ಕೊರೋನಾ ರೂಪಾಂತರ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ವೈರಸ್ ತಡೆಗಟ್ಟುವ ಸಲುವಾಗಿ ಇಂದಿನಿಂದ ಜನವರಿ 2 ರವರೆಗೆ ರಾತ್ರಿ 10 ರಿಂದ ಬೆಳಿಗ್ಗೆ 6 ಗಂಟೆವರೆಗೆ ನೈಟ್ ಕರ್ಪ್ಯೂ ಜಾರಿ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.
ಕೋವಿಡ್ ಸಲಹಾ ಸಮಿತಿ ಸಭೆಯ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇವತ್ತಿನಿಂದ ಒಂಬತ್ತು ದಿನಗಳವರಗೆ ರಾತ್ರಿ ಕರ್ಪ್ಯೂ ಜಾರಿ ಇರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಸೇವೆಗಳು ಬಂದ್ ಆಗಿರಲಿವೆ ಎಂದು ಸಿಎಂ ಯಡಿಯೂರಪ್ಪ ತಿಳಿಸಿದರು.
ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಇಂದಿನಿಂದ ಜನವರಿ 2 ರವರೆಗೆ ರಾತ್ರಿ ಕರ್ಪ್ಯೂ ಜಾರಿಯಲ್ಲಿರಲಿದೆ. ಈ ವೇಳೆ ಯಾರೂ ಅನಾವಶ್ಯಕವಾಗಿ ಹೊರಗಡೆ ಬರಬಾರದು. ಕ್ರಿಸ್ ಮಸ್, ಹೊಸ ವರ್ಷ ಹಬ್ಬದ ಆಚರಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಏರ್ ಪೋರ್ಟ್ ಗಳಲ್ಲಿ ಪ್ರತಿ ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆ ಮಾಡಲಾಗುವುದು. ಇನ್ನು ಬ್ರಿಟನ್ ನಿಂದ ಬಂದ ಪ್ರಯಾಣಿಕರನ್ನು 28 ದಿನಗಳವರೆಗೆ ಹೋಂ ಕ್ವಾರಂಟೈನ್ ಇರಿಸಲಾಗುವುದು ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಮೊದಲ ಹಂತದ ಗ್ರಾ.ಪಂ ಚುನಾವಣೆಯ ಮತದಾನ ಪೂರ್ಣಗೊಂಡಿದ್ದು ಕೊಪ್ಪಳ ಜಿಲ್ಲೆಯಲ್ಲಿ ಶೇಕಡಾ 82.16ರಷ್ಟು ಮತದಾನ ದಾಖಲಾಗಿದೆ.
ಸಂಜೆ 7ರವರೆಗೆ ಕೊಪ್ಪಳ ತಾಲೂಕಿನ ಗ್ರಾಪಂಗಳಲ್ಲಿ ಶೇಕಡಾ 83.26, ಯಲಬುರ್ಗಾ ತಾಲೂಕಿನ ಗ್ರಾಪಂಗಳಲ್ಲಿ ಶೇಕಡಾ 81.41 ಹಾಗೂ ಕುಕನೂರು ತಾಲೂಕಿನ ಗ್ರಾಪಂಗಳಲ್ಲಿ ಶೇಕಡಾ 79.89ರಷ್ಟು ಮತದಾನವಾಗಿದೆ.
ಒಟ್ಟಾರೆ ಕೊಪ್ಪಳ ಜಿಲ್ಲೆಯ ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ತಾಲೂಕುಗಳ 73 ಗ್ರಾಪಂಗಳಲ್ಲಿ ಶೇಕಡಾ 82.16ರಷ್ಟು ಮತದಾನ ದಾಖಲಾಗಿದೆ.
ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನವು ಜಿಲ್ಲೆಯ ಗದಗ, ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ ಸಣ್ಣಪುಟ್ಟ ಮಾತಿನ ಚಕಮಕಿ ಹೊರತಾಗಿ ಶಾಂತಿಯುತವಾಗಿ ಜರುಗಿದೆ. ಜಿಲ್ಲೆಯಲ್ಲಿ ಅಂತಿಮವಾಗಿ ಶೇ. 79.12 ರಷ್ಟು ಮತದಾನವಾಗಿದ್ದು, ಗದಗ ತಾಲ್ಲೂಕಿನಲ್ಲಿ ಶೇ.80.03, ಲಕ್ಷ್ಮೇಶ್ವರ ಶೇ.78.23 ಹಾಗೂ ಶಿರಹಟ್ಟಿ ಶೇ.79.09 ರಷ್ಟು ಮತದಾನವಾಗಿದೆ.
ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಶೇಖಡಾವಾರು ಮತದಾನದ ವಿವರ ಇಂತಿದೆ; ಬೆ. 9 ಗಂಟೆಯವರೆಗೆ ಗದಗ ತಾಲೂಕಿನಲ್ಲಿ ಶೇಕಡ 7.31, ಲಕ್ಷ್ಮೇಶ್ವರ ಶೇ. 7.02, ಶಿರಹಟ್ಟಿ ಶೇ. 5.80, ಒಟ್ಟಾರೆ ಶೇ.6.70 ರಷ್ಟು ಮತದಾನವಾಯಿತು. ಬೆ. 11 ಗಂಟೆಯವರೆಗೆ ಗದಗ ತಾಲೂಕಿನಲ್ಲಿ ಶೇಕಡ22.82, ಲಕ್ಷ್ಮೇಶ್ವರ ಶೇ. 24.10, ಶಿರಹಟ್ಟಿ ಶೇ. 21.69 ಒಟ್ಟಾರೆ ಶೇ. 22.86 ರಷ್ಟು ಮತದಾನವಾಯಿತು.
ಮಧ್ಯಾಹ್ನ 1 ಗಂಟೆಯವರೆಗೆ ಗದಗ ತಾಲೂಕಿನಲ್ಲಿ ಶೇಕಡ 41.67 , ಲಕ್ಷ್ಮೇಶ್ವರ ಶೇ. 39.94, ಶಿರಹಟ್ಟಿ ಶೇ. 42.06 ಒಟ್ಟಾರೆ ಶೇ. 41.22ರಷ್ಟು ಮತದಾನವಾಯಿತು. ಮಧ್ಯಾಹ್ನ 3 ಗಂಟೆಯವರೆಗೆ ಗದಗ ತಾಲೂಕಿನಲ್ಲಿ ಶೇಕಡ 60.10, ಲಕ್ಷ್ಮೇಶ್ವರ ಶೇ. 58.49, ಶಿರಹಟ್ಟಿ ಶೇ. 60.49 ಒಟ್ಟಾರೆ ಶೇ. 59.70 ರಷ್ಟು ಮತದಾನವಾಯಿತು.
ಕೆಲವೊಂದು ಗ್ರಾಮಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಮಾತಿನ ಚಕಮಕಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೂಬಸ್ತ್ ಮಾಡಲಾಗಿತ್ತು.
ಡಿಸೆಂಬರ್ 21 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 156825 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 162389 ಮಾದರಿಗಳಲ್ಲಿ 151363 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 160 ಮಾದರಿಗಳ ವರದಿ ಬರಲು ಬಾಕಿ ಇದೆ.
ಜಿಲ್ಲೆಯಲ್ಲಿ ಇಂದಿನ 05 (ಗದಗ-05) ಪ್ರಕರಣಗಳು ಸೇರಿದಂತೆ ಒಟ್ಟು 10866 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 06 ಜನ ಸೇರಿದಂತೆ ಒಟ್ಟು 10697 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 28 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಒಂದೇ ದಿನದಲ್ಲಿ ಅಭ್ಯರ್ಥಿಯ ನಾಮಪತ್ರದ ಕ್ರಮ ಸಂಖ್ಯೆ ಅದಲು ಬದಲು ಮಾಡುವ ಮೂಲಕ ಚುನಾವಣಾಧಿಕಾರಿಗಳು ಅಭ್ಯರ್ಥಿಗೆ ಗೊಂದಲವುಂಟು ಮಾಡಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆಯ ಎರಡನೇಯ ಹಂತದಲ್ಲಿ ನಡೆಯುವ ನರಗುಂದ ತಾಲೂಕಿನ ಬನಹಟ್ಟಿ ಗ್ರಾಮ ಪಂಚಾಯತಿಯಲ್ಲಿ ಈ ಎಡವಟ್ಟು ನಡೆದಿದೆ.
