Home Blog Page 3211

ಅಂಗನವಾಡಿ ಕಾರ್ಯಕರ್ತೆಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಮನವಿ

0

ವಿಜಯಸಾಕ್ಷಿ ಸುದ್ದಿ, ಗದಗ

ಕರ್ನಾಟಕ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಸಿಐಟಿಯು ಗದಗ ಜಿಲ್ಲೆ ಎಲ್ಲಾ ತಾಲೂಕ ಸಮಿತಿಗಳ ವತಿಯಿಂದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯ ಅಂಗನವಾಡಿ ಕಾರ್ಯಕರ್ತರಿಗೆ, ಸಹಾಯಕಿಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಮಾನ್ಯ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗದಗ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಸಿಐಟಿಯು ಪದಾಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸುಮಾರು 45ವರ್ಷಗಳಿಂದ ಅತಿ ಕನಿಷ್ಠ ಕೂಲಿಗೆ ಕೆಲಸ ಮಾಡುತ್ತ ಬಂದಿದ್ದಾರೆ. ಇವರಿಗೆ ಕನಿಷ್ಠ ವೇತನವಾಗಲಿ ಅಥವಾ ಸಾಮಾಜಿಕ ಭದ್ರತಾ ಯೋಜನೆ ಕಾಯಂ ಪಿಂಚಣಿಯನ್ನಾಗಲಿ ಇಲ್ಲಿಯವರೆಗೆ ಆಡಳಿತ ನಡೆಸಿರುವ ಯಾವ ಪಕ್ಷವೂ ಜಾರಿ ಮಾಡಿಲ್ಲ.

ಸಮಾಜದ ಅಭಿವೃದ್ಧಿಗೆ ಐಸಿಡಿಎಸ್ ಕೆಲಸ ಅಲ್ಲದೇ ಇತರೆ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತ ಬಂದಿದ್ದಾರೆ. ಕಳೆದ ಏಪ್ರಿಲ್ 25, 2022 ರಂದು ಸರ್ವೋಚ್ಚ ನ್ಯಾಯಾಲಯವು ಅಂಗನವಾಡಿ ಸಹಾಯಕಿಯರಿಗೆ ಗ್ರಾಚ್ಯುಟಿ ನೀಡಬೇಕು ಎಂದು ಐತಿಹಾಸಿಕ ತೀರ್ಪು ನೀಡಿದೆ.

ಈ ತೀರ್ಪಿನ ಅನ್ವಯ ರಾಜ್ಯ ಮತ್ತು ಕೇಂದ್ರ ಸರ್ಕಾರ ರೋಣ ತಾಲೂಕಿನ ಎಲ್ಲಾ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಸಹಾಯಕಿಯರಿಗೆ ಗ್ರಾಚ್ಯುಟಿ ಜಾರಿ ಮಾಡಲು ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮುಖಾಂತರ ನಮ್ಮ ಇಲಾಖೆಯ ನಿರ್ದೇಶಕರಿಗೆ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ನಮ್ಮ ಬೇಡಿಕೆಯನ್ನು ಕಳಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ನಿವೃತ್ತ ಅಂಗನವಾಡಿ ನೌಕರರ ಸಂಘ ಸಿಐಟಿಯು ತಾಲೂಕ ಸಮಿತಿ ಗದಗ ಹಾಗೂ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಜಿಲ್ಲಾ ಸಮಿತಿಗಳು ಈ ಮೂಲಕ ಮನವಿ ಮಾಡಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯು ಪ್ರಧಾನ ಕಾರ್ಯದರ್ಶಿ ಮಾರುತಿ ಚಿಟಗಿ, ಅಂಗನವಾಡಿ ನಿವೃತ್ತ ನೌಕರರ ಸಂಘದ ಗಿರಿಜಾ ಮಮ್ಮಿಗಟ್ಟಿ, ಗಿರಿಜಾ ಹೂಗಾರ, ಹನಮವ್ವ ದಾಸರ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಸಾವಿತ್ರಿ ಸಬನೀಸ, ಪ್ರಧಾನ ಕಾರ್ಯದರ್ಶಿ ವಿಜಯಾ ಪಾಟೀಲ, ಖಜಾಂಚಿ ಶಂಕ್ರಮ್ಮ ಕೋಳಿವಾಡ, ಅಂಗನವಾಡಿ ನೌಕರರಾದ ದುಂಡಮ್ಮ ಬಳಿಗಾರ, ಗಂಗಮ್ಮ ಹೂಗಾರ, ರೇಣುಕಾ ಕಳಕಣ್ಣವರ, ದೇವಕ್ಕ ಮಾಮುನಿ, ಸುಮಿತ್ರಾ ಹಕಾರಿ, ಶಕುಂತಲಾ ಮುಧೋಳ, ಕಾಳಮ್ಮ ಪಂಚಾಳ, ಗೀತಾ ಶಾನಭೋಗ, ಗಂಗಮ್ಮ ದ್ಯಾವರೆಡ್ಡಿ, ಚಂದ್ರಕಲಾ ಶಳಕೆ, ರೇಣುಕಾ ಹಡಪದ, ಸುಮಿತ್ರಾ ಕಮ್ಮಾರ, ಶಕೀನಾ ನದಾಫ್, ದೇವಕ್ಕ ರಾಠೋಡ, ಕಮಲಾ ಬಡಿಗೇರ, ಗಿರಿಜಾ ಮಾಚಕನೂರ, ಶಾರದಾ ರೋಣದ, ಲಕ್ಷ್ಮಿ ಗಾಯಕವಾಡ, ನೀಲಮ್ಮ ದಾಸರ, ಸುಶೀಲಾ ಚಲವಾದಿ, ಕಮಲಾಕ್ಷಿ ಬೀಳಗಿ, ನಾಗರತ್ನ ಲಕ್ಕ್ಕುಂಡಿ ಉಪಸ್ಥಿತರಿದ್ದರು.

ಹೆಸರು ಬೆಳೆ ಖರೀದಿ ಕೇಂದ್ರ ಬಂದ್; ರೈತರ ಆಕ್ರೋಶ

0

ವಿಜಯಸಾಕ್ಷಿ ಸುದ್ದಿ, ರೋಣ

ಪಟ್ಟಣದ ಎಪಿಎಂಸಿಯಲ್ಲಿ ಹೆಸರು ಬೆಳೆ ಖರೀದಿ ಕೇಂದ್ರ ಹಠಾತ್ ಬಂದಾಗಿದ್ದರಿಂದ ಆಕ್ರೋಶಗೊಂಡ ರೈತರು ಹತ್ತಾರು ಟ್ರ್ಯಾಕ್ಟರ್‌ಗಳೊಂದಿಗೆ ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.

ಸರಕಾರದ ಆದೇಶದಂತೆ ಬೆಂಬಲ ಬೆಲೆ ಅಡಿಯಲ್ಲಿ ಹೆಸರು ಬೆಳೆ ಖರೀದಿಸಲು ಪಟ್ಟಣದ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು ರೈತರಿಗೆ ಮುನ್ಸೂಚನೆ ನೀಡದೆ ಬಂದ್ ಮಾಡಿದ್ದರಿಂದ ನಾನಾ ಗ್ರಾಮಗಳಿಂದ ಬಂದ ನೂರಾರು ರೈತರು ತೊಂದರೆ ಅನುಭವಿಸುವಂತಾಯಿತು.

ಅಲ್ಲದೆ ರಾತ್ರಿ ಪೂರಾ ಖರೀದಿ ಕೇಂದ್ರದಲ್ಲಿ ಕಳೆದರೂ ಏನನ್ನೂ ಹೇಳದೆ ಇದ್ದಕ್ಕಿದ್ದಂತೆ ಖರೀದಿ ಕೇಂದ್ರವನ್ನು ಬಂದ್ ಮಾಡಿದ್ದು ಯಾಕೆ ಎಂಬುದು ರೈತರ ಪ್ರಶ್ನೆಯಾಗಿದೆ. ಈ ಸಂದರ್ಭದಲ್ಲಿ ಮಹಾಂತಯ್ಯ ಭಿಕ್ಷಾವತಿಮಠ ಮಾತನಾಡಿ, ತಾಲೂಕಿನ ಯಾಸ ಹಡಗಲಿ, ಮಾಡಲಗೇರಿ, ಹಿರೇಹಾಳ, ಗುಳಗುಳಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಖರೀದಿ ಕೇಂದ್ರಕ್ಕೆ ಹೆಸರು ಬೆಳೆಯನ್ನು ತಂದಿದ್ದಾರೆ. ಅಲ್ಲದೆ ಸೋಮವಾರವೇ ಖರೀದಿ ಕೇಂದ್ರಕ್ಕೆ ರೈತರು ಬಂದಿದ್ದು, ಇಲ್ಲಿಯವರೆಗೆ ಖರೀದಿ ಕೇಂದ್ರದವರು ಸುಮ್ಮನಿದ್ದು ಈಗ ಕೇಂದ್ರ ಬಂದಾಗಿದೆ ವಾಪಸ್ಸು ಹೋಗಿ ಎಂದರೆ ರೈತರು ಏನು ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೀರನಗೌಡ ಭೀಮನಗೌಡರ ಮಾತನಾಡಿ, ಸತತ ಮಳೆಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಅಳಿದು ಉಳಿದ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಮಾರಾಟ ಮಾಡಲು ಬಂದರೆ ಖರೀದಿ ಕೇಂದ್ರದವರು ಇಲ್ಲ ಸಲ್ಲದ ನೆಪಗಳನ್ನು ಹೇಳುವ ಮೂಲಕ ರೈತರಿಗೆ ತೊಂದರೆ ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಹೆಸರು ಬೆಳೆಯನ್ನು ಖರೀದಿ ಮಾಡುವವರೆಗೂ ನಾವು ತಹಸೀಲ್ದಾರ್ ಕಚೇರಿ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

ಹತ್ತಾರು ಟ್ರ್ಯಾಕ್ಟರ್‌ಗಳೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿದ ರೈತರನ್ನು ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದರಾದರೂ ಅದು ಯಶಸ್ವಿಯಾಗಲಿಲ್ಲ. ಅಲ್ಲದೆ ಕಚೇರಿಯ ಬಾಗಿಲಿಗೆ ಹೊಂದಿಕೊಂಡು ನಿಲ್ಲಿಸಲಾಗಿರುವ ಟ್ರ್ಯಾಕ್ಟರ್‌ಗಳನ್ನು ಬೇರೆ ಕಡೆಗೆ ನಿಲ್ಲಿಸಿ ಎಂದು ರೈತರ ಬಳಿ ನಿವೇದಿಸಿಕೊಂಡರು. ರೈತರು ನಾವು ಇಡೀ ರಾತ್ರಿ ಸೊಳ್ಳೆ ಕಡಿಸಿಕೊಂಡು ನಿದ್ದೆಯಿಲ್ಲದೆ ಆವರಣದಲ್ಲಿ ಕುಳಿತಿದ್ದೇವೆ. ನಮ್ಮ ಸ್ಥಿತಿಯನ್ನು ಸ್ವಲ್ಪ ನೋಡಿ ಎಂದು ರೈತರು ಪೊಲೀಸರ ಎದುರು ತಮ್ಮ ಅಳಲನ್ನು ತೋಡಿಕೊಂಡರು.


ಶಂಕ್ರಪ್ಪ ಹುಗ್ಗಿ, ಶಶಿಕಲಾ ದೋಣಿ, ಬಸನಗೌಡ ಬಾಲನಗೌಡ, ಸಂಗಪ್ಪ ಗಾಣಿಗೇರ, ಕಾಳವ್ವ ಖ್ಯಾತನಗೌಡ್ರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅತಿಯಾದ ಮಳೆಯಿಂದ ಬೆಳೆ ಹಾಳು; ರೈತರ ಗೋಳು ಕೇಳುವರ‍್ಯಾರು?

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಈ ಬಾರಿಯ ಮಳೆಯು ರೈತರ ಸಂಪೂರ್ಣ ಬೆಳೆಯನ್ನು ಹಾಳುಮಾಡಿದ್ದು, ಪ್ರತಿವರ್ಷ ಒಂದಿಲ್ಲೊಂದು ಸಂಕಷ್ಟಗಳಿಂದ ಬಳಲುತ್ತಿರುವ ರೈತರಿಗೆ ಈ ಬಾರಿ ಮೇಲೇಳಲಾರದ ಹೊಡೆತ ಕೊಟ್ಟಿದ್ದು ರೈತರು ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.

ಬಿಟ್ಟುಬಿಡದೇ ಸುರಿಯುತ್ತಿರುವ ಈ ಭಾರಿ ಮಳೆಗೆ ಕೈಗೆ ಬಂದ ಬೆಳೆಯು ನೀರು ಪಾಲಾಗುತ್ತಿರುವುದನ್ನು ಕಂಡ ರೈತ ಅಸಹಾಯಕನಾಗಿ ತಲೆ ಮೇಲೆ ಕೈಹೊತ್ತು ಕೂಡುವಂತಾಗಿದೆ. ಜಮೀನುಗಳು ಕೆಸರು ಗದ್ದೆಗಳಾಗಿ ಮಾರ್ಪಟ್ಟಿವೆ.

