿದ ನಂತರ ಫಿರ್ಯಾದುದಾರರಿಗೆ ೨ ಗಂಟೆಯೊಳಗೆ ಆಧಾರ ಇ-ಸಹಿ ಮಾಡುವಂತೆ ಎಸ್‌ಎಂಎಸ್ ರವಾನೆಯಾಗುತ್ತದೆ. ಫಿರ್ಯಾದುದಾರರು ಸಿಸಿಬಿ ಪೋರ್ಟ್ ನಲ್ಲಿ ಲಾಗ್-ಇನ್ ಆಗಿ ಆಧಾರ ಇ-ಸಹಿ ಮಾಡಿದ ನಂತರ ಮತ್ತೆ ಸಂಬಂಧಿಸಿದ ಠಾಣಾಧಿಕಾರಿಗೆ ಇ-ಸಹಿಯನ್ನು ಮಾಡುವಂತೆ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ರವಾನೆಯಾಗುತ್ತದೆ.

ಠಾಣಾಧಿಕಾರಿ ಇ-ಸಹಿ ಮಾಡಿದ ನಂತರ ಪ್ರಥಮ ವರ್ತಮಾನ ವರದಿಯಲ್ಲಿ ಫಿರ್ಯಾದುದಾರರು ಮತ್ತು ಠಾಣಾಧಿಕಾರಿ ಇಬ್ಬರು ಮಾನ್ಯ ಮಾಡಿದ ಸಹಿಯೊಂದಿಗೆ ಪ್ರಥಮ ವರ್ತಮಾನ ವರದಿ ಅಥವಾ ಇ-ಎಫ್‌ಐಆರ್ ಜನರೇಟ್ ಆಗಲಿದೆ. ನಂತರ ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅರಿವು

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಕಳ್ಳತನವಾದಂತಹ ವಾಹನಗಳ ಬಗ್ಗೆ ದೂರು ನೀಡುವುದಕ್ಕೆ ಪೊಲೀಸ್ ಠಾಣೆಗಳಿಗೆ ಅಲೆದಾಡದೇ ಕುಳಿತಲ್ಲಿಯೇ ಇಲಾಖೆಯ ಅಧಿಕೃತ ವೆಬ್‌ಸೈಟ್ ಮೂಲಕ ಇ-ಎಫ್‌ಐಆರ್ ಪಡೆಯುವ ಬಗ್ಗೆ ಅರಿವು ಮೂಡಿಸುತ್ತಿದ್ದು, ಈ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ಸಹ ವ್ಯಕ್ತವಾಗುತ್ತಿವೆ.

ಸಾರ್ವಜನಿಕರಿಗೆ ತ್ವರಿತಗತಿಯಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನು ಕಲ್ಪಿಸುವುದಕ್ಕೆ ಇಲಾಖೆ ವತಿಯಿಂದ ಈಗಾಗಲೇ ಹಲವಾರು ಸೇವೆಗಳನ್ನು ಒದಗಿಸಲಾಗುತ್ತಿದೆ. ಇದೀಗ ಕಳ್ಳತನವಾದಂತಹ ವಾಹನಗಳ ದೂರು ದಾಖಲಿಸಲು ಪೊಲೀಸ್ ಠಾಣೆಗಳ ಅಲೆದಾಟವನ್ನು ತಪ್ಪಿಸುವುದಕ್ಕಾಗಿ ಇಂಟರ್‌ನೆಟ್ ಸಹಾಯದಿಂದ ಕುಳಿತಲ್ಲಿಯೇ ಇ-ಎಫ್‌ಐಆರ್ ಮೂಲಕ ದೂರು ದಾಖಲಿಸಿ ಪ್ರತಿಯನ್ನು ಪಡೆಯಬಹುದಾಗಿದೆ. ಇದರಿಂದ ತಕ್ಷಣವೇ ಸಿಸ್ಟಮ್‌ನಲ್ಲಿ ಚೆಕ್ ಆಗಲು ಸಹಕಾರಿಯಾಗಲಿದೆ. ಕಳವಾದ ಮೊಬೈಲ್ ಹಾಗೂ ಡುಪ್ಲಿಕೇಟ್ ಸಿಮ್‌ಗಳಿಗೂ ಸಹ ಇಲಾಖೆಯ ವೆಬ್‌ಸೈಟ್ ಮೂಲಕ ಇ-ಲಾಸ್ಟ್ ನಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಸಾರ್ವಜನಿಕರ ಕೆಲಸ ಬೇಗ ಆಗುವುದರ ಜೊತೆಗೆ ಸಮಯವೂ ಸಹ ಉಳಿಯಲಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು.