ಬನಹಟ್ಟಿ ಗ್ರಾ.ಪಂ.ನ ಮೂಗನೂರು ಮತಕ್ಷೇತ್ರಕ್ಕೆ ವೀರನಗೌಡ ಶಿವನಗೌಡ ಮೂಗನೂರ ಎಂಬ ವ್ಯಕ್ತಿ ಸ್ಪರ್ಧಿಸಿದ್ದಾರೆ. ಇವರಿಗೆ ಮೊದಲು ಕ್ರಮ ಸಂಖ್ಯೆ 06 ನೀಡಿದ್ದ ಚುನಾವಣಾ ಅಧಿಕಾರಿಗಳು, ಮರುದಿನ ಬೆಳಿಗ್ಗೆ ಕ್ರ.ಸಂ. 04 ನೀಡಿದ್ದಾರೆ ಇದರಿಂದ ಅಭ್ಯರ್ಥಿ ಗೊಂದಲಕ್ಕೀಡಾಗಿದ್ದಾರೆ.
ಅಭ್ಯರ್ಥಿ ವೀರನಗೌಡ ಅವರು ಮೊದಲು ನೀಡಿದ ಸಂಖ್ಯೆಯನ್ನೇ ನಮೂದಿಸಿ ಕರಪತ್ರ ಮುದ್ರಿಸಿದ್ದಾರೆ. ಈಗಾಗಲೇ ಮುದ್ರಿಸಿರುವ ಕರಪತ್ರಗಳನ್ನು ಪ್ರಚಾರ ಮಾಡುವ ಮೂಲಕ ಹಂಚಿದ್ದಾರೆ. ಇದೀಗ ಕ್ರಮ ಸಂಖ್ಯೆ ಅದಲು ಬದಲು ಮಾಡಿದ್ದಾರೆ.
ಕ್ರಮ ಸಂಖ್ಯೆ ಬದಲಾವಣೆಗೆ ಕಾರಣ ಕೇಳಿದರೆ ಚುನಾವಣಾಧಿಕಾರಿಗಳು ಮೇಲಾಧಿಕಾರಿಗಳತ್ತ ಬೊಟ್ಟು ಮಾಡಿ ತೋರಿಸಿತ್ತಿದ್ದಾರೆ ಎಂದು ವೀರನಗೌಡ ಆರೋಪಿಸಿದ್ದಾರೆ.
ಅಧಿಕಾರಿಗಳ ಎಡವಟ್ಟಿನಿಂದಲೋ ಅಥವಾ ತಪ್ಪಿನಿಂದಲೋ ಈಗಾಗಲೇ ಮೊದಲ ಕ್ರಮ ಸಂಖ್ಯೆಯಲ್ಲೇ ಪ್ರಚಾರ ಮಾಡಿರುವ ಗ್ರಾ.ಪಂ.ಚುನಾವಣಾ ಅಭ್ಯರ್ಥಿ ವೀರನಗೌಡ ಶಿವನಗೌಡ ಮೂಗನೂರ ಗೊಂದಲದಲ್ಲಿರುವುದಂತೂ ಸುಳ್ಳಲ್ಲ.
ಗ್ರಾ.ಪಂ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಮನೆ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾಗಿರಿ ಮಾಡಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಆರೋಪ ಮಾಡಿದ್ದಾರೆ.