ಈ ಬಾರಿ ಕಡಿಮೆ ಪ್ರಮಾಣದ ಇಳುವರಿ ಬಂದಿರುವ ಶೇಂಗಾದಲ್ಲಿ ಬರೀ ಮಣ್ಣು ಬೆರೆತು ಹೋಗಿದ್ದು, ಮಾರುಕಟ್ಟೆಯಲ್ಲಿ ಅದನ್ನು ಕೊಳ್ಳುವವರು ಇಲ್ಲದಂತಾಗಿದೆ. ಇದರಿಂದಾಗಿ ಹೊಲದಲ್ಲಿಯೇ ಕಿತ್ತು ಹಾಕಿರುವ ಶೇಂಗಾ ಬೆಳೆಯನ್ನು ರೈತರು ರಸ್ತೆಯ ಪಕ್ಕದಲ್ಲಿ ನಿಂತ ನೀರಿನಲ್ಲಿ ತೊಳೆಯುತ್ತಿದ್ದಾರೆ. ಅಳಿದು ಉಳಿದ ಸ್ವಲ್ಪ ಬೆಳೆಯನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ಹಿಂಗಾರು ಬಿತ್ತನೆ ಮುಗಿಯುತ್ತಾ ಬಂದರೂ ಮಳೆ ಮಾತ್ರ ತನ್ನ ಆರ್ಭಟ ನಿಲ್ಲಿಸುತ್ತಿಲ್ಲ. ಮುಂಗಾರು ಹಂಗಾಮಿನಲ್ಲಿ ಶೇಂಗಾ ಬಿತ್ತನೆಯಿಂದ ಕಟಾವು ಹಂತದವರೆಗೂ ಪ್ರತಿ ಎಕರೆಗೆ ಸುಮಾರು 20 ಸಾವಿರ ರೂ. ಖರ್ಚು ಮಾಡಿದ್ದು, ಬೆಳೆ ಕಟಾವು ಸಮಯದಲ್ಲಿ ಮಳೆ ಆಗಿದ್ದರಿಂದ ಹೊಲಗಳಲ್ಲಿ ಬೆಳೆ ಕೊಳೆತು ಹೋಗಿದೆ.

ಸತತವಾಗಿ ಸುರಿಯುತ್ತಿರುವ ಮಳೆಗೆ ರೈತ ಯಾವ ಬೆಳೆಗಳಿಂದ ಲಾಭ ಸಿಗದೇ ತೀವ್ರ ಸಂಕಷ್ಟದಲ್ಲಿ ಸಿಲುಕುವಂತಾಗಿದೆ. ಪ್ರತಿವರ್ಷ ಬೆಳೆ ಹಾಳಾಗುತ್ತಿರುವುದರಿಂದ ರೈತರು ಸಾಲದ ಸುಳಿಯಿಂದ ಹೊರಬರಲಾರದ ಪರಿಸ್ಥಿತಿ ತಲುಪಿದ್ದಾರೆ. ಇನ್ನೊಂದೆಡೆ ಮೇವು ಕೂಡ ಕೊಳೆತು ಹೋಗಿದ್ದು ಮೇವು ಸಂಗ್ರಹವಿಲ್ಲದೇ ಜಾನುವಾರು ಸಂರಕ್ಷಣೆ ಕೂಡ ಚಿಂತೆಯಾಗಿದೆ.

ಆರು ಎಕರೆ ಶೇಂಗಾ ಬಿತ್ತನೆ ಮಾಡಿದ್ದೆ. ಮಳೆಯಿಂದಾಗಿ ಶೇಂಗಾ ಬೆಳೆ ಭೂಮಿಯಲ್ಲಿ ಸಿಕ್ಕಿಕೊಂಡು ಎಲ್ಲಾ ನಾಶವಾಗಿದೆ. ಉಳಿದ ಬೆಳೆಯನ್ನು ನೀರಿನಲ್ಲಿ ತೊಳೆದು ರಸ್ತೆಯಲ್ಲಿ ಒಣಗಿ ಹಾಕಿದ್ದೇನೆ. ಇದು ಒಬ್ಬರ ಕಥೆಯಲ್ಲ. ಬಹುತೇಕ ರೈತರ ಪರಿಸ್ಥಿತಿ ಇದೇ ಆಗಿದೆ. ಸರಕಾರ ಕೊಡುವ ಅಲ್ಪ ಸ್ವಲ್ಪ ಪರಿಹಾರ ಧನ ಯಾವುದಕ್ಕೂ ಸಾಲದು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ ರೈತರ ಜೀವ ಉಳಿಸುವ ಕಾರ್ಯವನ್ನು ಸರಕಾರ ಮಾಡಲಿ.

ನೀಲಪ್ಪ, ಬಾಲೆಹೊಸೂರ ಗ್ರಾಮದ ರೈತ

ಆಯುರ್ವೇದದ ಅರಿವಿದ್ದರೆ ಕಾಯಿಲೆಗಳು ದೂರ; ಸುಜಾತಾ ದೊಡ್ಡಮನಿ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಆಯುರ್ವೇದವು ಭಾರತೀಯರ ಪುರಾತನ ಚಿಕಿತ್ಸಾ ಪದ್ಧತಿ. ಆಯುರ್ವೇದದ ಅರಿವಿದ್ದರೆ ಕಾಯಿಲೆಗಳಿಂದ ದೂರವಿರಲು ಸಾಧ್ಯ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಗದಗ ಜಿಪಂ ಮಾಜಿ ಅಧ್ಯಕ್ಷೆ ಸುಜಾತಾ ದೊಡ್ಡಮನಿ ಹೇಳಿದರು.

ಸೋಮವಾರ ಪಟ್ಟಣದ ಚನ್ನಮ್ಮ ವನದಲ್ಲಿ ಡಿಜಿಎಂ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಹಾಗೂ ಸುಜಾತಾ ದೊಡ್ಡಮನಿ ಫೌಂಡೇಶನ್ ಸಹಯೋಗದಲ್ಲಿ ಮಹಿಳೆಯರಿಗೆ ಹಮ್ಮಿಕೊಂಡಿದ್ದ ೭ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಿಮಿತ್ತ ಆಯುರ್ವೇದದ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನೆಯಲ್ಲಿ ಬಳಸುವ ಬೆಳ್ಳುಳ್ಳಿ, ಅರಿಷಿನ, ಶುದ್ಧ ಕೊಬ್ಬರಿ ಎಣ್ಣೆ ಸೇರಿ ಬಹುತೇಕ ವಸ್ತುಗಳೇ ಆಯುರ್ವೇದದ ಭಾಗವಾಗಿವೆ. ಎಲ್ಲವನ್ನೂ ನಾವು ಮಿತವಾಗಿ ಬಳಸುವ, ಯಾವ ಕಾಲಕ್ಕೆ ಎಷ್ಟು ಬಳಸುವ ಮಾಹಿತಿಯನ್ನು ಇಂದಿನ ಪೀಳಿಗೆಗೆ ನೀಡುವ ಕೆಲಸವಾಗಬೇಕಿದೆ.

ಒಂದು ಕುಟುಂಬದ ಆರೋಗ್ಯ ಅಡುಗೆ ಮನೆಯಲ್ಲಿ ಇರುವುದರಿಂದ ಮಹಿಳೆಯರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಸುಜಾತಾ ದೊಡ್ಡಮನಿ ಹೇಳಿದರು.

