HomeGadag Newsಹೆಸರು ಬೆಳೆ ಖರೀದಿ ಕೇಂದ್ರ ಬಂದ್; ರೈತರ ಆಕ್ರೋಶ

ಹೆಸರು ಬೆಳೆ ಖರೀದಿ ಕೇಂದ್ರ ಬಂದ್; ರೈತರ ಆಕ್ರೋಶ

Spread the love

ವಿಜಯಸಾಕ್ಷಿ ಸುದ್ದಿ, ರೋಣ

ಪಟ್ಟಣದ ಎಪಿಎಂಸಿಯಲ್ಲಿ ಹೆಸರು ಬೆಳೆ ಖರೀದಿ ಕೇಂದ್ರ ಹಠಾತ್ ಬಂದಾಗಿದ್ದರಿಂದ ಆಕ್ರೋಶಗೊಂಡ ರೈತರು ಹತ್ತಾರು ಟ್ರ್ಯಾಕ್ಟರ್‌ಗಳೊಂದಿಗೆ ಮಂಗಳವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.

ಸರಕಾರದ ಆದೇಶದಂತೆ ಬೆಂಬಲ ಬೆಲೆ ಅಡಿಯಲ್ಲಿ ಹೆಸರು ಬೆಳೆ ಖರೀದಿಸಲು ಪಟ್ಟಣದ ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರವನ್ನು ತೆರೆಯಲಾಗಿದ್ದು ರೈತರಿಗೆ ಮುನ್ಸೂಚನೆ ನೀಡದೆ ಬಂದ್ ಮಾಡಿದ್ದರಿಂದ ನಾನಾ ಗ್ರಾಮಗಳಿಂದ ಬಂದ ನೂರಾರು ರೈತರು ತೊಂದರೆ ಅನುಭವಿಸುವಂತಾಯಿತು.

ಅಲ್ಲದೆ ರಾತ್ರಿ ಪೂರಾ ಖರೀದಿ ಕೇಂದ್ರದಲ್ಲಿ ಕಳೆದರೂ ಏನನ್ನೂ ಹೇಳದೆ ಇದ್ದಕ್ಕಿದ್ದಂತೆ ಖರೀದಿ ಕೇಂದ್ರವನ್ನು ಬಂದ್ ಮಾಡಿದ್ದು ಯಾಕೆ ಎಂಬುದು ರೈತರ ಪ್ರಶ್ನೆಯಾಗಿದೆ. ಈ ಸಂದರ್ಭದಲ್ಲಿ ಮಹಾಂತಯ್ಯ ಭಿಕ್ಷಾವತಿಮಠ ಮಾತನಾಡಿ, ತಾಲೂಕಿನ ಯಾಸ ಹಡಗಲಿ, ಮಾಡಲಗೇರಿ, ಹಿರೇಹಾಳ, ಗುಳಗುಳಿ ಸೇರಿದಂತೆ ಹತ್ತಾರು ಗ್ರಾಮಗಳ ರೈತರು ಖರೀದಿ ಕೇಂದ್ರಕ್ಕೆ ಹೆಸರು ಬೆಳೆಯನ್ನು ತಂದಿದ್ದಾರೆ. ಅಲ್ಲದೆ ಸೋಮವಾರವೇ ಖರೀದಿ ಕೇಂದ್ರಕ್ಕೆ ರೈತರು ಬಂದಿದ್ದು, ಇಲ್ಲಿಯವರೆಗೆ ಖರೀದಿ ಕೇಂದ್ರದವರು ಸುಮ್ಮನಿದ್ದು ಈಗ ಕೇಂದ್ರ ಬಂದಾಗಿದೆ ವಾಪಸ್ಸು ಹೋಗಿ ಎಂದರೆ ರೈತರು ಏನು ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವೀರನಗೌಡ ಭೀಮನಗೌಡರ ಮಾತನಾಡಿ, ಸತತ ಮಳೆಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಅಳಿದು ಉಳಿದ ಬೆಳೆಯನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಮಾರಾಟ ಮಾಡಲು ಬಂದರೆ ಖರೀದಿ ಕೇಂದ್ರದವರು ಇಲ್ಲ ಸಲ್ಲದ ನೆಪಗಳನ್ನು ಹೇಳುವ ಮೂಲಕ ರೈತರಿಗೆ ತೊಂದರೆ ಕೊಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಹೆಸರು ಬೆಳೆಯನ್ನು ಖರೀದಿ ಮಾಡುವವರೆಗೂ ನಾವು ತಹಸೀಲ್ದಾರ್ ಕಚೇರಿ ಬಿಟ್ಟು ತೆರಳುವುದಿಲ್ಲ ಎಂದು ಪಟ್ಟು ಹಿಡಿದರು.

ಹತ್ತಾರು ಟ್ರ್ಯಾಕ್ಟರ್‌ಗಳೊಂದಿಗೆ ಕಚೇರಿಗೆ ಮುತ್ತಿಗೆ ಹಾಕಿದ ರೈತರನ್ನು ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದರಾದರೂ ಅದು ಯಶಸ್ವಿಯಾಗಲಿಲ್ಲ. ಅಲ್ಲದೆ ಕಚೇರಿಯ ಬಾಗಿಲಿಗೆ ಹೊಂದಿಕೊಂಡು ನಿಲ್ಲಿಸಲಾಗಿರುವ ಟ್ರ್ಯಾಕ್ಟರ್‌ಗಳನ್ನು ಬೇರೆ ಕಡೆಗೆ ನಿಲ್ಲಿಸಿ ಎಂದು ರೈತರ ಬಳಿ ನಿವೇದಿಸಿಕೊಂಡರು. ರೈತರು ನಾವು ಇಡೀ ರಾತ್ರಿ ಸೊಳ್ಳೆ ಕಡಿಸಿಕೊಂಡು ನಿದ್ದೆಯಿಲ್ಲದೆ ಆವರಣದಲ್ಲಿ ಕುಳಿತಿದ್ದೇವೆ. ನಮ್ಮ ಸ್ಥಿತಿಯನ್ನು ಸ್ವಲ್ಪ ನೋಡಿ ಎಂದು ರೈತರು ಪೊಲೀಸರ ಎದುರು ತಮ್ಮ ಅಳಲನ್ನು ತೋಡಿಕೊಂಡರು.


ಶಂಕ್ರಪ್ಪ ಹುಗ್ಗಿ, ಶಶಿಕಲಾ ದೋಣಿ, ಬಸನಗೌಡ ಬಾಲನಗೌಡ, ಸಂಗಪ್ಪ ಗಾಣಿಗೇರ, ಕಾಳವ್ವ ಖ್ಯಾತನಗೌಡ್ರ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!