-ಶಿವಪ್ರಕಾಶ ದೇವರಾಜು, ಎಸ್ಪಿ. ಗದಗ

ಭೀಕರ ಅಪಘಾತ; ಆಟೋಗೆ ಗೂಡ್ಸ ವಾಹನ ಡಿಕ್ಕಿ; ಆರು ಮಹಿಳೆಯರ ಸಾವು

0

ವಿಜಯಸಾಕ್ಷಿ ಸುದ್ದಿ, ಬೀದರ್

ಆಟೋಗೆ ಐಶರ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಆರು ಜನ ಮಹಿಳೆಯರು ಮೃತಪಟ್ಟು, ಹನ್ನೊಂದು ಜನ ಗಾಯಗೊಂಡ ದುರ್ಘಟನೆ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ಜರುಗಿದೆ.

ಪ್ರಭಾವತಿ ಗಂಡ ದೇವೇಂದ್ರ (36), ಯಾದಮ್ಮ ಗಂಡ ಅಷ್ಮಿತ (40), ಗುಂಡಮ್ಮ ಗಂಡ ನರಸಿಂಗ್ (60), ಜಗಮ್ಮಾ ಗಂಡ ಪ್ರಭು (34) ಹಾಗೂ ರುಕ್ಮಿಣಿ ಬಾಯಿ ಅಮೃತ (60) ಎಂಬುವವರು ದುರ್ಘಟನೆಯಲ್ಲಿ ಮೃತಪಟ್ಟ ದುರ್ಧೈವಿಗಳು. ಇನ್ನೊಬ್ಬರ ಹೆಸರು ಗೊತ್ತಾಗಿಲ್ಲ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದು, ಮೃತರು ಚಿಟಗುಪ್ಪಾ ತಾಲೂಕಿನ ಉಡುಬನಹಳ್ಳಿ ಗ್ರಾಮದವರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೆಮಳಖೇಡಾ ಗ್ರಾಮದ ಸರಕಾರಿ ಶಾಲೆಯ ಬಳಿ ಈ ದುರ್ಘಟನೆ ನಡೆದಿದ್ದು, ಮೃತರು ಕೂಲಿ ಕೆಲಸಕ್ಕೆ ಹೋಗಿದ್ದರು ಎನ್ನಲಾಗಿದೆ. ವೇಗವಾಗಿ ಬಂದ ತೆಲಂಗಾಣ ರಾಜ್ಯದ ಐಶರ್ ಗೂಡ್ಸ ವಾಹನ ಎದುರಿಗೆ ಬಂದ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದ್ದು, ಗಾಯಗೊಂಡವರನ್ನು ಚಿಕಿತ್ಸೆಗಾಗಿ ಬೀದರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆಮಳಖೇಡಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ನಕಲಿ ಆಭರಣ ಅಡವಿಟ್ಟು ಸಾಲ ಪಡೆದ ಮತ್ತೊಂದು ಪ್ರಕರಣ ಬಯಲಿಗೆ; 11 ಜನರ ವಿರುದ್ಧ ಕೇಸ್

ವಿಜಯಸಾಕ್ಷಿ ಸುದ್ದಿ, ಬೆಟಗೇರಿ

ಇತ್ತೀಚೆಗಷ್ಟೇ ಗದಗ ನಗರದ ಐಡಿಬಿಐ ಬ್ಯಾಂಕ್‌ನಲ್ಲಿ ನಕಲಿ ಚಿನ್ನ ಅಡವಿಟ್ಟು ಮೋಸ ಮಾಡಿದ ಆರೋಪಿಗಳು ಸಿಕ್ಕಿಬೀಳುವ ಮುನ್ನವೇ ಅಂಥದ್ದೇ ಇನ್ನೊಂದು ಪ್ರಕರಣ ನಡೆದಿದೆ. ಇಲ್ಲಿನ ಬ್ಯಾಂಕೊಂದರಲ್ಲಿ ಬಂಗಾರದ ಲೇಪನವಿರುವ ನಕಲಿ ಆಭರಣಗಳನ್ನು ಅಡವಿಟ್ಟು ಕೋಟ್ಯಂತರ ರೂ. ಸಾಲ ಪಡೆದು ಮೋಸವೆಸಗಿರುವ ಬಗ್ಗೆ ಬೆಟಗೇರಿ ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದೆ.