ಲಕ್ಷ್ಮೇಶ್ವರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಮ್ಮ ಕಳ್ಳಿ ಅವರು ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸಂಯೋಜಕರಾದ ದಾನೇಶ್ವರಿ ಭಜಂತ್ರಿ, ಭುವನೇಶ್ವರಿ ಕಲಕುಟಿಗರ, ಮಹಾ ದೇವಮ್ಮ ಹಳ್ಳಿ, ಬಸಮ್ಮ ಕಾಮಣ್ಣವರ, ಲಕ್ಷ್ಮವ್ವ ಕುರಿ, ಸುಶೀಲಮ್ಮ ಹುರಕಡ್ಲಿ, ಶಶಿಕಲಾ ಬಡಿಗೇರ, ಡಾ.ಸುವರ್ಣ ನಿಡಗುಂದಿ, ಡಾ.ಪಲ್ಲವಿ ಸೇರಿ ಅನೇಕರಿದ್ದರು.

ಬಗರ್ ಹುಕುಂ ಹಕ್ಕಿಗಾಗಿ ನೂರಾರು ರೈತರ ಬೆಂಗಳೂರು ಚಲೊ

0

*ಫ್ರೀಡಂ ಪಾರ್ಕ್ ನಲ್ಲಿ ನಡೆಯುವ ಪ್ರತಿಭಟನೆ

ವಿಜಯಸಾಕ್ಷಿ ಸುದ್ದಿ, ಗದಗ

ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮ ಹಾಗೂ ಡೋಣಿ ತಾಂಡಾ (ಕಪೋತಗಿರಿ), ಅತ್ತಿಕಟ್ಟಿ ದಿಂಡೂರು ಮತ್ತು ಕಪ್ಪತ್ತಗುಡ್ಡದ ಸುತ್ತಮುತ್ತಲಿನ ರೈತರು ಬಗರ್ ಹುಕುಂ ಹಕ್ಕಿಗಾಗಿ ನಡೆಯುವ ಬೆಂಗಳೂರು ಚಲೋ ಪ್ರತಿಭಟನೆಯಲ್ಲಿ ಭಾಗವಹಿಸಲು ಸೋಮವಾರ ರಾತ್ರಿ ತೆರಳಿದರು. ಜಿಲ್ಲೆಯಿಂದ ನೂರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಭಾಗವಹಿಸಲಿದ್ದಾರೆ.

ಈ ಗ್ರಾಮಗಳ ರೈತರು 1938ರಿಂದ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುತ್ತಾ ಬಂದಿದ್ದು ಇದುವರೆಗೂ ಸರಕಾರದಿಂದ ಯಾವುದೇ ಹಕ್ಕುಪತ್ರವಾಗಲೀ, ಪಟ್ಟಾ ಆಗಲಿ ದೊರೆತಿಲ್ಲ. ಅರಣ್ಯ ಅಕ್ರಮ ಭೂಮಿಯನ್ನು 1980ರಲ್ಲಿ ಬೆಳಗಾವಿ ಮುಖ್ಯ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಂದ ಸರ್ವೆ ಮಾಡಿಸಿ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಆದರೆ 1983 ಮತ್ತು 1986 ರಲ್ಲಿ ಅರಣ್ಯ ಇಲಾಖೆಯು ಸರ್ವೆ ಮಾಡಿಸಿದ ದಾಖಲೆಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮುಚ್ಚಿ ಹಾಕಿದ್ದಾರೆಂದು ರೈತರು ಆರೋಪಿಸಿದ್ದಾರೆ.

2018ರಲ್ಲಿ ಸರಕಾರದ ಆದೇಶದಂತೆ ಹಕ್ಕುಪತ್ರ ವಿತರಣೆ ಸಲುವಾಗಿ ಗ್ರಾಮ ಪಂಚಾಯತಿ ಗ್ರ‍್ರಾಮ ಸಭೆಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಿ ಅರಣ್ಯ ಹಕ್ಕು ಸಮಿತಿಗೆ ಹಸ್ತಾಂತರಿಸಲಾಗಿತ್ತು. ಅರಣ್ಯ ಹಕ್ಕು ಸಮಿತಿಯವರು ಆಯ್ಕೆಯಾದ ಫಲಾನುಭವಿಗಳ ಅರ್ಜಿಯೊಂದಿಗೆ ಮುಂಡರಗಿ ತಹಸೀಲ್ದಾರ ಮತ್ತು ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಿಗೆ ಹಸ್ತಾಂತರಿಸಲಾಗಿತ್ತು.

2001 -2002ರಲ್ಲಿ ಸರಕಾರದ ಆದೇಶದಂತೆ ಅರಣ್ಯ ಒತ್ತುವರಿದಾರ ರೈತರ ಭೂಮಿಯನ್ನು ಅರಣ್ಯ ಅಧಿಕಾರಿಗಳು ಜಿ ಪಿ ಸರ್ವೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸುವ ಕೆಲಸವನ್ನು ಮುಚ್ಚಿ ಹಾಕಿದ್ದಾರೆ. ಆದರೂ ಇದುವರೆಗೂ ಯಾವುದೇ ಹಕ್ಕು ಪತ್ರ, ಪಟ್ಟಾ ಆಗಲೀ ನೀಡಿಲ್ಲ. ಆದ್ದರಿಂದ ಅಕ್ರಮ ಭೂಮಿಯನ್ನು ಸಕ್ರಮಗೊಳಿಸಿ ಪಟ್ಟಾ ದೊರಕಿಸಿಕೊಡಲು ಆಗ್ರಹಿಸಿ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಶಂಕರಗೌಡ ಜಾಯಿನಗೌಡರ್ ಹೇಳಿದ್ದಾರೆ.

‘ನಮ್ಮ ನಗರ, ಸ್ವಚ್ಛ ನಗರಕ್ಕೆ ಎಲ್ಲರ ಸಂಕಲ್ಪ’

0

ಘನ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಕುರಿತ ಪರಿಶೀಲನಾ ಸಭೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ನಮ್ಮ ನಗರ ಸ್ವಚ್ಛ ನಗರ ಮಾಡಲು ಎಲ್ಲರೂ ಸಂಕಲ್ಪ ಮಾಡಬೇಕು. ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶಾಲಾ ಕಾಲೇಜು ಸಂಸ್ಥೆಗಳನ್ನು ಹಸಿರು ಆವರಣ (ಗ್ರೀನ್ ಕ್ಯಾಂಪಸ್) ಮಾಡಲು ಮುಂದಾಗಬೇಕಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ರಾಜ್ಯಮಟ್ಟದ ಸಮಿತಿ ಅಧ್ಯಕ್ಷ ನಿವೃತ್ತ ನ್ಯಾ. ಸುಭಾಸ ಆಡಿ ಅವರು ಹೇಳಿದರು.

ಅವರು ಸೋಮವಾರ ಸರ್ಕ್ಯೂಟ್ ಹೌಸ್‌ನಲ್ಲಿ ಘನ ತ್ಯಾಜ್ಯ, ಕಟ್ಟಡ ನಿರ್ಮಾಣ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು ೨೦೧೬ರ ನಿಯಮಾವಳಿಗಳನ್ನು ಅನುಷ್ಠಾನಗೊಳಿಸುವ ಕುರಿತ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ನಿಲ್ದಾಣಗಳಲ್ಲಿ ಹಸಿ ಕಸ, ಒಣ ಕಸ ಹಾಕಲು ಕಸದ ಡಬ್ಬಿಗಳನ್ನು ಅಳವಡಿಸಬೇಕು. ಜಿಲ್ಲಾ ಪಂಚಾಯತಿಯ ಐಇಸಿ ಕಾರ್ಯಕ್ರಮವನ್ನು ಸಮರ್ಪಕವಾಗಿ ಕಾರ್ಯಗತಗೊಳಿಸಲು ಮುಂದಾಗಬೇಕಾಗಿದೆ.

