ಹಾಸ್ಟೆಲ್ ಗೆ ಸರಬರಾಜು ಮಾಡಿದ್ದ ವಸ್ತುಗಳಿಗೆ ಬಿಲ್ ಮಾಡಲು ಲಂಚ ಕೇಳಿದ್ದ ಸಮಾಜ ಕಲ್ಯಾಣ ಇಲಾಖೆಯ ಸಿಬ್ಬಂದಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ.
ಚಿತ್ರದುರ್ಗದ ಸಮಾಜ ಕಲ್ಯಾಣ ಇಲಾಖೆಯ ಎಫ್ ಡಿ ಎ ನರಸಿಂಹಮೂರ್ತಿ ಎಂಬಾತ, ಜಿಲ್ಲೆಯ ವಿವಿಧ ಹಾಸ್ಟೆಲ್ ಗಳಿಗೆ ವಸ್ತುಗಳನ್ನು ಸರಬರಾಜು ಮಾಡಿದ್ದ ಗುತ್ತಿಗೆದಾರ ಸಜ್ಜನಕೆರೆ ಗ್ರಾಮದ ಲೋಕೇಶ್ ಎಂಬುವವರ ಬಿಲ್ ಪಾವತಿ ಮಾಡಲು ಲಂಚ ಕೇಳಿದ್ದ.
ಗುರುವಾರ ಮಧ್ಯಾಹ್ನ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ 11ಸಾವಿರ ರೂ. ಹಣ ಲಂಚ ಪಡೆಯುತ್ತಿದ್ದಾಗ, ಲೋಕಾಯುಕ್ತ ಡಿವೈಎಸ್ಪಿ ಜಿ. ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ ರೆಡ್ ಹ್ಯಾಂಡ್ ಹಿಡಿದಿದ್ದು, ವಿಚಾರಣೆ ನಡೆಸಿದ್ದಾರೆ.
ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲಿ ಒಬ್ಬಳೇ ಇರುವದನ್ನು ಗಮನಿಸಿ ಮಹಿಳೆಯೊಬ್ಬಳು ನಂಬಿಸಿ ತನ್ನ ಮನೆಗೆ ಕರೆದುಕೊಂಡು ಬಂದು ಅಕ್ರಮ ಬಂಧನದಲ್ಲಿಟ್ಟು, ಆಕೆಯ ಇಬ್ಬರು ಮಕ್ಕಳು ನಿರಂತರವಾಗಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಗದಗ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಅಪರಾಧಿಗಳಿಗೆ ಶಿಕ್ಷೆ ವಿಧಿಸಿದ್ದಾರೆ.
ಘಟನೆಯ ವಿವರ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನರಗುಂದ ಪಟ್ಟಣದ ಆರ್ಭಾನ ಓಣಿಯ ಜೈತುನಬಿ ಕೋಂ ಇಮಾಮ್ ಸಾಬ್ ತೆಗ್ಗಿನಮನಿ, ಮೋದಿನಸಾಬ ಇಮಾಮಸಾಬ ತೆಗ್ಗಿನಮನಿ ಹಾಗೂ ಮಕ್ತುಂಸಾಬ ಇಮಾಮ್ ಸಾಬ್ ತೆಗ್ಗಿನಮನಿ ಈ ಮೂವರೂ ಒಂದೇ ಕುಟುಂಬದವರಾಗಿದ್ದಾರೆ.
ನೊಂದ ಬಾಲಕಿಯ ತಂದೆ ಹಾಗೂ ಮಲತಾಯಿ ಇಬ್ಬರೂ ಮಂಗಳೂರಿನಲ್ಲಿ ದುಡಿಯುತ್ತಿದ್ದರು. ನೊಂದ ಬಾಲಕಿಯನ್ನು ಧಾರವಾಡದ ಒಂದು ಮನೆಯಲ್ಲಿ ಕೆಲಸಕ್ಕೆ ಇಟ್ಟಿದ್ದರು. ಅಲ್ಲಿ ಉಳಿದುಕೊಳ್ಳಲು ಸಾಧ್ಯವಾಗದೇ ಇದ್ದಾಗ ಮರಳಿ ತನ್ನ ಮನೆಗೇ ಬಂದು ಒಬ್ಬಳೇ ವಾಸವಾಗಿದ್ದಳು.
ಈ ಸಂದರ್ಭದಲ್ಲಿ ಆರೋಪಿಗಳ ತಾಯಿ `ನೀನು ನನ್ನ ಸಂಬಂಧಿಕಳು’ ಎಂದು ಸುಳ್ಳು ಹೇಳಿ ನಂಬಿಸಿ, ನರಗುಂದದ ತನ್ನ ಮನೆಗೆ ಕರೆದುಕೊಂಡು ಬಂದು ಅಕ್ರಮ ಬಂಧನದಲ್ಲಿಟ್ಟು ನಿರಂತರವಾಗಿ ಸದರಿ ತನ್ನ ಇಬ್ಬರು ಮಕ್ಕಳೂ ದಿನನಿತ್ಯ ಅತ್ಯಾಚಾರ ಮಾಡಿ, ಗರ್ಭವತಿಯನ್ನಾಗಿಸಿದ ಆರೋಪದ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಕಲಂ 376, 448,109 ಐಪಿಸಿ ಮತ್ತು 4&6, 17 ಪೋಕ್ಸೋ ಕಾಯ್ದೆ 2012ರ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ ಸಿಪಿಐ ರಮಾಕಾಂತ. ಎಚ್.ವೈ. ತನಿಖೆ ನಡೆಸಿ 20.8.2016ರಂದು ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯವು ಸಾಕ್ಷಿ ವಿಚಾರಣೆ ನಡೆಸಿ 1ನೇ ಆರೋಪಿಯಾದ ಜೈತುನಬಿ ಕೋಂ ಇಮಾಮ್ ಸಾಬ ತೆಗ್ಗಿನಮನಿ ಇವಳ ಮೇಲೆ ಆರೋಪ ಸಾಬೀತಾಗದೇ ಇರುವದರಿಂದ ಇವಳನ್ನು ಬಿಡುಗಡೆಗೊಳಿಸಿಲಾಗಿದೆ.