ಭೂಮರಡ್ಡಿ ವೃತ್ತದ ಬಳಿಯಿರುವ ಯೂನಿಯನ್ ಬ್ಯಾಂಕ್‌ನ ಗಿರೀಶ್ ಈರಣ್ಣ ಕೇಶಟ್ಟಿ ಪ್ರಕರಣದ ಕುರಿತು ನೀಡಿದ ದೂರಿನಲ್ಲಿ, ಜುಲೈ 7ರ ಮುಂಜಾನೆ 10.30ರಿಂದ ಜುಲೈ 27ರ ಸಂಜೆ 5 ಗಂಟೆಯ ನಡುವಿನ ಸಮಯದಲ್ಲಿ ಜವಳಗಲ್ಲಿಯ ಮಾಣಿಕ ಲಕ್ಕುಂಡಿ, ತಳಗೇರಿ ಓಣಿಯ ನಾಗರಾಜ ಪೆದ್ದಪ್ಪ ರಾಮಗಿರಿ, ರಾಘವೇಂದ್ರ ನೀರಲಕೇರಿ, ವೆಲ್‌ಫೇರ್ ಟೌನ್‌ಶಿಪ್‌ನ ಸುಚೀತ್‌ಕುಮಾರ್ ಹರಿವಾನ, ತೆಗ್ಗಿನಪೇಟೆಯ ನಿಹಾಲ್ ಕಬಾಡಿ, ಎಸ್.ಎಂ.ಕೃಷ್ಣ ನಗರದ ಗಣೇಶ.ಪಿ. ಮಾದರ,

ಜವಳಗಲ್ಲಿಯ ಹಮೀದಾಬೇಗಂ ಬಡೇಖಾನ, ಎಸ್.ಎಂ.ಕೃಷ್ಣ ನಗರದ ಸಂತೋಷ ವೀರಶಟ್ಟಿ, ಗಣೇಶ ಕಾಶಪ್ಪ ಹೊಂಬಳ, ಸಿದ್ದರಾಮೇಶ್ವರ ನಗರದ ಮಂಜುನಾಥ ಯಲ್ಲಪ್ಪ ಮಣ್ಣವಡ್ಡರ ಇವರೆಲ್ಲರೂ ಸೇರಿಕೊಂಡು ಬಂಗಾರದ ಲೇಪನವಿರುವ 4983.2 ಗ್ರಾಂ ತೂಕದ ಆಭರಣಗಳನ್ನು ತೋರಿಸಿ, ಅದನ್ನು ಯೂನಿಯನ್ ಬ್ಯಾಂಕ್‌ನಲ್ಲಿ ಅಡವಿಟ್ಟು 1,57,66,253 ರೂ ಸಾಲ ಪಡೆದು ಮೋಸ ಮಾಡಿದ್ದಾರೆ.

ಈ ಎಲ್ಲ 10 ಜನ ಆರೋಪಿಗಳೊಂದಿಗೆ 11ನೇ ಆರೋಪಿ, ಬ್ಯಾಂಕಿನ ಜ್ಯುವೆಲ್ ಅಪ್ರೇಜರ್-ವಿಮಲೇಶ ಜ್ಯುವೆಲರ್ಸ್ನ ಸುರೇಶ ಗೋಪಾಲ ರೇವಣಕರ ಕೂಡ ಇತರ ಆರೋಪಿಗಳೊಂದಿಗೆ ಶಾಮೀಲಾಗಿದ್ದು, ಆಭರಣಗಳು 22ಕ್ಯಾರೆಟ್‌ನವು ಎಂದು ಸುಳ್ಳು ಪ್ರಮಾಣಪತ್ರ ನೀಡುವುದರೊಂದಿಗೆ ಈ ಅಪರಾಧದಲ್ಲಿ ಭಾಗಿಯಾಗಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಕಲಿ ಆಭರಣ ಅಡವಿಟ್ಟು ಸಾಲ ಪಡೆದು ಮೋಸ; ದತ್ತು ಬಾಕಳೆ ಸೇರಿ 18 ಜನರ ವಿರುದ್ಧ ಪ್ರಕರಣ

ವಿಜಯಸಾಕ್ಷಿ ಸುದ್ದಿ, ಗದಗ

ನಗರದ ಬ್ಯಾಂಕೊಂದರಲ್ಲಿ ಬಂಗಾರದ ಲೇಪನವಿರುವ ನಕಲಿ ಆಭರಣಗಳನ್ನು ಅಡವಿಟ್ಟು ಸಾಲ ಪಡೆದು ಬ್ಯಾಂಕಿಗೆ ಮೋಸ ಮಾಡಿದ ಪ್ರಕರಣ ವರದಿಯಾಗಿದ್ದು, ಈ ಬಗ್ಗೆ ಬ್ಯಾಂಕಿನ ಜ್ಯುವೆಲ್ ಅಪ್ರೇಜರ್ ಸೇರಿದಂತೆ 18 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

ನಡೆದದ್ದೇನು?