ರೈಲ್ವೆ ಬೋಗಿ ಹಾಗೂ ಬಸ್‌ಗಳಲ್ಲಿ ಕಸದ ಡಬ್ಬಗಳನ್ನು ಅಳವಡಿಸಬೇಕು. ಪ್ರಯಾಣಿಕರು ಕಸವನ್ನು ಕಡ್ಡಾಯವಾಗಿ ಡಬ್ಬಿಗಳಲ್ಲಿ ಹಾಕುವಂತೆ ನಿರ್ವಾಹಕರು ನಿರ್ದೇಶನ ನೀಡಬೇಕು. ಕಸವನ್ನು ಬಸ್ಸಿನ ಕಸದ ಡಬ್ಬಗಳಲ್ಲಿ ಹಾಕದಿದ್ದಲ್ಲಿ ನಿರ್ವಾಹಕರು ದಂಡ ವಿಧಿಸಬಹುದು. ಅಲ್ಲದೇ ಕಿಟಕಿಗಳಲ್ಲಿ ಉಗುಳುವುದನ್ನು ನಿಷೇಧೀಸಬೇಕು. ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರದಿಂದ ಕಾರ್ಯನಿರ್ವಹಿಸಬೇಕಾಗಿದೆ. ವಾರ್ಡ್ ಸದಸ್ಯರು ತಮ್ಮ ವಾರ್ಡ್ ಗಳನ್ನು ಸ್ವಚ್ಛವಾಗಿಡಲು ಮುಂದಾಗಬೇಕು. ಆ ನಿಟ್ಟಿನಲ್ಲಿ ಮುನ್ನಡೆದಾಗ ಮಾತ್ರ ಇಂದೋರ್ ನಗರದಂತೆ ನಮ್ಮ ಅವಳಿ ನಗರಗಳು ಸ್ವಚ್ಛಂದವಾಗಲಿವೆ ಎಂದು ತಿಳಿಸಿದರು.

ಆಸ್ಪತ್ರೆ, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಶಾಲಾ ಕಾಲೇಜು, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಮ್ಮ ನಗರದ ತ್ಯಾಜ್ಯ ನಿರ್ವಹಣೆ ನಮ್ಮ ಕರ್ತವ್ಯ ಎಂಬ ಧ್ಯೇಯವಾಕ್ಯದೊಂದಿಗೆ ಎಲ್ಲರೂ ತ್ಯಾಜ್ಯ ನಿರ್ವಹಣೆಗೆ ಆದ್ಯತೆ ನೀಡಬೇಕಾಗಿದೆ ಎಂದರು.

ಉಪಮೇಯರ್ ಉಮಾ ಮುಕುಂದ ಮಾತನಾಡಿ, ವಾರ್ಡ್ಗಳಲ್ಲಿ ರಂಗೋಲಿ ಬಿಡಿಸಿ, ಕಸ ಹಾಕದಂತೆ ಜಾಗೃತಿ ಮೂಡಿಸಲಾಗಿದೆ. ಕಸ ಹಾಕಿದವರಿಗೆ ದಂಡ ವಿಧಿಸಲಾಗುವುದು. ನಗರವನ್ನು ಸ್ವಚ್ಛವಾಗಿಸಲು ಪಾಲಿಕೆ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ. ಈ ಹಿಂದೆ ಫುಟಪಾತ ತೆರವುಗೊಳಿಸಿದರೂ ಸಹ ಪುನಃ ಮೊದಲಿನ ಸ್ಥಿತಿಯಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ ಎಂದು ದೂರಿದರು.

ನೈರುತ್ಯ ರೈಲ್ವೆಯ ಸಹಾಯಕ ಮುಖ್ಯ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಹಿರಿಯ ಪರಿಸರ ಅಧಿಕಾರಿ ಸಯ್ಯದ್ ಖಾಜಿ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ, ಪರಿಸರ ಅಧಿಕಾರಿ ಶೋಭಾ ಪೋಳ, ಬಿಆರ್ ಟಿಸಿ ಸಂಸ್ಥೆಯ ಸಹಾಯಕ ಮುಖ್ಯ ಇಂಜಿನಿಯರ್ ಮುಸ್ತಾಕ ಬಿಜಾಪುರಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ, ಎಸ್.ಬಿ. ಚನ್ನಪ್ಪಗೌಡರ, ಟಿ.ಎಲ್. ಶ್ರೀನಾಥ್, ಕಿರಣಕುಮಾರ ಬಸಾಪುರ, ಪ್ರವೀಣ, ಮುಖ್ಯ ಕಾಮಗಾರಿ ಅಭಿಯಂತರಾದ ಪ್ರಕಾಶ ಕಬಾಡಿ, ಸೋಮಶೇಖರ ಹಿರೇಗೌಡ್ರ, ಎಸ್.ಆರ್. ಪಾಟೀಲ, ಆನಂದ ಕಲ್ಲೋಳಿಕರ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿವಿಧ ವಲಯಗಳ ಆಯುಕ್ತರು, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.

30 ದಿನಗಳಲ್ಲಿ ಬ್ಯಾನರ್, ಫ್ಲಕ್ಸ್ ಗಳನ್ನು ತೆರವುಗೊಳಿಸಲಾಗುವುದು. ಮಾರುಕಟ್ಟೆಯನ್ನು ದಿನಕ್ಕೆ ಎರಡು ಬಾರಿ ಸ್ವಚ್ಛಗೊಳಿಸಲಾಗುವುದು. ಕಸ ಸಂಗ್ರಹಣೆ ಮಾಡಲು ಹೊರಗುತ್ತಿಗೆ ಆಧಾರದ ಮೇಲೆ ಟ್ರ‍್ಯಾಕ್ಟರ್‌ಗಳನ್ನು ತೆಗೆದುಕೊಳ್ಳಲಾಗುವುದು. ಡಿಜಿಟಲ್ ಬೋರ್ಡ್ ಮೂಲಕ ಜಾಹೀರಾತು ಬಿತ್ತರಿಸಲು ಕ್ರಮ ವಹಿಸಲಾಗುವುದು.