ಮಕ್ಕಳಾದ ಮೋದಿನಸಾಬ ಇಮಾಮಸಾಬ ತೆಗ್ಗಿನಮನಿ ಹಾಗೂ ಮಕ್ತುಂಸಾಬ ಇಮಾಮ್ ಸಾಬ ತೆಗ್ಗಿನಮನಿ ಈ ಆರೋಪಿಗಳು ಮಾಡಿದ ಅಪರಾಧವು ಕಲಂ 376(ಡಿ) ಐಪಿಸಿ 4&6 ಪೋಕ್ಸೋ ಕಾಯ್ದೆ 2012ರ ಪ್ರಕಾರ ರುಜುವಾತಾಗಿರುವದರಿಂದ ಸದರಿ ಆರೋಪಿಗಳಿಗೆ 20 ವರ್ಷ ಜೈಲು ಶಿಕ್ಷೆ ಹಾಗೂ ತಲಾ 50 ಸಾವಿರ ರೂ.ಗಳನ್ನು ದಂಡವಾಗಿ ನೊಂದ ಬಾಲಕಿಗೆ ಪರಿಹಾರ ನೀಡಲು ಆದೇಶಿಸಿದೆ.
ಅಲ್ಲದೆ, ನೊಂದ ಬಾಲಕಿಗೆ ವೈದ್ಯಕೀಯ ವೆಚ್ಚ ಹಾಗೂ ಶೈಕ್ಷಣಿಕ ವೆಚ್ಚ, ಪುನರ್ವಸತಿಗಾಗಿ 5 ಲಕ್ಷ ರೂ.ಗಳನ್ನು ಪರಿಹಾರವಾಗಿ National Legal Services Authority ನೀಡಲು ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅವರು ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.
ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ವಿಚಾರಕ್ಕೆ ಈಗಾಗಲೇ ಶಿಗ್ಗಾಂವಿಯ ಸಿಎಂ ಮನೆ ಮುಂದೆ ಧರಣಿ ಸತ್ಯಾಗ್ರಹ ನಡೆದಿದೆ. ಸರ್ಕಾರ ಕೊಟ್ಟ ಮಾತಿನಂತೆ ನಡೆಯದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಪಂಚಮಸಾಲಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಗದಗ ನಗರದಲ್ಲಿ ಮಾತನಾಡಿದ ಅವರು, ಮೀಸಲಾತಿ ಬಗ್ಗೆ ಸರ್ಕಾರ ಮತ್ತೆ ಗಡುವು ಕೇಳಿದರೆ ನಾವು ಒಪ್ಪುವುದಿಲ್ಲ. ಇದುವರೆಗೂ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಪಡೆದಿಲ್ಲ. ಸರ್ವೆ ಕೂಡಾ ನಡೆಸುತ್ತಿಲ್ಲ. ಸರ್ಕಾರದ ಈ ನಡೆಗೆ ಪಂಚಮಸಾಲಿ ಸಮುದಾಯವು ಬೇಸತ್ತಿದೆ. ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಅಕ್ಟೋಬರ್, ಇಲ್ಲವೇ ನವೆಂಬರ್ ತಿಂಗಳಲ್ಲಿ ೨೫ ಲಕ್ಷ ಜನರೊಂದಿಗೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಸಿಎಂ ಬೊಮ್ಮಾಯಿ ಹಾಗೂ ಸಚಿವ ಸಿ ಸಿ ಪಾಟೀಲ್ ದಾರಿ ತಪ್ಪಿಸುವಂಥ ಕೆಲಸ ಮಾಡ್ತಿದ್ದಾರೆ. ಮೀಸಲಾತಿ ಕೊಟ್ಟರೆ ಪಂಚಮಸಾಲಿ ಜನಾಂಗಕ್ಕೆ ಉದ್ಯೋಗ, ಶಿಕ್ಷಣದಲ್ಲಿ ಅನುಕೂಲ ಆಗುತ್ತೆ. ಹಿಂದುಳಿದ ಸಮಾಜದವರಿಗೆ ಮೀಸಲಾತಿ ಕೇಳುವ ಹಕ್ಕನ್ನು ಸಂವಿಧಾನ ನಮಗೆ ಕೊಟ್ಟಿದೆ. ಆದರೆ ಸರಕಾರ ಮೂಗಿಗೆ ತುಪ್ಪ ಒರೆಸೋ ಕೆಲಸವನ್ನು ಮಾಡುತ್ತಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಶೇ ೫೦ ಒಳಗಾಗಿ ಮೀಸಲಾತಿ ಪಡೆಯಬಹುದು. ಅದೇ ರೀತಿ ಕೇಂದ್ರ ಸರ್ಕಾರ ಕೂಡ ಮೀಸಲಾತಿ ವಿಚಾರ ರಾಜ್ಯ ಸರ್ಕಾರದ ಕೈಗೆ ಕೊಟ್ಟಿದೆ. ೨ಎ ಮೀಸಲಾತಿ ಅಷ್ಟೇ ಕೇಳಿದ್ದೇವೆಯೇ ಹೊರತು ಶೇ ೫೦ ಅಂತೂ ಅಲ್ಲ. ಈಗಾಗಲೇ ೨ಎ ಯಲ್ಲಿ ೧೦೮ ಪಂಗಡಗಳ ಒಳಪಡಿಸಲಾಗಿದೆ. ಅದರಲ್ಲಿ ನಮಗೂ ಒಂದು ಪಾಲು ಕೊಡಿ. ಪಂಚಮಸಾಲಿ ಸಮಾಜ ೩ಬಿ ಯಲ್ಲಿ ಇದೆ. ೨ಎ ಯಲ್ಲಿ ಶೇ ೧೫ ನೀಡುತ್ತಿದ್ದೀರಿ, ನಮ್ಮ ಸಮುದಾಯಕ್ಕೆ ಶೇ ೧೫ ನೀಡಿದರೆ ಸಮಾಜದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯುತ್ತಾರೆ. ಅದಕ್ಕೆ ನಾವು ಮೀಸಲಾತಿ ಕೇಳುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಸಿ ಸಿ ಪಾಟೀಲರೇ, ಯಾಕೆ ದಾರಿ ತಪ್ಪಿಸುವಂತಹ ಕೆಲಸ ಮಾಡ್ತೀರಿ, ನಿಮ್ಮ ಮೇಲೆ ವಿಶ್ವಾಸ ಇಟ್ಟಿದ್ದೀವಿ, ಗೌರವ ಇಟ್ಟಿದ್ದೀವಿ. ಆ ಗೌರವ ಉಳಿಸಿಕೊಳ್ಳುವಂತಹ ಕೆಲಸ ಮಾಡಿ. ನೀವು ಮೀಸಲಾತಿ ಕೊಡಿಸುತ್ತೀರಿ ಎಂದು ಕಾಯುತ್ತಿದ್ದೇವೆ. ನಿಮ್ಮನ್ನು ಟಾರ್ಗೆಟ್ ಮಾಡ್ತಿದ್ದೀವಿ ಎಂದು ಹೇಳ್ತೀರಿ. ಮಾಡುವ ಕೆಲಸ ಸರಿಯಾಗಿ ಮಾಡಿದರೆ ನಾವು ಯಾಕೆ ಟಾರ್ಗೆಟ್ ಮಾಡೋಣ ಹೇಳಿ? ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡ್ತೀವಿ, ತಪ್ಪೇನಿದೆ..? ನಾಚಿಕೆ ಆಗಬೇಕು ಸಾಮಾಜಿಕ ನ್ಯಾಯಕ್ಕೋಸ್ಕರ ಯಾವ ಮುಖ್ಯಮಂತ್ರಿ ಮನೆ ಮುಂದೂ ಧರಣಿ ನಡೆದಿರಲಿಲ್ಲ. ನೀವು ಒಬ್ಬ ಪೂಜ್ಯರನ್ನು ಮುಖ್ಯಮಂತ್ರಿ ಮನೆ ಮುಂದೆ ಧರಣಿ ಕೂಡಿಸುವಂಥ ಕೆಲಸ ಮಾಡಿದ್ರಿ. ಇದು ಸರೀನಾ ಸಿ ಸಿ ಪಾಟೀಲರೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಂ ಕುರ್ಚಿಗಾಗಿ ತಿರುಪತಿ ಭೇಟಿ
ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ತಿರುಪತಿಗೆ ಕರೆದುಕೊಂಡು ಹೋಗಿ ನಿಮ್ಮ ಕುರ್ಚಿ ಉಳಿಯಬೇಕಾದರೆ ಪಂಚಮಸಾಲಿಯವರಿಗೆ ೨ಎ ಮೀಸಲಾತಿ ಕೊಡಬಾರದು ಅಂತಾ ಪ್ರಮಾಣ ಮಾಡಿಸಿದ್ದಾರೆ ಅನ್ನೋ ಮಾಹಿತಿ ಬಂದಿದೆ. ಆ ಕಾರಣಕ್ಕೆ ಯಡಿಯೂರಪ್ಪ ಮೇಲೆ ನಾವು ನೇರವಾದ ಆರೋಪ ಮಾಡ್ತಿದೀವಿ. ಬಸನಗೌಡ ಪಾಟೀಲ್ ಯತ್ನಾಳ ಅವರಿಗೆ ಸಚಿವ ಸ್ಥಾನ ಕೊಡಬಾರದು ಅಂತಾ ಕಂಡೀಶನ್ ಇಟ್ಟಿದ್ದಾರೆ. ೨ಎ ಮೀಸಲಾತಿ ಕೊಡಬಾರದು ಅಂತಾ ಕಂಡೀಶನ್ ಇಟ್ಟಿದ್ದಾರೆ. ನಮ್ಮ ಮೀಸಲಾತಿಗೆ ಅಡ್ಡಿಯಾದವರು ಯಡಿಯೂರಪ್ಪ. ಸಮುದಾಯದ ಹೆಸರಲ್ಲಿ ನೀವು ಮಂತ್ರಿಗಿರಿ ತಗೋತೀರಿ. ಸಮದಾಯದ ಹೆಸರಲ್ಲಿ ಗೆದ್ದು ಬರ್ತೀರಿ. ನಿಮಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ನೀವು ಪಂಚಮಸಾಲಿ ಸಮುದಾಯದಲ್ಲಿ ಹುಟ್ಟಿದವರು ಸಮುದಾಯಕ್ಕೆ ಅನ್ಯಾಯ ಮಾಡಬಾರದು. ಒಬ್ಬ ಮಂತ್ರಿ ಕಾನೂನು ಹೋರಾಟ ಮಾಡ್ತೀವಿ ಅಂತಾರೆ. ಅದಕ್ಕೆ ಪರೋಕ್ಷವಾಗಿ ಹೆಸರು ಹೇಳದೇ ಸಚಿವ ಮುರುಗೇಶ ನಿರಾಣಿ ಹಾಗೂ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಅಯ್ಯಪ್ಪ ಅಂಗಡಿ, ಕಾರ್ಯದರ್ಶಿ ಸಂಗಮೇಶ ಕವಳಿಕಾಯಿ, ಸಮಾಜದ ಮುಖಂಡ ಸಿದ್ದು ಪಾಟೀಲ್ ಇದ್ದರು.