2022ರ ಏಪ್ರಿಲ್ 25ರಂದು ಬೆಳಿಗ್ಗೆ 11 ಗಂಟೆಯಿಂದ ಜೂನ್ 29ರ ಮದ್ಯಾಹ್ನ 4 ಗಂಟೆಯ ನಡುವಿನ ಅವಧಿಯಲ್ಲಿ ಪ್ರಕರಣದ 1ನೇ ಆರೋಪಿ ದತ್ತಾತ್ರೇಯ ಬಾಕಳೆ ಹಾಗೂ ಇತರ ಆರೋಪಿಗಳಾದ ಶಿವಮೊಗ್ಗ ಮೂಲದ ಅರುಣಕುಮಾರ್, ಆದಿಲ್.ಎ.ನಿಶಾನಿ, ಬೆಟಗೇರಿಯ ರವಿ.ಕೆ.ಹತ್ತರಕಲ್,

ಎಸ್.ಎಂ.ಕೃಷ್ಣ ನಗರದ ಗಣೇಶ.ಪಿ.ಮಾದರ, ಗಣೇಶ ಕಾಶಪ್ಪ ಹೊಂಬಳ, ಮಾಣಿಕ ಲಕ್ಕುಂಡಿ, ಬಸವೇಶ್ವರ ನಗರದ ದಾನೇಶ ಉಮಾದಿ, ರಾಕೇಶ ನವಲಗುಂದ, ಮಂಜುನಾಥ ಹೊಸಮನಿ, ಸುಚೀತ್‌ಕುಮಾರ ಮಲ್ಲಪ್ಪ ಹರಿವಾಣ, ದುಂಡಪ್ಪ ಹರ್ಷ ಕೊಟ್ಟೂರಶೆಟ್ಟರ,

ಸಿದ್ದಾರ್ಥ ಭರಡಿ, ನಾಗರಾಜ ಪೆದ್ದಪ್ಪ ರಾಮಗಿರಿ, ಅರುಣಕುಮಾರ್ ಶಶಿಧರ ಹೂಗಾರ, ಸಚಿನ್ ರಮೇಶ ಹರಿವಾಣ, ಸಂತೋಷ ವೀರಶೆಟ್ಟಿ ಇವರೆಲ್ಲ ನಗರದ ಹಳೇ ಡಿ.ಸಿ. ಕಚೇರಿ ಬಳಿಯಿರುವ ಐಡಿಬಿಐ ಬ್ಯಾಂಕ್‌ಗೆ ಬಂದು  ಬಂಗಾರವೆಂದು ನಂಬಿಸಿ 4871.04 ಗ್ರಾಂ ತೂಕದ ಆಭರಣ ಅಡವಿಟ್ಟು 1,43,34000 ರೂ.ಸಾಲ ಪಡೆದಿದ್ದಾರೆ.

ಅಡವಿಡುವ ಸಮಯದಲ್ಲಿ ೧೮ನೇ ಆರೋಪಿಯಾದ ಬ್ಯಾಂಕಿನ ಜ್ಯುವೆಲ್ ಅಪ್ರೇಜರ್ ಸುರೇಶ ಗೋಪಾಲ ರೇವಣಕರ ಕೂಡ ಅಡವಿಟ್ಟ ಆಭರಣಗಳು 22 ಕ್ಯಾರೆಟ್‌ನ ಆಭರಣಗಳು ಎಂದು ಸುಳ್ಳು ಪ್ರಮಾಣಪತ್ರ ನೀಡಿ ಈ ಪ್ರಕರಣದಲ್ಲಿ ಶಾಮೀಲಾಗಿದ್ದಾನೆ ಎಂದು ಬ್ಯಾಂಕಿನ ಪರಶುರಾಮ ಗುರುನಾಥ ರೊಟ್ಟಿಗವಾಡ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಬೆಟಗೇರಿ ಬಡಾವಣೆ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೀದಿಗಳಲ್ಲಿ ಬೀಡಾಡಿ ಜಾನುವಾರುಗಳ ನಿಯಂತ್ರಣಕ್ಕೆ ಜಿಲ್ಲಾಧಿಕಾರಿ ಸೂಚನೆ

‘ಜಾನುವಾರುಗಳಿಗೆ ಕಾಲುಬಾಯಿ ಲಸಿಕಾಕರಣ ಯಶಸ್ವಿಗೊಳಿಸಿ’