ತಾಲೂಕಿನ ಬಿಂಕದಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ್ ಕರೂರ ಅವರ ಮನೆ ಮುಂದೆ ಗೂಂಡಾಗಿರಿ ಪ್ರದರ್ಶಿಸಿದ್ದಾರೆ ಎಂದು ಅನಿಲ್ ಮೆಣಸಿನಕಾಯಿ ಆರೋಪಿಸಿದ್ದಾರೆ.
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಬಿಂಕದಕಟ್ಟಿ ಗ್ರಾಮದಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ನೇರ ಪೈಪೋಟಿ ಒಡ್ಡಿದ್ದೇ ಈ ಘಟನೆಗೆ ಪ್ರಮುಖ ಕಾರಣ ಎಂದು ಅನಿಲ ಆರೋಪಿಸಿದ್ದಾರೆ.
ಸ್ಥಳದಲ್ಲಿ ಗದಗ ಡಿವೈಎಸ್ಪಿ ಪ್ರಹ್ಲಾದ್ ಕೆ., ಗ್ರಾಮೀಣ ಠಾಣೆ ಸಿಪಿಐ ರವಿ ಕಪ್ಪತ್ತನವರ್, ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಸ್ಥಳದಲ್ಲೇ ಮುಕ್ಕಾಂ ಹೂಡಿದ್ದಾರೆ.
ಅಲ್ಲದೆ, ಸ್ಥಳದಲ್ಲಿ ಒಂದು ಡಿಆರ್ ತುಕಡಿ ನಿಯೋಜನೆ ಮಾಡಲಾಗಿದ್ದು,ಗ್ರಾಮದಲ್ಲಿ ಪಥ ಸಂಚಲನ ನಡೆಸಲಾಗಿದೆ.
ಇನ್ನು ಈ ಕುರಿತು ಗ್ರಾಮೀಣ ಠಾಣೆ ಪಿಎಸ್ಐ ಅಜಿತ್ ಕುಮಾರ್ ಹೊಸಮನಿ ಅವರನ್ನು ಸಂಪರ್ಕಿಸಿದರೆ, ಯಾವುದೇ ಗೊಂದಲ ಗಲಾಟೆ ಇಲ್ಲವೆಂದಿದ್ದಾರೆ.
ಸದ್ಯ ಬಿಂಕದಕಟ್ಟಿ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮಾಗಡಿ ಗ್ರಾ.ಪಂ ವ್ಯಾಪ್ತಿಯ ಪರಸಾಪೂರ ಗ್ರಾಮದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದೇ ಇದಕ್ಕೆ ಕಾರಣ ಎಂದು ರೈತ ಹನುಮಂತ ಆರೋಪಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಒತ್ತಾಯಿಸಿದ್ದಾರೆ.
ಐದು ಎಕರೆ ಜಮೀನಿನಲ್ಲಿ ಬೆಳೆದಿದ್ದ ಒಂದೂವರೆ ಲಕ್ಷ ರೂಪಾಯಿ ಮೌಲ್ಯದ ಶೇಂಗಾ ಹಾಗೂ ಹೊಟ್ಟು ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಆಗಮಿಸಿ ಬೆಂಕಿ ನಂದಿಸಿದರು. ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿಸೆಂಬರ್ 20 ರವರೆಗಿನ ಜಿಲ್ಲೆಯ ಕೊವಿಡ್-19 ಸೋಂಕು ನಿಯಂತ್ರಣ ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಬಿಡುಗಡೆ ಮಾಡಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 156187 ಜನ ನಿಗಾಕ್ಕೆ ಒಳಗಾಗಿದ್ದಾರೆ. ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು 161750 ಮಾದರಿಗಳಲ್ಲಿ 150746 ಮಾದರಿಗಳು (ನೆಗೆಟಿವ್) ನಕಾರಾತ್ಮಕವಾಗಿವೆ. 143 ಮಾದರಿಗಳ ವರದಿ ಬರಲು ಬಾಕಿ ಇದೆ.
