ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದ ಮಧ್ಯ ಭಾಗದ ಮೂಲಕ ಹರಿಯುತ್ತಿರುವ ‘ಲಂಡಿ ಹಳ್ಳ’ ಇದೀಗ ಸುತ್ತಮುತ್ತಲಿನ ಜನರ ಜೀವ-ಜೀವನಕ್ಕೆ ವಿಷ ವರ್ತುಲವಾಗಿ ಪರಿಣಮಿಸಿದ್ದು, ನೂರಾರು ಕುಟುಂಬಗಳು ರೋಗ-ರುಜಿನ, ಗಬ್ಬು ವಾಸನೆ ಹಾಗೂ ವಿಷಜಂತುಗಳ ಭೀತಿಯಲ್ಲಿ ದಿನ ಕಳೆಯುವಂತಾಗಿದೆ.
ಹಳ್ಳದಕೇರಿ, ಕೆಂಚಲಾಪುರ, ಬನಶಂಕರಿ ಬಡಾವಣೆ, ಆಸಾರ ಓಣಿ, ಬಳಿಗಾರ ಓಣಿ, ಉಪ್ಪಿನ ಮಾಳ, ಸೊಪ್ಪಿನಕೇರಿ, ಅಂಬೇಡ್ಕರ ನಗರ, ಮಂಜಲಾಪುರ ಹಾಗೂ ಅಡರಕಟ್ಟಿ ಭಾಗದ ಜನರು ಈ ಸಮಸ್ಯೆಯಿಂದ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ.
ಜನವಸತಿ ಪ್ರದೇಶದ ಅಂಚಿನುದ್ದಕ್ಕೂ ಹರಿದಿರುವ ಹಳ್ಳದಲ್ಲಿ ವರ್ಷಪೂರ್ತಿ ಆಳೆತ್ತರ ಬೆಳೆದ ಗಿಡಗಂಟೆಗಳು, ತ್ಯಾಜ್ಯ ಮಿಶ್ರಿತ ಕೊಳಚೆ ನೀರು, ಹಾವು-ಚೇಳು ಸೇರಿದಂತೆ ವಿಷಜಂತುಗಳ ಕಾಟ, ಸೊಳ್ಳೆ-ಕ್ರಿಮಿಗಳ ಹಾವಳಿ ಮತ್ತು ದುರ್ವಾಸನೆಯಿಂದ ನಿವಾಸಿಗಳು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
ಮಳೆಯಾದರೆ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದ್ದು, ಸೇತುವೆ ಮೇಲೆ ನೀರು ಹರಿದು ಸಂಚಾರ ಸ್ಥಗಿತಗೊಳ್ಳುವುದು ಸಾಮಾನ್ಯವಾಗಿದೆ. ಚರಂಡಿ ನೀರು ಕೂಡ ಇದೇ ಹಳ್ಳಕ್ಕೆ ಸೇರುತ್ತಿರುವುದರಿಂದ ತ್ಯಾಜ್ಯ ಮತ್ತು ಕೊಳಚೆ ಮತ್ತಷ್ಟು ಹೆಚ್ಚಾಗಿದೆ.
ಸ್ಥಳೀಯರು ಹಲವು ವರ್ಷಗಳಿಂದ ಹಳ್ಳವನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಎರಡೂ ಬದಿಯಲ್ಲಿ ಕಾಂಕ್ರೀಟ್ ತಡೆಗೋಡೆ ಹಾಗೂ ಕಾಂಪೌಂಡ್ ನಿರ್ಮಿಸುವಂತೆ ಆಗ್ರಹಿಸುತ್ತಿದ್ದರೂ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

“ಮಕ್ಕಳನ್ನು ಹಗಲಲ್ಲೂ ಹೊರಗೆ ಬಿಡಲು ಭಯವಾಗುತ್ತಿದೆ. ದೊಡ್ಡ ಮಳೆ ಬಂದರೆ ರಾತ್ರಿ ನಿದ್ದೆಯೇ ಇರುವುದಿಲ್ಲ. ಹಾವು-ಚೇಳು, ಹಂದಿ, ನಾಯಿಗಳ ಕಾಟದ ನಡುವೆ ಬದುಕುವುದು ದುಸ್ತರವಾಗಿದೆ” ಎಂದು ಸ್ಥಳೀಯರು ಅಳಲು ತೋಡಿಕೊಂಡರು.
ಈ ಹಿಂದೆ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಶಂಕರ ಹುಲ್ಲಮ್ಮನವರ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಹಳ್ಳ ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡಿದ್ದರು. ಆದರೆ ಇದೀಗ ಮತ್ತೆ ಸಮಸ್ಯೆ ತೀವ್ರಗೊಂಡಿದೆ.
ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಪ್ರತಿಕ್ರಿಯಿಸಿ, “ಈ ಹಳ್ಳಕ್ಕೆ ಮಳೆ ನೀರಿನ ಜೊತೆಗೆ ಚರಂಡಿ ನೀರು ಕೂಡ ಸೇರುತ್ತಿದೆ. ಅಪಾರ ಪ್ರಮಾಣದಲ್ಲಿ ಗಿಡಗಂಟೆ ಹಾಗೂ ಕೊಳಚೆ ಸಂಗ್ರಹವಾಗಿದೆ. ಕೇವಲ ಪೌರಕಾರ್ಮಿಕರಿಂದ ಸ್ವಚ್ಛತೆ ಸಾಧ್ಯವಿಲ್ಲ. ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಹಿಟ್ಯಾಚಿ ಹಾಗೂ ಜೆಸಿಬಿ ಬಳಸಿ ಶೀಘ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.
“ಹಳ್ಳದಂಚಿನಲ್ಲಿ ಬದುಕುತ್ತಿರುವ ಜನರು ನಿತ್ಯ ಭಯದಲ್ಲೇ ದಿನ ಕಳೆಯುತ್ತಿದ್ದಾರೆ. ಸಮಸ್ಯೆ ಪರಿಹರಿಸದಿದ್ದರೆ ಜಾನುವಾರುಗಳೊಂದಿಗೆ ರಾಜ್ಯ ಹೆದ್ದಾರಿ ತಡೆದು ಹೋರಾಟ ನಡೆಸುತ್ತೇವೆ.”
ಮಂಜುನಾಥ ಮಾಗಡಿ
ರೈತ ಮುಖಂಡ