ಇಲ್ಲಿನ ತಾಪಂ ಸಭಾಂಗಣದ ಅವ್ಯವಸ್ಥೆಯನ್ನು ಕಂಡು ಕೋಪಗೊಂಡ ಲೋಕಾಯುಕ್ತ ಅಧಿಕಾರಿ ರವಿ ಪುರುಷೋತ್ತಮ ಅವರು ಅಲ್ಲಿನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ನಿಮ್ಮ ಮುಖ್ಯ ಕಚೇರಿಯೇ ಇಷ್ಟೊಂದು ಗಲೀಜು ಇರಬೇಕಾದರೆ ಇನ್ನು ಗ್ರಾಮೀಣ ಭಾಗಗಳ ಸ್ಥಿತಿ ಹೇಗಿರಬಹುದು ಎಂದು ತರಾಟೆಗೆ ತೆಗೆದುಕೊಂಡರು.
ಅವರು ತಾಪಂ ಸಭಾಭವನದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಆಗಮಿಸಿದ ವೇಳೆಯಲ್ಲಿ ತಾಪಂ ಸಭಾಭವನದ ಸ್ಥಿತಿಯನ್ನು ಕಂಡು ತಮ್ಮ ಅಸಮಾಧಾನ ಹೊರಹಾಕಿದರು.
ತಾಪಂ ಸಭಾವನದ ಒಳಗಡೆ ಸಿಬ್ಬಂದಿಗಳು ಕಸ ಗೂಡಿಸದೆ ಹಾಗೆ ಬಿಟ್ಟಿದ್ದರು.ಅಲ್ಲದೆ ಎಲ್ಲೆಂದರಲ್ಲಿ ಚಹಾ ಕಪ್‌ಗಳು ಸೇರಿದಂತೆ ಅನೇಕ ತಾಜ್ಯ ವಸ್ತುಗಳು ಬಿದ್ದಿದ್ದವು. ಸ್ವಚ್ಛತೆ ಬಗ್ಗೆ ಪಾಠ ಹೇಳುವ ನೀವೇ ನಿಮ್ಮ ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಂಡಿಲ್ಲವಲ್ಲ ಎಂದು ಗದರಿದರು.
ಹೊಳೆಆಲೂರ ಎಪಿಎಂಸಿ ಕಾರ್ಯದರ್ಶಿಯ ವಿ.ಎ.ಹಾದಿಮನಿಯವರು ಈರುಳ್ಳಿ ಬೆಳೆಯ ವಿಮಾ ಹಣ ಬಂದಿದ್ದರೂ ಸಹ ಬಜಾಜ್ ವಿಮಾ ಕಂಪನಿಯವರು ಹಣ ಪಾವತಿ ಮಾಡುತ್ತಿಲ್ಲ. ಕಚೇರಿಗೆ ಅಲೆದು ಸಾಕಾಗಿದೆ ಎಂದು ಲೋಕಾಯುಕ್ತರ ಬಳಿ ತಮ್ಮ ಅಳಲನ್ನು ತೋಡಿಕೊಂಡರು.
ದೂರು ಸ್ವೀಕರಿಸಿದ ಲೋಕಾಯುಕ್ತ ಅಧಿಕಾರಿಗಳು ಈಗಾಗಲೇ ಬಜಾಜ್ ವಿಮಾ ಕಂಪನಿ ವಿರುದ್ಧ ಅನೇಕ ದೂರುಗಳು ಬಂದಿದ್ದು, ರಾಜ್ಯ ಲೋಕಾಯುಕ್ತ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿದೆ. ಶೀಘ್ರ ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದರು.
ಈ ಸಂಧರ್ಭದಲ್ಲಿ ಉಪತಹಸೀಲ್ದಾರ ಜೆ.ಟಿ.ಕೊಪ್ಪದ ಸೇರಿದಂತೆ ಲೋಕಾಯುಕ್ತ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಟ್ಟಣದ ಚನ್ನಮ್ಮ ಬಜಾಜ್ ಶೋರೂಮ್‌ನಲ್ಲಿ ಬಜಾಜ್‌ನ ಹೊಸ ಮಾಡೆಲ್ ಸಿಟಿ ೧೨೫ ಹೊಸ ಬೈಕನ್ನು ಬಿಡುಗಡೆಗೊಳಿಸಲಾಯಿತು. ಅಡರಕಟ್ಟಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮ್ಯಾನೇಜರ್ ನಿಂಗನಗೌಡ್ರ ಪಾಟೀಲ ಹಾಗೂ ಮೆಕ್ಯಾನಿಕ್ ಅಸೋಸಿಯಷನ್ ಲಕ್ಷ್ಮೇಶ್ವರ ಅಧ್ಯಕ್ಷ ಕಲಂದರ್ ಸೂರಣಗಿ ಬೈಕ್ ಅನಾವರಣಗೊಳಿಸಿದರು.
ಈ ವೇಳೆ ಶೋರೋಮ್ ಸೇಲ್ಸ್ ಮ್ಯಾನೇಜರ್ ಸಂತೋಷ ನಂದಿಕೇಶ್ವರಮಠ ಬೈಕ್‌ನ ವಿವರಣೆ ನೀಡಿ, ಸಿಟಿ ೧೨೫ಹೊಸ ಮಾಡೆಲ್ ಬೈಕ್ ಎಲ್ಲ ವರ್ಗದ ಜನರಿಗೂ ಅನಕೂಲವಾಗಿದೆ. ದೀರ್ಘ ಪ್ರಯಾಣಕ್ಕೆ ದುರ್ಗಮ ರಸ್ತೆಗಳಲ್ಲಿ ಚಲಿಸಲು ಅನಕೂಲವಾಗಲಿದೆ. ಎಂಜಿನ್ ರಕ್ಷಣೆಗಾಗಿ ಬೆಲ್ಲಿ ಪ್ಯಾನ್ಸ್, ಸ್ಟೈಲಿಶ್ ಸಿಟ್ಟಿಂಗ್ ವ್ಯವಸ್ಥೆ, ಅಲ್ಲದೇ ಮೊಟ್ಟ ಮೊದಲಬಾರಿಗೆ ಬಜಾಜ್‌ನಲ್ಲಿ ಯುಎಸ್‌ಬಿ ಚಾರ್ಜರ್, ಧೂಳಿನಿಂದ ರಕ್ಷಣೆ ನೀಡಲು ಸ್ಡೈಲಿಶ್ ಬೆಲ್ಲೋಸ್ ಡ್ರಮ್ ಬ್ರೇಕ್, ಡಿಸ್ಕ್ ಬ್ರೇಕ್ ಹೀಗೆ ಅನೇಕ ಹೊಸತನಗಳಿದ್ದು, ಉತ್ತಮ ಮೈಲೇಜ್ ಹೊಂದಿದೆ ಎಂದು ಹೇಳಿದರು.