ಜಿಲ್ಲೆಯಲ್ಲಿ ಇಂದಿನ 06 (ಗದಗ-02, ನರಗುಂದ-02, ರೋಣ-02) ಪ್ರಕರಣಗಳು ಸೇರಿದಂತೆ ಒಟ್ಟು 10861 ಕೊವಿಡ್-19 ಪಾಸಿಟಿವ್ ಪ್ರಕರಣಗಳು ಧೃಡಪಟ್ಟಿವೆ. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಕೊವಿಡ್ ಸೋಂಕಿಗೆ 141 ಜನ ಮೃತಪಟ್ಟಿದ್ದು, ಇಂದಿನ 05 ಜನ ಸೇರಿದಂತೆ ಒಟ್ಟು 10691 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ 29 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ಅಬಕಾರಿ ಪೊಲೀಸರು ದಾಳಿ ಮಾಡಿ ಅಪಾರ ಪ್ರಮಾಣದ ಮದ್ಯ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ ಘಟನೆ ಗದಗ ತಾಲೂಕಿನ ಬಿಂಕದಕಟ್ಟಿ ಕ್ರಾಸ್ ಬಳಿ ನಡೆದಿದೆ.
ಗದಗನಿಂದ ಅಸುಂಡಿ ಗ್ರಾಮಕ್ಕೆ ಅಕ್ರಮವಾಗಿ ಮದ್ಯ ಸಾಗಾಟ ಮಾಡುವಾಗ ಜಿಲ್ಲಾ ಅಬಕಾರಿ ವಿಚಕ್ಷಣಾ ದಳದ ಅಬಕಾರಿ ನಿರೀಕ್ಷಕರಾದ ಶಹನಾಜ್ ಬೇಗಂ ಅವರ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಅಸುಂಡಿ ಗ್ರಾಮದ ಕಾರು ಚಾಲಕ ಮಂಜುನಾಥ ವೆಂಕಪ್ಪ ಪೂಜಾರ, ಈರಣ್ಣ ರಾಮಣ್ಣ ಬಡಿಗೇರ ಎಂಬ ಇಬ್ಬರನ್ನು ಬಂಧಿಸಿದ್ದಾರೆ.
ದಾಳಿ ವೇಳೆ 5 ಲಕ್ಷ 50 ಸಾವಿರ ಮೌಲ್ಯದ ಕಾರು ಹಾಗೂ 15 ಸಾವಿರ ಮೌಲ್ಯದ 35 ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ.
ಚುನಾವಣೆಯಲ್ಲಿ ಅಕ್ರಮವಾಗಿ ಹಂಚಲು ಈ ಮದ್ಯ ತೆಗೆದುಕೊಂಡು ಹೋಗುವಾಗ ದಾಳಿ ನಡೆಸಿದ್ದು, ಈ ಕುರಿತು ಅಬಕಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾಳಿ ವೇಳೆ ಜಿಲ್ಲಾ ಅಬಕಾರಿ ವಿಚಕ್ಷಣಾ ದಳದ ಅಬಕಾರಿ ನಿರೀಕ್ಷಕರಾದ ಶಹನಾಜ್ ಬೇಗಂ ಸೇರಿದಂತೆ ಅಬಕಾರಿ ಇಲಾಖೆ ಸಿಬ್ಬಂದಿಗಳು ಇದ್ದರು.
ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೊದಲ ಹಂತದ ಗದಗ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲ್ಲೂಕುಗಳಲ್ಲಿ ಡಿ.22 ಮತ್ತು ಎರಡನೇ ಹಂತದ ನರಗುಂದ, ರೋಣ, ಗಜೇಂದ್ರಗಡ, ಮುಂಡರಗಿ ತಾಲೂಕುಗಳಲ್ಲಿ 27ರಂದು ಚುನಾವಣೆ ನಡೆಯಲಿವೆ.
