HomeKarnataka Newsಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ PIL ವಜಾ: ಅರ್ಜಿದಾರರಿಗೆ ₹10 ಸಾವಿರ ದಂಡ ವಿಧಿಸಿದ ಹೈಕೋರ್ಟ್

ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ PIL ವಜಾ: ಅರ್ಜಿದಾರರಿಗೆ ₹10 ಸಾವಿರ ದಂಡ ವಿಧಿಸಿದ ಹೈಕೋರ್ಟ್

For Dai;y Updates Join Our whatsapp Group

Spread the love

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1965ರವರೆಗೆ ನ್ಯಾಯಾಂಗ ವಿಚಾರಣಾ ಆಯೋಗ ರಚನೆ ಮಾಡದಿರುವ ಕಾರಣಗಳ ಕುರಿತು ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಜೊತೆಗೆ ಅರ್ಜಿದಾರರಿಗೆ ₹10 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಜಾಗೃತ ಕರ್ನಾಟಕ ಮತ್ತು ಜಾಗೃತ ಭಾರತ ಸಂಘಟನೆಯ ಪ್ರತಿನಿಧಿ ಕೆ.ಎನ್. ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠವು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕೂಡ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಮತ್ತೆ ಅದೇ ರೀತಿಯ ಮನವಿಗಳೊಂದಿಗೆ ನ್ಯಾಯಾಲಯದ ಮೊರೆ ಹೋಗಲಾಗಿದೆ ಎಂದು ಗಮನ ಸೆಳೆಯಿತು. ಅರ್ಜಿಯಲ್ಲಿ ಯಾವುದೇ ನೈಜ ಸಾರ್ವಜನಿಕ ಹಿತಾಸಕ್ತಿ ಅಂಶ ಕಂಡುಬರುವುದಿಲ್ಲ. ಈ ರೀತಿಯ ಅರ್ಜಿಗಳು ನ್ಯಾಯಾಂಗ ವ್ಯವಸ್ಥೆಯ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುವಂತಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರು, ವಿಷಯದಲ್ಲಿ ರಾಷ್ಟ್ರೀಯ ಹಿತಾಸಕ್ತಿ ಅಡಗಿದ್ದು, ತಮ್ಮ ವಾದವನ್ನು ಆಲಿಸಬೇಕೆಂದು ಮನವಿ ಮಾಡಿದರು. ಆದರೆ ನ್ಯಾಯಪೀಠ ಈ ವಾದವನ್ನು ಒಪ್ಪದೇ ಅರ್ಜಿಯನ್ನು ವಜಾಗೊಳಿಸಿ ದಂಡ ವಿಧಿಸಿತು.

ಅಲ್ಲದೆ, ವಿಧಿಸಲಾದ ₹10 ಸಾವಿರ ದಂಡದ ಮೊತ್ತವನ್ನು ಮುಂದಿನ ಎರಡು ವಾರಗಳೊಳಗೆ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ಅರ್ಜಿದಾರರಿಗೆ ನಿರ್ದೇಶನ ನೀಡಿದೆ.

ಪ್ರಕರಣದ ಹಿನ್ನೆಲೆ ಏನು?

ಅರ್ಜಿಯಲ್ಲಿ, ಮಹಾತ್ಮ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 1948ರಿಂದ 1965ರವರೆಗೆ ಸುಮಾರು 17 ವರ್ಷಗಳ ಕಾಲ ನ್ಯಾಯಾಂಗ ವಿಚಾರಣಾ ಆಯೋಗ ರಚನೆ ಮಾಡದಿರುವ ಕಾರಣಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಲಾಗಿತ್ತು. ಜೊತೆಗೆ 1965ರಲ್ಲಿ ವಿಚಾರಣಾ ಆಯೋಗ ರಚನೆಗೆ ಕಾರಣವಾದ ಅಂಶಗಳನ್ನು ಪರಿಶೀಲಿಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂದು ಮನವಿ ಮಾಡಲಾಗಿತ್ತು.

ಇದರ ಜೊತೆಗೆ, ಭಾರತದ ವಿಭಜನೆಗೆ ಸಂಬಂಧಿಸಿದಂತೆ ಗಾಂಧೀಜಿ ಬರೆದಿದ್ದಾರೆ ಎನ್ನಲಾದ ಪತ್ರಗಳ ಹಿನ್ನೆಲೆ, ಅವರ ಆತ್ಮಕಥೆಯ ಕರಡು ದಾಖಲೆಗಳ ಸ್ಥಳಾಂತರ, ನೆಹರೂ ಸ್ಮಾರಕ ವಸ್ತುಸಂಗ್ರಹಾಲಯದಿಂದ ಕಾಣೆಯಾಗಿವೆ ಎನ್ನಲಾದ ದಾಖಲೆಗಳು ಹಾಗೂ ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದ ಪತ್ರವ್ಯವಹಾರಗಳ ಕುರಿತು ತನಿಖೆ ನಡೆಸುವಂತೆ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.

2025ರ ನವೆಂಬರ್ 13 ಹಾಗೂ 2026ರ ಮಾರ್ಚ್ 13 ಮತ್ತು 25ರಂದು ವಿವಿಧ ಅಧಿಕಾರಿಗಳಿಗೆ ಸಲ್ಲಿಸಲಾಗಿದ್ದ ಮನವಿಗಳಿಗೆ ಎರಡು ವಾರಗಳೊಳಗೆ ಉತ್ತರ ನೀಡುವಂತೆ ನಿರ್ದೇಶನ ನೀಡಬೇಕು ಎಂಬ ಮಧ್ಯಂತರ ಮನವಿಯನ್ನೂ ಅರ್ಜಿದಾರರು ಸಲ್ಲಿಸಿದ್ದರು.

ಆದರೆ ಅರ್ಜಿಯಲ್ಲಿನ ಮನವಿಗಳು ಸಾರ್ವಜನಿಕ ಹಿತಾಸಕ್ತಿಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ದಂಡ ವಿಧಿಸಿ ಆದೇಶ ಹೊರಡಿಸಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!