ಈ ವೇಳೆ ಶೋರೂಮ್ ಮಾಲೀಕ ಶಿವಯೋಗಿ ಗಡ್ಡದೇವರಮಠ, ರಿಜ್ವಾನ್ ಕಲಬುರ್ಗಿ, ಷಣ್ಮುಖ ಗಡ್ಡೆಣ್ಣನವರ, ಶಿವರಾಜ ಕರೆವಡಿಮಠ, ಸಿಬ್ಬಂದಿಗಳಾದ ಬಸವರಾಜ ಘಂಟಿ, ಮಂಜು ಸುತಾರ, ಅಸ್ಲಾಂ, ಜಿಲಾನಿ, ಜಾವೀದ್, ಅಪ್ತಾಬ, ಪಟ್ಟಣದ ಮೆಕ್ಯಾನಿಕ್ ಅಸೋಸಿಯೇಷನ್ ಸದಸ್ಯರು ಇದ್ದರು.
ಇತ್ತೀಚಿನ ದಿನಗಳಲ್ಲಿ ಬೀದರ್ ನಗರದಲ್ಲಿ ಮನೆಗಳ್ಳತನದ ಪ್ರಕರಣಗಳು ಹೆಚ್ಚಿದ್ದು, ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ಸಂಖ್ಯೆಯ ದೂರುಗಳು ದಾಖಲಾಗುತ್ತಿರುವದು ಇಲಾಖೆಯ ನಿದ್ದೆಗೆಡಿಸಿತ್ತು.
ಇಂಥ ಪ್ರಕರಣಗಳನ್ನು ನಿಯಂತ್ರಿಸಿ, ಮನೆಗಳ್ಳತನದಲ್ಲಿ ಭಾಗಿಯಾದ ಕಳ್ಳರನ್ನು ಪತ್ತೆಮಾಡುವ ಉದ್ದೇಶದಿಂದ ಬೀದರ್ ಉಪವಿಭಾಗದಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ ಮೇಘಣ್ಣವರ್, ಪೊಲೀಸ್ ಉಪ ಅಧೀಕ್ಷಕ ಕೆ,ಎಂ, ಸತೀಶ್ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನೇ ರಚಿಸಲಾಗಿತ್ತು. ಈ ತಂಡವು ಸೆ.19ರಂದು ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಯಿಂದ 10 ಲಕ್ಷ ರೂ. ಬೆಲೆಬಾಳುವ 200 ಗ್ರಾಂ. ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದು, ಬೀದರ ನಗರದ ಆದರ್ಶ ಕಾಲೋನಿ, ಜ್ಯೋತಿ ಕಾಲೋನಿಯಲ್ಲಿ ನಡೆದಿದ್ದ ಮೂರು ಸರಣಿ ಮನೆಗಳ್ಳತನದಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿಸಿದ್ದಾರೆ. ಈ ಆರೋಪಿಯ ವಿರುದ್ಧ ಸೋಲಾಪುರ, ರಾಯಚೂರು, ಗದಗ, ಹುಬ್ಬಳ್ಳಿ, ಧಾರವಾಡ, ಬಾದಾಮಿ, ಬಾಗಲಕೋಟ, ವಿಜಯಪುರ ಜಿಲ್ಲೆಗಳಲ್ಲಿಯೂ ಹಲವು ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಬಂಧಿತ ಆರೋಪಿಯ ವಿರುದ್ಧ ಗಾಂಧಿಜಂಗ್ ಪೊಲೀಸ್ ಠಾಣೆಯಲ್ಲಿ 134/2022, 138/2022 ಹಾಗೂ ಬೀದರ್ ನ ನೂತನ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 155/2022, ಕಲಂ 457, 380 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತನು ನಟೋರಿಯಸ್ ಅಪರಾಧಿಯಾಗಿದ್ದು, ಅಂತರ್ ರಾಜ್ಯ ಕಳ್ಳನಾಗಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ಮಾಹಿತಿ ನೀಡಿದರು.