ಈ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮತದಾನದ ಪಾವಿತ್ರ್ಯತೆ ಕಾಪಾಡುವ ಹಿತದೃಷ್ಟಿಯಿಂದ ಮೊದಲನೇ ಹಂತದ ಗ್ರಾ.ಪಂ.ವ್ಯಾಪ್ತಿಯಲ್ಲಿ ಡಿ.20 ರ ಸಂಜೆ 5 ಗಂಟೆಯಿಂದ ಡಿ.22 ರ ಮಧ್ಯರಾತ್ರಿಯವರೆಗೆ ಹಾಗೂ ಎರಡನೇ ಹಂತದ ಗ್ರಾ.ಪಂ.ವ್ಯಾಪ್ತಿಯಲ್ಲಿ ಡಿ.25 ರ ಸಂಜೆ 5 ಗಂಟೆಯಿಂದ ಪ್ರಾರಂಭಿಸಿ ಡಿಸೆಂಬರ್ 27 ರ ಮಧ್ಯರಾತ್ರಿಯವರೆಗೆ ಕೆಳಕಂಡ ಷರತ್ತು ವಿಧಿಸಿ ಪ್ರತಿಬಂಧಕಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಆದೇಶಿಸಿದ್ದಾರೆ.
ಜಿಲ್ಲೆಯ ಚುನಾವಣೆ ಜರುಗುವ ಗ್ರಾ.ಪಂ. ವ್ಯಾಪ್ತಿಯಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿಗಳು/ ಬೆಂಬಲಿಗರು ಮನೆ ಮನೆಗೆ ತೆರಳಿ ಮತಯಾಚನೆ ಮಾಡಬಹುದಾಗಿದ್ದು ಅದರಲ್ಲಿ 5 ಜನರಿಗಿಂತ ಹೆಚ್ಚು ಜನರು ಸೇರತಕ್ಕದ್ದಲ್ಲ. ದೇಹಕ್ಕೆ ಅಪಾಯವನ್ನುಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರಗಳನ್ನು ತೆಗೆದುಕೊಂಡು ಹೋಗುವುದು ಮತ್ತು ತಿರುಗಾಡುವುದನ್ನು ನಿಷೇಧಿಸಲಾಗಿದೆ. ಆ ಪ್ರದೇಶದಲ್ಲಿನ ಝೆರಾಕ್ಸ್ ಅಂಗಡಿ, ಬುಕ್ ಸ್ಟಾಲ್, ಫೋಟೋ ಕಾಪಿಯರ್ ಬಂದ್ ಮಾಡಲು ಆದೇಶಿಸಿದ್ದು, ಮತಗಟ್ಟೆಗಳ 200 ಮೀಟರ್ ಒಳಗೆ ಚುನಾವಣಾ ಪ್ರಚಾರ ನಿಷೇಧಿಸಿದೆ.
ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದಾಗಲಿ ಅಥವಾ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಯಮಗಳನ್ನು ಪಾಲಿಸಬೇಕು. ಮತಗಟ್ಟೆಗಳ ಸುತ್ತ 200 ಮೀಟರ್ ಅಂತರದಲ್ಲಿ ಮೊಬೈಲ್ ಫೋನ್ , ಕಾರ್ಡಲೆಸ್ ಫೋನ್ ಅಥವಾ ಇನ್ನಿತರೆ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಡಿಸಿ ಎಂ ಸುಂದರೇಶ್ ಬಾಬು
ಮತಗಟ್ಟೆಗಳ ಸುತ್ತ 200 ಮೀಟರ್ ಪರಿಮಿತಿಯಲ್ಲಿ ಪ್ರಚಾರಕ್ಕೆ ಸಂಬಂಧಿಸಿದ ಪೋಸ್ಟರ್, ಬ್ಯಾನರ್, ವಾಹನಗಳ ಬಳಕೆ ಮತ್ತು ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಒಂದು ವೇಳೆ ಆದೇಶ ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ದಂಡಾಧಿಕಾರಿ ಎಂ.ಸುಂದರೇಶ್ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.