ಶಂಕರಾನಂದ ಬನಶಂಕರಿ, ಹೆಚ್ಚುವರಿ ಆಯುಕ್ತ, ಹು-ಧಾ ಮಹಾನಗರ ಪಾಲಿಕೆ

‘ಇನ್ನು ಮುಂದೆ ರಸಗೊಬ್ಬರಗಳು ಭಾರತ್ ಬ್ರ್ಯಾಂಡ್‌ಗಳಲ್ಲಿ ಲಭ್ಯ,

ವಿಜಯಸಾಕ್ಷಿ ಸುದ್ದಿ, ಬಳ್ಳಾರಿ

ಈ ಹಿಂದೆ ದೊರೆಯುತ್ತಿದ್ದ ಖಾಸಗಿ ಕಂಪನಿಗಳ ರಸಗೊಬ್ಬರಗಳು ಹಾಗೂ ಕೃಷಿ ಪರಿಕರಗಳು ಮುಂದೆ ಭಾರತ್ ಬ್ರ್ಯಾಂಡ್‌ಗಳಲ್ಲಿ ಎಲ್ಲಾ ಫರ್ಟಿಲೈಜರ್ ಅಂಗಡಿಗಳಲ್ಲಿ ದೊರೆಯಲಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದರು.

ಸೋಮವಾರ ನಗರದ ಕೆಸಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಸೀಡ್ಸ್ ಮತ್ತು ಫರ್ಟಿಲೈರ‍್ಸನ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶದ ಪ್ರಧಾನಿ ಮಂತ್ರಿಗಳ ಆಶಯದಂತೆ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರಗಳು ರಾಜ್ಯದಲ್ಲಿ 43 ಕೇಂದ್ರಗಳು ಉದ್ಘಾಟನೆಗೊಳ್ಳಲಿದ್ದು, ಅದರಲ್ಲಿ ಬಳ್ಳಾರಿಯ ಶ್ರೀ ವೆಂಕಟೇಶ್ವರ ಸೀಡ್ಸ್ ಮತ್ತು ಫರ್ಟಿಲೈರ‍್ಸನ ಅಂಗಡಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರವು ಉದ್ಘಾಟನೆಗೊಳ್ಳಲಿದೆ. ಇಲ್ಲಿ ಸಿಗುವಂತಹ ಎಲ್ಲಾ ಕೃಷಿ ರಸಗೊಬ್ಬರಗಳು ಭಾರತ್ ಬ್ರಾಂಡ್‌ಗಳಲ್ಲಿ ದೊರೆಯಲಿವೆ ಎಂದು ಅವರು ಹೇಳಿದರು.

ಈ ಮುಂಚೆ ದೊರೆಯುತ್ತಿದ್ದ ಯುರಿಯಾ 1 ಚೀಲ ಗೊಬ್ಬರದ ಬೆಲೆಯು ರೂ.1666 ಇದ್ದು, ಈಗ ರೂ.266ಕ್ಕೆ ದೊರೆಯಲಿದೆ. ಇನ್ನುಳಿದ ರೂ.1400 ಸಬ್ಸಿಡಿ ರೂಪದಲ್ಲಿ ಕೇಂದ್ರ ಸರ್ಕಾರ ವೆಚ್ಚ ಭರಿಸಲಿದೆ. ಅದರಂತೆಯೇ 1ಚೀಲ ಗೊಬ್ಬರಕ್ಕೆ ಡಿಎಪಿ ಬೆಲೆ ರೂ.3850 ಇದ್ದು, ರೂ.1350 ನೀಡಿದರೆ ಇನ್ನುಳಿದ ರೂ.2500 ಸಬ್ಸಿಡಿ ಸಿಗಲಿದೆ.

ಎಂಒಪಿ ಬೆಲೆ ರೂ.2459 ಇದ್ದು, ರೂ.1700 ಕ್ಕೆ ರೈತರಿಗೆ ವಿತರಿಸಲಾಗುತ್ತಿದ್ದು, ಇನ್ನುಳಿದ ರೂ.759 ಗಳನ್ನು ಸಬ್ಸಿಡಿ ನೀಡಲಿದೆ ಹಾಗೂ ಕಾಂಪ್ಲೆಕ್ಸ್ 1ಚೀಲದ ಗೊಬ್ಬರದ ಬೆಲೆ ರೂ.3204 ಇದ್ದು, ರೈತರಿಗೆ ರೂ.1470ಕ್ಕೆ ನೀಡಲಿದ್ದು, ರೂ.1734 ಕೇಂದ್ರ ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಒದಗಿಸಲಿದೆ ಎಂದು ಅವರು ತಿಳಿಸಿದರು.

ಒಟ್ಟಾರೆಯಾಗಿ 2020 ಲಕ್ಷ ಕೋಟಿ ರೂ. ಹಣವನ್ನು ರೈತರು ರಸಗೊಬ್ಬರವನ್ನು ಕೊಂಡುಕೊಳ್ಳಲು ಕೇಂದ್ರ ಸರ್ಕಾರವು ಸಬ್ಸಿಡಿ ರೂಪದಲ್ಲಿ ಹಣ ನೀಡಲಿದೆ ಎಂದು ತಿಳಿಸಿದರು.

ಪ್ರಧಾನಿಗಳು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರಾಜ್ಯದಲ್ಲಿರುವ 50 ಲಕ್ಷ ರೈತರಿಗೆ ಒಂದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ತಿಳಿಸಿದ ಅವರು, ಕೇಂದ್ರ ಸರ್ಕಾರವು ವರ್ಷಕ್ಕೆ ರೂ.6 ಸಾವಿರ 3 ಕಂತುಗಳಲ್ಲಿ ಮತ್ತು ರಾಜ್ಯ ಸರ್ಕಾರವು ರೂ.4 ಸಾವಿರ 2 ಕಂತುಗಳಲ್ಲಿ ಹಣ ಬಿಡುಗಡೆ ಮಾಡಲಿದೆ ಎಂದು ಹೇಳಿದರು.