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯಲ್ಲಿ ಬೀಡಾಡಿ ಜಾನುವಾರುಗಳ ಹಾವಳಿ ಅಧಿಕವಾಗಿದ್ದು ಇದರಿಂದ ಜನಸಾಮಾನ್ಯರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಬೀಡಾಡಿ ಜಾನುವಾರುಗಳ ಮೂಲಕ ಮಾಲೀಕರು ಅವುಗಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದಲ್ಲಿ ನಗರಸಭೆಯಿಂದ ಬೀಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸ್ಥಳಾಂತರಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪಶುಸಂಗೋಪನಾ ಇಲಾಖೆಯಿಂದ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಶು ಸಂಗೋಪನಾ ಇಲಾಖೆ ಹಾಗೂ ನಗರಸಭೆಯಿಂದ ಬೀಡಾಡಿ ದನಗಳ ನಿಯಂತ್ರಣಕ್ಕಾಗಿ ಸದ್ಯದಲ್ಲಿಯೇ ಜಾನುವಾರುಗಳನ್ನು ಹಿಡಿದು ಗೋಶಾಲೆಗೆ ಸ್ಥಳಾಂತರಿಸಲು ಸೂಚಿಸಿದ ಅವರು ಮೂಲ ಮಾಲೀಕರು ಜಾನುವಾರುಗಳನ್ನು ತಮ್ಮ ಸುಪರ್ದಿಯಲ್ಲಿಟ್ಟುಕೊಳ್ಳಬೇಕು. ನಂತರ ಜಾನುವಾರುಗಳು ತಮ್ಮದು ಎಂದು ಬಂದಲ್ಲಿ ದಂಡಸಹಿತ ಹಾಗೂ ಜಾನುವಾರು ನಿರ್ವಹಣಾ ವೆಚ್ಚವನ್ನು ಭರಿಸಬೇಕಾಗುತ್ತದೆ. ಪದೇ ಪದೇ ಬೀದಿಗಳಲ್ಲಿ ಮಾಲೀಕರು ಜಾನುವಾರುಗಳನ್ನು ಬಿಟ್ಟಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಚರ್ಮಗಂಟು ಕಾಯಿಲೆ ಕುರಿತಂತೆ ಜಾನುವಾರುಗಳ ಮಾಲೀಕರು ತಪ್ಪದೇ ಲಸಿಕೆ ಕೊಡಬೇಕು. ಲಸಿಕೆ ವಿಳಂಬವಾದಲ್ಲಿ ಜಾನುವಾರುಗಳ ಜೀವ ಹಾನಿ ಸಂಭವಿಸಬಹುದಾಗಿದ್ದು ರೈತ ಬಾಂಧವರು ಲಸಿಕೆ ಕೊಡಿಸುವಲ್ಲಿ ವಿಳಂಬ ಮಾಡಬಾರದು. ಹಾಗೂ ಲಸಿಕೆ ನೀಡಿಕೆ ಪ್ರಕ್ರಿಯೆಯನ್ನು ಇಲಾಖಾಧಿಕಾರಿಗಳು ತೀವ್ರಗೊಳಿಸುವ ಮೂಲಕ ಎಲ್ಲ ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ವಿರುದ್ಧ ಲಸಿಕೆ ನೀಡಿಕೆ ಪೂರ್ಣಗೊಳಿಸಲು ಸೂಚಿಸಿದರು.

ಪಶುಪಾಲನಾ ಇಲಾಖೆಯ ಪಾಲಿಕ್ಲಿನಿಕ್‌ನ ಮುಖ್ಯ ಪಶು ವೈದ್ಯಾಧಿಕಾರಿ ಡಾ. ಪ್ರಕಾಶ ಎಸ್ ಜೆಟ್ಟಣ್ಣವರ ಅವರು ಮಾತನಾಡಿ, ರಸ್ತೆಯಲ್ಲಿ ಸಂಚರಿಸುತ್ತಿರುವ ಬೀಡಾಡಿ ದನಗಳನ್ನು ಗುರುತಿಸಿ ಗೋಶಾಲೆಗಳಿಗೆ ವರ್ಗಾಯಿಸಲಾಗಿದೆ. ಜಾನುವಾರುಗಳ ಮಾಲೀಕರುಗಳಿಗೆ ತಮ್ಮ ಜಾನುವಾರುಗಳನ್ನು ತಮ್ಮ ಸುಪರ್ದಿಯಲ್ಲಿ ತೆಗೆದುಕೊಳ್ಳಲು ಎಚ್ಚರಿಕೆ ನೀಡಲಾಗಿದೆ.

ಪಶುಪಾಲನಾ ಕಾಲೇಜಿನ ವಿದ್ಯಾರ್ಥಿಗಳನ್ನು ಬಳಸಿಕೊಂಡು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ನೀಡಲಾಗುತ್ತಿದೆ. ಅಪಘಾತಕ್ಕೊಳ್ಳಗಾಗಿರುವ ಹಾಗೂ ಗಾಯಗೊಂಡಿರುವ ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡಿ ಗುಣಮುಖಗೊಳಿಸಿ ಗೋಶಾಲೆಗಳಿಗೆ ಹಾಗೂ ಪ್ರಾಣಿ ಸಂಗ್ರಹಾಲಯಗಳಿಗೆ ಬಿಡಲಾಗಿದೆ ಎಂದು ತಿಳಿಸಿದರು.

ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಎಚ್.ಬಿ. ಹುಲಗಣ್ಣವರ ಅವರು ಮಾತನಾಡಿ, ಜಿಲ್ಲೆಯಲ್ಲಿ 136311 ದನ, 55798 ಎಮ್ಮೆ, 14552 ಹಂದಿ ಸೇರಿದಂತೆ ಒಟ್ಟಾರೆ 2,06,661 ಜಾನುವಾರುಗಳಿಗೆ ೩ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳಿ ಧಾರವಾಡ ಇವರಿಂದ ಲಸಿಕೆಯನ್ನು ಸರಬರಾಜು ಮಾಡಲು ಶೀತಲೀಕರಣ ವಾಹನದ ಸೌಲಭ್ಯವನ್ನು ಪಡೆಯಲಾಗುವುದು ಎಂದು ಸಭೆಗೆ ತಿಳಿಸಿದರು.

ಇದೇ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಕೈಪಿಡಿ ಹಾಗೂ ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಪಶು ಪಾಲನಾ ಇಲಾಖೆಯ ಉಪನಿರ್ದೇಶಕರಾದ ಡಾ. ಎಸ್.ಎಸ್.ಪಾಟೀಲ, ತಾಲೂಕಾ ಸಹಾಯಕ ನಿರ್ದೇಶಕರುಗಳಾದ ಡಿ.ಬಿ. ಹಕ್ಕಾಪಕ್ಕಿ, ಎನ್.ಎ. ಹವಳದ, ಬಾಬಾಜಾನ್ ಕುರಹಟ್ಟಿ, ವೆಂಕಟೇಶ, ಬಿ.ಎಸ್. ಅಂಗಡಿ ಪಶುಪಾಲನಾ ಮುಖ್ಯ ವೈದ್ಯಾಧಿಕಾರಿ ಡಾ. ತಿಪ್ಪಣ್ಣ ತಳಕಲ್ ಹಾಜರಿದ್ದರು.

ಜಾನುವಾರುಗಳಿಗೆ ೩ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಕುರಿತು ವಲಯವಾರು ಜಾನುವಾರುಗಳ ಆಯ್ಕೆ ಮಾಡಿ ಲಸಿಕೆ ಕೊಡಬೇಕು. ಜಾನುವಾರುಗಳಿಗೆ ಲಸಿಕೆ ಹಾಕುವ ಕುರಿತು ರೈತರಲ್ಲಿ ಹಾಗೂ ಜಾನುವಾರುಗಳ ಮಾಲೀಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು.

-ವೈಶಾಲಿ ಎಂ.ಎಲ್., ಜಿಲ್ಲಾಧಿಕಾರಿ

೩ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಅಭಿಯಾನವನ್ನು ನವೆಂಬರ್ ೭ ರಿಂದ ಒಂದು ತಿಂಗಳ ಅವಧಿಯಲ್ಲಿ ಅಭಿಯಾನ ಏರ್ಪಡಿಸಲಾಗಿದೆ. ಅಭಿಯಾನ ಯಶಸ್ಸಿಗೆ ಇಲಾಖಾಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಜೊತೆಗೆ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕಾಕರಣ ಮಾಡಿಸುವ ಮೂಲಕ ಕಾಲುಬಾಯಿ ರೋಗದಿಂದ ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳಬೇಕು.

-ಡಾ.ಸುಶೀಲಾ ಬಿ., ಜಿಲ್ಲಾ ಪಂಚಾಯತ್ ಸಿಇಒ

ಸಂಗಮ್ಮ ಗುರಿಕಾರ ನಿಧನ

0

ಗದಗ: ಕನ್ನಡಪ್ರಭ ಛಾಯಾಗ್ರಾಹಕ ಶಂಕರ ಗುರಿಕಾರ ಅವರ ತಾಯಿ ಸಂಗಮ್ಮ ಯಮನಪ್ಪ ಗುರಿಕಾರ (76) ಗದಗ ನಗರದ ಅವರ ನಿವಾಸದಲ್ಲಿ ಮಂಗಳವಾರ ನಿಧನರಾದರು.

