ಮುಂಡರಗಿ: ಅನೇಕ ವರ್ಷಗಳಿಂದ ಮಕ್ಕಳ ಶೈಕ್ಷಣಿಕ ಸುಧಾರಣೆ, ಮಕ್ಕಳಲ್ಲಿ ವಿಜ್ಞಾನ ಮನೋಭಾವನೆ ಬೆಳೆಸುವುದು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಗಳ ಮೂಲಕ ಸಮಾಜಸೇವೆ ಮಾಡುತ್ತಿರುವ ಎ.ಕೆ. ಮುಲ್ಲಾನವರ ಅವರನ್ನು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಗದಗ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಸಮಿತಿಯ ಕಾರ್ಯದರ್ಶಿ ಈ. ಬಸವರಾಜು ತಿಳಿಸಿದ್ದಾರೆ.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯದಾದ್ಯಂತ ವಿವಿಧ ಜಿಲ್ಲೆ ಹಾಗೂ ತಾಲೂಕು ಘಟಕಗಳ ಮೂಲಕ ಶಿಕ್ಷಕರು ಮತ್ತು ಮಕ್ಕಳಿಗಾಗಿ ಶಿಬಿರಗಳನ್ನು ಆಯೋಜಿಸಿ, ವಿಜ್ಞಾನ ಚಿಂತನೆ ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಅಡಗಿರುವ ಮೂಢನಂಬಿಕೆಗಳನ್ನು ದೂರ ಮಾಡುವ ಕಾರ್ಯವನ್ನು ನಿರಂತರವಾಗಿ ನಡೆಸುತ್ತಿದೆ. ರಾಜ್ಯ ಸಮಿತಿಯಲ್ಲಿ ವಿಜ್ಞಾನಿಗಳು, ವೈದ್ಯರು, ಉಪನ್ಯಾಸಕರು, ಚಿಂತಕರು ಹಾಗೂ ಸಾಹಿತಿಗಳು ತಮ್ಮದೇ ಆದ ಕೊಡುಗೆ ನೀಡುತ್ತಾ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರತಿ ವಾರ ಆನ್‌ಲೈನ್ ಸಭೆಗಳ ಮೂಲಕ ವಿವಿಧ ವಿಷಯಗಳ ಕುರಿತು ಅನುಭವಿಗಳಿಂದ ಮಾಹಿತಿ ಹಂಚಿಕೊಳ್ಳಲಾಗುತ್ತಿದ್ದು, ಈ ಕಾರ್ಯ ಕ್ರಮಬದ್ಧವಾಗಿ ಮುಂದುವರಿದಿದೆ ಎಂದು ಈ. ಬಸವರಾಜು ತಿಳಿಸಿದರು.
ಗದಗ ಜಿಲ್ಲೆಗೆ ಒಬ್ಬ ಉತ್ತಮ ಚಿಂತಕ ಹಾಗೂ ಸಂಘಟಕರಾದ ಎ.ಕೆ. ಮುಲ್ಲಾನವರರನ್ನು ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿರುವುದು ಸಂತಸದ ವಿಚಾರ. ಅವರ ಸೇವೆ ಜಿಲ್ಲೆಯ ಮಕ್ಕಳಿಗೆ ಹಾಗೂ ಸಮಾಜಕ್ಕೆ ಲಾಭಕಾರಿಯಾಗಲಿ, ಸಮಿತಿಯ ಮೂಲಕ ಜನರಿಗೆ ಹಾಗೂ ಮಕ್ಕಳಿಗೆ ಉತ್ತಮ ಕಾರ್ಯಕ್ರಮಗಳು ದೊರೆಯಲಿ ಎಂದು ಅವರು ಅಭಿಪ್ರಾಯಪಟ್ಟರು.