ಇನ್ನು ಮುಂದೆ ಒಂದೇ ಅಂಗಡಿಯಲ್ಲಿ ಎಲ್ಲಾ ತರಹದ ರಸಗೊಬ್ಬರಗಳು, ಔಷಧಿಗಳು, ಕೃಷಿ-ಪರಿಕರಗಳು ಹಾಗೂ ಗುಣಮಟ್ಟದ ಬಿತ್ತನೆ ಬೀಜಗಳು, ಕೀಟ ನಾಶಕಗಳು ಸೇರಿದಂತೆ ಇನ್ನಿತರೆ ಎಲ್ಲಾ ವಸ್ತುಗಳನ್ನು ಸಕಾಲದಲ್ಲಿ ಸೂಕ್ತ ಬೆಲೆಗಳಲ್ಲಿ ಒದಗಿಸಿಕೊಡುವುದೇ ರಾಜ್ಯದ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಕೇಂದ್ರದಲ್ಲಿ ಮಣ್ಣು, ಬೀಜ, ರಸಗೊಬ್ಬರ ವಿಶ್ಲೇಷಣೆ ಮತ್ತು ಕೃಷಿ ಸಂಬಂಧಿತ ಇಲಾಖೆಗಳಿಂದ ರೈತರಿಗೆ ಸೌಲಭ್ಯಗಳ ಬಗ್ಗೆ ಮಾಹಿತಿ, ವಿವಿಧ ಬೆಳೆಗಳಿಗೆ ಸಂಬಂಧಿಸಿದ ಸುಧಾರಿತ ಬೇಸಾಯಗಳ ಮಾಹಿತಿ, ಕಡಿಮೆ ಬಾಡಿಗೆ ದರದಲ್ಲಿ ಕೃಷಿ ಯಂತ್ರೋಪಕರಣಗಳ ಲಭ್ಯತೆ ಹಾಗೂ ಇತರೆ ಸೇರಿದಂತೆ ಮಾಹಿತಿಯನ್ನು ರೈತರಿಗೆ ತಿಳಿಸುವುದೇ ಪ್ರಧಾನ ಮಂತ್ರಿ ಕಿಸಾನ್ ಸಮೃದ್ಧಿ ಕೇಂದ್ರ ಯೋಜನೆಯ ಮೂಲ ಉದ್ದೇಶವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ವರ್ಚುವಲ್ ಮೂಲಕ ಪಿಎಂ ಕಿಸಾನ್ ಸಮೃದ್ಧಿ ಕೇಂದ್ರಗಳನ್ನು ಅನಾವರಣಗೊಳಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಚಟುವಟಿಕೆಗಳಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸದರಾದ ವೈ.ದೇವೇಂದ್ರಪ್ಪ, ಬಳ್ಳಾರಿ ನಗರ ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಕೃಷಿ ಜಂಟಿ ನಿರ್ದೇಶಕರಾದ ಡಾ.ಮಲ್ಲಿಕಾರ್ಜುನ, ಸಹಾಯಕ ನಿರ್ದೇಶಕರಾದ ದಯಾನಂದ್, ಫರ್ಟಿಲೈಜರ್ ಕಂಪನಿಯ ವ್ಯವಸ್ಥಾಪಕರಾದ ಸುರೇಶ್‌ಕುಮಾರ್, ಸಿಸಿಒ ಹರ್ಷದೀಪ, ಫರ್ಟಿಲೈಜರ್ ಕಮಿಟಿಯ ಸದಸ್ಯರಾದ ಕೃಷ್ಣಾರೆಡ್ಡಿ, ಶಿವ ರೆಡ್ಡಿ, ಕೃಷಿ ಪರಿಕರಗಳ ಮಾರಾಟಗಾರರ ಸಂಘದ ಅಧ್ಯಕ್ಷರಾದ ಗಣಪಾಲ ಐನಾತ ರೆಡ್ಡಿ ಸೇರಿದಂತೆ ರೈತರು ಹಾಗೂ ಇನ್ನಿತರರು ಇದ್ದರು.

ರಸ್ತೆಗಳ ಅಭಿವೃದ್ಧಿಯಿಂದ ರೈತರಿಗೆ ಅನುಕೂಲ; ಜಗದೀಶ್ ಶೆಟ್ಟರ್

ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ

ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣದಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಹೇಳಿದರು. 

ಇಂದು ವಾರ್ಡ್ ನಂ.35 ರ ಭೈರಿದೇವರಕೊಪ್ಪದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ. 8 ಕೋಟಿ ಅನುದಾನದಲ್ಲಿ ಎರಡು ಸಣ್ಣ ಸೇತುವೆ ಒಳಗೊಂಡಂತೆ ಭೈರಿದೇವರಕೊಪ್ಪ – ಮಾರಡಗಿ, ಭೈರಿದೇವರಕೊಪ್ಪ – ಸೋಮಾಪುರ ಜಿಲ್ಲಾ ಮುಖ್ಯ ರಸ್ತೆ ಸುಧಾರಣಾ ಕಾಮಗಾರಿಗಳು ಹಾಗೂ ಭೈರಿದೇವರಕೊಪ್ಪ – ಸದಾಶಿವ ನಗರದ 24*7 ಕುಡಿಯುವ ನೀರು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ರಸ್ತೆಗಳನ್ನು ಡಾಂಬರೀಕರಣ ಮಾಡುವುದರಿಂದ ಮನೆಯಿಂದ ಹೊಲಗಳಿಗೆ ಸರಾಗವಾಗಿ ಓಡಾಡಬಹುದು. ಅಲ್ಲದೇ ಬೆಳೆದ ಬೆಳೆಗಳನ್ನು ಸುಲಭವಾಗಿ ಸಾಗಿಸಬಹುದು. ರಸ್ತೆಗಳು ಅತಿಕ್ರಮಣವಾಗಿದ್ದರೆ ತೆರವುಗೊಳಿಸಿ ರಸ್ತೆಗಳನ್ನು ಅಗಲೀಕರಣ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಹಳ್ಳಕ್ಕೆ ಸೇತುವೆ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು. 

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಗುಂಡೂರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಚ್.ಜಿ. ಗುಂಡಳ್ಳಿ,  ಮುಖಂಡರಾದ ಮಲ್ಲಿಕಾರ್ಜುನ ಸಾವ್ಕಾರ, ಮೋಹನ್ ಶೆಟ್ಟರ್, ಬಿ. ಸಿ. ಪಾಟೀಲ್, ಬಸವರಾಜ ಚಿಕ್ಕಮಠ, ನಿಂಗಪ್ಪ ಗುಡ್ಡಪ್ಪನವರ, 

ಪಂಚಾಕ್ಷರಿ ಪಂಚಯ್ಯನವರಮಠ್, ಮುತ್ತು ಹೆಬ್ಬಳ್ಳಿ, ಬಸವರಾಜ ಕುರುಬಗಟ್ಟಿ, ನಂದೀಶ್ ಗುಂಡೂರ್, ಲಿಂಗಣ್ಣ ಕುರುಬಗಟ್ಟಿ, ಲಕ್ಷ್ಮಣ ಕಾನೋಜಿ, ಉಳವಪ್ಪ ಪರಸನ್ನವರ, ಶಂಕರಯ್ಯ ಹಿರೇಮಠ ಸೇರಿದಂತೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು. 