ಪೊಲೀಸ್ ಕಾರ್ಯಾಚರಣೆಯ ತಂಡದಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ನಿರೀಕ್ಷಕ ಜಿ.ಎಸ್. ಬಿರಾದಾರ, ಬೀದರ್ ಗ್ರಾಮೀಣ ವೃತ್ತದ ಸಿಪಿಐ ಶ್ರೀಕಾಂತ ಅಲ್ಲಾಪೂರೆ, ಪಿಎಸ್ಐ ಸೈಯದ್ ಪಟೇಲ್, ಪಿಎಸ್ಐ ದಯಾನಂದ ಮಡಿವಾಳ ಹಾಗೂ ಸಿಬ್ಬಂದಿಗಳಾದ ಆರೀಫ್, ನವೀನ್, ಅನಿಲ್, ಇರ್ಫಾನ್, ಗಂಗಾಧರ, ಪ್ರವೀಣ್, ಶ್ರೀನಿವಾಸರ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಕಿಶೋರ್ ಬಾಬು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುತ್ತಲೂ ಕಾರ್ಗತ್ತಲು ಕವಿದ ಮಧ್ಯರಾತ್ರಿ. ಜನರೆಲ್ಲರೂ ಸವಿನಿದ್ದೆಯಲ್ಲಿ ಮೈಮರೆತಿದ್ದ ಸಮಯ. ಇದೇ ಸಮಯದಲ್ಲಿ ಅಲ್ಲೊಂದು ಕಾಳಗವೇ ನಡೆದಿತ್ತು. ಒಬ್ಬರೂ ಸೋಲೊಪ್ಪಿಕೊಳ್ಳಲು ಸಿದ್ಧರಿಲ್ಲ. ಅಂದಹಾಗೆ, ಇಲ್ಲಿ ಕಾಳಗ ನಡೆದಿದ್ದು ಶ್ವಾನಪಡೆ ಹಾಗೂ ಒಬ್ಬೊಂಟಿ ನಾಗರಹಾವಿನ ನಡುವೆ. ಇಂಥದೊಂದು ಘಟನೆ ಗದಗ ಜಿಲ್ಲೆಯ ನರಗುಂದ ಪಟ್ಟಣದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದಿದ್ದು, ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂಗ್ರೆಸ್ ಮುಖಂಡ ಸಂಗಮೇಶ್ ಕೊಳ್ಳಿಯವರ್ ಅವರ ಜನ ಸಂಪರ್ಕ ಕಚೇರಿ ಆವರಣದಲ್ಲಿ ಮಧ್ಯರಾತ್ರಿ ನಾಗರಹಾವೊಂದು ಗೋಡೆಯ ಪಕ್ಕದಲ್ಲಿ ಸುಳಿದಾಡುತ್ತಿತ್ತು. ಕಾಂಪೌಂಡ್ನೊಳಗಿದ್ದ ನಾಯಿಗಳ ಗುಂಪು ಈ ನಾಗರ ಹಾವನ್ನು ಕಂಡು ಜೋರಾಗಿ ಬೊಗಳಲು ಶುರು ಮಾಡಿದವು.
ಅದಾಗಲೇ ಹೊರಹೋಗಲು ತಿಳಿಯದೇ ಕಂಗಾಲಾಗಿದ್ದ ನಾಗರ ಹಾವು ಈ ನಾಯಿಗಳ ಗುಂಪನ್ನೂ ಕಂಡು ಮತ್ತಷ್ಟು ದಿಗಿಲುಗೊಂಡು ಹೆಡೆಯೆತ್ತಿ ಪ್ರತಿರೋಧವೊಡ್ಡೊದಕ್ಕೆ ಮುಂದಾಗಿತ್ತು. ಅರ್ಧ ಗಂಟೆಗೂ ಹೆಚ್ಚು ಕಾಲ ಶ್ವಾನಗಳ ಗುಂಪು ಹಾವನ್ನ ತಡೆದು ನಿಲ್ಲಿಸಿದವು. ಎಲ್ಲ ಕಡೆಯಿಂದ ಸುತ್ತುವರೆದ ಶ್ವಾನಗಳಿಂದಾಗಿ ಹಾವು ಆಚೀಚೆ ಹೋಗಲೂ ಅಸಾಧ್ಯವಾಗಿ ಅಲ್ಲಿಯೇ ಇರುವಂತಾಯಿತು.
ನಾಯಿಗಳ ಗಲಾಟೆಯಿಂದ ಎಚ್ಚೆತ್ತು ಅಕ್ಕಪಕ್ಕದವರು ಎದ್ದುಬಂದು ಗಮನಿಸಿ, ವಿಷಯವನ್ನು ಉರಗಪ್ರಿಯ ಬುಡ್ನೆ ಸಾಬ್ರಿಗೆ ತಿಳಿಸಿದಾಗ, ಸ್ಥಳಕ್ಕೆ ಬಂದ ಬುಡ್ನೆಸಾಬ್, ನಾಗರಹಾವನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟುಬಂದಿದ್ದಾರೆ. ಶ್ವಾನಗಳಿಂದಲೇ ಉರಗದ ಜೀವ ಉಳಿದಂತಾಗಿದೆ. ಇಲ್ಲವಾದಲ್ಲಿ ಹಾವು ಆಚೆ ಹೋಗಿ ಜನರ ಕಣ್ಣಿಗೆ ಬಿದ್ದಿದ್ದರೆ ಜನರೇ ಹೊಡೆದು ಸಾಯಿಸುವ ಸಾಧ್ಯತೆಯಿತ್ತು ಎಂದು ಬುಡ್ನೆ ಸಾಬ್ ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಅಕ್ರಮ ಮರಳು ಸಂಗ್ರಹಣೆ, ಸಾಗಾಟ ಲಂಗುಲಗಾಮಿಲ್ಲದೇ ಸಾಗುತ್ತಿದೆ. ಒಂದೆಡೆ ಮರಳು ಪೂರೈಕೆ ತಗ್ಗಿರುವದರಿಂದ ದರ ಮುಗಿಲು ಮುಟ್ಟಿದೆ. ಈ ನಡುವೆ, ಆಡಳಿತದ ನಿಯಮಾವಳಿಗಳಿಗೆ ಕ್ಯಾರೇ ಎನ್ನದೆ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಿಸುತ್ತಿರುವ ಬಗ್ಗೆ ರೋಣದಿಂದ ವರದಿಯಾಗಿದೆ.
ಗದಗ ಜಿಲ್ಲೆ ರೋಣ ತಾಲೂಕಿನ ತಳ್ಳಿಹಾಳ ಗ್ರಾಮದ ತುಂಬಿದ ಹಳ್ಳದಲ್ಲಿ ಅಕ್ರಮ ಮರಳು ಧಂದೆ ಯಾರ ಭಯವೂ ಇಲ್ಲದೇ ಸಾಗುತ್ತಿರುವದು ತಾಲೂಕಾಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇಲ್ಲಿ ತುಂಬಿದ ಸವಿನೀರಿನ ಹಳ್ಳದಲ್ಲಿಯೇ ಟ್ರಾಕ್ಟರ್ ಮೂಲಕ ಮರಳು ಸಂಗ್ರಹಣೆ ಹಾಗೂ ಸಾಗಾಟ ನಿತ್ಯವೂ ನಡೆಯುತ್ತಲೇ ಇದೆ ಎಂಬ ಆರೋಪ ಕೇಳಿಬರುತ್ತಿದೆ.