ಅಂತ್ಯ ಸಂಸ್ಕಾರ ಅವರ‌ ಸ್ವಂತ ಊರಾದ ಕುಷ್ಟಗಿ ತಾಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ದಿ.26-10-2022ರ ಬುಧವಾರ ಬೆಳಗ್ಗೆ ನೆರವೇರಲಿದೆ. ಮೃತರಿಗೆ 4 ಜನ ಹೆಣ್ಣು ಮಕ್ಕಳು, 5 ಜನ ಗಂಡು ಮಕ್ಕಳು, ಸೊಸೆಯಂದಿರು, ಮೊಮ್ಮೊಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಹೊಂದಿದ್ದರು.

ಸಂತಾಪ: ಸಂಗಮ್ಮ ಅವರ ನಿಧನಕ್ಕೆ ಕನ್ನಡಪ್ರಭ ಸಂಪಾದಕರು, ವರದಿಗಾರರು ಹಾಗೂ ಕರ್ನಾಟಕ ಕಾರ್ಯ‌ ನಿರತ ಪತ್ರಕರ್ತರ ಸಂಘದ ಗದಗ ಜಿಲ್ಲೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಪಡಿತರ ಅಕ್ಕಿ ಸಾಗಾಟ; ಓರ್ವನ ಬಂಧನ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಾರ್ವಜನಿಕರ ಆರೋಪ

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸಿ ವಾಹನ ಸಮೇತ ೨೨ ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ. ಈ ಕುರಿತು ಆಹಾರ ಇಲಾಖೆ ಅಧಿಕಾರಿ ಜಗದೀಶ ಕುರುಬರ ಅವರು ಲಕ್ಷ್ಮೇಶ್ವರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆ ವಿವರ

ಪಟ್ಟಣದ ಪ್ರಕಾಶ ಎಂ ಕಡ್ಡಿಯವರ ಎಂಬ ಆರೋಪಿತ ಬೋಲೇರೋ ವಾಹನ(ಕೆಎ-26ಬಿ-4123)ದಲ್ಲಿ ಪಡಿತರ ಅಕ್ಕಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ೨೪೦೯೦ ರೂ ಮೌಲ್ಯದ ೧೦೯೫ ಕೆಜಿ (೨೨ ಪ್ಲಾಸ್ಟಿಕ್ ಚೀಲ) ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ತಡೆಹಿಡಿದಿದ್ದಾರೆ. ಓರ್ವ ವ್ಯಕ್ತಿ, ವಾಹನ ಸಮೇತ ಅಕ್ಕಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ.

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ?

ಲಕ್ಷ್ಮೇಶ್ವರವನ್ನೇ ಕೇಂದ್ರವಾಗಿಸಿಕೊಂಡು ತಾಲೂಕಿನಲ್ಲಿ ಹಲವಾರು ವರ್ಷದಿಂದ ದೊಡ್ಡ ಪ್ರಮಾಣದಲ್ಲಿ ಪಡಿತರ ಅಕ್ಕಿ ಮಾರಾಟ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕಳೆದ ಕೆಲ ದಿನಗಳಿಂದ ಅಕ್ಕಿ ಮಾರಾಟ ದಂಧೆಯ ಬಗ್ಗೆ ಪದೇ ಪದೇ ಆರೋಪ, ಆಕ್ಷೇಪಣೆಗಳು ಕೇಳಿ ಬರುತ್ತಿರುವ ಹಿನ್ನೆಲೆ ಎಚ್ಚೆತ್ತ ಅಧಿಕಾರಿಗಳು ಸಣ್ಣ ಪ್ರಮಾಣದ ಅಕ್ಕಿ ದಂಧೆ ವ್ಯಾಪಾರಿಯನ್ನು ಬಲೆಗೆ ಕೆಡವಿ ಉತ್ತರನ ಪೌರುಷ ಮೆರೆದಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಶಿಗ್ಲಿ ಗ್ರಾಮ ಪಂಚಾಯತಿಯಲ್ಲಿ ಅವ್ಯವಹಾರ ಆರೋಪ; ನ್ಯಾಯ ದೊರಕಿಸದಿದ್ದರೆ ತಾ.ಪಂ ಕಚೇರಿಗೆ ಬೀಗ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯತಿಯಲ್ಲಿ ನಡೆದ ಅವ್ಯವಹಾರದಲ್ಲಿ ಪಾಲ್ಗೊಂಡ ಗ್ರಾಪಂ ಅಧ್ಯಕ್ಷ, ಪಿಡಿಓ ಮತ್ತು ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಲ್ಲಿನ ತಾಪಂ ಕಾರ್ಯಾಲಯದ ಮುಂದೆ ಹೂಡಿರುವ ಅಮರಣಾಂತ ಸತ್ಯಾಗ್ರಹಕ್ಕೆ ಗುರುವಾರ ತಾಲೂಕಿನ ಪ್ರವೀಣಶೆಟ್ಟಿ ಬಣದ ಕರವೇ ಕಾರ್ಯಕರ್ತರು ಬೆಂಬಲ ಸೂಚಿಸಿದ್ದಾರೆ.