ದೀಪಾವಳಿ ಹಬ್ಬದ ಪೂಜಾ ಮುಹೂರ್ತಗಳು

ಖ್ಯಾತ ಜ್ಯೋತಿಷಿಗಳಾದ ಶರಣಯ್ಯಶಾಸ್ತ್ರಿಗಳ ಮಾಹಿತಿ

ವಿಜಯಸಾಕ್ಷಿ ಸುದ್ದಿ, ಗದಗ

ದೀಪಾವಳಿ ಹಬ್ಬವು ಅ. 23ರಿಂದ ಆರಂಭವಾಗಲಿದ್ದು ಅಂದು ರವಿವಾರ ಧನತ್ರಯೋದಶಿ ನೀರು ತುಂಬುವ ಹಬ್ಬ, 24ರಂದು ಸೋಮವಾರ ನರಕ ಚತುರ್ದಶಿ (ಹಿರಿಯರ ಹಬ್ಬ) ಸಾಯಂಕಾಲ 5 ಗಂಟೆಯ ಒಳಗೆ ಮಾಡಬೇಕು. ಅಂದೇ ಸಂಜೆ 5-26ಕ್ಕೆ ಅಮವಾಸ್ಯೆ ಕೂಡುವುದು. ಆದರೆ, ಅಂದು ಅಮವಾಸ್ಯೆ ಮಾಡಬಾರದು ಎಂದು ನಗರದ ಖ್ಯಾತ ಜ್ಯೋತಿಷಿಗಳಾದ ವೇದಮೂರ್ತಿ ಶರಣಯ್ಯಶಾಸ್ತಿಗಳು ವಿ. ಶಿವಪ್ಪಯ್ಯನಮಠ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅ. 25ರಂದು ಮಂಗಳವಾರ ದೀಪಾವಳಿ ಅಮಾವಾಸ್ಯೆ ಮುಂಜಾನೆ 5-30 ರಿಂದ 8-50ರ ವರೆಗೂ ಅಮೃತ ವೇಳೆ, 10-48 ರಿಂದ 1-12ರ ವರೆಗೂ ಅಮೃತ (ಮಧ್ಯಾನ್ಹ 3-00 ರಿಂದ 4-30 ರ ವರೆಗೆ ರಾಹುಕಾಲ ಅಶುಭ ) ನಂತರ ಗ್ರಸ್ತಾಸ್ತ ಸೂರ್ಯ ಗ್ರಹಣ ಇದೆ.

ಈ ಗ್ರಹಣವು ಸಾಯಂಕಾಲ 4-35ಕ್ಕೆ ಪ್ರಾರಂಭವಾಗಿ ಸಂಜೆ 6-27ರ ವರೆಗೂ ಇರುತ್ತದೆ. ಕಾರಣ ಅಂದು ವಯಸ್ಸಾದ ಹಿರಿಯರು, ಚಿಕ್ಕ ಮಕ್ಕಳು, ರೋಗಿಗಳು, ಬಾಣಂತಿಯರು ಗರ್ಭಿಣಿ ಸ್ತ್ರೀಯರು ಗ್ರಹಣ ಬಿಟ್ಟ ಮೇಲೆ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ಊಟ ಮಾಡಬೇಕು.

ಗ್ರಹಣದ ಸಮಯದಲ್ಲಿ ಏನನ್ನೂ
ಸೇವಿಸಬಾರದು. ಅಮಾವಾಸ್ಯೆ ದಿವಸ ಮುತೈದೆಯರಿಗೆ ಇಟ್ಟು ಲಕ್ಷ್ಮೀ ಪೂಜೆ ಮಾಡುವವರು ಮಧ್ಯ್ಯಾಹ್ನ 3-30 ರ ಒಳಗೆ ಮಾಡಬೇಕು. ಅಷ್ಟರಲ್ಲಿ ಆಗದಿದ್ದರೆ ಸಂಜೆ 7-10 ರಿಂದ ರಾತ್ರಿ 9-12ರವರೆಗೂ ಮಾಡಬಹುದು.

ಅ.26 ಬುಧವಾರ ದೀಪಾವಳಿ ಪಾಡ್ಯ ಪೂಜೆ ಬೆಳಿಗ್ಗೆ 3-48 ನಿಮಿಷದಿಂದ 11-55ರ ವರೆಗೂ ಅಮೃತ ವೇಳೆ. ಮಧ್ಯಾಹ್ನ 1-35 ರಿಂದ 2-56ರವರೆಗೆ. ಸಾಯಂಕಾಲ 6-36 ರಿಂದ ರಾತ್ರಿ 9-12ರವರೆಗೆ ಪೂಜಿಸುವುದು ಸೂಕ್ತ ಸಮಯವಾಗಿದೆ. ಆದರೆ ರಾಜಯೋಗವಿದ್ದರೂ ಸಹ ಗೃಹಪ್ರವೇಶಕ್ಕೆ ಮುಹೂರ್ತ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ವೇದಮೂರ್ತಿ ಶರಣಯ್ಯಶಾಸ್ರ್ತಿ ವಿ. ಶಿವಪ್ಪಯ್ಯನಮಠ. ಬೆಟಗೇರಿ, ಮೊ: 9741978073 ಸಂಪರ್ಕಿಸಲು ಕೋರಿದ್ದಾರೆ.

ಬಾಲಕಿ ಅತ್ಯಾಚಾರ ಪ್ರಕರಣ; ಸೂಕ್ತ ಕ್ರಮಕ್ಕೆ ಆಗ್ರಹ

0

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆಗೈದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಜಯ ಕರ್ನಾಟಕ ಜನಪರ ವೇದಿಕೆ ಲಕ್ಷ್ಮೇಶ್ವರ ತಾಲೂಕು ಘಟಕದ ವತಿಯಿಂದ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.

ಜಿಲ್ಲಾ ಅಧ್ಯಕ್ಷ ಸದಾನಂದ ನಂದೆಣ್ಣವರ್ ಮತ್ತು ತಾಲೂಕು ಅಧ್ಯಕ್ಷ ನಾಗೇಶ ಅಮರಾಪೂರ ಅವರು ಮಾತನಾಡಿ, ಹತ್ತು ವರ್ಷದ ಬಾಲಕಿಯನ್ನ ಅತ್ಯಾಚಾರ ಮಾಡಿ ಕೊಲೆಗೈದವರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು.

ಅಕ್ಟೋಬರ್ 12 ರಂದು ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ 10 ವರ್ಷದ ಬಾಲಕಿ ಟ್ಯೂಶನ್‌ಗೆ ಹೋದವಳು ಮನೆಗೆ ವಾಪಸ್ ಆಗಿರಲಿಲ್ಲ. ಈ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವುದು ನಿಜಕ್ಕೂ ಹೇಯ ಕೃತ್ಯ. ಇದನ್ನು ನಮ್ಮ ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ.

ಇಂತಹ ಘಟನೆಗಳು ಮುಂದೆ ನಡೆಯದಂತೆ ಸರಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಅತ್ಯಾಚಾರಗೈದ ವ್ಯಕ್ತಿಗೆ ಕಾನೂನು ರೀತಿ ಕ್ರಮ ಕೈಗೊಂಡು ಜೀವಾವಧಿ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಸಂತೋಷ ರಗಟಿ, ನಾಗರಾಜ ಕುಸುಗಲ್, ನಾಗಪ್ಪ ಹರ್ಲಾಪೂರ, ಸುನೀಲ ಬಾರಕೇರ, ಹಾಲಪ್ಪ ಮೇಟಿ, ಅಶೋಕ ಕೋಳಿವಾಡ, ಶಿವರಾಜ ಭಂಗಿ, ರಮೇಶ ಉಮಚಗಿ, ಹನುಮಂತ ವಗ್ಗಣವರ, ಕಿರಣ ಪಾಟೀಲ್, ಶರತ ಗಾಣಗೇರ, ಇಮಾಮ ಸೊರಟೂರ, ಶರೀಫ ವಾಲಿಕಾರ, ಅಲ್ತಾಫ ವಾಲಿಕಾರ, ಲಕ್ಷ್ಮಣ ಲಮಾಣಿ, ಕಾರ್ತಿಕ ಕುಲಗೇರಿ ಮುಂತಾದವರು ಹಾಜರಿದ್ದರು.

error: Content is protected !!