ಹರಿಯುವ ನೀರಲ್ಲಿ ಟ್ರ್ಯಾಕರ್ ಚಾಲಕರ ಹುಚ್ಚಾಟವೂ ಹೆಚ್ಚಾಗಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಕಟ್ಟಿಟ್ಟ ಬುತ್ತಿ. ಸದ್ಯ ವೈರಲ್ ಆಗಿರುವ ವಿಡಿಯೋ ಒಂದು ಸಾಕ್ಷಿಕರಿಸಿದೆ.
ಇಂಥ ಅಕ್ರಮಗಳ ಬಗ್ಗೆ ಗಮನಹರಿಸಬೇಕಿದ್ದ ಆಡಳಿತ ದಿವ್ಯ ನಿರ್ಲಕ್ಯ ಧೋರಣೆ ತಾಳಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬೈಕ್ ನಲ್ಲಿ ಹೊಲಕ್ಕೆ ಹೊರಟಿದ್ದ ಯುವಕನೊಬ್ಬನನ್ನು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಗುರ್ಲಕಟ್ಟಿ ಗ್ರಾಮದಲ್ಲಿ ನಡೆದಿದೆ.
ಸಂಗನಗೌಡ ತಂದೆ ಮಲ್ಲನಗೌಡ ನಾಯ್ಕನೂರು(30) ಕೊಲೆಯಾದ ದುರ್ಧೈವಿ.
ಸೋಮವಾರ ಮಧ್ಯಾಹ್ನ ಬೈಕ್ ನಲ್ಲಿ ಹೊಲಕ್ಕೆ ಹೊರಟಾಗ ಗುರ್ಲಕಟ್ಟಿ ಗ್ರಾಮದ ಗ್ರಾಮ ಪಂಚಾಯತಿ ಸಮೀಪದಲ್ಲಿ ಅಡ್ಡಗಟ್ಟಿ ಸಂಗನಗೌಡನನ್ನು ಕೆಳಗೆ ಇಳಿಸಿ, ಈರಣ್ಣ ತಂದೆ ಉಮೇಶ್ ಅಂತಕ್ಕನವರ್, ಚಂದ್ರುಗೌಡ ತಂದೆ ಈರನಗೌಡ ಪಾಟೀಲ್, ಮಹೇಶ್ ಗೌಡ ತಂದೆ ಕಲ್ಲನಗೌಡ ಪಾಟೀಲ್, ಎಂಬುವವರು ಕೊಲೆಗೀಡಾದ ಸಂಗನಗೌಡನ ಕೈ ಹಿಡಿದುಕೊಂಡಾಗ ಇನ್ನೊಬ್ಬ ಸುರೇಶಗೌಡ ತಂದೆ ಕಲ್ಲನಗೌಡ ಪಾಟೀಲ್ ಎಂಬಾತ ಚಾಕುವಿನಿಂದ ಕುತ್ತಿಗೆ ಹಾಗೂ ಎದೆಗೆ ಇರಿದಿದ್ದಾನೆ. ಇದರಿಂದಾಗಿ ಸಂಗನಗೌಡ ಮೃತಪಟ್ಟಿದ್ದಾನೆ.
ಮೃತನ ಪತ್ನಿ ನರಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, 150/2022 ಕಲಂ 341, 302, 504, ಹಾಗೂ 34 ಐಪಿಸಿ ಪ್ರಕಾರ ನರಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿರುವ ಎಲ್ಲ ಸಾಮಾನು ಹಳ್ಳಕ್ಕೆ ತೇಲಿ ಹೋದ ಮೆಲೆ ಪರಿಹಾರ ಕೊಡುವುದರಲ್ಲಿ ಅರ್ಥವಿಲ್ಲ. ನಾನು ಕ್ಷೇತ್ರದ ಗ್ರಾಮಗಳಲ್ಲಿ ಸಂಚರಿಸಿ ಜನರ ಕಷ್ಟಗಳನ್ನು ಆಲಿಸಿದ್ದೇನೆ. ಹೀಗಾಗಿ ಸರಕಾರದ ನಿರ್ದೇಶನದ ಜೊತೆಗೆ ಮಾನವೀಯತೆ ಕೂಡ ಇರಬೇಕು ಎಂದು ಶಾಸಕ ಕಳಕಪ್ಪ ಬಂಡಿ ಅವರು ತಹಸೀಲ್ದಾರ್ ವಾಣಿ ಉಂಕಿಯವರಿಗೆ ಸೂಚಿಸಿದ ಘಟನೆ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನಡೆಯಿತು.