ಕೂಡಲೇ ನ್ಯಾಯ ದೊರಕಿಸಬೇಕು, ಇಲ್ಲದಿದ್ದರೆ ಶುಕ್ರವಾರ ತಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿ ಗ್ರೇಡ್-೨ ತಹಸೀಲ್ದಾರ್ ಜೆ. ನಟರಾಜ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಪತ್ರದಲ್ಲಿ ಶಿಗ್ಲಿ ಗ್ರಾಪಂ ಕಾಮಗಾರಿಗಳಲ್ಲಿ ಅವ್ಯವಹಾರವಾಗಿರುವ ಬಗ್ಗೆ ಒಂಬುಡ್ಸ್ಮನ್ ನ್ಯಾಯಾಲಯ ಗದಗ ಇವರು ಕ್ರಮಕ್ಕೆ ಆದೇಶಿಸಿದ್ದಾರೆ. ನರೇಗಾ ಸೇರಿ ಅಭಿವೃದ್ಧಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರವಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದಾಗ್ಯೂ ಹಿರಿಯ ಅಧಿಕಾರಿಗಳು ಮೀನಾಮೇಷ ಮಾಡುತ್ತಿದ್ದಾರೆ.

ಇದನ್ನೇ ಬಂಡವಾಳವಾಗಿಸಿಕೊಂಡಿರುವ ಆಪಾದಿತರು ರಾಜಾರೋಷವಾಗಿ ಅಧಿಕಾರದ ಮದದಲ್ಲಿ ಮೆರೆಯುತ್ತಿದ್ದಾರೆ. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಹೋರಾಟಗಾರರ ಬೇಡಿಕೆಗಳಿಗೆ ತಮ್ಮ ಸಂಘಟನೆಯ ಸಂಪೂರ್ಣ ಬೆಂಬಲವಿದೆ. ಹೋರಾಟಕ್ಕೆ ನೈತಿಕ ಬಲ ತುಂಬುವ ಉದ್ದೇಶದಿಂದ ಕರವೇ ಕಾರ್ಯಕರ್ತರು ಶುಕ್ರವಾರ ಅವರ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸುತ್ತೇವೆ.

ಅವರ ನ್ಯಾಯಸಮ್ಮತವಾದ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ನೀಡಿ ಅವರ ಹೋರಾಟಕ್ಕೆ ನಾವು ಕೂಡಾ ಜೊತೆಯಾಗಲಿದ್ದೇವೆ. ಇಂದೇ ಅಧಿಕಾರಿಗಳು ಬಂದು ಭೇಟಿ ಕೊಡದಿದ್ದಲ್ಲಿ ಶುಕ್ರವಾರ ತಾಲೂಕ ಪಂಚಾಯತಗೆ ಬೀಗ ಹಾಕಿ ಪ್ರತಿಭಟನೆ ಮಾಡುಲಾಗುವುದು ಎಂದು ಕರವೇ ಪ್ರವೀಣ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ಮಹೇಶ ಕಲಘಟಗಿ ಹೇಳಿದರು.

ಗ್ರೇಡ್ ೨ ತಹಸೀಲ್ದಾರ ಜೆ ನಟರಾಜ ಅವರು ಮನವಿ ಸ್ವಿಕರಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಗಾಂಜಿ, ಚಂದ್ರು ಮುಳಗುಂದ, ತೇಜಗೌಡ ಉದ್ದನಗೌಡ್ರ, ಮಂಜುನಾಥ ಬೂದಿಹಾಳ, ಮಲ್ಲು ಅಳ್ಳಳ್ಳಿ, ಆಕಾಶ ದಾನಿ,ಪ್ರಕಾಶ ಮನ್ನಂಗಿ, ಕಾರ್ಯಕರ್ತರು ಉಪಸ್ಥಿತರಿದ್ದರು. ಗ್ರಾಪಂ ಸದಸ್ಯ ಸುರೇಶ ಸಾಧ್ವಿ ನೇತೃತ್ವದಲ್ಲಿ ಸಂತೋಷ ಮಾದನಹಳ್ಳಿ, ಪ್ರಶಾಂತ ಬಡೆಪ್ಪನವರ, ಅಮಾತೆಪ್ಪ ಹರವಿ, ಫಕ್ಕಿರೇಶ ಕುರಿ ಮುಂತಾದವರಿದ್ದರು.

error: Content is protected !!