ಅವರು ಸೋಮವಾರ ಹಿರೇಹಾಳ ಗ್ರಾಮಕ್ಕೆ ಭೇಟಿ ನೀಡಿ ಮಳೆಗೆ ಬಿದ್ದ ಮನೆಗಳನ್ನು ವೀಕ್ಷಿಸಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸುವ ಮೂಲಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸತತ ಮಳೆಗೆ ಮನೆಗಳಿಗೆ ನೀರು ಹೊಕ್ಕು ದವಸ ಧಾನ್ಯಗಳು ನೀರು ಪಾಲಾಗಿವೆ. ಇದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಹೀಗಾಗಿ ಅವರಿಗೂ ಸಹ ಪರಿಹಾರ ವಿತರಿಸಬೇಕು ಎಂದರು. ಇದಕ್ಕೆ ತಹಸೀಲ್ದಾರ್ ವಾಣಿ ಉಂಕಿಯವರು ಸರಕಾರದ ನಿರ್ದೇಶನದ ಮೇರೆಗೆ ಹಾಗೆ ವಿತರಣೆ ಮಾಡಲು ಬರುವುದಿಲ್ಲ. ಅಲ್ಲದೆ ಮನೆಯಲ್ಲಿದ್ದ ವಸ್ತುಗಳು ಹಳ್ಳಕ್ಕೆ ತೇಲಿ ಹೋದರೆ ಮಾತ್ರ ಪರಿಹಾರ ವಿತರಣೆ ಮಾಡಬಹುದು ಎಂಬ ನಿಯಮವಿದೆ ಎನ್ನುತ್ತಿದ್ದಂತೆ ಶಾಸಕರು ಈಗಾಗಲೇ ತಿನ್ನುವ ಆಹಾರ ಹಾಗೂ ಉಡುವ ಬಟ್ಟೆ ನೀರಲ್ಲಿ ಮುಳುಗಿ ಹೋಗಿದೆ. ಇಲ್ಲಿ ನಿಯಮಾವಳಿಯ ಜೊತೆಗೆ ಮಾನವೀಯತೆ ಕೂಡ ಪಾಲನೆ ಆಗಬೇಕು. ಈ ವಿಷಯವಾಗಿ ಜಿಲ್ಲಾಧಿಕಾರಿಗಳ ಬಳಿ ಚರ್ಚಿಸಲಾಗುವುದು ಎಂದರು.
ಇನ್ನು ಮಳೆಗೆ ಬಿದ್ದಿರುವ ಮನೆಗಳಿಗೆ ಕೇವಲ ೩೨೦೦ ರೂ. ನೀಡಲಾಗುತ್ತಿದೆ ಎಂದು ಸಂತ್ರಸ್ತರು ಶಾಸಕರ ಬಳಿ ದೂರಿದರು. ಆಗ ತಹಸೀಲ್ದಾರ್ ವಾಣಿ ಉಂಕಿಯವರು ಸರಕಾರದ ನಿರ್ದೇಶನ ಬರುವ ಮೊದಲು ಕುಸಿದ ಮನೆಗಳಿಗೆ ಹಾಗೂ ಆಗಿನ ನಿಯಮಾವಳಿ ಪ್ರಕಾರ ೩೨೦೦ ರೂ. ಸಂತ್ರಸ್ತರ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದಾಗ, ಶಾಸಕರು ಹಿರಿಯ ಅಧಿಕಾರಿಗಳ ಜೊತೆಗೆ ಚರ್ಚಿಸಿ ಅವರಿಗೂ ಸಹ ನ್ಯಾಯ ಒದಗಿಸುವ ಕೆಲಸ ಮಾಡಿ ಎಂದು ತಹಸೀಲ್ದಾರ್‌ರವರಿಗೆ ಸೂಚಿಸಿದರು.
ಅಲ್ಲದೆ ಈಗಾಗಲೇ ಕೆಲ ಸಂತ್ರಸ್ತರಿಗೆ ಹಣ ಜಮಾ ಆಗಿದೆ ಎಂದು ಇಲಾಖೆಯ ದಾಖಲೆಗಳು ತೋರಿಸುತ್ತವೆ. ವಿಪರ್ಯಾಸ ಅಂದರೆ ಸಂತ್ರಸ್ತರ ಖಾತೆಗಳಿಗೆ ಪರಿಹಾರ ಮೊತ್ತ ಜಮಾ ಆಗಿಲ್ಲ. ಹೀಗಾಗಿ ಈ ಕುರಿತು ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಶಾಸಕರು ತಹಸೀಲ್ದಾರರಿಗೆ ಸೂಚಿಸಿದರು. ಇದಕ್ಕೆ ಉತ್ತರಿಸಿದ ತಹಸೀಲ್ದಾರರು ಈ ಪ್ರಕರಣ ಈ ಹಿಂದೆ ನಡೆದಿದ್ದು ನಾನು ಬಂದಾಗ ಆಗಿಲ್ಲವಾದರೂ ಸಹ ನಿಮ್ಮ ಸಲಹೆಯಂತೆ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.
ಸೆ. 9 ರಂದು ಹಿರೇಹಾಳ ಗ್ರಾಮದಲ್ಲಿ ಸತತ ಮಳೆಯಿಂದ ಮನೆ ಬಿದ್ದ ಪರಿಣಾಮ ಗ್ರಾಮದ ಲಕ್ಷ್ಮವ್ವ ಮಾದರ [೮೦] ಎಂಬ ವೃದ್ಧೆ ಸ್ಥಳದಲ್ಲಿ ಮೃತಪಟ್ಟಿದ್ದಳು. ಶಾಸಕ ಕಳಕಪ್ಪ ಬಂಡಿಯವರು ಮೃತ ಕುಟುಂಬದ ಸದಸ್ಯರಿಗೆ ೫ ಲಕ್ಷ ರೂ. ಗಳ ಪರಿಹಾರದ ಮೊತ್ತದ ಚೆಕ್‌ನ್ನು ವಿತರಿಸುವ ಮೂಲಕ ಸಾಂತ್ವನ ಹೇಳಿದರು. ಅಲ್ಲದೆ ಬಿದ್ದಿರುವ ಮನೆಗೆ ಅಗತ್ಯ ನೆರವು ನೀಡಲು ತಹಸೀಲ್ದಾರರಿಗೆ ಸೂಚಿಸಿದರು.
ಉಪತಹಸೀಲ್ದಾರ್ ಜೆ.ಟಿ.ಕೊಪ್ಪದ, ಜಿಪಂ ಮಾಜಿ ಅಧ್ಯಕ್ಷ ನಿಂಗಪ್ಪ ಕೆಂಗಾರ, ಜಿಪಂ ಮಾಜಿ ಸದಸ್ಯ ಶಿವಕುಮಾರ ನೀಲಗುಂದ, ಗ್ರಾಪಂ ಸದಸ್ಯರು, ಪಿಡಿಒ, ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.